Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಪ್ರಿಲ್ 02, 2017ರಂದು ಅಲಹಾಬಾದ್ ನ್ಯಾಯಾಲಯದ 150 ವರ್ಷಗಳ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ಎಪ್ರಿಲ್ 02, 2017ರಂದು ಅಲಹಾಬಾದ್ ನ್ಯಾಯಾಲಯದ 150 ವರ್ಷಗಳ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ  ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ


ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲಾ ಮಹನೀಯರೇ,

150 ವರ್ಷಗಳ ಆಚರಣೆಯ ಈ ಸಮಾರಂಭ ಇಂದು ಮುಕ್ತಾಯವಾಗಲಿದೆ. ವರ್ಷಪೂರ್ತಿ ನಡೆದ ಈ ಸಮಾರಂಭ ಹೊಸ ಉತ್ಸಾಹ, ನವ ಪ್ರೇರಣೆ, ನೂತನ ಸಂಕಲ್ಪ ಮತ್ತು ನವ ಭಾರತದ ಕನಸನ್ನು ನನಸು ಮಾಡುವ ದಿಶೆಯಲ್ಲಿ ಒಂದು ದೊಡ್ಡ ಶಕ್ತಿಯಾಗಿ ಪರಿವರ್ತನೆಯಾಗಲಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಲಹಾಬಾದ್ ನ್ಯಾಯಾಲಯ 150 ವರ್ಷಗಳಷ್ಟು ಪುರಾತನವಾದದ್ದು. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ಪುಣ್ಯಕ್ಷೇತ್ರವೆಂದು ನಾನು ಭಾವಿಸುತ್ತೇನೆ. ಇಂತಹ ಪುಣ್ಯಕ್ಷೇತ್ರದಲ್ಲಿ ಇಂತಹ ಮಹತ್ವಪೂರ್ಣ ಘಟ್ಟದಲ್ಲಿ ತಮ್ಮ ಮಧ್ಯ ಬಂದು ಕೆಲವೊಂದು ವಿಷಯಗಳನ್ನು ಕೇಳುವ ಮತ್ತು ತಿಳಿದುಕೊಳ್ಳುವ, ನನಗೂ ಕೂಡಾ ಕೆಲವು ಮಾತುಗಳನ್ನು ಆಡುವ ಅವಕಾಶ ಲಭಿಸಿದೆ, ಇದು ನನಗೆ ದೊರೆತ ಗೌರವವೆಂದು ನಾನು ಭಾವಿಸುತ್ತೇನೆ.

ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮನದಾಳದ ಮಾತುಗಳನ್ನು ಹೇಳುತ್ತಿದ್ದರು, ನಾನು ಗಮನವಿಟ್ಟು ಆಲಿಸುತ್ತಿದ್ದೆ. ನಾನು ಅವರ ಮಾತಿನ ಪ್ರತಿಯೊಂದು ಶಬ್ದ ದಲ್ಲಿ ಏನನ್ನಾದರೂ ಮಾಡಿ ಸಾಧಿಸಬೇಕೆಂಬ ಸದುದ್ದೇಶವನ್ನು ಅರಿತುಕೊಂಡೆ. ಭಾರತದ ನ್ಯಾಯಾಧೀಶರುಗಳ ಸಂಕಲ್ಪ ಈಡೇರುತ್ತದೆ ಎಂಬ ವಿಶ್ವಾಸ ನನಗಿದೆ. ಇದು ಎಲ್ಲರ ಜವಾಬ್ಧಾರಿಯಾಗಿದ್ದು ಅದನ್ನು ನಿಭಾಯಿಸಬೇಕಾಗುತ್ತದೆ.

ಎಲ್ಲಿಯವರೆಗೆ ಸರ್ಕಾರದ ಪ್ರಶ್ನೆಯಾಗಿದೆಯೋ, ನಿಮ್ಮ ಈ ಸಂಕಲ್ಪವನ್ನು ಪೂರ್ಣಗೊಳಿಸುವ ದಿಶೆಯಲ್ಲಿ ನಾವು ಕಾರ್ಯಪ್ರವೃತ್ತರಾಗುತ್ತೇವೆ ಎಂಬ ವಿಶ್ವಾಸವನ್ನು ನಾನು ನೀಡುತ್ತೇನೆ. ಇದು ನಮ್ಮ ಜವಾಬ್ಧಾರಿಯಾಗಿದ್ದು ಇದನ್ನು ಈಡೇರಿಸುವುದಕ್ಕಾಗಿ ನಾವು ಸಂಪೂರ್ಣ ಪ್ರಯತ್ನಶೀಲರಾಗುತ್ತೇವೆ. ಅಲಹಾಬಾದ್ ನ್ಯಾಯಾಲಯಕ್ಕೆ 100 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರು ಇಲ್ಲಿಗೆ ಆಗಮಿಸಿದ್ದರು. ಅವರು ಅಂದು ನೀಡಿದ ಭಾಷಣದ ಒಂದು ಪ್ಯಾರಾಗ್ರಾಫ್ ಅನ್ನು ನಾನು ಓದಬಯಸುತ್ತೇನೆ. 100 ವರ್ಷಗಳ ಹಿಂದೆ ಅವರು ಯಾವ ಮಾತುಗಳನ್ನು ಆಡಿದ್ದರೋ ಅದರ ಪುನ:ಸ್ಮರಣೆ ಇಂದು ಬಹಳ ಅಗತ್ಯವಾಗಿದೆ.

“ ಕಾನೂನು ಸದಾ ಬದಲಾಗುವ ಒಂದು ವಿಷಯ. ಕಾನೂನು ಜನಗಳ ಸ್ವಭಾವಕ್ಕೆ ಅನುಗುಣವಾಗಿರಬೇಕು. ಸಾಂಪ್ರದಾಯಿಕ ಮೌಲ್ಯಗಳಿಗೆ ಅನುಕೂಲವಾಗಿರಬೇಕು. ಮತ್ತು ಜತೆ ಜತೆಗೆ ನೂತನ ಪ್ರವೃತ್ತಿಗಳು ಮತ್ತು ಸವಾಲುಗಳ ಬಗ್ಗೆಯೂ ಗಮನ ಹರಿಸುವಂತಿರಬೇಕು. ಕಾನೂನನ್ನು ವಿಶ್ಲೇಷಿಸುವ ಸಮಯದಲ್ಲಿ ಈ ಎಲ್ಲ ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಯಾವ ರೀತಿ ನಾವು ಜೀವನ ಸಾಗಿಸಬೇಕು, ಈ ಬಗ್ಗೆ ಕಾನೂನು ಏನು ಹೇಳುತ್ತದೆ, ಕಾನೂನಿನ ಅಂತಿಮ ಗುರಿ ಏನಾಗಿರಬೇಕು, ಎಲ್ಲ ಜನಗಳಿಗೂ ಒಳಿತಾಗಬೇಕು, ಕೇವಲ ಹಣವಂತರ ಒಳಿತೇ ಮುಖ್ಯವಾಗಿರಬಾರದು. ದೇಶದ ಎಲ್ಲ ನಾಗರೀಕರಿಗೂ ಒಳಿತಾಗಬೇಕಿದೆ. ಇದು ಕಾನೂನಿನ ಗುರಿಯಾಗಬೇಕು, ಇದನ್ನು ಪೂರ್ಣಗೊಳಿಸುವ ದಿಶೆಯಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು” ಎಂದು ಡಾ. ರಾಧಾಕೃಷ್ಣನ್ ಅವರು ಹೇಳಿದ್ದರು.

ನೂರು ವರ್ಷಗಳ ಹಿಂದೆಯೇ ಇದೇ ನೆಲದಿಂದ ದೇಶದ ನ್ಯಾಯವ್ಯವಸ್ಥೆಗೆ, ದೇಶದ ಆಡಳಿತ ನಿರ್ವಹಿಸುವವರಿಗೆ ಒಂದು ಮಾರ್ಮಿಕ ಸಂದೇಶವನ್ನು ಡಾ. ರಾಧಾಕೃಷ್ಣನ್ ಅವರು ನೀಡಿದ್ದರು, ಅದು ಇಂದಿಗೂ ಪ್ರಸ್ತುತವೆಂದು ನಾನು ಭಾವಿಸುತ್ತೇನೆ. ನಾವು ಯಾವುದೇ ನಿರ್ಣಯವನ್ನು ಮಾಡಿದರೂ ಅದರ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕೆಂದು ಗಾಂಧೀಜಿಯವರು ಹೇಳಿದ್ದರು. ಸರ್ಕಾರ ಯಾವುದೇ ನಿರ್ಣಯ ಮಾಡುವ ಸಂದರ್ಭ ಸಂದಿಗ್ಧತೆಯಲಿದ್ದರೆ ಒಂದು ಕ್ಷಣ ತಾವು ಹಿಂದೂಸ್ತಾನದ ತುತ್ತ ತುದಿಯಲ್ಲಿ ಕುಳಿತಿರುವ ವ್ಯಕ್ತಿಯನ್ನು ನೆನಪು ಮಾಡಿಕೊಳ್ಳಿ ಮತ್ತು ನಿಮ್ಮ ಈ ನಿರ್ಣಯ ಆತನ ಜೀವನದಲ್ಲಿ ಏನು ಪ್ರಭಾವ ಬೀರಬಹುದೆಂಬ ಕಲ್ಪನೆ ಮಾಡಿಕೊಳ್ಳಿ. ಅವನ ಜೀವನದ ಮೇಲೆ ನಿಮ್ಮ ನಿರ್ಣಯ ಸಕಾರಾತ್ಮಕವಾಗಿರಬಹುದೆಂದು ತಮಗೆ ಅನ್ನಿಸಿದರೆ, ತಮ್ಮ ನಿರ್ಣಯ ಸರಿಯಾಗಿದೆ ಎಂದು ಅರಿತು ಯಾವುದೇ ಸಂಕೋಚವಿಲ್ಲದೆ ಮುಂದುವರೆಯಿರಿ.

ಈ ಭಾವನೆಯನ್ನು ನಾವು ಹೇಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಇಂತಹ ಮಹಾಪುರುಷರು ಹೇಳಿದ ಮಾತುಗಳನ್ನು ನಾವು ನಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡಾಗ ಮಾತ್ರ ಪರಿವರ್ತನೆಯ ಹರಿಕಾರರಾಗಲು ಸಾಧ್ಯ.

ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಸಾಮಾನ್ಯ ನಾಗರಿಕನಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಂಗ್ಲರ ವಿರುದ್ಧ ಹೋರಾಡಲು ಶಕ್ತಿ ಮತ್ತು ಅಭಯದ ಸುರಕ್ಷಾಕವಚವನ್ನು ಈ ಅಲಹಾಬಾದ್ ಮತ್ತು ಸಂಪೂರ್ಣ ಭಾರತದ ನ್ಯಾಯಜಗತ್ತು ನೀಡಿತ್ತು. ಈ ಕಾರ್ಯವನ್ನು ಭಾರತದ ನ್ಯಾಯಜಗತ್ತಿನೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದ ವಕೀಲರು ಮಾಡಿದ್ದರು.

ಆಂಗ್ಲ ಸುಲ್ತಾನರ ವಿರುದ್ಧ ಹೋರಾಟ ನಡೆಯುತ್ತಿತ್ತು. ಅಂಗ್ಲರ ವಿರುದ್ಧ ಹೋರಾಡುವ ಅವಕಾಶ ಒಂದು, ಎರಡು, ನಾಲ್ಕು ಅಥವಾ ಐದು ಜನ ವಕೀಲರಿಗೆ ಮಾತ್ರ ಲಭಿಸುತ್ತಿತ್ತು. ಆದರೆ ಭಾರತದ ಕೋಟ್ಯಾಂತರ ಜನರಿಗೆ ತಾವು ನಿರ್ಭಯವಾಗಿ ಜೀವಿಸಬೇಕು, ಆಂಗ್ಲರ ದಬ್ಬಾಳಿಕೆಯ ವಿರುದ್ಧದ ಈ ಹೋರಾಟದಲ್ಲಿ ಯಾರಾದರೂ ತಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬ ಭಾವನೆಯನ್ನು ಇವರು ಮೂಡಿಸಿದ್ದರು. ಇದೇ ವಕೀಲರ ಪೀಳಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ನಾವು ನೆನಪು ಮಾಡಿಕೊಳ್ಳುವ ದೇಶದ ಖ್ಯಾತನಾಮ ಸ್ವಾತಂತ್ರ್ಯ ಹೋರಾಟಗಾರರ ಹಿನ್ನೆಲೆ ಇದೇ ನ್ಯಾಯಾಲಯಗಳಾಗಿತ್ತು. ಇಲ್ಲಿಂದಲೇ ಅವರುಗಳು ಹೋರಾಟ ಮಾಡುತ್ತಾ ಮಾಡುತ್ತಾ ಜನ ಸಾಮಾನ್ಯರ ಉದ್ದಾರಕ್ಕಾಗಿ ರಾಜಕೀಯದ ಹಾದಿಯನ್ನು ತುಳಿದಿದ್ದರು. ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಟ ನಡೆಸಿದ್ದರು, ಹೋರಾಟದ ನಂತರ ದೇಶದ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದರು. ಭಾರತ ಸ್ವತಂತ್ರವಾಗಬೇಕೆಂಬುದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಪ್ರತಿಯೊಬ್ಬರ ಕನಸಾಗಿತ್ತು. ಪ್ರತಿಯೊಬ್ಬ ನಾಗರಿಕ ಈ ಸ್ವಾತಂತ್ರ್ಯದ ಕನಸನ್ನು ಕಂಡಿರದಿದ್ದರೆ ಭಾರತ ಸ್ವತಂತ್ರವಾಗಲು ಸಾಧ್ಯವಾಗುತ್ತಿರಲಿಲ್ಲ.

ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ಸ್ವತಂತ್ರದ ಸ್ಪೂರ್ತಿಯನ್ನು ತುಂಬಿದವರು ಮಹಾತ್ಮಾ ಗಾಂಧೀಜಿಯವರು. ಕಸ ಗುಡಿಸುವವನ ಮನದಲ್ಲೂ ನಾನು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇನೆ ಎಂಬ ಭಾವನೆ ಮೂಡುತ್ತಿತ್ತು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತ್ತಿದ್ದವರಿಗೂ ಸ್ವತಂತ್ರ ಭಾರತದ ಭಾವನೆ ಮೂಡುತ್ತಿತ್ತು. ಖಾದಿ ಧರಿಸಿದವರ ಮನದಲ್ಲು ಸ್ವತಂತ್ರ ಭಾರತದ ಕನಸಿತ್ತು. ಮಹಾತ್ಮಾಗಾಂಧಿಯವರು ದೇಶದ ಕೋಟಿ ಕೋಟಿ ಜನರ ಮನಸ್ಸಿನಲ್ಲಿ ಸ್ವತಂತ್ರದ ಉತ್ಸಾಹವನ್ನು ತುಂಬಿದ್ದರು. ಈ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊಸ ಶಕ್ತಿ, ಹೊಸ ಉತ್ಸಾಹ ತುಂಬಿದ ಅಲಹಾಬಾದ್‍ನ ನೆಲದಲ್ಲಿ ನಾನಿಂದು ನಿಂತಿದ್ದೇನೆ.

ಸ್ವತಂತ್ರ ಪಡೆದು 70 ವರ್ಷಗಳು ಪೂರ್ಣಗೊಂಡಿದೆ. 2022ಕ್ಕೆ ಸ್ವತಂತ್ರ ಭಾರತಕ್ಕೆ 75 ವರ್ಷಗಳಾಗಲಿರುವ ಸಂದರ್ಭದಲ್ಲಿ ಅಲಹಾಬಾದ್‍ನಿಂದ ದೇಶಕ್ಕೆ ಏನಾದರೂ ಪ್ರೇರಣೆ, ಸ್ಪೂರ್ತಿ ಸಿಗಬಹುದಾ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೋರಿಸಿದ ಉತ್ಸಾಹ, ತ್ಯಾಗ, ತಪಸ್ಸು, ಪರಿಶ್ರಮದ ನೆನಪಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ದೇಶದ 125 ಕೋಟಿ ಜನರಲ್ಲಿ ಹೊಸ ಹುಮ್ಮಸ್ಸನ್ನು ತುಂಬಬೇಕಿದೆ. ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಒಂದು ಹೊಸ ಹಾದಿಯಲ್ಲಿ ಹಿಂದೂಸ್ತಾನವನ್ನು ಕೊಂಡೊಯ್ಯಬೇಕಿದೆ. 2022ಕ್ಕೆ ಯಾವುದಾದರೂ ಕನಸು, ಏನನ್ನಾದರೂ ಮಾಡಬೇಕೆಂಬ ಸಂಕಲ್ಪ, ಯಾವುದಾದರೂ ಮಾರ್ಗಸೂಚಿಯನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಪ್ರತಿಯೊಬ್ಬ ನಾಗರಿಕನು ಇದನ್ನು ಮಾಡಿದರೆ ಉತ್ತಮ ಪರಿಣಾಮ ದೊರಕುವುದರಲ್ಲಿ ಸಂಶಯವಿಲ್ಲ.

125 ಕೋಟಿ ಭಾರತಿಯರಲ್ಲಿ ಒಂದು ಶಕ್ತಿ ಇದೆ. ನಮ್ಮ ಸಂಘ ಸಂಸ್ಥೆಗಳು, ಸರಕಾರಗಳು, ಸಾರ್ವಜನಿಕ ಸೇವೆಯಲ್ಲಿ ನಿರತವಾಗಿರುವ ವ್ಯಕ್ತಿಗಳು, ನ್ಯಾಯಾಲಯಕ್ಕೆ 150 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿರುವ ಎಲ್ಲರೂ 2022ಕ್ಕೆ ಯಾವ ಕ್ಷೇತ್ರದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆಯೋ ಆ ಕ್ಷೇತ್ರದಲ್ಲಿ ಡಾ. ರಾಧಾಕೃಷ್ಣನ್ ಹೇಳಿದಂತೆ, ಮಹಾತ್ಮಾಗಾಂಧಿಜಿಯವರು ನುಡಿದಂತೆ ಉತ್ತಮ ಮೌಲ್ಯಗಳ ಮೂಲಕ ದೇಶಕ್ಕಾಗಿ ಏನನ್ನಾದರೂ ಒಳಿತನ್ನು ಮಾಡುವೆನೆಂಬ ಒಂದು ಹೊಸ ಸಂಕಲ್ಪದೊಂದಿಗೆ ಇಲ್ಲಿಂದ ತೆರಳಿ. ಮುಖ್ಯನಾಯಮೂರ್ತಿಗಳು ಕಂಡಿರುವ ಕನಸಿನಂತೆ ತಮ್ಮೆಲ್ಲರ ಹೃದಯದಲ್ಲಿರುವ ಜ್ವಾಲೆ ಒಂದು ಶಕ್ತಿಯಾಗಲಿದ್ದು ಆ ಶಕ್ತಿ ದೇಶದಲ್ಲಿ ಪರಿವರ್ತನೆಯನ್ನು ತರಬಹುದೆಂಬ ವಿಶ್ವಾಸ ನನಗಿದೆ.

ಬನ್ನಿ, 2022ಕ್ಕೆ ಹೊಸ ಗುರಿಯನ್ನು ನಿರ್ಧರಿಸೋಣ, ದೇಶದ ಸ್ವಾತಂತ್ರದ 75 ವರ್ಷಗಳು ಪೂರ್ಣಗೊಳ್ಳುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸನ್ನು ನನಸು ಮಾಡುವ ದಿಶೆಯಲ್ಲಿ ನಾವೂ ಪ್ರಯತ್ನಿಸೋಣ ಎಂದು ದೇಶದ ನಾಗರಿಕರಲ್ಲಿ ನಾನು ಮನವಿ ಮಾಡುತ್ತೇನೆ. 125 ಕೋಟಿ ಭಾರತೀಯರ ಕನಸು, 125 ಕೋಟಿ ಭಾರತೀಯರು ಇಡುವ ಒಂದು ಹೆಜ್ಜೆ ದೇಶವನ್ನು 125 ಕೋಟಿ ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಬಲ್ಲಷ್ಟು ಶಕ್ತಿಯುತವಾಗಿದೆ ಎಂಬ ವಿಶ್ವಾಸ ನನಗಿದೆ. ಕಾಲ ಬದಲಾಗುತ್ತಿದೆ, ಈ ಶಕ್ತಿಯನ್ನು ಹೇಗೆ ಮತ್ತಷ್ಟು ಬಲಯುತವನ್ನಾಗಿ ಮಾಡಬಹುದು ಎಂಬ ಬಗ್ಗೆ ನಾವು ಕಾರ್ಯಪ್ರವೃತ್ತರಾಗಬೇಕಿದೆ.

2014ರ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ನಾನು ದೇಶದ ಅನೇಕ ಜನರಿಗೆ ಅಪರಿಚಿತನಾಗಿದ್ದೆ. ಯಾರಿಗೂ ನನ್ನ ಗುರುತಿರಲಿಲ್ಲ. ಒಂದು ಚಿಕ್ಕ ಕಾರ್ಯಕ್ರಮದಲ್ಲಿ ನನಗೆ ಅನೇಕ ಪ್ರಶ್ನೆಗಳನ್ನು ಕೇಳಲಾಯಿತು. ನಾನು ಪ್ರಧಾನಮಂತ್ರಿಯಾದರೆ ಎಷ್ಟು ಹೊಸ ಕಾನೂನುಗಳನ್ನು ಮಾಡುತ್ತೇನೆ ನನಗೆ ತಿಳಿದಿಲ್ಲ. ಆದರೆ ನಾನು ಪ್ರತಿದಿನ ಒಂದೊಂದು ಕಾನೂನುಗಳನ್ನು ಅಂತ್ಯಮಾಡುತ್ತೇನೆ. ಸರಕಾರಗಳು ಜನಸಾಮಾನ್ಯರ ಮೇಲೆ ಹೇರಿರುವ ಕಾನೂನುಗಳನ್ನು ಅಂತ್ಯ ಮಾಡುತ್ತೇನೆ ಎಂದು ತಿಳಿದಿದ್ದೆ. ಮುಖ್ಯ ನ್ಯಾಯಾಧೀಶರು ಇಂತಹ ಕಾನೂನುಗಳಿಂದ ಹೊರಬರಬೇಕೆಂಬ ಮಾತನ್ನಾಡಿದ್ದಾರೆ ಮತ್ತು ಸರ್ಕಾರ ಕೂಡಾ ಈ ಹೊರೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದೆಂಬ ಬಗ್ಗೆ ಯೋಚಿಸುತ್ತಿದೆ.

ಇನ್ನೂ 5 ವರ್ಷಗಳು ಪೂರ್ಣಗೊಂಡಿಲ್ಲ, ನಾವು ಇಲ್ಲಿಯವಗೆ ದಿನಕ್ಕೆ ಒಂದಕ್ಕಿಂತಲೂ ಹೆಚ್ಚು ಅಂದರೆ ಹೆಚ್ಚೂ ಕಡಿಮೆ 1200 ಕಾನೂನುಗಳನ್ನು ಅಂತ್ಯಮಾಡಿದ್ದೇವೆ, ಇದು ನನಗೆ ಸಂತೋಷವನ್ನುಂಟುಮಾಡಿದೆ. ಕಾನೂನನ್ನು ನಾವು ಹೇಗೆ ಸರಳ ಮಾಡಬಹುದು, ಕಾನೂನು ಹೊರೆಯನ್ನು ಹೇಗೆ ಕಡಿಮೆ ಮಾಡುವುದರಿಂದ ನ್ಯಾಯ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯ, ಈ ಕಾರ್ಯವನ್ನು ಮಾಡಬೇಕಿದೆ. ಬದಲಾದ ವ್ಯವಸ್ಥೆಯಲ್ಲಿ ತಂತ್ರಜ್ಞಾನಕ್ಕೆ ಬಹಳ ಮಹತ್ವವಿದೆ.

ಈಗ ಯಾವುದೇ ದಾಖಲೆಯ ಅಗತ್ಯವಿಲ್ಲ, ಸೆಕೆಂಡುಗಳಿಗೂ ಕಡಿಮೆ ಅವಧಿಯಲ್ಲಿ ಕಡತಗಳು ಮುಂದಕ್ಕೆ ಹೋಗುತ್ತವೆ. ಭಾರತ ಸರ್ಕಾರವೂ ಕೂಡಾ ಡಿಜಿಟಲ್ ಇಂಡಿಯಾ ಮಾಧ್ಯಮದ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಮಾಹಿತಿ ಸಂಪರ್ಕ ತಂತ್ರಜ್ಞಾನದ ಮೂಲಕ ಎಷ್ಟು ಬಲಪಡಿಸಬಹುದು, ಎಷ್ಟು ಸರಳ ಮಾಡಬಹುದು ಎಂಬ ಬಗ್ಗೆ ಚಿಂತಿಸುತ್ತಿದೆ. ಇಂದು ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸುವವರು ಒಂದು ಕಾಲದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಿರಬಹುದು. ಅವರುಗಳಿಗೆ ಒಂದೊಂದು ಕೇಸ್‍ಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಗಂಟೆಗಳ ಕಾಲ ಪುಸ್ತಕಗಳನ್ನು ತಿರುವಬೇಕಾಗಿತ್ತು.

ಇಂದಿನ ವಕೀಲರಿಗೆ ಅಷ್ಟೊಂದು ಕಷ್ಟಪಡುವ ಅಗತ್ಯವಿಲ್ಲ. ಅವರು ಗೂಗಲ್ ಗುರುವನ್ನು ಕೇಳಿದೊಡನೆ ಗೂಗಲ್ ಗುರು ತಕ್ಷಣ ಹೇಳಿಬಿಡುತ್ತದೆ. 1989ರಲ್ಲಿ ಈ ವಿಷಯಕ್ಕಾಗಿ ಇಂತಹ ಕೇಸು ದಾಖಲಾಗಿತ್ತು, ಇಂತಹವರು ನ್ಯಾಯಾಧೀಶರಾಗಿದ್ದರು ಎಂದು ತಿಳಿಸುತ್ತದೆ. ಇಷ್ಟರ ಮಟ್ಟಿಗೆ ತಂತ್ರಜ್ಞಾನ ಸರಳವಾಗಿದೆ. ಇದರೊಂದಿಗೆ ವಕೀಲ ಸಮೂಹಕ್ಕೆ ದೊಡ್ಡ ಶಕ್ತಿ ಬಂದಿದೆ. ಆಧುನಿಕ ತಂತ್ರಜ್ಞಾನದ ಮೂಲಕ ವಾದಗಳ ಗುಣಮಟ್ಟ ಹೆಚ್ಚಿದೆ. ತಂತ್ರಜ್ಞಾನದ ಸಹಾಯದಿಂದ ನ್ಯಾಯಾಲಯದಲ್ಲಿ ಬದಲಾವಣೆ ತರಬಹುದಾಗಿದೆ, ತೀಕ್ಷ್ಣತೆ ಹೆಚ್ಚಲಿದೆ. ದಿನಾಂಕ ಪಡೆಯಲು ತೀಕ್ಷ್ಣತೆಯ ಅವಶ್ಯಕತೆ ಇರುವುದಿಲ್ಲ.

ಪ್ರಕರಣಗಳ ಬಗೆಹರಿಸುವಿಕೆಗೆ ತೀಕ್ಷ್ಣತೆಯ ಅವಶ್ಯಕತೆ ಇದೆ. ನ್ಯಾಯಾಧೀಶರ ಸಮ್ಮುಖದಲ್ಲಿ ತೀಕ್ಷ್ಣವಾಗಿ ವಾದ ಮಂಡಿಸಿದಲ್ಲಿ ಸತ್ಯಾಸತ್ಯತೆ ಹೊರಬರುವಲ್ಲಿ ತಡವಾಗುವುದಿಲ್ಲ. ನಮ್ಮ ನ್ಯಾಯ ಪ್ರಕ್ರಿಯೆ ತನ್ನಂತಾನೆ ವೇಗ ಪಡೆದುಕೊಳ್ಳುವುದು. ನಾವು ಪ್ರತಿಯೊಂದು ವಾದದಲ್ಲಿ ಹೇಗೆ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳಬಹುದು, ನಿಗದಿತ ದಿನಾಂಕಕ್ಕೆ ಬರುವುದು, ಎರಡು ನಿಮಿಷಗಳಲ್ಲಿ ಮಾತುಕತೆ ನಡೆಸುತ್ತಾರೆ. ಆದರೆ ಇಂತಹ ದಿನ, ಇಷ್ಟು ಸಮಯಕ್ಕೆ ಎಂಬ ಮಾಹಿತಿ ಮೊಬೈಲ್ ಫೋನ್ ಮೂಲಕ ದೊರಕುವ ಪ್ರಕ್ರಿಯ ಪ್ರಾರಂಭವಾಗುವುದಾದರೂ ಎಂದಿನಿಂದ?

ಇಂದು ಒಬ್ಬ ಅಧಿಕಾರಿ ಎಲ್ಲಿಯೋ ಕಾರ್ಯ ನಿರ್ವಹಿಸುತ್ತಿದ್ದಾನೆ. ಅವರ ಮೇಲೆ ಯಾವುದೊ ಕಾಲದ ಒಂದು ಕೇಸಿದೆ. ಆ ಅಧಿಕಾರಿಯ ವರ್ಗಾವಣೆಯಾಗಿದೆ. ಆ ಅಧಿಕಾರಿಯ ಕೇಸ್ ನ್ಯಾಯಾಲಯದ ಮುಂದೆ ಬಂದರೆ ಆ ಅಧಿಕಾರಿ ತನ್ನೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ನ್ಯಾಯಾಲಯಗಳಿಗೆ ಅಲೆದಾಡಬೇಕಾಗುತ್ತದೆ. ಇಂತಹ ವ್ಯಕ್ತಿಗಳಿಗೆ ವಿಡಿಯೋ ಕಾನ್ಫ್ರೆನ್ಸ್ ಸೌಲಭ್ಯ ಏಕೆ ಕಲ್ಪಿಸಬಾರದು. ಕಡಿಮೆ ಸಮಯದಲ್ಲಿ ಯಾವ ಮಾತುಗಳನ್ನು ಕೇಳಬೇಕಿದೆಯೋ ಕೇಳಬೇಕು. ಇದರಿಂದಾಗಿ ಆ ಅಧಿಕಾರಿಯ ಸಮಯವೂ ಉಳಿಯುತ್ತದೆ, ಕಛೇರಿಯ ಕೆಲಸ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ತರಹ ಜೈಲಿನಿಂದ ಖೈದಿಗಳನ್ನು ನ್ಯಾಯಾಲಯಕ್ಕೆ ಕರೆತರುವುದು, ಪುನ: ಕೊಂಡೊಯ್ಯುವುದು, ಅವರ ಸುರಕ್ಷತೆಗೆ ತಗಲುವ ಖರ್ಚು ಮತ್ತು ಇದರಿಂದ ಏನೇನು ಆಗಬಹುದು ಎಂಬುದನ್ನು ಎಲ್ಲರೂ ತಿಳಿದಿದ್ದಾರೆ.

ಈಗ ಯೋಗಿಯವರು ಬಂದಿದ್ದಾರೆ. ಇನ್ನು ಮುಂದೆ ಇದು ಅಂತ್ಯ ಕಾಣಬೇಕು. ಕಾರಾಗೃಹ ಮತ್ತು ನ್ಯಾಯಾಲಯಗಳನ್ನು ವಿಡಿಯೋ ಕಾನ್ಫ್ರೇನ್ಸ್ ಮೂಲಕ ಜೋಡಿಸಿದರೆ ಎಷ್ಟು ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು, ಎಷ್ಟು ಸಮಯದ ಉಳಿತಾಯವಾಗುತ್ತದೆ, ಎಷ್ಟು ಸರಳವಾಗಿ ಕಾರ್ಯ ನಿರ್ವಹಿಸಬಹುದು ಎಂಬ ಬಗ್ಗೆ ಆಲೋಚಿಸಬೇಕಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಆಧುನಿಕ ಮಾಹಿತಿ ಸಂಪರ್ಕ ತಂತ್ರಜ್ಞಾನದ ಸಂಪೂರ್ಣ ಪ್ರಯೋಜನ ದೊರಕುವಂತಾಗಬೇಕೆಂಬುದು ಭಾರತ ಸರ್ಕಾರದ ಪ್ರಯತ್ನವಾಗಿದೆ.

ಅದಕ್ಕೆ ಪ್ರಾಥಮಿಕತೆ ಲಭಿಸಬೇಕು. ದೇಶದ ಸ್ಟಾರ್ಟ್ ಅಪ್ ಯೋಜನೆಯಲ್ಲಿ ತೊಡಗಿಕೊಂಡಿರುವ ಯುವಕರಲ್ಲಿ ಭಾವೀ ಭಾರತದ ನ್ಯಾಯ ಪ್ರಕ್ರಿಯೆಗಾಗಿಯೇ ಸ್ಟಾರ್ಟ್ ಅಪ್ ಯೋಜನೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕೆಂದು ನಾನು ಯುವಜನತೆಯಲ್ಲಿ ಕೇಳಿಕೊಳ್ಳುತ್ತೇನೆ. ಅವರೂ ಕೂಡಾ ತಂತ್ರಜ್ಞಾನದ ಮೂಲಕ ನ್ಯಾಯವ್ಯವಸ್ಥೆಯನ್ನು ಬಲಪಡಿಸಬೇಕಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ರೀತಿಯ ನವೀನತೆಗಳು ಬರಬೇಕಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ತೊಡಗಿರುವ ವ್ಯಕ್ತಿಗಳು ಇದರ ಉಪಯೋಗವನ್ನು ಪಡೆದುಕೊಂಡಲ್ಲಿ ಕೆಲಸ ಕಾರ್ಯಗಳು ವೇಗವನ್ನು ಪಡೆದುಕೊಳ್ಳಬಹುದು. ನಾಲ್ಕೂ ದಿಕ್ಕುಗಳಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಿದರೆ ನಾವು ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ.
ನಾನು ಮತ್ತೊಮ್ಮೆ ದಿಲೀಪ್ ಜೀ ಮತ್ತವರ ತಂಡಕ್ಕೆ, ಇಲ್ಲಿ ಉಪಸ್ಥಿತರಿರುವ ಎಲ್ಲ ಮಾನ್ಯ ನ್ಯಾಯಾಧೀಶರುಗಳಿಗೂ, ಬೇರೆ ಬೇರೆ ಕಡೆಗಳಿಂದ ಆಗಮಿಸಿರುವ ಮಿತ್ರರಿಗೂ, 150ನೇ ವರ್ಷದ ಈ ಮಹಾನ್ ಯಾತ್ರೆಯ ಸಮಾರೋಪದ ಸಮಯದಲ್ಲಿ ಹೃದಯಪೂರ್ವಕ ಶುಭಕಾಮನೆಗಳನ್ನು ಸಲ್ಲಿಸುತ್ತೇನೆ. 2022ಕ್ಕೆ ಭಾರತದ ಸ್ವಾತಂತ್ರ್ಯದ 75 ವರ್ಷಗಳ ಕನಸನ್ನು ಇಟ್ಟುಕೊಂಡು ಇಲ್ಲಿಂದ ತೆರಳೋಣ.
ಆದಷ್ಟು ಬೇಗ ಈ ಕನಸನ್ನು ಸಂಕಲ್ಪವಾಗಿ ಪರಿವರ್ತಿಸಿ ಮತ್ತು ಆ ಸಂಕಲ್ಪವನ್ನು ಪೂರ್ಣಮಾಡುವಲ್ಲಿ ತಮ್ಮೆಲ್ಲ ಕ್ಷಮತೆಯನ್ನು ಒಟ್ಟುಗೂಡಿಸಿ. ದೇಶವನ್ನು ಮತ್ತಷ್ಟು ಉನ್ನತ ಮಟ್ಟಕ್ಕೇರಿಸೋಣ. ನವ ಭಾರತದ ನವ ಪೀಳಿಗೆಯ ಕನಸನ್ನು ಪೂರ್ಣಗೊಳಿಸುವ ದಿಶೆಯಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗೋಣ.

ಈ ಒಂದು ಅಪೇಕ್ಷೆಯೊಂದಿಗೆ ತಮಗೆಲ್ಲರಿಗೂ ಧನ್ಯವಾದಗಳು. ಧನ್ಯವಾದಗಳು.