Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎವಿಯಾನ್ ನಲ್ಲಿ ಜಿ 7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಫೆಡರಲ್ ರಿಪಬ್ಲಿಕ್‌ ನ ಚಾನ್ಸೆಲರ್ ಅವರೊಂದಿಗೆ ಪ್ರಧಾನಮಂತ್ರಿ ಸಭೆ

ಎವಿಯಾನ್ ನಲ್ಲಿ ಜಿ 7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಫೆಡರಲ್ ರಿಪಬ್ಲಿಕ್‌ ನ ಚಾನ್ಸೆಲರ್ ಅವರೊಂದಿಗೆ ಪ್ರಧಾನಮಂತ್ರಿ ಸಭೆ


ಫ್ರಾನ್ಸ್‌ ನ ಎವಿಯಾನ್‌ ನಲ್ಲಿ ನಡೆದಿರುವ ಜಿ 7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜರ್ಮನಿಯ ಫೆಡರಲ್ ರಿಪಬ್ಲಿಕ್‌ ನ ಚಾನ್ಸೆಲರ್ ಮಾನ್ಯ ಶ್ರೀ ಫ್ರೆಡ್ರಿಕ್ ಮೆರ್ಜ್ ಅವರನ್ನು ಭೇಟಿ ಮಾಡಿದರು. ಈ ವರ್ಷದಲ್ಲಿ ಉಭಯ ನಾಯಕರ ನಡುವಿನ ಎರಡನೇ ಭೇಟಿ ಇದಾಗಿದೆ.

ಈ ವರ್ಷದ ಆರಂಭದಲ್ಲಿ ಚಾನ್ಸೆಲರ್ ಅವರ ಯಶಸ್ವಿ ಭಾರತ ಭೇಟಿ ಹಾಗೂ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿ ಎ) ಅಂತಿಮಗೊಳ್ಳುವುದರೊಂದಿಗೆ ಭಾರತ-ಜರ್ಮನಿ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಹೊಸ ಆವೇಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಉಭಯ ನಾಯಕರು, ದ್ವಿಪಕ್ಷೀಯ ಮಾತುಕತೆಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು.

ಭಾರತ ಮತ್ತು ಜರ್ಮನಿಯು 2026 ರಲ್ಲಿ ರಾಜತಾಂತ್ರಿಕ ಬಾಂಧವ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ, ತಂತ್ರಜ್ಞಾನ, ನಾವೀನ್ಯತೆ, ಶಿಕ್ಷಣ, ಚಲನೆ ಸೇರಿದಂತೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.

ರಕ್ಷಣಾ ಕೈಗಾರಿಕಾ ಸಹಕಾರ ಮಾರ್ಗಸೂಚಿಗೆ ಸಹಿ ಹಾಕಿರುವುದು ಹಾಗೂ ಜರ್ಮನಿಯ ಮೂಲಕ ಪ್ರಯಾಣ ಮಾಡುವ ಭಾರತೀಯ ಪ್ರಜೆಗಳಿಗೆ ಚಲನ (ಟ್ರಾನ್ಸಿಟ್) ವೀಸಾ ವಿನಾಯಿತಿಯನ್ನು ಕಾರ್ಯಗತಗೊಳಿಸಿರುವುದನ್ನು ಉಭಯರು ಸ್ವಾಗತಿಸಿದರು.

ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ಸಂಘರ್ಷ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಇಬ್ಬರೂ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ತಲುಪಿದ ತಿಳುವಳಿಕೆಯನ್ನು ಅವರು ಸ್ವಾಗತಿಸಿದರು.

ಜರ್ಮನಿಯಲ್ಲಿ ಈ ವರ್ಷಾಂತ್ಯ ನಡೆಯಲಿರುವ 8ನೇ ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಗಳಿಗೆ (ಐಜಿಸಿ) ಪ್ರಧಾನಮಂತ್ರಿಯವರನ್ನು ಚಾನ್ಸೆಲರ್ ಮೆರ್ಜ್ ಅವರು ಆಹ್ವಾನಿಸಿದರು.

 

*****