Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರು ದಿನಾಂಕ 25.10.2026 ರಂದು ಮಾಡಿದ ಮನ್ ಕಿ ಬಾತ್  – 139ನೇ ಸಂಚಿಕೆಯ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶವಾಸಿಗಳೇ,

‘ಮನದ ಮಾತು’ ಕಾರ್ಯಕ್ರಮಕ್ಕೆ ಮತ್ತೊಮ್ಮೆ ಸ್ವಾಗತ. ಇಂದಿನಿಂದ ಹನ್ನೆರಡು ವರ್ಷಗಳ ಹಿಂದೆ, ವಿಜಯದಶಮಿಯ ಶುಭ ಸಂದರ್ಭದಲ್ಲಿ ನಾವು ‘ಮನದ ಮಾತು’ ಆರಂಭಿಸಿದ್ದೆವು. ಅಂದಿನಿಂದ ಇಲ್ಲಿವರೆಗೆ ನಮ್ಮ  ಈ ಪಯಣ ನಿರಂತರವಾಗಿ ಮುಂದುವರಿದಿದೆ. ಈ ಪಯಣದಲ್ಲಿ ನನ್ನ ಸಹಪ್ರಯಾಣಿಕರು ಮತ್ತು ಮಾರ್ಗದರ್ಶಕರು ನೀವೇ ಆಗಿದ್ದೀರಿ. ಸ್ನೇಹಿತರೆ, ನನ್ನ ಪಾಲಿಗೆ ‘ಮನದ ಮಾತು’ ನಮ್ಮ ದೇಶದ ಸಾಮಾನ್ಯ ಜನರ ಪರಿಶ್ರಮ, ಶೌರ್ಯ, ಬದ್ಧತೆ, ಸಮರ್ಪಣಾ ಭಾವ ಮತ್ತು ಸೇವಾ ಮನೋಭಾವವನ್ನು ಕೊಂಡಾಡಲು ಒಂದು ಅದ್ಭುತ ಅವಕಾಶವಾಗಿದೆ. ನಮ್ಮ ದೇಶದಲ್ಲಿ ತೀರ್ಥಯಾತ್ರೆಯ ಸುದೀರ್ಘ ಪರಂಪರೆಯಿದೆ. ಅದೇ ಭಾವನೆಯೊಂದಿಗೆ ಹೇಳುವುದಾದರೆ, ‘ನನ್ನ ಪಾಲಿಗೆ ‘‘ಮನದ ಮಾತು’’ ನಮ್ಮ ದೇಶದ ನಾಗರೀಕರ ಪ್ರಯತ್ನಗಳನ್ನು ಹತ್ತಿರದಿಂದ ಅರಿಯಲು ಮತ್ತು ಅವರ ಕೊಡುಗೆಗಳಿಗೆ ಗೌರವ ಸಲ್ಲಿಸಲು ಕೈಗೊಂಡಿರುವ ಒಂದು ತೀರ್ಥಯಾತ್ರೆಯಂತೆಯೇ. ಸ್ನೇಹಿತರೇ, ಸಮಾಜ ಮತ್ತು ರಾಷ್ಟ್ರಕ್ಕಾಗಿ ಬದುಕುವ ವ್ಯಕ್ತಿಗಳೇ ಒಂದು ರೀತಿಯಲ್ಲಿ ‘ತೀರ್ಥವಿದ್ದಂತೆ’ ಅಂದರೆ ಅವರೇ ಪವಿತ್ರ ತಾಣದಂತಿದ್ದಾರೆ. ಕಳೆದ 12 ವರ್ಷಗಳಲ್ಲಿ, ದೇಶದ ಮೂಲೆಮೂಲೆಗಳಿಂದ ಇಂತಹ ಅನೇಕ ವ್ಯಕ್ತಿಗಳು ಬೆಳಕಿಗೆ ಬಂದಿದ್ದಾರೆ. ಇವರ ಅಸಾಧಾರಣ ಕಾರ್ಯಗಳು ಸಾಮಾನ್ಯವಾಗಿ ಸಮಾಜದ ಗಮನಕ್ಕೆ ಬರುವುದಿಲ್ಲ. ‘ಮನದ ಮಾತು’ ಅಂತಹ ಅಸಂಖ್ಯಾತ ಸ್ಫೂರ್ತಿದಾಯಕ ಕಥೆಗಳನ್ನು ನಿಮ್ಮೆಲ್ಲರ ಮುಂದಿಡುವ ಕೆಲಸವನ್ನು ಮಾಡಿದೆ.

ಸ್ನೇಹಿತರೇ,

ಈ ಕಾರ್ಯಕ್ರಮದ ಮೂಲಕ ನಾನು ಒಂದು ರೀತಿಯಲ್ಲಿ ರಾಷ್ಟ್ರದ ‘ಜನಶಕ್ತಿ’ಗೆ—ನಮನ ಸಲ್ಲಿಸುತ್ತೇನೆ. ಇದು ದೇಶದ ಪ್ರತಿಯೊಂದು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶ ಕಲ್ಪಿಸುತ್ತದೆ. ‘ಮನದ ಮಾತು’ ಕೇಳಿ ನಾನು ಅವರ ಮಧ್ಯೆ ಕುಳಿತು, ಅವರ ಕುಟುಂಬದ ಒಬ್ಬ ಸದಸ್ಯನಂತೆ ಅವರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಅನೇಕರು ನನಗೆ ಸಂದೇಶಗಳ ಮೂಲಕ ತಿಳಿಸುತ್ತಾರೆ. ನನ್ನ ಎಲ್ಲ ಶ್ರೋತೃಗಳ ಈ ಆತ್ಮೀಯತೆ ಮತ್ತು ಸ್ನೇಹ ನನಗೆ ಅತ್ಯಮೂಲ್ಯವಾದ ಸಂಪತ್ತಾಗಿದೆ.

ನನ್ನ ಪ್ರಿಯ ದೇಶವಾಸಿಗಳೇ,

ನಮ್ಮ ರಾಷ್ಟ್ರವು ಅನೇಕ ಪಾರಂಪರಿಕ ಕೌಶಲ್ಯಗಳನ್ನು ಹೊಂದಿದೆ. ಇವು ತಲೆಮಾರುಗಳಿಂದ ನಮ್ಮ ಅಸ್ತಿತ್ವದ ಭಾಗವಾಗಿವೆ. ಈ ಪರಂಪರೆಗಳೊಂದಿಗೆ ಹೊಂದಿಕೊಂಡಂತೆಯೇ ಹೊಸ ಪ್ರಯೋಗಗಳೂ ನಡೆಯುತ್ತಿವೆ.  ಇವನ್ನು ಇಂದಿನ ಅಗತ್ಯಗಳಿಗೆ ತಕ್ಕಂತೆ ವಿಕಸನಗೊಳಿಸುತ್ತಿರುವುದು ಸಂತಸದ ವಿಷಯವಾಗಿದೆ. ಪಂಜಾಬ್‌ನಲ್ಲಿ ಇಂತಹದ್ದೇ ಒಂದು ಪ್ರಯತ್ನ ಬಹಳ ದಿನಗಳಿಂದ  ನಡೆಯುತ್ತಿದೆ. ಇಲ್ಲಿ ‘ಖೇತಿ ವಿರಾಸತ್ ಮಿಷನ್’ ಎಂಬ ಸಂಸ್ಥೆಯು ಸಾವಯವ ಕೃಷಿ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಹೊಸ ಜೀವ ತುಂಬುವ ಕೆಲಸ ಮಾಡುತ್ತಿದೆ. ಈ ತಂಡವು ‘ನವ್-ತ್ರಿಂಜನ್’ ಎಂಬ ಉಪಕ್ರಮದ ಮೂಲಕ ಪಂಜಾಬ್‌ನ ಮಾಲ್ವಾ ಪ್ರದೇಶದಲ್ಲಿ ನೈಸರ್ಗಿಕ ಹತ್ತಿ ಕೃಷಿಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಉಪಕ್ರಮದಡಿ, ಯಾವುದೇ ರಾಸಾಯನಿಕಗಳನ್ನು ಬಳಸದೆ ಸಾವಯವ ಹತ್ತಿಯನ್ನು ಬೆಳೆಯಲಾಗುತ್ತದೆ. ಇಲ್ಲಿ ನೈಸರ್ಗಿಕ ಬಣ್ಣಗಳನ್ನು ಹೊಂದಿರುವ ಹತ್ತಿಯನ್ನು ಸಹ ಬೆಳೆಯುತ್ತಾರೆ. ಇದರಿಂದಾಗಿ ನೂಲು ಮತ್ತು ಬಟ್ಟೆಗಳಿಗೆ ಹೆಚ್ಚುವರಿ ರಾಸಾಯನಿಕ ಬಣ್ಣಗಳನ್ನು ಬಳಸುವ ಅಗತ್ಯ ಇರುವುದಿಲ್ಲ. ಇದು ಪರಿಸರ ಸಂರಕ್ಷಣೆಗೆ ಎಷ್ಟು ದೊಡ್ಡ ಕೊಡುಗೆ ನೀಡುತ್ತದೆ ಎಂಬುದನ್ನು ನೀವು ಊಹಿಸಬಹುದು.

ಸ್ನೇಹಿತರೇ,

ಕೆಲವು ವರ್ಷಗಳ ಹಿಂದೆ ‘ನವ್-ತ್ರಿಂಜನ್’ ನೇಯ್ಗೆ ಕೌಶಲ್ಯವನ್ನು ನವ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಒಂದು ನೇಯ್ಗೆ ಶಾಲೆಯನ್ನು ಸ್ಥಾಪಿಸಿತು. ಈ ಶಾಲೆಯು ಅನೇಕ ಮಹಿಳೆಯರ ಜೀವನವನ್ನೇ ಬದಲಾಯಿಸಿದೆ. ರಮಣದೀಪ್ ಕೌರ್ ಇದಕ್ಕೆ ಒಂದು ಉದಾಹರಣೆಯಾಗಿದ್ದಾರೆ. ಹಿಂದೆ ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು, ಆದರೆ ಈ ಶಾಲೆಯಲ್ಲಿ ತರಬೇತಿ ಪಡೆದ ನಂತರ, ಈಗ ಒಬ್ಬ ನುರಿತ ನೇಕಾರರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ರೇಖಾ ರಾಣಿ ಅವರಂತೂ ತರಬೇತಿ ಪಡೆಯುವ ಮೊದಲು ಕೈಮಗ್ಗವನ್ನೇ ನೋಡಿರಲಿಲ್ಲ. ಆದರೆ ಅವರು ತಯಾರಿಸಿದ ಶಾಲು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೂ ಉಡುಗೊರೆಯಾಗಿ ನೀಡಲ್ಪಟ್ಟಿದೆ. ಅದೇ ರೀತಿ, ಹಿಂದೆ ಮನೆಗೆಲಸ ಮಾಡುತ್ತಿದ್ದ ಸುನೇಹಾ ದೇವಿ, ಈಗ ಕೈಮಗ್ಗದ ಮೂಲಕ ಅತ್ಯುತ್ತಮವಾದ ಬಟ್ಟೆಗಳನ್ನು ತಯಾರಿಸುತ್ತಿದ್ದಾರೆ. ಹಿಂದೆ ಕೃಷಿ ಕೂಲಿಯನ್ನೇ ನಂಬಿದ್ದ ರಜನಿ ಕೌರ್ ಅವರಿಗೆ, ಈ ಹೊಸ ಕೌಶಲ್ಯದಿಂದ ತಮ್ಮ ಕುಟುಂಬ ನಿರ್ವಹಣೆಗೆ ಬಹಳಷ್ಟು ಸಹಾಯ ಲಭಿಸುತ್ತಿದೆ. ಶಾಲೆಯಲ್ಲಿ ತರಬೇತಿ ಪಡೆದ ನಂತರ, ಇಂತಹ ಅನೇಕ ಮಹಿಳೆಯರು ಈಗ ಸ್ಥಳೀಯ ಸಾವಯವ ಹತ್ತಿಯಿಂದ ತಯಾರಿಸಿದ ನೂಲನ್ನು ಬಳಸಿ ಶಾಲುಗಳು, ಟವೆಲ್‌ಗಳು ಮತ್ತು ಇತರ ಬಟ್ಟೆಗಳನ್ನು ತಯಾರಿಸುತ್ತಿದ್ದಾರೆ. ಈ ಪ್ರಯತ್ನಗಳಿಂದ ಅವರ ಜೀವನದಲ್ಲಿ ಸಮೃದ್ಧಿ ಕಂಡುಬರುತ್ತಿದೆ. ಕೆಲವು ತಿಂಗಳ ಹಿಂದೆ, ‘ರಾಷ್ಟ್ರೀಯ ಕೈಮಗ್ಗ ದಿನ’ದಂದು, ನನಗೆ ಈ ತಂಡವನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಆಗ, ಅವರ ಕೆಲಸದ ಬಗೆಗಿದ್ದ ಉತ್ಸಾಹ ಮತ್ತು ಸಮರ್ಪಣಾ ಭಾವವನ್ನು ನಾನು ಕಣ್ಣಾರೆ ಕಂಡೆ. ಈ ಸಂಪೂರ್ಣ ತಂಡದ ಉಜ್ವಲ ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ,

ಪ್ರಕೃತಿಯನ್ನು ಗೌರವಿಸುವ ಸುದೀರ್ಘ ಸಂಪ್ರದಾಯ ನಮ್ಮಲ್ಲಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಜಲಮೂಲಗಳನ್ನು ಸಂರಕ್ಷಿಸುವುದು ನಮ್ಮದೇ ಜವಾಬ್ದಾರಿ ಎಂದು ನಮ್ಮ ಪೂರ್ವಜರು ನಮಗೆ ಕಲಿಸಿಕೊಟ್ಟಿದ್ದಾರೆ. ದೇಶಾದ್ಯಂತ ಅನೇಕ ಜನರು ಈ ಮನೋಭಾವವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿರುವುದನ್ನು ನೋಡಿ ನನಗೆ ಬಹಳ ಸಂತೋಷವೆನಿಸುತ್ತದೆ. ಉತ್ತರಾಖಂಡದ ಟಿಹರಿ ಗಡವಾಲ್ ನಲ್ಲಿ ಇಂತಹದ್ದೇ ಒಂದು ಸ್ಫೂರ್ತಿದಾಯಕ ಉದಾಹರಣೆಯನ್ನು ಕಾಣಬಹುದು. ಅಲ್ಲಿನ ಸ್ಥಳೀಯ ಸಮುದಾಯವು ಒಗ್ಗೂಡಿ ‘ಹೆವೆಲ್’ ಎಂಬ ನದಿಗೆ ಮರುಜೀವ ನೀಡುವ ಪ್ರಯತ್ನ ಮಾಡಿದೆ. ಕೆಲ ಕಾಲದ ಹಿಂದೆ, ‘ಹೆವೆಲ್’ ನದಿಯಲ್ಲಿ ನೀರಿನ ಮಟ್ಟ ಕುಸಿಯಲಾರಂಭಿಸಿತ್ತು ಮತ್ತು ಹತ್ತಿರದ ನೈಸರ್ಗಿಕ ಜಲಮೂಲಗಳು ಕೂಡ ಬತ್ತಿಹೋಗಲಾರಂಭಿಸಿದ್ದವು. ಇಂತಹ ಸ್ಥಿತಿಯಲ್ಲಿ ಸ್ಥಳೀಯ ಆಡಳಿತ ಮತ್ತು ಗ್ರಾಮಸ್ಥರು ನದಿಯನ್ನು ಉಳಿಸಲು ಸಾಮೂಹಿಕ ಅಭಿಯಾನವೊಂದನ್ನು ಕೈಗೊಂಡರು. ಅವರು ಮಳೆನೀರನ್ನು ಸಂಗ್ರಹಿಸಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕ್ರಮಗಳನ್ನು ಜಾರಿಗೆ ತಂದರು, ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟರು. ಇಂದು, ಈ ಪ್ರಯತ್ನಗಳಿಂದ ‘ಹೆವೆಲ್’ ನದಿಗೆ ಪುನರ್ಜನ್ಮ ದೊರೆತಿದ್ದು, ಡಜನ್‌ಗಟ್ಟಲೆ ನೈಸರ್ಗಿಕ ಜಲಮೂಲಗಳ ಪುನರುಜ್ಜೀವನಕ್ಕೆ ಸಹಾಯವೂ ಲಭಿಸಿದೆ.

ಸ್ನೇಹಿತರೇ,

ಒಂದು ಸಮಾಜ ಇಂತಹ ಮನೋಭಾವದೊಂದಿಗೆ ಒಗ್ಗೂಡಿದಾಗ, ಬದಲಾವಣೆ ಎಂಬುದು ಸುನಿಶ್ಚಿತವಾಗುತ್ತದೆ. ನಮ್ಮ ಹಬ್ಬಗಳ ಸಂದರ್ಭದಲ್ಲಿ ನಾವು ಇದರ ಒಂದು ನೋಟವನ್ನು ಕಾಣಬಹುದು. ಕೆಲವೇ ದಿನಗಳಲ್ಲಿ ದೀಪಾವಳಿ ಮತ್ತು ಛಠ್‌ನಂತಹ ಪವಿತ್ರ ಹಬ್ಬಗಳು ಬರಲಿವೆ. ಈ ಹಿನ್ನೆಲೆಯಲ್ಲಿ ಸಿದ್ಧತೆಯ ಭಾಗವಾಗಿ, ಎಲ್ಲೆಡೆ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದೆ. ನಾವು ವಾಸಿಸುವ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನಮ್ಮ ಸಣ್ಣ, ವೈಯಕ್ತಿಕ ಪ್ರಯತ್ನಗಳು ಕೂಡ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಮನಾರ್ಹ ಬದಲಾವಣೆಯನ್ನು ತರಬಲ್ಲವು.

ನನ್ನ ಪ್ರಿಯ ದೇಶವಾಸಿಗಳೇ,

ಈ ಹಬ್ಬದ ಋತುವಿನಲ್ಲಿ, ನಿಮ್ಮ ಸುತ್ತಮುತ್ತಲೂ ಆಗುತ್ತಿರುವ ಒಂದು ಬದಲಾವಣೆಯನ್ನು ಖಂಡಿತವಾಗಿಯೂ ನೀವು ಗಮನಿಸಿರಬಹುದು. ಜನರು ಶಾಪಿಂಗ್ ಮಾಡುವಾಗ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸಿದ್ದಾರೆ. ವೋಕಲ್ ಫಾರ್ ಲೋಕಲ್ ಎಂಬ ಈ ಮನೋಭಾವವು ಈಗ ನಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುತ್ತಿದೆ. ಬಿಹಾರದ ಪೂರ್ನಿಯಾದ ‘ಮಖಾನಾ’ ಈಗ ಗ್ರೀಸ್ ತಲುಪುತ್ತಿವೆ. ಕರ್ನಾಟಕದ ಕಲಬುರಗಿಯ ತೊಗರಿ ಬೇಳೆ ಮಾಲ್ಡೀವ್ಸ್‌ಗೆ ತಲುಪುತ್ತಿದೆ. ಅಂದರೆ, ಭಾರತದ ರೈತರಿಗೆ ಹೊಸ ಜಾಗತಿಕ ಮಾರುಕಟ್ಟೆಗಳು ತೆರೆದುಕೊಳ್ಳುತ್ತಿವೆ. ಸ್ನೇಹಿತರೇ, ‘ಸ್ಥಳೀಯ’ ಉತ್ಪನ್ನಗಳ ಬಗ್ಗೆ ಚರ್ಚಿಸುವಾಗ, ನಾನು ನಿಮ್ಮ ಗಮನವನ್ನು ಮತ್ತೊಂದು ಅಂಶದ ಕಡೆಗೆ ಸೆಳೆಯಲು ಬಯಸುತ್ತೇನೆ. ಉತ್ಪನ್ನದ ಗುಣಮಟ್ಟದ ಜೊತೆಗೆ, ಅದರ ಪ್ಯಾಕೇಜಿಂಗ್ ಕೂಡ ಬಹಳ ಮುಖ್ಯವಾಗಿರುತ್ತದೆ. ಮಾರುಕಟ್ಟೆಯಲ್ಲಿ ನಾವು ಯಾವುದಾದರೂ ವಸ್ತುವನ್ನು ನೋಡಿದಾಗ, ಅದರ ಆಕರ್ಷಕ ಪ್ಯಾಕೇಜಿಂಗ್ ನೋಡಿಯೇ ಅದನ್ನು ಕೈಗೆತ್ತಿಕೊಳ್ಳುತ್ತೇವೆ. ಆ ಪ್ಯಾಕೇಜಿಂಗ್ ನೋಡಿಯೇ ಆ ಉತ್ಪನ್ನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಉಂಟಾಗುತ್ತದೆ. ಇದನ್ನು ಅರಿಯುವ ಮೂಲಕ ಇದೀಗ, ಪ್ಯಾಕೇಜಿಂಗ್‌ಗೆ ಕೂಡ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ನೇಹಿತರೇ, ಮಹಾರಾಷ್ಟ್ರದಲ್ಲಿ ಬುಡಕಟ್ಟು ಸಮುದಾಯಗಳು ತಾವು ತಯಾರಿಸುವ ಉತ್ಪನ್ನಗಳ ಪ್ಯಾಕೇಜಿಂಗ್‌ಗೆ ವಿಶೇಷ ಗಮನ ನೀಡಿವೆ. ‘ಶಬರಿ ನ್ಯಾಚುರಲ್ಸ್’ ಎಂಬ ಉಪಕ್ರಮದ ಮೂಲಕ ಜೇನುತುಪ್ಪ, ಮಹುವಾ, ಚಿರೋಂಜಿ ಮತ್ತು ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಮಾರುಕಟ್ಟೆಗೆ ತರಲಾಗುತ್ತಿದೆ. ಇವುಗಳ ಪ್ಯಾಕೇಜಿಂಗ್‌ನಲ್ಲಿ ಬುಡಕಟ್ಟು ಕಲೆಗಳ ವಿನ್ಯಾಸಗಳನ್ನು ಕಾಣಬಹುದು. ಈ ಪ್ಯಾಕೇಜಿಂಗ್‌ಗೆ ಜಪಾನ್‌ನ ಪ್ರತಿಷ್ಠಿತ ‘ಗುಡ್ ಡಿಸೈನ್ ಅವಾರ್ಡ್’ ಲಭಿಸಿದೆ ಎಂಬುದನ್ನು ಕೇಳಿ ನಿಮಗೆ ಸಂತೋಷವಾಗಬಹುದು. ನಮ್ಮ ಯುವಜನರು ಕೂಡ ಈ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಉದಾಹರಣೆಗೆ, ಕರ್ನಾಟಕದಲ್ಲಿರುವ ಬಾಂಬೂ  ಸ್ಟಾರ್ಟ್-ಅಪ್ ಎಂಬ ಒಂದು ಕಂಪನಿ, ಬಿದಿರು ಮತ್ತು ಕೃಷಿ ತ್ಯಾಜ್ಯವನ್ನು ಬಳಸಿ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ತಯಾರಿಸುತ್ತಿದೆ.

ಸ್ನೇಹಿತರೇ,

ನಾವು ಸ್ಥಳೀಯ ಉತ್ಪನ್ನಗಳ ಬಗ್ಗೆ ಮಾತನಾಡುವಾಗ, ಖಾದಿಯ ಪ್ರಸ್ತಾಪ ಬರುವುದು ಸಹಜವೇ. ಕಳೆದ ಗಾಂಧಿ ಜಯಂತಿಯಂದು, ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟವು ಒಂದೇ ದಿನದಲ್ಲಿ 28 ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಹಿಂದಿನ ವರ್ಷಕ್ಕಿಂತ 1.5 ಕೋಟಿ ರೂಪಾಯಿಗಳಷ್ಟು  ಹೆಚ್ಚಾಗಿಯೇ ಇದೆ. ಖಾದಿಯ ಜನಪ್ರಿಯತೆಯು ನಿರಂತರವಾಗಿ ಬೆಳೆಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಇದರ ಲಾಭವು ಯಾರ ಕೌಶಲ್ಯ ಮತ್ತು ಕಠಿಣ ಪರಿಶ್ರಮದಿಂದ ಖಾದಿ ಮತ್ತು ವಿವಿಧ ಕರಕುಶಲ ವಸ್ತುಗಳು ರೂಪುಗೊಳ್ಳುತ್ತವೆಯೋ ಆ ಕುಶಲಕರ್ಮಿಗಳಿಗೆ ತಲುಪುತ್ತಿದೆ.

ಸ್ನೇಹಿತರೇ,

ಹಬ್ಬದ ಸಮಯದಲ್ಲಿ ನಾವು ನಮ್ಮ ಕುಟುಂಬದವರಿಗಾಗಿ ಮತ್ತು ಪ್ರೀತಿಪಾತ್ರರಿಗಾಗಿ ಅನೇಕ ವಸ್ತುಗಳನ್ನು ಖರೀದಿಸುತ್ತೇವೆ. ನೀವು ಶಾಪಿಂಗ್ ಮಾಡುವಾಗ ಈ ಬಾರಿಯೂ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡಿ ಎಂದು ನಾನು ಆಗ್ರಹಿಸುತ್ತೇನೆ. ನೀವು ಖರೀದಿಸುವುದರಿಂದ ಅವರ ಉತ್ಸಾಹ ಹೆಚ್ಚುತ್ತದೆ. ಇಂತಹ ಒಲವು ವೋಕಲ್ ಫಾರ್ ಲೋಕಲ್ ಅಭಿಯಾನವನ್ನು ಇನ್ನಷ್ಟು ಬಲಪಡಿಸುತ್ತದೆ. ಈ ಅಭಿಯಾನ ವೇಗ ಪಡೆದುಕೊಂಡಂತೆ, ‘ಸ್ವಾವಲಂಬಿ ಭಾರತ’ದ ಕನಸು ಇನ್ನಷ್ಟು ಶೀಘ್ರ ನನಸಾಗುತ್ತದೆ. ಆದ್ದರಿಂದ, ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ಮತ್ತು ಪ್ರಾಮುಖ್ಯತೆ ನೀಡಬೇಕೆಂದು ನಾನು ವೈಯಕ್ತಿಕವಾಗಿ ಅಗ್ರಹಿಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ,

ನಮ್ಮ ದೇಶದ ಜನತೆಯಲ್ಲಿ ಒಂದು ದೊಡ್ಡ ವಿಶೇಷತೆಯಿದೆ. ನಾವು ಹೊಸ ತಂತ್ರಜ್ಞಾನವನ್ನು ಬಹಳ ಶೀಘ್ರಗತಿಯಲ್ಲಿ ಅಳವಡಿಸಿಕೊಳ್ಳುತ್ತೇವೆ. ಸಹಜವಾಗಿಯೇ ತಂತ್ರಜ್ಞಾನವನ್ನು ನಾವು ನಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳುತ್ತೇವೆ. ‘ಇ-ಸಂಜೀವನಿ’ ಯೋಜನೆ ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಜನರ ಜೀವನವನ್ನು ಸುಲಭಗೊಳಿಸುವಲ್ಲಿ ತಂತ್ರಜ್ಞಾನವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಬಹುದು ಎಂಬುದು ಇದರಿಂದ ತಿಳಿಯುತ್ತದೆ. ಈ ವೇದಿಕೆಯ ಮೂಲಕ ಇಲ್ಲಿಯವರೆಗೆ ಸುಮಾರು 50 ಕೋಟಿ Tele-Consultation ನಡೆದಿವೆ ಎಂಬುದು ನನಗೆ ಬಹಳ ಸಂತಸವೆನಿಸುತ್ತದೆ. ನಿಜಕ್ಕೂ ಇದು ಬಹು ದೊಡ್ಡ ಸಂಖ್ಯೆ. ಇದು ತಂತ್ರಜ್ಞಾನದ ಶಕ್ತಿ, ನಮ್ಮ ವೈದ್ಯರ ಸಮರ್ಪಣಾ ಮನೋಭಾವ ಮತ್ತು ನಮ್ಮ ನಾಗರಿಕರು ಅದರ ಮೇಲೆ ಇಟ್ಟಿರುವ ನಂಬಿಕೆಗೆ ಒಂದು ಅದ್ಭುತ ಸಾಕ್ಷಿಯಾಗಿದೆ.

ಸ್ನೇಹಿತರೇ,

ಇಂದು ‘ಇ-ಸಂಜೀವನಿ’ ಸೇವೆಯು ತನ್ನ ವಿಶಾಲವಾದ ವ್ಯಾಪ್ತಿಯ ಮೂಲಕ ದೇಶದ ಅತ್ಯಂತ ದೂರದ ಪ್ರದೇಶಗಳನ್ನೂ ತಲುಪಿದೆ. ಇದರಿಂದ ಪ್ರಯೋಜನ ಪಡೆದವರ ಕಥೆಗಳು ಹೃದಯಸ್ಪರ್ಶಿಯಾಗಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಬರಾಟಾಂಗ್ ದ್ವೀಪದಲ್ಲಿ, ಜರಾವಾ ಬುಡಕಟ್ಟಿಗೆ ಸೇರಿದ ‘ಓಹೋ-ತಹಾನೆ’ ಎಂಬ ಬಾಲಕನೊಬ್ಬ ತೀವ್ರವಾದ ಜ್ವರದಿಂದ ಬಳಲುತ್ತಿದ್ದ. ಉಸಿರಾಡಲು ಕಷ್ಟವಾಗಿತ್ತು. ಸ್ಥಳೀಯ ಆರೋಗ್ಯ ಕಾರ್ಯಕರ್ತರು ‘ಇ-ಸಂಜೀವನಿ’ಯ ಮೂಲಕ ತಜ್ಞ ವೈದ್ಯರೊಬ್ಬರೊಂದಿಗೆ ಸಮಾಲೋಚನೆ ನಡೆಸಿದರು. ಮಗುವಿಗೆ ನ್ಯುಮೋನಿಯಾ ಇರುವುದು ಪತ್ತೆಯಾಯಿತು. ತಜ್ಞ ವೈದ್ಯರ ಚಿಕಿತ್ಸೆ ಮತ್ತು ಮೇಲ್ವಿಚಾರಣೆಯಲ್ಲಿ ಮಗುವಿನ ಆರೋಗ್ಯ ಸ್ಥಿತಿ ಶೀಘ್ರವಾಗಿ ಸುಧಾರಿಸತೊಡಗಿತು.

ಸ್ನೇಹಿತರೇ,

ಲಕ್ಷದ್ವೀಪದ Kalpeni ಯಲ್ಲಿ, ಕುನ್ಹಿ ಕೋಯಾ ಎಂಬ ಸುಮಾರು 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು. ಸಮುದ್ರದ ಇನ್ನೊಂದು ದಡಲ್ಲಿರುವ ಕವರತ್ತಿಯಲ್ಲಿದ್ದ ಅನುಭವಿ ವೈದ್ಯರೊಬ್ಬರೊಂದಿಗೆ ‘ಇ-ಸಂಜೀವನಿ’ ಮೂಲಕ ಸಂಪರ್ಕಿಸಲಾಯಿತು. ಆ ಅನುಭವಿ ವೈದ್ಯರು ಸ್ಥಳೀಯ ವೈದ್ಯಕೀಯ ತಂಡಕ್ಕೆ ಮಾರ್ಗದರ್ಶನ ನೀಡಿದರು ಮತ್ತು ಕುನ್ಹಿ ಕೋಯಾ ಅವರಿಗೆ ಚೇತರಿಸಿಕೊಳ್ಳಲು ಸಹಾಯ ಮಾಡಿದರು.

ಲಡಾಖ್‌ನ Zanskar ನಿವಾಸಿ, ಕುಂಜಾಂಗ್ ಡೋಲ್ಮಾ ಎಂಬ ಮಹಿಳೆಗೆ ಗರ್ಭಾವಸ್ಥೆಯಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಿದ್ದವು. ಇಂತಹ ಸಂದರ್ಭದಲ್ಲಿ ‘ಇ-ಸಂಜೀವನಿ’ ಅವರ ನೆರವಿಗೆ ಬಂದಿತು. ಇದರ ಮೂಲಕ ತಜ್ಞ ವೈದ್ಯರು ತಕ್ಷಣವೇ ಅವರಿಗೆ ನೆರವು ನೀಡಿದರು. ನಾಗಾಲ್ಯಾಂಡ್‌ನ ಪೆರೇನ್‌ನಲ್ಲಿ, 12 ವರ್ಷದ ಮುಶೆಮ್ ಎಂಬ ಬಾಲಕ ಕಿವಿಯ ಸೋಂಕು ಮತ್ತು ಜ್ವರದಿಂದ ಬಳಲುತ್ತಿದ್ದನು. ಅವನಿಗೂ ‘ಇ-ಸಂಜೀವನಿ’ಯಿಂದ ಪ್ರಯೋಜನವಾಯಿತು. ತಜ್ಞ ವೈದ್ಯರು ಅವನ ಕಾಯಿಲೆಯನ್ನು ತ್ವರಿತವಾಗಿ ಪತ್ತೆಹಚ್ಚಿ, ಸೂಕ್ತ ಔಷಧಿಯನ್ನು ಸೂಚಿಸಲು ಸಾಧ್ಯವಾಯಿತು.

ಸ್ನೇಹಿತರೇ,

ಒಂದು ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅಥವಾ ವೈದ್ಯರನ್ನು ಭೇಟಿಯಾಗಲು ಬಹಳ ಸಮಯ ಬೇಕಾಗುತ್ತಿದ್ದ ಕಾಲವೊಂದಿತ್ತು. ಅಲ್ಲದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಇಂದು, ದೇಶಾದ್ಯಂತ ಸುಮಾರು 1,90,000 ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳು ಜನರ ಜೀವನದಲ್ಲಿ ಹೊಸ ಸೌಲಭ್ಯಗಳನ್ನು ತಂದಿವೆ. ಈ ಆರೋಗ್ಯ ಮಂದಿರಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಣಾಮಕಾರಿ ‘ಕ್ಷೇಮ ಕೇಂದ್ರ’ಗಳ ರೂಪದಲ್ಲಿ ವಿಕಸನಗೊಳ್ಳುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಈಗ ಆರೋಗ್ಯವಾಗಿರಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದು ಅತ್ಯಂತ ಸಂತೋಷಕರ ಸಂಗತಿಯಾಗಿದೆ. ಇದರಲ್ಲಿ ‘ಇ-ಸಂಜೀವನಿ’ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಈ ತಿಂಗಳಾರಂಭದಲ್ಲಿ ನಾನು ಚೆನ್ನೈಗೆ ಹೋಗಿದ್ದೆ. ಅಲ್ಲಿ ನನಗೆ ದೇಶದ ಅನೇಕ ವಿಜ್ಞಾನಿಗಳು, ಸಂಶೋಧಕರು ಮತ್ತು ಯುವ ಪ್ರತಿಭಾನ್ವಿತರೊಂದಿಗೆ ಭೇಟಿಯಾಗುವ ಅವಕಾಶ ದೊರೆತಿತ್ತು. ಇಡೀ ಮಾನವಕುಲದ ಭವಿಷ್ಯವನ್ನೇ ಬದಲಾಯಿಸಬಲ್ಲ ವಿಷಯಗಳ ಬಗ್ಗೆ ನಮ್ಮ ಯುವಜನತೆ ಈಗ ಕೆಲಸ ಮಾಡುತ್ತಿದ್ದು, ಅಂತಹ ಒಂದು ಕ್ಷೇತ್ರವೆಂದರೆ ಮೆದುಳು ಸಂಶೋಧನೆ. ಇದಕ್ಕೆ ಸಂಬಂಧಿಸಿದಂತೆ ಸುಧಾ ಗೋಪಾಲ್ ಕೃಷ್ಣನ್ ಮೆದುಳು ಕೇಂದ್ರವನ್ನು ನಾನು ಐಐಟಿ ಮದ್ರಾಸ್ ನಲ್ಲಿ ಲೋಕಾರ್ಪಣೆಗೊಳಿಸಿದ್ದೆ. ಈ ಕೇಂದ್ರವು ಒಂದು ಮೆದುಳು ಚಿತ್ರ ತೆಗೆಯುವ ತಂತ್ರಜ್ಞಾನ ವೇದಿಕೆ (brain imaging technology platform) ಸಿದ್ಧಪಡಿಸಿದ್ದು, ಇದು ಇಡೀ ಜಗತ್ತಿಗೆ ಒಂದು ಮಾದರಿಯಾಗಿದೆ. ಇದರ ಮೂಲಕ ಮಾನವ ಮೆದುಳಿನ High – ರೆಸೊಲ್ಯೂಷನ್ ಡಿಜಿಟಲ್ 3ಡಿ ಚಿತ್ರಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ 100 ಮಾನವ ಮೆದುಳುಗಳ 3 ಡಿ ಮ್ಯಾಪಿಂಗ್ ಮಾಡಿ, ಅವುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದು ಇದರ ಗುರಿಯಾಗಿದೆ. ಇದು ಇಡೀ ಜಗತ್ತಿನಲ್ಲೇ ಈ ರೀತಿಯ ಪ್ರಥಮ ಪ್ರಯತ್ನವಾಗಿದೆ. ಈ ಕೆಲಸದಲ್ಲಿ ಪರಮ್ ಶಕ್ತಿ ಸೂಪರ್ ಕಂಪ್ಯೂಟರ್ ಅನ್ನು ಬಳಕೆ ಮಾಡಲಾಗುತ್ತಿದೆ.

ಸ್ನೇಹಿತರೇ,

ಈ ಮೆದುಳು ಕೇಂದ್ರದ (brain centre) ನಿರ್ಮಾಣದಲ್ಲಿ ದೇಶದ ಕೈಗಾರಿಕಾ ವಲಯ ಸರ್ಕಾರದೊಂದಿಗೆ ಕೈಜೋಡಿಸಿದ್ದು, ಮಹತ್ವದ ಪಾತ್ರ ವಹಿಸಿದೆ. ಐಐಟಿಯ ಅನೇಕ ಹಳೆಯ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಕ್ಷೇತ್ರದ ತಜ್ಞರು ಕೂಡಾ ಈ ಸಂಶೋಧನಾ ಕೇಂದ್ರದ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಈ ಯೋಜನೆ ಇಷ್ಟೊಂದು ಮಹತ್ವದ್ದು ಎನಿಸಿರುವುದಕ್ಕೆ ಕಾರಣವೇನೆಂದರೆ, ವಿಜ್ಞಾನ ಇಷ್ಟೊಂದು ಮುಂದುವರಿದಿದ್ದರೂ, ಮಾನವನ ಮೆದುಳು ಎನ್ನುವುದು ಇಂದಿಗೂ ದೊಡ್ಡ ವೈಜ್ಞಾನಿಕ ಒಗಟಾಗಿಯೇ ಉಳಿದಿದೆ. ಇಂದಿಗೂ Alzheimer ಮತ್ತು Dementia ಇತ್ಯಾದಿ ರೋಗಗಳಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದ್ದರಿಂದ ಮಾನವನ ಮೆದುಳು ಕೆಲಸ ಮಾಡುವ ವಿಧಾನವನ್ನು ವಿಜ್ಞಾನ ಎಷ್ಟು ಆಳವಾಗಿ ಅರ್ಥ ಮಾಡಿಕೊಳ್ಳುತ್ತದೆಯೋ, ಭವಿಷ್ಯದಲ್ಲಿ  ಅಷ್ಟೇ ಹೆಚ್ಚಿನ ಸಾಧ್ಯತೆಗಳು ಸೃಷ್ಟಿಯಾಗಲಿವೆ. 100 ಮಾನವ ಮೆದುಳುಗಳ ಈ ದತ್ತಾಂಶವನ್ನು ಮುಂದಿನ ದಿನಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಂಶೋಧನೆಗಾಗಿ ಮುಕ್ತ ಮೂಲವಾಗಿ ಲಭ್ಯವಾಗುವಂತೆ ಮಾಡಲು ನಿರ್ಧರಿಸಲಾಗಿದೆ.

ಸ್ನೇಹಿತರೆ,

ಈ ರೀತಿಯ ಸುಧಾರಿತ ಸಂಶೋಧನೆಯಲ್ಲಿ ಅಂಗಾಂಗ ದಾನ ಎನ್ನುವುದು ಬಹು ದೊಡ್ಡ ಪಾತ್ರ ವಹಿಸುತ್ತದೆ. ತಮ್ಮ ಜೀವನ ಪಯಣ ಪೂರ್ಣಗೊಳಿಸಿದ ನಂತರ ಅಂಗಾಂಗ ದಾನ ಮಾಡಿ ಹೋಗುವ ಜನರು, ಅನೇಕರ ಜೀವಗಳನ್ನು ಉಳಿಸುವುದು ಮಾತ್ರವಲ್ಲದೆ, ಸಂಶೋಧನೆಯನ್ನು ಕೂಡಾ ಸಾಧ್ಯವಾಗಿಸುತ್ತಾರೆ. ಅಂತಹದ್ದೇ ಒಂದು ಉದಾಹರಣೆಯೆಂದರೆ – ಮಧ್ಯ ಪ್ರದೇಶದ ನರ್ಮದಾಪುರಂ ನಿವಾಸಿ ಶಿವಾನಿ ಅವರದ್ದು. ಶಿವಾನಿ ಅವರು ಒಂದು ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು. ಕುಟುಂಬಕ್ಕೆ ದೊಡ್ಡ ಆಘಾತ ಅಪ್ಪಳಿಸಿತು. ಆದರೆ ಈ ಕಠಿಣ ಸಮಯದಲ್ಲಿ ಅವರ ಕುಟುಂಬವು ಅತಿ ದೊಡ್ಡ ನಿರ್ಣಯವೊಂದನ್ನು ಕೈಗೊಂಡಿದ್ದು ಅದು ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದೆ. ಅವರು ಕೈಗೊಂಡ ನಿರ್ಣಯವೆಂದರೆ, ಶಿವಾನಿಯವರ ಅಂಗಾಂಗ ದಾನ ಮಾಡುವುದು. ಶಿವಾನಿ ಅವರ ಕುಟುಂಬ ತೆಗೆದುಕೊಂಡ ಈ ನಿರ್ಧಾರವು ಸಮಾಜ ಮತ್ತು ದೇಶಕ್ಕೆ ಒಂದು ದೊಡ್ಡ ಸಂದೇಶ ನೀಡಿದೆ. ಮಾನವೀಯತೆಯ ನಿಟ್ಟಿನಲ್ಲಿ ಇಂತಹ ಒಂದು ಹೆಜ್ಜೆಯಿಂದಾಗಿ ಯಾವುದೋ ಮತ್ತೊಂದು ಕುಟುಂಬದಲ್ಲಿ ಸಂತಸ ಪುನಃ ಮನೆಮಾಡಬಹುದು ಮತ್ತು ಸಂಶೋಧನೆಯ ಕಾರ್ಯಗಳಲ್ಲಿ ಕೂಡಾ ದೊಡ್ಡದೊಂದು ಸಹಾಯ ಕೂಡಾ ದೊರೆಯುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನನ್ನ ಚೆನ್ನೈ ಭೇಟಿಯ ಸಂದರ್ಭದಲ್ಲಿ ನನ್ನ ಮತ್ತಷ್ಟು ಅನುಭವಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ನಾನು ಬಯಸುತ್ತೇನೆ. ನನ್ನ ಮೊದಲ ಅನುಭವವೆಂದರೆ – ಮೆಟ್ರೋದಲ್ಲಿ ಯುವಜನರೊಂದಿಗೆ ಮಾತುಕತೆ. ಮತ್ತೊಂದು ಕಾರ್ಯಕ್ರಮವೆಂದರೆ – ಐಐಟಿ ಮದ್ರಾಸ್ ಗೆ ನನ್ನ ಭೇಟಿ. ಈ ಸಂದರ್ಭದಲ್ಲಿ ನಮ್ಮ ಯುವಶಕ್ತಿ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಹಿಡಿಯಲು ಯಾವರೀತಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೋಡುವುದು ತುಂಬಾ ಸಂತೋಷದಾಯಕವಾಗಿತ್ತು. ನಾನು ಭೇಟಿಯಾದ ನವೋದ್ಯಮಗಳ ಪೈಕಿ ಒಂದು ನವೋದ್ಯಮವು ಚಿನ್ನದ ಗುಣಮಟ್ಟವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ಚಿನ್ನದ ಖರೀದಿಯ ಸಮಯದಲ್ಲಿ ನಡೆಯಬಹುದಾದ ವಂಚನೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಯುವಜನರ ಒಂದು ತಂಡವು, ಬ್ಯಾಂಕ್ ವಂಚನೆಯ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾದ ಹಣವನ್ನು ತ್ವರಿತವಾಗಿ ವಾಪಸ್ ಪಡೆಯಲು ಅನುಕೂಲವಾಗುವ ಒಂದು ವೇದಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಂತೆಯೇ ಗರ್ಭಕಂಠದ ಕ್ಯಾನ್ಸರ್ ರೋಗದ ತಪಾಸಣೆಯಲ್ಲಿ ಕೃತಕ ಬುದ್ಧಿಮತ್ತೆ ಯಾವ ರೀತಿ ಸಹಕಾರಿಯಾಗಬಹುದೆಂಬ ಕುರಿತು ಮತ್ತೊಂದು ತಂಡ ಕೆಲಸ ಮಾಡುತ್ತಿದೆ. ಸ್ನೇಹಿತರೇ, ಐಐಟಿಯಲ್ಲಿ ನಡೆದ ಸಂವಾದವು ಸಂಪೂರ್ಣವಾಗಿ ಡೀಪ್-ಟೆಕ್ ನ ಮೇಲೆ ಕೇಂದ್ರೀಕೃತವಾಗಿತ್ತು. ಈ ನವೋದ್ಯಮಗಳಿಗೆ ಐಐಟಿ ಮದ್ರಾಸ್ ನ ಇನ್ ಕ್ಯುಬೇಷನ್ ಇಕೋ ಸಿಸ್ಟಂ (Incubation ecosystem)ನಿಂದ ನೆರವು ದೊರೆಯುತ್ತಿದೆ. ಇವುಗಳ ಪೈಕಿ ಒಂದು ನವೋದ್ಯಮವು ಸಮುದ್ರದ ಮೇಲೆ ಹಾರಾಟ ನಡೆಸುವ ವಿದ್ಯುತ್ ವಾಹನ ಅಭಿವೃದ್ಧಿಪಡಿಸುತ್ತಿದೆ. ಮತ್ತೊಂದು ನವೋದ್ಯಮವು ಡ್ರೋನ್ ಗಳು  ಮತ್ತು ವಿದ್ಯುತ್ ಚಾಲಿತ ವಾಹನಗಳಿಗಾಗಿ ವೇಗವಾಗಿ ಚಾರ್ಜ್ ಆಗುವ ಬ್ಯಾಟರಿಗಳನ್ನು ತಯಾರಿಸುತ್ತಿದೆ. ಮತ್ತೊಂದು ತಂಡ ರಕ್ಷಣಾ ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆಯ (AI) ಬಳಕೆಯ ಕುರಿತು ಕಾರ್ಯನಿರ್ವಹಿಸುತ್ತಿದೆ.

ಸ್ನೇಹಿತರೆ,

ಇಂದು ನಮ್ಮ ಯುವಜನತೆ ಇದೊಂದು ಅಸಾಧಾರಣ ಕೆಲಸಗಳನ್ನು ಮಾಡುತ್ತಿದ್ದಾರೆಂದರೆ ಅದಕ್ಕೆ ಕಾರಣ, ಅವರಿಗೆ ಸರಿಯಾದ ಪರಿಸರ ಮತ್ತು ಬೆಂಬಲ ದೊರೆಯುತ್ತಿದೆ. ಇಲ್ಲದಿದ್ದರೆ ನಮ್ಮ ದೇಶದಲ್ಲಿ ಪ್ರತಿಭಾವಂತರಿಗೆ ಎಂದೂ ಕೊರತೆ ಇರಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಅಕ್ಟೋಬರ್ 31 ರಂದು ಭಾರತದ ಮಹಾನ್ ವಿಜ್ಞಾನಿ ನರೀಂದರ್ ಸಿಂಗ್ ಕಪಾನಿ ಅವರ 100ನೇ ಜನ್ಮಜಯಂತಿ ಆಚರಣೆಯಿದೆ. ಇವರನ್ನು ವಿಶ್ವದಲ್ಲಿ ‘ಫೈಬರ್ ಆಪ್ಟಿಕ್ಸ್ ನ ಪಿತಾಮಹ – Father of Fiber Optics’ ಎಂದೇ ಗುರುತಿಸಲಾಗುತ್ತದೆ. ಇವರು ಪಂಜಾಬ್ ನ ಮೋಗಾ ಜಿಲ್ಲೆಯಲ್ಲಿ ಜನಿಸಿದರು.  ತೆಳುವಾದ ಫೈಬರ್ ಗಳ ಮೂಲಕ ಬೆಳಕನ್ನು ಮುಂದಕ್ಕೆ ಹಾಯಿಸುವ ತಂತ್ರಜ್ಞಾನದಲ್ಲಿ ಅವರ ಸುಧಾರಿತ ಸಂಶೋಧನೆಯು ಸಂವಹನದ ಪ್ರಪಂಚಕ್ಕೆ ಹೊಸದೊಂದು ದಿಕ್ಕನ್ನು ತೋರಿಸಿತು. ಇಂದು ನಾವು ಜೀವಿಸುತ್ತಿರುವ ಅಂತರ್ಜಾಲ ಮತ್ತು ಡಿಜಿಟಲ್ ಸಂವಹನದ ಯುಗವನ್ನು ಫೈಬರ್ ಆಪ್ಟಿಕ್ಸ್ ಇಲ್ಲದಂತೆ ಕಲ್ಪಿಸಿಕೊಳ್ಳುವುದು ಕೂಡಾ ಬಹಳ ಕಷ್ಟ. ಇಂದು ಈ ಸಂದರ್ಭದಲ್ಲಿ ನಾವು ನರೀಂದರ್ ಸಿಂಗ್ ಕಪಾನಿ ಅವರಿಗೆ ನಮನ ಸಲ್ಲಿಸುತ್ತೇವೆ. ನಮ್ಮ ಯುವಜನತೆ ಕಪಾನಿ ಅವರ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಓದಬೇಕು, ಅರಿತುಕೊಳ್ಳಬೇಕು ಮತ್ತು ಅವುಗಳಿಂದ ಪ್ರೇರಣೆ ಪಡೆಯಬೇಕೆಂದು ನಾನು ಬಯಸುತ್ತೇನೆ.

ಸ್ನೇಹಿತರೇ,

ಕೆಲವೇ ದಿನಗಳ ನಂತರ ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜಯಂತಿ ಕೂಡಾ ಬರಲಿದೆ. ಈ ದಿನವನ್ನು ದೇಶವು ‘ಏಕತಾ ದಿನ’ ಎಂದು ಆಚರಿಸುತ್ತದೆ. ಈ ಸಂದರ್ಭದಲ್ಲಿ ದೇಶಾದ್ಯಂತ ‘ಏಕತೆಗಾಗಿ ಓಟ’ ಅಂದರೆ ‘Run for Unity’ ಆಯೋಜಿಸಲಾಗುತ್ತದೆ. ‘ಏಕತೆಗಾಗಿ ಓಟ’ ನಮ್ಮ ಒಗ್ಗಟ್ಟನ್ನು ಬಲಪಡಿಸುವ, ದೇಶಕ್ಕಾಗಿ ನಮ್ಮ ಸಂಕಲ್ಪವನ್ನು ಪುನರುಚ್ಛರಿಸುವ ಒಂದು ದೊಡ್ಡ ಅವಕಾಶವಾಗಿದೆ. ಈ ಬಾರಿ ಕೂಡಾ ‘ಏಕತೆಗಾಗಿ ಓಟ’ದಲ್ಲಿ ನೀವೆಲ್ಲರೂ ಉತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಕುಟುಂಬದ ಸದಸ್ಯರನ್ನು, ನಿಮ್ಮ ಸ್ನೇಹಿತರನ್ನು ಮತ್ತು ಸುತ್ತಮುತ್ತಲಿನ ಜನರನ್ನು ಕೂಡಾ ನಿಮ್ಮೊಂದಿಗೆ ಸೇರಿಸಿಕೊಳ್ಳಿ.

ಸ್ನೇಹಿತರೇ,

ಭಾರತ ನೀಡಿದ್ದ ಕರೆಯ ಮೇರೆಗೆ 2023ನೇ ವರ್ಷವನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಆಚರಿಸಲಾಯಿತೆಂದು ನಿಮಗೆಲ್ಲರಿಗೂ ನೆನಪಿರಬಹುದು. ಇದಕ್ಕೆ ಜಗತ್ತಿನಾದ್ಯಂತ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಉಪಕ್ರಮದ ಮೂಲಕ ಜನರು ಸೂಪರ್ ಫುಡ್ ಶ್ರೀ ಅನ್ನ ಅಂದರೆ ಸಿರಿಧಾನ್ಯಗಳು ನಮ್ಮದೇ ಆದ ಸಂಸ್ಕೃತಿಯೊಂದಿಗೆ ಎಷ್ಟು ಆಳವಾಗಿ ಬೆಸೆದುಕೊಂಡಿದೆ ಎಂದು ತಿಳಿದುಕೊಂಡರು. ಈಶಾನ್ಯ ಭಾರತದಲ್ಲಿ ಕೂಡಾ ಸಿರಿಧಾನ್ಯಗಳ ಕೃಷಿಯು ಶ್ರೀಮಂತ ಪರಂಪರೆ ಹೊಂದಿದೆ. ಆದರೆ, ಕಾಲಕ್ರಮೇಣ ಜನರು ಇದರಿಂದ ದೂರ ಸರಿಯುತ್ತಿದ್ದರು. ಈಗ ಈ ಪರಿಸ್ಥಿತಿ ಬದಲಾಗುತ್ತಿದೆ.

ಸ್ನೇಹಿತರೇ,

ಮೇಘಾಲಯದ ಪಶ್ಚಿಮ ಜಯಂತಿಯಾ ಹಿಲ್ಸ್ ಜಿಲ್ಲೆಯಲ್ಲಿ ಖಾಂಡುಲೀ ಎಂಬ ಹೆಸರಿನ ಗ್ರಾಮವೊಂದಿದೆ. ಇಲ್ಲಿ ಹಲವು ತಲೆಮಾರುಗಳಿಂದ ಸಿರಿಧಾನ್ಯಗಳು, ಸ್ಥಳೀಯ ಆಹಾರ ಸಂಸ್ಕೃತಿಯ ಪ್ರಮುಖ ಭಾಗವಾಗಿವೆ. ಆದರೆ, ಕೆಲವು ಕಾಲದಿಂದ, ಇಲ್ಲಿ ಇವುಗಳನ್ನು ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಯಿತು. ಈ ಸಂದರ್ಭದಲ್ಲಿ ಇಲ್ಲಿನ ಇಬ್ಬರು ಗೆಳತಿಯರು ಒಂದು ನೂತನ ಉಪಕ್ರಮ ಆರಂಭಿಸಿದರು. ಅವರು ಸಿರಿಧಾನ್ಯಗಳ ಉತ್ಪನ್ನಗಳ ತಯಾರಿಕೆಯತ್ತ ಗಮನ ಹರಿಸಿದರು. ಸಿರಿಧಾನ್ಯಗಳ ಮೌಲ್ಯವರ್ಧನೆ ಮಾಡುವ ಮೂಲಕ ಅವುಗಳಿಂದ ಕುಕೀಗಳು, ಕೇಕ್ ಮತ್ತು ಮಫಿನ್ ಗಳೊಂದಿಗೆ ಸಿರಿಧಾನ್ಯಗಳಿಂದ ಶಿಶು ಆಹಾರವನ್ನು ತಯಾರಿಸಲು ಆರಂಭಿಸಿದರು. ಇದರಿಂದಾಗಿ ಸಿರಿಧಾನ್ಯಗಳಿಂದ ತಯಾರಿಸಲಾದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಲಾರಂಭಿಸಿತು. ಹೀಗಿರುವಾಗ ಅಲ್ಲಿನ ರೈತರು ಕೂಡಾ ಪುನಃ ಸಿರಿಧಾನ್ಯಗಳ ಕೃಷಿ ಆರಂಭಿಸಿದರು.

ಸ್ನೇಹಿತರೇ,

ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯ ಸಾದೋಲ್ಪಾರಾ ಗ್ರಾಮದಲ್ಲಿಯೂ ಕೆಲವು ಹೊಸ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿನ ರೈತರಾದ ಚೆಕ್ಜಿಂಗ್(Chekjing) ಸಂಗ್ಮಾ ಅವರು ಸಿರಿಧಾನ್ಯಗಳ ಮಹತ್ವವನ್ನು ಅರಿತುಕೊಂಡು, ಆಧುನಿಕ ವಿಧಾನಗಳನ್ನು ಬಳಸಿ ಸಿರಿಧಾನ್ಯಗಳ ಕೃಷಿಯನ್ನು ಆರಂಭಿಸಿದ್ದಾರೆ. ಇದರಿಂದಾಗಿ ಅವರ ಆದಾಯವೂ ಏರಿಕೆಯಾಗಿದೆ ಮತ್ತು ಗ್ರಾಮದಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿಯೂ ಮೂಡಿದೆ. ಇದೇ ರೀತಿ ನಾಗಾಲ್ಯಾಂಡ್ ನ ಕೋಹಿಮಾದಲ್ಲಿ ಕೆಜೋಮಾ ಎಂಬ ಗ್ರಾಮವೊಂದಿದೆ. ಈ ಗ್ರಾಮದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಿರಿಧಾನ್ಯಗಳ ಕೃಷಿ ಸ್ಥಗಿತಗೊಂಡಿತ್ತು. ಪರಿಣಾಮವಾಗಿ ಒಂದು ಇಡೀ ತಲೆಮಾರಿಗೆ ಈ ಸಾಂಪ್ರದಾಯಿಕ ಬೆಳೆಯ ಬಗ್ಗೆ ತಿಳಿಯದಂತಾಗಿತ್ತು. ಯೋಚಿಸಿ ನೋಡಿ, ಯಾವ ಬೆಳೆಯನ್ನು ಅವರ ಅಜ್ಜ-ಅಜ್ಜಿ ಬೆಳೆಯುತ್ತಿದ್ದರೋ ಅದನ್ನೇ ಗ್ರಾಮಸ್ಥರು ಮರೆಯತೊಡಗಿದ್ದರು. 2024 ರಲ್ಲಿ ಇಲ್ಲಿನ ಜನರು ಪುನಃ ಸಿರಿಧಾನ್ಯಗಳ ಕೃಷಿಯನ್ನು ಆರಂಭಿಸಿದರು. 2025 ರಲ್ಲಿ ಕೆಜೋಮಾ ತನ್ನ ಪ್ರಥಮ ಸಿರಿಧಾನ್ಯಗಳ ಉತ್ಸವ ಆಚರಿಸಿತು. ಈಗ ಇಲ್ಲಿ ಕೂಡಾ ಸಿರಿಧಾನ್ಯಗಳಿಂದ ತಯಾರಿಸಲಾದ ಪದಾರ್ಥಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ. ಸ್ನೇಹಿತರೇ, ಸಿರಿಧಾನ್ಯಗಳ ಕೃಷಿಗೆ ಸಂಬಂಧಿಸಿದ ಉದಾಹರಣೆಗಳು ನಮಗೆ ದೊಡ್ಡ ಸಂದೇಶ ನೀಡುತ್ತಿದೆ. ನಮ್ಮ ಯುವಜನರು ಸಾಂಪ್ರದಾಯಿಕ ಬೆಳೆಗಳನ್ನು ಹೊಸ ಅವಕಾಶಗಳೊಂದಿಗೆ ಹೇಗೆ ಜೋಡಿಸುತ್ತಿದ್ದಾರೆ, ಮತ್ತು ನಮ್ಮ ಗ್ರಾಮಗಳು ಪರಂಪರೆಯನ್ನು ಸಂರಕ್ಷಿಸುತ್ತಲೇ, ಸಮೃದ್ಧಿಯ ಹಾದಿಯಲ್ಲಿ ಹೇಗೆ ಮುಂದೆ ಸಾಗುತ್ತಿವೆ ಎಂಬುದನ್ನು ಈ ಉದಾಹರಣೆಗಳು ಹೇಳುತ್ತವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾಳೆ ಅಕ್ಟೋಬರ್ 26 ಮಹರ್ಷಿ ವಾಲ್ಮೀಕಿ ಜಯಂತಿ. ಸಾವಿರಾರು ವರ್ಷಗಳೇ ಕಳೆದಿವೆ, ಆದರೂ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಇಂದಿಗೂ ನಮಗೆ  ಹೊಸ ಹೊಸ ವಿಚಾರಗಳನ್ನು ಕಲಿಸುತ್ತಲೇ ಇದೆ. ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮೂಲಕ ಜೀವನದ ಆಳವಾದ ಸತ್ಯಗಳನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಒಂದೆಡೆ, ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕೆಂಬ ಸಂದೇಶವನ್ನು ಅವರು ನೀಡಿದರೆ, ಮತ್ತೊಂದೆಡೆ, ಸೇವೆ, ಕರುಣೆ ಮತ್ತು ಸಾಮಾಜಿಕ ಸಾಮರಸ್ಯದ ಮಹತ್ವವನ್ನು ನಮಗೆ ಅರ್ಥಮಾಡಿಸುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ ಭಗವಾನ್ ರಾಮನ ಚರಿತ್ರೆಯು ಈ ಮೌಲ್ಯಗಳ ಬಹಳ ಸುಂದರ ಉದಾಹರಣೆಯಾಗಿದೆ. ಭಗವಾನ್ ರಾಮನು ಶಬರಿ ಮಾತೆಯ ಪ್ರೀತಿ ಮತ್ತು ಭಕ್ತಿಯನ್ನು ಸ್ವೀಕರಿಸಿದನು. ನಿಷಾದರಾಜನ ಸ್ನೇಹಕ್ಕೆ ಗೌರವ ನೀಡಿದನು. ಎಲ್ಲರೊಡಗೂಡಿ ಮುಂದೆ ಸಾಗುವ ಉದಾತ್ತ ಆದರ್ಶವು ಇಂದಿಗೂ ನಮಗೆ ದಾರಿ ತೋರಿಸುತ್ತದೆ. ಈ ಭಾವನೆಯ ಪ್ರತಿಬಿಂಬವು ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಕೂಡಾ ಕಾಣಬರುತ್ತದೆ. ಅಲ್ಲಿ ಮಹರ್ಷಿ ವಾಲ್ಮೀಕಿ, ನಿಷಾದರಾಜ ಮತ್ತು ಶಬರಿ ಮಾತೆಯ ದೇವಾಲಯಗಳನ್ನೂ ನಿರ್ಮಿಸಲಾಗಿದೆ. ಅಯೋಧ್ಯೆಯಲ್ಲಿನ ವಿಮಾನ ನಿಲ್ದಾಣಕ್ಕೆ ಕೂಡಾ ಮಹರ್ಷಿ ವಾಲ್ಮೀಕಿಯ ಹೆಸರನ್ನು ಇಟ್ಟಿರುವುದು ನನಗೆ ಸಂತಸವೆನಿಸುತ್ತದೆ. ಸೇವೆ, ಸಾಮಾಜಿಕ ಸಾಮರಸ್ಯ ಮತ್ತು ಕರುಣೆಗೆ ಅತ್ಯುನ್ನತ ಸ್ಥಾನ ನೀಡಿರುವ ನಮ್ಮ ಆ ಮಹಾನ್ ಪರಂಪರೆಯನ್ನು ಈ ಪ್ರಯತ್ನಗಳು ಮತ್ತಷ್ಟು ಶ್ರೀಮಂತಗೊಳಿಸುತ್ತವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಭಾರತದ ಮಣ್ಣಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಇಂತಹ ಅನೇಕ ಮಹಾನ್ ವ್ಯಕ್ತಿತ್ವಗಳು ಜನ್ಮತಾಳಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು ಭಾಯಿ ಪರಮಾನಂದ್ ಜೀ. ಇನ್ನು ಕೆಲವೇ ದಿನಗಳಲ್ಲಿ, ನವೆಂಬರ್ 4ರಂದು, ನಾವು ಅವರ 150ನೇ ಜಯಂತಿಯನ್ನು ಆಚರಿಸಲಿದ್ದೇವೆ. ಭಾಯಿ ಪರಮಾನಂದ್ ಅವರಿಗೆ ಸ್ಫೂರ್ತಿ ಮತ್ತು ಆದರ್ಶಗಳ ಪ್ರಮುಖ ಮೂಲವಾಗಿದ್ದುದು ಆರ್ಯ ಸಮಾಜದೊಂದಿಗಿನ ಅವರ ಆಳವಾದ ನಂಟು. 20ನೇ ಶತಮಾನದ ಆರಂಭದ ದಿನಗಳಲ್ಲಿಯೇ ಭಾಯಿ ಪರಮಾನಂದ್ ಜೀ ಅವರು ಆರ್ಯ ಸಮಾಜದ ಕಾರ್ಯಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಅಲ್ಲಿ ಅವರು ಪೂಜ್ಯ ಬಾಪೂಜಿಯವರನ್ನೂ ಭೇಟಿಯಾಗಿದ್ದರು. ಅವರು ಆ ಕಾಲದಲ್ಲಿ ಆರ್ಯ ಸಮಾಜದ ಪ್ರಮುಖ ಕೇಂದ್ರವಾಗಿದ್ದ ಗಯಾನಾದಲ್ಲಿ ಗಿರ್ಮಿಟಿಯಾ ಸಮುದಾಯದ ಜನರ ನಡುವೆ ಕೂಡ ಕೆಲಸ ಮಾಡಿದ್ದರು. ನನಗೂ ಗಯಾನಾ ಪ್ರವಾಸದ ಸಂದರ್ಭದಲ್ಲಿ ಆರ್ಯ ಸಮಾಜದ ಸ್ಮಾರಕಕ್ಕೆ ಭೇಟಿ ನೀಡುವ ಸೌಭಾಗ್ಯ ದೊರೆತಿತ್ತು.  ಸ್ನೇಹಿತರೇ, ಭಾಯಿ ಪರಮಾನಂದ್ ಜೀ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೂಡಾ ದೊಡ್ಡ ಪಾತ್ರ ವಹಿಸಿದ್ದರು. ಲಾಲಾ ಹರದಯಾಳ್ ಜೀ ಅವರನ್ನು ಅಮೆರಿಕಕ್ಕೆ ತೆರಳುವಂತೆ ಮನವೊಲಿಸಿದ್ದು ಭಾಯಿ ಪರಮಾನಂದ್ ಜೀ ಅವರೇ ಎಂದು ಹೇಳಲಾಗುತ್ತದೆ. ಅವರು ಗದರ್ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರೂ ಆಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪ್ರಭಾವ ಎಷ್ಟೊಂದು ಪ್ರಬಲವಾಗಿತ್ತೆಂದರೆ, ಬ್ರಿಟಿಷರು ಅವರಿಗೆ ‘ಕಾಲಾಪಾನಿ’ ಶಿಕ್ಷೆಯನ್ನು ವಿಧಿಸಿದ್ದರು. ಅವರ ಒಂದು ಪುಸ್ತಕದ ಹೆಸರು ‘ಆಪಬೀತಿ: ಕಾಲಾಪಾನಿ ಕಿ ಕಾರಾವಾಸ್ ಕಹಾನಿ’ (ನನ್ನ ಆತ್ಮಕಥೆ: ಕಾಲಾಪಾನಿ ಸೆರೆವಾಸದ ಕಥೆ). ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಅರ್ಥಮಾಡಿಕೊಳ್ಳಲು ಈ ಪುಸ್ತಕವನ್ನು ಖಂಡಿತವಾಗಿಯೂ ಓದಬೇಕು. ಭಾಯಿ ಪರಮಾನಂದ್ ಜೀ ಅವರು ಶಿಕ್ಷೆ ಮುಗಿದ ನಂತರ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಹೆಜ್ಜೆಗಳನ್ನು ಇಟ್ಟರು. ಅವರು ವೀರ ಭಗತ್ ಸಿಂಗ್ ಅವರಿಗೂ ಪಾಠ ಹೇಳಿಕೊಟ್ಟಿದ್ದರು ಎಂಬ ವಿಷಯ ತಿಳಿದು ನಿಮಗೆ ಆಶ್ಚರ್ಯವಾಗಬಹುದು. ನಂತರದ ವರ್ಷಗಳಲ್ಲಿ ಅವರು ಹಲವು ವರ್ಷಗಳ ಕಾಲ ಹಿಂದೂ ಮಹಾಸಭೆಯೊಂದಿಗೂ ನಿಕಟ ಸಂಬಂಧ ಹೊಂದಿದ್ದರು. ಅಂದರೆ, ಗಾಂಧೀಜಿಯವರೊಂದಿಗಿನ ಒಡನಾಟದಿಂದ ಹಿಡಿದು ಗಯಾನಾದವರೆಗೆ, ಗದರ್ ಚಳವಳಿಯಿಂದ ಹಿಡಿದು ಅಂಡಮಾನ್‌ ವರೆಗೆ, ಅವರ ಜೀವನ ಮತ್ತು ವ್ಯಕ್ತಿತ್ವವು ಅತ್ಯಂತ ಸ್ಫೂರ್ತಿದಾಯಕವಾಗಿದೆ. ನಾನು ಭಾಯಿ ಪರಮಾನಂದ್ ಜೀ ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಭಾಯಿ ಪರಮಾನಂದ್ ಜೀ ಅವರ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಇತರರಿಗೂ ಅವರ ಜೀವನದಿಂದ ಸ್ಫೂರ್ತಿ ಪಡೆಯಲು ಪ್ರೇರೇಪಿಸಬೇಕೆಂದು ನಾನು ಯುವಸ್ನೇಹಿತರಲ್ಲಿ ಮನವಿ ಮಾಡುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಮುಂಬರುವ ದಿನಗಳಲ್ಲಿ ದೀಪಾವಳಿ, ಛಠ್ ಹಬ್ಬ ಮತ್ತು ಹಲವು ಇತರ ಹಬ್ಬಗಳ ಸಂಭ್ರಮಾಚರಣೆ ಇರಲಿದೆ. ನೀವು ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿ ಇರುತ್ತಾ ಇಡಿ ಕುಟುಂಬದವರೊಂದಿಗೆ ಹಬ್ಬಗಳನ್ನು ಆಚರಿಸಿ ಮತ್ತು ನಿಮ್ಮ ಸಂತೋಷ-ಸಂಭ್ರಮಾಚರಣೆಯಲ್ಲಿ ಇತರರನ್ನು ಕೂಡಾ ಸೇರಿಸಿಕೊಳ್ಳಿ. ನಿಮ್ಮೆಲ್ಲರಿಗೂ ಮುಂಬರಲಿರುವ ಹಬ್ಬಗಳಿಗಾಗಿ ಶುಭ ಹಾರೈಕೆಗಳು. ನಾನು ಎಂದಿನಂತೆಯೇ ನಿಮ್ಮೆಲ್ಲರ ಸಂದೇಶಗಳು ಮತ್ತು ಸಲಹೆಗಳಿಗಾಗಿ ಎದುರು ನೋಡುತ್ತಿರುತ್ತೇನೆ. ನಿಮ್ಮ ಸಲಹೆಗಳಿಂದ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಹೊಸ ವಿಷಯಗಳು ಮತ್ತು ಹೊಸ ದಿಕ್ಕುಗಳು ದೊರೆಯುತ್ತವೆ. ಮುಂದಿನ ತಿಂಗಳು ದೇಶವಾಸಿಗಳ ಹೊಸ ಪ್ರಯತ್ನಗಳು ಮತ್ತು ಹೊಸ ಸ್ಫೂರ್ತಿದಾಯಕ ಕಥೆಗಳೊಂದಿಗೆ ನಾವು ಮತ್ತೊಮ್ಮೆ ಭೇಟಿಯಾಗೋಣ.

ಅನೇಕಾನೇಕ ಧನ್ಯವಾದ.

ನಮಸ್ಕಾರ.

 

*****