ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಮನ್ಸುಖ್ ಮಾಂಡವೀಯ ಜಿ ಮತ್ತು ಶ್ರೀಮತಿ ರಕ್ಷಾ ಖಡ್ಸೆ ಜಿ, ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ ಹಾಗೂ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳೆ, ಇತರೆ ಗಣ್ಯ ಅತಿಥಿಗಳೆ, ಪದಕ ವಿಜೇತ ಕ್ರೀಡಾಪಟುಗಳೆ ಹಾಗೂ ಇಲ್ಲಿ ಉಪಸ್ಥಿತರಿರುವ ಎಲ್ಲ ಮಹನೀಯರೆ ಮತ್ತು ಮಹಿಳೆಯರೆ,
ನಿಮ್ಮೆಲ್ಲರನ್ನೂ ಭೇಟಿಯಾಗಲು ನಾನು ಬಹಳ ಉತ್ಸುಕತೆಯಿಂದ ಕಾಯುತ್ತಿದ್ದೆ. ಕೆಲವೇ ವಾರಗಳ ಹಿಂದೆ, ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ನಾನು ಭೇಟಿಯಾಗಿದ್ದೆ. ಈಗ ಪ್ಯಾರಾ ಏಷ್ಯಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ನಿಮ್ಮಂತಹ ಉತ್ಸಾಹಿ ವಿಶೇಷಚೇತನ ಕ್ರೀಡಾಪಟುಗಳನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿದೆ. ನಿಮ್ಮ ಅತ್ಯುತ್ತಮ ಪ್ರದರ್ಶನವು ಕ್ರೀಡಾ ಜಗತ್ತಿನಲ್ಲಿ ಭಾರತವು ವೇಗವಾಗಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ಇಂತಹ ದೊಡ್ಡ ವೇದಿಕೆಯಲ್ಲಿ ನೀವು ಪದಕಗಳನ್ನು ಗೆದ್ದಿದ್ದಲ್ಲದೆ, ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿದ್ದೀರಿ. ದೃಢ ನಿಶ್ಚಯ ಮತ್ತು ಧೈರ್ಯವಿದ್ದರೆ ಅತ್ಯುನ್ನತ ಶಿಖರಗಳನ್ನು ತಲುಪಬಹುದು ಎಂಬುದನ್ನು ವಿಶೇಷಚೇತನ(ಪ್ಯಾರಾ) ಕ್ರೀಡಾಪಟುಗಳಾದ ನೀವೆಲ್ಲರೂ ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ. 140 ಕೋಟಿ ದೇಶವಾಸಿಗಳ ಪರವಾಗಿ ನಾನು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈ ಸಾಧನೆಯಲ್ಲಿ ನಿಮ್ಮ ಕುಟುಂಬಗಳು, ತರಬೇತುದಾರರು ಮತ್ತು ಮಾರ್ಗದರ್ಶಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಅವರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಮೊದಲೇ ಹೇಳಿದಂತೆ, ಒಬ್ಬ ಕ್ರೀಡಾಪಟುವಿಗಾಗಿ ಕೋಚ್ಗಳು ಅಪಾರ ಶ್ರಮ ವಹಿಸಬೇಕಾಗುತ್ತದೆ. ಆದರೆ ಪ್ಯಾರಾಲಿಂಪಿಕ್ ಕ್ರೀಡಾಪಟುಗಳ ವಿಷಯದಲ್ಲಿ, ಅದಕ್ಕಿಂತಲೂ ಹಲವು ಪಟ್ಟು ಹೆಚ್ಚು ಶ್ರಮದ ಅಗತ್ಯವಿರುತ್ತದೆ. ಆಗ ಮಾತ್ರ ಇಂತಹ ಅದ್ಭುತ ಫಲಿತಾಂಶಗಳು ಹೊರಹೊಮ್ಮಲು ಸಾಧ್ಯ. ಆದ್ದರಿಂದ, ಅವರಿಗೆ ನಾನು ವಿಶೇಷ ಅಭಿನಂದನೆಗಳನ್ನು ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ.
ಸ್ನೇಹಿತರೆ,
ಒಂದು ಕಾಲವಿತ್ತು, ಆಗ ಬಹುತೇಕ ಕ್ರೀಡೆಗಳಲ್ಲಿ ಭಾರತದ ಭಾಗವಹಿಸುವಿಕೆ ಕೇವಲ ಒಂದು ಔಪಚಾರಿಕತೆ ಎಂದು ಪರಿಗಣಿಸಲ್ಪಡುತ್ತಿತ್ತು. ಪ್ಯಾರಾ-ಕ್ರೀಡೆಗಳಲ್ಲೂ ಸಹ, ನಮ್ಮ ದೇಶವು ಬಹಳ ಹಿಂದೆಯೇ ಇತ್ತು. 2010ರ ಏಷ್ಯಾ ಪ್ಯಾರಾ ಗೇಮ್ಸ್ನಲ್ಲಿ ಭಾರತವು ಕೇವಲ ಒಂದು ಚಿನ್ನದ ಪದಕ ಮಾತ್ರ ಗೆದ್ದಿತ್ತು. ಆ ಇಡೀ ಕ್ರೀಡಾಕೂಟದಲ್ಲಿ ನಾವು ಗೆಲ್ಲಲು ಸಾಧ್ಯವಾಗಿದ್ದು ಒಟ್ಟು 14 ಪದಕಗಳನ್ನು ಮಾತ್ರ. ಕೇವಲ 14! ಆದರೆ ಈ ಬಾರಿ, ನಮ್ಮ ಕ್ರೀಡಾಪಟುಗಳು 114 ಪದಕಗಳೊಂದಿಗೆ ಮರಳಿದ್ದಾರೆ. 14ರಿಂದ 114ರ ವರೆಗಿನ ಈ ಪ್ರಯಾಣದ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಇದು ನಿಮ್ಮ ಅತ್ಯುನ್ನತ ಮಟ್ಟದ ಕಠಿಣ ಪರಿಶ್ರಮದ ಫಲವಾಗಿದೆ. ಇದು ಕ್ರೀಡೆಯ ಮೇಲಿರುವ ನಿಮ್ಮ ಸಮರ್ಪಣಾ ಭಾವ ಮತ್ತು ಆ ಕ್ರೀಡೆಯ ಸುತ್ತಲೂ ಬೆಳೆದು ಬಂದಿರುವ ಪೂರಕ ವ್ಯವಸ್ಥೆಯ ಪ್ರತಿಫಲವಾಗಿದೆ. ಈ ಬಾರಿ, 30 ಚಿನ್ನ, 35 ಬೆಳ್ಳಿ, 49 ಕಂಚಿನ ಪದಕಗಳು, 5 ಹೊಸ ವಿಶ್ವ ದಾಖಲೆಗಳು ಮತ್ತು 9 ಏಷ್ಯಾ ದಾಖಲೆಗಳೊಂದಿಗೆ, ನೀವು ಇಡೀ ರಾಷ್ಟ್ರವನ್ನೇ ಹೆಮ್ಮೆಯಿಂದ ಬೀಗಿದ್ದೀರಿ. 56 ಮಹಿಳಾ ಕ್ರೀಡಾಪಟುಗಳ ಪೈಕಿ, 34 ಹೆಣ್ಣು ಮಕ್ಕಳು ಪದಕ ವಿಜೇತರಾಗಿದ್ದಾರೆ. ಅಲ್ಲದೆ, 4 ಸ್ಪರ್ಧೆಗಳಲ್ಲಿ ಪದಕ ವೇದಿಕೆಯ 3 ಸ್ಥಾನಗಳನ್ನು ಭಾರತವೇ ಅಲಂಕರಿಸಿತ್ತು. ಅಂದರೆ ಚಿನ್ನ, ಬೆಳ್ಳಿ ಮತ್ತು ಕಂಚು – ಮೂರೂ ಭಾರತದ ಪಾಲಾದವು. ಸ್ಪರ್ಧೆಯ ಕೊನೆಯ ದಿನದಂದು ಕೂಡ, ನೀವು 9 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಪವಾಡವನ್ನೇ ಸೃಷ್ಟಿಸಿದ್ದೀರಿ. ಕ್ರೀಡಾಕೂಟ ನಡೆಯುತ್ತಿರುವವರೆಗೂ ಪದಕಗಳನ್ನು ಗೆಲ್ಲುವ ಈ ಸರಣಿ ನಿಲ್ಲುವುದಿಲ್ಲ ಎಂದು ನೀವೇ ನಿರ್ಧರಿಸಿದ್ದೀರಿ ಎಂಬಂತೆ ಭಾಸವಾಯಿತು.
ಸ್ನೇಹಿತರೆ,
ಈ ಬಾರಿ ಭಾರತವು ಹಿಂದೆಂದೂ ಇಂತಹ ಯಶಸ್ಸನ್ನು ಕಾಣದಿದ್ದ ಕ್ರೀಡಾ ವಿಭಾಗಗಳಲ್ಲಿಯೂ ನಮ್ಮ ಕ್ರೀಡಾಪಟುಗಳು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮೋನಾ ಅಗರ್ವಾಲ್ ಅವರು ಪ್ಯಾರಾ ಶೂಟಿಂಗ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದರು. ಹನಿ ಅವರು ತಮ್ಮದೇ ಆದ ಹಿಂದಿನ ವಿಶ್ವ ದಾಖಲೆಯನ್ನು ಮುರಿದರು. ಹಿಮಾಂಶು, ರವಿ ಮತ್ತು ಜೆಹಾನ್ ತಮ್ಮ ಪ್ರದರ್ಶನಗಳ ಮೂಲಕ, ದೈಹಿಕ ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು.
ಸ್ನೇಹಿತರೆ,
ಒಬ್ಬ ಕ್ರೀಡಾಪಟುವಿನ ವೈಯಕ್ತಿಕ ಸಾಧನೆಯಾಗಿರಲಿ ಅಥವಾ ರಾಷ್ಟ್ರವೊಂದರ ಸಾಮೂಹಿಕ ಯಶಸ್ಸಾಗಿರಲಿ, ಜಗತ್ತು ನೋಡುವುದು ಕೇವಲ ಗೆಲುವಿನ ಹೊಳಪನ್ನು ಮಾತ್ರ. ಆದರೆ, ಆ ಕ್ಷಣದ ಹಿಂದೆ ಇರುವ ವರ್ಷಗಟ್ಟಲೆಯ ಕಠಿಣ ಪರಿಶ್ರಮ, ಹಗಲಿರುಳು ಸುರಿಸಿದ ಬೆವರು ಹಾಗೂ ಆ ಹಂತ ತಲುಪಲು ಅಗತ್ಯವಾದ ಅಚಲವಾದ ಸಮರ್ಪಣಾ ಭಾವ ಮತ್ತು ದೃಢ ನಿಶ್ಚಯವೇ ಯಶಸ್ಸೆಂಬ ಭವ್ಯ ಕಟ್ಟಡದ ಅಡಿಪಾಯವಾಗಿರುತ್ತದೆ. ಉದಾಹರಣೆಗೆ, ಏಷ್ಯಾ ಪ್ಯಾರಾ ಗೇಮ್ಸ್ಗೆ ಕೇವಲ 2 ತಿಂಗಳು ಬಾಕಿ ಇರುವಾಗ ರಿಂಕು ಜಿ ಅವರು ತಮ್ಮ ತಾಯಿ ಕಳೆದುಕೊಂಡರು. ಅಂತಹ ಅಪಾರ ದುಃಖದ ನಡುವೆಯೂ ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಅವರು ಚಿನ್ನದ ಪದಕ ಗೆದ್ದಾಗ, ತಮ್ಮ ತಾಯಿಯ ಭಾವಚಿತ್ರ ಎತ್ತಿ ಹಿಡಿದು, ಆ ಪದಕವನ್ನು ಅವರಿಗೆ ಅರ್ಪಿಸಿದರು. ಆ ಕ್ಷಣವು ಪ್ರತಿಯೊಬ್ಬ ಭಾರತೀಯನ ಹೃದಯವನ್ನೂ ತಟ್ಟಿತು.
ಸ್ನೇಹಿತರೆ,
ನಿಮ್ಮ ಹೋರಾಟಗಳು ಮತ್ತು ಸಾಧನೆಗಳು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿವೆ. ಈ ಪಯಣದಲ್ಲಿ, ನಿಮ್ಮ ಹಾದಿ ಮತ್ತು ರಾಷ್ಟ್ರದ ಹಾದಿ ಬಹಳ ಹೋಲಿಕೆ ಹೊಂದಿವೆ. ಅದಕ್ಕಾಗಿಯೇ ಇಂದು ನಿಮ್ಮ ಪ್ರಯತ್ನಗಳು ಮತ್ತು ರಾಷ್ಟ್ರದ ಪ್ರಯತ್ನಗಳು ಒಂದಾಗಿ ಸೇರಿ, ಇನ್ನಷ್ಟು ಬಲಿಷ್ಠವಾದ ಶಕ್ತಿಯನ್ನು ಸೃಷ್ಟಿಸುತ್ತಿವೆ.
ಸ್ನೇಹಿತರೆ,
2014ರ ನಂತರ, ದೇಶವು ದೊಡ್ಡ ಗುರಿಗಳತ್ತ ತನ್ನ ಪಯಣ ಆರಂಭಿಸಿದಾಗ, ಪರಿಸ್ಥಿತಿ ತೀರಾ ಭಿನ್ನವಾಗಿತ್ತು. ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಕ್ರೀಡಾ ಕ್ಷೇತ್ರಕ್ಕೆ ಕಳುಹಿಸಲು ಭಯಪಡುತ್ತಿದ್ದರು, ಮಕ್ಕಳು ಕೂಡ ಹಿಂಜರಿಯುತ್ತಿದ್ದರು. ಆಡಳಿತ ವ್ಯವಸ್ಥೆಯಲ್ಲಿ ಅವ್ಯವಸ್ಥೆ ಇತ್ತು. ಸಂಪನ್ಮೂಲಗಳು, ಬೆಂಬಲ ಮತ್ತು ಪಾರದರ್ಶಕತೆಯ ಕೊರತೆಯಿತ್ತು. ಇಂತಹ ವ್ಯವಸ್ಥೆಯಲ್ಲಿ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಿದ್ದರು. ಅವರು ಇದನ್ನೇ ವಾಸ್ತವವೆಂದು ಒಪ್ಪಿಕೊಂಡಿದ್ದರು. ಆದರೆ, ಯಾವುದೇ ಸವಾಲಿನ ಮುಂದೆ ನೀವು ಸೋಲು ಒಪ್ಪಿಕೊಳ್ಳದಂತೆಯೇ, ದೇಶವೂ ಕೂಡ ತನ್ನ ಗುರಿಗಳ ಮೇಲೆಯೇ ದೃಷ್ಟಿ ನೆಟ್ಟಿತ್ತು. ನಮ್ಮ ಯುವಜನರ ಪ್ರತಿಭೆ ವ್ಯರ್ಥವಾಗಲು ಬಿಡುವುದಿಲ್ಲ ಎಂದು ನಾವು ದೃಢ ನಿರ್ಧಾರ ಮಾಡಿದೆವು. ಆದ್ದರಿಂದ, ನಿಮ್ಮಂತಹ ಯುವಕರು ಮುಂದೆ ಸಾಗದಂತೆ ತಡೆಯುತ್ತಿದ್ದ ಆ ವ್ಯವಸ್ಥೆಯನ್ನೇ ಬದಲಾಯಿಸಲು ನಾವು ನಿರ್ಧರಿಸಿದೆವು. ಇದರ ಪರಿಣಾಮವಾಗಿ, ಕ್ರೀಡೆಯ ಕಡೆಗೆ ಒಂದು ಹೊಸ ದೃಷ್ಟಿಕೋನ ಮೂಡಿಬಂತು. ಇಂದು ಒಬ್ಬ ಯುವ ಕ್ರೀಡಾಪಟುವಿಗೆ ತನ್ನ ಪ್ರತಿಭೆಯ ಮೇಲೆ ನಂಬಿಕೆ ಇದ್ದರೆ, ದೇಶವು ತನ್ನ ಬೆಂಬಲಕ್ಕೆ ನಿಂತಿದೆ ಎಂಬ ನಂಬಿಕೆಯೂ ಅವರಿಗಿರುತ್ತದೆ. ನಮ್ಮ ‘ಪ್ಯಾರಾ-ಸ್ಪೋರ್ಟ್ಸ್’ (ವಿಶೇಷಚೇತನರ ಕ್ರೀಡಾಕೂಟ) ಪರಿಸರ ವ್ಯವಸ್ಥೆಯೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಹಿಂದೆ ಭಾರತದ ಪ್ರಾತಿನಿಧ್ಯವು ಅತ್ಯಂತ ಸೀಮಿತವಾಗಿದ್ದ ಕ್ರೀಡೆಗಳಲ್ಲಿ, ಈಗ ನಮ್ಮ ಉಪಸ್ಥಿತಿಯು ಹೆಚ್ಚು ಬಲಗೊಳ್ಳುತ್ತಿದೆ. ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಶೂಟಿಂಗ್, ಈಜು, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಜೂಡೊ, ಪವರ್ಲಿಫ್ಟಿಂಗ್ ಮತ್ತು ಇನ್ನೂ ಅನೇಕ ಕ್ರೀಡೆಗಳಲ್ಲಿ ಹೊಸ ಯುವ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ. ನಾವು ಹೊಸ ಚಾಂಪಿಯನ್ಗಳನ್ನು ಕಂಡುಕೊಳ್ಳುತ್ತಿದ್ದೇವೆ. ಈ ಬಾರಿ, ನಮ್ಮ 61 ಕ್ರೀಡಾಪಟುಗಳು ಮೊದಲ ಬಾರಿಗೆ ಏಷ್ಯಾ ಪ್ಯಾರಾ ಗೇಮ್ಸ್ನಲ್ಲಿ ಭಾಗವಹಿಸಿದರು. ಇವರೆಲ್ಲರೂ ಸಂಪೂರ್ಣವಾಗಿ ಹೊಸ ಕ್ರೀಡಾಪಟುಗಳು. ಈ ಹೊಸಬರಲ್ಲಿ 36 ಮಂದಿ ಪದಕಗಳೊಂದಿಗೆ ತಾಯ್ನಾಡಿಗೆ ಮರಳಿದರು. ಸಂದೀಪ್ ತಮ್ಮ ಚೊಚ್ಚಲ ಪ್ರವೇಶದಲ್ಲೇ ವಿಶ್ವ ದಾಖಲೆ ನಿರ್ಮಿಸಿದರು. ಯುವ ಕ್ರೀಡಾಪಟುಗಳ ಈ ಭಾಗವಹಿಸುವಿಕೆಯು ಇಂದಿನ ಭಾರತವನ್ನು ಪ್ರತಿಬಿಂಬಿಸುತ್ತದೆ, ಜತೆಗೆ ಭವಿಷ್ಯದ ಭಾರತದ ಮುನ್ಸೂಚನೆ ನೀಡುತ್ತದೆ.
ಸ್ನೇಹಿತರೆ,
ನಾವು ಕ್ರೀಡೆಯನ್ನು ಕೇವಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳ ಸಂಗ್ರಹವಾಗಿ ಮಾತ್ರ ನೋಡುವುದಿಲ್ಲ. ನಮ್ಮ ಪಾಲಿಗೆ, ಕ್ರೀಡೆಯು ವ್ಯಕ್ತಿತ್ವ ವಿಕಸನ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಒಂದು ಪ್ರಬಲ ಮಾಧ್ಯಮವಾಗಿದೆ. ಸೋಲಿನ ನಂತರವೂ ಹೇಗೆ ಗೆಲ್ಲಬೇಕು ಎಂಬುದನ್ನು ಕ್ರೀಡೆಯೇ ಯುವಜನರಿಗೆ ಕಲಿಸುತ್ತದೆ. ಕ್ರೀಡೆಯು ಶಿಸ್ತು ಮತ್ತು ತಂಡ ಮನೋಭಾವದ ಮಹತ್ವವನ್ನು ಕಲಿಸುತ್ತಿದೆ.
ಸ್ನೇಹಿತರೆ,
ಈ ದೃಷ್ಟಿಕೋನದೊಂದಿಗೆ ನಾವು ದೇಶಕ್ಕಾಗಿ ಆಧುನಿಕ ಕ್ರೀಡಾ ಪರಿಸರ ವ್ಯವಸ್ಥೆ ರೂಪಿಸುತ್ತಿದ್ದೇವೆ. ಶಾಲೆಗಳಲ್ಲಿ ಮತ್ತು ತಳಮಟ್ಟದಲ್ಲಿ ವಿವಿಧ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ‘ಖೇಲೋ ಇಂಡಿಯಾ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ. ಕ್ರೀಡಾಪಟುಗಳಿಗೆ ಒಲಿಂಪಿಕ್ ಮಟ್ಟದ ತರಬೇತಿ ಸಿಗುವಂತಾಗಲು ನಾವು ‘TOPS’ (ಟಾಪ್ಸ್) ಯೋಜನೆ ಆರಂಭಿಸಿದ್ದೇವೆ. ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು, ಈ ಬಾರಿ ಕೆಂಪುಕೋಟೆಯಿಂದ ನಾನು ಯುವಜನರಿಗೆ ‘ಟ್ಯಾಲೆಂಟ್ ಹಂಟ್'(ಪ್ರತಿಭಾನ್ವೇಷಣೆ) ಅಭಿಯಾನದ ಮೂಲಕ ಮುಂದೆ ಬರುವಂತೆ ಕರೆ ನೀಡಿದೆ.
ಸ್ನೇಹಿತರೆ,
ಈ ಎಲ್ಲಾ ಪ್ರಯತ್ನಗಳಲ್ಲಿ ಪ್ಯಾರಾ-ಕ್ರೀಡೆಗಳಿಗೆ ಸಮಾನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ, ನಿಮ್ಮಂತಹ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಾ, ಪ್ರಮುಖ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಕೀರ್ತಿ ತರುತ್ತಿದ್ದೀರಿ. ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಾ ಗೇಮ್ಸ್ನಲ್ಲಿ ನಾವು ಇದನ್ನು ಮತ್ತೊಮ್ಮೆ ಕಂಡೆವು. ಈ ಸ್ಪರ್ಧೆಯಲ್ಲಿ, ‘TOPS’ ಯೋಜನೆಯಡಿ ಬೆಂಬಲ ಪಡೆಯುತ್ತಿರುವ ಕ್ರೀಡಾಪಟುಗಳು 41 ಪದಕಗಳನ್ನು ಗೆದ್ದರೆ, ‘ಖೇಲೋ ಇಂಡಿಯಾ’ ಕ್ರೀಡಾಪಟುಗಳು 19 ಪದಕಗಳನ್ನು ಗೆದ್ದರು. ನಮ್ಮ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದನ್ನು ಇದು ತೋರಿಸುತ್ತಿದೆ.
ಸ್ನೇಹಿತರೆ,
ಇಂದು ಭಾರತದಲ್ಲಿನ ಆಧುನಿಕ ಕ್ರೀಡಾ ನೀತಿಗಳು ಯುವಜನರಿಗೆ ಕ್ರೀಡಾಂಗಣದ ಆಚೆಗೂ ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ, ಕ್ರೀಡಾ ಉಪಕರಣ(ಸಾಧನ)ಗಳ ಉತ್ಪಾದನೆ ಮತ್ತು ಕ್ರೀಡಾ ಪ್ರಸಾರ ಕ್ಷೇತ್ರವು ವೇಗವಾಗಿ ವಿಸ್ತರಿಸುತ್ತಿವೆ.
ಸ್ನೇಹಿತರೆ,
ಕೆಲವು ದಿನಗಳ ಹಿಂದಷ್ಟೇ ಸರ್ಕಾರವು 1,800 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ‘ಖೇಲೋ ಇಂಡಿಯಾ ಕ್ರೀಡಾ ಉಪಕರಣಗಳ ಉತ್ಪಾದನಾ ಯೋಜನೆ’ಗೆ ಅನುಮೋದನೆ ನೀಡಿದೆ. ಈಗ ನಮ್ಮ ಕ್ರೀಡಾ ಉಪಕರಣಗಳ ಉತ್ಪಾದನಾ ಉದ್ಯಮವು ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಸಮಯ ಬಂದಿದೆ. ಜಗತ್ತಿನ ಯಾವುದೇ ಭಾಗದಲ್ಲಿ ಕ್ರೀಡಾಪಟುವೊಬ್ಬರು(ಭಾರತೀಯರಾಗಿರಲಿ ಅಥವಾ ವಿದೇಶಿಯರಾಗಿರಲಿ) ಕ್ರೀಡಾಂಗಣಕ್ಕೆ ಇಳಿದಾಗ, ಅವರು ಬಳಸುವ ಕ್ರೀಡಾ ಸಾಮಗ್ರಿಗಳು ‘ಮೇಡ್ ಇನ್ ಇಂಡಿಯಾ’ ಆಗಿರಬೇಕು. ಅವರ ಉಡುಪುಗಳು ಮತ್ತು ಪಾದರಕ್ಷೆಗಳು ಕೂಡ ಭಾರತದಲ್ಲಿಯೇ ತಯಾರಾಗಿರಬೇಕು. ಭಾರತವು ಕೇವಲ ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ಮಾತ್ರವಲ್ಲದೆ, ವಿಶ್ವದರ್ಜೆಯ ಕ್ರೀಡಾ ಉಪಕರಣಗಳನ್ನು ಸಹ ಉತ್ಪಾದಿಸಬೇಕೆಂದು ನಾವು ಬಯಸುತ್ತೇವೆ. ಭಾರತೀಯ ಕ್ರೀಡಾ ಉತ್ಪನ್ನಗಳು ವಿಶ್ವಾದ್ಯಂತದ ಮಾರುಕಟ್ಟೆಗಳನ್ನು ತಲುಪಬೇಕು. ಇದು ಭಾರತದ ಎಂಎಸ್ಎಂಇ ವಲಯವನ್ನು ಬಲಪಡಿಸುತ್ತದೆ, ಸಣ್ಣ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೆ,
ಇಂದಿನ ಕಾರ್ಯಕ್ರಮದ ನಂತರ ನಿಮ್ಮನ್ನು ಶಾಲೆಗಳು, ಕಾಲೇಜುಗಳು ಮತ್ತು ವಿವಿಧ ಸಂಸ್ಥೆಗಳಿಗೆ ಆಹ್ವಾನಿಸಲಾಗುತ್ತದೆ. ಅಲ್ಲಿ ಯುವಜನರು ನಿಮ್ಮ ಮಾತುಗಳನ್ನು ಕೇಳಲು ಮತ್ತು ನಿಮ್ಮಿಂದ ಕಲಿಯಲು ಬಯಸುತ್ತಾರೆ. ನೀವು ಅವರೊಂದಿಗೆ ಸಂವಾದ ನಡೆಸುವಾಗ, ಕ್ರೀಡಾಂಗಣದಲ್ಲಿ ಗೆಲ್ಲುವ ರಹಸ್ಯಗಳನ್ನು ಹೇಳಿಕೊಡುವ ಜತೆಗೆ, ಕ್ರೀಡಾಂಗಣದ ಆಚೆಗೂ ಕ್ರೀಡೆಗೆ ಸಂಬಂಧಿಸಿದಂತೆ ಇರುವ ಅವಕಾಶಗಳ ಬಗ್ಗೆಯೂ ತಿಳಿಸಿ. ಹಾಗೆಯೇ, ವಿಶೇಷಚೇತನ ಸಹೋದರ ಸಹೋದರಿಯರ ಜೀವನವನ್ನು ಸುಲಭಗೊಳಿಸಲು ದೇಶವು ಕೈಗೊಂಡಿರುವ ವ್ಯಾಪಕ ಪ್ರಯತ್ನಗಳ ಬಗ್ಗೆಯೂ ಅವರಿಗೆ ವಿವರಿಸಿ. ಕೆಲವೇ ದಿನಗಳ ಹಿಂದೆ ಕೇಂದ್ರ ಸಚಿವ ಸಂಪುಟವು ವಿಶೇಷಚೇತನರಿಗೆ ನೀಡುವ ಪಿಂಚಣಿ ಕುರಿತ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ನಾವು ಪಿಂಚಣಿ ಮೊತ್ತವನ್ನು ಹೆಚ್ಚಿಸಿದ್ದೇವೆ. ಹಿಂದೆ ಅಂಗವೈಕಲ್ಯದ ಮಾನದಂಡವು 80 ಪ್ರತಿಶತದಷ್ಟಿತ್ತು, ಅದನ್ನು ಈಗ 40 ಪ್ರತಿಶತಕ್ಕೆ ಇಳಿಸಲಾಗಿದೆ. ಹಿಂದೆ, ಪಿಂಚಣಿ ಪಡೆಯಲು ವ್ಯಕ್ತಿಗೆ 18 ವರ್ಷ ವಯಸ್ಸಾಗಿರಬೇಕಿತ್ತು. ಆದರೆ ಈಗ, ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿರುವ ಅರ್ಹ ಮಕ್ಕಳಿಗೆ ಕೂಡ ಪಿಂಚಣಿ ಪಡೆಯುವ ದಾರಿ ಸುಗಮವಾಗಿದೆ. ಅದೇ ರೀತಿ, ಭಾರತೀಯ ಸಂಜ್ಞಾ ಭಾಷೆಯನ್ನು ಉತ್ತೇಜಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡ ಸಂಜ್ಞಾ ಭಾಷಾ ನಿಘಂಟು ಅಭಿವೃದ್ಧಿಪಡಿಸಲಾಗಿದೆ. ಶಾಲಾ ಪಠ್ಯಪುಸ್ತಕಗಳನ್ನು ಕೂಡ ಸಂಜ್ಞಾ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ‘ಸುಗಮ್ಯ ಭಾರತ ಅಭಿಯಾನ’ದ ಮೂಲಕ, ಸಾರ್ವಜನಿಕ ಸ್ಥಳಗಳನ್ನು ವಿಶೇಷಚೇತನರು ಸುಲಭವಾಗಿ ಬಳಸಿಕೊಳ್ಳುವಂತೆ ರೂಪಿಸಲಾಗುತ್ತಿದೆ. ದೇಶದಲ್ಲಿರುವ ಪ್ರತಿಯೊಬ್ಬ ವಿಶೇಷಚೇತನ ವ್ಯಕ್ತಿಗೂ ಗೌರವ ಹಾಗೂ ಸಮಾನ ಅವಕಾಶಗಳು ದೊರೆಯುವಂತೆ ಮಾಡುವುದು, ಅವರು ತಮ್ಮ ಸ್ವಂತ ಸಾಮರ್ಥ್ಯಗಳ ಬಲದ ಮೇಲೆ ಜೀವನದಲ್ಲಿ ಮುನ್ನಡೆಯುವಂತೆ ನೋಡುವುದು ನಮ್ಮ ಪ್ರಯತ್ನವಾಗಿದೆ.
ಸ್ನೇಹಿತರೆ,
ಜಪಾನಿನ ಐಚಿ-ನಗೋಯಾ ವೇದಿಕೆಯು ನಿಮ್ಮ ಪಯಣದ ಅಂತಿಮ ತಾಣವಲ್ಲ, ಇದನ್ನು ನೆನಪಿನಲ್ಲಿಡಿ. ಈ ಯಶಸ್ಸನ್ನು ಇನ್ನೂ ದೊಡ್ಡ ಗುರಿಗಳನ್ನು ಸಾಧಿಸಲು ಒಂದು ಮೆಟ್ಟಿಲನ್ನಾಗಿ ಬಳಸಿಕೊಳ್ಳಿ. ಭಾರತಕ್ಕೆ ಮತ್ತು ನಿಮ್ಮಲ್ಲಿ ಬಹುತೇಕ ಕ್ರೀಡಾಪಟುಗಳಿಗೆ ಮುಂದಿನ ಗುರಿ ‘ಎಲ್ಎ 2028’ ಆಗಿದೆ. ಅವನಿ ಮತ್ತು ಮನೀಶ್ ಈಗಾಗಲೇ ಲಾಸ್ ಏಂಜಲೀಸ್ ಕ್ರೀಡಾಕೂಟಕ್ಕೆ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿದ್ದಾರೆ. ‘ಎಲ್ಎ 2028’ರಲ್ಲಿ ಗರಿಷ್ಠ ಸಂಖ್ಯೆಯ ಭಾರತೀಯ ಕ್ರೀಡಾಪಟುಗಳು ಭಾಗವಹಿಸುವಂತೆ ಮಾಡುವುದು, ಸಾಧ್ಯವಾದಷ್ಟು ಹೆಚ್ಚಿನ ಪದಕಗಳನ್ನು ಗೆದ್ದು ತರುವುದು ನಮ್ಮ ಗುರಿಯಾಗಬೇಕು. ಆದ್ದರಿಂದ, ಈ ಕ್ಷಣವನ್ನು ಪೂರ್ಣ ಹೃದಯದಿಂದ ಸಂಭ್ರಮಿಸಿ, ಆದರೆ ಅದೇ ಸಮಯದಲ್ಲಿ ಮುಂದಿನ ಸವಾಲಿಗಾಗಿ ಸಿದ್ಧತೆಯನ್ನು ಕೂಡಲೇ ಆರಂಭಿಸಿ. ದೇಶವು ನಿಮ್ಮೊಂದಿಗಿದೆ, ನಾನೂ ನಿಮ್ಮೊಂದಿಗಿದ್ದೇನೆ. ಇಡೀ ರಾಷ್ಟ್ರವೇ ನಿಮ್ಮ ಮುಂದಿನ ಗೆಲುವಿಗಾಗಿ ಕಾಯುತ್ತಿದೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು ಮತ್ತು ಶುಭಾಶಯಗಳು.
ದೀಪಾವಳಿಯ ಮಹಾಹಬ್ಬ ಈಗಾಗಲೇ ಆರಂಭವಾಗಿದೆ. ಈ ಬಾರಿ ದೀಪಾವಳಿಯನ್ನು ಅಪಾರ ಹೆಮ್ಮೆ, ಉತ್ಸಾಹ ಮತ್ತು ವೈಭವದಿಂದ ಆಚರಿಸಿ. ಆದರೆ ದೀಪಾವಳಿಯ ಸಂಭ್ರಮಾಚರಣೆಯ ಜತೆಗೆ, ನಿಮ್ಮ ಮುಂದಿನ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ, ಹೊಸ ಸಂಕಲ್ಪದೊಂದಿಗೆ ಮುನ್ನಡೆಯಿರಿ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
What a performance by our Asian Para Games athletes! They have shown what aiming high really looks like. https://t.co/5t3aCa71rT
— Narendra Modi (@narendramodi) November 5, 2026
2010 के Para Asian Games में भारत ने बस 1 Gold जीता था। कुल मिलाकर उस tournament में हम केवल 14 medals जीत पाये थे। वहीं, इस बार हमारे खिलाड़ी 114 medals ke साथ आए हैं। 14 से 114 medals की ये यात्रा आपके परिश्रम की पराकाष्ठा का परिणाम है: PM @narendramodi
— PMO India (@PMOIndia) November 5, 2026
Olympics को ही ध्यान में रखते हुए इस बार लाल किले से मैंने talent hunt अभियान में युवाओं से आगे आने का आह्वान किया है: PM @narendramodi
— PMO India (@PMOIndia) November 5, 2026
सरकार ने खेलो इंडिया Sports Goods Manufacturing Scheme को मंजूरी दी है। अब समय है, हमारी Sports Goods Manufacturing Industry भी नए कमाल करे। जब कोई भारतीय या विदेशी खिलाड़ी किसी मैदान पर उतरे तो, उसके sports gear भी ‘Made in India’ हों और उसके कपड़े-जूते भी ‘Made in India’ हों: PM @narendramodi
— PMO India (@PMOIndia) November 5, 2026
हम चाहते हैं कि भारत world-class players भी दे और world-class sports equipment भी बनाए: PM @narendramodi
— PMO India (@PMOIndia) November 5, 2026