ಫಿಲಿಪ್ಪೀನ್ಸ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮನಿಲಾದಲ್ಲಿ ನಡೆದ 23ನೇ ಭಾರತ–ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಿದರು. ‘ನಮ್ಮ ಭವಿಷ್ಯವನ್ನು ಒಗ್ಗೂಡಿ ರೂಪಿಸೋಣ’ ಎಂಬ ಆಶಯದಡಿ ಆಸಿಯಾನ್ನ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಹಾಗೂ ಭಾರತಕ್ಕೆ ದೇಶದ ಸಮನ್ವಯಕಾರರಾಗಿ ಬೆಂಬಲ ನೀಡಿದ್ದಕ್ಕಾಗಿ ಅವರು ಅಧ್ಯಕ್ಷ ಮಾರ್ಕೋಸ್ ಅವರನ್ನು ಅಭಿನಂದಿಸಿದರು.
ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆಸಿಯಾನ್ನೊಂದಿಗಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಭಾರತ ನೀಡುತ್ತಿರುವ ಮಹತ್ವವನ್ನು ಒತ್ತಿಹೇಳಿದರು. ಪ್ರಾದೇಶಿಕವಾಗಿ ಮತ್ತು ಅದರಾಚೆಗೂ ಶಾಂತಿ, ಸ್ಥಿರತೆ ಹಾಗೂ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸುವಂತಹ ಪರಿಸ್ಥಿತಿಯನ್ನು ರೂಪಿಸಲು ಆಸಿಯಾನ್ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಮುಕ್ತ, ಸ್ವತಂತ್ರ, ಎಲ್ಲರನ್ನೂ ಒಳಗೊಳ್ಳುವ ಹಾಗೂ ನಿಯಮಾಧಾರಿತ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ನಂಬಿಕೆ ಇಟ್ಟಿದೆ ಎಂದು ತಿಳಿಸಿದ ಅವರು, ಈ ಪ್ರದೇಶದ ಭವಿಷ್ಯವು ಪೈಪೋಟಿಯಲ್ಲಿ ಅಲ್ಲ, ಸಹಕಾರವನ್ನು ಅವಲಂಬಿಸಿದೆ ಎಂದು ಹೇಳಿದರು.
ಆಸಿಯಾನ್ನ ಏಕತೆ ಮತ್ತು ಕೇಂದ್ರೀಯತೆಗೆ ಭಾರತವು ದೃಢವಾಗಿ ಬದ್ಧವಾಗಿದೆ ಎಂದು ಒತ್ತಿ ಹೇಳಿದ ಅವರು, ‘ಆಸಿಯಾನ್ ಸಮುದಾಯ ದೃಷ್ಟಿಕೋನ 2045’ ಮತ್ತು ‘ವಿಕಸಿತ ಭಾರತ 2047’ ಭಾರತ ಮತ್ತು ಆಸಿಯಾನ್ ಜನರ ಸಮಾನ ಆಶೋತ್ತರಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಹೆಚ್ಚಿರುವ ಇಂದಿನ ಸಂದರ್ಭದಲ್ಲಿ, ಭಾರತ ಮತ್ತು ಆಸಿಯಾನ್ ನಡುವಿನ ಹಂಚಿಕೆಯ ಮೌಲ್ಯಗಳು, ಜಾಗತಿಕ ವಿದ್ಯಮಾನಗಳ ಕುರಿತ ಸಮಾನ ದೃಷ್ಟಿಕೋನ ಹಾಗೂ ಆಳವಾದ ಸಾಂಸ್ಕೃತಿಕ ಸಂಬಂಧಗಳು ಈ ಪಾಲುದಾರಿಕೆಗೆ ಹೊಸ ಆಯಾಮ ನೀಡಿವೆ ಎಂದು ಅವರು ಹೇಳಿದರು. ಭಾರತದ ʼಆಕ್ಟ್ ಈಸ್ಟ್ ನೀತಿʼಯು ಭಾರತ–ಆಸಿಯಾನ್ ಸಂಬಂಧಗಳಿಗೆ ಹೊಸ ವೇಗ ನೀಡಿದೆ ಎಂದು ಅವರು ತಿಳಿಸಿದರು.
ಜಾಗತಿಕ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನದ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಆಸಿಯಾನ್ ಕೇವಲ ತಂತ್ರಜ್ಞಾನಗಳ ಬಳಕೆದಾರರಾಗಿರದೆ, ಅವುಗಳ ಸಹ-ಸೃಷ್ಟಿಕರ್ತರಾಗಬೇಕು ಹಾಗೂ ಜನರ ಕೌಶಲ್ಯಾಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಒತ್ತಿಹೇಳಿದರು.
2027ನೇ ವರ್ಷವು ಭಾರತ–ಆಸಿಯಾನ್ ಸಂಬಂಧಗಳ ಪಾಲಿಗೆ ವಿಶೇಷ ವರ್ಷವಾಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಉಭಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ 35 ವರ್ಷಗಳು ಮತ್ತು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಐದು ವರ್ಷಗಳು ತುಂಬುತ್ತವೆ ಎಂದು ಅವರು ಹೇಳಿದರು.
ಭಾರತ–ಆಸಿಯಾನ್ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಪ್ರಧಾನಮಂತ್ರಿಯವರು ಹಲವು ಪ್ರಸ್ತಾವನೆಗಳನ್ನು ಮುಂದಿಟ್ಟರು. ಅವುಗಳೆಂದರೆ:
● ಸಂಪರ್ಕ ವ್ಯವಸ್ಥೆ, ವೈಜ್ಞಾನಿಕ ಸಂಶೋಧನೆ, ವಿಪತ್ತು ನಿರ್ವಹಣೆ, ಕರಾವಳಿ ಕಾವಲು ಪಡೆಗಳ ನಡುವಿನ ಸಹಕಾರ, ಕಡಲ ವಲಯದ ಅರಿವು ಮತ್ತು ನಾವಿಕರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದ ದೀರ್ಘಾವಧಿಯ ಆಸಿಯಾನ್–ಭಾರತ ಕಡಲ ಸಹಕಾರ ಯೋಜನೆ.
● ಈ ಪ್ರದೇಶದಲ್ಲಿ ಸಾಮರ್ಥ್ಯವರ್ಧನೆಗಾಗಿ ಜಂಟಿ ಸೈಬರ್ ವಿಧಿವಿಜ್ಞಾನ ತರಬೇತಿ ಕಾರ್ಯಕ್ರಮ.
● ಆಸಿಯಾನ್–ಭಾರತ ಪರಮಾಣು ಇಂಧನ ತಾಂತ್ರಿಕ ವಿನಿಮಯ.
● ಆಸಿಯಾನ್–ಭಾರತ ಬಾಹ್ಯಾಕಾಶ ಹ್ಯಾಕಥಾನ್.
● ಗಣಿಗಾರಿಕೆ ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಆಸಿಯಾನ್–ಭಾರತ ಸಹಕಾರ.
● ಯುವ ಶೃಂಗಸಭೆ, ಯುವ ಸಂಸದೀಯ ಪ್ರತಿನಿಧಿಗಳ ವಿನಿಮಯ ಮತ್ತು ಸ್ಟಾರ್ಟ್ಅಪ್ ಹ್ಯಾಕಥಾನ್ಗಳ ಮೂಲಕ ಆಸಿಯಾನ್–ಭಾರತ ಯುವ ಸಂಪರ್ಕ.
● ನಳಂದಾ ವಿಶ್ವವಿದ್ಯಾಲಯದಲ್ಲಿ ಆಸಿಯಾನ್ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನಗಳ ಸಂಖ್ಯೆಯನ್ನು ಹೆಚ್ಚಿಸುವುದು.
● ವೇವ್ಸ್ 2027ರಲ್ಲಿ ಆಸಿಯಾನ್–ಭಾರತ ಸೃಜನಶೀಲ ಪಾಲುದಾರಿಕೆ ಪೆವಿಲಿಯನ್ ಸ್ಥಾಪನೆ.
● ಆಸಿಯಾನ್ ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಉಚಿತ ಇ-ವೀಸಾ ಸೌಲಭ್ಯ.
ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಫಿಲಿಪ್ಪೀನ್ಸ್ ಅಧ್ಯಕ್ಷರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಸಲ್ಲಿಸಿದರು. ಆಸಿಯಾನ್ನ ಮುಂದಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿರುವ ಸಿಂಗಾಪುರದ ಪ್ರಧಾನಮಂತ್ರಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು.
ನಾಯಕರು ವಿಪತ್ತು ನಿರ್ವಹಣೆಯಲ್ಲಿ ಸಹಕಾರ ಕುರಿತ ಆಸಿಯಾನ್–ಭಾರತ ಜಂಟಿ ಹೇಳಿಕೆಯನ್ನು ಅಂಗೀಕರಿಸಿದರು. ಜಂಟಿ ಹೇಳಿಕೆಯನ್ನು ಇಲ್ಲಿ ವೀಕ್ಷಿಸಬಹುದು [link]
ಪ್ರಧಾನಮಂತ್ರಿ ಅವರ ಭಾಷಣವನ್ನು ಇಲ್ಲಿ ವೀಕ್ಷಿಸಬಹುದು [link].
*****
Sharing my remarks at the 23rd ASEAN-India Summit in Manila. https://t.co/XDyIFZ56N1
— Narendra Modi (@narendramodi) November 17, 2026