Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಂಗಳೂರಿನಲ್ಲಿ ದಶಮ: ಸೌಂದರ್ಯ ಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಭಾಷಣ

ಬೆಂಗಳೂರಿನಲ್ಲಿ ದಶಮ: ಸೌಂದರ್ಯ ಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಭಾಷಣ

ಬೆಂಗಳೂರಿನಲ್ಲಿ ದಶಮ: ಸೌಂದರ್ಯ ಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಭಾಷಣ

ಬೆಂಗಳೂರಿನಲ್ಲಿ ದಶಮ: ಸೌಂದರ್ಯ ಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಭಾಷಣ


 

ವೇದಾಂತ ಭಾರತಿಗೆ ಸಂಬಂಧಪಟ್ಟ ಎಲ್ಲ ಹಿರಿಯರೇ, ಮಹಿಳೆಯರೇ ಮತ್ತು ಮಹನೀಯರೇ,

ಒಂದೇ ಸ್ಥಳದಲ್ಲಿ, ಒಂದೇ ಸ್ವರದಲ್ಲಿ, ಒಟ್ಟಿಗೆ ಸೇರಿ ಮಂತ್ರ ಪಠಣ ಮಾಡಿದರೆ ಆ ಸ್ಥಳದಲ್ಲಿ ಮನಸ್ಸು, ಶರೀರ ಮತ್ತು ಆತ್ಮವನ್ನು ತನ್ನ ಪರಿಧಿಗೆ ತೆಗೆದುಕೊಳ್ಳುವ ಶಕ್ತಿಯ ಒಂದು ಚಕ್ರ ನಿರ್ಮಾಣವಾಗುತ್ತದೆ ಎಂಬ ಪುರಾತನ ನಂಬಿಕೆ ಇದೆ. ನಮ್ಮಲ್ಲಿ ನಾದ – ಬ್ರಹ್ಮನ ಕಲ್ಪನೆಯನ್ನು ಕೂಡಾ ಇದೇ ಸನ್ನಿವೇಶದಲ್ಲಿ ಅಂಗೀಕರಿಸಲಾಗಿದೆ. ಆಧುನಿಕ ವಿಜ್ಞಾನ ಕೂಡಾ ನಾದ – ಬ್ರಹ್ಮನ ಸಾಮರ್ಥ್ಯ ಮತ್ತು ಮಂತ್ರಗಳ ಉಚ್ಚಾರಣೆಯಲ್ಲಿನ ಶಕ್ತಿಯನ್ನು ನಿರಾಕರಿಸಿಲ್ಲ. ಇಂದು, ಈ ಸಮಯದಲ್ಲಿ ದಕ್ಷಿಣಾಮೂರ್ತಿಯ ಸ್ತೋತ್ರ ಮತ್ತು ಸೌಂದರ್ಯ ಲಹರಿಯ ಈ ಸುಂದರ ಪಠಣದಿಂದ ಸಂಪೂರ್ಣ ವಾತಾವರಣದಲ್ಲಿ ಅದೇ ಶಕ್ತಿಯ ಅನುಭವವನ್ನು ನಾನು ಪಡೆದುಕೊಳ್ಳುತ್ತಿದ್ದೇನೆ. ಒಂದು ದಿವ್ಯ ಅನುಭೂತಿಯ ಅನುಭವವಾಗುತ್ತಿದ್ದು ಅದರಲ್ಲಿ ರಸವೂ (ಆನಂದ) ಇದೆ, ರಹಸ್ಯವೂ ಇದೆ ಹಾಗೂ ಈಶ್ವರನೊಂದಿಗೆ ಒಂದಾಗುವ ಉತ್ಕಟ ಇಚ್ಚೆಯೂ ಇದೆ.

ಸೌಂದರ್ಯ ಲಹರಿಯ ಪ್ರತಿಯೊಂದು ಮಂತ್ರದಲ್ಲೂ ಒಂದು ವಿಶಿಷ್ಟ ಶಕ್ತಿಯಿದೆ, ಒಂದು ವಿಶಿಷ್ಟ ಭಾವವಿದೆ. ಆ ಭಾವ, ಆ ಶಕ್ತಿ ಇಂದು ನಮ್ಮೆಲ್ಲರಿಗೂ ಒಂದು ಹೊಸ ಚೈತನ್ಯ, ನವ ಶಕ್ತಿಯನ್ನು ತುಂಬುತ್ತಿದೆ. ಇದು ನನ್ನ ಸೌಭಾಗ್ಯ. ನಾನು ಅನೇಕ ವರ್ಷಗಳಿಂದ ನವರಾತ್ರಿಯ ಸಾಧನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ. ನನ್ನ ನವರಾತ್ರಿಯ ಸಾಧನೆಯ ಕ್ರಮದಲ್ಲಿ ಒಂದು ಸ್ಥಾನ ಸೌಂದರ್ಯ ಲಹರಿಯದ್ದೂ ಕೂಡಾ ಆಗಿದೆ.

ನನಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಮಂತ್ರಿಸಿದಕ್ಕಾಗಿ ಮತ್ತು ಈ ಭಾವಪರವಶತೆಯ ಪ್ರಪಂಚದಲ್ಲಿ ಕೆಲವು ಕಾಲ ಕಳೆಯುವ ಸೌಭಾಗ್ಯ ಕಲ್ಪಿಸಿಕೊಟ್ಟದ್ದಕಾಗಿ ನಾನು ಪರಮ ಪೂಜ್ಯ ಶ್ರೀ ಶ್ರೀ ಶಂಕರ ಭಾರತಿ ಮಹಾಸ್ವಾಮಿಗಳಿಗೆ ನಮನಗಳನ್ನು ಸಲ್ಲಿಸುತ್ತಾ, ವೇದಾಂತ ಭಾರತಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸೌಂದರ್ಯ ಲಹರಿಯ ಪಠಣದ ಸಾಕ್ಷಾತ್ ಅನುಭವ ನನಗಿಂದು ದೊರೆತಿದೆ, ಇದು ನನ್ನ ಸೌಭಾಗ್ಯ. ಸಾಮೀಜಿ ಅವರ ಆಶೀರ್ವಾದದ ಫಲವಾಗಿ ಸೌಂದರ್ಯ ಲಯರಿಯ ಪಠಣದ ಹತ್ತು ವರ್ಷಗಳು ಪೂರ್ಣಗೊಳ್ಳುತ್ತಿದೆ.

ತಮಗೆಲ್ಲರಿಗೂ ನಾನು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಶುಭಾಶಯಗಳನ್ನು ಕೋರುತ್ತೇನೆ. ಈ ಪವಿತ್ರ ಕ್ಷಣದ ಭಾಗವಾಗಿರುವ ತಾವೆಲ್ಲರೂ ಭಾಗ್ಯಶಾಲಿಗಳೆಂದು ನಾನು ಭಾವಿಸುತ್ತೇನೆ. ಸಹೋದರ ಸಹೋದರಿಯರೆ, ಎಂಟು ಹತ್ತು ದಿನಗಳ ಹಿಂದೆ ನಾನು ಕೇದಾರನಾಥದಲ್ಲಿದ್ದೆ. ಮಂದಿರದ ಮುಖ್ಯದ್ವಾರ ಮುಚ್ಚುವ ವೇಳೆಯಾಗಿತ್ತು. ಮಹಾದೇವನ ದರ್ಶನ ಪಡೆಯುವ ಅವಕಾಶ ಲಭಿಸಿದ್ದು ನನ್ನ ಸೌಭಾಗ್ಯ. ಯಾವಾಗ ನಾನು ಕೇದಾರನಾಥ ದರ್ಶನಕ್ಕೆ ಹೋದಾಗಲೂ ನನ್ನ ಮನದಲ್ಲಿ ಸಾವಿರಾರು ವರ್ಷಗಳ ಹಿಂದೆ ಇಂತಹ ದುರ್ಗಮ ಪ್ರದೇಶಕ್ಕೆ ಆದಿ ಶಂಕರಾಚಾರ್ಯರು ಹೇಗೆ ಪ್ರವೇಶ ಮಾಡಿರಬಹುದು ಎಂಬು ಪ್ರಶ್ನೆ ಮತ್ತೆ ಮತ್ತೆ ನನಗೆ ಉದ್ಭವಿಸುತ್ತದೆ.
ಆಧುನಿಕ ತಂತ್ರಜ್ಞಾನದ ಇಂದಿನ ದಿನಗಳಲ್ಲಿ ಕೂಡಾ ಎಲ್ಲಿಗೆ ತಲುಪಲು ನಮಗೆ ಸುಲಭವಲ್ಲವೋ, ಅಲ್ಲಿಗೆ ಸಾವಿರ ವರ್ಷಗಳ ಮೊದಲೇ ಆದಿಶಂಕರರು ಹೇಗೆ ತಲುಪಿರಬಹುದು. ಯಾವ ಶಕ್ತಿಯ ಚಕ್ರ, ಯಾವ ಸಾಮರ್ಥ್ಯ, ಯಾವ ಬಲದಿಂದ ಕೇವಲ 32ನೇ ವಯಸ್ಸಿನಲ್ಲಿ ಶಂಕರಾಚಾರ್ಯರು ಮೂರು ಬಾರಿ ನಡೆದುಕೊಂಡೇ ಸಂಪೂರ್ಣ ಭಾರತವನ್ನು ಸುತ್ತುವುದು ಸಾಧ್ಯವಾಯಿತು, ದೇಶದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಭಾರತದ ಸಾಂಸ್ಕೃತಿಕ ಏಕತೆಯನ್ನು ಒಂದು ಹಾರದಲ್ಲಿ ಒಗ್ಗೂಡಿಸುವ ದೊಡ್ಡ ಪ್ರಯತ್ನವನ್ನು ಅವರು ಮಾಡಿದರು.

ಆದಿ ಶಂಕರಾಚಾರ್ಯರು ತಮ್ಮ ಸಂಪೂರ್ಣ ಜೀವನವನ್ನು ಆಧ್ಯಾತ್ಮಿಕ ಪರಂಪರೆಗಳನ್ನು ಬಲಪಡಿಸಲು ಸಮರ್ಪಿಸಿಕೊಂಡಿದ್ದರು. ನಮ್ಮ ಸಂಸ್ಕೃತಿಯಲ್ಲಿ ಕ್ರಮೇಣವಾಗಿ ಸೇರಿಕೊಂಡಿದ್ದ ತಪ್ಪು ಪರಂಪರೆಗಳನ್ನು, ಆದಿ ಶಂಕರಾಚಾರ್ಯರು ಬಹಳ ನಿಖರವಾಗಿ, ಸೂಕ್ಷ್ಮವಾಗಿ ವಿಶ್ಲೇಷಿಸಿದ್ದರು, ಆ ವಯಸ್ಸಿನಲ್ಲಿ ತಮ್ಮೊಳಗಿನ ಕೆಟ್ಟತನವನ್ನು ತೊಡೆದುಹಾಕುವ, ಟೀಕಿಸುವ ಧೈರ್ಯವನ್ನು ತೋರಿದರು. ಸರಿಯಾದ ತರ್ಕದ ಮೂಲಕ ಮುಂಬರುವ ಪೀಳಿಗೆ ಆ ತಪ್ಪು ದಾರಿ ತುಳಿಯುವುದನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಶಿವ – ಶಕ್ತಿ – ವಿಷ್ಣು – ಗಣಪತಿ ಮತ್ತು ಕುಮಾರ ಪೂಜೆಯನ್ನು, ಒಂದೇ ರೀತಿಯಲ್ಲಿ ಮಾಡುವ ಪರಂಪರೆಗೆ ಅವರು ಬಲ ನೀಡಿದರು. ಭಾರತೀಯ ಪರಂಪರೆಯನ್ನು ಅವರು ಪುನರ್ಸ್ಥಾಪಿಸಿದರು. ಆದಿ ಶಂಕರಾಚಾರ್ಯರು, ವೇದ ಮತ್ತು ಉಪನಿಷದ್ ಜ್ಞಾನದ ಮೂಲಕ ಸಂಪೂರ್ಣ ಭಾರತವನ್ನು ಒಟ್ಟುಗೂಡಿಸಿದರು, ಏಕತೆಯ ಭಾವದಲ್ಲಿ ಜೋಡಿಸಿದರು. ಶಾಸ್ತ್ರವನ್ನು ಅವರು ಶಸ್ತ್ರವನ್ನಾಗಿಸದೇ, ಸಾಧನೆಯನ್ನಾಗಿ ಮಾಡಿದರು. ಬೇರೆ ಬೇರೆ ವಿಚಾರಧಾರೆಗಳನ್ನು ಮತ್ತು ದರ್ಶನದ ಒಳ್ಳೆ ಮಾತುಗಳನ್ನು ಅವರು ಅಳವಡಿಸಿಕೊಂಡು, ಜನರಿಗೆ ಭಕ್ತಿ ಮತ್ತು ಜ್ಞಾನ ಮಾರ್ಗದ ಹಾದಿಯಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿದರು. ಭವಿಷ್ಯದ ಪೀಳಿಗೆಗಾಗಿ ಅವರು ಸೌಂದರ್ಯ ಲಹರಿಯ ರಚನೆಯನ್ನು ಮಾಡಿದರು. ದೇಶದ ಸಾಮಾನ್ಯ ನಾಗರಿಕರನ್ನು ಒಟ್ಟುಗೂಡಿಸುವಂತಹ ಒಂದು ರಚನೆಯನ್ನು ಅವರು ಮಾಡಿದರು. ಸೌಂದರ್ಯ ಲಹರಿಯಲ್ಲಿ ದೇವಿಯ ಸ್ತುತಿಯನ್ನು ಮಾಡುತ್ತಾ, ಈಶ್ವರನ ವಿಭಿನ್ನ ರೂಪದಲ್ಲಿ ಯಾವುದೇ ಭೇದ ಭಾವ ಮಾಡದಂತೆ ಅವರು ವಿಶೇಷ ಒತ್ತು ನೀಡಿದರು.

“ಏಕಂ ಸದ್ವಿಪ್ರಾ ಬಹುದಾ ವದಂತಿ”

ಸೌಂದರ್ಯ ಲಹರಿಯಲ್ಲಿ ದೊರಕುವ ಆಶೀರ್ವಾದ ಭಕ್ತರಲ್ಲಿ ಯಾವುದೇ ಭೇದ ಭಾವ ಮಾಡದೇ, ಎಲ್ಲರಿಗೂ ಸಮಾನ ರೀತಿಯಲ್ಲಿ ಲಭಿಸುತ್ತದೆ. ಸೌಂದರ್ಯ ಲಹರಿಯ ಪಠಣದಿಂದ ಜ್ಞಾನ, ಧನ, ಆರೋಗ್ಯ ಮತ್ತು ಎಲ್ಲ ರೀತಿಯ ಲಾಭ ದೊರಕುತ್ತದೆ. ಆದಿಶಂಕರಾಚಾರ್ಯರು ಮಾಡಿದ ತಪಸ್ಸು, ಭಾರತೀಯ ಸಂಸ್ಕೃತಿಯ ವರ್ತಮಾನ ಸ್ವರೂಪದಲ್ಲಿ ಇಂದೂ ಕೂಡಾ ಪ್ರಚಲಿತದಲ್ಲಿದೆ. ಎಲ್ಲವನ್ನು ಅರಿತುಕೊಳ್ಳುವ, ಎಲ್ಲರನ್ನೂ ತನ್ನೊಳಗೆ ಸೆಳೆದುಕೊಳ್ಳುವ, ಎಲ್ಲರನ್ನು ಜತೆ ಜತೆಗೆ ಕೊಂಡೊಯ್ಯುವ ಸಂಸ್ಕೃತಿ ಇದಾಗಿದೆ. ಈ ಸಂಸ್ಕೃತಿಯೇ ನವಭಾರತದ ಆಧಾರವಾಗಿದೆ. ಎಲ್ಲರ ಜತೆಗೆ, ಪ್ರತಿಯೊಬ್ಬರ ಅಭಿವೃದ್ಧಿ (ಸಬ್ ಕೆ ಸಾಥ್, ಸಬ್ ಕಾ ವಿಕಾಸ್) ಎಂಬ ಮಂತ್ರದಲ್ಲಿ ಈ ಸಂಸ್ಕೃತಿ ವಿಶ್ವಾಸವನ್ನಿಟ್ಟಿದೆ.

ಸಹೋದರ, ಸಹೋದರಿಯರೇ, ಆದಿ ಶಂಕರಾಚಾರ್ಯರ ಈ ಸಂದೇಶವನ್ನು, ಪ್ರತಿಯೊಬ್ಬರ ಬಳಿಗೆ ತಲುಪಿಸಲು, ಶ್ರೀ ಶ್ರೀ ಶಂಕರಭಾರತೀ ಮಹಾಸ್ವಾಮೀಜಿ ಅವರು ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಸಂಪೂರ್ಣ ವಿಶ್ವವನ್ನು ಒಂದು ಪರಿವಾರವೆಂದು ಪರಿಗಣಿಸಿ, ಏಕಾತ್ಮ ಭಾವದಿಂದ ಆದಿ ಶಂಕರಾಚಾರ್ಯರ ಸಂದೇಶವನ್ನು ವೇದಾಂತ ಭಾರತಿಯ ಮೂಲಕ ಜನಸಾಮಾನ್ಯರ ಬಳಿಗೆ ತಲುಪಿಸುತ್ತಿದ್ದಾರೆ. ವೇದ, ಉಪನಿಷದ್ ಗಳನ್ನು ಅನೇಕ ಭಾಷೆಗಳಲ್ಲಿ, ಅನೇಕ ಪುಸ್ತಕಗಳ ಪ್ರಕಾಶನದ ಮೂಲಕ ಅವರು ನಿರಂತರವಾಗಿ ಗುರುತಿಸಿಕೊಂಡಿದ್ದು, ಈ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಮಿತ್ರರೇ, ಭಾರತದ ಆಧ್ಯಾತ್ಮಿಕ ಮಹಿಮೆ ಮತ್ತು ಅತಿ ಪುರಾತನ ಸಂದೇಶವನ್ನು ಎಷ್ಟು ಹೆಚ್ಚು ಜನ ತಿಳಿದುಕೊಳ್ಳುತ್ತಾರೋ ಅಷ್ಟೂ ಅಧಿಕ ರೀತಿಯಲ್ಲಿ ವಿಶ್ವಕ್ಕೆ ಒಳಿತಾಗುತ್ತದೆ. ಗೊಂದಲಮಯ ಸ್ಥಿತಿಯಲ್ಲಿರುವ ಮಾನವ ಜಾತಿ, ಅನೇಕ ಸಂಕಟಗಳಿಗೆ ಸಿಲುಕಿರುವ ಮಾನವ ಸಂಕುಲ, ನೀನು ಹೆಚ್ಚೋ, ನಾನು ಹೆಚ್ಚೋ, ನಿನ್ನ ಹಾದಿ ಮೋಕ್ಷಕ್ಕೆ ಎಡೆ ಮಾಡಿಕೊಡುವುದೋ, ನನ್ನ ಹಾದಿ ಮೋಕ್ಷದೆಡೆಗೆ ಕೊಂಡೊಯ್ಯುವುದೋ, ಎಂಬ ಸ್ಥಿತಿಯಲ್ಲಿ ಮಾನವ ಸಂಕುಲ ಸಿಲುಕಿರುವಾಗ, ಆದಿ ಶಂಕರಾಚಾರ್ಯರ ಅದ್ವೈತ ಸಿದ್ಧಾಂತ, ಎಲ್ಲಿ ದ್ವೈತವಿರುವುದಿಲ್ಲವೋ ಅದೇ ಅದ್ವೈತ, ಎಲ್ಲಿ ದ್ವೈತವಿರುವುದಿಲ್ಲವೋ ಅಲ್ಲಿ ಸಂಘರ್ಷಕ್ಕೆ ಆಸ್ಪದವಿರುವುದಿಲ್ಲ. ಸಂಪೂರ್ಣ ವಿಶ್ವದ ದೇಶಗಳ ಜೀವನ ಪದ್ಧತಿಯಲ್ಲಿ ಯಾವುದೇ ರೀತಿಯ ತೊಡಕುಗಳುಂಟಾದಾದ ಸಂದರ್ಭದಲ್ಲಿ ವಿಶ್ವದ ಗಮನ ಭಾರತ ಸಂಸ್ಕೃತಿ ಮತ್ತು ಸಭ್ಯತೆಯೆಡೆಗೆ ಬಂದು ನಿಲ್ಲುತ್ತದೆ. ಒಂದು ರೀತಿಯಲ್ಲಿ ವಿಶ್ವದ ಎಲ್ಲ ಸಮಸ್ಯೆಗಳಿಗೆ ಉತ್ತರ ನಮ್ಮ ಪರಂಪರೆಗಳಿಂದ ದೊರಕುತ್ತದೆ, ನಮ್ಮ ಸಂಸ್ಕೃತಿಯಲ್ಲಿ ದೊರಕುತ್ತದೆ. ನಾವು ಕೇವಲ ಮಾತನಾಡುವುದಿಲ್ಲ, ಮಾತನಾಡಿದ ರೀತಿಯಲ್ಲಿ ಜೀವನ ಸಾಗಿಸುವ ಸಂಸ್ಕಾರ ನಮಗೆ ದೊರೆತಿದೆ.

ಓಂ ಸಹ ನಾವವತು, ಸಹ ನೌ ಭುನಕ್ತು,
ಸಹ ವೀರ್ಯಂ ಕರವಾವಹೈ, ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ,
ಓಂ ಶಾಂತಿ: ಶಾಂತಿ: ಶಾಂತಿ:

ಎಲ್ಲರ ಅಭಿವೃದ್ಧಿಯಾಗಲಿ, ಎಲ್ಲರಿಗೂ ಶಕ್ತಿ ಲಭಿಸಲಿ, ನಾವು ಎಂದೂ ನನಗೆ ಒಳಿತಾಗಲಿ, ನನಗೆ ಶಕ್ತಿ ಲಭಿಸಲಿ ಎಂದು ಕೇಳುವುದಿಲ್ಲ, ಮಂದಿರಕ್ಕೆ ಭೇಟಿ ನೀಡುವವರಿಗೆ ಮಾತ್ರ ಒಳಿತಾಗಲಿ, ಅವರಿಗೆ ಮಾತ್ರ ಶಕ್ತಿ ದೊರಕಲಿ ಎಂದು ಕೇಳಿಕೊಳ್ಳುವುದಿಲ್ಲ, ಎಲ್ಲರಿಗೂ ಒಳಿತಾಗಲಿ, ಎಲ್ಲರಿಗೂ ಶಕ್ತಿ ಲಭಿಸಲಿ.. “ಓಂ ಸಹ ನಾವವತು, ಸಹ ನೌ ಭುನಕ್ತು..” ಇದು ನಮ್ಮ ಸಂಸ್ಕಾರ, ಯಾರೂ ಯಾರನ್ನೂ ದ್ವೇಷಿಸದಿರಿ.

ನಾನು ಈ ಸಂದರ್ಭದಲ್ಲಿ ವೇದಾಂತ ಭಾರತಿಯ ಒಂದು ಆಯೋಜನೆಯ ಬಗ್ಗೆ ವಿಶೇಷವಾಗಿ ಉಲ್ಲೇಖ ಮಾಡಬಯಸುತ್ತೇನೆ – “ವಿವೇಕದೀಪನಿ” ಮತ್ತು “ವಿವೇಕ ಉತ್ಕರ್ಷನಿ” ಸ್ಪರ್ಧೆ. ಆದಿಶಂಕರಾಚಾರ್ಯರ ಈ ಮಾತುಗಳ ಬಗ್ಗೆ ಬಹಳ ಕಡಿಮೆ ಜನರಿಗೆ ತಿಳಿದಿದೆ. ನಮ್ಮ ದೇಶದಲ್ಲಿ , ನಮ್ಮ ಸಂಸ್ಕೃತಿ ಮತ್ತು ನಮ್ಮ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಬಲಹೀನಗೊಳಿಸುವ ಅನೇಕ ಪ್ರಯತ್ನಗಳನ್ನು ಬಹಳ ಕಾಲದಿಂದಲೂ ನಡೆಸಿಕೊಂಡು ಬರಲಾಗಿದೆ. ಅವುಗಳನ್ನು ನಷ್ಟಗೊಳಿಸುವ ಅನೇಕ ಪ್ರಯತ್ನಗಳನ್ನು ಮಾಡಲಾಯಿತು. ಬಹಳ ಪ್ರಹಾರಗಳಾದವು, ಆದರೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ನಮ್ಮ ಪರಂಪರೆಯನ್ನು ಕೊನೆಗೊಳಿಸಲು ಯಾರಿಗೂ ಸಾಧ್ಯವಾಗಲಿಲ್ಲ.

ದೀನ್ – ಎ – ಇಲಾಹಿ ಕಾ ಬೇಬಾಕ್ ಬೇಡ,
ನಕ್ಷಾ ಜಿಸ್ಕಾ ಅಕ್ಸ್ – ಎ – ಆಲಮ್ ಮೆ ಪಹುಂಚಾ,
ಕಿಯೇ ಪಾಂಚ್ ಸೌ ಪಾರ್ ಸಾತೋಂ ಸಮುಂದ್ರ್
ನ ಅಮನ್ ಮೇ ಟಿಟ್ಕಾ ನಾ ಕೋಯೀ ಗುಲ್ಜಾಂ ಮೇ ಝಿಝ್ಕಾ
ವೋ ಡೂಬಾ ದೊಹಾಬ್ – ಎ ಮೇಂ ಗಂಗಾ ಕೆ ಅಂದರ್…

ಈ ಸಾಮರ್ಥ್ಯ, ಅಧಿಕ ಕಾಲದ ಗುಲಾಮಗಿರಿಯ ಪ್ರಭಾವದಿಂದ ನಮ್ಮ ಆಧ್ಯಾತ್ಮಿಕ ಜ್ಞಾನದ ಪರಂಪರೆಯು ಪ್ರಮುಖವಾಗಿ ಪುಸ್ತಕಗಳಿಗೆ ಮಾತ್ರ ಸೀಮಿತಗೊಂಡಿರುತ್ತಿತ್ತು. ಕೆಲವು ಪಂಡಿತರ ಬಳಿ ಮಾತ್ರ ಸುರಕ್ಷಿತವಾಗಿರುತ್ತಿತ್ತು. ಸ್ವಾತಂತ್ರದ ನಂತರ ಎಷ್ಟು ಪ್ರಯತ್ನಗಳಾಗಿರಬೇಕಿತ್ತೋ ಆ ಪ್ರಯತ್ನಗಳೂ ಕೂಡಾ ನಡೆಯಲಿಲ್ಲ. ಇಂತಹ ಸಂದರ್ಭಗಳಲ್ಲಿ, ಇಂದಿನ ಯುವಜನತೆ ಮೊಬೈಲ್ ಪೋನ್ ಮೂಲಕವೇ ಎಲ್ಲವನ್ನೂ ಓದುತ್ತಿದ್ದಾರೆ. ಇದರಿಂದಾಗಿ ಪುಸ್ತಕಗಳಲ್ಲಿ ಅಡಗಿರುವ ನಮ್ಮ ಜ್ಞಾನದ ಬಗ್ಗೆ ಅವರಿಗೆ ಹೇಗೆ ತಿಳಿಯುತ್ತದೆ. ನಮ್ಮ ಮಹಾನ್ ಪರಂಪರೆಯ ಬಗ್ಗೆ ಅವರಿಗೆ ಪರಿಚಯ ಮಾಡಿಕೊಡುವವರಾರು? ಆದುದರಿಂದ ಶಾಲಾ ಮಕ್ಕಳಿಗೆ “ವಿವೇಕ ದೀಪಿನಿ” ಕಾರ್ಯಕ್ರಮದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಹೇಳಬೇಕಿದೆ ಮತ್ತು ಅವರಿಗೆ ಪ್ರಶ್ನೋತ್ತರ ಸ್ಪರ್ಧೆ ಆಯೋಜಿಸುವುದು ಇವೆಲ್ಲ ಸ್ವಾಮೀಜಿಯವರ ಒಂದು ಅತ್ಯುತ್ತಮ ಹೆಜ್ಜೆಯೆಂದು ನಾನು ಭಾವಿಸುತ್ತೇನೆ. ಇದರಿಂದ ತಮ್ಮ ಮೂಲಕ ಮುಂದಿನ ಪೀಳಿಗೆಗೆ ದೊಡ್ಡ ಸೇವೆ ಸಲ್ಲಿಕೆಯಾಗುತ್ತಿದೆ.

ದೇಶದ ಬೇರೆ ಬೇರೆ ಪ್ರದೇಶಗಳಲ್ಲಿರುವ ಯುವಜನತೆ ಒಬ್ಬರನ್ನೊಬ್ಬರು ಅರಿತುಕೊಂಡು, ತಮ್ಮ ಪರಂಪರೆಯನ್ನು ತಿಳಿದುಕೊಳ್ಳಬೇಕಾದು ಬಹಳ ಅಗತ್ಯ. ಪರಸ್ಪರರ ಜೀವನ, ಆಹಾರ ಪದ್ಧತಿ, ಪರಸ್ಪರರ ಭಾಷೆ, ಮಾತನಾಡುವ ಶೈಲಿ, ಪರಸ್ಪರರ ಭಾಷೆಯಲ್ಲಿನ ಮಹತ್ವಪೂರ್ಣ ಶಬ್ಧಗಳ ಮಾಹಿತಿ, ವಿವಿಧತೆಯಲ್ಲಿ ಏಕತೆ ಇದು ಭಾರತ ದೇಶದ ವಿಶೇಷತೆಯಾಗಿದೆ. ಇದನ್ನು ಹೇಳುವುದಕ್ಕೆ ಬಹಳ ಸುಂದರವಾಗಿ ಕಾಣುತ್ತದೆ. ಆದರೆ ನಾವು ಸಿಂಗಾಪುರ್ ಬಗ್ಗೆ ಎಷ್ಟು ತಿಳಿದುಕೊಂಡಿದ್ದೇವೆಯೋ ಅಷ್ಟು ಬಂಗಾಳದ ಬಗ್ಗೆ ತಿಳಿದುಕೊಂಡಿರುವುದಿಲ್ಲ. ನಾವು ದುಬೈ ಬಗ್ಗೆ ಎಷ್ಟು ಅರಿತಿದ್ದೇವೋ ದೆಹರಾಡೂನ್ ಬಗ್ಗೆ ಅಷ್ಟು ತಿಳಿದಿರುವುದಿಲ್ಲ. ಹೀಗೆ ನಾವು ನಮ್ಮವರನ್ನು ಮರೆತಿರುತ್ತೇವೆ. ಆದುದರಿಂದ ನಾವು ಕಳೆದ ವರ್ಷ ಸರ್ದಾರ ಪಟೇಲ್ ಜಯಂತಿಯಂದು ಪ್ರಾರಂಭ ಮಾಡಿದ “ಒಂದು ಭಾರತ ಶ್ರೇಷ್ಠ ಭಾರತ” ಯೋಜನೆಯ ಮೂಲಕ ನಮ್ಮ ಪ್ರಯತ್ನವನ್ನು ಪ್ರಾರಂಭಿಸಿದ್ದೇವೆ. ನಮ್ಮ ವಿದ್ಯಾರ್ಥಿಗಳ ಮಧ್ಯೆ ಇಂತಹ ಸ್ಪರ್ಧೆಗಳು ನಡೆಯಲಿ, ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿ ಎಂದು ಬಯಸುತ್ತೇನೆ. ದೇಶದ ಬೇರೆ ಬೇರೆ ಪ್ರದೇಶಗಳು, ಬೇರೆ ಬೇರೆ ಸಂಪ್ರದಾಯಗಳು, ಬೇರೆ ಬೇರೆ ಜೀವನ ಶೈಲಿ ಇವೆಲ್ಲವೂ ಹಿಂದೂಸ್ತಾನದ ಬೇರೆ ಬೇರೆ ಪ್ರದೇಶಗಳ ಜನರು ಅರಿಯುವಂತಾಗಬೇಕು.

ಭಾರತೀಯ ದರ್ಶನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಅಂತಿಮ ಗುರಿ ಮೋಕ್ಷ ಪ್ರಾಪ್ತಿಯಾಗಿರುತ್ತದೆ. ವೇದ ಮತ್ತು ಉಪನಿಷದ್ ನಿಂದ ನಿರ್ಮಾಣವಾದ ಈ ದರ್ಶನ “ವ್ಯಕ್ತಿ” ಅಂದರೆ ಒಬ್ಬ, “ಸಮಸ್ತಿ” ಅಂದರೆ ಸಮಾಜ, “ರಚನೆ” ಅಂದರೆ ಸೃಷ್ಟಿ ಅಥವಾ ವಿಶ್ವ ಮತ್ತು “ಪರಮೇಷ್ಟಿ” ಅಂದರೆ ಈಶ್ವರ ಇವುಗಳು ಒಂದಕ್ಕೊಂದು ಸೇರಿಕೊಂಡಿದೆಯೆಂದು ಭಾವಿಸಲಾಗುತ್ತದೆ. ನಾವು ಇವುಗಳನ್ನು ತುಂಡುಗಳನ್ನಾಗಿ ಕಾಣುವುದಿಲ್ಲ. ಒಂದು ಅಖಂಡ ರೂಪವನ್ನು ಕಾಣುತ್ತೇವೆ. ಏಕಾತ್ಮ ರೂಪವನ್ನು ನೋಡುತ್ತೇವೆ. ಈ ಭೂಮಿಗೆ ಜಗತ್ ಮಾತೆಯ ರೂಪದಲ್ಲಿ ಈ ದರ್ಶನದ ಮೂಲಕ ಮಾನ್ಯತೆ ದೊರೆತಿದೆ. ಭೂಮಿ ಎಲ್ಲರದು ಎಂದು ಈ ದರ್ಶನ ಹೇಳುತ್ತದೆ. ಭೂಮಿ ಮಾತೆಯ ಸ್ವರೂಪ. ಈ ದರ್ಶನದ ಮೂಲಕ ಹೊರಬಿದ್ದ ವಸುದೈವಕುಟುಂಬಕಂ, ಸಂಪೂರ್ಣ ವಿಶ್ವ ಒಂದು ಕುಟುಂಬ ಎಂಬ ಭಾವನೆಯನ್ನು ಹೊರಹಾಕುತ್ತದೆ.

ಇದೇ ರೀತಿ ಸೌಂದರ್ಯ ಲಹರಿಯಲ್ಲೂ ಕೂಡಾ ಒಂದು ಮಂತ್ರವಿದೆ – “ಫಲ: ಅಪಿವಾಂಛಾ, ಸಮಾಧಿಕಮ್” ಅಂದರೆ ಭೂಮಿಯಿಂದ ನಾವು ಎಷ್ಟು ಬೇಡುತ್ತೇವೋ, ನಮ್ಮ ಇಚ್ಚೆಗಿಂತ ಅಧಿಕವಾಗಿ ಅದು ನಮಗೆ ನೀಡುತ್ತದೆ. ತುಂಬಾ ಸರಳ ಶಬ್ಧಗಳಲ್ಲಿ ಎಷ್ಟು ದೊಡ್ಡ ಸತ್ಯ. ಪ್ರಕೃತಿಯಿಂದ ನಮಗೆ ಸಾಕಷ್ಟು ನೀರು, ಗಾಳಿ, ನದಿ, ಅನ್ನ, ಖನಿಜ, ಗಿಡ ಮರಗಳು, ಹೀಗೆ ಸಾಕಷ್ಟು ಸಂಗ್ರಹ ನಮಗೆ ದೊರೆತಿದೆ. ಇವುಗಳನ್ನು ಉಳಿಸಿಕೊಳ್ಳುವ ಜವಾಬ್ಧಾರಿ ನಮ್ಮ ಮೇಲಿದೆ.

ಇದೇ ವಿಚಾರ ನಮ್ಮ ಪರಂಪರೆಯಲ್ಲಿದೆ. ನಮ್ಮಲ್ಲಿ ಪ್ರಕೃತಿಯ ಉಪಯೋಗವನ್ನು ಪಡೆಯುವುದಷ್ಟೇ ಪ್ರಕೃತಿಯಿಂದ ದೊರೆಯುವ ಎಲ್ಲ ಉತ್ಪನ್ನಗಳ ಸಮತೋಲಿತ ಉಪಯೋಗ ಪಡೆಯುವ ಬಗ್ಗೆ ಒತ್ತು ನೀಡಲಾಗಿದೆ. ಪ್ರಕೃತಿಯ ಶೋಷಣೆಯನ್ನು ನಮ್ಮಲ್ಲಿ ಅಪರಾಧವೆಂದು ಪರಿಗಣಿಸಲಾಗಿದೆ. ಪ್ರಕೃತಿಯಲ್ಲಿ ದೊರೆಯುವ ಉತ್ಪನ್ನಗಳ ಉಪಯೋಗ ಪಡೆಯುವುದು ಮಾನವನ ಅಧಿಕಾರ. ನಮ್ಮ ಪರಂಪರೆ ನಮಗೆ ಇದನ್ನು ಕಲಿಸಿದೆ. ಇದೇ ವಿಚಾರ ನಮ್ಮ ಶಾಸನಗಳಲ್ಲಿ, ಕಾನೂನುಗಳಲ್ಲಿ ನಮಗೆ ಕಂಡು ಬರುತ್ತದೆ.

ಸಹೋದರ, ಸಹೋದರಿಯರೇ, ಭಾರತ ಕೇವಲ ತನಗಾಗಿ ಅಲ್ಲ, ವಿಶ್ವಾದ್ಯಂತ ನ್ಯಾಯ, ಘನತೆ, ಅವಕಾಶ ಮತ್ತು ಸಮೃದ್ಧಿಗಾಗಿ ಸದಾ ಪ್ರಯತ್ನಶೀಲವಾಗಿದೆ. ಭಾರತದ ಪ್ರಯತ್ನಗಳ ಫಲವಾಗಿಯೇ ಕಳೆದ ವರ್ಷ ಅಂತಾರಾಷ್ಟ್ರೀಯ ಸೌರ ಸಂಘಟನೆ ಸ್ಥಾಪನೆಯಾಗಿರುವುದು ತಮಗೆಲ್ಲರಿಗೂ ತಿಳಿದಿದೆ. ಸೌರ ಶಕ್ತಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಇಂದು ಕೇಂದ್ರದ ಯೋಜನೆಗಳಲ್ಲಿ ಪ್ರಕೃತಿಯ ರಕ್ಷಣೆಗಾಗಿ ಕೈಗೊಂಡ ಕ್ರಮಗಳನ್ನು ತಾವು ಕಾಣುತ್ತೀರಿ. ಸೌರ ಶಕ್ತಿ, ಜಲ ವಿದ್ಯುತ್, ಪವನ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡುವ ಕಾರ್ಯದಲ್ಲಿ ಇಂದು ಎಷ್ಟು ಕಾರ್ಯ ನಡೆಯುತ್ತಿದೆಯೋ, ಬಹುಶ: ಹಿಂದೆಂದೂ ಇಷ್ಟು ಕೆಲಸ ಆಗಿರಲಿಲ್ಲ.

ಪ್ರಪಂಚದ ಅತ್ಯಂತ ದೊಡ್ಡ ನವೀಕರಿಸಬಹುದಾದ ಸಾಮರ್ಥ್ಯ ವಿಸ್ತರಣಾ ಕಾರ್ಯಕ್ರಮ ಇಂದು ಯಾವುದಾದರೂ ದೇಶದಲ್ಲಿ ನಡೆಯುತ್ತಿದೆ ಎಂದಾದರೆ ಅದು ಸೌಂದರ್ಯ ಲಹರಿ ಪಠಿಸುವವರ ಭಾರತ ದೇಶದಲ್ಲಿ ಮಾತ್ರ.

2030 ರ ಒಳಗೆ ದೇಶದ ಶೇಕಡಾ 40 ರಷ್ಟು ವಿದ್ಯುತ್ ಬೇಡಿಕೆಯನ್ನು ನಾನ್ ಫಾಸಿಲ್ ಇಂಧನ ಆದಾರಿತ ನವೀಕರಿಸಬಹುದಾದ ಶಕ್ತಿಯಿಂದ ಪಡೆಯುವ ಬಗ್ಗೆ ಸರ್ಕಾರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ. 2022ರಲ್ಲಿ ಭಾರತ ಸ್ವಾತಂತ್ರದ 75 ನೇ ವರ್ಷಾಚರಣೆ ಸಂದರ್ಭದಲ್ಲಿ 175 ಗಿಗಾವ್ಯಾಟ್, ನಾನು ಮೆಗಾವ್ಯಾಟ್ ಎಂದು ಹೇಳುತ್ತಿಲ್ಲ, ಮೆಗಾವ್ಯಾಟ್ ಎಂಬುದು ಕಳೆದು ಹೋದ ದಿನಗಳ ಮಾತು, ಇಂದು ಹಿಂದೂಸ್ತಾನ ಗಿಗಾವ್ಯಾಟ್ ಬಗ್ಗೆ ಯೋಚಿಸುತ್ತಿದೆ. ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನದ ಉತ್ಪಾದನೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಪ್ರಯತ್ನದ ಫಲವಾಗಿ, 22 ಸಾವಿರ ಮೆಗಾವ್ಯಾಟ್ ಗಿಂತ ಅಧಿಕ ಕ್ಷಮತೆಯ ನವೀಕರಿಸಬಹುದಾದ ಇಂಧನವನ್ನು ಪವರ್ ಗ್ರಿಡ್ ನೊಂದಿಗೆ ಜೋಡಿಸಲಾಗಿದೆ. ಆದರೆ, ಕಳೆದ ಸರ್ಕಾರದ ಕೊನೆಯ ಮೂರು ವರ್ಷಗಳಲ್ಲಿ ಕೇವಲ 12 ಸಾವಿರ ಮೆಗಾವ್ಯಾಟ್ ಕ್ಷಮತೆಯನ್ನು ನವೀಕರಿಸಬಹುದಾದ ಇಂಧನ ವ್ಯವಸ್ಥೆಯಡಿ ಜೋಡಿಸಲಾಗಿತ್ತು. ಇದೇ ರೀತಿ ಹಿಂದಿನ ಸರ್ಕಾರದ ಕಡೆಯ ಮೂರು ವರ್ಷಗಳ ಅವಧಿಯಲ್ಲಿ ನವೀಕರಿಸಬಹುದಾದ ಇಂಧನಕ್ಕಾಗಿ ಸುಮಾರು 4 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ನಾವು ಬಂದ ನಂತರದ ಮೂರು ವರ್ಷಗಳ ಒಳಗೆ ಈ ವಲಯದಲ್ಲಿ ಸರಿ ಸುಮಾರು 11 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ನಾವು ವೆಚ್ಚ ಮಾಡಿದ್ದೇವೆ.

ವರ್ತಮಾನ ಸಮಯದಲ್ಲಿ ನಮ್ಮ ದೇಶದಲ್ಲಿ ಸುಮಾರು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಕ್ಷಮತೆ ಇದೆ. ಇದರಲ್ಲಿ ಕಲ್ಲಿದ್ದಲಿನಿಂದ, ನೀರಿನಿಂದ, ಸೌರ ಮತ್ತು ಪವನ ಶಕ್ತಿಯಿಂದ ದೊರೆಯುವ ವಿದ್ಯುತ್ ಕೂಡಾ ಸೇರಿದೆ. ಸರ್ಕಾರದಲ್ಲಿ ಸಧ್ಯಕ್ಕೆ ದೊರಕುತ್ತಿರುವ ಸಂಪನ್ಮೂಲಗಳ ಸರಿಯಾದ ಉಪಯೋಗ ಪಡೆದುಕೊಂಡರೆ 750 ಗೀಗಾವ್ಯಾಟ್ ವಿದ್ಯುತ್ ಅನ್ನು ಕೇವಲ ಸೌರಶಕ್ತಿಯಿಂದ ಪಡೆದುಕೊಳ್ಳಬಹುದು ಎಂದು ತಿಳಿದರೆ ತಮಗೆ ಆಶ್ಚರ್ಯವಾಗಬಹುದು. ಸೂರ್ಯ ಶಕ್ತಿಯಿಂದ ಪಡೆದುಕೊಳ್ಳಬಹುದು. ಇದು ನಮ್ಮ ದೇಶದ ಶಕ್ತಿಯಾಗಿದ್ದು, ಇದರ ಸರಿಯಾದ ಉಪಯೋಗವನ್ನು ಪಡೆದುಕೊಳ್ಳಬೇಕಾಗಿದೆ.

ಈ ದಿಶೆಯಲ್ಲಿ ಸರ್ಕಾರ ನಿರಂತರ ಕಾರ್ಯ ಪ್ರವೃತ್ತವಾಗಿದೆ. ಇದಕ್ಕಾಗಿ ದೇಶಾದ್ಯಂತ ಸೋಲಾರ್ ಪಾರ್ಕ್ ಗಳ ನಿರ್ಮಾಣ ಮಾಡಲಾಗುತ್ತಿದೆ. ಛಾವಣಿಯ ಮೇಲೆ ಸೌರ ವಿದ್ಯುತ್ ಕಾರ್ಯಕ್ರಮಕ್ಕೆ ಬಲ ನೀಡುವುದಕ್ಕಾಗಿ ಕಟ್ಟಡ ನಿರ್ಮಾಣ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಸರ್ಕಾರಿ ಕಟ್ಟಡಗಳಲ್ಲಿ ಸೌರ ಘಟಕ ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಸೌರ ಘಟಕಗಳಿಗೆ ಮೂಲ ಸೌಕರ್ಯ ದರ್ಜೆ ನೀಡಲಾಗಿದೆ. ಇದಕ್ಕಾಗಿ ಹೆಚ್ಚಿನ ಅವಧಿಯ ಸಾಲಗಳನ್ನೂ ನೀಡಲಾಗುತ್ತಿದೆ. ಬೆಂಗಳೂರಿನ ನೆಲ ಸ್ಟಾರ್ಟ್ ಅಪ್ ಯೋಜನೆಯ ನೆಲವಾಗಿದೆ. ಇಲ್ಲಿನ ಯುವಜನತೆ ಸಂಶೋಧನೆಗಳನ್ನು ಮಾಡುತ್ತಾರೆ. ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾರೆ. ನಾನು ಬೆಂಗಳೂರಿನ ಸ್ಟಾರ್ಟ್ ಅಪ್ ನೊಂದಿಗೆ ಗುರುತಿಸಿಕೊಂಡಿರುವ ಯುವಜನತೆಗೆ ಬನ್ನಿ ನಾವೆಲ್ಲರೂ ಒಂದಾಗಿ “ಶುದ್ಧ ಅಡುಗೆ” ಆಂದೊಲನವನ್ನು ಪ್ರಾರಂಭ ಮಾಡೋಣ ಎಂದು ಆಹ್ವಾನ ನೀಡುತ್ತೇನೆ. ಬಡವರ ಮನೆಗಳಲ್ಲಿ ಕೂಡಾ ಸೌರ ಶಕ್ತಿಯ ಮೂಲಕ ಸೂರ್ಯ ಶಕ್ತಿಯ ಮೂಲಕ ಅಡುಗೆ ಮಾಡುವ ಅತಿ ಕಡಿಮೆ ದರದ ಒಲೆಯನ್ನು ನಾವು ಹೇಗೆ ನಿರ್ಮಾಣ ಮಾಡಬಹುದು ಎಂಬುದರ ಬಗ್ಗೆ ಚಿಂತಿಸೋಣ. ಸೌರ ಕುಕ್ಕರ್ ಹಳೆಯ ವಿಧಾನವಾಗ್ದ್ದ್, ಇಂದಿನ ಕುಟುಂಬಗಳಲ್ಲಿ ಅಷ್ಟು ಸಮಯ ಇರುವುದಿಲ್ಲ. ಅವರು ಹೇಗಿದ್ದರು ಒಲೆಯನ್ನು ಬಳಸುತ್ತಾರೆ. ಅವರಿಗೆ ಅನಿಲ ಒಲೆಯನ್ನು ಉಪಯೋಗಿಸುವುದು ಅವರಿಗೆ ಇಂದು ಸಾಧ್ಯವಾಗಿದೆ. ಬೆಂಗಳೂರಿನ ಯುವಜನತೆ, ಸ್ಟಾರ್ಟ್ ಅಪ್ ಯೋಜನೆ ವಿಶ್ವದ ಯುವಜನತೆಗೆ ಹಿಂದೂಸ್ತಾನ ಒಂದು ದೊಡ್ಡ ಮಾರುಕಟ್ಟೆಯಾಗಿದ್ದು, ಯಾರು ಈ ಶುದ್ದ ಅಡುಗೆಯ ಈ ಕ್ಷೇತ್ರಕ್ಕೆ ಕಾಲಿಡುತ್ತಾರೋ, ಅವರಿಗೆ ದೇಶದ ಬಡ ತಾಯಂದಿರ ಆಶೀರ್ವಾದ ಕೂಡಾ ಲಭಿಸುತ್ತದೆ. ಅರಣ್ಯದಲ್ಲಿ ವಾಸಿಸುವ ಜನರಿಗೂ ಕೂಡಾ ಅಡುಗೆ ಕಾರ್ಯಕ್ಕಾಗಿ ಮರಗಳನ್ನು ಕತ್ತರಿಸುವ ಅವಶ್ಯಕತೆ ಬರುವುದಿಲ್ಲ. ಸೌರ ವಿದ್ಯುತ್ ನಿಂದ ಅವರ ಮನೆಯ ಒಲೆ ಉರಿಯುತ್ತದೆ. ಅವರು ಕಡಿಮೆ ಸಮಯದಲ್ಲಿ ಅಡುಗೆ ಮಾಡಿಕೊಂಡು ಮಕ್ಕಳಿಗೂ ಉಣಬಡಿಸಬಹುದಾಗಿದೆ. ನವೀನತೆಯ ಈ ಕಾರ್ಯ ದೇಶದ ಯುವಜನತೆಯ ಸಹಕಾರಿಯಾಗಬಲ್ಲದು. ಯಾವತ್ತು ದೇಶದ ಹೆಚ್ಚಿನ ಸಂಸ್ಥೆಗಳು ತಮ್ಮ ವಿದ್ಯುತ್ ಅನ್ನು ಅವಶ್ಯಕತೆಗನುಗುಣವಾಗಿ ತಾವೇ ಉತ್ಪಾದಿಸುತ್ತಾರೋ ಅಂದು ಸಮಾಜದ ಎಲ್ಲ ಹಂತಗಳಲ್ಲಿ ಎಂತಹ ಪರಿಣಾಮ ಉಂಟಾಗುವುದು ಎಂಬುದನ್ನು ತಾವೇ ಗಮನಿಸಬಹುದು.

ಮಿತ್ರರೇ, ಹೊಸ ವಿಚಾರಧಾರೆಯ ಮೂಲಕ ಯಾವ ರೀತಿ ಪರಿಸರ ರಕ್ಷಣೆಯ ಜತೆಗೆ ದೇಶ ಮತ್ತು ಜನತೆಗೆ ಹಣದ ಉಳಿತಾಯವಾಗುತ್ತಿದೆ ಇದರ ಉದಾಹರಣೆಯನ್ನು ನಾನು ನಿಮಗೆ ನೀಡಬಯಸುತ್ತೇನೆ. ಸಹೋದರ, ಸಹೋದರಿಯರೇ, ಎಲ್ ಇ ಡಿ ಬಲ್ಬ್ ಬೆಲೆ ಈ ಮೊದಲು 350 ರೂಪಾಯಿಗೂ ಅಧಿಕವಾಗಿತ್ತು, ಈಗ ಅದು ಉಜಾಲಾ ಯೋಜನೆಯಡಿ 40-45 ರೂಪಾಯಿಗೆ ದೊರಕುತ್ತಿದೆ. ನಮ್ಮ ಸರ್ಕಾರ ಬಂದ ನಂತರ ಇಲ್ಲಿಯವರೆಗೆ ದೇಶದಲ್ಲಿ ಸುಮಾರು 27 ಕೋಟಿಗೂ ಅಧಿಕ ಎಲ್ ಇ ಡಿ ಬಲ್ಬ್ ಗಳ ವಿತರಣೆ ಮಾಡಲಾಗಿದೆ. ಕರ್ನಾಟಕದಲ್ಲೂ ಸಹ ಸರಿಸುಮಾರು ಎರಡು ಕೋಟಿ ಎಲ್ ಇ ಡಿ ಬಲ್ಬ್ ಗಳ ವಿತರಣೆ ಮಾಡಲಾಗಿದೆ. ಒಂದು ಬಲ್ಬ್ ನ ಬೆಲೆ ಸರಾಸರಿ 250 ರೂಪಾಯಿಯಷ್ಟು ಕಡಿಮೆಯಾಗಿದೆ ಎಂದುಕೊಂಡರೆ ದೇಶದ ಮಧ್ಯಮ ವರ್ಗದ ಜನತೆ ಸುಮಾರು 7 ಸಾವಿರ ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಬಲ್ಬ್ ಎಲ್ಲ ಮನೆಗಳ ವಿದ್ಯುತ್ ಬಿಲ್ ಅನ್ನೂ ಕೂಡಾ ಕಡಿಮೆ ಮಾಡಿದೆ. ಯಾರ ಮನೆಯಲ್ಲಿ ಎಲ್ ಇ ಡಿ ಬಲ್ಬ್ ಇದೆಯೋ ಅವರ ಮನೆಯ ವಿದ್ಯುತ್ ಬಿಲ್ ನಿಶ್ಚಿತವಾಗಿಯೂ ಕಡಿಮೆ ಆಗಿರುತ್ತದೆ. ಎಲ್ ಇ ಡಿ ಬಲ್ಬ್ ಗಳ ಬಳಕೆಯಿಂದ ವಿದ್ಯುತ್ ಬೇಡಿಕೆ ತಗ್ಗಿದೆ, ವಿದ್ಯುತ್ ಬಿಲ್ ಕಡಿಮೆಯಾಗಿದೆ. ದೇಶದ ಮಧ್ಯಮ ವರ್ಗದ ಕುಟುಂಬದ ಜೇಬಿನಿಂದ ಒಂದು ವರ್ಷದಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿಗಳ ಉಳಿತಾಯವಾಗಿದೆ. ಎಲ್ ಇ ಡಿ ಬಲ್ಬ್ ಉಪಯೋಗದಿಂದ ಸ್ವಾಭಾವಿಕವಾಗಿಯೇ ವಿದ್ಯುತ್ ಬಳಕೆಯೂ ಕೂಡಾ ಕಡಿಮೆಯಾಗಿದೆ. ವಿದ್ಯುತ್ ಬಳಕೆಯ ಉಳಿತಾಯವೆಂದರೆ ಸ್ಥಾಪಿತ ಸಾಮರ್ಥ್ಯದಲ್ಲಿ ಸುಮಾರು 7000 ಮೆಗಾವ್ಯಾಟ್ ಗಳ ಕಡಿಮೆ ಅವಶ್ಯಕತೆ ಉಂಟಾಗುತ್ತದೆ. 7000 ಮೆಗಾವ್ಯಾಟ್ ವಿದ್ಯುತ್ ಉಳಿತಾಯವೆಂದರೆ, ನಾವು 7000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಬೇಕೆಂದರೆ ಸುಮಾರು 35 ರಿಂದ 40 ಸಾವಿರ ಕೋಟಿ ರೂಪಾಯಿಗಳ ವೆಚ್ಚ ತಗಲುತ್ತದೆ. ಕೇವಲ ವಿದ್ಯುತ್ ಉಳಿತಾಯದಿಂದ ನಾವು 35-40 ಸಾವಿರ ಕೋಟಿ ರೂಪಾಯಿಗಳನ್ನು ದೇಶಕ್ಕೆ ಉಳಿತಾಯ ಮಾಡಿದ್ದೇವೆ. ಕೇವಲ ವಿಧಾನವನ್ನು ಬದಲಿಸಿ ಕಾರ್ಯ ನಿರ್ವಹಿಸಿದ್ದರಿಂದ ಕೇವಲ ಒಂದು ಯೋಜನೆಯ ಮೂಲಕ ದೇಶದ ಮಧ್ಯಮ ವರ್ಗದ ಜನರ ಹಣ ಉಳಿತಾಯವಾಯಿತು, ಬಲ್ಬ್ ಖರೀದಿಯಿಂದ ಹಣ ಉಳಿತಾಯವಾಯಿತು, ವಿದ್ಯುತ್ ಉಳಿತಾಯದಿಂದ ದೇಶದ ಮಧ್ಯಮ ವರ್ಗದ ಜನರಿಗೆ ಸುಮಾರು 55 ರಿಂದ 60 ಸಾವಿರ ಕೋಟಿ ರೂಪಾಯಿಗಳ ಲಾಭವಾಗಿದೆ.

ಸರ್ಕಾರದ ಪ್ರಯತ್ನದ ಫಲವಾಗಿ ಸ್ಥಳೀಯ ಸಂಸ್ಥೆಗಳು ತಮ್ಮ ತಮ್ಮ ಪ್ರದೇಶದ ಬೀದಿ ದೀಪಗಳಲ್ಲಿ ಎಲ್ ಇ ಡಿ ಬಲ್ಬ್ ಗಳ ಬಳಕೆ ಮಾಡಿಕೊಳ್ಳುತ್ತಿದ್ದಾರೋ ಆ ಪ್ರದೇಶಗಳಲ್ಲಿ ಆರ್ಥಿಕ ಲಾಭವಾಗಿದೆ. ನಾನು ಬನಾರಸ್ ಕ್ಷೇತ್ರದ ಸಂಸತ್ ಸದಸ್ಯ. ನಾನು ಈ ಕಾರ್ಯವನ್ನು ಬನಾರಸ್ ನಲ್ಲಿ ಮಾಡಿದ್ದುದರ ಪರಿಣಾಮ ಸುಮಾರು 15 ಕೋಟಿ ರೂಪಾಯಿ ಉಳಿತಾಯವಾಯಿತು. ಆ ಹಣ ಬೇರೆ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಒಂದು ಅನುಮಾನದ ಪ್ರಕಾರ ಎರಡನೇ ದರ್ಜೆ ನಗರಗಳಲ್ಲಿ, ನಗರ ನಿಗಮಗಳಿಗೆ ಸುಮಾರು 10 ರಿಂದ 15 ಕೋಟಿ ರೂಪಾಯಿಗಳ ಉಳಿತಾಯವಾಗುತ್ತಿದೆ.

ಈ ಹಣವನ್ನು ಇಂದು ನಗರ ಅಭಿವೃದ್ಧಿಗೆ ವಿನಿಯೋಗ ಮಾಡಲಾಗುತ್ತಿದೆ. ಸರ್ಕಾರದ ಈ ಪ್ರಯತ್ನದಿಂದ ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪೆಟ್ರೋಲ್ ಮತ್ತು ಡೀಜಲ್ ಮೇಲೆ ಎಷ್ಟು ಹಣ ವೆಚ್ಚ ಮಾಡುತ್ತಿತ್ತೋ, ಅದನ್ನೂ ಕೂಡಾ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಿದೆ.

ಸಹೋದರ, ಸಹೋದರಿಯರೇ, ಮುಂದಿನ ದಿನಗಳು ಪೆಟ್ರೋಲ್ ಮತ್ತು ಡೀಜಲ್ ಗಳದ್ದಲ್ಲ. ಒಂದಲ್ಲ ಒಂದು ದಿನ ಈ ಪ್ರಾಕೃತಿಕ ಸಂಪತ್ತು ಮುಕ್ತಾಯವಾಗಲಿದೆ. ಮುಂದಿನ ದಿನಗಳು ಸೌರ ಶಕ್ತಿಯದಾಗಿದೆ, ಪವನ ಶಕ್ತಿಯದಾಗಿದೆ, ಜಲ ಶಕ್ತಿಯದಾಗಿದೆ. ನಾವು ಪ್ರಕೃತಿಯನ್ನು ಸಹಜವಾಗಿ ಕಾಪಾಡಿಕೊಳ್ಳುವವರು ಮತ್ತು ಪ್ರಕೃತಿಯನ್ನು ಪೂಜಿಸುವವರಾದ್ದರಿಂದ ನಮಗೆ ಇದು ಬಹಳ ಸುಲಭವಾಗಲಿದೆ. ನಮ್ಮಲ್ಲಿ ಮರಗಳಿಗಾಗಿ ತಮ್ಮ ಪ್ರಾಣವನ್ನು ಕೊಡಲು ಕೂಡಾ ಸಿದ್ಧರಾಗುವ ಪರಂಪರೆ ಇದೆ, ಮರದ ಟೊಂಗೆಗಳನ್ನು ಕತ್ತರಿಸುವ ಮೊದಲು ಕೂಡಾ ದೇವರನ್ನು ಪ್ರಾರ್ಥಿಸಲಾಗುತ್ತದೆ, ಪ್ರಾಣಿಗಳ, ಸಸ್ಯಗಳ ಬಗೆಗಿನ ಸಂವೇದನೆಯನ್ನು ನಮಗೆ ಬಾಲ್ಯದಿಂದಲೇ ಕಲಿಸಿಕೊಡಲಾಗುತ್ತದೆ. ನಾವು ಪ್ರತಿದಿನ ದೇವರ ಆರತಿಯ ನಂತರ ಶಾಂತಿ ಮಂತ್ರದಲ್ಲಿ “ವನ:ಸ್ಪತಯ ಶಾಂತಿ, ಆಪ: ಶಾಂತಿ” ಎಂದು ಹೇಳುತ್ತೇವೆ.

ಕಾಲ ಕಳೆದಂತೆ ನಮ್ಮ ಈ ಪರಂಪರೆಗಳೂ ಕೂಡಾ ಹಲವು ತೊಡರುಗಳಲ್ಲಿ ಸಿಲುಕಿಕೊಂಡಿದೆ ಎಂಬುದೂ ಕೂಡಾ ಅಷ್ಟೇ ಸತ್ಯ. ಇಂದು ಸಾಧು ಸಂತರು ಸಮಾಜವನ್ನು ಈ ದಿಶೆಯಲ್ಲಿ ಕೂಡಾ ಸೆಳೆಯುವ ಪ್ರಯತ್ನ ಮಾಡಬೇಕು. ನಮ್ಮ ಗ್ರಂಥಗಳಲ್ಲಿರುವ, ನಮ್ಮ ಸಂಪ್ರದಾಯಗಳ ಭಾಗವಾಗಿರುವುದನ್ನು ಆಚರಿಸುವುದರಿಂದ ಮಾತ್ರ ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ನಮ್ಮ ಋಗ್ವೇಗ ಸಂಪೂರ್ಣವಾಗಿ ಇದಕ್ಕೆ ಸಮರ್ಪಿತವಾಗಿದೆ.

ಸಹೋದರ, ಸಹೋದರಿಯರೇ, ನಾನಿಂದು ತಮಗೆ ಉಜ್ವಲಾ ಯೋಜನೆಯ ಉದಾಹರಣೆಯನ್ನು ಕೂಡಾ ನೀಡಲು ಬಯಸುತ್ತೇನೆ. ಈ ಯೋಜನೆಯ ಅನ್ವಯ ಸರ್ಕಾರ ದೇಶದ ಸುಮಾರು ಮೂರು ಕೋಟಿಗೂ ಅಧಿಕ ಬಡ ಮಹಿಳೆಯರಿಗೆ ಉಚಿತ ಅನಿಲ ಸಂಪರ್ಕವನ್ನು ನೀಡಿದೆ. ಈ ಮಹಿಳೆಯರ ಬಳಿ ಅನಿಲ ಸಂಪರ್ಕ ಇಲ್ಲದಿದ್ದ ಸಮಯದಲ್ಲಿ, ಈ ಮಹಿಳೆಯರು ಕಟ್ಟಿಗೆ ಅಥವಾ ಸೀಮೇಎಣ್ಣೆಯನ್ನು ಅವಲಂಬಿಸಬೇಕಾಗುತ್ತಿತ್ತು. ಸರ್ಕಾರದ ಈ ನಿರ್ಧಾರದಿಂದ ಅವರ ಜೀವನಮಟ್ಟ ಸುಧಾರಿಸಿರುವುದೇ ಅಲ್ಲದೆ ಈ ಯೋಜನೆ ಪರಿಸರಕ್ಕೆ ಕೂಡಾ ಬಹಳ ಉಪಯೋಗಿಯೆಂದು ಸಾಬೀತಾಗಿದೆ.

ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ದೇಶದಲ್ಲಿ ಸಮಯಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಿವೆ. ವ್ಯಕ್ತಿಗಳಲ್ಲಿ ಪರಿವರ್ತನೆ, ಸಮಾಜದಲ್ಲಿ ಪರಿವರ್ತನೆ. ಆದರೆ ಸಮಯದ ಜತೆ ಜತೆಗೆ ಕೆಲವೊಂದು ಕೆಡುಕುಗಳು ಸಮಾಜದಲ್ಲಿ ಹರಡುತ್ತದೆ. ಈ ರೀತಿಯ ಕೆಡುಕುಗಳು ಸಂಭವಿಸುವ ಸಮಯದಲ್ಲಿ ಅವುಗಳನ್ನು ಸುಧಾರಣೆ ಮಾಡುವ ಕಾರ್ಯವನ್ನು ಸಮಾಜದಲ್ಲಿ ಯಾರಾದರೂ ಪ್ರಾರಂಭ ಮಾಡುತ್ತಾರೆ, ಇದು ನಮ್ಮ ಸಮಾಜದ ವಿಶೇಷತೆ. ನಮ್ಮ ಎಲ್ಲ ಸಂತರು ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಸಮಾಜದ ದುಶ್ಚಟಗಳ ವಿರುದ್ಧ ಜನರನ್ನು ಶಿಕ್ಷಿತರನ್ನಾಗಿ ಮಾಡಿದರು. ಒಂದು ಕಾಲದಲ್ಲಿ ಈ ಬದಲಾವಣೆಯ ನಾಯಕತ್ವ ನಮ್ಮ ದೇಶದ ಸಾಧು ಸಂತರ ಕೈಗಳಲ್ಲಿತ್ತು.

ನಮ್ಮ ದೇಶದಲ್ಲಿ ಸಮಯ ಸಮಯಕ್ಕೆ ಆದಿ ಶಂಕರಾಚಾರ್ಯರು, ಮಹಾನ್ ಸಂತ ಬಸವೇಶ್ವರ ಅವರಂತ ದೇವ ಸಮಾನರಾದ ಮಹಾ ವ್ಯಕ್ತಿಗಳು ದೊರಕಿದರು, ಅವರುಗಳು ಈ ಕೆಡುಕುಗಳನ್ನು ಗಮನಿಸಿದರು, ಅವುಗಳಿಂದ ಮುಕ್ತರಾಗುವ ಮಾರ್ಗವನ್ನು ತೋರಿಸಿದರು, ಇದೇ ನಮ್ಮ ಭಾರತೀಯ ಸಮಾಜದ ಅದ್ಭುತ ಸಾಮರ್ಥ್ಯ.

ತಾವು ಮಾಡುವ ಪೂಜಾ ಸಮಯದಲ್ಲಿ ತಮ್ಮ ದೇವರ ಜತೆ ಜತೆಗೆ ರಾಷ್ಟ್ರ ದೇವತೆಗೂ ಪ್ರಾರ್ಥನೆ ಸಲ್ಲಿಸಿ, ಪೂಜೆಯಲ್ಲಿ ತಮ್ಮ ಇಷ್ಟ ದೇವರ ಜತೆಗೆ ಭಾರತ ಮಾತೆಗೂ ಪೂಜೆ ಸಲ್ಲಿಸಿ. ಅನಕ್ಷರತೆ, ಅಜ್ಞಾನ, ಅಪೌಷ್ಟಿಕತೆ, ಕಪ್ಪುಹಣ, ಭ್ರಷ್ಟಾಚಾರದಂತಹ ಕೆಡುಕುಗಳು ಭಾರತ ಮಾತೆಯನ್ನು ಬಿಗಿಯಾಗಿ ಹಿಡಿದಿಟ್ಟಿದೆ.ಇದರಿಂದ ದೇಶವನ್ನು ಮುಕ್ತವನ್ನಾಗಿ ಮಾಡಲು, ಸಂತರು ಮತ್ತು ಆಧ್ಯಾತ್ಮಿಕ ಸಮಾಜ ಕೂಡಾ ತಮ್ಮ ಪ್ರಯತ್ನಗಳನ್ನು ಹೆಚ್ಚಿಸಿ, ದೇಶಕ್ಕೆ ಒಂದು ಉತ್ತಮ ಮಾರ್ಗವನ್ನು ತೋರಿಸಬೇಕಿದೆ.

ನಮ್ಮೆಲ್ಲರ ಪಾಲ್ಗೊಳ್ಳುವಿಕೆಯಿಂದ, ನಮ್ಮೆಲ್ಲರ ಪ್ರಯತ್ನಗಳಿಂದ ಮಾತ್ರ ನವ ಭಾರತದ ನಿರ್ಮಾಣ ಸಾಧ್ಯ. ಎಲ್ಲರ ಜತೆಗೆ ಎಲ್ಲರ ಪ್ರಯತ್ನದ ಫಲವಾಗಿಯೇ ಎಲ್ಲರ ಅಭಿವೃದ್ಧಿ ಸಾಧ್ಯ.

ನಾನು ಮತ್ತೊಮ್ಮೆ ತಮ್ಮೆಲ್ಲರಿಗೂ ಈ ಸೌಂದರ್ಯ ಲಹರಿಯ ಪಠಣದ ಅದ್ಭುತ ಆಯೋಜನೆಗಾಗಿ ಮತ್ತು ಹತ್ತು ವರ್ಷಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ, ಹತ್ತು ವರ್ಷಗಳು ಅಖಂಡ ಸಾಧನೆಯಾಗಿದೆ, ನಾನು ತಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹತ್ತು ವರ್ಷಗಳ ಕಾಲ ಸಾಧನೆ ಮಾಡಿ, ಇಲ್ಲಿ ಉಪಸ್ಥಿತರಿರುವ ಮತ್ತು ಉಪಸ್ಥಿತರಿಲ್ಲದಿರುವ ಎಲ್ಲ ಸಾಧಕರ ಚರಣಗಳಿಗೆ ನಾನು ವಂದಿಸಿ ಈ ಮಹಾನ್ ತಪಸ್ಸಿಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಶ್ರೀ ಶ್ರೀ ಶಂಕರ ಭಾರತಿ ಮಹಾಸ್ವಾಮಿಗಳಿಗೆ ನಮನ ಸಲ್ಲಿಸುತ್ತಾ ನಾನು ನನ್ನ ಮಾತುಗಳಿಗೆ ವಿರಾಮ ನೀಡುತ್ತೇನೆ.

ನಾನು ಮತ್ತೊಮ್ಮೆ ಈ ಶುಭ ಸಂದರ್ಭದಲ್ಲಿ, ಪವಿತ್ರ ವಾತಾವರಣದಲ್ಲಿ, ಶಂಕರಾಚಾರ್ಯರ ಕಾಲದಿಂದ ನಡೆದುಕೊಂಡು ಬಂದ ಪವಿತ್ರ ಮಂತ್ರದ ಪಠಣ ಸಂದರ್ಭದಲ್ಲಿ ಭಾಗವಹಿಸುವ ಸೌಭಾಗ್ಯ ದೊರಕಿದ್ದು ಒಂದು ಧನ್ಯತೆಯ ಕ್ಷಣವಾಗಿದೆ. ನಾನು ಜೀವನದಲ್ಲಿ ಧನ್ಯತೆಯ ಜತೆ ಜತೆಗೆ ತಮ್ಮೆಲ್ಲರ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ. ತಾಯಿ ಭಾರತಿಗೆ ನಾನು ಏನಾದರೂ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವಂತೆ ತಮ್ಮೆಲ್ಲರ ಆಶೀರ್ವಾದವಿರಲಿ.

ಎಲ್ಲರಿಗೂ ಧನ್ಯವಾದಗಳು.