ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ‘ಸೇವಾ ತೀರ್ಥ’ದಲ್ಲಿ 51ನೇ ‘ಪ್ರಗತಿ’ ಸಭೆ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನಗಳನ್ನು ಸಮನ್ವಯಗೊಳಿಸುವ ಮೂಲಕ ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನವನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಐಸಿಟಿ (ಐಸಿಟಿ) ಆಧಾರಿತ, ಬಹು-ಮಾದರಿ ವೇದಿಕೆ ಇದಾಗಿದೆ.
ಸಭೆಯಲ್ಲಿ ಪ್ರಧಾನಮಂತ್ರಿಯವರು ಒಂಬತ್ತು ರಾಜ್ಯಗಳನ್ನು ಒಳಗೊಂಡಿರುವ, ಸುಮಾರು ₹30,000 ಕೋಟಿ ಮೌಲ್ಯದ ರೈಲ್ವೆ, ವಿದ್ಯುತ್ ಮತ್ತು ರಸ್ತೆ ವಲಯಗಳ ಏಳು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ಆರ್ಥಿಕ ಬೆಳವಣಿಗೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಅತ್ಯಂತ ನಿರ್ಣಾಯಕವಾಗಿರುವ ಈ ಯೋಜನೆಗಳ ಕಾಲಮಿತಿ, ವಿವಿಧ ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಸಮಸ್ಯೆಗಳ ಸಕಾಲಿಕ ಪರಿಹಾರದ ಕಡೆಗೆ ವಿಶೇಷ ಗಮನಹರಿಸಿ ಪರಿಶೀಲನೆ ನಡೆಸಲಾಯಿತು. ಇದೇ ವೇಳೆ ಪ್ರಧಾನಮಂತ್ರಿಯವರು ಕೆನ್ – ಬೆತ್ವಾ ಲಿಂಕ್ ಯೋಜನೆ ಮತ್ತು ಸ್ವಚ್ಛ ಭಾರತ್ ಮಿಷನ್-ನಗರ 2.0 ಯೋಜನೆಗಳನ್ನೂ ಪರಿಶೀಲಿಸಿದರು.
ವಿದ್ಯುತ್ ವಲಯದ ಯೋಜನೆಗಳನ್ನು ಪರಿಶೀಲಿಸುವಾಗ, ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ನಗರಗಳು, ವಸತಿ ಸಮುಚ್ಚಯಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಯನ್ನು ವೇಗಗೊಳಿಸುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು, ಇಂಧನ ಭದ್ರತೆಯನ್ನು ಸುಧಾರಿಸಲು ಹಾಗೂ ಮನೆ ಮತ್ತು ಸಮುದಾಯ ಮಟ್ಟದಲ್ಲಿ ಶುದ್ಧ ಇಂಧನವನ್ನು ಉತ್ತೇಜಿಸಲು ಮೇಲ್ಛಾವಣಿ ಸೌರಶಕ್ತಿ ಯೋಜನೆಯನ್ನು ಮಿಷನ್ ಮೋಡ್ ನಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಅವರು ಹೇಳಿದರು.
ರಸ್ತೆ ಮತ್ತು ಬಂದರು ಸಂಪರ್ಕ ಯೋಜನೆಗಳನ್ನು ಪರಿಶೀಲಿಸುವಾಗ, ವಾಧವನ್ ಬಂದರನ್ನು ಬಂದರು ಆಧಾರಿತ, ಮಲ್ಟಿ-ಮಾಡಲ್ ಅಭಿವೃದ್ಧಿಗೆ ಒಂದು ಮಾದರಿಯಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಿಹೇಳಲಾಯಿತು. ಇಲ್ಲಿ ಭವಿಷ್ಯದ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ನಿರ್ಮಿಸಲು ಪ್ರತಿ ಪ್ರಮುಖ ಸಾರಿಗೆ ಮಾಧ್ಯಮವನ್ನು ಸಂಯೋಜಿಸಲಾಗುತ್ತದೆ. ಈ ಯೋಜನೆಯನ್ನು ಕೇವಲ ಒಂದು ಬಂದರು ಎಂದು ನೋಡಬಾರದು, ಬದಲಿಗೆ ಕರಾವಳಿ ಹಡಗು ಸಾರಿಗೆ, ಒಳನಾಡು ಜಲಮಾರ್ಗಗಳು, ಸರಕು ಸಾಗಣೆಯ ಮೀಸಲು ಕಾರಿಡಾರ್ ಗಳು, ಹೈ-ಸ್ಪೀಡ್ ರೈಲು ಸಂಪರ್ಕ, ಹೆದ್ದಾರಿಗಳು ಮತ್ತು ವಿಮಾನ ನಿಲ್ದಾಣಗಳ ಸಂಪರ್ಕದ ಮೂಲಕ ಸಂಪರ್ಕ ಹೊಂದಿದ ರಾಷ್ಟ್ರೀಯ ಹೆಬ್ಬಾಗಿಲು ಎಂದು ನೋಡಬೇಕು ಎಂದು ಪ್ರಧಾನಿಯವರು ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್ 2.0 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿಯವರು, ಈ ಅಭಿಯಾನವು ಕೇವಲ ಮೂಲಸೌಕರ್ಯಗಳ ನಿರ್ಮಾಣಕ್ಕೆ ಸೀಮಿತವಾಗದೆ, ನಿಯಮಿತ ಮೇಲ್ವಿಚಾರಣೆ, ನಾಗರಿಕರ ಭಾಗವಹಿಸುವಿಕೆ ಮತ್ತು ವಿವಿಧ ಪಾಲುದಾರರ ನಡುವಿನ ಸಮನ್ವಯದ ಮೂಲಕ ಸ್ಪಷ್ಟ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದರು. ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಗೋಬರ್ಧನ್ ಘಟಕಗಳು ಸೇರಿದಂತೆ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅವರು ರಾಜ್ಯಗಳಿಗೆ ಸೂಚಿಸಿದರು.
ಕೆನ್-ಬೆತ್ವಾ ನದಿ ಜೋಡಣೆ ಯೋಜನೆಯನ್ನು ಪರಿಶೀಲಿಸುವಾಗ ಪ್ರಧಾನಮಂತ್ರಿಯವರು, ರಾಜ್ಯಗಳ ನಡುವಿನ ನೀರು ಹಂಚಿಕೆ ಸಮಸ್ಯೆಗಳನ್ನು ಪರಸ್ಪರ ಸಹಕಾರ, ಸಮಯೋಚಿತ ಅನುಮತಿಗಳು, ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ ಮತ್ತು ಮಿಷನ್ ಮೋಡ್ ಅನುಷ್ಠಾನದ ಮೂಲಕ ಬಗೆಹರಿಸಿಕೊಳ್ಳಲು ಕೆನ್-ಬೆತ್ವಾ ಯೋಜನೆಯು ಇತರ ರಾಜ್ಯಗಳಿಗೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ದೀರ್ಘಕಾಲೀನ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನದಿ ಜೋಡಣೆ, ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ದಕ್ಷ ನೀರಾವರಿ ಯೋಜನೆಗಳನ್ನು ಸಮಗ್ರವಾಗಿ ಕೈಗೆತ್ತಿಕೊಳ್ಳಬಹುದಾದ ಇಂತಹದೇ ಇತರ ಅವಕಾಶಗಳನ್ನು ಗುರುತಿಸುವಂತೆ ರಾಜ್ಯಗಳಿಗೆ ಕರೆ ನೀಡಿದರು.
ಸಾರ್ವಜನಿಕ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾದರೆ ಯೋಜನಾ ವೆಚ್ಚ ಹೆಚ್ಚಾಗುವುದು ಮಾತ್ರವಲ್ಲದೆ, ನಾಗರಿಕರು ಅತ್ಯಗತ್ಯ ಸೌಲಭ್ಯಗಳು ಮತ್ತು ಅಭಿವೃದ್ಧಿಯ ಲಾಭಗಳನ್ನು ಸಮಯಕ್ಕೆ ಸರಿಯಾಗಿ ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರತಿ ವಿಳಂಬವೂ ಜನರ ಜೀವನ, ಪ್ರಾದೇಶಿಕ ಬೆಳವಣಿಗೆ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸಲು, ಅಡೆತಡೆಗಳನ್ನು ನಿವಾರಿಸಲು ಮತ್ತು ವೇಗದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯಗಳು, ಇಲಾಖೆಗಳು ಮತ್ತು ರಾಜ್ಯಗಳು ಹೆಚ್ಚು ಸಕ್ರಿಯ ಮತ್ತು ಕಾಲಬದ್ಧ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಶುದ್ಧ ವಿದ್ಯುತ್ ಉತ್ಪಾದನೆಗಾಗಿ ಕಾಲುವೆ ಜಾಲಗಳ ನವೀನ ಬಳಕೆಯನ್ನು ಅನ್ವೇಷಿಸಬೇಕು, ಇದರಲ್ಲಿ ಕಾಲುವೆಗಳ ಪಕ್ಕದಲ್ಲಿ ಮತ್ತು ಕಾಲುವೆಗಳ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಅಳವಡಿಸುವುದೂ ಸೇರಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಭೂಮಿಯ ಬಳಕೆಯನ್ನು ಉತ್ತಮಗೊಳಿಸಲು, ಆವಿಯಾಗುವಿಕೆಯಿಂದಾಗುವ ನೀರಿನ ನಷ್ಟವನ್ನು ಕಡಿಮೆ ಮಾಡಲು, ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸಲು ಮತ್ತು ನೀರಿನ ಮೂಲಸೌಕರ್ಯದಿಂದ ಹೆಚ್ಚುವರಿ ಆರ್ಥಿಕ ಮೌಲ್ಯವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಸಭೆಯ ಆರಂಭದಲ್ಲಿ ಸಂಪುಟ ಕಾರ್ಯದರ್ಶಿಯವರು, ಪ್ರಧಾನಮಂತ್ರಿಯವರ ನಿರ್ದೇಶನದಂತೆ ರಾಜ್ಯ ಮಟ್ಟದಲ್ಲಿ ಸಾಮಾಜಿಕ ವಲಯದ ಯೋಜನೆಗಳ ಮಾಸಿಕ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು. ಈ ವ್ಯವಸ್ಥೆಯು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಿಯಮಿತ ಮೇಲ್ವಿಚಾರಣೆ, ಅನುಷ್ಠಾನದ ಸಮಸ್ಯೆಗಳ ಶೀಘ್ರ ಪರಿಹಾರ ಮತ್ತು ಹೆಚ್ಚಿನ ಹೊಣೆಗಾರಿಕೆಯನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿದೆ. ಈ ಉಪಕ್ರಮದ ಭಾಗವಾಗಿ, ಮೊದಲ ಹಂತದಲ್ಲಿ ಸ್ವಚ್ಛ ಭಾರತ್ ಮಿಷನ್ ಅನ್ನು ರಾಜ್ಯ ಮಟ್ಟದ ಪರಿಶೀಲನೆಗೆ ತೆಗೆದುಕೊಳ್ಳಲಾಗಿದೆ.
*****