ಘನತೆವೆತ್ತ ಅಧ್ಯಕ್ಷರಾದ ಮಾರ್ಕೋಸ್,
ಮಹಾರಾಜರೇ,
ಗೌರವಾನ್ವಿತರೇ,
ನಮಸ್ಕಾರ!
‘ಪೂರ್ವ ಏಷ್ಯಾ ಶೃಂಗಸಭೆ’ಯನ್ನು ಅತ್ಯುತ್ತಮವಾಗಿ ಆಯೋಜಿಸಿರುವುದಕ್ಕಾಗಿ ಅಧ್ಯಕ್ಷರಾದ ಮಾರ್ಕೋಸ್ ಅವರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಕೋವಿಡ್ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರ, ಜಗತ್ತು ಒಂದರ ನಂತರ ಒಂದರಂತೆ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಸಂಘರ್ಷಗಳು ಆಹಾರ, ಇಂಧನ ಮತ್ತು ರಸಗೊಬ್ಬರ ಪೂರೈಕೆಯ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತಿವೆ.
ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಹಡಗುಗಳು ಮತ್ತು ನಾವಿಕರನ್ನು ಗುರಿ ಮಾಡಲಾಗುತ್ತಿದೆ. ಭಯೋತ್ಪಾದನೆಯ ಗಂಭೀರ ಬೆದರಿಕೆಯ ಜತೆಗೆ, ಸೈಬರ್ ವಂಚನೆ ಮತ್ತು ಆನ್‌ಲೈನ್ ಮೋಸಗಳಂತಹ ಗಡಿಯಾಚೆಗಿನ ಅಪರಾಧಗಳ ಹೊಸ ರೂಪಗಳು ಕೂಡ ಹೆಚ್ಚಾಗುತ್ತಿವೆ.
ಸ್ನೇಹಿತರೆ,
ಇಂದು ಜಗತ್ತಿಗೆ ಅತ್ಯಂತ ಅಗತ್ಯವಿರುವುದು ಶಾಂತಿ, ಸ್ಥಿರತೆ ಮತ್ತು ಊಹಿಸಬಹುದಾದ ಪರಿಸ್ಥಿತಿ.
‘ಪೂರ್ವ ಏಷ್ಯಾ ಶೃಂಗಸಭೆ’ಯು ಹಲವು ವರ್ಷಗಳಿಂದ, ಸಾಮಾನ್ಯ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಪರಸ್ಪರ ಸಹಕಾರ ಬಲಪಡಿಸಲು ಒಂದು ಪ್ರಮುಖ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಸಂವಾದ, ಪರಸ್ಪರ ಗೌರವ ಮತ್ತು ಸಹಕಾರದ ಈ ಮನೋಭಾವವೇ ಭಾರತದ ವಿದೇಶಾಂಗ ನೀತಿಯ ಮೂಲಾಧಾರವಾಗಿದೆ.
‘ಆಸಿಯಾನ್’ ಒಗ್ಗಟ್ಟು ಮತ್ತು ಅದರ ಕೇಂದ್ರ ಗಮನವು ನಮ್ಮ ‘ಈಶಾನ್ಯದತ್ತ ಕ್ರಮ ವಹಿಸುವ ನೀತಿ’ಯ ಪ್ರಮುಖ ಭಾಗವಾಗಿದೆ. ಮುಕ್ತ, ತೆರೆದ, ಎಲ್ಲರನ್ನೂ ಒಳಗೊಂಡ ಮತ್ತು ನಿಯಮ-ಆಧಾರಿತ ಇಂಡೋ-ಪೆಸಿಫಿಕ್ ಪ್ರದೇಶವನ್ನು ರೂಪಿಸಲು ನಾವು ಬದ್ಧರಾಗಿದ್ದೇವೆ. ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾ ಆಗಿರಲಿ, ಶಾಂತಿಗಾಗಿ ನಡೆಯುವ ಪ್ರತಿಯೊಂದು ಪ್ರಯತ್ನಕ್ಕೂ ನಾವು ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ.
ಸ್ನೇಹಿತರೆ,
ನಮ್ಮ ಸಮುದ್ರಗಳು ನಮ್ಮ ಹಂಚಿಕೆಯ ಸಮೃದ್ಧಿಯ ಜೀವನಾಡಿಗಳಾಗಿವೆ. ಅವುಗಳ ಸುರಕ್ಷತೆ ಮತ್ತು ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಈ ದಿಕ್ಕಿನಲ್ಲಿ, ನಾವು ನಾವಿಕರ ಸುರಕ್ಷತಾ ಉಪಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ, ಅದರ ಅಡಿ, ನಾವು ಜಂಟಿ ತರಬೇತಿ ಮತ್ತು ತುರ್ತು ಸ್ಪಂದನೆಯ ಸಹಕಾರವನ್ನು ಹೆಚ್ಚಿಸುತ್ತೇವೆ.
ಸ್ನೇಹಿತರೆ,
ಡಿಜಿಟಲ್ ಜಗತ್ತಿನಲ್ಲಿ ನಂಬಿಕೆ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳುವುದು ಅಷ್ಟೇ ಅವಶ್ಯಕ. ಈ ವರ್ಷ ಭಾರತದಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನಾವು ಮಾನವ ಕೇಂದ್ರಿತ, ಎಲ್ಲರನ್ನೂ ಒಳಗೊಂಡ ಮತ್ತು ಸುರಕ್ಷಿತ ಎಐ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ಡೀಪ್‌ಫೇಕ್‌ಗಳು ಮತ್ತು ತಪ್ಪು ಮಾಹಿತಿಯನ್ನು ಎದುರಿಸಲು ಡಿಜಿಟಲ್ ವಾಟರ್‌ಮಾರ್ಕಿಂಗ್‌ನಂತಹ ತಂತ್ರಜ್ಞಾನಗಳ ಅಗತ್ಯವನ್ನು ಸಹ ನಾವು ಒತ್ತಿಹೇಳಿದ್ದೇವೆ.
ಆನ್‌ಲೈನ್ ವಂಚನೆಗಳನ್ನು ಎದುರಿಸುವ ಕುರಿತು ಇಂದು ಹೊರಡಿಸಲಾದ ಜಂಟಿ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ.
ಈ ಬೆಳೆಯುತ್ತಿರುವ ಬೆದರಿಕೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು, ಭಾರತದ ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪೂರ್ವ ಏಷ್ಯಾ ಶೃಂಗಸಭೆಯ ಸೈಬರ್ ಅಪರಾಧ ಸಮ್ಮೇಳನ ಆಯೋಜಿಸಬೇಕು ಎಂದು ನಾವು ಪ್ರಸ್ತಾಪಿಸುತ್ತೇವೆ.
ಸ್ನೇಹಿತರೆ,
ನಮ್ಮ ಸಂಬಂಧದ ಅಡಿಪಾಯವು ಸಾವಿರಾರು ವರ್ಷಗಳಷ್ಟು ಹಳೆಯದಾದ, ನಮಗೆ ಸಮಾನವಾಗಿರುವ ಪರಂಪರೆಯಲ್ಲಿದೆ. ಭಾರತದ ಲೋಥಾಲ್‌ನಲ್ಲಿ ನಿರ್ಮಿಸಲಾಗುತ್ತಿರುವ ‘ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ’ವು ಈ ಸಮಾನ ಪರಂಪರೆಯನ್ನು ಶೀಘ್ರದಲ್ಲೇ ಜಗತ್ತಿಗೆ ಪರಿಚಯಿಸಲಿದೆ. ನಮ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು, ನಾವು ಲೋಥಾಲ್‌ನಲ್ಲಿ ‘ಪೂರ್ವ ಏಷ್ಯಾ ಶೃಂಗಸಭೆ ಕಡಲ ಪರಂಪರೆ ಉತ್ಸವ’ ಆಯೋಜಿಸಲಿದ್ದೇವೆ.
ಮುಂದಿನ ವರ್ಷ, ನಾವು ನಳಂದಾದಲ್ಲಿ ‘ಪೂರ್ವ ಏಷ್ಯಾ ಶೃಂಗಸಭೆ ವಿಶ್ವವಿದ್ಯಾಲಯ ಮುಖ್ಯಸ್ಥರ ಸಮ್ಮೇಳನ’ವನ್ನು ಸಹ ಆಯೋಜಿಸಲಿದ್ದೇವೆ. ಇದು ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ನಮ್ಮ ಸಹಕಾರಕ್ಕೆ ಹೊಸ ಚೈತನ್ಯ ನೀಡಲಿದೆ.
ಸ್ನೇಹಿತರೆ,
ಈ ವರ್ಷ, ಆಗ್ನೇಯ ಏಷ್ಯಾದಲ್ಲಿನ ‘ಸ್ನೇಹ ಮತ್ತು ಸಹಕಾರ ಒಪ್ಪಂದ’ದ ಐತಿಹಾಸಿಕ 50ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿದ್ದೇವೆ.
50 ವರ್ಷಗಳ ಹಿಂದೆ, ಈ ಪ್ರದೇಶವು ಜಗತ್ತಿಗೆ ಒಂದು ಪ್ರಮುಖ ಸಂದೇಶ ನೀಡಿತ್ತು; ಅದು ಶಾಂತಿ, ಸಾರ್ವಭೌಮತೆಗೆ ಗೌರವ ಮತ್ತು ಸಂವಾದದ ಸಂದೇಶವಾಗಿತ್ತು. ಇಂದಿನ ದಿನಗಳಲ್ಲಿ, ಆ ಸಂದೇಶವು ಇನ್ನಷ್ಟು ಪ್ರಸ್ತುತವಾಗಿದೆ. ನಮ್ಮ ಭವಿಷ್ಯವು ಸಂಘರ್ಷದಿಂದಲ್ಲ, ಬದಲಾಗಿ ಪರಸ್ಪರ ಗೌರವ ಮತ್ತು ಸಹಕಾರದಿಂದ ರೂಪಿತವಾಗಲಿದೆ.
ಈ ದೂರದೃಷ್ಟಿಯೊಂದಿಗೆ, ಭಾರತವು ಆಸಿಯಾನ್ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ. ಪ್ರಾದೇಶಿಕ ಶಾಂತಿ, ಸ್ಥಿರತೆ ಹಾಗೂ ಸಮಾನ ಸಮೃದ್ಧಿಗಾಗಿ ಬದ್ಧವಾಗಿರುತ್ತದೆ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
My message at the East Asia Summit…the world needs PEACE, PROSPERITY and PREDICTABILITY. Also reiterated India’s commitment to working closely with ASEAN nations as well as a commitment to an Indo-Pacific that is free, open, inclusive and rules based. Announced important initiatives to give fresh momentum to regional cooperation. SEAFARERS’ SAFETY INITIATIVE: Greater coordination among nations to protect those who work at sea, particularly during emergencies and maritime crises. EAS CYBER CRIME CONFERENCE: India will host a conference at the National Forensic Sciences University to develop a stronger collective response to cyber threats, online fraud and transnational crime. EAS MARITIME HERITAGE FESTIVAL: The ancient port city of Lothal will bring together EAS nations to celebrate centuries of seafaring traditions, commerce and cultural exchanges. EAS UNIVERSITY CONCLAVE: Nalanda will serve as a platform for universities, scholars and students to forge new partnerships in education, research and innovation.
— Narendra Modi (@narendramodi) November 17, 2026