Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮನಿಲಾದಲ್ಲಿ ನಡೆದ 21ನೇ ಪೂರ್ವ ಏಷ್ಯಾ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಮನಿಲಾದಲ್ಲಿ ನಡೆದ 21ನೇ ಪೂರ್ವ ಏಷ್ಯಾ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮನಿಲಾದಲ್ಲಿ ನಡೆದ 21ನೇ ಪೂರ್ವ ಏಷ್ಯಾ ಶೃಂಗಸಭೆಯನ್ನು (EAS) ಉದ್ದೇಶಿಸಿ ಭಾಷಣ ಮಾಡಿದರು.

ಪ್ರಸ್ತುತ ಬಿಕ್ಕಟ್ಟು ಮತ್ತು ಸಂಘರ್ಷಗಳ ಯುಗದಲ್ಲಿ, ಶಾಂತಿಗಾಗಿ ನಡೆಯುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಸಂವಾದ, ಪರಸ್ಪರ ಗೌರವ ಮತ್ತು ಸಹಕಾರದ ಅಗತ್ಯವನ್ನು ಪ್ರಧಾನಮಂತ್ರಿಗಳು ಒತ್ತಿಹೇಳಿದರು. ಮುಕ್ತ, ತೆರೆದ, ಅಂತರ್ಗತ ಮತ್ತು ನಿಯಮಾಧಾರಿತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಕರೆ ನೀಡಿದ ಪ್ರಧಾನಮಂತ್ರಿಗಳು, ಜಾಗತಿಕ ವೇದಿಕೆಯಲ್ಲಿ ಶಾಂತಿ, ಸ್ಥಿರತೆ ಮತ್ತು ನಿರೀಕ್ಷಿತ ವಾತಾವರಣವನ್ನು ತರುವ ನಿಟ್ಟಿನಲ್ಲಿ ಪೂರ್ವ ಏಷ್ಯಾ ಶೃಂಗಸಭೆಯು (EAS) ಕೊಡುಗೆ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.

ಜಗತ್ತಿನಾದ್ಯಂತ ಆಹಾರ, ಇಂಧನ ಮತ್ತು ರಸಗೊಬ್ಬರ ಭದ್ರತೆಯ ಮೇಲೆ ಬಿಕ್ಕಟ್ಟು ಮತ್ತು ಸಂಘರ್ಷಗಳು ಬೀರುತ್ತಿರುವ ಪರಿಣಾಮಡಾ ಬಗ್ಗೆ ಅವರು ವಿಶೇಷವಾಗಿ ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ನಿರಂತರವಾಗಿ ದಾಳಿಗೆ ಗುರಿಯಾಗುತ್ತಿರುವ ವಾಣಿಜ್ಯ ಹಡಗುಗಳು ಮತ್ತು ನಾವಿಕರ ಸುರಕ್ಷತೆ ಹಾಗೂ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅವರು ಕರೆ ನೀಡಿದರು. ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳ ಶಾಂತಿಯುತ ಪರಿಹಾರಕ್ಕಾಗಿ ಕೈಗೊಳ್ಳಲಾಗುತ್ತಿರುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಸನ್ಮಾನ್ಯ ಪ್ರಧಾನಮಂತ್ರಿಗಳು ಒತ್ತಿಹೇಳಿದರು.

ಶಾಂತಿಪ್ರಿಯ ಸಮಾಜಗಳಿಗೆ ಭಯೋತ್ಪಾದನೆಯಿಂದ ಎದುರಾಗಿರುವ ಬೆದರಿಕೆಗಳ ಕುರಿತು ಅವರು ಒತ್ತಿಹೇಳಿದರು.

ಪೂರ್ವ ಏಷ್ಯಾ ಶೃಂಗಸಭೆಯ (EAS) ವೇದಿಕೆಯಾದ್ಯಂತ ಸಹಕಾರವನ್ನು ಬಲಪಡಿಸಲು, ಪ್ರಧಾನಮಂತ್ರಿಗಳು ಈ ಕೆಳಗಿನವುಗಳನ್ನು ಪ್ರಸ್ತಾಪಿಸಿದರು:

I) ಜಂಟಿ ತರಬೇತಿ ಮತ್ತು ತುರ್ತು ಪ್ರತಿಕ್ರಿಯೆಯಲ್ಲಿ ಸಹಕಾರಕ್ಕಾಗಿ ನಾವಿಕರ ಸುರಕ್ಷತಾ ಉಪಕ್ರಮ.

II) ಆನ್‌ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳಂತಹ ಗಡಿಯಾಚೆಗಿನ ಅಪರಾಧಗಳಿಂದ ಎದುರಾಗುವ ನವಯುಗದ ಬೆದರಿಕೆಗಳನ್ನು ಎದುರಿಸಲು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ, ಪೂರ್ವ ಏಷ್ಯಾ ಶೃಂಗಸಭೆಯ ಸೈಬರ್ ಅಪರಾಧ ಸಮ್ಮೇಳನ.

III) ಲೋಥಾಲ್‌ನಲ್ಲಿ ಪೂರ್ವ ಏಷ್ಯಾ ಶೃಂಗಸಭೆಯ ಕಡಲ ಪರಂಪರೆ ಉತ್ಸವ.

IV) ಪೂರ್ವ ಏಷ್ಯಾ ಶೃಂಗಸಭೆಯ ರಾಷ್ಟ್ರಗಳೊಂದಿಗೆ ಹೆಚ್ಚಿನ ಶೈಕ್ಷಣಿಕ ಸಹಕಾರವನ್ನು ಉತ್ತೇಜಿಸಲು ನಳಂದಾದಲ್ಲಿ ಪೂರ್ವ ಏಷ್ಯಾ ಶೃಂಗಸಭೆಯ ವಿಶ್ವವಿದ್ಯಾಲಯ ಸಮಾವೇಶ.

ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಫಿಲಿಪೈನ್ಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಫರ್ಡಿನಾಂಡ್ ಆರ್. ಮಾರ್ಕೋಸ್ ಅವರನ್ನು ಪ್ರಧಾನಮಂತ್ರಿಗಳು ಅಭಿನಂದಿಸಿದರು.

ಪ್ರಧಾನಮಂತ್ರಿ ಅವರ ಪೂರ್ಣ ಭಾಷಣವನ್ನು ಇಲ್ಲಿ ವೀಕ್ಷಿಸಬಹುದು [link].

 

*****