Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಪಾನಿನ ಕೋಬೆ ನಗರದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾನ್ಯ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯ

ಜಪಾನಿನ ಕೋಬೆ ನಗರದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾನ್ಯ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯ


ನಮಸ್ತೆ,

ಹಿಂದೆಯೂ ನನಗೆ ಕೋಬೆಯಲ್ಲಿ ನಿಮ್ಮೆಲ್ಲರ ನಡುವೆ ಬರುವ ಸೌಭಾಗ್ಯ ಒದಗಿ ಬಂದಿತ್ತು. ಅಂದು ಇಂತಹ ಒಬ್ಬ ವ್ಯಕ್ತಿ ಪ್ರಧಾನ ಮಂತ್ರಿಯಾಗುತ್ತಾನೆಂದು ಗೊತ್ತೇ ಇರಲಿಲ್ಲ. ಆಗ ನೀವೆಲ್ಲರೂ ತೋರಿದ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ . ಕೋಬೆಗೆ ಬಂದು ನಿಮ್ಮೆಲ್ಲರನ್ನು ಕಾಣದೇ ಹಾಗೆಯೇ ಹೋಗುವುದು, ಇದನ್ನು ನಾನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ.

ನಾನು ನಿನ್ನೆ ಪ್ರಧಾನಮಂತ್ರಿಗಳಾದ ಅಬೆ ಅವರೊಂದಿಗೆ ಮಾತುಕತೆ ಮಾಡುತ್ತಿದ್ದೆ. ಕೋಬೆ ನಗರದೊಂದಿಗೆ ನನಗಿರುವ ಸಂಬಂಧಗಳ ಕುರಿತು. 2001 ರಲ್ಲಿ ಗುಜರಾತಿನಲ್ಲಿ ಭಯಂಕರ ಭೂಕಂಪವಾದಾಗ ಗುಜರಾತಿಗೆ ಭೇಟಿಕೊಟ್ಟು ಅಲ್ಲಿನ ಜನರಿಗೆ ಸಹಾಯ ಮಾಡಿದವರಲ್ಲಿ ಅಬೆಯೇ ಮೊದಲಿನವರು. ನಿನ್ನೆ ಅದನ್ನು ನಾನವರಿಗೆ ಹೇಳಿದೆ. ಅದಕ್ಕಿಂತ ಮೊದಲು ಜಪಾನಿನಲ್ಲಿ ಭೂಕಂಪವಾಗಿತ್ತು. ಅಂತಹ ಸಂದರ್ಭದಲ್ಲಿಯೂ ಅಬೆಯವರು ಗುಜರಾತಿಗೆ ಆಗಮಿಸಿದ್ದರು. ಸುಖವಿರುವಾಗ ಯಾರಾದರೂ ಬರದಿದ್ದರೆ, ನೀವು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತೇವೆ, ಆದರೆ ದುಃಖದಲ್ಲಿರುವಾಗ ಯಾರಾದರೂ ಬರದಿದ್ದರೆ ಅದು ನೆನಪಿನಲ್ಲಿ ಉಳಿಯುತ್ತದೆ, ಆದರೆ ದುಃಖದ ಸಮಯದಲ್ಲಿ ಅವರು ಬಂದು ಸಹಾಯ ಮಾಡಿದರೆ ನಮಗವರು ಜೀವನಪೂರ್ತೀ ಪೂಜ್ಯನೀಯರಾಗುತ್ತಾರೆ. ದುಃಖದ ಸಮಯದಲ್ಲಿ ಕೋಬೆರವರು ನಮ್ಮೊಂದಿಗೆ ಕೈಜೋಡಿಸಿ ಸಹಾಯ ಮಾಡಿದವರಲ್ಲಿ ಮೊದಲಿಗರು.

ಹಾಗಾಗಿ ಅವರನ್ನು ಸ್ಮರಿಸುವುದು, ಅವರ ಬಗ್ಗೆ ನಮಗೆ ಆದರದ ಭಾವನೆಯಿರುವುದು ಸ್ವಾಭಾವಿಕವಾದುದು. ಹಿಂದುಸ್ತಾನದ ಪ್ರತಿಯೊಂದು ಸುದ್ಧಿ-ಸಮಾಚಾರ ನಿಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡಿರುವುದು, ನೀವೆಲ್ಲರೂ ಗರ್ವ ಹಾಗೂ ಹೆಮ್ಮೆಯಿಂದ ಮಾತನಾಡುತ್ತಿರಬಹುದು, ಮಾತನಾಡುತ್ತೀರೋ ಇಲ್ಲವೋ? ಎದೆಯುಬ್ಬಿಸಿ, ಕಣ್ಣಿನಲ್ಲಿ ಕಣ್ಣಿಟ್ಟು ಬಹು ಧೈರ್ಯ ಭರವಸೆಗಳೊಂದಿಗೆ ನೀವು ಮಾತಾಡುತ್ತಿರಬೇಕು. ಮತ್ತು ಅದಕ್ಕೆ ಕಾರಣ… ಅದಕ್ಕೆ ಕಾರಣ…ಅದಕ್ಕೆ ಕಾರಣ… ಮೋದಿ ಅಲ್ಲ.. ಅದಕ್ಕೆ ಕಾರಣ ಹಿಂದುಸ್ತಾನದ ನೂರಿಪ್ಪತ್ತೈದು ಕೋಟಿ ಜನ. ಆಸಕ್ತಿ ಶ್ರದ್ಧೆಯಿಂದ ದೇಶವನ್ನು ಮುನ್ನೆಡೆಸಲು ಅದರಲ್ಲೂ ವಿಶೇಷವಾಗಿ ನಮ್ಮ ಯುವಪೀಳಿಗೆ ಮನಸ್ಸು ಮಾಡಿದೆ. ಅವರು ಮಾಡುತ್ತಿರುವ ಈ ಪುರುಷಾರ್ಥದ ಕಾರ್ಯ ಎಲ್ಲರಲ್ಲೂ ಹೆಮ್ಮೆ ತರುವಂತಹದ್ದಾಗಿದೆ.

ಕಳೆದೆರಡು ವರ್ಷ ಭಯಂಕರ ಬರಗಾಲವಿತ್ತು. ಮಳೆ ಬಹಳ ಕಡಿಮೆಯಾಗಿತ್ತು. ಬರಗಾಲದಿಂದಾಗಿ ಭಾರತದ ಅರ್ಥವ್ಯವಸ್ಥೆಯು ತಡಬಡಾಯಿಸುತ್ತದೆ, ಎರಡು ವರ್ಷಗಳ ಭಯಂಕರ ಬರಗಾಲದ ಹೊರತಾಗಿಯೂ, ಕೊರತೆ ಅಭಾವದ ಹೊರತಾಗಿಯೂ, ಭಾರತದ ಆರ್ಥಿಕತೆಯು ವಿಶ್ವದ ದೊಡ್ಡ ಆರ್ಥಿಕತೆಗಳಲ್ಲಿ ಅತಿ ವೇಗವಾಗಿ ಮುಂದುವರೆಯುತ್ತಿರುವ ಆರ್ಥಿಕತೆಎಂದು ಸಂಪೂರ್ಣ ವಿಶ್ವವು ಒಂದೇ ದನಿಯಲ್ಲಿ ಹೇಳುತ್ತಿದೆ. ಐಎಮ್‌ಎಫ್‌ ಆಗಿರಲಿ, ವರ್ಲ್ಡ್ ಬ್ಯಾಂಕ್‌ ಆಗಿರಲಿ ಎಲ್ಲರೂ ಒಂದೇ ದನಿಯಲ್ಲಿ ಇದನ್ನೇ ಪುನರುಚ್ಛರಿಸುತ್ತಿದ್ದಾರೆ. ಐಎಮ್‌ಎಫ್‌ ಅಂತೂ ಭಾರತ ಒಂದು ಮಿನುಗುವ ನಕ್ಷತ್ರವೆಂದು ಹೇಳಿದೆ.

ವಿಶ್ವದ ಎಲ್ಲ ಅರ್ಥಶಾಸ್ತ್ರಜ್ಞರು ಭಾರತವು ಅತಿವೇಗವಾಗಿ ಮುಂದುವರೆಯುತ್ತಿದೆ ಎಂದು ಒಪ್ಪುತ್ತಾರೆ. ” FDI ” ಅಂದರೆ ವಿದೇಶಿ ನೇರ ಬಂಡವಾಳ ಹೂಡಿಕೆ ,ಇದಕ್ಕೆ ನನ್ನದೇ ಆದ ಒಂದು ವ್ಯಾಖ್ಯಾನವಿದೆ. ನನ್ನ ಮೊದಲ ವ್ಯಾಖ್ಯಾನವೆಂದರೆ – ” FDI ” ಅಂದರೆ ” First Develop India,” ಇನ್ನು ಎರಡನೇ ವ್ಯಾಖ್ಯಾನವೆಂದರೆ “Foreign Direct Investments,” ಭಾರತದ ಇತಿಹಾಸದಲ್ಲಿ ಇವರೆಡು ” FDI ” ಗಳು ಈಗ ಅತಿ ಹೆಚ್ಚು ಕಂಡುಬರುತ್ತಿವೆ. ಈ ” FDI ” ಗಳನ್ನು ಪಡೆದಿರುವುದರಿಂದ ಅಭಿವೃದ್ಧಿ ದರ ಕೂಡ ಹೆಚ್ಚಿದೆ, ಅದು ಚಾರಿತ್ರಿಕವಾಗಿ ಅತಿ ಎತ್ತರದ್ದು ಕೂಡ ಆಗಿದೆ. ಈ ಎಲ್ಲಾ ವಿಷಯಗಳು ದೇಶವು ತನ್ನ ಆರ್ಥಿಕ ವಿಕಾಸದ ಹಾದಿಯಲ್ಲಿ ವೇಗವಾಗಿ ಮುನ್ನೆಡೆಯುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ.

ನಮ್ಮ ದೇಶದಲ್ಲಿ ಯಾವಾಗಲೂ ಬಡತನದ ಚರ್ಚೆಯಾಗುತ್ತದೆ. ನಾನು ಬಂದಾದ ಮೇಲೇನೂ ಅದನ್ನೇನು ಪ್ರಾರಂಭಿಸಿಲ್ಲ, ಇದಕ್ಕಿಂತ ಮೊದಲೂ ಆಗಿದೆ, ಆದರೆ ಹೆಚ್ಚಾಗಿ ಚುನಾವಣಾ ಸಮಯದಲ್ಲಿ ಮಾತ್ರ ಆಗಿದೆ. ಚುಣಾವಣೆಯ ನಂತರ ಎಲ್ಲವನ್ನು ಮರೆತುಬಿಡುತ್ತಾರೆ. ನಾನು ಚುನಾವಣೆಯ ನಂತರ ದೇಶವನ್ನು ಬಡತನದಿಂದ ಮುಕ್ತಗೊಳಿಸಬೇಕೆಂದು ಪ್ರಯತ್ನ ನಡೆಸುತ್ತಿದ್ದೇನೆ. ಮಾಡಬಹುದು, ದೇಶದ 40 ಪ್ರತಿಶತ ಜನರು ತಮ್ಮ ಜೀವನದಲ್ಲಿ ಬ್ಯಾಂಕಿನ ಬಾಗಿಲನ್ನು ಸಹಾ ನೋಡಿರಲಿಲ್ಲ. ಬ್ಯಾಂಕಿನ ಇಷ್ಟು ದೊಡ್ಡ ಕಟ್ಟಡದೊಳಗೆ ಗಾಜುಗಳಿಂದ ಅಲಂಕೃತ ಕೋಣೆಗಳೊಳಗೆ ಅವನು ಹೋಗಬೇಕೋ ಅಥವಾ ಹೋಗಬಾರದೋ ಎಂದು ಕುರಿತು ಯೋಚಿಸುತ್ತಿದ್ದ. ನಾವು ಮೊದಲು ಎಲ್ಲರಿಗೂ ಬ್ಯಾಂಕ್‌ ಖಾತೆ ತೆರೆಯುವ ಆಂದೋಲನವನ್ನು ಪ್ರಾರಂಭಿಸಿದೆವು. ಆದರೆ ಬ್ಯಾಂಕ್‌ ಖಾತೆ ತೆರೆಯಲು ಹಣವಿರಲಿಲ್ಲ. ಕಾಗದ – ಪತ್ರ ಗಳಿಗೂ ಖರ್ಚಾಗುತ್ತದೆ. ನಮೂನೆಗಳಿಗೂ 50 ಪೈಸೆಯಿಂದ ಒಂದು ರೂಪಾಯಿ ಖರ್ಚಾಗುತ್ತದೆ. ಒಂದು ಪೈಸೆಯೂ ತೆಗೆದುಕೊಳ್ಳದೇ ಪುಕ್ಕಟೆಯಾಗಿ ಖಾತೆ ತೆರೆಯಲು ಸರ್ಕಾರದಿಂದ ಸೂಚಿಸಿದೆವು. ಕೆಲವು ದಿನ ಏನಾಯಿತೆಂದು ನಿಮಗೇ ಗೊತ್ತಿರಬಹುದು. ಆದರೆ ಎಲ್ಲರೂ ಒಟ್ಟಿಗೆ ಸೇರಿ ಇದನ್ನು ಒಪ್ಪಿದರು. ನಾವು ಬಡವರಿಗೆ ನಿಮ್ಮಲ್ಲಿ ಒಂದು ರೂಪಾಯಿ ಇಲ್ಲದಿದ್ದರೂ ನಿಮ್ಮ ಬ್ಯಾಂಕ್ ಖಾತೆ ತೆರೆಯಲಾಗುವುದೆಂದು ಹೇಳಿದೆವು. ಇದರ ಪರಿಣಾಮವಾಗಿ ದೇಶದ ಎಲ್ಲೆಡೆ ಎಲ್ಲ ಬಡ ಕುಟುಂಬಗಳ ಸರಿಸಮಾನವಾದ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಬಡವರಿಗೆ ಒಂದು ರೂಪಾಯಿ ಇಲ್ಲದಿದ್ದರೂ ಖಾತೆ ತೆರೆಯುತ್ತೇವೆಂದು ಹೇಳಿದ್ದೆವು. ಆದರೆ ನಮ್ಮ ದೇಶದ ವಿಶೇಷತೆಯನ್ನು ನೋಡಿ. ದೇಶದ ಬಡವರಲ್ಲಿ ಶ್ರೀಮಂತಿಕೆಯು ಕಂಡುಬಂತು.

ಶ್ರೀಮಂತರ ಬಡತನವನ್ನು ನಾವು ಅನೇಕ ಬಾರಿ ನೋಡಿರುತ್ತೇವೆ, ಆದರೆ ಬಡವರ ಶ್ರೀಮಂತಿಕೆಯನ್ನು ನೋಡುವ ಸೌಭಾಗ್ಯ ನಮಗೊದಗಿತು. ನಾವು ಅವರಿಗೆ ನೀವು ಒಂದು ರೂಪಾಯಿ ಕೊಡದಿದ್ದರೂ ಚಿಂತೆಯಿಲ್ಲವೆಂದು ಹೇಳಿದ್ದೆವು. ಇದೊಂದೇ ಮಾತನ್ನ ಕೇಳಿ, ಈ ಬಡವರು 45 ಸಾವಿರ ಕೋಟಿ ಹಣವನ್ನು ಜಮೆ ಮಾಡಿದರು . 45000 ಕೋಟಿ
ರೂಪಾಯಿಗಳು . ಇದು ನಮ್ಮ ದೇಶದ ಬಡವರ ಶ್ರೀಮಂತಿಕೆ, ಇದೇ ನಮ್ಮ ದೇಶದ ಅತಿದೊಡ್ಡ ಶಕ್ತಿ. ನಮ್ಮ ದೇಶವು ನಾವು ಹೇಗೆ ಬಯಸುತ್ತೇವೆಯೋ ಹಾಗೆ ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. 2011 ರಲ್ಲಿ ಜಪಾನಿನಲ್ಲಿ ಬಹುದೊಡ್ಡ ಪ್ರಾಕೃತಿಕ ವಿಕೋಪ ತಲೆದೂರಿತು. ಇಲ್ಲಿ ಭೂಕಂಪವಾಯಿತು, ಸುನಾಮಿ ಅಪ್ಪಳಿಸಿತು. ಅದೇ ಸಮಯದಲ್ಲಿ ನಿಮ್ಮ ಫುಕುಶಿಮಾದ ದುರ್ಘಟನೆ ಘಟಿಸಿತು. 2011 ರ ಆ ದಿನಗಳನ್ನು ನೆನಪಿಸಿಕೊಳ್ಳೋಣ, ವಿದ್ಯುತ್ತಿನ ಅಭಾವ, ನಾಲ್ಕು ಬಾಟಲ್‌ ನೀರಿನ ಅವಶ್ಯಕತೆ ಇದ್ದರೆ, ಒಂದೇ ಬಾಟಲ್ ನೀರಿನಲ್ಲಿ ಜೀವನ ನೆಡೆಸುವುದು. ಮೊಸರನ್ನು ತರಬೇಕೆಂದಿದ್ದರೆ, ತರಬೇಡ ಇಲ್ಲವೇ ಕಡಿಮೆ ತೆಗೆದುಕೊಂಡು ಬಾ ಎನ್ನುವುದು. ಅದು ಕೇವಲ ಆಪತ್ತು ಬಂದ ಸ್ಥಾನದಲ್ಲಷ್ಟೇ ಅಲ್ಲ. ಜಪಾನ್ ಸರ್ಕಾರವು ತಮ್ಮ ಸರ್ಕಾರಿ ಕಾರ್ಯಾಲಯಗಳಿಗಾಗಿ ಬಯಸಿದ ಇಂತಹ ತ್ಯಾಗವನ್ನು ಸಂಪೂರ್ಣ ದೇಶದಲ್ಲಿ ಜಪಾನಿನ ಜನತೆಯಾದ ನೀವೆಲ್ಲರೂ ಇದು ನಮ್ಮ ಜವಾಬ್ದಾರಿ ಎಂದು ತಿಳಿದು ಮಾಡಿ ತೋರಿಸಿದಿರಿ.

ಸರ್ಕಾರಿ ಕಾರ್ಯಾಲಯಗಳಿಗೆ ಈ ನಿಯಮಗಳನ್ನು ಪಾಲಿಸಲು ಜಪಾನ್‌ ಸರ್ಕಾರವು ಬಯಸಿತ್ತು. ಆದರೆ ಸಂಪೂರ್ಣ ದೇಶದ ಜನರು ಇದನ್ನು ತಮ್ಮ ಜವಾಬ್ದಾರಿಯಂದು ಒಪ್ಪಿಕೊಂಡರು, ಎಲ್ಲರೂ ಕೋಟು-ಪ್ಯಾಂಟು-ಟೈ ಹಾಕಿಕೊಳ್ಳಬೇಡಿ ಎಂದಾಗ ಅವುಗಳನ್ನು ಹಾಕಿಕೊಳ್ಳಲಿಲ್ಲ, ಹವಾ ನಿಯಂತ್ರಣ ಬಂದ್ ಮಾಡಿ ಎಂದಾಗ ಬಂದ್‌ ಮಾಡಿದರು. ನೀರನ್ನು ಆವಶ್ಯಕತೆಗಿಂತ ಹೆಚ್ಚು ಬಳಸಬೇಡಿ ಎಂದಾಗ ಬಳಸಲಿಲ್ಲ. ಮನೆಯಲ್ಲಿ ಮೂರು ಪಲ್ಯಗಳ ಊಟ ಮಾಡುತ್ತಿದ್ದರೆ ಅದನ್ನು ಕಡಿಮೆ ಮಾಡಿ ಒಂದು ಪಲ್ಯವನ್ನು ತಯಾರಿಸಿದಿರಿ. ನೀವೆಲ್ಲರೂ ಇದನ್ನು ಮಾಡಿ ತೋರಿಸಿದಿರಿ, ಜಪಾನಿನ ಜನರು ಮಾಡಿ ತೋರಿಸಿದರು. ನಾನು ಈ ವಿಚಾರಗಳ ಕುರಿತು ಓದುತ್ತಿದ್ದೆ ಮತ್ತು ಇಲ್ಲಿಗೆ ಬಂದಾಗ ಜನರ ಬಾಯಲ್ಲೂ ಇದನ್ನೆಲ್ಲ ಕೇಳುತ್ತಿದ್ದೆ, ನನಗನಿಸುತ್ತಿತ್ತು ಎಂತಹ ಮಹಾನ್‌ ಜನತೆ ದೇಶಕ್ಕಾಗಿ ಎಂತಹ ಕಷ್ಟಗಳನ್ನ ಸಹಿಸಲು ಸಿದ್ಧರಿದ್ದಾರೆ. ನಮ್ಮ ದೇಶದಲ್ಲಿ ಹೀಗಾಗಲು ಸಾಧ್ಯವೇ? ಎಂದು ಕೆಲವೊಮ್ಮೆನನಗನ್ನಿಸುತ್ತಿತ್ತು. ಇದು ಸಾಧ್ಯವೇ? ಆದರೆ ನಾನಿಂದು ಬಹಳ ವಿಶ್ವಾಸದಿಂದ ಹೇಳಬಲ್ಲೆ, ಸಂದರ್ಭ ಬಂದಾಗ ಹಿಂದುಸ್ತಾನದ ಸಾಮಾನ್ಯ ಮನುಷ್ಯನೂ ಸಹ, ಅವಕಾಶ ಸಿಕ್ಕಾಗ, ಜವಾಬ್ದಾರಿಯ ವಿಚಾರ ಬಂದಾಗ ನೀವು ತ್ಯಾಗ ಮಾಡಿದಂತೆಯೇ ಮಾಡಿ ತೋರಿಸುತ್ತಾನೆ, ಅವನೆಂದೂ ಹಿಂದೆ ಉಳಿಯುವವನಲ್ಲ. ನಾನು ಈ ಮಾತನ್ನು ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ.

ಕೆಲವೇ ದಿನಗಳ ಮೊದಲು ನನಗೆ ಇದರ ತಾಜಾ ಅನುಭವವಾಗಿದೆ- ಯಾವುದು ಗೊತ್ತಾ? ನಿಮಗೆ ಗೊತ್ತಿರಬೇಕಲ್ಲವೇ ಎಂಟನೇ ತಾರೀಖಿನಂದ ಒಮ್ಮಿಂದೊಮ್ಮೆಲೇ ಐದು ನೂರು ಮತ್ತು ಸಾವಿರ ರೂಪಾಯಿಗಳ ನೋಟುಗಳನ್ನು ರದ್ದುಮಾಡಿದ್ದು… ನಾನು ನೂರಾಇಪ್ಪತ್ತೈದು ಕೋಟಿ ಭಾರತದ ಜನತೆಗೆ ನಮಸ್ಕರಿಸುತ್ತೇನೆ, ತಲೆಬಾಗುತ್ತೇನೆ. ಮನೆಯಲ್ಲಿ ಮದುವೆಯಿದೆ, ಹಣವಿಲ್ಲ, ತಾಯಿಗೆ ಅನಾರೋಗ್ಯ, ನೋಟಿನ ಕಟ್ಟುಗಳಿವೆ ಆದರೆ ತೊಂದರೆಯಿದೆ. ಇದೆಲ್ಲದರ ಹೊರತಾಗಿಯೂ ಜನರಿಗೆ ತೊಂದರೆಯಾಗುತ್ತಿದೆ ಎಂಬುದು ಗೊತ್ತಿದೆ, ಅದು ಅವರಿಗೇ ಗೊತ್ತಿದೆ. ಅಕ್ಕಪಕ್ಕದವರಿಗೂ ಗೊತ್ತಿದೆ, ಆದರೂ ಜನರ ಬಾಯಲ್ಲಿಯೇ ತಮ್ಮ ಮಾತುಗಳನ್ನು ಹಾಕಿ ಮೋದಿಗೆ ಏನಾದರೂ ಹೇಳಿ ಎಂದು ಪ್ರೇರೇಪಿಸುತ್ತಿದ್ದರು. ಹೀಗೂ ನೆಡೆಯುತ್ತಿದೆ. ಆದರೆ ನಾನು ದೇಶದ ಜನತೆಗೆ ನೂರು ನೂರು ಬಾರಿ ತಲೆಬಾಗುತ್ತೇನೆ. ನಾಲ್ಕು ಘಂಟೆ ಲೈನ್‌ಗಳಲ್ಲಿ ನಿಂತರು, ಕೆಲವರು ಆರು ಘಂಟೆ ಲೈನ್‌ಗಳಲ್ಲಿ ನಿಂತರು. ದೇಶದ ಹಿತಕ್ಕಾಗಿ ತೊಂದರೆಗಳನ್ನು ಸಹಿಸಿಕೊಂಡರು. 2011 ರಲ್ಲಿ ಜಪಾನಿನ ಪ್ರತಿ ನಾಗರಿಕನು ಮಾಡಿ ತೋರಿಸಿದಂತೆ ಭಾರತದಲ್ಲಿ ಈ ನಿರ್ಣಯವನ್ನು ಸ್ವೀಕರಿಸಿ ಸ್ವಾಗತಿಸಲಾಯಿತು. ಕೆಲವೆಡೆಗಳಲ್ಲಿ ಜನರು ಐದೈದು ಘಂಟೆಗಳವರೆಗೆ ಕಾಯ್ದುಕೊಂಡು ನಿಂತಿದ್ದರು, ಆದರೆ ಏಕಾಏಕಿ ಏ ಟಿ ಎಂ ಕೆಲಸ ಮಾಡುವುದನ್ನು ನಿಲ್ಲಿಸಿತು, ಸರಿ ಬಿಡು ನಾಳೆ ಸರಿಯಾಗುತ್ತದೆಂದುಕೊಂಡರು. ಇದು ದೇಶದ ಉಜ್ವಲ ಭವಿಷ್ಯದ ಗುರುತಾಗಿದೆ, ಅಭಿವೃದ್ಧಿಯ ಚಿನ್ಹೆಯಾಗಿದೆ. ಪಾಪ ಮಾಡಿದವರ ಸಂಖ್ಯೆ ಹೆಚ್ಚೇನು ಇಲ್ಲವೆಂಬುದು ಸರಿ. ಲಕ್ಷ ಎರಡು ಲಕ್ಷ ಐದು ಲಕ್ಷ ಜನರಿರಬಹುದು. ನೂರಿಪ್ಪತ್ತೈದು ಕೋಟಿ ಜನರಿಗೆ ತೊಂದರೆಯಾಗುತ್ತಿದೆ. ಆದರೆ ಇಷ್ಟನ್ನು ಸಹಿಸಬಹುದೆಂದು ನೂರಿಪ್ಪತ್ತೈದು ಕೋಟಿ ಜನರಿಗೆ ಅನಿಸುತ್ತಿದೆ, ನೀವೂ ನೋಡಿರಬಹುದು, ಈಗಂತೂ ಎಲ್ಲವೂ ವಾಟ್ಸಪ್‌ನಲ್ಲಿ ಬರುತ್ತಿರಬಹುದು.ಯಾರೂ ಗಂಗಾನದಿಗೆ ಮೊದಲು ನಾಲ್ಕಾಣೆಯನ್ನೂ ಹಾಕುತ್ತಿರಲಿಲ್ಲ, ಈಗ ಗಂಗೆಯಲ್ಲಿ ನೋಟುಗಳೇ ಹರಿಯುತ್ತಿವೆ. ನನಗೆ ನೀವೇ ಹೇಳಿ, ಕಳ್ಳ ಮಾಲನ್ನು ಹೊರತೆಗೆಯಬೇಕೋ ಬೇಡವೋ? ಒಬ್ಬನಿಗೆ ಲಾಭವಾದರೆ ಇನ್ನೊಬ್ಬನಿಗೆ ಹಾನಿಯಾಗುತ್ತದೆ, ಇದು ಸಾಮಾನ್ಯ ನಾಗರಿಕನ ದೂರಾಗಿರುತ್ತದೆ. ಕಾನೂನು ಎಲ್ಲರಿಗೂ ಐನೂರು ಮತ್ತು ಸಾವಿರದ ನೋಟನ್ನು ಕೊಡಲಿ ಎಂದು ಅವನಿಗೆ ಅನಿಸುತ್ತದೆ. ಈಗ ಮೋದಿಯ ಸಾವಿರದ ನೋಟೂ ಸಹ ಚಲಾವಣೆಯಾಗುವುದಿಲ್ಲ. ವಾಹ್‌, ಇದಂತೂ ಬಹಳ ಒಳ್ಳೆಯದಾಯಿತೆಂದು ಜನರು ಹೇಳುತ್ತಿದ್ದಾರೆ. ಹೀಗೇ ಆಗಬೇಕಾಗಿತ್ತು. ಇದರ ಪರಿಣಾಮ ಪ್ರತಿಯೊಬ್ಬರ ಮೇಲೂ ಸಮಾನವಾಗಿ ಆಗಿದೆ. ಹೀಗಾಗಿ ಈ ನಿರ್ಣಯದಿಂದ ನನಗೆ ಜನರ ಆಶೀರ್ವಾದ ಹೀಗೆ ಸಿಗುವುದೆಂದು ನಾನೆಂದೂ ಯೋಚಿಸಿರಲಿಲ್ಲ. ಹೀಗೆ ಮಾಡುವುದರಿಂದ ಯಾವ ಯಾವ ತೊಂದರೆಗಳಾಗುತ್ತವೆ, ಯಾವ ಯಾವ ಲಾಭಗಳಾಗುತ್ತವೆ ಎನ್ನುವುದನ್ನೂ ನಾನು ಯೋಚಿಸಿರಲಿಲ್ಲ. ಈ ಕೆಲಸವನ್ನು ಹೇಗೆ ಮಾಡುವುದು, ಜನರಿಗೂ ಹೇಳಲಾಗದಂತಹ ಈ ಕಾರ್ಯವನ್ನು ಯಾವ ರೀತಿ ಮಾಡುವುದೆಂದು ತಲೆ ಓಡಿಸುತ್ತಿದ್ದೆ.

ಏಕಾಏಕಿ ಮಾಡಬೇಕು ಇಲ್ಲದಿದ್ದರೆ ಎಲ್ಲ ಆಟ ಒಂದೇ ಬಾರಿಗೆ ನಿಂತುಹೋಗುತ್ತದೆ. ಇಷ್ಟು ಸಂಪತ್ತನ್ನು ಸಂಗ್ರಹಿಸುವ ಜನರು ಅದನ್ನು ಮುಚ್ಚಿಡುವ ಜಾಗವನ್ನೂ ಹುಡುಕಿರುತ್ತಾರೆ, ಆದ್ದರಿಂದ ಇದನ್ನು ರಹಸ್ಯವಾಗಿಡುವುದು ಅತ್ಯವಶ್ಯಕವಾಗಿತ್ತು. ಈ ಕಷ್ಟಗಳು ಬರುತ್ತವೆ, ಇಂತಹ ತೊಂದರೆಗಳಾಗುತ್ತವೆ, ಇಂತಹ ಸಮಸ್ಯೆಗಳು ಬರುತ್ತವೆಂದು ನಾನೂ ಯೋಚಿಸುತ್ತಿದ್ದೆ. ನಮ್ಮ ಒಂದು ಸಣ್ಣ ತಂಡವಿತ್ತು, ಕುಳಿತು ದಾರಿಗಳನ್ನು ಹುಡುಕುತ್ತಿದ್ದೆವು. ನನಗೆ ಈ ಕಾರ್ಯದಿಂದ ಆಶೀರ್ವಾದ ಸಿಗುವುದೆಂದು ನಾನು ಯೋಚಿಸಿಯೂ ಇರಲಿಲ್ಲ. ತರಕಾರಿ ತರಲು ಹೋಗುವ ಗೃಹಿಣಿಯೂ ಕೂಡ ತನ್ನ ಸೆರಗಿನಲ್ಲಿ ತಾನು ಉಳಿಸಿದ ಹಣವನ್ನು ಕಟ್ಟಿ ಇಟ್ಟಿರುತ್ತಾಳೆ, ಮನೆಯ ಹಣವೆಲ್ಲ ಖಾಲಿಯಾದಾಗ, ಕಷ್ಟ ಬಂದಾಗ ಅವಳು ಅದನ್ನು ಹೊರತೆಗೆದು ಕೊಡುತ್ತಾಳೆ ಎಂಬುದು ದೇಶದ ಜನರಿಗೆ ತಿಳಿಯಿತು. ನಮ್ಮ ದೇಶದ ಮಹಿಳೆ ಏನಾದರೂ ಉಳಿತಾಯ ಮಾಡಿರುತ್ತಾಳೆ, ಅದು ನ್ಯಾಯದ ಹಣವಾಗಿರುತ್ತದೆ, ಅನ್ಯಾಯದ ಹಣವಾಗಿರುವುದಿಲ್ಲ. ನಮ್ಮ ದೇಶದ ಗೃಹಿಣಿ ಎರಡೂವರೆ ಲಕ್ಷದವರೆಗೆ ಬ್ಯಾಂಕಿನಲ್ಲಿ ಹಣವನ್ನು ಜಮಾ ಮಾಡಬಹುದೆಂದು, ನಾವು ಅದರ ಬಗ್ಗೆ ಯಾವುದೇ ತನಿಖೆ ಮಾಡುವುದಿಲ್ಲವೆಂದು ಹೇಳಿದಾಗ, ಅದರ ಪರಿಣಾಮ ಏನಾಯಿತು ಗೊತ್ತೆ ನಿಮಗೆ? ತಾಯಿಯನ್ನು ವೃದ್ಧಾಶ್ರಮದಲ್ಲಿಟ್ಟು ಬಂದಿದ್ದಂತಹ ಅನೇಕ ಮಗ ಮತ್ತು ಸೊಸೆಯಂದಿರು ತಮ್ಮ ತಾಯಂದಿರ ಖಾತೆಗೆ ಎರಡೂವರೆ-ಎರಡೂವರೆ ಲಕ್ಷಗಳನ್ನು ಜಮಾ ಮಾಡಿದರು. ಈಗ ನೀವೇ ಹೇಳಿ, ಆ ತಾಯಂದಿರು ನನಗೆ ಆಶಿರ್ವಾದ ಕೊಡುವುದಿಲ್ಲವೇ. ಅಂತಹ ವೃದ್ಧ ತಾಯಂದಿರು ನನ್ನನ್ನು ಆಶೀರ್ವದಿಸಿದಾಗ ಯೋಜನೆ ಸಫಲವಾಗುವುದರಲ್ಲಿ ಸಂದೇಹವಿರುತ್ತದೆಯೇ.

ಸಹೋದರ ಮತ್ತು ಸಹೋದರಿಯರೇ, ಇದು ಬಹುದೊಡ್ಡ ಸ್ವಚ್ಛತಾ ಅಭಿಯಾನವಾಗಿತ್ತು. ತೊಂದರೆಯಾಗಿದೆ, ನನಗೆ ಇದರ ಅಂದಾಜಿದೆ, ನಾನು ಮೊದಲ ದಿನ ಅಂದರೆ ಎಂಟನೇ ತಾರೀಖಿನಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ನಾನು ಹೇಳಿದ್ದೆ. ಇದು ಇಷ್ಟು ದೊಡ್ಡ ದೇಶವಿದೆ. ಐವತ್ತು ದಿನಗಳ ಅವಕಾಶವಿದೆ ಅವಸರ ಮಾಡುವ ಅವಶ್ಯಕತೆಯಿಲ್ಲ. ಐವತ್ತು ದಿನಗಳಿವೆ, ಪ್ರಾಮಾಣಿಕವಾಗಿ ದುಡಿದ ನಿಮ್ಮ ಹಕ್ಕಿನ ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡಿರಿ, ನಿಮ್ಮದೇ ಖಾತೆಗೆ ಹಣ ಬಂದು ಸೇರುತ್ತದೆ. ಆದರೆ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳುತ್ತೇನೆ, ಲೆಕ್ಕಾಚಾರವಿಲ್ಲದ ಹಣವೇನಾರೂ ಕಂಡುಬಂದರೆ, ದೇಶ ಸ್ವತಂತ್ರವಾದಾಗಿನಿಂದ ಹಿಡಿದು ಇಂದಿನವರೆಗಿನ ಎಲ್ಲಾ ಲೆಕ್ಕಾಚಾರವನ್ನು ಚುಕ್ತಾ ಮಾಡಲಿದ್ದೇನೆ. ಈ ಕಾರ್ಯಕ್ಕೆ ಎಷ್ಟು ಜನರ ಅವಶ್ಯಕತೆಯಿದೆಯೋ ಅಷ್ಟು ಜನರನ್ನು ನೇಮಕ ಮಾಡಿಕೊಳ್ಳುತ್ತೇನೆ. ಪ್ರಾಮಾಣಿಕವಾದ ಹಕ್ಕಿದ್ದರೆ ಅವರ ಜೈ ಜೈಕಾರವಾಗುವುದು ಅದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಬೇರಾವುದೋ ರೂಪದಲ್ಲಿ ಸಂಪತ್ತನ್ನು ಸಂಗ್ರಹಿಸಿದವರು ನಾವು ಇಂದು ಬ್ಯಾಂಕಿನಲ್ಲಿ ಇಡುತ್ತೇವೆ, ಮುಂದೆ ನೋಡಿಕೊಳ್ಳುತ್ತೇವೆ ಎಂದು ಯೋಚಿಸುವವರಿರಬಹುದು. ಯಾರೂ ಬಚಾವಾಗಲೂ ಸಾಧ್ಯವಾಗುವುದಿಲ್ಲ, ಯಾರು ನನ್ನ ಬಗ್ಗೆ ತಿಳಿದಿದ್ದಾರೋ ಅವರು ಸ್ವಲ್ಪ ಬುದ್ಧಿವಂತರೂ ಆಗಿರುವರು. ಬ್ಯಾಂಕಿಗೆ ಹಾಕುವುದಕ್ಕಿಂತ ಗಂಗೆಯಲ್ಲಿ ತೇಲಿಬಿಡುವುದೇ ಉತ್ತಮವೆಂದು ಅವರಿಗೆ ಅನಿಸಿರಬಹುದು. ಹಣ ಸಿಗಲಿ ಅಥವಾ ಸಿಗದಿರಲಿ ಪುಣ್ಯ ಪ್ರಾಪ್ತವಾಗುವುದು ಹಾಗೂ ದೇಶಕ್ಕೆ ಹಿಂದುರಿಗಿದ ನಂತರ ನಾನು ಇನ್ನೊಮ್ಮೆ ಹೇಳಬಯಸುತ್ತೇನೆ, ಪ್ರಾಮಾಣಿಕರ ರಕ್ಷಣೆಗಾಗಿ ನಮ್ಮ ಸರ್ಕಾರ ಏನನ್ನಾದರೂ ಮಾಡಲು ಸಿದ್ಧವಿದೆ, ಆದರೆ ಅಪ್ರಮಾಣಿಕರ ಲೆಕ್ಕ ಚುಕ್ತಾ ಮಾಡಿಯೇ ತೀರುತ್ತೇನೆ.

ನಾವು ಈ ಕಾರ್ಯವನ್ನೇನು ರಾತ್ರೋರಾತ್ರಿ ಮಾಡಿಲ್ಲ. ನಾವು ಮೊದಲು ಇಷ್ಟು ದಂಡವನ್ನು ಸರ್ಕಾರಕ್ಕೆ ಕಟ್ಟಿ ಉಳಿದದ್ದನ್ನು ಇಟ್ಟುಕೊಳ್ಳಿ ಎಂದು ಹೇಳಿದೆವು. 67 ಸಾವಿರ ಕೋಟಿ ರೂಪಾಯಿಗಳು ಬಂದವು. ಆಗಲೂ ಮೋದಿ ಫೇಲ್ ಆಗುವನೆಂದು ಕೆಲವರು ಹೇಳುತ್ತಿದ್ದರು. ಮೋದಿಗೆ ಏನೂ ಆಗಲಿಲ್ಲ. ಆದರೆ ಕೊನೆಗೆ ಲೆಕ್ಕಾಚಾರಗಳು ಹೊರಗೆ ಬಂದಾದ ಮೇಲೆ ಯಾರೂ ಇದರ ಬಗ್ಗೆ ಮಾತನಾಡುತ್ತಲೇ ಇಲ್ಲ.

ಕಳೆದ ಎರಡು ವರ್ಷಗಳಲ್ಲಿ ಈ ಪ್ರಕಾರದ ಬೇರೆ-ಬೇರೆ ಪ್ರಯತ್ನಗಳನ್ನು ಮಾಡಲಾಯಿತು. ಹತ್ತಿರ-ಹತ್ತಿರ ಒಂದು ಲಕ್ಷ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳು ವಾಪಸ್ ಬಂದವು, ಒಂದು ಲಕ್ಷ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳು. ಅವಕಾಶ ಕೊಟ್ಟಿದ್ದೆವು, ಕೊಟ್ಟಿಲ್ಲವೆಂದೇನಿಲ್ಲ. ಆದರೂ ಹಾಗೆಯೇ ಇದೆಯಂದು ನಿಮಗನಿಸಿದರೆ ತಪ್ಪು ನನ್ನದಲ್ಲ. ಹಾಗಾಗಿಯೇ ಡಿಸೆಂಬರ್‌ 30 ರವರೆಗೆ ಅವರ ಬಳಿ ಸಮಯವಿದೆ. ಡಿಸೆಂಬರ್‌ 30 ರವರೆಗೆ ಯಾವುದೇ ತೊಂದರೆಗಳಿಲ್ಲದೇ ಎಲ್ಲಾ ವ್ಯವಹಾರಗಳು ನೆಡೆಯಬೇಕು, ಅವಸರ ಮಾಡಿದರೆ ಸ್ವಲ್ಪ ತೊಂದರೆಗಳಾಗಬಹುದು. ನೂರಿಪ್ಪತ್ತೈದು ಕೋಟಿ ದೇಶವಾಸಿಗಳಿಗೆ ಡಿಸೆಂಬರ್‌ 30 ರವರೆಗೆ ಯಾವುದೇ ತೊಂದರೆಗಳಾಗುವುದಿಲ್ಲ. ಅವರ ಹಕ್ಕಿನ ಸಂಪತ್ತು ಅವರಿಗೆ ಸಿಗುತ್ತದೆ. ಆದರೆ ಕೆಲವರು ಡಿಸೆಂಬರ್‌ 30 ನಂತರ ಏನಾಗಬಹುದೆಂದು ಯೋಚಿಸುತ್ತಿದ್ದರೆ… ಸ್ಕೀಮ್‌ ಪೂರ್ಣವಾದ ನಂತರ ಇನ್ನೊಂದು ಲೆಕ್ಕ ಚುಕ್ತಾ ಮಾಡಲು ಬರುವುದಿಲ್ಲವೆಂಬ ಯಾವುದೇ ಗ್ಯಾರಂಟಿ ನಾನು ಕೊಡುವುದಿಲ್ಲ.

ಈಗ ವಿಶ್ವ ಬದಲಾಗಿದೆ, ಎಷ್ಟು ಬದಲಾಗಿದೆ ಎಂದರೆ, ನಾವು ನಿಮ್ಮನ್ನು ಮುಖ್ಯ ರಹದಾರಿಗೆ ತರಬೇಕೆಂದಿದ್ದೇವೆ, ಮೊದಲು ಗಳಿಸಿದ್ದು ಗಳಿಸಿ ಆಯಿತು. ನಾನು ಅವಕಾಶ ಕೊಟ್ಟಿದ್ದೇನೆ, ಅದೃಷ್ಟದ ಕುರಿತು ಚಿಂತಿಸಿ. ಆದರೆ ನನ್ನ ಪ್ರಿಯ ದೇಶವಾಸಿಗಳೇ, ನೀವಿಲ್ಲಿ ಬಹಳ ಶ್ರಮಪಟ್ಟು ಭಾರತದ ಹೆಸರನ್ನು ಬೆಳಗಿಸುತ್ತಿದ್ದೀರ. ನಿಮ್ಮ ಪುರುಷಾರ್ಥದಿಂದ ದೇಶದ ಗೌರವವನ್ನು ಹೆಚ್ಚಿಸುತ್ತಿದ್ದೀರ. ಜಗತ್ತಿನಲ್ಲಿ ನಾವು ಎಲ್ಲಿಗೇ ಹೋದರೂ ಭಾರತೀಯ ಸಮುದಾಯದ ಬಹುತೇಕ ಸಕಾರಾತ್ಮಕ ವ್ಯವಹಾರದ ಚರ್ಚೆ ನೋಡುತ್ತೇವೆ. ವಿಶ್ವದಲ್ಲಿ ಎಲ್ಲಿ ಭಾರತೀಯ ಸಮುದಾಯವಿದೆಯೋ ಅವರ ಕುರಿತು ಅನೇಕ ಜನರು ಹೇಳುತ್ತಾರೆ ಮತ್ತು ಈ ಕಾರಣದಿಂದಲೇ ಭಾರತದ ಬಂಡವಾಳ ವ್ಯವಹಾರಗಳು ಹೆಚ್ಚುತ್ತಿವೆ, ಇದರಿಂದ ಭಾರತದ ಪ್ರತಿಷ್ಠೆಯೂ ಹೆಚ್ಚುತ್ತಿದೆ. ಇದರಲ್ಲಿ ನಿಮ್ಮೆಲ್ಲರ ಕೊಡುಗೆ ಅಪಾರ.

ನನಗೆ ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗುವ ಅವಕಾಶ ದೊರೆಯಿತು. ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಇನ್ನುಮುಂದೆ ಹಿಂದುಸ್ತಾನವು ನಿರಂತರವಾಗಿ ಪ್ರಗತಿ ಪಥದಲ್ಲಿರುತ್ತದೆ, ಅಭಿವೃದ್ಧಿಯ ಹೊಸ ಎತ್ತರಗಳನ್ನು ಏರುತ್ತಿರುತ್ತದೆ. ನೀವು ವಿಶ್ವದೆಲ್ಲೆಡೆ ಹೋಗಿ ಅಲ್ಲಿದ್ದು ಭಾರತದ ಬಗ್ಗೆ ಯಾವ ಕನಸುಗಳನ್ನು ಕಾಣುತ್ತೀರೋ, ಹಿಂದುಸ್ತಾನದ ಬಗ್ಗೆ ನೀವು ಯಾವ ವಿಷಯಗಳನ್ನು ಬಯಸುತ್ತೀರೋ ಅವನ್ನು ಹಿಂದುಸ್ತಾನದಲ್ಲಿ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ಆಗಿಯೇ ಆಗುತ್ತದೆ.

ನಿಮ್ಮಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು .

***