Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೇರಿಕಾದ ಯು.ಎಸ್. ಇಂಡಿಯಾ ಉದ್ಯಮ ಪರಿಷತ್ತಿನ 40ನೇ ವಾರ್ಷಿಕ ಸಭೆಯಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ದಿಕ್ಸೂಚಿ ಭಾಷಣ.

ಅಮೇರಿಕಾದ ಯು.ಎಸ್. ಇಂಡಿಯಾ ಉದ್ಯಮ ಪರಿಷತ್ತಿನ 40ನೇ ವಾರ್ಷಿಕ  ಸಭೆಯಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ದಿಕ್ಸೂಚಿ ಭಾಷಣ.


ಮಹಿಳೆಯರೇ ಮತ್ತು ಮಹನೀಯರೇ,
 
1.  ಮತ್ತೊಮ್ಮೆ ರಾಜಕೀಯ ಮತ್ತು ವ್ಯಾಪಾರೋದ್ಯಮ ಕ್ಷೇತ್ರದ ಗೌರವಾನ್ವಿತ ಗಣ್ಯರು ಸೇರಿರುವ ಈ ದೊಡ್ಡ ಸಭೆಯಲ್ಲಿರಲು ನಾನು ಅತೀವ ಸಂತೋಷಗೊಂಡಿದ್ದೇನೆ. ಇಂದು ಈ ಕಾರ್ಯಕ್ರಮಕ್ಕೆ ಮೊದಲು ನಾನು ಅಧ್ಯಕ್ಷರಾದ ಒಬಾಮಾರನ್ನು ಭೇಟಿ ಮಾಡಿದ್ದೆ ಮತ್ತು ನಾವಿಬ್ಬರೂ ನಮ್ಮ ಎರಡು ದೇಶಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ವಿಸ್ತಾರವಾದ ವಿಚಾರ ವಿನಿಮಯ ನಡೆಸಿದೆವು. ಸಂಯುಕ್ತ ರಾಷ್ಟ್ರಗಳ ಜತೆ ಭಾರತದ ದ್ವಿಪಕ್ಷೀಯ ಸಂಬಂಧ ಹಿಂದೆಂದಿಗಿಂತಲೂ ಬಲವಾಗಿದೆ ಮತ್ತು ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂದು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ.
2.  ಜಾಗತಿಕ ಆರ್ಥಿಕತೆ ದುರ್ಬಲವಾಗಿರುವ ಸಂದರ್ಭದಲ್ಲಿ   ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ವಿಶ್ವದ ಹಲವು ಭಾಗಗಳು ಈಗಲೂ ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಬೆಳವಣಿಗೆಯ ಹೊಸ ಇಂಜಿನ್ (ಯಂತ್ರ)ಗಳು ವಿಶ್ವಕ್ಕೆ ಬೇಕಾಗಿರುವ ಸಮಯ ಇದು. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ ದೃಷ್ಟಿಕೋನದಲ್ಲಿ ಹೇಳುವುದಾದರೆ ಖಚಿತವಾಗಿ ಹೊಸ ಇಂಜಿನ್ ಗಳು ಪ್ರಜಾತಾಂತ್ರಿಕ ಇಂಜಿನ್ ಗಳಾದರೆ ಉತ್ತಮ. ಇಂತಹ ಸಂದಿಗ್ದ  ಸ್ಥಿತಿಯಲ್ಲಿ ಇಂದು ಭಾರತ ಜಾಗತಿಕ ಬೆಳವಣಿಗೆಗೆ ಹೊಸ ಇಂಜಿನ್ ಆಗಿ ಕೊಡುಗೆ ನೀಡುತ್ತಿದೆ. ಎಂದು ನಿಮಗೆ ಹೇಳಲು ಸಂತೋಷಪಡುತ್ತೇನೆ.
3. ದೊಡ್ಡದಾದ ಭಾರತೀಯ ಆರ್ಥಿಕತೆ ವಿಶ್ವಕ್ಕೆ ಬಹು ವಿಧದ ಲಾಭಗಳನ್ನು ಒದಗಿಸಲಿದೆ.ಖಚಿತವಾಗಿ, ಭಾರತ ಬೃಹತ್ ಮತ್ತು ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯನ್ನು ಒದಗಿಸುತ್ತದೆ,ಆದರೆ ಭಾರತವು ಮಾರುಕಟ್ಟೆಗಿಂತ ಹೆಚ್ಚಿನದನ್ನು ಹೊಂದಿದೆ. ಭಾರತವು
  * ನಂಬಿಕಸ್ತ ಪಾಲುದಾರ:
  * ಉನ್ನತ ಗುಣಮಟ್ಟದ ವೈಜ್ಞಾನಿಕ, ತಾಂತ್ರಿಕ ಮತ್ತು ಆಡಳಿತಾತ್ಮಕ ಪ್ರತಿಭೆಯ ಮೂಲ:
  * ಅಭಿವೃದ್ಧಿಯ ಆಲೋಚನೆಗಳು ಮತ್ತು ಪ್ರಯೋಗಗಳ ಮೂಸೆ.
  * ಉನ್ನತ ಗುಣಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿಯ ದಕ್ಷ ಮೂಲ.
  * ಮತ್ತು ಪ್ರಜಾಪ್ರಭುತ್ವ ಹಾಗು ತ್ವರಿತ ಗತಿಯ ಅಭಿವೃದ್ಧಿ ಪರಸ್ಪರ ಜತೆಯಾಗಿರಬಹುದು ಎಂಬುದಕ್ಕೆ ಸಾಕ್ಷ್ಯ.
4. ಭಾರತವು ಅಭಿವೃದ್ಧಿಯ ಹೊಸ ಶಕೆಗೆ ಅಡಿಯಿಡುತ್ತಿರುವಂತೆಯೇ, ಅದು ಅಮೇರಿಕಾದ ಉದ್ಯಮಶೀಲತೆಯ ಸಂಪ್ರದಾಯ ಮತ್ತು ನಾವಿನ್ಯತೆಯ ಶೋಧದ ಪರಂಪರೆಯನ್ನು ಕಲಿತುಕೊಳ್ಳುವ ಅಗತ್ಯವಿದೆ.ಅಮೇರಿಕಾವು ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆ, ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ.
  * ವಾಯು ಯಾನ ನಿಯಂತ್ರಣದಿಂದ ವಾಯು ಗುಣಮಟ್ಟ  ಸುಧಾರಣೆವರೆಗೆ,
  * ಔಷಧಿಗಳಿಂದ ಹಿಡಿದು ಡ್ರೋನ್ ಗಳವರೆಗೆ
  * ಹೈಬ್ರಿಡ್ ಕಾರುಗಳಿಂದ ಹಿಡಿದು ಜಲ ಸಾಂದ್ರೀಕರಣದವರೆಗೆ
ನಿಜವಾಗಿಯೂ ನನಗೆ ಅಮೇರಿಕಾ ದೊಡ್ದ ಇತಿಹಾಸವಿರುವ ದೇಶವಲ್ಲದಿದ್ದರೂ, ಉತ್ತಮ ಭವಿಷ್ಯ ಇರುವ ದೇಶವೆಂದು ಕಾಣುತ್ತದೆ. ಆದ್ದರಿಂದ ನಮ್ಮ ಸಹಭಾಗಿತ್ವ, ಪಾಲುದಾರಿಕೆ ಎರಡೂ ದೇಶಗಳಿಗೆ ಲಾಭದಾಯಕವಾಗಬಲ್ಲುದು ಎಂಬುದು ನನಗೆ ಖಚಿತವಿದೆ.
5. ಭಾರತ- ಅಮೇರಿಕಾ ಬಾಂಧವ್ಯದ ಅತಿ ವಿಶಿಷ್ಟ ಅಂಶವೆಂದರೆ ಅಮೇರಿಕನ್ ಆರ್ಥಿಕತೆಯಲ್ಲಿ ಭಾರತೀಯ- ಅಮೆರಿಕನ್ ಸಮುದಾಯ ವಹಿಸುತ್ತಿರುವ ನಿರ್ಣಾಯಕ ಪಾತ್ರ. ಒಂದು ದೇಶದಿಂದ ವಲಸೆ ಹೋದವರು,ಅಲ್ಲಿ ಖಾಯಂ ನಿವಾಸಿಗಳಾಗಿ ಎರಡೂ ದೇಶಗಳಲ್ಲಿ ಉನ್ನತ ಗೌರವ ಮತ್ತು ಘನತೆಯನ್ನು ಪಡೆಯುತ್ತಿರುವುದು. ಭಾರತೀಯ- ಅಮೇರಿಕನ್ನರು ನಮ್ಮ ಬೆಳೆಯುತ್ತಿರುವ ಆರ್ಥಿಕ ಮತ್ತು ಸಾಂಸ್ಕೃತಿಕ ಗೆಳೆತನಕ್ಕೆ ಬಲವಾದ ಸಿಮೆಂಟಿಂಗ್ ಶಕ್ತಿಯಾಗಿದ್ದಾರೆ.
6. ನಾನು ಈಗಷ್ಟೇ ಅಧಿಕಾರದ ಎರಡು ವರ್ಷ ಪೂರೈಸಿದ್ದೇನೆ. 2014ರಲ್ಲಿ ನಾನು ನಿಮ್ಮನ್ನುದ್ದೇಶಿಸಿ ಮಾತನಾಡುವಾಗ ಸರಕಾರದ ಆಡಳಿತವನ್ನು ಕೈಗೆತ್ತಿಕೊಂಡಿದ್ದೇನಷ್ಟೇ. ನಾವು ನಿರ್ದಿಷ್ಟವಾದ ಸವಾಲುಗಳಿದ್ದ ದೇಶೀಯ ಮತ್ತು ವಿದೇಶೀ ಪರಿಸರವನ್ನು ಎದುರಿಸಿದೆವು. ಹೂಡಿಕೆದಾರರ ವಿಶ್ವಾಸ, ಭರವಸೆ ಕುಸಿದಿತ್ತು.ಭಾರತದ ಆರ್ಥಿಕತೆಯ ಭವಿಷ್ಯದ ಬಗ್ಗೆ ಸಂಶಯಗಳು ವ್ಯಕ್ತವಾಗತೊಡಗಿದ್ದವು. ವ್ಯಾಪಾರೋದ್ಯಮ ವಲಯ ಆಗ ಇದ್ದ ಜಡತ್ವದಿಂದಾಗಿ ಅಸಮಾಧಾನ ಹೊಂದಿತ್ತು. ಕೆಂಪು ಪಟ್ಟಿ ಮತ್ತು ಹಳೆಯ ನೀತಿಯಿಂದಾಗಿ ನಿರಾಶೆಯ ವಾತಾವರಣವಿತ್ತು. ಇಂತಹ ಪರಿಸ್ಥಿಯನ್ನು ಎರಡು ವರ್ಷಗಳಲ್ಲಿ ನಾವು ಸುಧಾರಿಸಿದೆವು, ಗಮನಾರ್ಹವಾದ ಆರ್ಥಿಕ ಸಾಧನೆಯನ್ನು ದಾಖಲಿಸಿದೆವು.
7. ನಮ್ಮ ನೀತಿಗಳ ಕೆಲವು ಪ್ರಮುಖಾಂಶಗಳನ್ನು ನಿಮಗೆ ವಿವರಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ.ಹಲವು ಬಾರಿ ನಾನು ನಿಮಗೆ ಹೇಳಿದ್ದೆ, ನನ್ನ ಗುರಿ ಸುಧಾರಣೆಯಿಂದ ಬದಲಾವಣೆ ಎಂಬುದಾಗಿ. ಸಾಮಾನ್ಯ ನಾಗರಿಕನ ಜೀವನವನ್ನು ಬದಲಾಯಿಸುವ ನೀತಿಗಳು  ನನಗೆ ಸುಧಾರಣೆಗಳು. ಕಳೆದ ಎರಡು ವರ್ಷಗಳಲ್ಲಿ ಆರ್ಥಿಕ ಸುಧಾರಣೆಗಳನ್ನು ಮೀರಿದ ಸಮಗ್ರ ಸುಧಾರಣೆಗಳ ಗೊಂಚಲನ್ನು ನಾವು ಕೈಗೆತ್ತಿಕೊಂಡೆವು. ನಾನು ಅವುಗಳನ್ನು 4 ವಿಧಗಳಾಗಿ ವಿಂಗಡಿಸುತ್ತೇನೆ.
  * ಮೊದಲನೇಯದ್ದು, ದೃಢವಾದ ತಳಪಾಯ ಹಾಕಲು ದೊಡ್ದ ಮಟ್ಟದ ಆರ್ಥಿಕ ನೀತಿಗಳು;
  * ಎರಡನೇಯದ್ದು, ಬೆಳವಣಿಗೆಯನ್ನು ಪ್ರಚೋದಿಸುವ ನೀತಿಗಳು ಮತ್ತು ಹೂಡಿಕೆ ಹಾಗು ವ್ಯಾಪಾರದ ಮೂಲಕ ಉದ್ಯೋಗಾವಕಾಶ ಮತ್ತು ದಕ್ಷತೆ ಹಾಗು ಉತ್ಪಾದಕತೆ ಹೆಚ್ಚಿಸುವ ನೀತಿಗಳು.
  * ಮೂರನೇಯದ್ದು, ಮಹಿಳೆಯರು ಮತ್ತು ರೈತರು ಸೇರಿದಂತೆ, ಸಮಾಜದಲ್ಲಿಯ ಬಡವರಿಗೆ, ದುರ್ಬಲ ವರ್ಗದವರಿಗೆ ಬೆಳವಣಿಗೆಯ, ಅಭಿವೃದ್ಧಿಯ ಲಾಭಗಳು ದೊರೆಯುವಂತೆ ಖಾತ್ರಿಪಡಿಸುವ ನೀತಿಗಳು.
  * ನಾಲ್ಕನೇಯದ್ದು ಭ್ರಷ್ಟಾಚಾರದ ವಿರುದ್ಧ ಮುಖಾ ಮುಖಿ ದಾಳಿ
8.  ನಾನು ದೊಡ್ದ ಮಟ್ಟದ /ಬೃಹತ್ ಆರ್ಥಿಕತೆಯಿಂದ ಆರಂಭ ಮಾಡುತ್ತೇನೆ.
9. ನಾವು ಅಧಿಕಾರ ವಹಿಸಿಕೊಂಡಂದಿನಿಂದ , ಹಣದುಬ್ಬರ, ಹಣಕಾಸು ಕೊರತೆ ಮತ್ತು ಪಾವತಿ ಬಾಕಿ, ಚಾಲ್ತಿ ಖಾತೆ ಕೊರತೆಗಳು ಇಳಿಮುಖವಾದವು.ಜಿಡಿಪಿ ಬೆಳವಣಿಗೆ, ವಿದೇಶೀ ವಿನಿಮಯ ಮೀಸಲು, ಸ್ಟಾಕ್  ಮಾರುಕಟ್ತೆ ಮೌಲ್ಯಮಾಪನಗಳು ಮತ್ತು ಹೂಡಿಕೆದಾರರ ವಿಶ್ವಾಸ-ಇವುಗಳೆಲ್ಲವೂ ವೃದ್ಧಿಸಿದವು.ಈ ಯಶಸ್ಸು ಅತ್ಯಂತ ಜತನದಿಂದ ರೂಪಿಸಿದ ಸರಣಿ ನೀತಿಗಳ ಫಲ. ಹಣದುಬ್ಬರವನ್ನು ಗುರಿಯಾಗಿಸಿಕೊಂಡು ಹಣಕಾಸು ಚೌಕಟ್ಟನ್ನು ಶಾಸನಾತ್ಮಕಗೊಳಿಸಲಾಗಿದೆ ಮತ್ತು  ಹಣದುಬ್ಬರವನ್ನು ತಡೆಯಲು ಸ್ವತಂತ್ರ ಹಣಕಾಸು ನೀತಿ ಸಮಿತಿಯನ್ನು ನಿಯಮಿಸಲಾಗಿದೆ. ಹಣಕಾಸು ಸ್ಥಿತಿಯನ್ನು  ಬಲಪಡಿಸುವ ದಾರಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಇದುವರೆಗಿನ ಮೂರು ಮುಂಗಡ ಪತ್ರಗಳಲ್ಲಿ ಹಣಕಾಸು ಕೊರತೆ  ಪ್ರಮಾಣದಲ್ಲಿ  ಸಾಕಷ್ಟು ಕಡಿತವಾಗಿದೆ.ಹಣಕಾಸು ಕೊರತೆಯನ್ನು ತಹಬಂದಿಗೆ ತಂದಿರುವ ಜತೆಯಲ್ಲಿ ನಾವು ಉತ್ಪಾದಕತೆ ಮಹತ್ವದ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಿದ್ದೇವೆ.
10. ಎರಡು ದಾರಿಗಳಲ್ಲಿ ಇದನ್ನು ಸಾಧ್ಯ ಮಾಡಲಾಗಿದೆ, ನಾವು ಸಾಂಪ್ರದಾಯಿಕ ಇಂಧನದ ಮೇಲೆ (ಫ಼ಾಸಿಲ್ ಫ಼್ಯುಯೆಲ್) ಕಾರ್ಬನ್ ತೆರಿಗೆ ಹಾಕಿದೆವು.ಡೀಸಿಲ್ ದರವನ್ನು ನಿಯಂತ್ರಣ ಮುಕ್ತಗೊಳಿಸುವ ಧೈರ್ಯದ ಕ್ರಮವನ್ನು ತೆಗೆದುಕೊಂಡೆವು ಮತ್ತು ಆ ಮೂಲಕ ಇಂಧನ ಸಬ್ಸಿಡಿಯನ್ನು ನಿವಾರಿಸಿದೆವು.ಆ ಬಳಿಕ ಅದನ್ನು ತೆರಿಗೆಗಳ ಮೂಲಕ ಸ್ಥಳಾಂತರಿಸಿದೆವು.ಟನ್ ಒಂದಕ್ಕೆ 50 ರೂ.ಗಳಷ್ಟು ಇದ್ದ ಸ್ವಚ್ಚ ಪರಿಸರ ಕರವನ್ನು  ಟನ್ ಒಂದಕ್ಕೆ 400 ರೂ.ಗಳಿಗೆ ,ಎಂಟು ಪಟ್ಟು ಹೆಚ್ಚಿಸಿದೆವು. ಜಾಗತಿಕವಾಗಿ ಕಾರ್ಬನ್ ತೆರಿಗೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ, ಆದರೆ ಹೆಚ್ಚಿನದ್ದು ಮಾತಿನಲ್ಲೇ ಉಳಿದಿದೆ.ನಾವು ನಿಜವಾಗಿ ಕ್ರಮ ತೆಗೆದುಕೊಂಡಿದ್ದೇವೆ.ಎರಡನೆಯದಾಗಿ ನಾವು ಹೊಸ ವಿಧಾನಗಳು ಮತ್ತು ತಂತ್ರಜ್ಞಾನ ಬಳಕೆಯ ಮೂಲಕ ಪೋಲಾಗುತ್ತಿದ್ದ ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಿದೆವು.ಸಹಾಯಧನವನ್ನು (ಸಬ್ಸಿಡಿಗಳನ್ನು) ಸಂಪೂರ್ಣ ಬಯೋಮೆಟ್ರಿಕ್ ಸಾಕ್ಷಾಧಾರ ಇರುವ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ.
11. ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಪ್ರಚೋದಿಸುವ ನಮ್ಮ ನೀತಿಗಳ ಬಗ್ಗೆ ನಾನೀಗ ಹೇಳುತ್ತೇನೆ.ಇಲ್ಲಿರುವ ಸಭಿಕರು ಬಹುಷಃ  ವಿದೇಶೀ ನೇರ ಹೂಡಿಕೆಯಲ್ಲಿ ನಾವು ಕೈಗೊಂಡ ಭರ್ಜರಿ ಕ್ರಮಗಳ ಬಗ್ಗೆ ಮಾಹಿತಿ ಹೊಂದಿರಬಹುದು. ನಾವು ಬಹುತೇಕ ವಲಯಗಳನ್ನು ಸ್ವಯಂಚಾಲಿತ ಅನುಮೋದನೆ  ವ್ಯವಸ್ಥೆಯಡಿ ತಂದಿದ್ದೇವೆ ಮತ್ತು ರಕ್ಷಣಾ ಖಾತೆ, ರೈಲ್ವೇಯಂತಹ ವಲಯಗಳನ್ನು ವಿದೇಶೀ ಹೂಡಿಕೆಗೆ ತೆರೆದಿದ್ದೇವೆ. ದೀರ್ಘಾವಧಿಯಿಂದ   ಬಾಕಿಯಾಗುಳಿದಿದ್ದ ವಿಮಾ ಕಾನೂನು ಸುಧಾರಣೆಗಳು ಯಶಸ್ವಿಯಾಗಿ ಅಂಗೀಕಾರವಾಗಿವೆ.ಅಮೇರಿಕನ್ ಕಂಪೆನಿಗಳು ಸೇರಿದಂತೆ ಹಲವು ವಿಮಾ ಕಂಪೆನಿಗಳು ವಿಮಾ ಕ್ಷೇತ್ರದಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಿವೆ. ವ್ಯಾಪಾರೋದ್ಯಮ ನಡೆಸಲು ಇದ್ದ ಅಡಚಣೆಗಳನ್ನು ನಿವಾರಿಸಿ ಉತ್ತಮ ವಾತಾವರಣವನ್ನು ನಿರ್ಮಿಸಲು ನಾವು   ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಜಾಗತಿಕ ಶ್ರೇಯಾಂಕದಲ್ಲಿ ತ್ವರಿತವಾಗಿ ಮೇಲೇರುತ್ತಿದ್ದೇವೆ. ಉತ್ತಮ ಗುಣಮಟ್ಟದ ಮತ್ತು  ದಕ್ಷತೆಯ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ನಾವು ವಿದೇಶೀ ಮತ್ತು ದೇಶೀಯ ಹೂಡಿಕೆದಾರರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಸರಕು ಸಾಗಣೆ ಮತ್ತು ಪ್ರಯಾಣದ ಸೌಕರ್ಯಗಳನ್ನು ಉತ್ತಮಪಡಿಸಲು ರಸ್ತೆಗಳು, ರೈಲ್ವೇ, ಬಂದರುಗಳು,ಮತ್ತು ಜಲಮಾರ್ಗಗಳ ಕ್ಷೇತ್ರದಲ್ಲಿ ಹೂಡಿಕೆಯನ್ನು ದೊಡ್ದ ಪ್ರಮಾಣದಲ್ಲಿ ಹೆಚ್ಚಿಸಿದ್ದೇವೆ. ಬಂದರುಗಳಲ್ಲಿ ಸರಕು ಪ್ರವೇಶ ಮತ್ತು ನಿರ್ಗಮನ ಅವಧಿಯನ್ನು ಕಡಿಮೆ ಮಾಡಲು ನಮ್ಮ ಬಂದರುಗಳಲ್ಲಿ ಪ್ರಮುಖ ಪ್ರಕ್ರಿಯಾ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ನಿಮ್ಮ ದೇಶದಲ್ಲಿರುವ ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ನಾವು ಮೆಚ್ಚುತ್ತೇವೆ. ಆ ಮಾದರಿಯನ್ನು  ಪುನರಾವರ್ತಿಸಲು ನಾವು ಆರಂಭಿಸಿದ್ದೇವೆ. ನಮ್ಮ ಸ್ಟಾರ್ಟಪ್ ಇಂಡಿಯಾ ಕಾರ್ಯಕ್ರಮ ಹೊಸ ತಲೆಮಾರಿನ ಶೋಧಕರನ್ನು ಪ್ರಚೋದಿಸಿದೆ.2016ರಲ್ಲಿ ಹೊಸತನ ಅನ್ವೇಷಿಸಲು  ಸ್ಥಾಪಿಸಲಾಗುವ ಕೇಂದ್ರಗಳಿಗೆ ಆಯ್ಕೆ ಮಾಡುವ ಸ್ಥಳಗಳಲ್ಲಿ ಬೆಂಗಳೂರು ಐದನೇ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.2015ರಲ್ಲಿ ಇದು ಟಾಪ್ 10ರ ಪಟ್ಟಿಯಲ್ಲಿ ಕೂಡಾ ಇರಲಿಲ್ಲ.
12. ನಮ್ಮ ಆರ್ಥಿಕತೆ ಯಶಸ್ವಿಯಾಗಬೇಕಿದ್ದರೆ ನಮಗೆ ಬಲವಾದ ಬ್ಯಾಂಕಿಂಗ್ ವ್ಯವಸ್ಥೆ ಬೇಕು. ಆತ್ಮೀಯ ಗೆಳೆಯ ಸಿದ್ಧಾಂತ ಮತ್ತು ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಭಾವಿಸಲಾದ ವ್ಯವಸ್ಥೆಯನ್ನು ನಾವು ಬಳುವಳಿಯಾಗಿ  ಪಡೆದಿದ್ದೆವು, ಬ್ಯಾಂಕಿಂಗ್ ನಿರ್ಧಾರಗಳು, ಮತ್ತು ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ನೇಮಕಾತಿಗಳು ಈ ಆಧಾರದ ಮೇಲೆಯೇ ನಡೆಯುತ್ತಿತ್ತು ಎಂಬ ಸ್ಥಿತಿ ಇತ್ತು . ನಾನು ಮೊದಲ ಬಾರಿಗೆ ಬ್ಯಾಂಕರ್ ಗಳ ಜತೆ ಪ್ರಧಾನಿಯಾಗಿ ಮಾತುಕತೆ ನಡೆಸಿದೆ. ನಾವು ಸ್ಪಷ್ಟ ಸಾಧನೆಯ ಕ್ರಮಗಳು ಮತ್ತು ಉತ್ತರದಾಯಿತ್ವದ ವ್ಯವಸ್ಥೆಯನ್ನು ಸ್ಥಾಪಿಸಿದೆವು. ಸಾಕಷ್ಟು ಬಂಡವಾಳ ಇರುವಂತೆ ನೋಡಿಕೊಳ್ಳುವುದಕ್ಕೆ ಬದ್ಧರಾಗಿದ್ದೆವು. ಬ್ಯಾಂಕಿಂಗ್ ನಿರ್ಧಾರಗಳಲ್ಲಿ ಮಧ್ಯಪ್ರವೇಶ ಕೊನೆಗೊಂಡಿತು.ಬ್ಯಾಂಕ್ ಮಂಡಳಿಗಳ ಬ್ಯೂರೋ ಅಡಿಯಲ್ಲಿ ನೇಮಕಾತಿಗಳಿಗಾಗಿ ಹೊಸ ಪ್ರಕ್ರಿಯೆ ಜಾರಿಗೆ ತರಲಾಯಿತು.ಬ್ಯಾಂಕುಗಳ ನಾಯಕತ್ವ ವಹಿಸಲು ವಿಶ್ವಾಸಾರ್ಹ ಮತ್ತು ಸಾಮರ್ಥ್ಯಶೀಲ ಬ್ಯಾಂಕರ್ ಗಳನ್ನು ನೇಮಿಸಲಾಯಿತು. ಬ್ಯಾಂಕುಗಳು ರಾಷ್ಟ್ರೀಕರಣಗೊಂಡ 47 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಖಾಸಗಿ ವಲಯದ ವೃತ್ತಿಪರರನ್ನು ಪ್ರಮುಖ ಸ್ಥಾನಗಳಿಗೆ ನೇಮಿಸಲಾಯಿತು.
13. ನಾನೀಗ ನಮ್ಮ ಬೆಳವಣಿಗೆ ಎಲ್ಲರನ್ನು ಸೇರ್ಪಡೆಗೊಳಿಸುವ ನೀತಿಗಳನ್ನು ಹೊಂದಿರುವ ಬಗ್ಗೆ ಹೇಳುತ್ತೇನೆ.’ಜನ್ ಧನ್ ’ ಯೋಜನೆಯ ಮೂಲಕ ನಾವು 200 ಮಿಲಿಯನ್ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಂದೆವು. ಇದು ವಿಶ್ವದಲ್ಲಿರುವ ಹಲವು ದೇಶಗಳ ಜನಸಂಖ್ಯೆಗಿಂತ ಹೆಚ್ಚಿನದು.ಈಗ ಈ ಮಿಲಿಯಾಂತರ ಜನರು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗಿದ್ದಾರೆ ಮತ್ತು ’ಬಡ್ಡಿಯ ದರ’ ಎಂಬ ಶಬ್ದ ಅವರಿಗೆ ಅರ್ಥವಾಗತೊಡಗಿದೆ. ಈ ಜನರು ಪಿರಮಿಡ್ಡಿನ ಕೆಳಭಾಗದಲ್ಲಿ ದೊಡ್ಡ ಬಲವಿದೆ ಎಂಬುದನ್ನು ತೋರಿಸಿದ್ದಾರೆ. ನಂಬಿ ಅಥವಾ ಬಿಡಿ, ಜನ್ ಧನ್ ಯೋಜನೆಯಡಿ ತೆರೆಯಲಾದ ಖಾತೆಗಳು ಇಂದು ಒಟ್ಟು ಆರು ಬಿಲಿಯನ್ ಡಾಲರ್ ಶಿಲ್ಕನ್ನು ಹೊಂದಿವೆ.
14. ಜನ ಧನ್  ಯೋಜನೆಯು ಬಡವರ ಸಾಮರ್ಥ್ಯವನ್ನು ಬದಲಾಯಿಸಿದೆ, ಅವರೀಗ ಇಲೆಕ್ಟ್ರಾನಿಕ್ ಪಾವತಿ ಮೂಲಕ ಪಾವತಿ ಮಾಡಲು ಮತ್ತು ಹಣ ಪಡೆಯಲು ಶಕ್ತರಾಗಿದ್ದಾರೆ. ಪ್ರತೀ ಜನ ಧನ ಖಾತೆದಾರರೂ ಡೆಬಿಟ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಭಾರತದ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಗೆ ’ಸಂಚಾರಿ ಎಟಿಎಂಗಳನ್ನು ಕಾರ್ಯಾಚರಿಸುವಂತೆ ಮಾಡಲು ಉತ್ತೇಜನ ನೀಡಲಾಗಿದೆ. ಈ ಮೊಬೈಲ್ ಎಟಿಎಂ ಎಂದರೆ ಕೈಯಲ್ಲಿ ಹಿಡಿಯುವಂತಹ ಗಾತ್ರದ ಒಂದು ಯಂತ್ರ. ಅದರಿಂದ ನಗದನ್ನು ಪಡೆಯಬಹುದು ಮತ್ತು ಕೆಲ ಸರಳ ಬ್ಯಾಕಿಂಗ್ ಕೆಲಸಗಳನ್ನು ಮಾಡಬಹುದು.
15. ನಾವು ಹೊಸ ಸಾಮಾಜಿಕ ಸುರಕ್ಷಾ ಯೋಜನೆಗಳ ಮೂಲಕ ಸುರಕ್ಷಾ ಜಾಲವೊಂದನ್ನು ನಿರ್ಮಿಸಿದ್ದೇವೆ. ನಾವು ಮೂರು ಸಬ್ಸಿಡಿರಹಿತ ಆದರೆ ಕಡಿಮೆ ಖರ್ಚಿನ ಯೋಜನೆಗಳನ್ನು ಅಪಘಾತ ವಿಮೆ, ಜೀವ ವಿಮೆ ಮತ್ತು ನಿವೃತ್ತಿ ವೇತನಗಳಿಗೆ ಸಂಬಂಧಿಸಿ ಜಾರಿಗೆ ತಂದಿದ್ದೇವೆ.ಇವುಗಳ ವ್ಯಾಪಕ ಸಾಮೂಹಿಕ ವ್ಯಾಪ್ತಿಯಿಂದಾಗಿ ಪ್ರೀಮಿಯಂ ಕಡಿಮೆ ಇದೆ. ಈಗ 120 ಮಿಲಿಯನ್ನಿಗೂ ಅಧಿಕ ಚಂದಾದಾರರು ಇದರಲ್ಲಿದ್ದಾರೆ.
16. ಲಿಂಗ ನ್ಯಾಯದ ನಿಟ್ಟಿನಲ್ಲಿ ನಾವು ವಿಶೇಷ   ಗಮನ ಹರಿಸಿದ್ದೇವೆ ಮತ್ತು ಮಹಿಳಾ ಸಶಕ್ತೀಕರಣಕ್ಕೂ ಆದ್ಯತೆ ಕೊಟ್ಟಿದ್ದೇವೆ.ಬಾಲಕಿಯರ ಶಿಕ್ಷಣಕ್ಕೆ ಸಹಾಯ ಮಾಡಲು ನಾವು ವಿಶೇಷ ಹೆಚ್ಚುವರಿ ಬಡ್ಡಿದರದೊಂದಿಗೆ ಹೊಸ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ.ಉರುವಲಿನಿಂದ ಅಡುಗೆ ಮಾಡುವ ಗ್ರಾಮೀಣ ಮಹಿಳೆಯರ ಆರೋಗ್ಯದ ತೊಂದರೆಗಳನ್ನು ನಿವಾರಿಸಲು ಬಡ ಗ್ರಾಮೀಣ ಪ್ರದೇಶಗಳಲ್ಲಿ 50 ಮಿಲಿಯನ್ ಹೊಸ ಅಡುಗೆ ಅನಿಲ ಸಂಪರ್ಕಗಳನ್ನು  ನೀಡುತ್ತಿದ್ದೇವೆ.ನಮ್ಮ ಹೊಸ ಸ್ವಯಂ ಉದ್ಯೋಗ ಯೋಜನೆ ಹಣಕಾಸು ಕಾರ್ಯಕ್ರಮದಡಿ (ಮುದ್ರಾ)  70%ಗೂ ಅಧಿಕ ಫಲಾನುಭವಿಗಳು ಮಹಿಳೆಯರು. 27 ಮಿಲಿಯನ್ನಿಗೂ ಅಧಿಕ ಹೊಸ ಮಹಿಳಾ ನಾಯಕತ್ವದ ವ್ಯಾಪಾರೋದ್ಯಮಗಳಿಗೆ ಸಹಾಯ ನೀಡಲಾಗಿದೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಸೈನಿಕ ಕಾದಾಟದ  ಹುದ್ದೆಗಳಿಗೆ ನೇಮಕಗೊಳ್ಳಲು ಅನುಕೂಲವಾಗುವಂತೆ ನಮ್ಮ ನೀತಿಗಳನ್ನು ಬದಲಿಸಿಕೊಂಡಿದ್ದೇವೆ. ಕಾರ್ಪೋರೇಟ್ ನಿರ್ದೇಶಕ ಮಂಡಳಿಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೊಸ ನಿಯಮಗಳಿಂದಾಗಿ ಹೆಚ್ಚತೊಡಗಿದೆ.
17. ಜೀವನೋಪಾಯ ಒದಗಿಸುವ ನಿಟ್ಟಿನಲ್ಲಿ ಕೃಷಿ  ಭಾರತದ ಮುಖ್ಯವಾಹಿನಿಯಲ್ಲಿದೆ. ಸಬ್ಸಿಡಿಯ ರಸಗೊಬ್ಬರಗಳನ್ನು  ರಾಸಾಯನಿಕಗಳ ತಯಾರಿಕೆಗಾಗಿ  ಬೇರೆಡೆಗೆ ಕೊಂಡೊಯ್ದು ರೈತರಿಗೆ ಅವುಗಳು ದೊರಕದಂತೆ ಮಾಡುವ ಧೋರಣೆ ಚಾಲ್ತಿಯಲ್ಲಿತ್ತು. ಅತ್ಯಂತ ಸರಳ ಮತ್ತು ಅತ್ಯಂತ ಕ್ರಿಯಾಶೀಲವಾದ ಪರಿಹಾರವಾಗಿ ರಸಗೊಬ್ಬರವನ್ನು ಬೇವಿನ ಲೇಪನಕ್ಕೊಳಪಡಿಸುವ ಮೂಲಕ ಬೇರೆ ದಾರಿಯಲ್ಲಿ ರಸಗೊಬ್ಬರಗಳು  ಸಾಗಿ ಕೈಗಾರಿಕೆಗಳ ಪಾಲಾಗುವುದನ್ನು ತಡೆಯಲಾಯಿತು. ನಾವು ಯೂರಿಯಾವನ್ನು ಪೂರ್ಣವಾಗಿ ಬೇವು ಮಿಶ್ರಿತವಾಗಿರುವಂತೆ ಕ್ರಮ ಕೈಗೊಂಡಿರುವುದರಿಂದ ಬೇರೆಡೆಗೆ ಸಾಗುತ್ತಿದ್ದ ಕೃಷಿ ಸಹಾಯಧನದ ಕೋಟ್ಯಾಂತರ ರೂಪಾಯಿಗಳ ಉಳಿತಾಯವಾಯಿತು ಮತ್ತು ರೈತರಿಗೆ ರಸಗೊಬ್ಬರ ಲಭ್ಯತೆಯಲ್ಲಿ ಸುಧಾರಣೆಯಾಯಿತು. ಸರಳ ಸುಧಾರಣೆಗಳು ಕೂಡಾ ಹೇಗೆ ಅತ್ಯಂತ ಪರಿಣಾಮಕಾರಿಯಾಗಿರುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ..
18. ನಾವು ರಾಷ್ಟ್ರ ಮಟ್ಟದಲ್ಲಿ ಮಣ್ಣಿನ ಆರೋಗ್ಯ ಕಾರ್ಡುಗಳನ್ನು ಚಾಲ್ತಿಗೆ ತಂದೆವು., ಈ ಕಾರ್ಡುಗಳು ಪ್ರತೀ ರೈತರಿಗೆ ಅವರ ಮಣ್ಣಿನ ಪರಿಸ್ಥಿತಿಯನ್ನು ಹೇಳುತ್ತವೆ. ಇದರಿಂದ ರೈತರಿಗೆ ಉತ್ತಮ ಬೆಳೆ, ಸರಿಯಾದ ಪ್ರಮಾಣ ಮತ್ತು ಒಳಸುರಿಗಳ ಮಿಶ್ರಣದ ಬಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದು ಒಳಸುರಿಗಳು ಪೊಲಾಗುವುದನ್ನು ಕಡಿಮೆ ಮಾಡುವುದಲ್ಲದೆ ಮಣ್ಣಿನ ರಕ್ಷಣೆಯೊಂದಿಗೆ ಬೆಳೆ ಉತ್ಪನ್ನವನ್ನು ಹೆಚ್ಚಿಸುತ್ತದೆ. ಅನಗತ್ಯ  ರಾಸಾಯನಿಕ ಒಳಸುರಿಗಳನ್ನು ಕಡಿಮೆ ಮಾಡುವುದು, ಬಳಕೆದಾರರ ಆರೋಗ್ಯಕ್ಕೂ ಒಳ್ಳೆಯದು.140 ಮಿಲಿಯನ್ ಮಣ್ಣಿನ ಆರೋಗ್ಯ ಕಾರ್ಡುಗಳನ್ನು ವಿತರಿಸಲಾಗುತ್ತದೆ, 25 ಮಿಲಿಯನ್ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಬೇಕಾಗಿದೆ, ಇವುಗಳನ್ನು ರಾಷ್ಟ್ರದಾದ್ಯಂತ ಇರುವ ಸುಮಾರು 1500 ಪ್ರಯೋಗಾಲಯಗಳ ಜಾಲದ ಮೂಲಕ ಪರೀಕ್ಷೆ ಮಾಡಲಾಗುತ್ತದೆ.
19.ಇದೊಂದು ಸಾಧನೆ, ಇದನ್ನು ನಮ್ಮ ಅತ್ಯಂತ ಕೆಟ್ಟ ಟೀಕಾಕಾರರೂ ವಿವಾದಾಸ್ಪದಗೊಳಿಸಲಾರರು ಎಂದು ಭಾವಿಸುತ್ತೇನೆ.. ಇದು ಭ್ರಷ್ಟಾಚಾರದ ಮಟ್ಟದಲ್ಲಿಯ ಬದಲಾವಣೆ. ಹಲವು ವರ್ಷಗಳಿಂದ ಅರ್ಥಶಾಸ್ತ್ರಜ್ಞರು ಮತ್ತು ಇತರ ತಜ್ಞರು ಯಾವುದೇ ಅಭಿವೃದ್ಧಿಶೀಲ ರಾಷ್ಟ್ರದ ಆರ್ಥಿಕತೆಯ ಪ್ರಗತಿಗೆ ಭ್ರಷ್ಟಾಚಾರ ಒಂದು ದೊಡ್ಡ ಅಡ್ಡಿ ಎಂದು ಹೇಳುತ್ತಲೇ ಬಂದಿದ್ದಾರೆ. ನಾವು ಭ್ರಷ್ಟಾಚಾರವನ್ನು ತಡೆಯಲು ನಿರ್ಧಾರಾತ್ಮಕ ಕ್ರಮಗಳನ್ನು ಕೈಗೊಂಡಿದ್ದೇವೆ. ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ನಾವೇನು ಕ್ರಮ ಕೈಗೊಂಡಿದ್ದೇವೆ ಎಂಬುದನ್ನು ನಾನೀಗಾಗಲೇ ಪ್ರಸ್ತಾಪಿಸಿದ್ದೇನೆ .  ಪ್ರಮುಖ ಸಂಪನ್ಮೂಲಗಳ ವಿತರಣೆಯಲ್ಲಿ ವಿವೇಚನಾಧಿಕಾರವನ್ನು ನಾವು ತೆಗೆದು ಹಾಕಿದ್ದೇವೆ ಮತ್ತು ಗಣಿ ಹರಾಜನ್ನು ಪಾರದರ್ಶಕವಾಗಿ ನಡೆಸಿದ್ದೇವೆ. ತರಂಗಾಂತರ ಮತ್ತು ಎಫ಼್.ಎಂ.ರೇಡಿಯೋ ಪರವಾನಗಿಗಳನ್ನು ಅದೇ ರೀತಿ ವಿತರಿಸಲಾಗಿದೆ.ಮತ್ತು ಸೋರಿಕೆಯನ್ನು ನೇರ ನಗದು ವರ್ಗಾವಣೆ ಮೂಲಕ ತಡೆದಿದ್ದೇವೆ.ಸಮಗ್ರತೆಯ ವ್ಯಕ್ತಿಗಳು ಉನ್ನತ ಹುದ್ದೆಗಳನ್ನು ಹೊಂದುವುದನ್ನು ಖಾತ್ರಿಪಡಿಸಲು ಸಿಬ್ಬಂದಿ  ಆಡಳಿತವನ್ನು ಸುಧಾರಣಾ ಕ್ರಮಗಳಿಗೆ ಒಳಪಡಿಸಿದ್ದೇವೆ. ತೆರಿಗೆ ಕಳ್ಳತನ ಮತ್ತು ಕಪ್ಪು ಹಣದ ವಿರುದ್ಧ ಪ್ರಚಾರಾಂದೋಲನವನ್ನು ಕೈಗೊಂಡಿದ್ದೇವೆ. ಭ್ರಷ್ಟಾಚಾರ ನಿಯಂತ್ರಣದಿಂದ ಬಡವರು ಫಲಾನುಭವಿಗಳಾಗಿದ್ದಾರೆ.
 
20. ಭವಿಷ್ಯದ ಕಡೆ ನೋಡುತ್ತಾ, ನಾನು ಕಾಣುತ್ತಿರುವ ದಾರಿಯನ್ನು ಮತ್ತು ಬರಲಿರುವ ವರ್ಷಗಳಲ್ಲಿ ನಾವು ಅನುಸರಿಸುವ ದಾರಿಯ ಚೌಕಟ್ಟಿನ ಬಗ್ಗೆ ಹೇಳುತ್ತೇನೆ
21. ಮೊದಲನೆಯದಾಗಿ ನಾವು ಶಿಸ್ತುಬದ್ಧ ಮತ್ತು ದೂರದೃಷ್ಟಿಯ, ವಿವೇಕಯುತವಾದ ಬೃಹತ್ ಆರ್ಥಿಕ ನೀತಿಗಳನ್ನು ಮುಂದುವರಿಸುತ್ತೇವೆ.ದೃಢವಾದ ಬೃಹತ್ ಆರ್ಥಿಕ ಮೂಲಭೂತ ತತ್ವಗಳು ದೀರ್ಘಾವಧಿ ಸಹ್ಯ ಬೆಳವಣಿಗೆಗೆ ಅಗತ್ಯ ತಳಪಾಯಗಳು ಎಂದು ನಾನು ದೃಢವಾಗಿ ನಂಬಿದ್ದೇನೆ.
22.ಎರಡನೇಯದಾಗಿ ಇದನ್ನು ಸೇರ್ಪಡೆ ಮತ್ತು ನೀತಿಯನ್ನು ಜೋಡಿಸಿಕೊಂಡು ಅದರ ಮೇಲೆ ಸತತವಾಗಿ ನಿಗಾ ಇರಿಸುತ್ತೇವೆ. ಅಭಿವೃದ್ಧಿಯ ಫಲ ಕೆಲವರಿಗೆ ಮಾತ್ರವೇ ದಕ್ಕುವುದನ್ನು ತಡೆದು ಎಲ್ಲ ಭಾರತೀಯರಿಗೂ ದಕ್ಕುವಂತೆ ಖಾತ್ರಿಪಡಿಸುವುದಕ್ಕಾಗಿ ಈ ಕ್ರಮ ಅನುಸರಿಸುತ್ತೇವೆ. ಮತ್ತು ಇದರ ಅರ್ಥ ಭ್ರಷ್ಟಾಚಾರದ ವಿರುದ್ಧ ನಮ್ಮ ದಾಳಿ ಮುಂದುವರಿಯುತ್ತದೆ ಎಂಬುದಾಗಿದೆ.
23. ಮೂರನೇಯದಾಗಿ, ನಾವು ಹೂಡಿಕೆ ವಾತಾವರಣವನ್ನು ಸುಧಾರಿಸಲು, ವ್ಯಾಪಾರೋದ್ಯಮ ನಡೆಸಲು ಅನುಕೂಲಕರ ವಾತಾವರಣವನ್ನು ನಿರ್ಮಿಸಲು ಪ್ರಯತ್ನಗಳನ್ನು ಸತತವಾಗಿ ಮುಂದುವರಿಸುತ್ತೇವೆ.ಭಾರತವು ಹೂಡಿಕೆಯನ್ನು ಆಕರ್ಷಿಸುವ  ಕೇಂದ್ರ ಮಾತ್ರವಲ್ಲದೆ ವ್ಯಾಪಾರೋದ್ಯಮಕ್ಕೆ ಅನುಕೂಲಕರ ಸ್ಥಳವೆಂಬಂತೆ ಭಾರತವನ್ನು ರೂಪಿಸುತ್ತೇವೆ.ಮೊದಲನೆಯದನ್ನು ನಾವು ನಮ್ಮ ವಿದೇಶೀ ಹೂಡಿಕೆ ನೀತಿಗಳಲ್ಲಿ ವ್ಯಾಪಕ ಬದಲಾವಣೆಗಳನ್ನು, ಸುಧಾರಣೆಗಳನ್ನು ತರುವ ಮೂಲಕ ಸಾಧಿಸಿದ್ದೇವೆ. ಎರಡನೇಯ ವಿಷಯಕ್ಕೆ ಸಂಬಂಧಿಸಿ ನಾವು ಉತ್ತಮ ಆರಂಭ ಮಾಡಿದ್ದೇವೆ ಮತ್ತು ಇನ್ನಷ್ಟು ಸುಧಾರಣೆಗಳನ್ನು , ಪ್ರಗತಿಯನ್ನು ಸಾಧಿಸಲು ಮುಂದಡಿ ಇಡುತ್ತೇವೆ.
24.  ನಮ್ಮ ’ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ.ರಫ಼್ತಿಗೆ  ಪರ್ಯಾಯವಾಗಿ ಅಥವಾ ದೇಶೀಯ ಮಾರುಕಟ್ಟೆಗಾಗಿ ಉತ್ಪಾದನೆ ಮಾಡುವ ಏಕೈಕ ಉದ್ದೇಶ ಇದರದ್ದಲ್ಲ.ವಿಶ್ವ ದರ್ಜೆಯ ಉತ್ಪನ್ನಗಳನ್ನು ತಯಾರಿಸುವುದು ಮತ್ತು ಇಡೀ ವಿಶ್ವಕ್ಕೆ ಸೇವೆಗಳನ್ನು ಪೂರೈಸುವುದು ಇದರ ಆಶಯ.ಆ ಕಾರಣಕ್ಕಾಗಿ, ನಮಗೆ ಮುಕ್ತ ವ್ಯಾಪಾರದತ್ತ ಸುಧಾರಣೆ, ಪ್ರಗತಿ ಬಹಳ ಮುಖ್ಯ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಮಾರುಕಟ್ಟೆಗಳನ್ನು ಭಾರತದಂತಹ ರಾಷ್ಟ್ರಗಳ ಸರಕುಗಳಿಗೆ ತೆರೆದಿಡುವುದು ಮಾತ್ರವಲ್ಲ ಸೇವೆಗಳಿಗೂ ಅಂತಹ ಅವಕಾಶ ಸಿಗುವಂತೆ ಮಾಡುವುದು ನಮಗೆ ಬಹಳ ಮುಖ್ಯ. ಇದು ಅಮೇರಿಕಾ ಮತ್ತು ಭಾರತಕ್ಕೆ ಪರಸ್ಪರ ಗಳಿಕೆಯ ಪ್ರಸ್ತಾಪ. ನನ್ನ ದೃಷ್ಟಿಯಲ್ಲಿ ಅಮೇರಿಕಾದ ಬಂಡವಾಳ ಹಾಗು ನಾವೀನ್ಯತೆಯ ಶೋಧನೆ ಮತ್ತು ಭಾರತದ ಮಾನವ ಸಂಪನ್ಮೂಲ ಹಾಗು ಉದ್ಯಮಶೀಲತ್ವದ ಪಾಲುದಾರಿಕೆ  ಅತ್ಯಂತ ಶಕ್ತಿಶಾಲಿಯಾಗಬಲ್ಲುದು. ಇಂತಹ ಸಹಭಾಗಿತ್ವದ ಮೂಲಕ ಉಭಯ ದೇಶಗಳು ತಮ್ಮ ಆರ್ಥಿಕತೆಯನ್ನು ಬಲಪಡಿಸಬಹುದು ಎಂಬುದು ನನಗೆ ಮನದಟ್ಟಾಗಿದೆ.
 
 
25. ನಾವು ನಮ್ಮ ತೆರಿಗೆ ನೀತಿಗಳು ಹೆಚ್ಚು ದೃಢವಾಗಿರುವ ರೀತಿಯಲ್ಲಿ ರೂಪಿಸುವುದನ್ನು ಮುಂದುವರಿಸುತ್ತೇವೆ. ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಜತೆ ಹಲವು ಮುಂಗಡ ದರ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ನಾವು ಈ ನಿಟ್ಟಿನಲ್ಲಿ ಪ್ರಮುಖವಾಗಿ ದೃಢತೆಯ ದಾಪುಗಾಲು ಹಾಕಿದ್ದೇವೆ.ಇದನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಲು ನಾವು ಸಿದ್ದರಿದ್ದೇವೆ. ಇದೇ ರೀತಿ ಅಮೇರಿಕಾದಂತೆ, ನಾವೂ ತೆರಿಗೆ ತಪ್ಪಿಸುವುದನ್ನು , ಅನ್ಯಾಯವಾದ ರೀತಿಯಲ್ಲಿ ತೆರಿಗೆಯಿಂದ ನುಣುಚಿಕೊಳ್ಳುವುದನ್ನು ನಿರ್ಬಂಧಿಸಲು ಕಠಿಣ ಕ್ರಮ ಕೈಗೊಳ್ಳುತ್ತೇವೆ.
26. ನಾವು ನಮ್ಮ ರಕ್ಷಣಾ ಕ್ಷೇತ್ರವನ್ನು ಮುಕ್ತಗೊಳಿಸುವುದನ್ನು ಮುಂದುವರಿಸುತ್ತೇವೆ. ನನಗೆ ತಿಳಿದಿದೆ,- ಪರವಾನಗಿ ನೀತಿಗಳು ಕೆಲಕಾಲ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಯ ಪ್ರಕ್ರಿಯೆಗೆ ನಿಧಾನಗತಿ ಉಂಟುಮಾಡಬಹುದು. ನಾವು ರಕ್ಷಣಾ ಕ್ಷೇತ್ರಕ್ಕಾಗಿ ಸರಳ ಮತ್ತು ದಕ್ಷತೆಯ ಯೋಜನೆ ಪರವಾನಗಿ ಮಾದರಿಯನ್ನು ರೂಪಿಸಲು ದಾರಿ ಹುಡುಕುತ್ತಿದ್ದೇವೆ. ಅಣು ವಿದ್ಯುತ್ ಕ್ಷೇತ್ರದಲ್ಲಿ  ನಾವು ಆರು ಅಣು ರಿಯಾಕ್ಟರ್ ಗಳನ್ನು  ವೆಸ್ಟಿಂಗ್ ಹೌಸ್ ಮೂಲಕ ಖರೀದಿ ಮಾಡುತ್ತಿದ್ದು, ಇದು ನಮ್ಮ ಅಣು ಮತ್ತು ವೈಜ್ಞಾನಿಕ ಸಹಕಾರದಲ್ಲಿ ಹೊಸ ಶಕೆ ದಾಖಲಿಸಲಿದೆ. ಜಿಇ ಸಂಸ್ಥೆಯು ಹೊಸದಾಗಿ ಉದಾರೀಕರಣಕ್ಕೆ ತೆರೆದುಕೊಂಡ ರೈಲ್ವೇ ವಲಯದಲ್ಲಿ ಪ್ರಮುಖ ಹೂಡಿಕೆ ಮಾಡುವ ಮೊದಲ ಕಂಪೆನಿಯಾಗಿ ಮುಂದೆ ಬಂದಿರುವುದಕ್ಕೆ ನಾನು ಹರ್ಷಪಡುತ್ತೇನೆ. ಅದು ತುಲನಾತ್ಮಕವಾಗಿ ಬಡ ರಾಜ್ಯವಾಗಿರುವ ಬಿಹಾರದಲ್ಲಿ ಲೊಕೋಮೋಟಿವ್ ತಯಾರಿಕೆ ಘಟಕವನ್ನು ಸ್ಥಾಪಿಸುತ್ತದೆ. ನಾನು ಇಂತಹ ಇನ್ನಷ್ಟು ಹೂಡಿಕೆಗಳನ್ನು ನಿರೀಕ್ಷೆ ಮಾಡುತ್ತಿದ್ದೇನೆ.
27. ಗಂಗಾ ನದಿ ಭಾರತಕ್ಕೆ ವಿಶೇಷ ಪ್ರಾಮುಖ್ಯತೆ ಹೊಂದಿರುವಂತಹದ್ದು. ಗಂಗಾ ನದಿಯನ್ನು ಶುದ್ದೀಕರಿಸುವ ’ನಮಾಮಿ ಗಂಗ” ಕಾರ್ಯಕ್ರಮ ಚಾಲನೆಗೆ ಬರುತ್ತಿದೆ. ಬರಲಿರುವ ವರ್ಷಗಳಲ್ಲಿ ಇದಕ್ಕೆ ಬಹಳ ದೊಡ್ದ ಪ್ರಾಮುಖ್ಯತೆ ಲಭಿಸಲಿದೆ.ಈ ಯೋಜನೆ ಅಮೇರಿಕನ್ ಕಂಪೆನಿಗಳಿಗೆ ಪರಿಸರ ಇಂಜಿನಿಯರಿಂಗ್, ನೀರು ಮತ್ತು ಕೊಳಚೆ ಶುದ್ದೀಕರಣ ಹಾಗು ಅಂತಹ ಇತರ ಕ್ಷೇತ್ರಗಳಲ್ಲಿ ತಮ್ಮ ಪ್ರಾವೀಣ್ಯತೆ, ಅನುಭವ ತೋರ್ಪಡಿಸಲು ಪ್ರಮುಖ ಅವಕಾಶಗಳನ್ನು ಒದಗಿಸುತ್ತದೆ. ನನ್ನ ಸರಕಾರಕ್ಕೆ ಇದು ಗರಿಷ್ಟ ಆದ್ಯತೆಯ ಯೋಜನೆ ಮತ್ತು ಹಿಂದಿನ ವೈಭವದಲ್ಲಿ  ಗಂಗೆಯನ್ನು ಪುನರ್ಸ್ಥಾಪನೆ   ಮಾಡುವುದು ನಮ್ಮ ಗುರಿ.
28. ಮಹಿಳೆಯರೇ ಮತ್ತು ಮಹನೀಯರೇ, ಬದಲಾವಣೆಯ ಭಾರತದತ್ತ ನಮ್ಮ ಪ್ರಯಾಣ ಆರಂಭವಾಗಿದೆ. ಬದಲಾದ ಭಾರತ , ಆರನೇ ಒಂದಂಶದಷ್ಟು ಮಾನವೀಯತೆ ಎಂದರೆ ಅದು ಬದಲಾದ ವಿಶ್ವ. ಈ ಪ್ರಯಾಣ ಬಲು ದೀರ್ಘ . ಆದರೆ ಇದುವರೆಗೆ ನಾವು ಸಾಧಿಸಿದ ಪ್ರಗತಿ, ನಾವು ಅಲ್ಲಿಗೆ ತಲುಪುತ್ತೇವೆ ಎಂಬ ಅಂಶವನ್ನು ನನಗೆ ಮನದಟ್ಟು ಮಾಡಿದೆ. ಈ ಪ್ರಯಾಣದಲ್ಲಿ ನೀವೂ ಸೇರಿಕೊಳ್ಳಿರೆಂದು ನಾನು ಆಹ್ವಾನ ನೀಡುತ್ತೇನೆ. ಈ ಪ್ರಯಾಣ ನಿಮ್ಮ ಕಂಪೆನಿಗೆ ಉತ್ತಮ ಬ್ಯಾಲೆನ್ಸ್ ಶೀಟ್ ರೂಪಿಸುವ ರೋಮಾಂಚಕಾರೀ ಸಾಧ್ಯತೆಯನ್ನು ಮಾತ್ರವಲ್ಲ ಜತೆಗೆ ಉತ್ತಮ ಭಾರತವನ್ನು ಕಟ್ಟುವ, ಉತ್ತಮ ಅಮೇರಿಕಾವನ್ನು ನಿರ್ಮಿಸುವ  ಮತ್ತು ಉತ್ತಮ ವಿಶ್ವವನ್ನು ನಿರ್ಮಿಸುವ ಸಾಧ್ಯತೆಯ ಅವಕಾಶವೂ ಹೌದು.
 
ಧನ್ಯವಾದಗಳು. 
***