Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಸ್ಟ್ರೇಲಿಯಾ-ಭಾರತ ‘ಸಿಇಒ’ಗಳ ವೇದಿಕೆ ಮತ್ತು ಆರ್ಥಿಕ ಮಾರ್ಗಸೂಚಿ ವ್ಯಾಪಾರ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಆಸ್ಟ್ರೇಲಿಯಾ-ಭಾರತ ‘ಸಿಇಒ’ಗಳ ವೇದಿಕೆ ಮತ್ತು ಆರ್ಥಿಕ ಮಾರ್ಗಸೂಚಿ ವ್ಯಾಪಾರ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಥೋನಿ ಅಲ್ಬನೀಸ್ ಅವರು 2026ರ ಜುಲೈ 9ರಂದು ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ-ಭಾರತ ಸಿಇಒಗಳ ವೇದಿಕೆ ಮತ್ತು ಆರ್ಥಿಕ ಮಾರ್ಗಸೂಚಿ ವ್ಯಾಪಾರ ಕಾರ್ಯಕ್ರಮವನ್ನು ಉದ್ದೇಶಿಸಿ ಜಂಟಿಯಾಗಿ ಮಾತನಾಡಿದರು. ಪ್ರಮುಖ ಭಾರತೀಯ ಮತ್ತು ಆಸ್ಟ್ರೇಲಿಯಾದ ʻಸಿಇಒʼಗಳು ಮತ್ತು ವಾಣಿಜ್ಯ ಮುಖಂಡರು; ಆಸ್ಟ್ರೇಲಿಯಾದ ಪ್ರಮುಖ ಪಿಂಚಣಿ ನಿಧಿಗಳ ಪ್ರತಿನಿಧಿಗಳು, ಸಾಂಸ್ಥಿಕ ಹೂಡಿಕೆದಾರರು ಹಾಗೂ ಆಸ್ಟ್ರೇಲಿಯಾದ ಪ್ರಮುಖ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ʻಸಿಇಒʼಗಳ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ ಅವರು, ಭಾರತದ ಸದೃಢ ಆರ್ಥಿಕ ಬೆಳವಣಿಗೆ, ನೀತಿ ಸುಧಾರಣೆಗಳು, ಡಿಜಿಟಲ್ ಕ್ರಾಂತಿ ಹಾಗೂ ನಾವೀನ್ಯತೆ ಪರಿಸರ ವ್ಯವಸ್ಥೆಯ ವಿಸ್ತರಣೆಯು ಆಸ್ಟ್ರೇಲಿಯಾದ ಪಾಲುದಾರರಿಗೆ ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಒತ್ತಿ ಹೇಳಿದರು. ಭಾರತೀಯ ಮತ್ತು ಆಸ್ಟ್ರೇಲಿಯಾದ ಆರ್ಥಿಕತೆಗಳ ನಡುವಿನ ಪೂರಕತೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ, ಉತ್ಪಾದನೆ, ಶುದ್ಧ ಇಂಧನ, ನಿರ್ಣಾಯಕ ಖನಿಜಗಳು, ಗಣಿಗಾರಿಕೆ, ಮೂಲಸೌಕರ್ಯ, ನಗರಾಭಿವೃದ್ಧಿ, ವಾಯುಯಾನ, ಸರಕು-ಸಾಗಣೆ, ಸುಧಾರಿತ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ, ಫಿನ್‌ಟೆಕ್‌, ಆಹಾರ ಸಂಸ್ಕರಣೆ ಮತ್ತು ಡಿಜಿಟಲ್ ಆರ್ಥಿಕ ಕ್ಷೇತ್ರಗಳಲ್ಲಿ ಭಾರತದಲ್ಲಿ ಲಭ್ಯವಿರುವ ಅಪಾರ ಅವಕಾಶಗಳನ್ನು ಒತ್ತಿ ಹೇಳಿದರು. ಭಾರತದ ಪ್ರಮಾಣ ಮತ್ತು ಆಸ್ಟ್ರೇಲಿಯಾದ ಪರಿಣತಿಯು ಪರಸ್ಪರ ಗೆಲುವಿನ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಭಾರತದಲ್ಲಿ ದೀರ್ಘಕಾಲೀನ ಹೂಡಿಕೆಯ ಅವಕಾಶಗಳ ಲಾಭ ಪಡೆಯುವಂತೆ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಹೂಡಿಕೆದಾರರಿಗೆ ಆಹ್ವಾನ ನೀಡಿದರು. ಭಾರತದಲ್ಲಿ ಹೆಚ್ಚುತ್ತಿರುವ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳ ಉಪಸ್ಥಿತಿಯನ್ನು ಅವರು ಸ್ವಾಗತಿಸಿದರು ಮತ್ತು ಉನ್ನತ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಆಳವಾದ ಸಹಯೋಗವು ಎರಡೂ ದೇಶಗಳಲ್ಲಿನ ಪ್ರತಿಭೆಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸುತ್ತದೆ. ಜೊತೆಗೆ, ಜಾಗತಿಕ ಅವಕಾಶಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದರು.

ʻಸಿಇಒʼಗಳ ವೇದಿಕೆಯ ನಂತರ, ಪ್ರಧಾನಿ ಮೋದಿಯವರು ಆರ್ಥಿಕ ಮಾರ್ಗಸೂಚಿ ವ್ಯಾಪಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಇದರಲ್ಲಿ ಎರಡೂ ಕಡೆಯ 200ಕ್ಕೂ ಹೆಚ್ಚು ʻಸಿಇಒʼಗಳು ಮತ್ತು ವಾಣಿಜ್ಯ ಮುಖಂಡರು ಭಾಗವಹಿಸಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ವಾಭಾವಿಕ ಸಮನ್ವಯದ ಬಗ್ಗೆ ಮಾತನಾಡಿದ ಅವರು, ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಇಂಡೋ-ಪೆಸಿಫಿಕ್‌ ಬಗ್ಗೆ ಸಾಮಾನ್ಯ ದೃಷ್ಟಿಕೋನ, ಜನರ ನಡುವಿನ ವೈವಿಧ್ಯಮಯ ಸಂಬಂಧಗಳು ಮತ್ತು ಬಲವಾದ ರಾಜಕೀಯ ತಿಳಿವಳಿಕೆಯು ಉಭಯ ದೇಶಗಳ ನಡುವಿನ ವ್ಯಾಪಾರ ಪಾಲುದಾರಿಕೆಗೆ ಅತ್ಯುತ್ತಮ ವಾತಾವರಣವನ್ನು ಸೃಷ್ಟಿಸಿದೆ ಎಂದು ಒತ್ತಿ ಹೇಳಿದರು. 2022ರ ʻಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದʼದ (ಇಸಿಟಿಎ) ಆಧಾರದ ಮೇಲೆ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳ ಬೆಳವಣಿಗೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ವ್ಯಾಪಾರ ಸಂಬಂಧಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಉದ್ದೇಶಿತ ʻಸಮಗ್ರ ಆರ್ಥಿಕ ಸಹಕಾರ ಒಪ್ಪಂದʼವನ್ನು(ಸಿಇಸಿಎ) ಶೀಘ್ರ ಅಂತಿಮಗೊಳಿಸಲು ಕರೆ ನೀಡಿದರು. ಎರಡೂ ಕಡೆಗಳಲ್ಲಿ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಂತೆ ಮತ್ತು ಜಾಗತಿಕ ಪರಿಹಾರಗಳನ್ನು ಸೃಷ್ಟಿಸಲು, ವಿಶೇಷವಾಗಿ ಅಪರೂಪದ ಖನಿಜಗಳು, ಲಿಥಿಯಂ, ಬ್ಯಾಟರಿಗಳು, ಎಲೆಕ್ಟ್ರಾನಿಕ್ಸ್, ವಿದ್ಯುತ್‌ ಚಾಲಿತ ವಾಹನಗಳು, ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ ಮತ್ತು ರಕ್ಷಣಾ ಪೂರೈಕೆ ಸರಪಳಿಗಳ ಕ್ಷೇತ್ರಗಳಲ್ಲಿ ಜಾಗತಿಕ ಪರಿಹಾರಗಳನ್ನು ಸೃಷ್ಟಿಸುವಂತೆ ಅವರು ವ್ಯಾಪಾರ ನಾಯಕರನ್ನು ಒತ್ತಾಯಿಸಿದರು. ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳು ಮುಂದಿನ ಹಂತಕ್ಕೆ ಬೆಳೆಯಲು, ಭಾರತೀಯ ರಾಜ್ಯಗಳು ಮತ್ತು ಆಸ್ಟ್ರೇಲಿಯಾದ ಪ್ರಾಂತ್ಯಗಳು ತಮ್ಮ ಪ್ರಮುಖ ಸಾಮರ್ಥ್ಯಗಳ ಆಧಾರದ ಮೇಲೆ ಕ್ರಿಯಾತ್ಮಕ ಆರ್ಥಿಕ ಸಹಭಾಗಿತ್ವವನ್ನು ರೂಪಿಸುವುದು ಮುಖ್ಯವಾಗಿದೆ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಎರಡೂ ವೇದಿಕೆಗಳಲ್ಲಿನ ಚರ್ಚೆಗಳಿಂದ ಸೃಷ್ಟಿಯಾದ ಆಶಾವಾದ ಮತ್ತು ಅರ್ಥಪೂರ್ಣ ವಿಚಾರಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ, ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಂಬಂಧಗಳು ಹೊಸ ಎತ್ತರಕ್ಕೆ ತಲುಪುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 

*****