ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 7, ಲೋಕ ಕಲ್ಯಾಣ ಮಾರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆ (ವಿಶ್ವ ಕೌಶಲ್ಯ ಸ್ಪರ್ಧೆ), ಶಾಂಘೈ 2026’ ರಲ್ಲಿ ಭಾಗವಹಿಸಿದ್ದ ಭಾರತೀಯ ತಂಡದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.
ಸಂವಾದದ ಸಮಯದಲ್ಲಿ, ಸ್ಪರ್ಧಿಗಳು ಸ್ಪರ್ಧೆಯಲ್ಲಾದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಜಾಗತಿಕ ವೇದಿಕೆಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿರುವುದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸಿದರು. ಈ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಯ ಸಂದರ್ಭದಲ್ಲಿ ಹೊಸ ಉಪಕರಣಗಳು, ತಂತ್ರಾಂಶಗಳು, ತಾಂತ್ರಿಕ ವ್ಯವಸ್ಥೆಗಳು ಮತ್ತು ಕೆಲಸದ ವಿಧಾನಗಳಿಗೆ ತಾವು ಹೇಗೆ ಹೊಂದಿಕೊಂಡೆವು ಎಂಬುದನ್ನು ಸ್ಪರ್ಧಿಗಳು ವಿವರಿಸಿದರು. ಕೌಶಲ್ಯ ಅಭಿವೃದ್ಧಿಗಾಗಿ ಸರ್ಕಾರ ಮಾಡುತ್ತಿರುವ ಕೆಲಸಗಳು ಯುವಕರಿಗೆ ಹೇಗೆ ನೆರವಾಗುತ್ತಿವೆ ಎಂಬುದರ ಬಗ್ಗೆಯೂ ಅವರು ಮಾತನಾಡಿದರು.
ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಸ್ಪರ್ಧಿಗಳನ್ನು ಅಭಿನಂದಿಸಿದರು. ಕೌಶಲ್ಯ ಅಭಿವೃದ್ಧಿಯ ರಾಯಭಾರಿಗಳಾಗುವಂತೆ ಅವರು ಕರೆ ನೀಡಿದರು. ಶೈಕ್ಷಣಿಕ ಪದವಿಗಳಷ್ಟೇ ಪ್ರಾಯೋಗಿಕ ಕೌಶಲ್ಯಗಳೂ ಮುಖ್ಯ ಎಂದು ಅವರು ಹೇಳಿದರು.
ವಿಶೇಷ ಕೌಶಲ್ಯಗಳ ಮಹತ್ವದ ಬಗ್ಗೆ ಹೇಳಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಯುವಜನರು ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿಯಬೇಕು, ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಭವಿಷ್ಯದ ತಂತ್ರಜ್ಞಾನಗಳಿಗೆ ತಕ್ಕಂತೆ ಬದಲಾಗಬೇಕು ಎಂದು ಹೇಳಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಗುಣವಾಗಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ತಮ್ಮ ಅನುಭವ ಹಾಗೂ ಸಲಹೆಗಳ ಮೂಲಕ ಭಾರತದ ಕೌಶಲ್ಯ ತರಬೇತಿ ವ್ಯವಸ್ಥೆಯನ್ನು ಸುಧಾರಿಸಲು ಕೊಡುಗೆ ನೀಡುವಂತೆ ಅವರು ಸ್ಪರ್ಧಿಗಳಿಗೆ ಪ್ರೋತ್ಸಾಹಿಸಿದರು. ಭಾರತವನ್ನು ಕೌಶಲ್ಯಯುತ ಮಾನವ ಸಂಪನ್ಮೂಲದ ಜಾಗತಿಕ ಕೇಂದ್ರವನ್ನಾಗಿ ಸ್ಥಾಪಿಸಲು ಯುವಕರು, ಸರ್ಕಾರ ಮತ್ತು ತರಬೇತಿ ಸಂಸ್ಥೆಗಳು ಒಗ್ಗೂಡಿ ಶ್ರಮಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ಕೌಶಲ್ಯಾಭಿವೃದ್ಧಿಗೆಂದೇ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿರುವ ಹಿಂದಿನ ಉದ್ದೇಶವನ್ನು ಪ್ರಧಾನಮಂತ್ರಿಯವರು ವಿವರಿಸಿದರು. ಕೌಶಲ್ಯ ತರಬೇತಿ ಸಂಸ್ಥೆಗಳ ಮಹತ್ವವು ಐಐಟಿ ಮತ್ತು ಐಐಎಂ ಗಳಿಗಿಂತ ಕಡಿಮೆಯಿಲ್ಲ ಎಂದು ಅವರು ಹೇಳಿದರು. ಭಾರತದ ಕೌಶಲ್ಯ ತರಬೇತಿ ವ್ಯವಸ್ಥೆಯನ್ನು ಸುಧಾರಿಸಲು ತಮ್ಮ ಅನುಭವಗಳು ಮತ್ತು ಸಲಹೆಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಅವರು ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.
‘ವರ್ಲ್ಡ್ ಸ್ಕಿಲ್ಸ್’ ಎಂಬುದು ಜಗತ್ತಿನ ಪ್ರಮುಖ ಅಂತಾರಾಷ್ಟ್ರೀಯ ಕೌಶಲ್ಯ ಸ್ಪರ್ಧೆಯಾಗಿದ್ದು, ಭಾಗವಹಿಸುವ ದೇಶಗಳು ಮತ್ತು ಪ್ರದೇಶಗಳ ಯುವ ವೃತ್ತಿಪರರನ್ನು ಒಂದೆಡೆ ತಂದು, ವಿವಿಧ ವೃತ್ತಿಪರ ಮತ್ತು ತಾಂತ್ರಿಕ ಕೌಶಲ್ಯಗಳಲ್ಲಿ ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುತ್ತದೆ. 48ನೇ ‘ವರ್ಲ್ಡ್ ಸ್ಕಿಲ್ಸ್’ ಸ್ಪರ್ಧೆಯಾದ ‘ವರ್ಲ್ಡ್ ಸ್ಕಿಲ್ಸ್ ಶಾಂಘೈ 2026’ ಅನ್ನು ಸೆಪ್ಟೆಂಬರ್ 22 ರಿಂದ 27, 2026 ರವರೆಗೆ ಶಾಂಘೈನ ನ್ಯಾಷನಲ್ ಎಗ್ಸಿಬಿಷನ್ ಅಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಭಾರತ ತಂಡವು 6 ಬೆಳ್ಳಿ ಪದಕಗಳು ಮತ್ತು 20 ಅತ್ಯುತ್ತಮ ಕೌಶಲ್ಯ ಪದಕಗಳನ್ನು ಗೆಲ್ಲುವ ಮೂಲಕ 10ನೇ ಸ್ಥಾನವನ್ನು ಪಡೆದುಕೊಂಡಿತು. ಭಾರತವು 63 ಕೌಶಲ್ಯ ವಿಭಾಗಗಳಲ್ಲಿ ಭಾಗವಹಿಸಿದ 70 ಸ್ಪರ್ಧಿಗಳ ತನ್ನ ಇದುವರೆಗಿನ ದೊಡ್ಡ ತಂಡದಿಂದ ಪ್ರತಿನಿಧಿಸಲ್ಪಟ್ಟಿತ್ತು.
ಈ ಸಂವಾದ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಹಾಗೂ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಜಯಂತ್ ಚೌಧರಿ ಮತ್ತು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*****
Hosted the bright youngsters who took part in the 48th WorldSkills Competition held in Shanghai. Proud of them! https://t.co/5lzQwcer6h
— Narendra Modi (@narendramodi) October 9, 2026