Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಮುಖ ಬಂದರುಗಳಲ್ಲಿ ಬಂದರು ಅವಲಂಬಿತ ಕೈಗಾರಿಕೆಗಳಿಗೆ ಸಮುದ್ರ ತೀರದ ಜಲ ಪ್ರದೇಶ ಮತ್ತು ಹೊಂದಿಕೊಂಡ ಭೂಮಿಯನ್ನು ಮಂಜೂರು ಮಾಡುವ ನೀತಿಗೆ ಸಂಪುಟ ಒಪ್ಪಿಗೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಮುಖ ಬಂದರುಗಳಲ್ಲಿ ಬಂದರು ಅವಲಂಬಿತ ಕೈಗಾರಿಕೆಗಳಿಗೆ ಸಮುದ್ರ ತೀರದ ಜಲ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡ ಭೂಮಿಯನ್ನು ಅದರ ಕಾರ್ಯಾಚರಣೆಗೆ ಮಂಜೂರು ಮಾಡುವ ನೀತಿಗೆ ತನ್ನ ಅನುಮೋದನೆ ನೀಡಿದೆ. ಈ ನೀತಿಯು ತೀರಪ್ರದೇಶದ ಸೌಲಭ್ಯಗಳನ್ನು ಮಂಜೂರು ಮಾಡುವ ಪ್ರಕ್ರಿಯೆಗಳಲ್ಲಿ ಏಕರೂಪತೆ ಮತ್ತು ಪಾರದರ್ಶಕತೆ ತರಲು ಕಾರಣವಾಗುತ್ತದೆ. ಇದು ಪ್ರಮುಖ ಬಂದರುಗಳಲ್ಲಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ಪ್ರಮುಖ ಬಂದರು ಪ್ರಾಧಿಕಾರಗಳ ಆದಾಯ ಹೆಚ್ಚಿಸಿಕೊಳ್ಳಲು ಅವಕಾಶ ನೀಡುತ್ತದೆ. ಈ ನೀತಿಯ ವ್ಯಾಪ್ತಿಯು ಹೊಸ ಸ್ವತ್ತುಗಳ ಸೃಷ್ಟಿ ಹಾಗೆಯೇ ಪ್ರಸ್ತುತ ಅಸ್ತಿತ್ವದಲ್ಲಿರುವ ಅನುಪಯುಕ್ತ ಸ್ವತ್ತುಗಳ ಅಂದರೆ ಖಾಲಿ ಇರುವ ಲಂಗರು ಪ್ರದೇಶಗಳ ಬಳಕೆಯನ್ನು ಒಳಗೊಂಡಿದೆ. ಈ ನೀತಿಯು ಎಲ್ಲ ಪ್ರಮುಖ ಬಂದರುಗಳಿಗೂ ಅನ್ವಯಿಸುತ್ತದೆ.

ಈ ನೀತಿಯ ಅಡಿಯಲ್ಲಿ, ಬಂದರು ಅವಲಂಬಿತ ಕೈಗಾರಿಕೆಗಳಿಗೆ (ಪಿಡಿಐ) ಪ್ರಮುಖ ಬಂದರುಗಳಲ್ಲಿ ಸರಕುಗಳನ್ನು ಆಮದು ಮತ್ತು/ಅಥವಾ ರಫ್ತು ಮಾಡಲು ಮತ್ತು ಅವುಗಳ ನೆಲೆಗಳಿಗೆ ಸಾಗಿಸುವ ಮುನ್ನ ದಾಸ್ತಾನು ಮಾಡಲು ಅದಕ್ಕೇ ಮುಡಿಪಾದ ಸೌಲಭ್ಯಗಳನ್ನು ಸ್ಥಾಪಿಸಿಕೊಳ್ಳಲು 30 ವರ್ಷ ಮೀರದ ಅವಧಿಗೆ ರಿಯಾಯಿತಿಯನ್ನು ಮಂಜೂರು ಮಾಡಲಾಗುತ್ತದೆ. ರಿಯಾಯಿತಿ ಅವಧಿಯ ವಿಸ್ತರಣೆಗೆ ರಿಯಾಯಿತಿ ಒಪ್ಪಂದದಂತೆ ಆಸ್ತಿಯ ಕಡಿಮೆ ಬಳಕೆಯ ಷರತ್ತೂ ಒಳಗೊಂಡಂತೆ ಅವಕಾಶ ನೀಡಲಾಗುತ್ತದೆ.

ಗರಿಷ್ಠ 30 ವರ್ಷಗಳ ಕಾರ್ಯಾಚರಣೆಯ ತರುವಾಯ, ಪ್ರಮುಖ ಬಂದರುಗಳ ಕಡಲ ತೀರದ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳನ್ನು ಲಂಗರು, ಕಡಲಾಚೆಯ ಹಡಗುದಾಣ, ವಾಹನಾಂತರಣ ಇಳಿಗಟ್ಟೆಗಳು, ಏಕ ಬಿಂದು ಲಂಗರು ತಾಣ ಇತ್ಯಾದಿ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗುತ್ತದೆ. ಇದು ಬಂದರು ಪ್ರಾಧಿಕಾರ ಮತ್ತು ಸಂಬಂದಿತ ಪಿಡಿಐಗಳ ನಡುವೆ ಮಾಡಿಕೊಳ್ಳಲಾದ ರಿಯಾಯಿತಿ ಒಪ್ಪಂದ (ಸಿ.ಎ.)ದ ನಿಯಮ ಮತ್ತು ನಿಬಂಧನೆಯಂತಿರುತ್ತದೆ.

ಪ್ರಮುಖ ಬಂದರುಗಳಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಹಡಗು ಸಚಿವಾಲಯ (ಎಂ.ಓ.ಎಸ್.) 1996 ಮತ್ತು 1998ರಲ್ಲಿ ಹೊರಡಿಸಿರುವ ಹಾಗೂ ಹಾಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳಡಿಯ ನಿಬಂಧನೆಗಳು ಅರ್ಹತೆಯ ಮಾನದಂಡಗಳನ್ನು ಪೂರೈಸುವ ಕೇಂದ್ರ/ರಾಜ್ಯ ಸಾರ್ವಜನಿಕ ವಲಯದ ಉದ್ದಿಮೆ (ಪಿ.ಎಸ್.ಯು.ಗಳು) ಸೇರಿದಂತೆ ಬಂದರು ಅವಲಂಬಿತ ಕೈಗಾರಿಕೆಗಳಿಗೆ ತೀರಪ್ರದೇಶದ ಭೂಮಿಯನ್ನು ಮಂಜೂರು ಮಾಡಲು ಅವಕಾಸ ನೀಡುತ್ತವೆ. ಆದಾಗ್ಯೂ, ಕೆಲವು ಪ್ರಮುಖ ಬಂದರುಗಳಲ್ಲಿ ಈ ಮಾರ್ಗಸೂಚಿಗಳನ್ನು ಅನುಸರಿಸಿ ಸ್ಥಾಪಿಸಿರುವ ಕೆಲವು ಲಂಗರುಗಳು ಮತ್ತು ಸೌಲಭ್ಯಗಳು ಅಭಿವೃದ್ಧಿಯ ಸಾಮರ್ಥ್ಯಕ್ಕೆ ಸರಿಯಾಗಿ ಸಂಪೂರ್ಣವಾಗಿ ಬಳಕೆ ಆಗಿಲ್ಲ.

ಭಾರತ ಸರ್ಕಾರವು ಆರ್ಥಿಕ ಪ್ರಗತಿಗೆ ಪ್ರಮುಖ ಸಾಧನವಾದ ಸಾಗರ ಮಾಲಾ ಕಾರ್ಯಕ್ರಮದ ಮೂಲಕ ಬಂದರು ನೇತೃತ್ವದ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಪ್ರಮುಖ ಬಂದರುಗಳ ತೀರ ಪ್ರದೇಶದ ಜಲ ಮತ್ತು ಭೂಮಿಯ ಸಂಪೂರ್ಣ ಬಳಕೆ ಮಹತ್ವದ್ದಾಗಿದೆ. ಈ ನೀತಿಯ ಉದ್ದೇಶ ತೀರಪ್ರದೇಶದ ಸೌಲಭ್ಯಗಳನ್ನು ಮಂಜೂರು ಮಾಡುವ ಪ್ರಕ್ರಿಯೆಗಳಲ್ಲಿ ಏಕರೂಪತೆ ಮತ್ತು ಪಾರದರ್ಶಕತೆ ತರುವುದಾಗಿದೆ. ಈ ನೀತಿಯು ಸಂಬಂಧಿತ ಪ್ರಮುಖ ಬಂದರಿನ ಮೇಲೆ ಅವಲಂಬಿತವಾಗಿರುವ ಕೈಗಾರಿಕೆಗಳಿಗೆ ಸರಕುಗಳ ಆಮದು ಮತ್ತು/ಅಥವಾ ರಫ್ತಿಗಾಗಿ ನಿರ್ದಿಷ್ಟ ಬಂದರು ಸೌಲಭ್ಯ ಅಭಿವೃದ್ಧಿ ಮತ್ತು ಕಾರ್ಯಾಚರಣೆಗೆ ಅವಕಾಶ ನೀಡುವ ಮೂಲಕ ಪ್ರಮುಖ ಬಂದರುಗಳಿಗೆ ದೀರ್ಘಕಾಲದ ಆಧಾರದ ಬದ್ಧತೆಯ ವ್ಯಾಪಾರದ ಸೃಷ್ಟಿಯ ಖಾತ್ರಿ ಪಡೆಯಲು ನೆರವಾಗುತ್ತದೆ ಮತ್ತು ಹೀಗೆ ಬಂದರು ನೇತೃತ್ವದ ಅಭಿವೃದ್ಧಿಯ ಸಾಕಾರದ ಉದ್ದೇಶಗಳ ಈಡೇರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡುತ್ತದೆ.

ಹಿನ್ನೆಲೆ:

ರಾಷ್ಟ್ರೀಯ ಆರ್ಥಿಕ ಪ್ರಗತಿಯ ಗುರಿಯನ್ನು ಸಾಧಿಸಲು ದೇಶದಲ್ಲಿ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯದ ಗುಣಮಟ್ಟ ಮತ್ತು ಮಟ್ಟವನ್ನು ಸುಧಾರಣೆ ಮಾಡಲು ಭಾರತ ಸರ್ಕಾರ ಬದ್ಧವಾಗಿದೆ. ಈ ಗುರಿ ಸಾಧನೆಗಾಗಿ, ಸಾರ್ವಜನಿಕ ಸೌಲಭ್ಯಗಳು ಮತ್ತು ಸೇವೆಗಳ ನಿಬಂಧನೆಗಳಲ್ಲಿ ಖಾಸಗಿ ವಲಯದ ಹೂಡಿಕೆ ಮತ್ತು ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸರ್ಕಾರವು ಸಾರ್ವಜನಿಕ, ಖಾಸಗಿ ಪಾಲುದಾರಿಕೆ (ಪಿಪಿಪಿ)ಯ ಮಹತ್ವದ ಪಾತ್ರಕ್ಕೆ ಅವಕಾಶ ಮಾಡಿಕೊಟ್ಟಿದೆ. ಪ್ರಮುಖ ಬಂದರುಗಳಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆ/ಹೂಡಿಕೆಗಾಗಿ ಗುರುತಿಸಿ ಬಂದರು ಆಧಾರಿತ ಕೈಗಾರಿಕೆಗಳಿಗೆ ತೀರದ ಜಲ ಪ್ರದೇಶ ಮತ್ತು ಹೊಂದಿಕೊಂಡ ಭೂಮಿಯನ್ನು ಪಿಪಿಪಿ/ವಶದ ಆಧಾರದ ಮೇಲೆ ಹಂಚಿಕೆ ಮಾಡುವುದು ಕೂಡ ಒಂದಾಗಿದೆ.

***