Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಪ್ರಿಲ್ 21 ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಏಪ್ರಿಲ್ 21ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11:30ರ ಸುಮಾರಿಗೆ ಪ್ರಧಾನಮಂತ್ರಿ ಬಲೋತ್ರಾದ ಪಚ್ಪದ್ರಾದಲ್ಲಿ ಭಾರತದ ಮೊದಲ ಗ್ರೀನ್‌ಫೀಲ್ಡ್ ಇಂಟಿಗ್ರೇಟೆಡ್ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವರು.

ಈ ಮಹತ್ವಾಕಾಂಕ್ಷೆಯ ಯೋಜನೆಯು ಭಾರತದ ಇಂಧನ ಮತ್ತು ಪೆಟ್ರೋಕೆಮಿಕಲ್ ವಲಯದಲ್ಲಿ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಮತ್ತು ರಾಜಸ್ಥಾನ ಸರ್ಕಾರದ ಜಂಟಿ ಉದ್ಯಮವಾಗಿ ಅಭಿವೃದ್ಧಿಪಡಿಸಲಾದ ವಾರ್ಷಿಕ 9 ಮಿಲಿಯನ್ ಟನ್ (ಎಂಎಂಟಿಪಿಎ) ಗ್ರೀನ್‌ಫೀಲ್ಡ್ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಅನ್ನು 79,450 ಕೋಟಿ ರೂಪಾಯಿಗೂ ಅಧಿಕ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದೆ.

ಈ ಅತ್ಯಾಧುನಿಕ ಸಂಕೀರ್ಣವು 2.4 ಎಂಎಂಟಿಪಿಎ ಪೆಟ್ರೋಕೆಮಿಕಲ್ ಸಾಮರ್ಥ್ಯದೊಂದಿಗೆ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ಉತ್ಪಾದನೆಯನ್ನು ಸಂಯೋಜಿಸುತ್ತದೆ. ಸಂಸ್ಕರಣಾಗಾರವು 17.0 ರ ಹೆಚ್ಚಿನ ನೆಲ್ಸನ್ ಸಂಕೀರ್ಣತೆ ಸೂಚ್ಯಂಕವನ್ನು ಮತ್ತು ಶೇ.26 ಕ್ಕಿಂತ ಅಧಿಕ ಪೆಟ್ರೋಕೆಮಿಕಲ್ ಇಳುವರಿಯನ್ನು ಹೊಂದಿದ್ದು, ಇದು ದಕ್ಷತೆ ಮತ್ತು ಸುಸ್ಥಿರತೆಗಾಗಿ ಜಾಗತಿಕ ಮಾನದಂಡಗಳೊಂದಿಗೆ ಹೊಂದಿಕೆಯಾಗುತ್ತದೆ.

ಈ ಯೋಜನೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವಲ್ಲಿ ಪೆಟ್ರೋಕೆಮಿಕಲ್ ಸ್ವಾವಲಂಬನೆಯನ್ನು ವೃದ್ಧಿಸುವಲ್ಲಿ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಇದು ಈ ಪ್ರದೇಶದಲ್ಲಿ ಪೆಟ್ರೋಕೆಮಿಕಲ್ ಮತ್ತು ಪ್ಲಾಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಆಧಾರ ಉದ್ಯಮವಾಗಿ ಕಾರ್ಯನಿರ್ವಹಿಸುವ ಜತೆಗೆ ತಳಮಟ್ಟದ ಕೈಗಾರಿಕೆಗಳು ಮತ್ತು ಸಹಾಯಕ ವಲಯಗಳನ್ನು ಉತ್ತೇಜಿಸುತ್ತದೆ. ಹೆಚ್ಚುವರಿಯಾಗಿ ಸಂಸ್ಕರಣಾಗಾರವು ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಜ್ಜಾಗಿದ್ದು, ಇದು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಲಿದೆ.

 

*****