Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಧನ ಭದ್ರತೆ ಕುರಿತು ಭಾರತ-ಆಸ್ಟ್ರೇಲಿಯಾ ಜಂಟಿ ಹೇಳಿಕೆ


ಮುಕ್ತ, ವಿಸ್ತೃತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ವಲಯದ ಕುರಿತು ಸಮಾನ ದೃಷ್ಟಿಕೋನವನ್ನು ಹೊಂದಿರುವ ಆಸ್ಟ್ರೇಲಿಯಾ ಮತ್ತು ಭಾರತವು ಸಮಗ್ರ ಕಾರ್ಯತಂತ್ರದ ಪಾಲುದಾರ ರಾಷ್ಟ್ರಗಳಾಗಿವೆ.

ಇಂಧನ, ಸಂಪನ್ಮೂಲಗಳು ಮತ್ತು ಇತರ ಪ್ರಮುಖ ಸರಕುಗಳ ಪೂರೈಕೆ ಸರಪಳಿ ಹಾಗೂ ಬೆಲೆಗಳ ಮೇಲಿನ ಅಡಚಣೆಗಳಿಂದಾಗುವ ದೀರ್ಘಕಾಲೀನ ಪ್ರಭಾವವೂ ಸೇರಿದಂತೆ, ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಮತ್ತು ನಮ್ಮ ವಲಯದ ಮೇಲೆ ಅದು ಬೀರುತ್ತಿರುವ ಪರಿಣಾಮಗಳ ಬಗ್ಗೆ ಆಸ್ಟ್ರೇಲಿಯಾ ಮತ್ತು ಭಾರತ ತೀವ್ರ ಕಳವಳ ಹೊಂದಿವೆ. ಈ ಅಡೆತಡೆಗಳ ನಡುವೆಯೂ, ನಮ್ಮ ಸಮೃದ್ಧಿ ಮತ್ತು ಆರ್ಥಿಕ ಭದ್ರತೆಗೆ ಬುನಾದಿಯಾಗಿರುವ ತತ್ವಗಳಾದ ಮುಕ್ತ ಮಾರುಕಟ್ಟೆ ಹಾಗೂ ನಿಯಮಾಧಾರಿತ ವ್ಯಾಪಾರ-ವಹಿವಾಟಿನ ಕುರಿತ ನಮ್ಮ ಜಂಟಿ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ.

ಸ್ಥಿರ ಮತ್ತು ವಿಶ್ವಾಸಾರ್ಹ ಇಂಧನ ಪೂರೈಕೆಗೆ ಖಾಸಗಿ ವಲಯದ ನಂಬಿಕಸ್ಥ ಪಾಲುದಾರಿಕೆಗಳು ಮತ್ತು ಕಾರ್ಯತಂತ್ರದ ಹೂಡಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಆಸ್ಟ್ರೇಲಿಯಾ ಮತ್ತು ಭಾರತ ಒಪ್ಪಿಕೊಳ್ಳುತ್ತವೆ. ಇದಕ್ಕೆ ಪೂರಕವಾಗಿ ಮತ್ತು ಖಾಸಗಿ ವಲಯದ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಬೆಂಬಲಿಸಲು, ಉಭಯ ದೇಶಗಳು ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ECTA), ಪ್ರಸ್ತುತ ಪ್ರಗತಿಯಲ್ಲಿರುವ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (CECA) ಹಾಗೂ ಇತರ ಪ್ರಸ್ತುತ ದ್ವಿಪಕ್ಷೀಯ ಚೌಕಟ್ಟುಗಳ ಮೂಲಕ ದ್ವಿಪಕ್ಷೀಯ ಇಂಧನ ವ್ಯಾಪಾರ ಮತ್ತು ಹೂಡಿಕೆ ಸಹಕಾರವನ್ನು ಮುನ್ನಡೆಸಲು ಬದ್ಧವಾಗಿವೆ. ಇಂಧನ ವಲಯದಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಜ್ಞಾನ ವಿನಿಮಯದ ಮಹತ್ವವನ್ನು ಆಸ್ಟ್ರೇಲಿಯಾ ಮತ್ತು ಭಾರತ ಮತ್ತೊಮ್ಮೆ ಒತ್ತಿಹೇಳಿವೆ.

ಭಾರತಕ್ಕೆ ದ್ರವೀಕೃತ ನೈಸರ್ಗಿಕ ಅನಿಲದ (LNG) ಪ್ರಮುಖ ಪೂರೈಕೆದಾರನಾಗಿ ಆಸ್ಟ್ರೇಲಿಯಾದ ಪಾತ್ರವನ್ನು ಹಾಗೂ ಆಸ್ಟ್ರೇಲಿಯಾಕ್ಕೆ ದ್ರವ ಇಂಧನಗಳು ಮತ್ತು ಇತರ ಡೌನ್ಸ್ಟ್ರೀಮ್ (ಸಂಸ್ಕರಿಸಿದ) ಉತ್ಪನ್ನಗಳ ಪ್ರಮುಖ ಪೂರೈಕೆದಾರನಾಗಿ ಭಾರತದ ಪಾತ್ರವನ್ನು ಗುರುತಿಸುತ್ತಾ, ಆಸ್ಟ್ರೇಲಿಯಾ ಮತ್ತು ಭಾರತ ದೇಶಗಳು ಇಂಧನ ಉತ್ಪನ್ನಗಳ ನಿರಂತರ ಸರಬರಾಜನ್ನು ಬೆಂಬಲಿಸಲು ಮತ್ತು ನಮ್ಮ ಎರಡು ದೇಶಗಳ ನಡುವಿನ ಇಂಧನ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸಲು ಬದ್ಧವಾಗಿವೆ. ಇಂಧನ ಮೌಲ್ಯದ ಸರಣಿಯುದ್ದಕ್ಕೂ ಹೂಡಿಕೆ ಅವಕಾಶಗಳನ್ನು ಉತ್ತೇಜಿಸುವ ಮಹತ್ವವನ್ನು ಆಸ್ಟ್ರೇಲಿಯಾ ಮತ್ತು ಭಾರತ ಪುನರುಚ್ಚರಿಸುತ್ತವೆ.

ಆಸ್ಟ್ರೇಲಿಯಾ-ಭಾರತ ಪರಮಾಣು ಸಹಕಾರ ಒಪ್ಪಂದದ (2015) ಅಡಿಯಲ್ಲಿ ಒದಗಿಸಲಾದಂತೆ, ಕೇವಲ ಶಾಂತಿಯುತ ಉದ್ದೇಶಗಳಿಗಾಗಿ ಮತ್ತು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (IAEA) ರಕ್ಷಣೋಪಾಯಗಳ ಅಡಿಯಲ್ಲಿ ಆಸ್ಟ್ರೇಲಿಯಾದ ಯುರೇನಿಯಂ ಅನ್ನು ಭಾರತಕ್ಕೆ ರಫ್ತು ಮಾಡಲು ಅನುವು ಮಾಡಿಕೊಡುವ ಅಗತ್ಯ ಆಡಳಿತಾತ್ಮಕ ವ್ಯವಸ್ಥೆಗಳನ್ನು ಆಸ್ಟ್ರೇಲಿಯಾ ಮತ್ತು ಭಾರತ ಅಂತಿಮಗೊಳಿಸಿವೆ.

ಪ್ರಾದೇಶಿಕ ಸಹಕಾರವನ್ನು ಗಾಢವಾಗಿಸುವುದು, ಇಂಧನ ಪರಿವರ್ತನೆಯನ್ನು ವೇಗಗೊಳಿಸುವುದು, ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಬಳಕೆಯನ್ನು ಉತ್ತೇಜಿಸುವುದು ಮತ್ತು ಇಂಧನ ಹಾಗೂ ದ್ರವ ಇಂಧನಗಳಿಗಾಗಿ ಮುಕ್ತ ವ್ಯಾಪಾರ ವ್ಯವಸ್ಥೆಯನ್ನು ಎತ್ತಿಹಿಡಿಯುವುದು ಸೇರಿದಂತೆ, ಇಂಧನ ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಆಸ್ಟ್ರೇಲಿಯಾ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿವೆ. ಆಯಾ ದೇಶಗಳ ಇಂಧನ ವ್ಯವಸ್ಥೆಗಳಲ್ಲಿ ವಿದ್ಯುದೀಕರಣವನ್ನು ಹೆಚ್ಚಿಸುವುದು ಭವಿಷ್ಯದಲ್ಲಿ ಇಂಧನ ಭದ್ರತೆಯ ಒಂದು ಅಮೂಲ್ಯ ಮೂಲವಾಗಲಿದೆ ಎಂಬುದನ್ನು ಎರಡೂ ದೇಶಗಳು ಗುರುತಿಸುತ್ತವೆ.

ಇಂಧನ ಕ್ಷೇತ್ರದಲ್ಲಿ ಸ್ಥಿತಿಸ್ಥಾಪಕ ವ್ಯಾಪಾರ ಮತ್ತು ಮಾರುಕಟ್ಟೆಗಳ ಕುರಿತ ನಮ್ಮ ಜಂಟಿ ಬದ್ಧತೆಯು ಈ ವಲಯಕ್ಕೂ ವಿಸ್ತರಿಸುತ್ತದೆ ಎಂಬುದನ್ನು ಆಸ್ಟ್ರೇಲಿಯಾ ಮತ್ತು ಭಾರತ ಗುರುತಿಸುತ್ತವೆ. ಪೆಸಿಫಿಕ್ ದ್ವೀಪ ರಾಷ್ಟ್ರಗಳ ಇಂಧನ ಸಂಪನ್ಮೂಲ ಭದ್ರತೆಯ ನಿರ್ದಿಷ್ಟ ದುರ್ಬಲತೆಗಳನ್ನು ಹಾಗೂ ಅವರ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕ ಸಮೃದ್ಧಿಗೆ ಇಂಧನ ಸಂಪನ್ಮೂಲ ಪೂರೈಕೆಯು ಎಷ್ಟು ಮುಖ್ಯ ಎಂಬುದನ್ನು ಎರಡೂ ದೇಶಗಳು ಮನಗಂಡಿವೆ.

ಈ ಹಿನ್ನೆಲೆಯಲ್ಲಿ, ಕಲ್ಲಿದ್ದಲು, ಡೀಸೆಲ್, ಇತರ ದ್ರವ ಇಂಧನಗಳು ಮತ್ತು ನೈಸರ್ಗಿಕ ಅನಿಲದಂತಹ ಇಂಧನ ಉತ್ಪನ್ನಗಳ ಸ್ಥಿರ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಪೂರೈಕೆಯನ್ನು ಕಾಯ್ದುಕೊಳ್ಳುವುದು ಸೇರಿದಂತೆ, ಇಂಧನ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಆಸ್ಟ್ರೇಲಿಯಾ ಮತ್ತು ಭಾರತ ಪುನರುಚ್ಚರಿಸುತ್ತವೆ. ಇದಲ್ಲದೆ, ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ಮತ್ತು ಕಡಿಮೆ ಇಂಗಾಲದ ಇಂಧನಗಳ ಕುರಿತ ಸಹಕಾರವನ್ನು ಬಲಪಡಿಸಲು ಎರಡೂ ದೇಶಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ. ಈ ನಿಟ್ಟಿನಲ್ಲಿ, ಭಾರತದ ‘ಗ್ಲೋಬಲ್ ಬಯೋಫ್ಯುಯೆಲ್ಸ್ ಅಲಯನ್ಸ್’ (GBA) ಉಪಕ್ರಮವನ್ನು ಆಸ್ಟ್ರೇಲಿಯಾ ಗಮನಿಸಿದೆ.

ನಮ್ಮ ಜನರ ಭದ್ರತೆ ಮತ್ತು ಸಮೃದ್ಧಿಯ ಹಿತದೃಷ್ಟಿಯಿಂದ ಜಾಗತಿಕ ಇಂಧನ ಸಂಪನ್ಮೂಲ ಪೂರೈಕೆ ಸರಪಳಿಗಳನ್ನು ಮುಕ್ತವಾಗಿರಿಸುವುದನ್ನು ಖಚಿತಪಡಿಸಿಕೊಳ್ಳಲು ಕೈಜೋಡಿಸುವಂತೆ ಆಸ್ಟ್ರೇಲಿಯಾ ಮತ್ತು ಭಾರತವು ಪ್ರಾದೇಶಿಕ ಪಾಲುದಾರರಿಗೆ ಕರೆ ನೀಡುತ್ತವೆ.

*****