ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ನವದೆಹಲಿಯ ‘ಭಾರತ ಮಂಡಪಂ’ನಲ್ಲಿ `ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟ’ (ಎಫ್ಐಸಿಸಿಐ) ವಾರ್ಷಿಕ ಸಾಮಾನ್ಯ ಸಭೆ ಮತ್ತು ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಎಫ್ಐಸಿಸಿಐಯ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವು ಈ ಹಿಂದೆ ಹಲವು ಸಂದರ್ಭಗಳಲ್ಲಿ ಎಫ್ಐಸಿಸಿಐ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ, ಸಂಸ್ಥೆಯು ಜಾಗೃತವಾಗಿರುವ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳುವ ಮತ್ತು ಭಾರತದ ಆರ್ಥಿಕ ಪಯಣಕ್ಕೆ ಕೊಡುಗೆ ನೀಡುವ 100 ವರ್ಷಗಳನ್ನು ಪೂರೈಸುತ್ತಿರುವುದರಿಂದ ಇಂದಿನ ಈ ಮೈಲುಗಲ್ಲು ವಿಶೇಷವಾಗಿದೆ ಎಂದು ಉಲ್ಲೇಖಿಸಿದರು.
ಕಳೆದ ಒಂದು ಶತಮಾನದ ಭಾರತದ ಆರ್ಥಿಕ ಪಥವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕಳೆದ 12 ವರ್ಷಗಳಲ್ಲಿ ನಾಗರಿಕರು, ಯುವಕರು, ರೈತರು, ಕಾರ್ಮಿಕರು ಮತ್ತು ಉದ್ಯಮದ ಕಠಿಣ ಪರಿಶ್ರಮವು ಪರಿಸ್ಥಿತಿಯನ್ನು ಹೇಗೆ ಬದಲಾಯಿಸಿತು ಎಂಬುದನ್ನು ಉಲ್ಲೇಖಿಸಿದರು. “ಇಂದು ಭಾರತದಲ್ಲಿ ಪ್ರಗತಿಯ ವೇಗವೂ ಅತ್ಯಂತ ಗರಿಷ್ಠವಾಗಿದೆ ಮತ್ತು ಬಡತನದಿಂದ ಹೊರಬರುವ ವೇಗವೂ ಅಭೂತಪೂರ್ವವಾಗಿದೆ,” ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು.
ಕೇವಲ 12 ರಿಂದ 13 ವರ್ಷಗಳಲ್ಲಿ 50 ಕೋಟಿ ಭಾರತೀಯರು ಬಡತನವನ್ನು ಗೆದ್ದಿದ್ದಾರೆ ಎಂದು ಹೇಳುವ ವಿಶ್ವಬ್ಯಾಂಕ್ನ ಇತ್ತೀಚಿನ ವರದಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಮೈಲುಗಲ್ಲು ದೇಶಕ್ಕೆ ತಂದಿರುವ ಹೆಮ್ಮೆಯನ್ನು ಒತ್ತಿ ಹೇಳಿದರು. “ಈ ವರದಿಯು ನಮ್ಮೆಲ್ಲರಲ್ಲೂ ಹೆಮ್ಮೆಯನ್ನು ತುಂಬಲಿದೆ” ಎಂದು ಶ್ರೀ ಮೋದಿ ನುಡಿದರು.
ಸರಿಯಾದ ನೀತಿಗಳು ಮತ್ತು ಉದ್ದೇಶದ ಅಡಿಯಲ್ಲಿ ಕಳೆದ 12 ರಿಂದ 13 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಮೇಲೆ ಬರುವುದರೊಂದಿಗೆ, ಭಾರತದ ಪ್ರಸ್ತುತ ಹಾದಿಯ ಪಥವನ್ನು ಪ್ರಧಾನಮಂತ್ರಿಯವರು ವಿಶ್ಲೇಷಿಸಿದರು. “ಇಂದು ಭಾರತ ನಡೆಯುತ್ತಿರುವ ಹಾದಿಯು ಸರಿಯಾಗಿದೆ, ನಿಖರವಾಗಿದೆ ಮತ್ತು ದೇಶದ ಯಶಸ್ಸಿನ ಖಾತರಿಯನ್ನು ಹೊಂದಿದೆ ಎಂಬುದನ್ನು ಇದು ತೋರಿಸುತ್ತದೆ,” ಎಂದು ಮೋದಿ ಪ್ರತಿಪಾದಿಸಿದರು.
ಭಾರತವು ವಾರ್ಷಿಕ ಸುಮಾರು ಶೇಕಡಾ ಏಳರಷ್ಟು ಬೆಳವಣಿಗೆಯನ್ನು ಕಾಣಲಿದೆ ಎಂಬ ಪ್ರಮುಖ ಸಂಸ್ಥೆಗಳ ಅಂದಾಜುಗಳು, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತದ ಸ್ಥಾನಮಾನ ಹಾಗೂ ಅಕ್ಟೋಬರ್ನಲ್ಲಿ ದಾಖಲಾದ ಸುಮಾರು 50 ಶತಕೋಟಿ ಡಾಲರ್ಗಳ ಮಾಸಿಕ ಸರಕು ರಫ್ತುಗಳನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಇಂತಹ ಕಾರ್ಯಕ್ಷಮತೆಯು ಜಾಗತಿಕ ಸಂಸ್ಥೆಗಳು ಭಾರತದ ಬೆಳವಣಿಗೆಯ ಅಂದಾಜನ್ನು ಮೇಲ್ಮುಖವಾಗಿ ಪರಿಷ್ಕರಿಸಲು ಪ್ರೇರೇಪಿಸಿದೆ ಎಂದು ಗಮನ ಸೆಳೆದರು. “ಮೂಡೀಸ್ ರೇಟಿಂಗ್ಸ್, ಎಸ್ & ಪಿ ಗ್ಲೋಬಲ್ ರೇಟಿಂಗ್ಸ್, ಫಿಚ್ ರೇಟಿಂಗ್ಸ್, ವಿಶ್ವಬ್ಯಾಂಕ್ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಮ್ಮ ಬೆಳವಣಿಗೆಯನ್ನು ಮೇಲ್ಮುಖವಾಗಿ ಪರಿಷ್ಕರಿಸುತ್ತಿವೆ,” ಎಂದು ಶ್ರೀ ಮೋದಿ ಹೇಳಿದರು.
ಸ್ಥಾಪಿತ ವಲಯಗಳು ಮತ್ತು ಅಲ್ಪಾವಧಿಯ ಲಾಭಗಳನ್ನು ಮಾತ್ರ ಅವಲಂಬಿಸದೆ, ವ್ಯಕ್ತಿಗಳು, ಉದ್ಯಮ ಮತ್ತು ರಾಷ್ಟ್ರಗಳು ಕಾಲಕಾಲಕ್ಕೆ ಆತ್ಮಾವಲೋಕನದ ಮೂಲಕ ತಮ್ಮನ್ನು ತಾವು ಉದ್ಧರಿಸಿಕೊಳ್ಳಬೇಕು ಎಂಬುದನ್ನು ಒತ್ತಿಹೇಳಲು ಪ್ರಾಚೀನ ಗ್ರಂಥದ ‘ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್’ ಎಂಬ ಶ್ಲೋಕವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಜಾಗತಿಕ ಸಂಪನ್ಮೂಲಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಉದ್ಯಮವು ಸ್ವಾವಲಂಬನೆಯನ್ನು ಬಲಪಡಿಸಲು ಮತ್ತು ಹೊಸ ವ್ಯಾಪಾರ ಬೆಳವಣಿಗೆಯನ್ನು ತೆರೆಯಲು ʻಫಿಕ್ಕಿʼಯು ತನ್ನ ಶತಮಾನದ ಸಾಧನೆಗಳನ್ನು ಮೀರಿ ನೋಡಬೇಕು ಮತ್ತು ಮುಂದಿನ 20 ವರ್ಷಗಳಿಗೆ ಯೋಜನೆ ರೂಪಿಸಬೇಕು ಎಂದು ಕರೆ ನೀಡಿದರು. “ಮುಂದಿನ 20 ವರ್ಷಗಳ ನಿಮ್ಮ ಪ್ರತಿಯೊಂದು ದೀರ್ಘಕಾಲೀನ ಹೂಡಿಕೆ ನಿರ್ಧಾರದಲ್ಲಿ, ‘ಭಾರತ ಮೊದಲು’ ಎಂಬುದನ್ನು ನಿಮ್ಮ ಅಡಿಪಾಯವನ್ನಾಗಿ ಮಾಡಿಕೊಳ್ಳಿ,” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಭಾರತವು ಜಾಗತಿಕವಾಗಿ ‘ವಿಶ್ವದ ಔಷಧಾಲಯ’ ಎಂದು ಹೆಸರುವಾಸಿಯಾಗಿದ್ದರೂ ಮತ್ತು ಸಿದ್ಧ ಔಷಧಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರೂ, ನೂರಾರು ವಿಭಾಗಗಳಲ್ಲಿ ಶತಕೋಟಿ ಡಾಲರ್ ಮೌಲ್ಯದ ʻಎಪಿಐʼಗಳು, ಬಲ್ಕ್ ಡ್ರಗ್ಸ್ ಮತ್ತು ಔಷಧ ಮಧ್ಯವರ್ತಿಗಳನ್ನು ಇನ್ನೂ ಆಮದು ಮಾಡಿಕೊಳ್ಳುತ್ತಿದೆ ಎಂದು ಬೆಟ್ಟು ಮಾಡಿದ ಪ್ರಧಾನಮಂತ್ರಿಯವರು, ಜಾಗತಿಕ ಸ್ಪರ್ಧಾತ್ಮಕತೆಯನ್ನು ಪಡೆಯಲು ದೇಶೀಯ ಉತ್ಪಾದನಾ ಅವಕಾಶಗಳನ್ನು ಗುರುತಿಸುವಂತೆ ಕರೆ ನೀಡಿದರು. ಹೊಸ ತಂತ್ರಜ್ಞಾನ ಹಾಗೂ ಬೃಹತ್ ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಮಾಡುವಂತೆ ಔಷಧ ವಲಯಕ್ಕೆ ಒತ್ತಾಯಿಸಿದರು. “ಸಿದ್ಧ ಔಷಧಗಳಲ್ಲಿ ನಮಗೆ ಶಕ್ತಿಯಿದೆ, ಮತ್ತು ಈಗ ನಾವು ಔಷಧೀಯ ಕಚ್ಚಾಪದಾರ್ಥಗಳಲ್ಲಿಯೂ ನಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ,” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಕಬ್ಬಿಣ, ಉಕ್ಕು ಮತ್ತು ಅಲ್ಯೂಮಿನಿಯಂ ಕ್ಷೇತ್ರಗಳಲ್ಲಿಯೂ ಇಂತಹುದೇ ಅಂತರಗಳನ್ನು ಅವರು ಉಲ್ಲೇಖಿಸಿದರು. ಭಾರತವು ಸಾವಿರಾರು ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ರಫ್ತು ಮಾಡುತ್ತದೆ ಮತ್ತು ವಿಶಾಲವಾದ ಬಾಕ್ಸೈಟ್ ನಿಕ್ಷೇಪಗಳನ್ನು ಹೊಂದಿದೆ. ಆದರೂ ಸಿದ್ಧ ಉಕ್ಕು, ವಿಶೇಷ ಅಲ್ಯೂಮಿನಿಯಂ ಮಿಶ್ರಲೋಹಗಳು ಮತ್ತು ಇತರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ ಎಂದರು. ಆಮದು ಮಾಡಿಕೊಳ್ಳುವ ದರ್ಜೆಗಳನ್ನು ಗುರುತಿಸಲು, ಉತ್ಪಾದನಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಖನಿಜ ಮೌಲ್ಯ ಸರಪಳಿಯಾದ್ಯಂತ ಪರಿಣತಿಯನ್ನು ಬೆಳೆಸಲು ಉದ್ಯಮಕ್ಕೆ ಕರೆ ನೀಡಿದರು. “ಈ ಉತ್ಪನ್ನಗಳ ಉತ್ಪಾದನಾ ಸಾಮರ್ಥ್ಯವನ್ನು ನಾವು ದೇಶದಲ್ಲಿಯೂ ಅಭಿವೃದ್ಧಿಪಡಿಸಬೇಕಾಗಿದೆ,” ಎಂದು ಹೇಳಿದರು.
ಭಾರತದ ಕೃಷಿ ಕ್ಷೇತ್ರದ ಬೃಹತ್ ಪ್ರಮಾಣದ ಹೊರತಾಗಿಯೂ ಜಾಗತಿಕ ಕೃಷಿ ರಫ್ತಿನಲ್ಲಿ ದೇಶದ ಪಾಲು ಕೇವಲ ಶೇಕಡಾ ಎರಡರಿಂದ ಎರಡೂವರೆಯಷ್ಟಿದೆ. ಆದರೂ ಕಳೆದ 12 ವರ್ಷಗಳಲ್ಲಿ ಕೃಷಿ-ಆಹಾರ ರಫ್ತಿನಲ್ಲಿ ಸಂಸ್ಕರಿಸಿದ ಆಹಾರದ ಪಾಲು ಶೇಕಡಾ 13 ರಿಂದ ಶೇಕಡಾ 20ಕ್ಕೂ ಅಧಿಕ ಮಟ್ಟಕ್ಕೆ ಬೆಳೆದಿದೆ ಎಂದು ಗಮನ ಸೆಳೆದ ಪ್ರಧಾನಮಂತ್ರಿಯವರು, ಜಾಗತಿಕ ಬೇಡಿಕೆಗೆ ಅನುಗುಣವಾಗಿ ಜಂಟಿ ಕಾರ್ಯತಂತ್ರವನ್ನು ರೂಪಿಸಲು, ಕೃಷಿಯಲ್ಲಿ ಹೂಡಿಕೆಯನ್ನು ವಿಸ್ತರಿಸಲು ಮತ್ತು ಸಾಗರೋತ್ತರ ಮಾರುಕಟ್ಟೆಗಳಿಗಾಗಿ ವಿಶ್ವಾಸಾರ್ಹ ಖರೀದಿ ಮತ್ತು ಉತ್ಪನ್ನ ಶ್ರೇಣಿಗಳನ್ನು ನಿರ್ಮಿಸಲು ಉದ್ಯಮಕ್ಕೆ ಕರೆ ನೀಡಿದರು. “ನಾವೆಲ್ಲರೂ ಒಟ್ಟಾಗಿ ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಮತ್ತು ಇದನ್ನು ಮೌಲ್ಯವರ್ಧನೆ ಹಾಗೂ ಆಹಾರ ಸಂಸ್ಕರಣಾ ಉದ್ಯಮಕ್ಕೆ ಒಂದು ದೊಡ್ಡ ಅವಕಾಶವಾಗಿ ನೋಡಬೇಕಾಗಿದೆ,” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ದೈನಂದಿನ ಎಂಜಿನಿಯರಿಂಗ್ ಉತ್ಪನ್ನಗಳಲ್ಲಿ- ಇಲ್ಲಿ ಜಾಗತಿಕ ಹ್ಯಾಂಡ್ ಟೂಲ್ಸ್ ಮತ್ತು ಪವರ್ ಟೂಲ್ಸ್ ರಫ್ತಿನಲ್ಲಿ ಭಾರತದ ಪಾಲು ಕಡಿಮೆಯಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಹಾಗೂ ಜಾಗತಿಕ ದಕ್ಷಿಣಕ್ಕಾಗಿ ಯಂತ್ರೋಪಕರಣಗಳ ತಯಾರಿಕೆಯಲ್ಲಿರುವ ಬಳಕೆಯಾಗದ ಸಾಮರ್ಥ್ಯವನ್ನು ಎತ್ತಿ ತೋರಿದ ಪ್ರಧಾನಮಂತ್ರಿಯವರು, ಗುಣಮಟ್ಟದ ಉತ್ಪಾದನೆಯನ್ನು ಹೆಚ್ಚಿಸಲು ಸಣ್ಣ ಉದ್ಯಮಗಳಿಗೆ ಸಹಾಯ ಮಾಡುವಂತೆ ಮತ್ತು ಪ್ಯಾಕೇಜಿಂಗ್ ಉಪಕರಣಗಳು, ನೀರಾವರಿ ವ್ಯವಸ್ಥೆಗಳು ಮತ್ತು ಕಾರ್ಖಾನೆ ಯಂತ್ರೋಪಕರಣಗಳ ಮಾರುಕಟ್ಟೆಗಳನ್ನು ಅನ್ವೇಷಿಸುವಂತೆ ದೊಡ್ಡ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು. “ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವವನ್ನು ಹೆಚ್ಚಿಸಲು ನಾವು ಈ ವಲಯದಲ್ಲಿ ಕೆಲಸ ಮಾಡಬೇಕಾಗಿದೆ,” ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.
ರೈತರು, ಸಣ್ಣ ಉದ್ಯಮಿಗಳು, ಕೈಗಾರಿಕೆಗಳು, ಸಂಪತ್ತು ಸೃಷ್ಟಿಕರ್ತರು ಮತ್ತು ತೆರಿಗೆದಾರರನ್ನು ಗೌರವಿಸುವ ಮೂಲಕ ರಾಷ್ಟ್ರವು ಪ್ರಗತಿ ಹೊಂದುತ್ತದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, 2014ರಲ್ಲಿ ಶೇಕಡಾ 30ರಷ್ಟಿದ್ದ ಮೂಲ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 22ಕ್ಕೆ ಇಳಿಸಿರುವುದು, ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು 12 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿರುವುದು, ರಿಟರ್ನ್ಸ್ ಮತ್ತು ಮರುಪಾವತಿಗಳನ್ನು ಸರಳೀಕರಣಗೊಳಿಸಿರುವುದು ಮತ್ತು ಬೇಡಿಕೆಯನ್ನು ಉತ್ತೇಜಿಸಲು ಹಲವಾರು ಸರಕುಗಳ ಮೇಲಿನ ಜಿಎಸ್ಟಿ ದರಗಳನ್ನು ಕಡಿಮೆ ಮಾಡಿರುವುದು ಸೇರಿದಂತೆ ಉದ್ಯಮ-ಸ್ನೇಹಿ ಮತ್ತು ತೆರಿಗೆದಾರ-ಸ್ನೇಹಿ ಸುಧಾರಣೆಗಳನ್ನು ವಿವರಿಸಿದರು. “ಇದರ ನೇರ ಪ್ರಯೋಜನವು ನಮ್ಮ ಉದ್ಯಮ ಮತ್ತು ವ್ಯಾಪಾರ ಸಂಸ್ಥೆಗಳಿಗೆ ಹೋಗುತ್ತಿದೆ,” ಎಂದು ಪ್ರಧಾನಿ ಮೋದಿ ಗಮನಿಸಿದರು.
140 ಕೋಟಿ ಜನಸಂಖ್ಯೆಯ ದೇಶೀಯ ಮಾರುಕಟ್ಟೆಯ ಜೊತೆಗೆ ಸಾಗರೋತ್ತರ ಅವಕಾಶಗಳನ್ನು ಸೆರೆಹಿಡಿಯಲು ಭಾರತದ ಇತ್ತೀಚಿನ ವ್ಯಾಪಾರ ಒಪ್ಪಂದಗಳು ಮತ್ತು ‘ರಿಫಾರ್ಮ್ ಎಕ್ಸ್ಪ್ರೆಸ್’ ವೇಗವನ್ನು ಬಳಸಿಕೊಳ್ಳುವಂತೆ ಉದ್ಯಮವನ್ನು ಪ್ರೋತ್ಸಾಹಿಸಿದ ಪ್ರಧಾನಮಂತ್ರಿಯವರು, ಸಲಹೆಗಳಿಗಾಗಿ ಸರ್ಕಾರದ ಬಾಗಿಲುಗಳು ತೆರೆದಿವೆ ಎಂದರು. ಇದೇ ವೇಳೆ, ಜಾಗತಿಕ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು, ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ಮತ್ತು ವಿತರಣಾ ಜಾಲಗಳನ್ನು ನಿರ್ಮಿಸಲು ಹೂಡಿಕೆ ಮಾಡುವಂತೆ ವ್ಯವಹಾರಗಳಿಗೆ ಕರೆ ನೀಡಿದ ಅವರು, ಎಲ್ಲಾ ಭಾಗವಹಿಸುವವರಿಗೆ ಶುಭಾಶಯಗಳನ್ನು ಕೋರುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. “ನಮ್ಮ ದೇಶೀಯ ಮಾರುಕಟ್ಟೆಯು ನಮ್ಮ ಆರಾಮದಾಯಕ ವಲಯವಾಗಬಾರದು, ಏಕೆಂದರೆ ಅದು ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪರ್ಧಿಸಲು ನಮಗೆ ಆತ್ಮವಿಶ್ವಾಸವನ್ನು ನೀಡಬೇಕು,” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
*****
India's growth story is creating new opportunities. Our industries must be ready to seize them. Speaking at FICCI's centenary convention. @ficci_india https://t.co/tJCw2NnpjW
— Narendra Modi (@narendramodi) November 19, 2026
FICCI अपनी स्थापना के 100 वर्ष पूरे कर रहा है। एक संस्था का सौ वर्षों तक लगातार सजग और सक्रिय रहना, बदलते समय के साथ खुद को आगे बढ़ाना और देश की आर्थिक यात्रा में अपनी भूमिका निभाते रहना, ये बहुत बड़ी उपलब्धि है: PM @narendramodi
— PMO India (@PMOIndia) November 19, 2026
FICCI ने अपने 100 वर्षों में देश की Industry को बहुत कुछ Achieve करते हुए देखा है। अब समय ये तय करने का है कि Indian Industry अगले 20 वर्षों में क्या Achieve कर सकती है: PM @narendramodi
— PMO India (@PMOIndia) November 19, 2026
FICCI ने अपने 100 वर्षों में देश की Industry को बहुत कुछ Achieve करते हुए देखा है। अब समय ये तय करने का है कि Indian Industry अगले 20 वर्षों में क्या Achieve कर सकती है: PM @narendramodi
— PMO India (@PMOIndia) November 19, 2026
अगले 20 वर्षों के अपने हर long-term investment decision में India First को अपना आधार बनाइए। इससे देश आत्मनिर्भर होगा और आपके business की growth के लिए भी नए अवसर खुलेंगे: PM @narendramodi at @ficci_india centenary convention
— PMO India (@PMOIndia) November 19, 2026
हमारा Domestic Market हमारा Comfort Zone नहीं होना चाहिए। हमें इससे वो आत्मविश्वास मिलना चाहिए जिससे हम Global Markets में Compete कर सकें। इसलिए दुनिया के अलग-अलग Regions के Customers की जरूरतों को समझने में Invest करिए: PM @narendramodi at @ficci_india centenary convention
— PMO India (@PMOIndia) November 19, 2026