ಪಿಎಂಇಂಡಿಯಾ
ವಿಶ್ವ ನಾಯಕರ ವೇದಿಕೆ – ಈ ಪ್ರತಿಷ್ಠಿತ ವೇದಿಕೆಯಲ್ಲಿ ಉಪಸ್ಥಿತರಿರುವ ಉದ್ಯಮ ವ್ಯವಹಾರ ಮತ್ತು ಕೈಗಾರಿಕಾ ರಂಗದ ಎಲ್ಲಾ ಖ್ಯಾತ ದಿಗ್ಗಜರೆ, ನೀತಿ ನಿರೂಪಕರೆ, ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ.
ನಿಮ್ಮೆಲ್ಲರ ನಡುವೆ ನಾನು ಇಲ್ಲಿರುವುದು ನಿಜಕ್ಕೂ ಸಂತೋಷದ ವಿಷಯ. ಈ ವರ್ಷ ಶೃಂಗಸಭೆಯ ಗಮನವು ಹಂಚಿಕೆಯ ಭವಿಷ್ಯದ ಮೇಲೆ ನೆಟ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ಜಗತ್ತು ಅನೇಕ ಏರಿಳಿತಗಳನ್ನು ಕಂಡಿದೆ. ಈ ಎಲ್ಲಾ ಅನುಭವಗಳು ಒಂದು ವಿಷಯವನ್ನು ಸ್ಪಷ್ಟಪಡಿಸಿವೆ: ಒಬ್ಬರು ಇಷ್ಟಪಡಲಿ ಅಥವಾ ಇಲ್ಲದಿರಲಿ, ಪ್ರತಿಯೊಂದು ದೇಶದ ಭವಿಷ್ಯವು ಪರಸ್ಪರ ಸಂಬಂಧ ಹೊಂದಿದೆ. ಪ್ರತ್ಯೇಕವಾಗಿ ಏನೂ ಸಾಧ್ಯವಿಲ್ಲ. ಅದಕ್ಕಾಗಿಯೇ ಹಂಚಿಕೆಯ ಭವಿಷ್ಯದ ಈ ವಿಷಯವು ಇಂದು ಇನ್ನಷ್ಟು ಪ್ರಸ್ತುತವಾಗಿದೆ. ಭಾರತವು ಯಾವಾಗಲೂ ಈ ಮನೋಭಾವ ಹೊಂದಿದೆ. ಜಿ-20 ಅಧ್ಯಕ್ಷತೆಯಲ್ಲಿ, ಭಾರತದ ಮಾರ್ಗದರ್ಶಿ ಮಂತ್ರವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವಾಗಿತ್ತು. ಹಂಚಿಕೆಯ ಭವಿಷ್ಯದ ಚೈತನ್ಯ ಮತ್ತು ಅದರೊಂದಿಗೆ ಬರುವ ಜವಾಬ್ದಾರಿಯ ಪ್ರಜ್ಞೆಯು 21ನೇ ಶತಮಾನದ ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ.
ಸ್ನೇಹಿತರೆ,
ಇಂದು ಜಗತ್ತಿನಲ್ಲಿ ಬೆಳವಣಿಗೆಯ ಬಗ್ಗೆ ಹಲವು ಕಳವಳಗಳಿವೆ. ಇತ್ತೀಚಿನ ದಿನಗಳಲ್ಲಿ ಜಗತ್ತು ಬಹಳ ಭಯಾನಕ ರೂಪ ಕಂಡಿದೆ. ಸಂಪನ್ಮೂಲಗಳನ್ನು ಶಸ್ತ್ರಸಜ್ಜಿತಗೊಳಿಸಲಾಗುತ್ತಿದೆ. ಅಪನಂಬಿಕೆಯ ವಾತಾವರಣವು ಜಗತ್ತಿಗೆ ಅನೇಕ ಹೊಸ ಸವಾಲುಗಳನ್ನು ತರುತ್ತಿದೆ. ಆದರೆ ಅಂತಹ ಸಮಯಗಳಲ್ಲಿಯೂ ಸಹ, ಜಗತ್ತು ಭಾರತವನ್ನು ಬೆಳವಣಿಗೆ ಮತ್ತು ಭರವಸೆಯ ಉಜ್ವಲ ತಾಣವಾಗಿ ನೋಡುತ್ತಿದೆ. ಕಳೆದ 10-12 ವರ್ಷಗಳಲ್ಲಿ ಭಾರತವು 250 ದಶಲಕ್ಷ ಜನರನ್ನು ಬಡತನದಿಂದ ಹೊರತಂದಿದೆ. ಅಷ್ಟೇ ಅಲ್ಲ, ನಾವು ಮುಂಬರುವ ದಿನಗಳ ಬಗ್ಗೆ ಮಾತನಾಡುವುದಾದರೆ, ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯುತ್ತದೆ ಎಂದು ಐಎಂಎಫ್ ಮುನ್ಸೂಚನೆ ನೀಡಿದೆ. ಭಾರತವು ತನ್ನ ಅಭಿವೃದ್ಧಿಯನ್ನು ವೇಗಗೊಳಿಸುವ ಕ್ರಮಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದೆ.
ಸ್ನೇಹಿತರೆ,
ಕಳೆದ ವಾರ ಆಗಸ್ಟ್ 15 ರಂದು ಕೆಂಪುಕೋಟೆಯಿಂದ ನಾನು ಸಪ್ತಧಾರಾ(7 ಶಕ್ತಿಗಳು)ಗಳ ಬಗ್ಗೆ ಮಾತನಾಡಿದ್ದೇನೆ. ಉತ್ಪಾದನೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಆಹಾರ ಸಂಸ್ಕರಣೆ, ಹಸಿರು ಮತ್ತು ನೀಲಿ ಆರ್ಥಿಕತೆ. ನಾನು ಇಂದು ಭಾರತವು ಹೆಚ್ಚು ಗಮನ ಹರಿಸುತ್ತಿರುವ ಪ್ರಮಖ 7 ವಲಯಗಳ ಬಗ್ಗೆ ಮಾತನಾಡಿದ್ದೇನೆ. ಅದಕ್ಕಾಗಿಯೇ ಭಾರತವು ನಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನೀತಿ ಮಟ್ಟದಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ. ಆಡಳಿತದಲ್ಲಿ ಸುಧಾರಣೆಗಳು, ಜೀವನ ಸುಲಭತೆಗಾಗಿ ಸುಧಾರಣೆಗಳು. ಕಳೆದ ಬಾರಿ ನಾನು ಇದೇ ವೇದಿಕೆಯ ಮೂಲಕ ನಿಮ್ಮೊಂದಿಗೆ ಸಂಪರ್ಕ ಸಾಧಿಸಿದಾಗ, ಆಗಲೂ ನಾನು ಹೇಳಿದ್ದೆ. ಈ ಸುಧಾರಣೆಗಳು ನಮಗೆ ಕಡ್ಡಾಯವಲ್ಲ. ಅವು ನಮ್ಮ ಬದ್ಧತೆ, ಅವು ನಮ್ಮ ದೃಢನಿಶ್ಚಯವಾಗಿವೆ.
ಸ್ನೇಹಿತರೆ,
2014ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ, ಅಂದಿನಿಂದ ಸುಧಾರಣೆಗಳು ದೇಶದ ದಿಕ್ಕು ಮತ್ತು ಸ್ಥಿತಿಯನ್ನು ಬದಲಾಯಿಸಿವೆ. ಇದಕ್ಕೆ ನಾನು ನಿಮಗೆ ಒಂದು ಕುತೂಹಲಕಾರಿ ಉದಾಹರಣೆ ನೀಡಲು ಬಯಸುತ್ತೇನೆ. ಬಹುಶಃ ಇಲ್ಲಿ ಯಾರಿಗೂ ಪಿಎಲ್ಪಿ ಬಗ್ಗೆ ತಿಳಿದಿಲ್ಲ. ಪಿಎಲ್ಪಿ ಬಗ್ಗೆ ತಿಳಿದಿರುವ ಯಾರಾದರೂ ಇದ್ದಾರೆಯೇ? ನಿಮ್ಮ ಕೈ ಎತ್ತಿ. ಇಲ್ಲಿ ಅನೇಕ ಮಾಧ್ಯಮ ದಿಗ್ಗಜರು ಕುಳಿತಿದ್ದಾರೆ. ನಿಮಗೆ ಪಿಎಲ್ಪಿ ತಿಳಿದಿದೆಯೇ? ನೀವು ಕೇಳಿದರೆ ಆಶ್ಚರ್ಯಚಕಿತರಾಗುವಿರಿ. ಪಿಎಲ್ಪಿ ಎಂದರೆ ಉತ್ಪಾದನೆಗೆ ಸಂಬಂಧಿಸಿದ ಶಿಕ್ಷೆ. ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ನೀವು ಖಂಡಿತವಾಗಿಯೂ ಕೇಳಿರುವ ಇನ್ನೊಂದು ಪದ – ಪಿಎಲ್ಐ. ಹೆಚ್ಚಿನ ಜನರಿಗೆ ಇದು ತಿಳಿದಿದೆ. ಪಿಎಲ್ಐ ಎಂದರೆ ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹ.
ಸ್ನೇಹಿತರೆ,
ಈ 2 ಪದಗಳು ಭಾರತದ 2 ವಿಭಿನ್ನ ಕಾಲಾವಧಿಗಳನ್ನು ವ್ಯಾಖ್ಯಾನಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಇದು ವಿವರಿಸುವವರ ಯುಗ, ಆದ್ದರಿಂದ ನಾನು ನಿಮಗೆ ವಿವರಿಸುತ್ತೇನೆ.
ಸ್ನೇಹಿತರೆ,
ನಮ್ಮ ದೇಶದಲ್ಲಿ ಯಾವುದೇ ಕಂಪನಿಯು ನಿಗದಿತ ಮಿತಿಗಿಂತ ಹೆಚ್ಚಿನದನ್ನು ಉತ್ಪಾದಿಸಿದರೆ ಅದಕ್ಕೆ ಶಿಕ್ಷೆ ವಿಧಿಸುವ ಸಮಯವಿತ್ತು ಎಂದು ಕೇಳಿದಾಗ ಇಂದಿನ ಯುವ ಪೀಳಿಗೆ ಆಘಾತಕ್ಕೊಳಗಾಗುತ್ತದೆ. ಇದು ಹಿಂದಿನ ಲೈಸೆನ್ಸ್ ರಾಜ್ ಸರ್ಕಾರಗಳ ಪಿಎಲ್ಪಿ – ಉತ್ಪಾದನೆಗೆ ಸಂಬಂಧಿತ ಶಿಕ್ಷೆಯೇ ಮಾದರಿಯಾಗಿತ್ತು. ಹೆಚ್ಚಿನ ಬೇಡಿಕೆ ಕಂಡ ಕಾರ್ಖಾನೆಯು ಹೆಚ್ಚು ಉತ್ಪಾದಿಸಿದರೆ, ಅದಕ್ಕೆ ನೋಟಿಸ್ ಕಳುಹಿಸಲಾದ ಉದಾಹರಣೆಗಳೂ ಇದ್ದವು. ಇದರಿಂದ ಬಲವಂತವಾಗಿ, ಕಂಪನಿಯು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬದಲು ತನ್ನದೇ ಉತ್ಪನ್ನವನ್ನು ನಾಶಪಡಿಸುತ್ತಿತ್ತು.
ಸ್ನೇಹಿತರೆ,
ಇಂದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಅಭಿಯಾನವನ್ನು ಅಪಹಾಸ್ಯ ಮಾಡುವವರು – ಅವರ ಪೂರ್ವಜರ ಚಿಂತನೆ ನಿಖರವಾಗಿ ಹೀಗಿತ್ತು: ಪಿಎಲ್ಪಿ, ಉತ್ಪಾದನೆಗೆ ಸಂಬಂಧಿಸಿದ ಶಿಕ್ಷೆ. ಅಂತಹ ಕ್ರಮಗಳ ಹಿಂದೆ ಒಂದು ನಿರ್ದಿಷ್ಟ ವಿಕೃತ ಮನಸ್ಥಿತಿ ಇತ್ತು. ಅಂತಹ ಮನಸ್ಥಿತಿ ಹೊಂದಿರುವ ಜನರು ಯಾವಾಗಲೂ ಅಗತ್ಯ ವಸ್ತುಗಳ ಕೊರತೆ ಮುಂದುವರಿಯಬೇಕೆಂದು ಬಯಸುತ್ತಿದ್ದರು. ನಾಗರಿಕರನ್ನು ಅಭಾವ ಅಥವಾ ಕೊರತೆಯಲ್ಲಿ ಇಡುವುದು ಅವರ ನೀತಿಯಾಗಿತ್ತು. ಜನರು ತಮ್ಮ ಮುಂದೆ ಬಂದು ಕೈಜೋಡಿಸಿ, ಬೇಡಿಕೊಳ್ಳಬೇಕೆಂದು ಅವರು ಬಯಸಿದ್ದರು – ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆಂದು ಈಗ ನಿಮಗೆ ಅರ್ಥವಾಗಿದೆ. ಜನರು ಕೈಜೋಡಿಸಿದ ನಂತರ, ಅವರು ಉಪಕಾರ ಮಾಡುತ್ತಿದ್ದೇವೆ ಎಂಬಂತೆ ವರ್ತಿಸುತ್ತಿದ್ದರು. ಅದು ಆ ಸರ್ಕಾರಗಳ ಕಾರ್ಯವಿಧಾನವಾಗಿತ್ತು. ಅದಕ್ಕಾಗಿಯೇ ಅವರು ಉತ್ಪಾದನೆಗೆ ಸಂಬಂಧಿಸಿದ ಶಿಕ್ಷೆಯ ಮಾದರಿಯನ್ನು ಅನುಸರಿಸಿದರು. ನೀವು ಊಹಿಸಬಹುದು, ಇದನ್ನು ಮಾಡುವ ಮೂಲಕ ಅವರು ಉದ್ಯೋಗ ಸೃಷ್ಟಿಯ ಮೂಲ ತತ್ವದ ಕತ್ತು ಹಿಸುಕಿದರು. ಆಶ್ಚರ್ಯಕರ ವಿಷಯವೆಂದರೆ – ಅವರ ಆಸ್ಥಾನಿಕರು, ಮತ್ತೊಮ್ಮೆ ನಾನು ಪುನರಾವರ್ತಿಸುತ್ತೇನೆ, ಅವರ ಆಸ್ಥಾನಿಕರು, ಅದರ ವಿರುದ್ಧ ಎಂದಿಗೂ ಧ್ವನಿ ಎತ್ತಲಿಲ್ಲ.
ಸ್ನೇಹಿತರೆ,
ಪ್ರತಿಯೊಂದು ಸುಧಾರಣೆಯೂ ಮೊದಲು ನಿಮ್ಮ ಆಲೋಚನಾ ವಿಧಾನ, ನಿಮ್ಮ ಮಾನಸಿಕ ಚೌಕಟ್ಟು, ನೀವು ಕೆಲಸ ಮಾಡುವ ವ್ಯಾಪ್ತಿಯನ್ನು ಸುಧಾರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಮೊದಲು ಹೆಚ್ಚುತ್ತಿರುವ ಉತ್ಪಾದನೆಗೆ ಶಿಕ್ಷೆ ತಂದಿದ್ದರೆ, ಇಂದು ನಮ್ಮ ಸರ್ಕಾರವು ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹಕಗಳನ್ನು ನೀಡುತ್ತಿದೆ. ಇಂದು ಪಿಎಲ್ಐ ಯೋಜನೆಯ ಯಶಸ್ಸನ್ನು ಜಗತ್ತು ನೋಡುತ್ತಿದೆ. ಈ ಒಂದು ಯೋಜನೆಯಿಂದಾಗಿ – ನಾನು ಎಲ್ಲಾ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ, ಒಂದೇ ಒಂದು – ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳ ನಿಜವಾದ ಹೂಡಿಕೆ ನಡೆದಿದೆ. 22 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಉತ್ಪಾದನೆ ಮತ್ತು ಮಾರಾಟ ನಡೆದಿದೆ. 15 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ರಫ್ತು ನಡೆದಿದೆ. 14 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ನಾನು ನಿಮಗೆ ಮತ್ತೊಮ್ಮೆ ನೆನಪಿಸುತ್ತೇನೆ – ಈ ಅಂಕಿಅಂಶಗಳು ಕೇವಲ ಒಂದು ಯೋಜನೆಯ ಬಗ್ಗೆ ಮಾತ್ರ. ಇದರ ಬಗ್ಗೆ ಯೋಚಿಸಿ: ಹಿಂದಿನ ಲೈಸೆನ್ಸ್ ರಾಜ್ ಸರ್ಕಾರಗಳ ಶಿಕ್ಷೆಯ ಮಾದರಿಯು ನಿರುದ್ಯೋಗವನ್ನು ಹೆಚ್ಚಿಸಿದೆ, ಆದರೆ ಇಂದು ನಮ್ಮ ಪ್ರೋತ್ಸಾಹಕಗಳ ಮಾದರಿಯು ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.
ಸ್ನೇಹಿತರೆ,
ಇಂದು ಭಾರತದಲ್ಲಿ ಈ ತ್ವರಿತ ಅಭಿವೃದ್ಧಿ, ಈ ತ್ವರಿತ ಸುಧಾರಣೆಗಳು ನಡೆಯುತ್ತಿವೆ. ಏಕೆಂದರೆ ಭಾರತದಲ್ಲಿ ಇದು ಸತ್ಯ, ಈಗ ಹೇಳಿದಂತೆ – ರಾಜಕೀಯ ಸ್ಥಿರತೆ ಇದೆ, ನಮ್ಮ ನೀತಿಯಲ್ಲಿ ನಿರಂತರತೆ ಇದೆ. ಮೊದಲು ದೇಶದಲ್ಲಿ ಸುಧಾರಣೆಗಳ ಬಗ್ಗೆ ಮಾತನಾಡಿದವರು ಘೋಷಣೆಗಳನ್ನು ಮಾಡುತ್ತಾರೆ, ಆದರೆ ನಂತರ ಅವುಗಳನ್ನು ಮರೆತುಬಿಡುತ್ತಾರೆ. ಆದರೆ ನಾವು ಸುಧಾರಣೆಗಳಿಗಾಗಿ ಸ್ಪಷ್ಟ ಮಾರ್ಗಸೂಚಿ ರೂಪಿಸಿದ್ದೇವೆ. ಈ ಮಾರ್ಗಸೂಚಿಯ ಮುಖ್ಯ ನಿರ್ದೇಶನವೆಂದರೆ – ಆಡಳಿತ ಮಟ್ಟದಲ್ಲಿ ಸುಧಾರಣೆಗಳು! ಇದಕ್ಕಾಗಿ ಇಂದು 21ನೇ ಶತಮಾನದ ಭಾರತದಲ್ಲಿ ನಾವು ಕೇವಲ ನಿಯಮಗಳನ್ನು ಬದಲಾಯಿಸುತ್ತಿಲ್ಲ, ನಾವು ನಿಯಂತ್ರಣ ಕ್ರಮಗಳ ಸಂಪೂರ್ಣ ತತ್ವಶಾಸ್ತ್ರವನ್ನು ಬದಲಾಯಿಸುತ್ತಿದ್ದೇವೆ. ಈ ಹಿಂದೆ ನಿಯಮಗಳ ವಿಧಾನವು ಹೀಗಿತ್ತು: “ಅನುಮತಿ ನೀಡದೆ ನಿಷೇಧಿಸಲಾಗಿದೆ.” ಅಂದರೆ, ಸರ್ಕಾರ ಅನುಮತಿ ನೀಡುವವರೆಗೆ ನೀವು ಆ ಕೆಲಸವನ್ನು ಮಾಡಲು ಸಾಧ್ಯವಿರಲಿಲ್ಲ. ನಾವು ಈ ವಿಧಾನವನ್ನು “ನಿಷೇಧಿಸದೆ ಅನುಮತಿ ನೀಡುತ್ತಿದ್ದೇವೆ” ಎಂಬುದಾಗಿ ಬದಲಾಯಿಸುತ್ತಿದ್ದೇವೆ. ಅಂದರೆ, ಕಾನೂನು ಸ್ಪಷ್ಟವಾಗಿ ನಿಷೇಧಿಸದ ಕೆಲಸಕ್ಕೆ, ಪ್ರತಿ ಹಂತದಲ್ಲೂ ಅನುಮತಿಯ ಅಗತ್ಯವಿಲ್ಲ. ಈ ಚಿಂತನೆಯ ಹಿಂದೆ ತುಂಬಾ ಸರಳವಾದ ವಿಷಯವಿದೆ – ಸರ್ಕಾರ ಮತ್ತು ನಾಗರಿಕರ ನಡುವಿನ ಸಂಬಂಧದ ಆಧಾರವು ನಂಬಿಕೆಯಾಗಿರಬೇಕು, ಅನುಮಾನವಲ್ಲ.
ಸ್ನೇಹಿತರೆ,
ಜನ ವಿಶ್ವಾಸ್ ಮಸೂದೆಯಲ್ಲೂ ಈ ಚಿಂತನೆ ಗೋಚರಿಸುತ್ತಿದೆ. ಪ್ರತಿಯೊಂದು ಕಾರ್ಯವಿಧಾನದ ತಪ್ಪನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವುದು ಸರಿಯಲ್ಲ ಎಂಬುದನ್ನು ನಾನು ನಂಬುತ್ತೇನೆ. ಅದಕ್ಕಾಗಿಯೇ ಅನೇಕ ಅಪರಾಧಗಳನ್ನು ಅಪರಾಧ ಮುಕ್ತಗೊಳಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ, ಜೈಲಿನ ಬದಲು, ಆರ್ಥಿಕ ದಂಡವನ್ನು ಮಾತ್ರ ನೀಡಲಾಗಿದೆ. ಸರ್ಕಾರ ಮತ್ತು ಉದ್ಯಮದ ನಡುವಿನ ಸಂಬಂಧದಲ್ಲಿ, ನಾವು ಇದೇ ಸುಧಾರಣಾ ಮನಸ್ಥಿತಿಯನ್ನು ಮುಂದುವರಿಸುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ, 40,000ಕ್ಕೂ ಹೆಚ್ಚು ಕಾನೂನು ಅನುಸರಣೆಗಳನ್ನು ತೆಗೆದುಹಾಕಲಾಗಿದೆ – 40 ಸಾವಿರ. 1,500ಕ್ಕೂ ಹೆಚ್ಚು ಹಳೆಯ ಮತ್ತು ಅನುಪಯುಕ್ತ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ನೀವು ಈ ಎಲ್ಲಾ ಸುಧಾರಣೆಗಳನ್ನು ಒಟ್ಟಿಗೆ ನೋಡಿದಾಗ, ನಮ್ಮ ಕೈಗಾರಿಕೆಗಳು ಮತ್ತು ಉದ್ಯಮ ವ್ಯವಹಾರಗಳ ಹೆಗಲಿನಿಂದ ಎಷ್ಟು ಹೊರೆ ಕಡಿಮೆಯಾಗಿದೆ ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ.
ಸ್ನೇಹಿತರೆ,
ಆಡಳಿತ ಸುಧಾರಣೆಗಳ ಈ ಪ್ರಕ್ರಿಯೆಯಲ್ಲಿ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಇತ್ತೀಚಿನ ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ ನಾವು ಬ್ಯಾಂಕರ್ಸ್ ಬುಕ್ ಎವಿಡೆನ್ಸ್ ವಿಧೇಯಕವನ್ನು ಅಂಗೀಕರಿಸಿದ್ದೇವೆ. ಅದು ಕೂಡ ವಿರೋಧ ಪಕ್ಷ ಸಂಸತ್ತಿನಲ್ಲಿ ನಿರಂತರ ಅಡಚಣೆ ಸೃಷ್ಟಿಸಿದಾಗ. ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಕೆಲಸವನ್ನು ನಿಲ್ಲಿಸಲು ನಾವು ಬಿಡಲಿಲ್ಲ. ಈಗ ಈ ಕಾನೂನು 19ನೇ ಶತಮಾನದ ಇಂಗ್ಲಿಷ್ ಕಾನೂನನ್ನು ಬದಲಾಯಿಸಿದೆ. ಈಗ ಬ್ಯಾಂಕುಗಳ ಡಿಜಿಟಲ್ ದಾಖಲೆಗಳ ಸ್ವೀಕಾರಾರ್ಹತೆಗೆ ಕಾನೂನು ಮನ್ನಣೆ ನೀಡಲಾಗಿದೆ. ಇದು ಕಾನೂನು ತೊಡಕುಗಳನ್ನು ಕಡಿಮೆ ಮಾಡುತ್ತದೆ, ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುತ್ತದೆ ಮತ್ತು ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುತ್ತದೆ.
ಸ್ನೇಹಿತರೆ,
ಆಡಳಿತದಲ್ಲಿನ ಸುಧಾರಣೆಯ ಒಂದು ಅರ್ಥವೆಂದರೆ, ಪ್ರತಿಯೊಬ್ಬ ಮಾನವ ಜೀವನ ಮತ್ತು ಅದರ ಸಮಯದ ಬಗ್ಗೆ ಸೂಕ್ಷ್ಮತೆಯಿಂದ ವ್ಯವಸ್ಥೆಗಳನ್ನು ನಿರ್ಮಿಸಬೇಕು. ನಾನು ರೈಲ್ವೆಯ ಉದಾಹರಣೆ ನೀಡುತ್ತೇನೆ. ನಮ್ಮ ರೈಲ್ವೆಗಳಲ್ಲಿಯೂ ಸಹ, ಈ ವಿಧಾನದೊಂದಿಗೆ ಕೆಲಸ ಮಾಡಲಾಗಿದೆ. ಇಂದು 6,500ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಗಳನ್ನು ಹೊಂದಿವೆ. 10,000ಕ್ಕೂ ಹೆಚ್ಚು ಲೆವೆಲ್ ಕ್ರಾಸಿಂಗ್ ಗೇಟ್ಗಳನ್ನು ಇಂಟರ್ಲಾಕಿಂಗ್ನೊಂದಿಗೆ ಸಂಪರ್ಕಿಸಲಾಗಿದೆ. ಇದು ಮಾನವ ದೋಷದಿಂದಾಗಿ ಅಪಘಾತಗಳ ಸಾಧ್ಯತೆಯನ್ನು ಬಹಳವಾಗಿ ಕಡಿಮೆ ಮಾಡಿದೆ.
ಸ್ನೇಹಿತರೆ,
2014ರಲ್ಲಿ ನಮ್ಮ ಸರ್ಕಾರ ಬಂದಾಗ, ಸುಮಾರು 9,000 ಮಾನವರಹಿತ ಕ್ರಾಸಿಂಗ್ಗಳು ಇದ್ದವು. ಅವುಗಳನ್ನು ತೆಗೆದುಹಾಕುವುದು ರಾಕೆಟ್ ವಿಜ್ಞಾನವಾಗಿರಲಿಲ್ಲ. ಮಾನವರಹಿತ ಕ್ರಾಸಿಂಗ್ಗಳಿಂದಾಗಿ, ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡರು, ಆದರೆ ಹಿಂದಿನ ಸರ್ಕಾರಗಳು ಅದಕ್ಕೆ ಹೆಚ್ಚಿನ ಕಾಳಜಿ ವಹಿಸಲಿಲ್ಲ. ಕಳೆದ 10 ವರ್ಷಗಳಲ್ಲಿ ನಾವು ಕಾರ್ಯಾಚರಣೆ ಮಾದರಿಯಲ್ಲಿ ಈ ಮಾನವರಹಿತ ಕ್ರಾಸಿಂಗ್ಗಳನ್ನು ತೆಗೆದುಹಾಕಿದ್ದೇವೆ. ನಾವು ರಸ್ತೆ ಮೇಲ್ಸೇತುವೆಗಳು ಮತ್ತು ರಸ್ತೆ ಕೆಳಸೇತುವೆಗಳನ್ನು ನಿರ್ಮಿಸುವ ವೇಗವನ್ನು ಹಲವು ಬಾರಿ ಹೆಚ್ಚಿಸಿದ್ದೇವೆ. ಇದರ ಪರಿಣಾಮವೆಂದರೆ 2014ಕ್ಕಿಂತ ಮೊದಲು ಹೋಲಿಸಿದರೆ, ರೈಲು ಅಪಘಾತಗಳ ಸಂಖ್ಯೆ 90 ಪ್ರತಿಶತದಷ್ಟು ಕಡಿಮೆಯಾಗಿದೆ. 12 ವರ್ಷಗಳ ಹಿಂದೆ, ಒಂದು ವರ್ಷದಲ್ಲಿ ಸುಮಾರು 150 ರೈಲು ಅಪಘಾತಗಳು ಸಂಭವಿಸುತ್ತಿದ್ದವು. ಈಗ ಅವುಗಳ ಸಂಖ್ಯೆ 15-20ಕ್ಕೆ ಇಳಿದಿದೆ. ನಾವು ಅದನ್ನು ಇನ್ನೂ ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.
ಸ್ನೇಹಿತರೆ,
ರೈಲ್ವೆಯಲ್ಲಿ ಸ್ವಚ್ಛತೆಯು ಆಡಳಿತ ಸುಧಾರಣೆಯ ಒಂದು ಬಹುದೊಡ್ಡ ಉದಾಹರಣೆಯಾಗಿದೆ. ರೈಲ್ವೆ ಹಳಿಗಳಲ್ಲಿ ಕೊಳಕು ಮತ್ತು ಮಾನವ ತ್ಯಾಜ್ಯವು ದೊಡ್ಡ ಸಮಸ್ಯೆಯಾಗಿದ್ದ ಒಂದು ಕಾಲವಿತ್ತು. ಇಂದು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. 2014ಕ್ಕಿಂತ ಮೊದಲು, ನಮ್ಮ ರೈಲುಗಳಲ್ಲಿ ಸುಮಾರು 12,000 ಬಯೋ ಶೌಚಾಲಯಗಳನ್ನು ಸ್ಥಾಪಿಸಲಾಗಿತ್ತು. 2014ರ ನಂತರ, ರೈಲುಗಳಲ್ಲಿ 360,000ಕ್ಕೂ ಹೆಚ್ಚು ಬಯೋ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಅಂದರೆ ಕಳೆದ 12 ವರ್ಷಗಳಲ್ಲಿ ಶೇಕಡಾ 97ಕ್ಕಿಂತ ಹೆಚ್ಚು ಬಯೋ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಈ ಬದಲಾವಣೆಯು ಕೇವಲ ಸ್ವಚ್ಛತೆಯ ಬಗ್ಗೆ ಅಲ್ಲ, ಪ್ರಯಾಣಿಕರ ಘನತೆ, ಸ್ವಚ್ಛತೆ ಮತ್ತು ಆಧುನಿಕ ಭಾರತವನ್ನು ನಿರ್ಮಿಸುವ ದಿಕ್ಕಿನಲ್ಲಿ ಮಾಡಿದ ಆಡಳಿತದ ಹೊಸ ಮಾದರಿಯಾಗಿದೆ. ಇದು ಕೋಟ್ಯಂತರ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವ ಅಭಿಯಾನವೂ ಆಗಿದೆ.
ಸ್ನೇಹಿತರೆ,
ಆಡಳಿತದ ಗುಣಮಟ್ಟದ ಮತ್ತೊಂದು ಅಳತೆಗೋಲೆಂದರೆ, ಅದು ಸಮಯ. ಪ್ರಾರಂಭವಾಗುವ ಯೋಜನೆಯು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಬೇಕು. ಜನರು ಪಡೆಯುವ ಸೇವೆಯು ಸಮಯದ ಪರೀಕ್ಷೆಯನ್ನು ಸಹ ಪೂರೈಸಬೇಕು. ದೆಹಲಿ-ಮೀರತ್ ನಮೋ ಭಾರತ್ ಕ್ಷಿಪ್ರ ರೈಲು ವ್ಯವಸ್ಥೆಯು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಕಾರಿಡಾರ್ನಲ್ಲಿ ರೈಲುಗಳು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿವೆ. ಇದನ್ನು ನಮ್ಮ ದೇಶದಲ್ಲಿ ಮೊದಲು ಊಹಿಸಲೂ ಸಾಧ್ಯವಿಲ್ಲ. ಇಲ್ಲಿಯವರೆಗೆ 40 ದಶಲಕ್ಷಕ್ಕಿಂತಲೂ ಹೆಚ್ಚಿನ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಿದ್ದಾರೆ. ನಾವು ಚರ್ಚಿಸದ ಮತ್ತೊಂದು ಪ್ರಮುಖ ಅಂಶವಿದೆ. ದೆಹಲಿ-ಮೀರತ್ ನಮೋ ಭಾರತ್ ಕ್ಷಿಪ್ರ ರೈಲಿನ ಸಮಯಪಾಲನೆ ಶೇಕಡ 99.9. ಎಲ್ಲದಕ್ಕೂ ತಡವಾದರೆ ನಾವು, “ಇದು ಭಾರತೀಯ ಸಮಯ” ಎಂದು ಹೇಳುತ್ತಿದ್ದೆವು. ಕಾಲ ಬದಲಾಗಿದೆ. ಕೆಲಸ ಎಷ್ಟು ವಿಶಾಲ ಮತ್ತು ವಿಸ್ತಾರವಾಗಿದೆ ಎಂಬುದನ್ನು ನಾವು ಅರಿತುಕೊಳ್ಳಲು ನಾನು ಈ ಸಣ್ಣ ವಿಷಯಗಳನ್ನು ಉಲ್ಲೇಖಿಸುತ್ತೇನೆ. ಅದೇ ರೀತಿ, ದೆಹಲಿ ಮೆಟ್ರೋದ ಸಮಯಪಾಲನೆ. ದೆಹಲಿ ಮೆಟ್ರೋದ ಸಮಯಪಾಲನೆ ಶೇಕಡ 99.9. ಈ ಸಮಯಪಾಲನೆ ನ್ಯೂಯಾರ್ಕ್, ಹಾಂಗ್ ಕಾಂಗ್ ಮತ್ತು ಪ್ಯಾರಿಸ್ನಂತಹ ನಗರಗಳ ಮಹಾನಗರಗಳಿಗೆ ಬಹುತೇಕ ಸಮಾನವಾಗಿದೆ. ಇದು ಕೇವಲ ಸಮಯಕ್ಕೆ ಸರಿಯಾಗಿ ಚಲಿಸುವ ಮೆಟ್ರೋ ಮತ್ತು ಕ್ಷಿಪ್ರ ರೈಲಿನ ಕಥೆಯಲ್ಲ. ಕಾಲಕ್ರಮೇಣ ಬದಲಾಗುತ್ತಿರುವ ಭಾರತದ ಗುರುತು ಇದಾಗಿದೆ. ನನಗೆ ತಿಳಿದಿದೆ, ನಾನು ಇದರಿಂದ ಮಾತ್ರ ತೃಪ್ತನಾಗುವ ವ್ಯಕ್ತಿಯಲ್ಲ – ಇನ್ನೂ ಈ ದಿಕ್ಕಿನಲ್ಲಿ ನಾವು ಮಾಡಬೇಕಾದದ್ದು ಬಹಳಷ್ಟಿದೆ, ಇನ್ನೂ ಬಹಳಷ್ಟಿದೆ. ಆದರೆ ನಾವು ಅದನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಒಂದು ಆರಂಭವನ್ನು ಮಾಡಲಾಗಿದೆ, ಈ ಆರಂಭವು ಶ್ಲಾಘನೀಯವಾಗಿದೆ.
ಸ್ನೇಹಿತರೆ,
ನಮ್ಮ ಸುಧಾರಣೆಗಳ ಮಾರ್ಗಸೂಚಿಯ ಮತ್ತೊಂದು ಪ್ರಮುಖ ಆಯಾಮವೆಂದರೆ, ನೀತಿ ಮಟ್ಟದಲ್ಲಿ ಸುಧಾರಣೆಗಳು! ಇಂದು ನಾವು ಜನರ ಪರ, ಬೆಳವಣಿಗೆಯ ಪರ, ಅಭಿವೃದ್ಧಿ ಪರ ನೀತಿಗಳನ್ನು ರೂಪಿಸುತ್ತಿದ್ದೇವೆ! ನೀತಿಗಳು ದೇಶ ಮತ್ತು ಅದರ ಜನರ ಅಗತ್ಯಗಳಿಗೆ ಅನುಗುಣವಾಗಿರಬೇಕು, ನೀತಿಗಳನ್ನು ರೂಪಿಸಬೇಕು, ದೇಶವು ಅವುಗಳ ಪ್ರಕಾರವೇ ನಡೆಯುವಂತೆ ಒತ್ತಾಯಿಸಬೇಕು ಎಂಬುದಲ್ಲ! ನಾನು ನಿಮಗೆ ಇನ್ನೊಂದು ಆಸಕ್ತಿದಾಯಕ ಉದಾಹರಣೆ ನೀಡಲು ಬಯಸುತ್ತೇನೆ. ಕೆಲವು ವರ್ಷಗಳ ಹಿಂದಿನವರೆಗೂ, ದೇಶದ ನಕ್ಷೆಯನ್ನು ತಯಾರಿಸುವುದು ಸಹ ಕಾನೂನುಬಾಹಿರವಾಗಿತ್ತು. ನೀವು ನಕ್ಷೆಯನ್ನು ಮಾಡಿದರೆ ಅದು ಕಾನೂನುಬಾಹಿರವಾಗಿತ್ತು, ನೀವು ಜೈಲಿಗೆ ಹೋಗಬಹುದು. ಅನುಮತಿಯಿಲ್ಲದೆ ನೀವು ದೇಶದಲ್ಲಿ ನಕ್ಷೆ ಮಾಡುವ ಕೆಲಸವನ್ನು ಸಹ ಮಾಡಲು ಸಾಧ್ಯವಿಲ್ಲ. ಯೋಚಿಸಿ, ವಿದೇಶಿ ಉಪಗ್ರಹ ತಂತ್ರಜ್ಞಾನವು ಭಾರತದ ಯಾವುದೇ ಮೂಲೆಯನ್ನು ನಕ್ಷೆ ಮಾಡಬಹುದು, ಆದರೆ ಭಾರತದಲ್ಲಿ, ಭಾರತೀಯರು ಭಾರತದ ನಕ್ಷೆಯನ್ನು ಮಾಡುವುದನ್ನು ಸಹ ನಿಷೇಧಿಸಲಾಗಿತ್ತು.
ಸ್ನೇಹಿತರೆ,
ಇಂದಿನ ತಂತ್ರಜ್ಞಾನದ ಯುಗದಲ್ಲಿ ಈ ಒಂದು ನಿರ್ಬಂಧವು ಹಲವು ಸ್ಟಾರ್ಟಪ್ಗಳನ್ನು ಕೊಲ್ಲಬಹುದಿತ್ತು! ಎಷ್ಟೊಂದು ವಿಚಾರಗಳನ್ನು ಅನುಷ್ಠಾನದಿಂದ ವಂಚಿತಗೊಳಿಸಬಹುದಿತ್ತು! ನಾವು ಈ ವ್ಯವಸ್ಥೆಯನ್ನು ಸಹ ಬದಲಾಯಿಸಿದ್ದೇವೆ. ನಾವು ಜಿಯೋಸ್ಪೇಷಿಯಲ್ ಡೇಟಾವನ್ನು ನಿಯಂತ್ರಣದಿಂದ ಮುಕ್ತಗೊಳಿಸಿದ್ದೇವೆ, ಇಂದು ಜಿಯೋಸ್ಪೇಷಿಯಲ್ ಡೇಟಾ ಅನೇಕ ಸ್ಟಾರ್ಟಪ್ಗಳಿಗೆ ಅಡಿಪಾಯವಾಗಿದೆ.
ಸ್ನೇಹಿತರೆ,
ಇಂದು ನೀವು ಡ್ರೋನ್ಗಳ ಬೆಳೆಯುತ್ತಿರುವ ಉಪಯುಕ್ತತೆಯನ್ನು ನಿರಂತರವಾಗಿ ನೋಡುತ್ತಿದ್ದೀರಿ. ಕೃಷಿಯಲ್ಲಿ, ರಕ್ಷಣೆಯಲ್ಲಿ, ವಿತರಣೆಯಲ್ಲಿ, ಶೂಟಿಂಗ್ನಲ್ಲಿ, ವಿಷಯ ರಚನೆಯಲ್ಲಿ – ಸರ್ಕಾರವು ಅದಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳದಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ಮೊದಲು, ದೇಶದಲ್ಲಿ ಡ್ರೋನ್ ಹಾರಾಟವು ನಿಯಮಗಳು ಮತ್ತು ನಿರ್ಬಂಧಗಳಿಗೆ ಸಂಪೂರ್ಣ ಬದ್ಧವಾಗಿತ್ತು. ನಾವು ಅದನ್ನು ಆ ನಿರ್ಬಂಧಗಳಿಂದ ಮುಕ್ತಗೊಳಿಸಿದ್ದೇವೆ, ಇಂದು ಭಾರತದ ಡ್ರೋನ್ ಉದ್ಯಮವು ಅಭೂತಪೂರ್ವ ಹಾರಾಟದೊಂದಿಗೆ ಮುಂದುವರಿಯುತ್ತಿದೆ.
ಸ್ನೇಹಿತರೆ,
ಈ ಹಿಂದೆ, ಗಡಿ ಪ್ರದೇಶಗಳ ಬಗ್ಗೆ ಸರ್ಕಾರಗಳ ಚಿಂತನೆಯೆಂದರೆ ಗಡಿಯಲ್ಲಿ ರಸ್ತೆಗಳು ಮತ್ತು ಮೂಲಸೌಕರ್ಯ ಹೆಚ್ಚಾದರೆ, ಶತ್ರುಗಳು ಸಹ ಅದರಿಂದ ಪ್ರಯೋಜನ ಪಡೆಯಬಹುದು. ನಾವು ಈ ಚಿಂತನೆಯನ್ನು ಬದಲಾಯಿಸಿದ್ದೇವೆ. ಗಡಿ ಮೂಲಸೌಕರ್ಯವು ದೌರ್ಬಲ್ಯವಲ್ಲ, ಅದು ರಾಷ್ಟ್ರದ ಶಕ್ತಿ ಎಂದು ನಾವು ಹೇಳಿದ್ದೇವೆ. ಅದಕ್ಕಾಗಿಯೇ ಇಂದು ಗಡಿ ಪ್ರದೇಶಗಳಲ್ಲಿ ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳ ಜಾಲವು ವೇಗವಾಗಿ ಹೆಚ್ಚುತ್ತಿದೆ. ಕೇವಲ 2024 ಮತ್ತು 2025ರಲ್ಲಿ ಮಾತ್ರ, ಗಡಿ ರಸ್ತೆ ಸಂಘಟನೆಯ 250 ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಚಿಂತನೆ ಬದಲಾದಾಗ, ಗಡಿ ಮೂಲಸೌಕರ್ಯದ ಚಿತ್ರಣವೂ ಬದಲಾಯಿತು.
ಸ್ನೇಹಿತರೆ,
ಪರಮಾಣು ಸುಧಾರಣೆಗಳ ಉದಾಹರಣೆಯೂ ಇದೆ. ಅಭಿವೃದ್ಧಿಯು ಸಂಪೂರ್ಣವಾಗಿ ಇಂಧನ ಅವಲಂಬಿತವಾಗಿದ್ದ ಸಮಯದಲ್ಲಿ, ನಿರ್ಬಂಧಗಳು ಮತ್ತು ನಿಷೇಧಗಳಿಂದಾಗಿ, ದೇಶವು ತನ್ನ ಪರಮಾಣು ಸಾಮರ್ಥ್ಯವನ್ನು ಬಳಸಲು ಸಾಧ್ಯವಾಗಲಿಲ್ಲ. ಶಾಂತಿ ಮಸೂದೆಯ ಮೂಲಕ ನಾವು ಇದರಲ್ಲಿಯೂ ಪ್ರಮುಖ ಸುಧಾರಣೆಯನ್ನು ಜಾರಿಗೆ ತಂದಿದ್ದೇವೆ. ಇಂದು ಭಾರತದಲ್ಲಿ ಪರಮಾಣು ಶಕ್ತಿ ವಲಯವನ್ನು ಖಾಸಗಿ ರಂಗಕ್ಕೂ ಮುಕ್ತಗೊಳಿಸಲಾಗಿದೆ. ಅದೇ ರೀತಿ, ರಕ್ಷಣಾ ವಲಯದಲ್ಲೂ ಪ್ರಮುಖ ನೀತಿ ಸುಧಾರಣೆಯನ್ನು ಜಾರಿಗೆ ತಂದಿದ್ದೇವೆ. 200 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ವ್ಯವಸ್ಥೆಯನ್ನು, 40ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು 7 ಕಾರ್ಖಾನೆಗಳಾಗಿ ವಿಲೀನಗೊಳಿಸುವ ಮೂಲಕ ನಾವು ಅದನ್ನು ಬದಲಾಯಿಸಿದ್ದೇವೆ. ನಾವು ಅದರ ಫಲಿತಾಂಶಗಳನ್ನು ನೋಡುತ್ತಿದ್ದೇವೆ. ಇಂದು ಭಾರತವು ತನ್ನ ರಕ್ಷಣಾ ಅಗತ್ಯಗಳಿಗಾಗಿಯೂ ಸಹ ಸ್ವಾವಲಂಬಿಯಾಗುತ್ತಿದೆ. 2014ಕ್ಕೆ ಹೋಲಿಸಿದರೆ, ನಮ್ಮ ರಕ್ಷಣಾ ರಫ್ತು 55 ಪಟ್ಟು ಹೆಚ್ಚಾಗಿದೆ. ಅದಕ್ಕಾಗಿಯೇ, ಹಲವು ಬಾರಿ ಸುಧಾರಣೆಗಳು ನಮ್ಮ ಜೀವನದಲ್ಲಿ ಬೆರೆತುಹೋಗುತ್ತಿವೆ, ನಾವು ಅವುಗಳನ್ನು ಗಮನಿಸುವುದಿಲ್ಲ. ಇಂದು ನಿಮ್ಮ ಸಾಮಾನ್ಯ ದಿನ ಹೇಗೆ ಕಳೆಯುತ್ತಿದೆ ಎಂಬುದರ ಕುರಿತು ಯೋಚಿಸಿ. ನೀವು ಬೆಳಗ್ಗೆ ಎದ್ದೇಳುತ್ತೀರಿ, ನಿಮ್ಮ ಫೋನ್ನಲ್ಲಿ ಗೃಹೋಪಯೋಗಿ ವಸ್ತುಗಳನ್ನು ಆರ್ಡರ್ ಮಾಡುತ್ತೀರಿ. ನೀವು ಕಚೇರಿಗೆ ಸಿದ್ಧರಾಗುವ ಹೊತ್ತಿಗೆ, ಆ ಎಲ್ಲಾ ವಸ್ತುಗಳು ನಿಮ್ಮ ಮನೆಗೆ ತಲುಪಿರುತ್ತವೆ. ನಿಮ್ಮ ಲೇನ್ನಲ್ಲಿರುವ ಬೀದಿ ವ್ಯಾಪಾರಿಯಿಂದ ಹಿಡಿದು ನಿಮ್ಮ ಕಾರಿನ ಶೋರೂಮ್ವರೆಗೆ, ನಿಮ್ಮ ಎಲ್ಲಾ ಪಾವತಿಗಳನ್ನು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮಾಡಲಾಗುತ್ತಿದೆ. ನಿಮ್ಮ ಮಗಳು ಬೇರೆ ನಗರದಲ್ಲಿ ಓದುತ್ತಿದ್ದರೆ, ನೀವು ಅವಳಿಗೆ ಫೋನ್ ಮೂಲಕ ಹಣ ಕಳುಹಿಸಬಹುದು, ಆ ಹಣವು ಕೆಲವೇ ಸೆಕೆಂಡುಗಳಲ್ಲಿ ಅವಳನ್ನು ತಲುಪುತ್ತದೆ. ಅನೇಕ ಬಾರಿ ಮಗಳು “ಅಪ್ಪಾ ಮಾ, ನಾನು ಈ ಉಡುಪನ್ನು ಖರೀದಿಸಿದೆ, ದಯವಿಟ್ಟು ಪಾವತಿ ಮಾಡಿ” ಎಂದು ಹೇಳುವ ಕ್ಯುಆರ್ ಅನ್ನು ಹಂಚಿಕೊಳ್ಳುತ್ತಾಳೆ. ನೀವು ಮನೆಯಲ್ಲೇ ಕುಳಿತಿರುವಾಗ ಅವಳ ಶಾಪಿಂಗ್ ಪೂರ್ಣಗೊಳಿಸುತ್ತೀರಿ. ಈ ವಿಷಯಗಳು ಗಮನಾರ್ಹವಾಗಿವೆ, ಆದರೆ ಈಗ ಅವು ಭಾರತದ ಜನರನ್ನು ಆಶ್ಚರ್ಯಗೊಳಿಸುವುದಿಲ್ಲ. ಹೊರಗಿನವರು ಬಂದಾಗ, ಅವರು ಆಶ್ಚರ್ಯಚಕಿತರಾಗುತ್ತಾರೆ – “ಓಹ್, ಇದು ಹೀಗಾಗುತ್ತದೆ.” ಭಾರತದ ಜನರಿಗೆ, ಇದು ದಿನಚರಿಯಾಗಿದೆ. ಇದು ಭಾರತದ ಸಾಮಾನ್ಯ ನಾಗರಿಕನ ಜೀವನದ ಭಾಗವಾಗಿದೆ. ಯೋಚಿಸಿ – 2014ರ ಮೊದಲು, ಇವುಗಳಲ್ಲಿ ಎಷ್ಟು ವಿಷಯಗಳು ಸಾಧ್ಯವಾಗಿದ್ದವು?
ಸ್ನೇಹಿತರೆ,
ಕಳೆದ 10-12 ವರ್ಷಗಳಲ್ಲಿ ಜೀವನ ಸುಲಭತೆಗೆ ಸಂಬಂಧಿಸಿದಂತೆ ಭಾರತ ಕೈಗೊಂಡಿರುವ ಸುಧಾರಣೆಗಳು ಜನರ ಜೀವನವನ್ನು – ವಿಶೇಷವಾಗಿ ನಮ್ಮ ಮಧ್ಯಮ ವರ್ಗದ ಜೀವನವನ್ನು – ಪ್ರಪಂಚದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇನ್ನೂ ಕನಸಾಗಿಯೇ ಇರುವ ರೀತಿಯಲ್ಲಿ ಬದಲಾಯಿಸಿವೆ.
ಸ್ನೇಹಿತರೆ,
ಇಂದು ವಿಶ್ವದ ಅತ್ಯಂತ ಅಗ್ಗದ ಡೇಟಾ ಭಾರತದಲ್ಲಿ ಸಿಗುತ್ತಿದೆ. ನಾವು ಅಗ್ಗದ ಮತ್ತು ಉತ್ತಮ ಸ್ಮಾರ್ಟ್ಫೋನ್ಗಳನ್ನು ತಯಾರಿಸುತ್ತಿದ್ದೇವೆ. ಇದೀಗ ಸತ್ಯ ಅದನ್ನು ವಿವರಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ 5ಜಿ ಬಿಡುಗಡೆ ಮಾಡುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ನಾವು ಆಧಾರ್ ಅನ್ನು ಬ್ಯಾಂಕಿಂಗ್, ಮೊಬೈಲ್ ಸಂಪರ್ಕ ಮತ್ತು ಸೇವೆಗಳೊಂದಿಗೆ ಲಿಂಕ್ ಮಾಡಿದ್ದೇವೆ, ಇ-ಕೆವೈಸಿ ಮತ್ತು ಡಿಜಿಟಲ್ ದೃಢೀಕರಣದಂತಹ ಸೇವೆಗಳನ್ನು ಸಾಧ್ಯವಾಗಿಸಿದ್ದೇವೆ. ಇಂದು ನೀವು ಬ್ಯಾಂಕ್ ಖಾತೆ ತೆರೆಯಲು ಬಯಸಿದರೆ, ನೀವು ಬ್ಯಾಂಕ್ಗೆ ಹೋಗಬೇಕಾಗಿಲ್ಲ. ಸರ್ಕಾರವು ನಿಮ್ಮ ಬಳಿಗೆ ಬ್ಯಾಂಕ್ ತಂದಿದೆ. ಇಂದು ಅದು ಬಿಲ್ ಪಾವತಿಸುವುದಾಗಲಿ, ಟಿಕೆಟ್ ಬುಕ್ ಮಾಡುವುದಾಗಲಿ, ಸರ್ಕಾರಿ ಕಚೇರಿಗೆ ಹೋಗಬೇಕಾಗಿಲ್ಲ. ಈ ಎಲ್ಲಾ ಕೆಲಸಗಳು ಆನ್ಲೈನ್ನಲ್ಲಿ ನಡೆಯುತ್ತವೆ. ಆದಾಯ ತೆರಿಗೆ ವಿವರ ಸಲ್ಲಿಸುವುದು ಸುಲಭವಾಗಿದೆ. ಫಾರ್ಮ್ನಲ್ಲಿ ಗರಿಷ್ಠ ಮಾಹಿತಿಯನ್ನು ಈಗಾಗಲೇ ಭರ್ತಿ ಮಾಡಿರುವ ವ್ಯವಸ್ಥೆ ರೂಪಿಸಲಾಗಿದೆ. ನೀವು ಈ ಮಾಹಿತಿಯನ್ನು ಪರಿಶೀಲಿಸುತ್ತೀರಿ, ನಿಮಗೆ ಬೇಕಾದುದನ್ನು ಸೇರಿಸುತ್ತೀರಿ ಮತ್ತು ಸಲ್ಲಿಸುತ್ತೀರಿ – ನಿಮ್ಮ ಕೆಲಸ ಮುಗಿದಿದೆ. ಹಿಂದಿನ ಮರುಪಾವತಿಗಳು ಬರಲು ತಿಂಗಳುಗಳನ್ನು ತೆಗೆದುಕೊಳ್ಳುತ್ತಿದ್ದವು, ಈಗ ಅವು ಕೆಲವೇ ದಿನಗಳಲ್ಲಿ ಬರುತ್ತಿವೆ.
ಸ್ನೇಹಿತರೆ,
ಇಂದು ಇ-ಸಂಜೀವಿನಿಯ ಸಹಾಯದಿಂದ – ಬಹುಶಃ ಇದನ್ನು ಇನ್ನೂ ಬಹಳ ಕಡಿಮೆ ಚರ್ಚಿಸಲಾಗಿದೆ. ಇ-ಸಂಜೀವಿನಿಯ ಸಹಾಯದಿಂದ ದೂರದ ಹಳ್ಳಿಗಳ ಜನರು ಎಲ್ಲಿಂದಲಾದರೂ ವೈದ್ಯರನ್ನು ನೇರವಾಗಿ ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು. ಹಿಂದೆ ಆಸ್ಪತ್ರೆಗೆ ತಲುಪಲು ಹಲವು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದವರಿಗೆ, ಇಂದು ವೈದ್ಯರು ಮನೆಯಲ್ಲೇ ಪರದೆಯ ಮೇಲೆ ಸಿಗುತ್ತಾರೆ. ಈ ಅಂಕಿಅಂಶವು ಖಂಡಿತವಾಗಿಯೂ ನಿಮ್ಮನ್ನು ಬೆರಗುಗೊಳಿಸುತ್ತದೆ. ಭಾರತವು ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಂಡಿದೆ, ಅದು ಸಾಮಾನ್ಯ ವ್ಯಕ್ತಿಯ ಜೀವನವನ್ನು ಹೇಗೆ ಸರಳಗೊಳಿಸಿದೆ ಎಂಬುದನ್ನು ತೋರಿಸುತ್ತದೆ. ಇಲ್ಲಿಯವರೆಗೆ, ಇ ಸಂಜೀವನಿ ಅಡಿ, ಸುಮಾರು 500 ದಶಲಕ್ಷ ಟೆಲಿ ಸಮಾಲೋಚನೆಗಳು ನಡೆದಿವೆ.
ಸ್ನೇಹಿತರೆ,
ಇಂದು ಭಾರತದಲ್ಲಿ ಪ್ರಯಾಣದ ಅನುಭವ ಬದಲಾಗುತ್ತಿದೆ, ಭಾರತದ ನಾಗರಿಕರ ಪ್ರಯಾಣಗಳು ಸಂಪೂರ್ಣವಾಗಿ ಬದಲಾಗಿವೆ. ವಿಮಾನ ನಿಲ್ದಾಣದಲ್ಲಿ ಡಿಜಿಯಾತ್ರೆಯನ್ನು ಬಳಸದ ವ್ಯಕ್ತಿಯನ್ನು ಈ ಸಭಾಂಗಣದಲ್ಲಿ ಕಂಡುಹಿಡಿಯುವುದು ಕಷ್ಟ. ಅದೇ ರೀತಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕೆಲಸಗಳು ಸರಾಗವಾಗಿ ನಡೆಯುತ್ತಿವೆ. ಫಾಸ್ಟ್ಟ್ಯಾಗ್ಗಳು ಹೆದ್ದಾರಿಗಳಲ್ಲಿ ಚಾಲನೆಯಲ್ಲಿವೆ, ಇದರಿಂದ ನೀವು ನಿಲ್ಲದೆ ಟೋಲ್ ಪಾವತಿಸಿ ಮುಂದೆ ಸಾಗಬಹುದು. ಇದು ಜೀವನದ ಸುಲಭತೆಯ ನಿಜವಾದ ಅರ್ಥ. ಸಮಯವನ್ನು ಉಳಿಸಲಾಗುತ್ತಿದೆ, ಜೀವನ ಸುಲಭವಾಗುತ್ತಿದೆ, ಕೋಟ್ಯಂತರ ಜನರು ತಮ್ಮ ಪ್ರಗತಿಯತ್ತ ಗಮನ ಹರಿಸಲು ಸಾಧ್ಯವಾಗುತ್ತಿದೆ.
ಸ್ನೇಹಿತರೆ,
ರಾಜಕೀಯದಲ್ಲಿ ಆಗಾಗ್ಗೆ ಆ ನಿರ್ಧಾರಗಳು ಇಂದು ಪರಿಣಾಮ ಗೋಚರಿಸುವ ಮುಖ್ಯಾಂಶಗಳಾಗುತ್ತವೆ. ಅಂದರೆ, ಅವರ ಜೀವನವು 24 ಗಂಟೆಗಳಿರುತ್ತದೆ. ಹಿಂದಿನ ಸರ್ಕಾರಗಳು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಘೋಷಣೆಗಳನ್ನು ಮಾಡುವ ಸೂತ್ರ ಅಳವಡಿಸಿಕೊಂಡವು. ಆದರೆ ಅಂತಹ ಘೋಷಣೆಗಳು ದೇಶವನ್ನು ಬದಲಾಯಿಸಲಿಲ್ಲ. ದೇಶವನ್ನು ಬದಲಾಯಿಸುವ ನಿರ್ಧಾರಗಳು ನೆಲದ ಮೇಲೆ ಪರಿಣಾಮ ಗೋಚರಿಸುವ ನಿರ್ಧಾರಗಳಾಗಿವೆ, ಇವುಗಳನ್ನು ವರ್ತಮಾನ ಮತ್ತು ಭವಿಷ್ಯ ಎರಡನ್ನೂ ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುತ್ತಿದೆ.
ಸ್ನೇಹಿತರೆ,
ಪ್ರಧಾನ ಮಂತ್ರಿಗಳ ಕುಸುಮ್ ಯೋಜನೆ ಮತ್ತು ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಇದಕ್ಕೆ ಬಹಳ ವಿಶಿಷ್ಟವಾದ ಉದಾಹರಣೆಗಳಾಗಿವೆ. ಕುಸುಮ್ ಯೋಜನೆಯ ಮೂಲಕ ರೈತರು ವಿದ್ಯುತ್ ಚಿಂತೆಯಿಂದ ಮುಕ್ತರಾಗಿದ್ದಾರೆ. ಸೂರ್ಯಘರ್ ಯೋಜನೆಯ ಮೂಲಕ ಮಧ್ಯಮ ವರ್ಗದವರು ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ.
ಸ್ನೇಹಿತರೆ,
ಇಂದಿನಿಂದ ಲಕ್ಷಾಂತರ ಕುಟುಂಬಗಳಿಗೆ ವಿದ್ಯುತ್ ಉಚಿತ ಎಂದು ನಾನು ಘೋಷಿಸಿದ್ದರೆ, ಎಲ್ಲಾ ಮಾಧ್ಯಮಗಳು, ಎಲ್ಲಾ ಪರದೆಗಳು, ಎಲ್ಲಾ ಪತ್ರಿಕೆಗಳು “ಮೋದಿ ಜಿ ಇಂದು ಉಚಿತ ವಿದ್ಯುತ್ ಘೋಷಿಸಿದರು” ಎಂದು ದೊಡ್ಡ ಸುದ್ದಿಗಳನ್ನು ನೀಡುತ್ತಿದ್ದವು ಎಂಬುದು ನನಗೆ ತಿಳಿದಿದೆ. ಆದರೆ ನಾವು ವಿಭಿನ್ನ ವಿಧಾನದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದೆವು. ಪ್ರತಿ ಮನೆಯ ಛಾವಣಿಯ ಮೇಲೆ ಸೂರ್ಯನನ್ನು ಬೆಳಗಿಸಲು ನಾವು ಸಂಕಲ್ಪ ಮಾಡಿದ್ದೇವೆ. ಇಂದು ದೇಶದ 5 ದಶಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯೊಂದಿಗೆ ಸಂಪರ್ಕ ಹೊಂದಿವೆ. ಸರ್ಕಾರವು ಈ ಕುಟುಂಬಗಳಿಗೆ ಸೌರಶಕ್ತಿ ವ್ಯವಸ್ಥೆಗಳನ್ನು ಸ್ಥಾಪಿಸಲು 22,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣ ನೀಡಿದೆ, ಇದರಿಂದಾಗಿ ಸೌರಶಕ್ತಿ ಉತ್ಪಾದಿಸಲು ಅವರ ಛಾವಣಿಗಳ ಮೇಲೆ ಸೌರ ಸ್ಥಾವರಗಳನ್ನು ಸ್ಥಾಪಿಸಬಹುದು. ಈಗ ಈ ಕುಟುಂಬಗಳು ಗ್ರಿಡ್ಗೆ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಹಣ ಗಳಿಸುತ್ತಿವೆ. ಅವರ ಸ್ವಂತ ಬಿಲ್ ಶೂನ್ಯವಾಗಿದೆ ಮತ್ತು ಅವರು ಗಳಿಸಲು ಪ್ರಾರಂಭಿಸಿದ್ದಾರೆ. ಈ ಯೋಜನೆಯು ಜನರ ಕನಸುಗಳನ್ನು ವಿಸ್ತರಿಸುತ್ತಿದೆ. ವಿದ್ಯುತ್ ಬಿಲ್ಗಳು ಕಡಿಮೆಯಾಗುವುದರೊಂದಿಗೆ, ಜನರು ಈಗ ರೆಫ್ರಿಜರೇಟರ್ಗಳು, ಕೂಲರ್ಗಳು, ವಾಷಿಂಗ್ ಮೆಷಿನ್ಗಳು, ಟಿವಿಗಳಂತಹ ವಸ್ತುಗಳನ್ನು ಖರೀದಿಸಿ ಇಡುತ್ತಿದ್ದಾರೆ. ಈಗ ವಿದ್ಯುತ್ ಕಡಿತದಿಂದಾಗಿ ಹಾಲು ಹಾಳಾಗುತ್ತದೆ ಎಂಬ ಭಯವಿಲ್ಲ, ಯಾವುದೇ ಚಿಂತೆ ಉಳಿದಿಲ್ಲ. ಈಗ ಶಾಲೆಗೆ ಹೋಗುವ ಮಕ್ಕಳು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಬಹುದು. ನಾನು ಮತ್ತೊಮ್ಮೆ ಹೇಳುತ್ತೇನೆ – ಚುನಾವಣೆಗಳು ನಡೆಯಲಿ ಅಥವಾ ನಡೆಯದಿರಲಿ, ಈ ಸೂರ್ಯಘರ್ ಮತ್ತು ಅದರ ಬೆಳಕು ಉಳಿದೇ ಉಳಿಯುತ್ತದೆ. ಈ ಸ್ಥಾವರದ ಪ್ರಯೋಜನವು ದೇಶದ ಕುಟುಂಬಗಳನ್ನು ವರ್ಷಗಳ ಕಾಲ ತಲುಪುತ್ತಲೇ ಇರುತ್ತದೆ.
ಸ್ನೇಹಿತರೆ,
ಮುಂಬರುವ ಸಮಯದಲ್ಲಿ ಜೀವನ ಸುಲಭತೆ ಮತ್ತು ವ್ಯಾಪಾರ ಮಾಡುವ ಸುಲಭತೆ ಮತ್ತಷ್ಟು ವಿಸ್ತರಿಸುತ್ತದೆ. ದೇಶದ ಯುವಕರಿಗಾಗಿ, ಮಹಿಳಾ ಶಕ್ತಿಗಾಗಿ, ರೈತರಿಗಾಗಿ, ಬಡವರು ಮತ್ತು ಮಧ್ಯಮ ವರ್ಗದವರಿಗಾಗಿ, ನಮ್ಮ ಸರ್ಕಾರವು ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ನಮ್ಮ ಸುಧಾರಣಾ ಹೇಳಿಕೆಯು ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತದೆ. ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸಲು ನಾವು ಪೂರ್ಣ ಬದ್ಧತೆಯಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಾವು ಭಾರತದ ಭವಿಷ್ಯವನ್ನು ಸುರಕ್ಷಿತಗೊಳಿಸಿದರೆ, ಈ ಭೂಮಿಯಿಂದ ವಿಶ್ವದ ಭವಿಷ್ಯಕ್ಕೂ ಸ್ಥಿರತೆಯನ್ನು ತರುವ ದೊಡ್ಡ ಕೆಲಸ ಮಾಡಲಾಗುತ್ತದೆ. ಈ ವಿಶ್ವಾಸದಿಂದ, ಹೆಚ್ಚು ಸ್ಥಿರವಾದ ಭಾರತವಾಗುತ್ತದೆ, ಭಾರತದ ಭವಿಷ್ಯವು ಹೆಚ್ಚು ಸುರಕ್ಷಿತವಾಗುತ್ತದೆ, ಜಗತ್ತಿಗೆ ಭದ್ರತೆಯ ಪ್ರಜ್ಞೆಯನ್ನು ನೀಡುವ ಶಕ್ತಿ ಇಲ್ಲಿಂದ ಉದ್ಭವಿಸುತ್ತದೆ. ಈ ಸಾಮರ್ಥ್ಯದೊಂದಿಗೆ, ಈ ಸಂಕಲ್ಪದೊಂದಿಗೆ, ಇಂದಿನ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಎಕನಾಮಿಕ್ ಟೈಮ್ಸ್ನ ಸಂಪೂರ್ಣ ತಂಡಕ್ಕೆ ಮತ್ತೊಮ್ಮೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಂದೇ ಮಾತರಂ!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Addressing the Economic Times World Leaders Forum.@EconomicTimes https://t.co/XohLKVrp4h
— Narendra Modi (@narendramodi) August 21, 2026
The world sees India as a bright spot for growth and hope. pic.twitter.com/hyQZKtm1s3
— PMO India (@PMOIndia) August 21, 2026
India is pushing ahead with reforms across sectors. pic.twitter.com/Ne88D6J2Mr
— PMO India (@PMOIndia) August 21, 2026
Our government is rewarding higher production with incentives. pic.twitter.com/sSSnOhatZb
— PMO India (@PMOIndia) August 21, 2026
India has political stability and continuity in its policies. pic.twitter.com/b2e04sCv1H
— PMO India (@PMOIndia) August 21, 2026
A clear roadmap for reforms, with a strong focus on governance. pic.twitter.com/4uyLo5nQ8r
— PMO India (@PMOIndia) August 21, 2026
We are moving from a "Prohibited unless permitted" approach to "Permitted unless prohibited." pic.twitter.com/oGPgib706N
— PMO India (@PMOIndia) August 21, 2026
The relationship between the government and citizens should be based on trust, not suspicion. pic.twitter.com/gDz9nbRYqy
— PMO India (@PMOIndia) August 21, 2026
Today, we are shaping policies that are pro-people, pro-growth and pro-development. pic.twitter.com/MOyLqPoR4W
— PMO India (@PMOIndia) August 21, 2026