ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಅಕ್ಟೋಬರ್ 23ರಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಅಕ್ಟೋಬರ್ 23ರಿಂದ 25ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಭಾರತ ಮತ್ತು ವಿದೇಶಗಳಿಂದ 9,000ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಚಿನ್ಮಯ ಮಿಷನ್ನ 75ನೇ ವರ್ಷಾಚರಣೆ ಅಂಗವಾಗಿ ವರ್ಷವಿಡೀ ನಡೆದ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಈ ಸಮ್ಮೇಳನವಾಗಿದೆ. ವೇದಾಂತ ಮತ್ತು ಭಗವದ್ಗೀತೆಯ ಜ್ಞಾನವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಸ್ವಾಮಿ ಚಿನ್ಮಯಾನಂದರು 1951ರಲ್ಲಿ ಚಿನ್ಮಯ ಮಿಷನ್ ಎಂಬ ಜಾಗತಿಕ ಆಧ್ಯಾತ್ಮಿಕ ಚಳವಳಿಯನ್ನು ಸ್ಥಾಪಿಸಿದರು. ಕಳೆದ ಹಲವು ದಶಕಗಳಿಂದೀಚೆಗೆ ಮಿಷನ್ ತನ್ನ ಕಾರ್ಯವ್ಯಾಪ್ತಿಯನ್ನು ಆಧ್ಯಾತ್ಮಿಕ ಶಿಕ್ಷಣ, ಸಾಂಸ್ಕೃತಿಕ ಸಂರಕ್ಷಣೆ, ಯುವಜನ ಸಬಲೀಕರಣ ಮತ್ತು ಸಮುದಾಯ ಸೇವಾ ವಲಯಗಳಿಗೂ ವಿಸ್ತರಿಸಿಕೊಂಡಿದೆ.
ಕಳೆದ ವರ್ಷ ತಮಿಳುನಾಡಿನ ಗಂಗೈಕೊಂಡ ಚೋಳಪುರಂನಲ್ಲಿ ಪ್ರಧಾನಮಂತ್ರಿ ಅವರು ಭಗವದ್ಗೀತೆಯ ತಮಿಳು ಪದ್ಯರೂಪವನ್ನು ಬಿಡುಗಡೆ ಮಾಡುವುದರೊಂದಿಗೆ ವರ್ಷವಿಡೀ ಆಚರಣೆಗಳಿಗೆ ಚಾಲನೆ ನೀಡಿದ್ದರು. ಚಿನ್ಮಯ ಮಿಷನ್ ಸಿದ್ಧಪಡಿಸಿದ ಈ ಕೃತಿಗೆ ಇಳಯರಾಜ ಸಂಗೀತ ಸಂಯೋಜಿಸಿದ್ದಾರೆ. ವರ್ಷವಿಡೀ ವಿವಿಧ ಸ್ಥಳಗಳಲ್ಲಿ ಸಾಮೂಹಿಕ ಹೋಮಗಳು, ತ್ರಿಪುರಾದ ಮಾ ಸೌಂದರ್ಯ ಚಿನ್ಮಯೀ ದೇವಾಲಯದ ಪ್ರತಿಷ್ಠಾಪನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಆಯೋಜಿಸಲಾಗಿತ್ತು. ‘ಚಿನ್ಮಯ ಗೀತಾ ಸಮರ್ಪಣಂ’ ಅಡಿಯಲ್ಲಿ ವಿಶ್ವದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಜನರು ಆನ್ಲೈನ್ನಲ್ಲಿ ಒಗ್ಗೂಡಿ ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಿಸಿದರು. ಭಗವದ್ಗೀತೆಯ ಆಯ್ದ ಐದು ಶ್ಲೋಕಗಳನ್ನು ಆಧರಿಸಿದ ‘ಗೀತಾ ಪಂಚಾಮೃತ’ ಈ ಆಚರಣೆಗಳ ಪ್ರಮುಖ ಉಪಕ್ರಮವಾಗಿತ್ತು. ಗೀತೆಯ ಸಂದೇಶವನ್ನು ದೇಶಾದ್ಯಂತ ತಲುಪಿಸಲು ಚಿನ್ಮಯ ಯುವ ಕೇಂದ್ರದ 15 ಯುವ ಸದಸ್ಯರು ‘ಚಿನ್ಮಯ ಅಮೃತ ಯಾತ್ರೆ’ ಕೈಗೊಂಡು, ದೇಶದ ವಿವಿಧೆಡೆ 40,000 ಕಿಲೋಮೀಟರ್ಗೂ ಅಧಿಕ ದೂರ ಕ್ರಮಿಸಿದರು.
*****