ಕೇಂದ್ರ ಕ್ರೀಡಾ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯ ಜಿ, ಕ್ರೀಡಾ ರಾಜ್ಯ ಖಾತೆ ಸಚಿವರಾದ ಶ್ರೀಮತಿ ರಕ್ಷಾ ಖಡ್ಸೆ ಜಿ, ಇಲ್ಲಿ ನೆರೆದಿರುವ ಯುವ ಕ್ರೀಡಾಪಟುಗಳೆ, ತರಬೇತುದಾರರೆ, ಇತರೆ ಗಣ್ಯರೆ, ಹಾಗೂ ಇಲ್ಲಿ ಉಪಸ್ಥಿತರಿರುವ ಎಲ್ಲರಿಗೂ ನಮಸ್ಕಾರ.
ನಿಮ್ಮೆಲ್ಲರ ನಡುವೆ ಇರುವುದು ನನಗೆ ಅಪಾರ ಶಕ್ತಿ ತುಂಬಿದೆ. ಪದಕ ವಿಜೇತರೆಲ್ಲರೂ ಒಂದೆಡೆ ಸೇರಿರುವುದು ಮತ್ತು ಅವರೆಲ್ಲರನ್ನೂ ಒಟ್ಟಿಗೆ ಭೇಟಿಯಾಗುವುದು ಸಾಮಾನ್ಯ ಸಂಗತಿಯಲ್ಲ, ಇದೊಂದು ಅತ್ಯಂತ ಸಂತೋಷದಾಯಕ ಅನುಭವ. ಯುವ ಕ್ರೀಡಾಪಟುಗಳಾದ ನಿಮ್ಮ ಉತ್ಸಾಹವು ಗೆಲುವಾಗಿ ಪರಿವರ್ತನೆಗೊಂಡಾಗ, ಅದು ಕೇವಲ ಪದಕಗಳನ್ನಷ್ಟೇ ಅಲ್ಲ, ಮುಖದಲ್ಲಿ ಒಂದು ವಿಶೇಷವಾದ ಹೊಳಪು ತರುತ್ತದೆ ಎಂಬುದಕ್ಕೆ ನಿದರ್ಶನವಾಗಿದ್ದೀರಿ. ಸಹಜವಾಗಿಯೇ, ಇದು ಇಡೀ ರಾಷ್ಟ್ರವನ್ನೇ ಬೆಳಗುವಂತೆ ಮಾಡುತ್ತದೆ.
ಸ್ನೇಹಿತರೆ,
ನೀವು 140 ಕೋಟಿ ದೇಶವಾಸಿಗಳಿಗೆ ಹೆಮ್ಮೆಪಡುವ ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ಏಕೆಂದರೆ, ‘ತ್ರಿವರ್ಣ ಧ್ವಜ’ದ (ತಿರಂಗಾ) ಗೌರವ ಹೆಚ್ಚಿಸುವುದೇ ಅತ್ಯಂತ ದೊಡ್ಡ ಸಾಧನೆಯಾಗಿದೆ. ನೀವು ತಿರಂಗಾದ ಘನತೆ ಹೆಚ್ಚಿಸಿದ್ದೀರಿ, ಅದರ ಗೌರವ ಉನ್ನತೀಕರಿಸಿದ್ದೀರಿ. ಆದ್ದರಿಂದ, ಈ ಯಶಸ್ಸು ಕೇವಲ ನಿಮ್ಮದಷ್ಟೇ ಅಲ್ಲ, ಇದು ಈ ದೇಶದ ಕೋಟ್ಯಂತರ ನಾಗರಿಕರ ಯಶಸ್ಸಾಗಿದೆ. ಭಾರತದ ಸಮಸ್ತ ಜನರ ಪರವಾಗಿ, ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದೇ ರೀತಿ, ನಿಮ್ಮ ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ನಿಮ್ಮ ಕುಟುಂಬದವರಿಗೂ ನಾನು ಮನಃಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ.
ಸ್ನೇಹಿತರೆ,
ಇಂದು ನಮ್ಮ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನವೂ ಹೌದು. ಅವರ ಜೀವನ ಮತ್ತು ದೂರದೃಷ್ಟಿ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ. ನಾನು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಈ ಏಷ್ಯಾ ಕ್ರೀಡಾಕೂಟವು ನಮಗೆ ಹಲವು ರೀತಿಯಲ್ಲಿ ಸ್ಮರಣೀಯವಾಗಿದೆ. ನಮ್ಮ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳೆರಡೂ ಇಂದು ಇಲ್ಲಿವೆ. ಈ ಬಾರಿ ಎರಡೂ ತಂಡಗಳು ಚಿನ್ನದ ಪದಕಗಳನ್ನು ಗೆದ್ದಿವೆ. ವಿಶೇಷವಾಗಿ ನಮ್ಮ ಮಹಿಳಾ ಹಾಕಿ ತಂಡವು, 44 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆದು ಚಿನ್ನದ ಪದಕಗಳನ್ನು ಗೆದ್ದು ತಂದಿದೆ. ಕ್ರಿಕೆಟ್ನಲ್ಲಿ, ನಮ್ಮ ಎರಡೂ ತಂಡಗಳು ಸತತ 2ನೇ ಬಾರಿಗೆ ಪದಕಗಳನ್ನು ಗೆಲ್ಲುವ ಮೂಲಕ ತಮ್ಮದೇ ಆದ ದಾಖಲೆ ಪುನರಾವರ್ತಿಸಿವೆ. ಕಬಡ್ಡಿಯಲ್ಲೂ, ನಮ್ಮ ಪುರುಷರ ಮತ್ತು ಮಹಿಳೆಯರ ತಂಡಗಳು ಚಿನ್ನದ ಪದಕಗಳನ್ನು ಗೆದ್ದಿವೆ. ಅದೇ ರೀತಿ, ಬಿಲ್ಲುಗಾರಿಕೆಯಲ್ಲಿ 5 ಚಿನ್ನದ ಪದಕಗಳು ಬಂದಿವೆ; ‘ಐದು’ (ಪಂಚ) ಸಂಖ್ಯೆ ಇದ್ದಲ್ಲಿ ದೈವಿಕ ಕೃಪೆ ಇರುತ್ತದೆ ಎನ್ನಲಾಗುತ್ತದೆ. ಶೂಟಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ, ಬಾಕ್ಸಿಂಗ್ ಮತ್ತು ಕುಸ್ತಿಯಲ್ಲಿ ದೊಡ್ಡ ಯಶಸ್ಸು, ಅಥ್ಲೆಟಿಕ್ಸ್ನಲ್ಲಿ ಹೊಸ ದಾಖಲೆಗಳು, 28 ವರ್ಷಗಳ ನಂತರ ವೇಟ್ಲಿಫ್ಟಿಂಗ್ನಲ್ಲಿ ಪದಕ, 1982ರ ನಂತರ ಮೊದಲ ಬಾರಿಗೆ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾರತದ ಯಶಸ್ಸು – ಇವೆಲ್ಲವೂ ನಿಜಕ್ಕೂ ಅತ್ಯಂತ ಸಂತೋಷದ ವಿಷಯಗಳಾಗಿವೆ.
ಸ್ನೇಹಿತರೆ,
ನಾನು ವಿಶೇಷವಾಗಿ ನಮ್ಮ ಹೆಣ್ಣು ಮಕ್ಕಳ ಸಾಧನೆ ಶ್ಲಾಘಿಸಲು ಬಯಸುತ್ತೇನೆ. ಭಾರತ ಗೆದ್ದ ಒಟ್ಟು 85 ಪದಕಗಳ ಪೈಕಿ, 38 ಪದಕಗಳನ್ನು ನಮ್ಮ ಮಹಿಳಾ ಕ್ರೀಡಾಪಟುಗಳು ಗೆದ್ದಿದ್ದಾರೆ. ಇದರಲ್ಲಿ 11 ಚಿನ್ನದ ಪದಕಗಳೂ ಸೇರಿವೆ. ಈ ಪದಕಗಳು ಕೇವಲ ಸಂಖ್ಯೆಗಳಲ್ಲ, ಇವು ‘ನವ ಭಾರತ’ದ ಪ್ರಬಲ ಚಿತ್ರಣವನ್ನು ಪ್ರತಿನಿಧಿಸುತ್ತವೆ. ಏಷ್ಯಾ ಕ್ರೀಡಾಕೂಟದ ಇತಿಹಾಸದಲ್ಲಿ ಹಿಂದೆಂದೂ ಪದಕ ಗೆದ್ದಿರದ ಕ್ರೀಡೆಗಳಲ್ಲಿಯೂ ಇಂದು ಭಾರತ ಪದಕಗಳನ್ನು ಗೆಲ್ಲುತ್ತಿದೆ. ಮಿಕ್ಸೆಡ್ ಮಾರ್ಷಲ್ ಆರ್ಟ್ಸ್, ಸಾಫ್ಟ್ ಟೆನ್ನಿಸ್ ಮತ್ತು ಕೆಲವು ನೌಕಾಯಾನ ಸ್ಪರ್ಧೆಗಳಲ್ಲಿ ನಮ್ಮ ಕ್ರೀಡಾಪಟುಗಳು ಮೊದಲ ಬಾರಿಗೆ ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಸ್ನೇಹಿತರೆ,
ಈಗ ನಾವು ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಎತ್ತರವನ್ನು ತಲುಪಬೇಕಿದೆ. ನಾವು ಸಾಧಿಸಲೇಬೇಕು, ಅಲ್ಲವೇ? ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ, ಅಲ್ಲವೇ? ನಿಮ್ಮ ಮುಂದೆ ನಾನು ಕೆಲವು ಸಂಕಲ್ಪಗಳನ್ನು ಇಡಲು ಬಯಸುತ್ತೇನೆ. ನೀವೆಲ್ಲರೂ ಪೂರ್ಣ ಉತ್ಸಾಹದಿಂದ “ನಾವು ಇದನ್ನು ಸಾಧಿಸುತ್ತೇವೆ!” ಎಂದು ಉತ್ತರಿಸಬೇಕು. ಹಾಗಾದರೆ, ನನ್ನ ನಂತರ ಹೇಳಿ:
ಪ್ರತಿಯೊಂದು ಕ್ರೀಡಾಂಗಣದಲ್ಲೂ ತ್ರಿವರ್ಣ ಧ್ವಜದ ಗೌರವ ಎತ್ತಿಹಿಡಿಯುವುದು – ನಾವು ಇದನ್ನು ಸಾಧಿಸುತ್ತೇವೆ! ಪ್ರತಿಯೊಂದು ಅಖಾಡದಲ್ಲೂ ತ್ರಿವರ್ಣ ಧ್ವಜದ ಗೌರವ ಎತ್ತಿಹಿಡಿಯುತ್ತೇವೆ, ನಾವು ಇದನ್ನು ಸಾಧಿಸುತ್ತೇವೆ!
ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಗುರುತು ನೀಡುತ್ತೇವೆ, ನಾವು ಇದನ್ನು ಸಾಧಿಸುತ್ತೇವೆ!
ಪ್ರತಿಯೊಂದು ಕ್ರೀಡೆಯಲ್ಲೂ ಹೊಸ ಚಾಂಪಿಯನ್ಗಳನ್ನು ಸೃಷ್ಟಿಸುತ್ತೇವೆ, ನಾವು ಇದನ್ನು ಸಾಧಿಸುತ್ತೇವೆ!
ನಮ್ಮ ಹೆಸರಿನಲ್ಲಿ ಇನ್ನಷ್ಟು ದಾಖಲೆಗಳನ್ನು ಬರೆಯುತ್ತೇವೆ, ನಾವು ಇದನ್ನು ಸಾಧಿಸುತ್ತೇವೆ!
ಸ್ನೇಹಿತರೆ,
ನಾವು ಇಂದು ಸೇರಿರುವ ಈ ಕ್ರೀಡಾಂಗಣಕ್ಕೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಇಡಲಾಗಿದೆ. ಹಾಕಿ ಕ್ರೀಡೆಯ ಬಗ್ಗೆ ಅವರಿಗೆ ಸಮರ್ಪಣಾ ಭಾವ ಎಷ್ಟಿತ್ತೆಂದರೆ, ಅವರು ರಾತ್ರಿಯ ವೇಳೆಯಲ್ಲೂ ಗಂಟೆಗಟ್ಟಲೆ ಅಭ್ಯಾಸ ಮಾಡುತ್ತಿದ್ದರು. ಅವರ ಕಠಿಣ ಪರಿಶ್ರಮವು ನಮಗೆ ಪದೇಪದೆ ನೆನಪಿಸುವುದೇನೆಂದರೆ, ಸಂಕಲ್ಪಗಳು ಮತ್ತು ಕನಸುಗಳು ಒಂದೇ ದಿನದಲ್ಲಿ ಈಡೇರುವುದಿಲ್ಲ. ಅವುಗಳಿಗೆ ವರ್ಷಗಳ ತಾಳ್ಮೆ ಮತ್ತು ನಿರಂತರ ಪ್ರಯತ್ನದ ಅಗತ್ಯವಿರುತ್ತದೆ.
ಸ್ನೇಹಿತರೆ,
ಕಳೆದ 12 ವರ್ಷಗಳಲ್ಲಿ ಭಾರತವು ತನ್ನ ಕ್ರೀಡಾಪಟುಗಳು ಮತ್ತು ಕ್ರೀಡಾ ಪರಿಸರ ವ್ಯವಸ್ಥೆಯ ಸುಧಾರಣೆಗಾಗಿ ಅಪಾರ ತಾಳ್ಮೆ ಹಾಗೂ ಸಮರ್ಪಣಾ ಭಾವದಿಂದ ಕೆಲಸ ಮಾಡಿದೆ. ಒಂದು ಕಾಲವಿತ್ತು, ಆಗ ಭಾರತವು ಪ್ರಮುಖ ಪಂದ್ಯಾವಳಿಗಳಲ್ಲಿ ಬೆರಳೆಣಿಕೆಯಷ್ಟು ಪದಕಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗುತ್ತಿತ್ತು. ಅನೇಕ ಕ್ರೀಡೆಗಳ ಅಸ್ತಿತ್ವದ ಬಗ್ಗೆಯೇ ನಮ್ಮ ದೇಶದ ಜನರಿಗೆ ತಿಳಿದಿರಲಿಲ್ಲ. ಒಲಿಂಪಿಕ್ಸ್ನಂತಹ ಬೃಹತ್ ಕ್ರೀಡಾಕೂಟಗಳು ನಡೆಯುತ್ತಿದ್ದರೂ, ಅರ್ಧಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾರತದ ಯಾವುದೇ ಪ್ರತಿನಿಧಿಗಳು ಇರುತ್ತಿರಲಿಲ್ಲ. ಒಮ್ಮೆ ಯೋಚಿಸಿ ನೋಡಿ, ನಾವು ಸ್ಪರ್ಧೆಯಲ್ಲೇ ಭಾಗವಹಿಸದಿದ್ದರೆ, ಇನ್ನು ಪದಕಗಳು ಎಲ್ಲಿಂದ ಬರುತ್ತವೆ?
ಸ್ನೇಹಿತರೆ,
ಈ ನಿರಾಶಾವಾದಿ ಮನಸ್ಥಿತಿ ತೊಡೆದುಹಾಕಲು ನಾವು ಸಂಕಲ್ಪ ಮಾಡಿದೆವು. ಇದರ ಫಲವಾಗಿ, ಇಂದು ಜಾಗತಿಕ ವೇದಿಕೆಗಳಲ್ಲಿ ನಮ್ಮ ಪ್ರಾತಿನಿಧ್ಯವು ಹೆಚ್ಚಾಗುತ್ತಿದೆ.
ಸ್ನೇಹಿತರೆ,
ಈ ಬದಲಾವಣೆ ಹೇಗೆ ಸಾಧ್ಯವಾಯಿತು? ನೀವು ಯಶಸ್ಸನ್ನು ಸಾಧಿಸಲು ಯಾವ ಮನೋಭಾವ ಸಹಾಯ ಮಾಡಿದೆಯೋ, ಅದೇ ಮನೋಭಾವದಿಂದ ಇದು ಸಾಧ್ಯವಾಗಿದೆ. ಕಳೆದ 10-12 ವರ್ಷಗಳಲ್ಲಿ ದೇಶವು ಸಮರ್ಪಣಾ ಭಾವ ಮತ್ತು ಪ್ರಾಮಾಣಿಕತೆಯಿಂದ ನಿರಂತರವಾಗಿ ಶ್ರಮಿಸಿದೆ. ದೀರ್ಘಕಾಲೀನ ದೃಷ್ಟಿಕೋನವನ್ನು ಇಟ್ಟುಕೊಂಡು, ಕ್ರೀಡೆಗಾಗಿ ಪಾರದರ್ಶಕ ಮತ್ತು ಆಧುನಿಕ ಪರಿಸರ ವ್ಯವಸ್ಥೆ ರೂಪಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ನಾವು ‘ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್'(TOPS) ಅನ್ನು ಆರಂಭಿಸಿದೆವು. ಹಾಗೆಯೇ ‘ಖೇಲೋ ಇಂಡಿಯಾ’ ಯೋಜನೆ ಜಾರಿಗೆ ತಂದೆವು. ಕಾಲಕ್ರಮೇಣ, ಇದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಾಯಿತು. ಮನ್ಸುಖ್ ಭಾಯಿ ಅವರು ಮೊದಲೇ ಹೇಳಿದಂತೆ, ‘ಖೇಲೋ ಇಂಡಿಯಾ’ ವಿಸ್ತರಿಸಲು ಮತ್ತು ಕ್ರೀಡಾ ಒಕ್ಕೂಟಗಳನ್ನು ಬಲಪಡಿಸಲು 36,000 ಕೋಟಿ ರೂಪಾಯಿಗೂ ಹೆಚ್ಚು ಹಣ ಮೀಸಲಿಡಲಾಗಿದೆ.
ಸ್ನೇಹಿತರೆ,
ಇಂದು ದೇಶಾದ್ಯಂತ 1 ಸಾವಿರಕ್ಕೂ ಹೆಚ್ಚು ‘ಖೇಲೋ ಇಂಡಿಯಾ’ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕ್ರೀಡಾಂಗಣಗಳು, ಮಿನಿ-ಕ್ರೀಡಾಂಗಣಗಳು ಮತ್ತು ಬಹುಪಯೋಗಿ ಕ್ರೀಡಾ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಅಥ್ಲೆಟಿಕ್ಸ್ ಟ್ರ್ಯಾಕ್ಗಳು, ಫುಟ್ಬಾಲ್ ಮೈದಾನಗಳು, ಹಾಕಿ ಮೈದಾನಗಳು, ಈಜುಕೊಳಗಳು ಮತ್ತು ಇಂತಹ ಸಾವಿರಾರು ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಯಡಿ ಕ್ರೀಡಾಪಟುಗಳಿಗೆ ನೇರ ನೆರವು ಸಹ ನೀಡಲಾಗುತ್ತಿದೆ. ಅವರಿಗೆ ದೈನಂದಿನ ಖರ್ಚು ಭತ್ಯೆ ನೀಡಲಾಗುತ್ತಿದೆ. ‘ಟಿಒಪಿಎಸ್’ (TOPS) ಯೋಜನೆಯಡಿ, ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂಪಾಯಿ ನೀಡಲಾಗುತ್ತದೆ. ಯಾವುದೇ ಕ್ರೀಡೆಗೆ ವಿದೇಶದಲ್ಲಿ ತರಬೇತಿಯ ಅಗತ್ಯವಿದ್ದರೆ, ಸರ್ಕಾರವು ಅದಕ್ಕೆ ಅನುಕೂಲ ಕಲ್ಪಿಸಿಕೊಡುವ ಜತೆಗೆ ಆರ್ಥಿಕ ನೆರವನ್ನೂ ನೀಡುತ್ತಿದೆ.
ಸ್ನೇಹಿತರೆ,
ಯುವಕರಿಗೆ ಆಡಲು ಮತ್ತು ಸ್ಪರ್ಧಿಸಲು ಗರಿಷ್ಠ ಅವಕಾಶಗಳು ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಚಳಿಗಾಲದ ಕ್ರೀಡೆಗಳಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ‘ಸಂಸದರ ಕ್ರೀಡಾ ಸ್ಪರ್ಧೆ’ಗಳನ್ನು ಆರಂಭಿಸಲಾಗಿದೆ. ದೇಶವು ಹೊಸ ಕ್ರೀಡಾ ನೀತಿ ಮತ್ತು ಹೊಸ ‘ಖೇಲೋ ಭಾರತ್’ ನೀತಿ ರೂಪಿಸಿದೆ. ನಮ್ಮ ಪ್ಯಾರಾ-ಒಲಿಂಪಿಕ್ ಕ್ರೀಡಾಪಟುಗಳು ಕೂಡ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಅವರಿಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದೇ ಕಾರಣಕ್ಕೆ, ಇಂದಿನ ಪ್ರತಿಯೊಬ್ಬ ಕ್ರೀಡಾಪಟುವೂ ತಮ್ಮ ಕ್ರೀಡಾ ಪಯಣದಲ್ಲಿ ದೇಶವು ತಮ್ಮ ಬೆಂಬಲಕ್ಕೆ ನಿಂತಿದೆ ಎಂಬ ವಿಶ್ವಾಸ ಹೊಂದಿದ್ದಾರೆ. ಒಬ್ಬ ಕ್ರೀಡಾಪಟುವಿಗೆ ಅಂತಹ ಬೆಂಬಲ ಸಿಕ್ಕಾಗ, ಅವರು ದೇಶಕ್ಕಾಗಿ ಏನು ಸಾಧಿಸಬಲ್ಲರು ಎಂಬುದಕ್ಕೆ ನೀವೆಲ್ಲರೂ ಅತ್ಯುತ್ತಮ ಉದಾಹರಣೆಗಳಾಗಿದ್ದೀರಿ.
ಸ್ನೇಹಿತರೆ,
ಈ ಬಾರಿ ಏಷ್ಯಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ‘ಟೀಮ್ ಇಂಡಿಯಾ’ದ ಅನೇಕ ಆಟಗಾರರು ಕೇವಲ 15ರಿಂದ 17 ವರ್ಷ ವಯಸ್ಸಿನವರಾಗಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ದೇಶದ ಕೀರ್ತಿ ಹೆಚ್ಚಿಸಿದರು. ಅವರು ದೇಶದ ಜನರ ಮನ ಗೆದ್ದರು. ಯಶಸ್ಸಿಗೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ. ವಾಸ್ತವವಾಗಿ, ಕ್ರೀಡೆಯಲ್ಲಿ ಚಿಕ್ಕ ವಯಸ್ಸಿನಲ್ಲೇ ಆರಂಭಿಸುವುದು ಒಂದು ಹೆಚ್ಚುವರಿ ಅನುಕೂಲವಾಗಿದೆ. ಅದಕ್ಕಾಗಿಯೇ, ಬಾಲ್ಯದಿಂದಲೇ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ. 5ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಮತ್ತು ಅವರಿಗೆ ಸೂಕ್ತ ತರಬೇತಿ ನೀಡಲು ನಾವು ವಿಶೇಷ ಗಮನ ಹರಿಸುತ್ತಿದ್ದೇವೆ. ಮುಂದಿನ ವರ್ಷಗಳಲ್ಲಿ, ‘ಖೇಲೋ ಇಂಡಿಯಾ’ ಮತ್ತು ‘ಎಮರ್ಜಿಂಗ್ ಖೇಲೋ ಇಂಡಿಯಾ’ ಕಾರ್ಯಕ್ರಮಗಳ ಮೂಲಕ ಸಾವಿರಾರು ಹೊಸ ಕ್ರೀಡಾಪಟುಗಳಿಗೆ ಅವಕಾಶಗಳು ಸಿಗಲಿವೆ. ಭವಿಷ್ಯದ ಕ್ರೀಡಾಕೂಟಗಳಿಗಾಗಿ ನಾವು ನಮ್ಮ ಸಿದ್ಧತೆಗಳನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕು. 2028ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಡೆಯಲಿದೆ. 2030ರಲ್ಲಿ ಭಾರತವು ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜಿಸಲಿದೆ. ಹಾಗೆಯೇ, 2036ರ ಒಲಿಂಪಿಕ್ಸ್ ಆಯೋಜಿಸುವುದು ಕೂಡ ಭಾರತದ ಆಕಾಂಕ್ಷೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾನು ಕೆಂಪು ಕೋಟೆಯಿಂದ ‘ಪ್ರತಿಭಾ ಅನ್ವೇಷಣೆ’ ಅಭಿಯಾನ ಆರಂಭಿಸುವ ಬಗ್ಗೆ ಮಾತನಾಡಿದ್ದೆ. ಇಂದು ದೇಶದಾದ್ಯಂತ ಹಳ್ಳಿಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಪೋಷಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವೇ ಕ್ರೀಡಾಪಟುಗಳು ಭಾರತಕ್ಕೆ ಪದಕಗಳನ್ನು ತಂದುಕೊಡಲಿದ್ದಾರೆ.
ಸ್ನೇಹಿತರೆ,
ನಮ್ಮ ಕನಸುಗಳು ದೊಡ್ಡವು. ನಮ್ಮ ಸಂಕಲ್ಪಗಳೂ ದೊಡ್ಡವು. ಇಂದು, ಅವುಗಳನ್ನು ಸಾಧಿಸುವ ಆತ್ಮವಿಶ್ವಾಸ ಭಾರತಕ್ಕಿದೆ. ಪ್ರತಿಯೊಬ್ಬ ಭಾರತೀಯನಿಗೂ ಆ ಆತ್ಮವಿಶ್ವಾಸವಿದೆ. ಆದ್ದರಿಂದ, ಸಂಪೂರ್ಣ ದೃಢವಿಶ್ವಾಸದಿಂದ ನಾನು ಹೇಳುತ್ತೇನೆ:
ಭಾರತದಲ್ಲಿ ಪ್ರಮುಖ ಕ್ರೀಡಾಕೂಟಗಳು – ನಾವು ಇದನ್ನು ಸಾಧಿಸುತ್ತೇವೆ!
ಭಾರತದಲ್ಲಿ ಪ್ರಮುಖ ಕ್ರೀಡಾಕೂಟಗಳು – ನಾವು ಇದನ್ನು ಸಾಧಿಸುತ್ತೇವೆ!
ಭಾರತದಲ್ಲಿ ಪ್ರಮುಖ ಕ್ರೀಡಾಕೂಟಗಳು – ನಾವು ಇದನ್ನು ಸಾಧಿಸುತ್ತೇವೆ!
ಭಾರತವನ್ನು ಅಗ್ರಗಣ್ಯ ಕ್ರೀಡಾ ರಾಷ್ಟ್ರಗಳಲ್ಲಿ ಒಂದನ್ನಾಗಿಸುವುದು – ನಾವು ಇದನ್ನು ಸಾಧಿಸುತ್ತೇವೆ!
ಭಾರತವನ್ನು ಜಾಗತಿಕ ಕ್ರೀಡಾ ಕೇಂದ್ರವನ್ನಾಗಿಸುವುದು – ನಾವು ಇದನ್ನು ಸಾಧಿಸುತ್ತೇವೆ!
ಭಾರತದಲ್ಲಿ ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸುವುದು – ನಾವು ಇದನ್ನು ಸಾಧಿಸುತ್ತೇವೆ!
ಭಾರತದ ಪ್ರತಿಯೊಂದು ಮೂಲೆಯಿಂದಲೂ ಒಬ್ಬ ಚಾಂಪಿಯನ್ ರೂಪಿಸುವುದು – ನಾವು ಇದನ್ನು ಸಾಧಿಸುತ್ತೇವೆ!
ಸ್ನೇಹಿತರೆ,
ಏಷ್ಯಾ ಕ್ರೀಡಾಕೂಟದಲ್ಲಿ ನಾವು ಸಾಧಿಸಿದ ಯಶಸ್ಸು, ಭಾರತದ ಬದಲಾಗುತ್ತಿರುವ ಮನಸ್ಥಿತಿಗೆ ಒಂದು ಉದಾಹರಣೆಯಾಗಿದೆ. ಇಂದಿನ ಯುವಜನರು ಪ್ರತಿಯೊಂದು ಶಿಖರವನ್ನೂ ಏರಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಭಾರತದ ಯುವಜನರ ದೃಢನಿಶ್ಚಯಕ್ಕಿಂತ ಎತ್ತರವಾದ ಶಿಖರ ಬೇರೊಂದಿಲ್ಲ. ನಮ್ಮ ಯುವಶಕ್ತಿಯ ಸಾಮರ್ಥ್ಯಕ್ಕೆ ಮೀರಿದ ಗುರಿ ಯಾವುದೂ ಇಲ್ಲ. ನಮ್ಮ ಮುಂದೆ ಅಪಾರ ಸಾಧ್ಯತೆಗಳ ಆಕಾಶವೇ ತೆರೆದುಕೊಂಡಿದೆ. ಭಾರತದ ಯುವಜನರೇ ತಮ್ಮ ಗಮ್ಯಸ್ಥಾನವನ್ನು ತಾವೇ ನಿರ್ಧರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ, ಅಲ್ಪಾವಧಿಯಲ್ಲೇ ಭಾರತವು ವಿಶ್ವದ 3ನೇ ಅತಿದೊಡ್ಡ ‘ಸ್ಟಾರ್ಟಪ್'(ನವೋದ್ಯಮ) ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ನಮ್ಮ ಯುವಜನರು ಬಾಹ್ಯಾಕಾಶ ವಲಯದಲ್ಲಿ ಕಂಪನಿಗಳನ್ನು ಸ್ಥಾಪಿಸುತ್ತಿದ್ದಾರೆ, ಉಪಗ್ರಹ ತಂತ್ರಜ್ಞಾನದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಕ್ಷಣಾ ವಲಯದಲ್ಲಿಯೂ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಈ ಪರಿವರ್ತನೆಯು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ದೂರದ ಪ್ರದೇಶಗಳ ಪ್ರತಿಭಾವಂತ ವ್ಯಕ್ತಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಅವಕಾಶಗಳು ಸಿಗುತ್ತಿರುವಂತೆಯೇ, ಸ್ಟಾರ್ಟಪ್ಗಳು, ಸಂಶೋಧನೆ ಮತ್ತು ಇತರೆ ಉದ್ಯಮಗಳಲ್ಲಿಯೂ ಸಣ್ಣ ನಗರಗಳು ಹಾಗೂ ಹಳ್ಳಿಗಳ ಯುವಜನರು ಹೊಸ ಆಲೋಚನೆಗಳೊಂದಿಗೆ ಮುಂದೆ ಬರುತ್ತಿದ್ದಾರೆ. ಈ ಆತ್ಮವಿಶ್ವಾಸದ ಹಿಂದೆ ಒಂದು ಆಳವಾದ ನಂಬಿಕೆಯಿದೆ. ಕಳೆದ ದಶಕದಲ್ಲಿ ದೇಶವು ರೂಪಿಸಿರುವ ವ್ಯವಸ್ಥೆಗಳು, ಯುವಜನರಿಗೆ ‘ದೊಡ್ಡ ಕನಸು ಕಾಣಬಹುದು’ ಎಂಬ ಭರವಸೆ ನೀಡಿವೆ. ಆ ಕನಸುಗಳನ್ನು ನನಸಾಗಿಸಲು ಇಡೀ ರಾಷ್ಟ್ರದ ಶಕ್ತಿಯೇ ತಮ್ಮ ಬೆಂಬಲಕ್ಕಿದೆ ಎಂಬುದು ಅವರಿಗೆ ತಿಳಿದಿದೆ.
ಸ್ನೇಹಿತರೆ,
ನಮ್ಮ ಪ್ರಯತ್ನಗಳ ಫಲ ಕೇವಲ ಕ್ರೀಡಾಂಗಣದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿಲ್ಲ. ಕ್ರೀಡಾ ತರಬೇತಿ, ಫಿಸಿಯೋಥೆರಪಿ, ಕ್ರೀಡಾ ನಿರ್ವಹಣೆ ಮತ್ತು ಕ್ರೀಡಾ ಪ್ರಸಾರ ಮುಂತಾದ ಕ್ಷೇತ್ರಗಳಲ್ಲಿ ಯುವಜನರಿಗಾಗಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಕ್ರೀಡೆಯು ಅಭಿವೃದ್ಧಿ ಹೊಂದಿದಂತೆ, ಅದಕ್ಕೆ ಸಂಬಂಧಿಸಿದ ಅನೇಕ ವೃತ್ತಿಗಳೂ ಪ್ರಗತಿ ಕಾಣುತ್ತಿವೆ. ಇದು ಯುವಜನರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಹೊಸ ದಾರಿಗಳನ್ನು ತೆರೆದುಕೊಟ್ಟಿದೆ.
ಸ್ನೇಹಿತರೆ,
ಇಂದು ನಾವು ಯಾವುದೇ ಕ್ಷೇತ್ರದಲ್ಲಿರಲಿ, ನಮ್ಮ ಯಶಸ್ಸಿಗಾಗಿ ನಾವು ಕಠಿಣ ಪರಿಶ್ರಮ ಪಡಲೇಬೇಕು. ಅದೇ ಸಮಯದಲ್ಲಿ, ಮುಂದಿನ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿಯನ್ನೂ ನಾವು ಹೊರಬೇಕಾಗುತ್ತದೆ. ಈಗ ನಿಮ್ಮ ಬಳಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಅನುಭವವಿದೆ. ಆದ್ದರಿಂದ, ನಿಮ್ಮಂತೆಯೇ ಮುಂದೆ ಬರಲು ಕನಸು ಕಾಣುತ್ತಿರುವ ಮಕ್ಕಳಿಗೆ ಸ್ವಲ್ಪ ಸಮಯ ಮೀಸಲಿಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಸ್ವಂತ ಪರಿಶ್ರಮದ ಬೆವರು ಸುರಿಸಿ ಅವರ ಕನಸುಗಳಿಗೆ ನೀರೆರೆಯಿರಿ, ಯಶಸ್ಸು ಸಿಗುವುದು ಹೀಗೆಯೇ. ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ, ನಿಮ್ಮ ಹಳ್ಳಿ ಅಥವಾ ಪಟ್ಟಣದ ಮಕ್ಕಳನ್ನು ಭೇಟಿಯಾಗಿ. ವಿವಿಧ ಶಾಲೆಗಳಿಗೆ ಭೇಟಿ ನೀಡಿ. ನೀವು ಮೊದಲು ಆಡಲು ಆರಂಭಿಸಿದ ಆಟದ ಮೈದಾನಗಳಿಗೆ ಖಂಡಿತವಾಗಿಯೂ ಭೇಟಿ ನೀಡಿ. ನಿಮ್ಮ ಅನುಭವಗಳು ಆ ಮಕ್ಕಳಿಗೆ ಅತ್ಯಂತ ಮೌಲ್ಯಯುತವಾಗಬಲ್ಲವು. ಬಹುಶಃ ನಿಮ್ಮಿಂದ ಬರುವ ಒಂದೇ ಒಂದು ಮಾತು, ಕ್ರೀಡಾ ಕ್ಷೇತ್ರದಲ್ಲಿ ಮುನ್ನಡೆಯಲು ಮಗುವಿಗೆ ಧೈರ್ಯ ತುಂಬಬಹುದು.
ಸ್ನೇಹಿತರೆ,
ದೇಶದ ಯುವ ಜನರು ಕ್ರೀಡೆಯಲ್ಲಿ ಮಾತ್ರವಲ್ಲದೆ, ಇತರ ವಿಷಯಗಳಲ್ಲೂ ನಿಮ್ಮಿಂದ ಸ್ಫೂರ್ತಿ ಪಡೆಯುತ್ತಾರೆ. ಏಕೆಂದರೆ, ಕ್ರೀಡೆಯ ಪ್ರಭಾವ ಕೇವಲ ಆಟದ ಮೈದಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಕ್ರೀಡೆಯು ನಮಗೆ ಜೀವನದಲ್ಲಿ ಶಿಸ್ತು ಕಲಿಸುತ್ತದೆ. ಬಿದ್ದಾಗ ಮತ್ತೆ ಹೇಗೆ ಎದ್ದು ನಿಲ್ಲಬೇಕೆಂದು, ಸೋತ ನಂತರ ಹೇಗೆ ಗೆಲ್ಲಬೇಕೆಂದು ಅದು ನಮಗೆ ಕಲಿಸುತ್ತದೆ. ಒಂದು ಗುರಿಯತ್ತ ದೀರ್ಘಕಾಲದವರೆಗೆ ಹೇಗೆ ಬದ್ಧರಾಗಿರಬೇಕು, ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ನಮ್ಮನ್ನು ನಾವು ಹೇಗೆ ಹೊಂದಿಸಿಕೊಳ್ಳಬೇಕು ಎಂಬುದನ್ನು ಕ್ರೀಡೆ ನಮಗೆ ಕಲಿಸುತ್ತದೆ. ಇಂತಹ ಪಾಠಗಳು ನಮ್ಮ ದೈನಂದಿನ ಜೀವನದ ಭಾಗವಾಗುತ್ತವೆ. ಈ ಕ್ರೀಡಾ ಮನೋಭಾವವು ನಮ್ಮ ಜೀವನದುದ್ದಕ್ಕೂ ನೆರವಾಗುತ್ತದೆ.
ಸ್ನೇಹಿತರೆ,
ನಾನು ಯಾವಾಗಲೂ ಹೇಳುವಂತೆ, ಯಾರು ಆಡುತ್ತಾರೋ ಅವರು ಅರಳುತ್ತಾರೆ. ಹಾಗಾಗಿ ಆಟವಾಡುತ್ತಿರಿ, ಅರಳುತ್ತಿರಿ. ಮುಂಬರುವ ಸ್ಪರ್ಧೆಗಳಿಗೆ, ನಿಮ್ಮ ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಆತ್ಮವಿಶ್ವಾಸವೇ ‘ನವ ಭಾರತ’ದ ಅತಿ ದೊಡ್ಡ ಶಕ್ತಿಗಳು. ಈ ಆತ್ಮವಿಶ್ವಾಸದೊಂದಿಗೆ, ನಾವು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು.
ಬನ್ನಿ, ಮತ್ತೊಮ್ಮೆ ಪೂರ್ಣ ಹುರುಪಿನೊಂದಿಗೆ, ನನ್ನೊಂದಿಗೆ ಸೇರಿ ಹೀಗೆ ಹೇಳಿ:
ವಿಕಸಿತ ಭಾರತ, ನಾವು ಇದನ್ನು ಸಾಧಿಸುತ್ತೇವೆ!
2047ರ ಹೊತ್ತಿಗೆ ವಿಕಸಿತ ಭಾರತ, ನಾವು ಇದನ್ನು ಸಾಧಿಸುತ್ತೇವೆ!
ನಾವು ಇದನ್ನು ಸಾಧಿಸುತ್ತೇವೆ!
ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದು, ನಾವು ಇದನ್ನು ಸಾಧಿಸುತ್ತೇವೆ!
ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದು, ನಾವು ಇದನ್ನು ಸಾಧಿಸುತ್ತೇವೆ!
ಸ್ವಾವಲಂಬಿ ಭಾರತ, ನಾವು ಇದನ್ನು ಸಾಧಿಸುತ್ತೇವೆ!
ಸ್ವಾವಲಂಬಿ ಭಾರತ, ನಾವು ಇದನ್ನು ಸಾಧಿಸುತ್ತೇವೆ!
ಜಾಗತಿಕ ಉತ್ಪಾದನಾ ಕೇಂದ್ರ(ಮ್ಯಾನುಫ್ಯಾಕ್ಚರಿಂಗ್ ಹಬ್), ನಾವು ಇದನ್ನು ಸಾಧಿಸುತ್ತೇವೆ!
ಜಾಗತಿಕ ಉತ್ಪಾದನಾ ಕೇಂದ್ರ, ನಾವು ಇದನ್ನು ಸಾಧಿಸುತ್ತೇವೆ!
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ನಾಯಕತ್ವ, ನಾವು ಇದನ್ನು ಸಾಧಿಸುತ್ತೇವೆ!
ಬಾಹ್ಯಾಕಾಶದತ್ತ ಹೆಜ್ಜೆಗಳು, ನಾವು ಇದನ್ನು ಸಾಧಿಸುತ್ತೇವೆ!
ಒಲಿಂಪಿಕ್ಸ್ ಆತಿಥ್ಯ, ನಾವು ಇದನ್ನು ಸಾಧಿಸುತ್ತೇವೆ!
ಹೊಸ ಕ್ರೀಡೆಗಳಲ್ಲಿ ಪದಕಗಳು, ನಾವು ಇದನ್ನು ಸಾಧಿಸುತ್ತೇವೆ!
ಹೌದು, ನಾವು ಇದನ್ನು ಸಾಧಿಸುತ್ತೇವೆ!
ನಿಮಗೆಲ್ಲರಿಗೂ ಅನೇಕ ಅಭಿನಂದನೆಗಳು.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Our Asian Games champions have made the Tricolour fly high! Their achievements show what passion, perseverance and belief can achieve. https://t.co/m3gOPecQCo
— Narendra Modi (@narendramodi) October 15, 2026
You have made the Tricolour fly high and enhanced its honour and pride: PM @narendramodi to the Asian Games team https://t.co/pJazGfotrq
— PMO India (@PMOIndia) October 15, 2026
We will do it! https://t.co/5g0lLzSVsT
— PMO India (@PMOIndia) October 15, 2026
India is all set to become a global sporting powerhouse. https://t.co/x7T46sg91E
— PMO India (@PMOIndia) October 15, 2026