Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇರಳದ ವರ್ಕಲ ಶಿವಗಿರಿ ಮಠದ 85ನೇ ಶಿವಗಿರಿ ಯಾತ್ರಾರ್ಥಿಗಳ ಉತ್ಸವ ಉದ್ಘಾಟಿಸಿ, ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಿದ ಭಾಷಣದ ಪಠ್ಯ

ಕೇರಳದ ವರ್ಕಲ ಶಿವಗಿರಿ ಮಠದ 85ನೇ ಶಿವಗಿರಿ ಯಾತ್ರಾರ್ಥಿಗಳ ಉತ್ಸವ ಉದ್ಘಾಟಿಸಿ,  ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಿದ ಭಾಷಣದ ಪಠ್ಯ

ಕೇರಳದ ವರ್ಕಲ ಶಿವಗಿರಿ ಮಠದ 85ನೇ ಶಿವಗಿರಿ ಯಾತ್ರಾರ್ಥಿಗಳ ಉತ್ಸವ ಉದ್ಘಾಟಿಸಿ,  ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಿದ ಭಾಷಣದ ಪಠ್ಯ


ಇಂದು 2017ನೇ ಇಸವಿಯ ಕೊನೆಯ ದಿನ ಮತ್ತು ಇಂದು ಶ್ರೀ ನಾರಾಯಣ ಗುರು ಮತ್ತು ವೇದಿಕೆಯ ಮೇಲೆ ಉಪಸ್ಥಿತರಿರುವ ಎಲ್ಲ ಸಂತರ ಆಶೀರ್ವಾದ ಪಡೆಯುವ ಅವಕಾಶ ನನಗೆ ಲಭಿಸಿರುವುದು ನನ್ನ ಪುಣ್ಯ. ಶ್ರೀ ನಾರಾಯಣ ಗುರು ಅವರ ಆಶೀರ್ವಾದದಂತೆ 2018ನೇ ಇಸವಿಯಲ್ಲಿ ಇಡೀ ದೇಶ ಮತ್ತು ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿಯ ಹೊಸ ಬೆಳಕು ಮೂಡಲಿದೆ ಎಂದು ನಾನು ಆಶಿಸುತ್ತೇನೆ. ಶಿವಗಿರಿಮಠಕ್ಕೆ ಭೇಟಿ ನೀಡುವುದು ನನ್ನ ಧಾರ್ಮಿಕ ಪುಣ್ಯ ಇಂದು ಶಿವಗಿರಿ ತೀರ್ಥಯಾತ್ರಿಗಳನ್ನು ಉದ್ದೇಶಿಸಿ ಭಾಷಣ ಮಾಡಲು ಅವಕಾಶ ನೀಡುವ ಮೂಲಕ ನೀವು ನನ್ನಸಂತೋಷವನ್ನು ಹೆಚ್ಚಿಸಿದ್ದೀರಿ. ಆದ್ದರಿಂದ ನಾನು ಶ್ರೀ ನಾರಾಯಣ ಧರ್ಮ ಸಂಘಂ ಟ್ರಸ್ಟ್ ಮತ್ತು ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ.

ಸಹೋದರ ಸಹೋದರಿಯರೇ,

ನಮ್ಮ ದೇಶ ಮತ್ತು ಸಮಾಜದ ಒಂದು ಗುಣಲಕ್ಷಣವೆಂದರೆ ಆಂತರಿಕ ದೌರ್ಬಲ್ಯಗಳನ್ನು ತೊಡೆದುಹಾಕುವ ಪ್ರಕ್ರಿಯೆಯಲ್ಲಿ ತೊಡಗುವುದು ಮತ್ತು ಸಮಾಜದಲ್ಲಿನ ಪಿಡುಗುಗಳನ್ನು ತೊಲಗಿಸಲು ಸತತವಾಗಿ ಶ್ರಮಿಸುತ್ತಿರುವುದು. ಕಾಲಕಾಲಕ್ಕೆ ಸಂತರು, ಸಾಧುಗಳು ಮತ್ತು ಶ್ರೇಷ್ಠ ವ್ಯಕ್ತಿಗಳು ಈ ಪ್ರಕ್ರಿಯೆಗೆ ವೇಗ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಮಾಜವನ್ನು ಈ ಪಿಡುಗುಗಳಿಂದ ಮುಕ್ತಗೊಳಿಸಲು ಶ್ರೇಷ್ಠ ವ್ಯಕ್ತಿಗಳು ತಮ್ಮ ಇಡೀ ಜೀವನವನ್ನು ಧಾರೆ ಎರೆದಿದ್ದಾರೆ.

ಸ್ವಾಮಿ ನಾರಾಯಣ ಗುರೂಜಿ ಅಂತಹ ಗೌರವಾನ್ವಿತ ಶ್ರೇಷ್ಠ ಚೇತನ, ಅವರು ಜಾತಿಯತೆ, ವರ್ಗ ತಾರತಮ್ಯ ಮತ್ತು ಕೋಮುವಾದ ವಿರುದ್ಧ ಸಮಾಜವನ್ನು ಜಾಗೃತಗೊಳಿಸಲು ಮತ್ತು ಸಮಾಜವನ್ನು ಒಗ್ಗೂಡಿಸಲು ಯತ್ನಿಸಿದ್ದಾರೆ. ಶ್ರೀ ನಾರಾಯಣ ಗುರು ಅವರಿಗೆ ಈ ಕೆಲಸ ಸಾಧಿಸುವುದು ಸುಲಭದ ಕಾರ್ಯವಾಗಿರಲಿಲ್ಲ. ಅವರು ಶಿಕ್ಷಣ ಕ್ಷೇತ್ರದ ಮೂಲಕ ಈ ಯಶಸ್ಸು ಸಾಧಿಸಿದರು ಅಥವಾ ಅವರ ಪ್ರಯತ್ನಗಳ ಮೂಲಕ ಸಮಾಜದ ಪಿಡುಗುಗಳು ಮತ್ತು ಅಸ್ಪೃಶ್ಯತೆಯನ್ನು ತೊಡೆದು ಹಾಕಿದರು. ಈ ಹೋರಾಟದ ವೇಳೆ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಿದರು.

ಗೆಳೆಯರೆ,

ಶ್ರೀ ನಾರಾಯಣ ಗುರೂಜಿ ಅವರ ಮಂತ್ರ ’ಶಿಕ್ಷಣದ ಮೂಲಕ ಸ್ವಾತಂತ್ರ್ಯ, ಸಂಘಟನೆ ಮೂಲಕ ಬಲ, ಕೈಗಾರಿಕೆಗಳ ಮೂಲಕ ಆರ್ಥಿಕ ಸ್ವಾತಂತ್ರ್ಯ’ಗಳಿಸಬೇಕು ಎಂಬುದಾಗಿತ್ತು.

ಅವರು, ಸಮಾಜದಲ್ಲಿನ ದಲಿತರು, ಶೋಷಿತರು ಹಾಗೂ ವಂಚಿತರನ್ನು ಸಬಲೀಕರಣಗೊಳಿಸಲು ಮತ್ತು ಸಮಾಜವನ್ನು ಸುಧಾರಿಸಲು ಹಲವು ಸಲಹೆಗಳನ್ನು ನೀಡಿದ್ದರು. ಬಡವರು, ದಲಿತರು ಮತ್ತು ಹಿಂದುಳಿದ ವರ್ಗದ ಜನ ಅಭಿವೃದ್ಧಿ ಹೊಂದಬೇಕಾದರೆ ಅದು ಶಿಕ್ಷಣದ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಸಮಾಜ ಶಿಕ್ಷಣ ಪಡೆದಾಗ ಮಾತ್ರ ಅವರ ಆತ್ಮ ವಿಶ್ವಾಸ ಮತ್ತು ಆತ್ಮಾವಲೋಕನದಿಂದ ಕೂಡಿರಲು ಸಾಧ್ಯ ಎಂದು ಅವರು ಬಹು ಚೆನ್ನಾಗಿ ಅರಿತಿದ್ದರು. ಆದ್ದರಿಂದ ಅವರು, ಶಿಕ್ಷಣ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಕೇರಳದಲ್ಲಿ ಮಾತ್ರವಲ್ಲದೆ, ನೆರೆಹೊರೆಯ ರಾಜ್ಯಗಳಲ್ಲೂ ಶಿಕ್ಷಣ ಕೇಂದ್ರಗಳನ್ನು ಆರಂಭಿಸಿದರು. ಇಂದು ಶ್ರೀ ನಾರಾಯಣ ಗುರು ಅವರ ದೂರದೃಷ್ಟಿ ಹಾಗೂ ವಿಚಾರಗಳನ್ನು ಪಸರಿಸುವ ಕಾರ್ಯದಲ್ಲಿ ತೊಡಗಿರುವ ಹಲವು ಸಂಸ್ಥೆಗಳನ್ನು ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕಾಣಬಹುದು.

ಶ್ರೀ ನಾರಾಯಣ ಗುರು ಅವರು ತಮ್ಮ ದೂರದೃಷ್ಟಿಯ ಮೂಲಕ ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸಹಭಾಗಿತ್ವ ಪಡೆದುಕೊಂಡರು. ದೇವಾಲಯಗಳಲ್ಲಿ ಜಾದು ಅಥವಾ ಚಮತ್ಕಾರ ಬಗ್ಗೆ ಮಾತನಾಡುವ ಬದಲು ಅವರು ಸತ್ಯ ಮತ್ತು ಶುಚಿತ್ವ ಕಾಪಾಡುವುದನ್ನು ಉತ್ತೇಜಿಸಿದರು. ಅವರು ದೇವಾಲಯಗಳಲ್ಲಿನ ವಾತಾವರಣವನ್ನು ಉತ್ತಮಗೊಳಿಸಲು ಪ್ರತಿಯೊಂದು ಸಂಪ್ರದಾಯಗಳನ್ನು ಪರಿವರ್ತಿಸಿದರು. ಶ್ರೀ ನಾರಾಯಣ ಗುರೂಜಿ ಅವರು ಪೂಜೆಯ ವೇಳೆ ಪಾಲಿಸುತ್ತಿದ್ದ ಅನಗತ್ಯ ಸಂಪ್ರದಾಯಗಳನ್ನು ತೆಗೆದುಹಾಕಿ, ಹೊಸ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಅವರು ದೇವಾಲಯಗಳಲ್ಲಿ ಪೂಜಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಖಾತ್ರಿಪಡಿಸಿದರು. ಶಿವಗಿರಿ ಧಾರ್ಮಿಕ ಕೇಂದ್ರ ಅವರ ಸಮಾಜ ಸುಧಾರಣೆಯ ವಿಶಾಲ ದೂರದೃಷ್ಟಿಯ ವಿಸ್ತರಣೆಯ ಫಲವಾಗಿದೆ. ಶ್ರೀ ನಾರಾಯಣ ಗುರೂಜಿ ಅವರ ದೂರದೃಷ್ಟಿಯ ಸಂಕೇತವಾಗಿರುವ ಶಿವಗಿರಿ ಧಾರ್ಮಿಕ ಕೇಂದ್ರ ಶಿಕ್ಷಣ, ನೈರ್ಮಲ್ಯ, ಸತ್ಯದರ್ಶನ, ಏಕತೆ, ಜ್ಞಾನ, ವಿಜ್ಞಾನ, ರೈತರ ಜತೆ ಬೆಸೆದುಕೊಂಡಿದೆ. ಅವರ ಅಭಿವೃದ್ಧಿ ಗುರಿಗಳಲ್ಲಿ ಇವೆಲ್ಲವೂ ಒಳಗೊಂಡಿವೆ.

ಅವರು ಹೀಗೆ ಹೇಳುತ್ತಾರೆ. ’ಎಲ್ಲ ಜ್ಞಾನವನ್ನು ವಾಸ್ತವಿಕ ಜೀವನದಲ್ಲಿ ಬಳಸಿಕೊಳ್ಳಿ, ಆಗ ಜನರು ಮತ್ತು ದೇಶ ಪ್ರಗತಿ ಹಾಗೂ ಅಭಿವೃದ್ಧಿ ಹೊಂದುತ್ತದೆ” ಇದು ಶಿವಗಿರಿ ಧಾರ್ಮಿಕ ಕೇಂದ್ರದ ಮುಖ್ಯ ಧ್ಯೇಯೋದ್ದೇಶವಾಗಿದೆ.

ಶಿವಗಿರಿ ಧಾರ್ಮಿಕ ಕೇಂದ್ರದಲ್ಲಿ ಯಾತ್ರಾರ್ಥಿಗಳ ಉತ್ಸವದ ವೇಳೆ ಕಳೆದ 85 ವರ್ಷಗಳಿಂದ ಪ್ರತಿವರ್ಷ ಈ ಕ್ಷೇತ್ರಗಳ ತಜ್ಞರನ್ನು ಆಹ್ವಾನಿಸಿ, ಅವರ ಅನುಭವಗಳನ್ನು ಕೇಳಿಸಿಕೊಳ್ಳುವ ಪರಿಪಾಠವಿರುವುದು ಸಂತೋಷದ ಸಂಗತಿಯಾಗಿದೆ. ಇಂದೂ ಸಹ ನಾನಾ ಕ್ಷೇತ್ರಗಳ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ ಮತ್ತು ನಿಮ್ಮ ಆದರ್ಶಗಳಿಂದ ಜನರು ಕೆಲವು ಹೊಸ ಸಂಗತಿಗಳನ್ನು ತಿಳಿದುಕೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ.

ಸಹೋದರ ಮತ್ತು ಸಹೋದರಿಯರೆ,

ಶಿವಗಿರಿ ಧಾರ್ಮಿಕ ಯಾತ್ರೆ ಜ್ಞಾನದ ನದಿ ಇದ್ದಂತೆ, ಇಲ್ಲಿ ಯಾರು ಮಿಂದೇಳುತ್ತಾರೋ ಅವರು ದೇವರ ಅನುಗ್ರಹ ಪಡೆಯುತ್ತಾರೆ.

ಕುಂಭಮೇಳದ ಸಮಯದಲ್ಲೂ ಸಹ ಇಡೀ ದೇಶ ಒಗ್ಗೂಡುವ ಪ್ರಯತ್ನವಿದೆ. ಸಾಧುಸಂತರು ಒಂದೆಡೆ ಸೇರುತ್ತಾರೆ. ಸಮಾಜದಲ್ಲಿನ ಕಷ್ಟ ಕಾರ್ಪಣ್ಯಗಳ ಬಗ್ಗೆ ಸಮಾಲೋಚಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಕೆಲವು ಬದಲಾವಣೆಗಳಾಗಿದ್ದರೂ ಸಹ ಕುಂಭಮೇಳದಲ್ಲಿ ಇನ್ನು ಹಲವು ವಿಶೇಷತೆಗಳು ಇವೆ. ಪ್ರತಿ 12 ವರ್ಷಕ್ಕೊಮ್ಮೆ ಸಾಧುಗಳು ಒಂದೆಡೆ ಸೇರುತ್ತಾರೆ ಮತ್ತು ಸಮಾಜದ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತಾರೆ. ಯಾವ ದಿಕ್ಕಿನಲ್ಲಿ ದೇಶ ಮುನ್ನಡೆಯಬೇಕು ಮತ್ತು ಸಮಾಜ ಯಾವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ. ಇವೆಲ್ಲ ಸಾಮಾಜಿಕ ನಿರ್ಣಯಗಳಾಗಿವೆ. ಅದಾದ ನಂತರ ನಾಸಿಕ್, ಉಜ್ಜಯನಿ ಮತ್ತು ಕೆಲವೊಮ್ಮೆ ಹರಿದ್ವಾರ ಸೇರಿದಂತೆ ಹಲವೆಡೆ ಕುಂಭಮೇಳಗಳು ನಡೆದು, ಅಲ್ಲಿ ಆ ವಿಷಯಗಳನ್ನು ವಿಶ್ಲೇಷಿಸಲಾಗುತ್ತದೆ. ಪ್ರತಿಯೊಂದನ್ನೂ ನಿಖರವಾಗಿ ಪರಾಮರ್ಶಿಸಲಾಗುವುದು.

ಇದೀಗ ವರ್ಷಾಂತ್ಯದ ವೇಳೆ ನೀವೆಲ್ಲ ಇಲ್ಲಿ ಸೇರಿರುವುದು, ಕಳೆದ ವರ್ಷ ನಡೆದ ಚರ್ಚೆಯ ಫಲಿತಾಂಶದ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯುತ್ತದೆ ಎಂದು ನಾನು ಭಾವಿಸಿದ್ದೇನೆ. ಶ್ರೀ ನಾರಾಯಣಗುರು ಅವರು, ಹಾಕಿಕೊಟ್ಟಿರುವ ಗುರಿಗಳ ಸಾಧನೆ ನಿಟ್ಟಿನಲ್ಲಿ ಕೆಲವು ಹೆಜ್ಜೆಗಳನ್ನು ಮುಂದಿಟ್ಟಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ಪರಾಮರ್ಶಿಸಬೇಕಿದೆ.

ಗೆಳೆಯರೇ,

ಶಿವಗಿರಿ ಧಾರ್ಮಿಕ ಕೇಂದ್ರದಲ್ಲಾಗಿರಬಹುದು, ಕುಂಭಮೇಳದಲ್ಲಾಗಿರಬಹುದು ಅಥವಾ ಇಂತಹ ಸಂಪ್ರದಾಯವಿರುವ ಎಲ್ಲೇ ಆಗಿರಬಹುದು, ಏನೇ ಕಾರ್ಯಕ್ರಮಗಳು ನಡೆದರೂ ಅವೆಲ್ಲ ದೇಶವನ್ನು ಆಂತರಿಕ ಪಿಡುಗುಗಳಿಂದ ಮುಕ್ತಗೊಳಿಸುವ ಅತ್ಯಂತ ಪ್ರಮುಖ ಕಾರ್ಯಕ್ರಮಗಳಾಗಿವೆ.

ಇಂತಹ ಧಾರ್ಮಿಕ ಉತ್ಸವಗಳು ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿದ್ದು, ಅವೆಲ್ಲ ದೇಶದ ಜನರನ್ನು ಒಗ್ಗೂಡಿಸಲು ಸಹಾಯಕವಾಗುತ್ತದೆ. ನಾನಾ ರಾಜ್ಯಗಳ ನಾನಾ ಮನೋಭಾವದ ಜನರು ಒಂದೆಡೆ ಸೇರಿ, ಪರಸ್ಪರರ ಸಂಪ್ರದಾಯಗಳನ್ನು ಅರಿಯುವುದಲ್ಲದೆ, ಒಗ್ಗೂಡುತ್ತಾರೆ.

ಗೆಳೆಯರೇ,

ಆದಿ ಶಂಕರಾಚಾರ್ಯರು ಕೇರಳದ ಈ ಪವಿತ್ರ ನೆಲದಲ್ಲಿ ತಮ್ಮ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಅದ್ವೈತ ಸಿದ್ಧಾಂತದ ಸರಳ ಅರ್ಥವೆಂದರೆ ಅಲ್ಲಿ ಎರಡು ಬಗೆ ಇಲ್ಲದಿರುವುದು – ನಾನು ಮತ್ತು ನೀವು ಇಬ್ಬರು ಬೇರೆ ಬೇರೆ ಅಲ್ಲ, ಎಲ್ಲರೂ ಒಂದೇ ಎಂಬುದಾಗಿದೆ. ಅದ್ವೈತದ ಅರ್ಥ ಮತ್ತು ಅನುಭವವನ್ನು ಗ್ರಹಿಸಿದವರೂ ಶ್ರೀ ನಾರಾಯಣ ಗುರು ಅವರು ಅದೇ ಮಾರ್ಗವನ್ನು ತೋರಿದರು. ಶ್ರೀ ನಾರಾಯಣ ಗುರು ಅವರ ತಮ್ಮ ಸಿದ್ಧಾಂತಗಳಿಂದ ಜೀವಂತವಾಗಿದ್ದಾರೆ ಮತ್ತು ಆ ಮೂಲಕ ಅವರು ಇಡೀ ಜಾಗತಿಕ ಸಮಾಜಕ್ಕೆ ಮಾರ್ಗವನ್ನು ತೋರಿಸಿಕೊಟ್ಟವರು.

ಸಹೋದರ ಸಹೋದರಿಯರೇ,

ಶಿವಗಿರಿ ಯಾತ್ರೆ ಆರಂಭವಾಗುವುದಕ್ಕೂ ಮುನ್ನ ಶ್ರೀ ನಾರಾಯಣ ಗುರು ಅವರ ನಾಯಕತ್ವದಲ್ಲಿ ಧಾರ್ಮಿಕ ಸಂಸತ್ತನ್ನು ಸಂಘಟಿಸಲಾಗಿತ್ತು. ವಿಶ್ವದ ನಾನಾ ಕಡೆಯ ಜನ ಅದರಲ್ಲಿ ಭಾಗವಹಿಸಿದ್ದರು. ಈ ಧಾರ್ಮಿಕ ಸಂಸತ್ನಲ್ಲಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಅಭ್ಯುದಯ ಮಾರ್ಗದಲ್ಲಿ ಮುನ್ನಡೆಯಲು ಧರ್ಮ ಆಧಾರಿತ ಸಂಘರ್ಷಗಳನ್ನು ವಿಶ್ವದೆಲ್ಲೆಡೆ ತೊರೆಯಬೇಕು ಎಂದು ಮನವಿ ಮಾಡಲಾಯಿತು.

ಧಾರ್ಮಿಕ ಸಂಸತ್ ಪ್ರವೇಶಿಸುವ ದ್ವಾರದಲ್ಲಿ ಗುರುಗಳ ನಿರ್ದೇಶನದಂತೆ ಈ ಕೆಳಗಿನ ಸಾಲುಗಳನ್ನು ಬರೆಯಲಾಯಿತು ಎಂದು ನಾನು ಕೇಳಿದ್ದೇನೆ. ಅದೆಂದರೆ ’ನಾವು ಇಲ್ಲಿ ಸೇರುತ್ತಿರುವುದು ವಾದ ಮಂಡಿಸಲು ಮತ್ತು ಗೆಲ್ಲಲು ಅಲ್ಲ, ಆದರೆ ನಮ್ಮನ್ನು ನಾವು ತಿಳಿಯಲು ಮತ್ತು ಅರಿಯಲು ಅಷ್ಟೆ’. ಇದನ್ನು ಎಲ್ಲರಿಗೂ ತಲುಪಿಸುವುದು ಮತ್ತು ಪ್ರತಿಯೊಬ್ಬರಿಗೂ ಅದನ್ನು ಅರ್ಥವಾಗುವಂತೆ ಮಾಡುವುದು ಅತ್ಯಂತ ಪ್ರಮುಖವಾಗಿದೆ.

ಇಂದು ನಾವು ಜಾಗತಿಕ ಪರಿಸ್ಥಿತಿಯ ಬಗ್ಗೆ ಮಾತನಾಡುವುದಾದರೆ ನಮ್ಮ ಸಾಧುಗಳು ಆ ಬಿಕ್ಕಟ್ಟನ್ನು ಮುಂದಾಲೋಚನೆಯಿಂದಲೇ ಗ್ರಹಿಸಿ ಸದಾ ನಮಗೆ ಎಚ್ಚರಿಸುತ್ತಿರುವುದು ನೆನೆಪಾಗುತ್ತದೆ.

ಸಹೋದರ ಸಹೋದರಿಯರೇ, 19 ಹಾಗೂ 20ನೇ ಶತಮಾನದಲ್ಲಿ ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು ಸ್ವಾತಂತ್ರ್ಯ ಚಳವಳಿಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಜಾತಿ ಮತ್ತು ವರ್ಗಗಳಿಂದಾಗಿ ವಿಭಜನೆಗೊಂಡಿದ್ದ ಸಮಾಜ ಬ್ರಿಟೀಷರ ವಿರುದ್ಧ ಹೋರಾಡಲಾಗದಂತಹ ಸ್ಥಿತಿಯಲ್ಲಿತ್ತು. ಈ ದೌರ್ಬಲ್ಯದಿಂದ ಹೊರಬರಲು ದೇಶದ ನಾನಾ ಭಾಗಗಳಲ್ಲಿ ಜಾತೀಯತೆ ವಿರುದ್ಧ ಬೃಹತ್ ಚಳವಳಿಗಳು ನಡೆದವು. ಆ ಚಳವಳಿಗಳು ಮತ್ತು ಸುಧಾರಣಾ ಕಾರ್ಯಕ್ರಮಗಳ ಪ್ರಮುಖ ಉದ್ದೇಶವೆಂದರೆ ಆಂತರಿಕ ದೌರ್ಬಲ್ಯಗಳಿಂದ ಹೊರಬಂದು ಸ್ವಾತಂತ್ರ್ಯಗಳಿಸುವುದು ಮತ್ತು ಗುಲಾಮಗಿರಿಯ ಹಿಡಿತದಿಂದ ಹೊರಬರುವುದಾಗಿತ್ತು ಹಾಗೂ ದೇಶವನ್ನು ಅಭಿವೃದ್ಧಿಯೆಡೆಗೆ ಮುನ್ನೆಡೆಸುವುದಾಗಿತ್ತು. ಇಂತಹ ಚಳವಳಿಗಳ ನೇತೃತ್ವವಹಿಸಿದ್ದ ನಾಯಕರು ದೇಶದ ಸಾಮಾನ್ಯ ಜನರಿಗೂ ಸಹ ಸಮಾನ ಗೌರವ ನೀಡುತ್ತಿದ್ದರು. ಅವರು ದೇಶದ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಧಾರ್ಮಿಕಯಾತ್ರೆಯ ಸಹಭಾಗಿತ್ವ ಕೈಗೊಂಡರು. ಜನರು ಜಾತಿಪದ್ಧತಿ ಕುರಿತು ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಲು ಆರಂಭಿಸಿದ ನಂತರ ದೇಶ ಅಭಿವೃದ್ಧಿಪಥದತ್ತ ಸಾಗತೊಡಗಿತು. ಈ ರೀತಿ ಒಗ್ಗೂಡಿದ ಭಾರತೀಯರು, ಬ್ರಿಟೀಷ್ ಶಕ್ತಿಯನ್ನು ದಮನಗೊಳಿಸಿದರು.

ಗೆಳೆಯರೆ,

ಇಂದು ದೇಶ ಮತ್ತೆ ಅಂತಹುದೇ ಸ್ಥಿತಿಯನ್ನು ಎದುರಿಸುತ್ತಿದೆ. ಈ ನೆಲದಲ್ಲಿ ವಾಸಿಸುತ್ತಿರುವ ಜನರು ದೇಶ ಇಂತಹ ಎಲ್ಲ ಆಂತರಿಕ ದೌರ್ಬಲ್ಯಗಳಿಂದ ಮುಕ್ತವಾಗಿರಬೇಕು ಎಂದು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಹಸ್ರಾರು ಅಂತಹ ಸಂಸ್ಥೆಗಳು ಮಹತ್ವದ ಪಾತ್ರವಹಿಸಲಿವೆ. ಜನರನ್ನು ಆ ನಿಟ್ಟಿನಲ್ಲಿ ಜಾಗೃತಗೊಳಿಸುವ ಅಗತ್ಯವಿದೆ ಮತ್ತು ದೇಶಕ್ಕೆ ಅಪಾಯಕಾರಿಯಾಗಿರುವ ಕೆಲವೊಂದು ಸಾಮಾಜಿಕ ಪಿಡುಗುಗಳನ್ನು ಮತ್ತು ಜಾತೀಯತೆಯನ್ನು ತೊಡೆದುಹಾಕಬೇಕಾಗಿದೆ. 1947ರ ಆಗಸ್ಟ್ 15ರಂದು ನಾವು ಗುಲಾಮಗಿರಿಯ ಸಂಕೋಲೆಯನ್ನು ಕಳಚಿಕೊಂಡು ಹೊರಬಂದಿದ್ದರೂ, ನಮ್ಮ ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಇನ್ನೂ ಅದರ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ನಿಮ್ಮ ಬೆಂಬಲದಿಂದ ಮಾತ್ರ ನಾವು ಅಂತಹ ಸಂಕೋಲೆಯಿಂದ ಬಿಡುಗಡೆ ಹೊಂದಲು ಸಾಧ್ಯ.

ಸಹೋದರ ಮತ್ತು ಸಹೋದರಿಯರೇ,

ಜ್ಯೋತಿಬಾ ಪುಲೆ, ಸಾವಿತ್ರಿ ಬಾಯಿ, ರಾಜಾರಾಮ್ ಮೋಹನ್ರಾಯ್, ಈಶ್ವರಚಂದ್ರ ವಿದ್ಯಾಸಾಗರ್ ಮತ್ತು ದಯಾನಂದ ಸರಸ್ವತಿಯಂತಹ ಶ್ರೇಷ್ಠ ವ್ಯಕ್ತಿಗಳು ಸಮಾಜದಲ್ಲಿ ಮಹಿಳೆಯರಿಗೆ ಗೌರವ ಮತ್ತು ಘನತೆಯನ್ನು ತಂದು ಕೊಡಲು ಸುದೀರ್ಘ ಹೋರಾಟ ನಡೆಸಿದ್ದರು. ಇಂದು ದೇಶದಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಕೈಗೊಂಡಿರುವ ಹಲವಾರು ಮಹತ್ವದ ಕ್ರಮಗಳನ್ನು ಕಂಡು ಅವರ ಆತ್ಮಗಳು ಸಂತೃಪ್ತಗೊಂಡಿರಬಹುದು. ಹಲವು ಮುಸ್ಲಿಂ ಮಹಿಳೆಯರು ಮತ್ತು ಸಹೋದರಿಯರು ದೀರ್ಘಕಾಲದಿಂದ ತ್ರಿವಳಿ ತಲಾಖ್ನಿಂದ ಅನುಭವಿಸುತ್ತಿದ್ದ ನೋವು, ಯಾತನೆ ಇನ್ನು ಮುಂದೆ ಇರುವುದಿಲ್ಲ. ಸುದೀರ್ಘ ಹೋರಾಟದ ನಂತರ ತ್ರಿವಳಿ ತಲಾಖ್ನಿಂದ ಹೊರಬರುವ ಮಾರ್ಗವನ್ನು ಅವರು ಕಂಡುಕೊಂಡಿದ್ದಾರೆ.

ಸಹೋದರ ಮತ್ತು ಸಹೋದರಿಯರೆ,

ಸಂತರ, ಸಾಧುಗಳು ಮತ್ತು ಸನ್ಯಾಸಿಗಳು ನಮಗೆ ಹೇಳಿರುವುದೆಂದರೆ ’ನರನೇ ನಾರಾಯಣ’ ಅಥವಾ ಕಾಯಕವೇ ಕೈಲಾಸ ಎಂದಂತೆ.

ಇದರ ಅರ್ಥ ಯಾರು ಬೇಕಾದರು ಕೇವಲ ನಿಯಮಗಳನ್ನಷ್ಟೇ ಪಾಲಿಸುವುದಲ್ಲದೆ, ಕೆಲವು ಕೆಲಸವನ್ನು ಮಾಡಿ ನಾರಾಯಣ ಎನಿಸಿಕೊಳ್ಳಬಹುದು. ’ಸಂಕಲ್ಪದಿಂದ ಸಿದ್ಧಿ’ ಸಾಧಿಸುವುದು ನಮ್ಮ ಮಂತ್ರವಾಗಿದೆ. 125 ಕೋಟಿ ಭಾರತೀಯರಿಗೆ ನವಭಾರತದ ಪಯಣ ಇದೀಗ ಆರಂಭವಾಗಿದೆ.

ಈ ಪಯಣ 2018ರಲ್ಲಿ ವೇಗ ಪಡೆಯಲಿದೆ. ಕಪ್ಪು ಹಣ, ಭ್ರಷ್ಟಾಚಾರ ಮತ್ತು ಬೇನಾಮಿ ಆಸ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಹಾಗೂ ಭಯೋತ್ಪಾದನೆ ಮತ್ತು ಜಾತೀಯತೆ ವಿರುದ್ಧ ಹೋರಾಡುವುದು ಹಾಗು ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಮಂತ್ರದ ಮೂಲಕ 2018ರಲ್ಲಿ ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರದ ಮೂಲಕ ನಮ್ಮ ದೇಶವನ್ನು ಅಭಿವೃದ್ಧಿಯಲ್ಲಿ ಮತ್ತಷ್ಟು ಎತ್ತರಕ್ಕೆ ಭಾರತೀಯರಾದ ನಾವೆಲ್ಲ ಕೊಂಡೊಯ್ಯೋಣ. ಈ ಭರವಸೆಗಳು ಮತ್ತು ಉದ್ದೇಶಗಳನ್ನು ಹಂಚಿಕೊಳ್ಳುವ ಮೂಲಕ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಮತ್ತೊಮ್ಮೆ ಶಿವಗಿರಿ ಧಾರ್ಮಿಕ ಕೇಂದ್ರದ ಶ್ರೀ ನಾರಾಯಣ ಗುರು ಅವರ ಭಕ್ತಾದಿಗಳಿಗೆಲ್ಲಾ ಶುಭಕಾಮನೆಗಳು ಮತ್ತು ಹೊಸ ವರ್ಷದ ಶುಭಾಶಯಗಳು.

ತುಂಬಾ ಧನ್ಯವಾದಗಳು

***************