ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ‘ದಿ ಆರ್ಟ್ ಆಫ್ ಲಿವಿಂಗ್’ನ 45ನೇ ವರ್ಷಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದ ಮಂಗಳಕರತೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮಕ್ಕಳ ವೈದಿಕ ಮಂತ್ರಘೋಷಗಳ ಸ್ವಾಗತ, ಭಗವಾನ್ ಗಣೇಶನ ದರ್ಶನ, ಶ್ರೀ ಶ್ರೀ ರವಿಶಂಕರ್ ಜೀ ಅವರ 70ನೇ ವರ್ಷ ಮತ್ತು ಆರ್ಟ್ ಆಫ್ ಲಿವಿಂಗ್ನ 45ನೇ ವರ್ಷಾಚರಣೆಯ ಸಂಭ್ರಮದಿಂದ ಸಮೃದ್ಧವಾಗಿರುವ ಈ ಬೆಳಗಿನ ವಿಶಿಷ್ಟತೆಯನ್ನು ಬಣ್ಣಿಸಿದರು. “ಇವು ನನ್ನ ನೆನಪಿನಲ್ಲಿ ಸದಾ ಉಳಿಯುವ ಕ್ಷಣಗಳು,” ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟರು.
ದೈವಿಕ ಮತ್ತು ಭವ್ಯವಾದ ಧ್ಯಾನ ಮಂದಿರದ ಉದ್ಘಾಟನೆಯನ್ನು ನೆರವೇರಿಸಿದ ಪ್ರಧಾನಮಂತ್ರಿಯವರು, ಇಂತಹ ಸಮರ್ಪಿತ ಸಂಸ್ಥೆಗಳ ಮಹತ್ವವನ್ನು ಪ್ರತಿಪಾದಿಸಿದರು ಮತ್ತು ಆರ್ಟ್ ಆಫ್ ಲಿವಿಂಗ್ ಕುಟುಂಬದ ಈ ನೂತನ ಮಂದಿರಕ್ಕೆ ಶುಭ ಹಾರೈಸಿದರು. “ಸಂಕಲ್ಪವು ಸ್ಪಷ್ಟವಾಗಿದ್ದಾಗ ಮತ್ತು ಕೆಲಸವು ಸೇವಾ ಮನೋಭಾವದಿಂದ ನಡೆದಾಗ, ಪ್ರತಿಯೊಂದು ಪ್ರಯತ್ನವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ,” ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದರು.
ಬೆಂಗಳೂರಿನ ವಿಶಿಷ್ಟ ವಾತಾವರಣವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಈ ನಗರವು ಸಾಫ್ಟ್ವೇರ್ ಮತ್ತು ಸೇವೆಗಳಿಗಾಗಿ ಮಾತ್ರವಲ್ಲದೆ ಭಾರತದ ಸಾಂಸ್ಕೃತಿಕ ಕುರುಹು ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಉನ್ನತೀಕರಿಸುವಲ್ಲಿ ಜಾಗತಿಕವಾಗಿ ಹೇಗೆ ಗುರುತಿಸಲ್ಪಟ್ಟಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು. “ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಗೆ ಈ ನಗರವು ಹೊಸ ಮೆರುಗನ್ನು ನೀಡಿದೆ,” ಎಂದು ಶ್ರೀ ಮೋದಿ ತಿಳಿಸಿದರು.
ಭಾರತದ ಮೌಲ್ಯಗಳ ಅವಿಭಾಜ್ಯ ಅಂಗವಾಗಿರುವ ಯೋಗ, ಧ್ಯಾನ ಮತ್ತು ಪ್ರಾಣಾಯಾಮದ ಆಳವಾದ ಬೇರುಗಳನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಭಾರತದ ಆಧ್ಯಾತ್ಮಿಕ ಪರಂಪರೆಯ ಜಾಗತಿಕ ಪ್ರಭಾವ ಮತ್ತು ಹಲವಾರು ಸಂಸ್ಥೆಗಳನ್ನು ಪ್ರೇರೇಪಿಸುವಲ್ಲಿ ಅದರ ಪಾತ್ರವನ್ನು ಉಲ್ಲೇಖಿಸಿದರು. “ಇಂದು ಪ್ರಪಂಚದಾದ್ಯಂತದ ಜನರು ಭಾರತದ ಆಧ್ಯಾತ್ಮಿಕ ಮೌಲ್ಯಗಳಿಂದ ಪ್ರಭಾವಿತರಾಗಿದ್ದಾರೆ ಮತ್ತು ಈ ಪ್ರಾಚೀನ ಮೌಲ್ಯಗಳಿಂದ ಭಾರತದ ಅನೇಕ ಸಂಸ್ಥೆಗಳು ಪ್ರೇರಣೆ ಪಡೆಯುತ್ತಿವೆ,” ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಈ ಪ್ರಾಚೀನ ಆಧ್ಯಾತ್ಮಿಕ ಮೌಲ್ಯಗಳಿಂದ ಪ್ರೇರಿತರಾಗಿ, ಶ್ರೀ ಶ್ರೀ ರವಿಶಂಕರ್ ಜೀ ಅವರು 45 ವರ್ಷಗಳ ಹಿಂದೆ ಆರ್ಟ್ ಆಫ್ ಲಿವಿಂಗ್ನ ಬೀಜವನ್ನು ಹೇಗೆ ಬಿತ್ತಿದರು ಎಂಬುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅದು ಈಗ ಬೃಹತ್ ಆಲದ ಮರವಾಗಿ ಬೆಳೆದೆ ನಿಂತಿದೆ ಎಂದರು. “ಇಂದು ಅದು ನಮ್ಮ ಮುಂದೆ ಬೃಹತ್ ಆಲದ ಮರವಾಗಿ ನಿಂತಿದೆ, ಅದರ ಸಾವಿರಾರು ಕೊಂಬೆಗಳು ಪ್ರಪಂಚದಾದ್ಯಂತ ಅಸಂಖ್ಯಾತ ಜನರ ಜೀವನವನ್ನು ಸ್ಪರ್ಶಿಸುತ್ತಿವೆ,” ಎಂದು ಶ್ರೀ ಮೋದಿ ಅವರು ಉಲ್ಲೇಖಿಸಿದರು.
ಭಾಷೆಗಳು, ಸಂಪ್ರದಾಯಗಳು, ಆಚಾರ-ವಿಚಾರಗಳು ಮತ್ತು ಆರಾಧನಾ ಪದ್ಧತಿಗಳನ್ನು ಒಳಗೊಂಡಿರುವ ಭಾರತದ ವೈವಿಧ್ಯತೆಯ ಶ್ರೀಮಂತಿಕೆಯನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಈ ಸುಂದರ ವೈವಿಧ್ಯತೆಗಳನ್ನು ಒಂದುಗೂಡಿಸುವುದು ಯಾವುದು ಎಂಬ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟರು. “ನನಗಾಗಿ ಅಲ್ಲ, ಇತರರಿಗಾಗಿ ಬದುಕುವುದು ಎಂಬ ತತ್ವವೇ ಇದಕ್ಕೆ ಉತ್ತರ,” ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದರು.
ಪುರಾಣಗಳ ಪ್ರಾಚೀನ ಜ್ಞಾನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪರರಿಗೆ ಸೇವೆ ಮಾಡುವುದು ಪುಣ್ಯ ಮತ್ತು ನೋವುಂಟು ಮಾಡುವುದು ಪಾಪ ಎಂದು ಒತ್ತಿಹೇಳಿದರು. ಸೇವೆ ಎಂಬುದು ಭಾರತೀಯ ಸಮಾಜದ ಸಹಜ ಗುಣ ಎಂದು ಅವರು ಆಶಯ ವ್ಯಕ್ತಪಡಿಸಿದರು. “ಸೇವೆಯೇ ಪರಮೋ ಧರ್ಮ ಎಂಬುದು ನಮ್ಮ ಸಮಾಜದ ನೈಸರ್ಗಿಕ ಗುಣವಾಗಿದೆ,” ಎಂದು ಶ್ರೀ ಮೋದಿ ಪುನರುಚ್ಚರಿಸಿದರು.
ಭಾರತದ ಅನೇಕ ಆಧ್ಯಾತ್ಮಿಕ ಚಳವಳಿಗಳು ಕೊನೆಗೆ ಮಾನವೀಯತೆಯ ಸೇವೆಯ ಮೂಲಕವೇ ಅಭಿವ್ಯಕ್ತಗೊಂಡಿವೆ ಎಂಬುದನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಆರ್ಟ್ ಆಫ್ ಲಿವಿಂಗ್ನ ಪ್ರತಿಯೊಂದು ಪ್ರಯತ್ನದಲ್ಲೂ ಇದೇ ಮನೋಭಾವ ಪ್ರತಿಫಲಿಸುತ್ತಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿದರು. ಆರ್ಟ್ ಆಫ್ ಲಿವಿಂಗ್ನ ಪ್ರಯಾಣದೊಂದಿಗೆ ಗುರುತಿಸಿಕೊಂಡಿರುವ ಪ್ರತಿಯೊಬ್ಬ ಸ್ವಯಂಸೇವಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ ಅವರು, ಅವರ ಸಮರ್ಪಣೆ ಮತ್ತು ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಯಾವುದೇ ಮಿಷನ್ನ ಯಶಸ್ಸಿಗೆ ಸಾಮಾಜಿಕ ಸಹಭಾಗಿತ್ವ ಅತ್ಯಗತ್ಯ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಪ್ರಮುಖ ಗುರಿಗಳನ್ನು ಸಾಧಿಸಲು ಸಾಮಾಜಿಕ ಶಕ್ತಿಯನ್ನು ಜಾಗೃತಗೊಳಿಸುವುದು ಮೂಲಭೂತ ಅಗತ್ಯವಾಗಿದೆ ಎಂದರು. ರಾಜಕೀಯ ವ್ಯವಸ್ಥೆಗಳು ಮತ್ತು ಸರ್ಕಾರಗಳಿಗಿಂತ ಸಮಾಜವು ಹೆಚ್ಚಿನ ಶಕ್ತಿಯನ್ನು ಹೊಂದಿದೆ ಎಂಬುದು ತಮ್ಮ ದೃಢ ನಂಬಿಕೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಸಮುದಾಯಗಳು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಯಾವುದೇ ಆಡಳಿತವು ನಿಜವಾಗಿಯೂ ಯಶಸ್ವಿಯಾಗಲು ಸಾಧ್ಯ ಎಂದು ಅವರು ತಿಳಿಸಿದರು. ಇದಕ್ಕೆ ಸ್ವಚ್ಛ ಭಾರತ ಮಿಷನ್ ಅನ್ನು ಅತ್ಯುತ್ತಮ ಉದಾಹರಣೆಯಾಗಿ ನೀಡಿದ ಅವರು, ಸರ್ಕಾರಿ ಉಪಕ್ರಮವಾಗಿ ಪ್ರಾರಂಭವಾದ ಕಾರ್ಯಕ್ರಮವು ಇಂದು ಜನರ ಜೀವನದ ಸಹಜ ಭಾಗವಾಗಿ ಮಾರ್ಪಟ್ಟಿದೆ ಮತ್ತು ಸಮಾಜದ ಸ್ವಂತ ವೇಗದಲ್ಲಿ ಮುನ್ನಡೆಯುತ್ತಿದೆ ಎಂದು ಗಮನಿಸಿದರು. ಸಮಾಜದ ಶಕ್ತಿಯು ಸೇರಿದಾಗ ಯಾವುದೇ ಅಭಿಯಾನ ಯಶಸ್ವಿಯಾಗುತ್ತದೆ ಎಂದು ಒತ್ತಿಹೇಳಿದ ಶ್ರೀ ಮೋದಿ ಅವರು, “ಪ್ರತಿಯೊಂದು ಪ್ರಮುಖ ಕಾರ್ಯಕ್ಕೂ ಸಮಾಜದ ಶಕ್ತಿಯನ್ನು ಜಾಗೃತಗೊಳಿಸುವುದು ಬಹಳ ಅವಶ್ಯಕ,” ಎಂದರು.
ಸಕ್ರಿಯ ಸಾಮಾಜಿಕ ತೊಡಗಿಸಿಕೊಳ್ಳುವಿಕೆಯು ರಾಷ್ಟ್ರದ ದೊಡ್ಡ ಸವಾಲುಗಳಿಗೆ ಸಾಮೂಹಿಕ ಪರಿಹಾರಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಆರ್ಟ್ ಆಫ್ ಲಿವಿಂಗ್ ತನ್ನ ಉಪಕ್ರಮಗಳಲ್ಲಿ ಸಮಾಜದ ಶಕ್ತಿಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿರುವುದನ್ನು ಶ್ಲಾಘಿಸಿದರು. ವೃಕ್ಷಾರೋಪಣ ಅಭಿಯಾನಗಳು, ಗ್ರಾಮೀಣ ಸ್ಮಾರ್ಟ್ ವಿಲೇಜ್ ಕೇಂದ್ರಗಳು, ಮಹಿಳಾ ಮತ್ತು ಬುಡಕಟ್ಟು ಸಬಲೀಕರಣ ಉಪಕ್ರಮಗಳು ಅಥವಾ ಕೈದಿಗಳಿಗಾಗಿ ಹಮ್ಮಿಕೊಳ್ಳುವ ಮಾನಸಿಕ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಸಾಮಾಜಿಕ ದೃಷ್ಟಿಕೋನವನ್ನು ಅವರು ಕೊಂಡಾಡಿದರು. “ಈ ಪ್ರಯತ್ನಗಳು ದೇಶ ಮತ್ತು ಸಮಾಜದ ಅಭಿವೃದ್ಧಿಯ ಪಯಣಕ್ಕೆ ಗಮನಾರ್ಹ ಕೊಡುಗೆ ನೀಡುತ್ತವೆ,” ಎಂದು ಶ್ರೀ ಮೋದಿ ತಿಳಿಸಿದರು.
ಯುವ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿರುವ ಉಪಸ್ಥಿತರಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ವೈಜ್ಞಾನಿಕ ಪ್ರಗತಿ ಮತ್ತು ನಾವೀನ್ಯತೆಗಳಿಂದ ಇಂದು ಜಾಗತಿಕವಾಗಿ ನಡೆಯುತ್ತಿರುವ ಕ್ಷಿಪ್ರ ಬದಲಾವಣೆಗಳ ಹಿನ್ನೆಲೆಯಲ್ಲಿ ಇದರ ಕಡೆ ಗಮನ ಹರಿಸುವುದು ಬಹಳ ಅಗತ್ಯವಾಗಿದೆ ಎಂದು ಹೇಳಿದರು. ಭಾರತವು ಈ ಬದಲಾವಣೆಗಳಲ್ಲಿ ಕೇವಲ ಭಾಗವಹಿಸುತ್ತಿಲ್ಲ, ಬದಲಾಗಿ ಡಿಜಿಟಲ್ ಪಾವತಿಗಳು, ಮೂಲಸೌಕರ್ಯ ವಿಸ್ತರಣೆ ಮತ್ತು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ ಸೇರಿದಂತೆ ಹಲವಾರು ವಲಯಗಳಲ್ಲಿ ನಾಯಕತ್ವ ವಹಿಸುತ್ತಿದೆ ಎಂಬುದನ್ನು ಅವರು ಗಮನಿಸಿದರು. ಭಾರತದ ಯುವಕರು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಅಂತಹ ಎಲ್ಲಾ ರಾಷ್ಟ್ರೀಯ ಯಶಸ್ಸಿಗೆ ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ಅವರು ಎತ್ತಿ ತೋರಿಸಿದರು. “ಭಾರತವು ಈ ಬದಲಾವಣೆಯಲ್ಲಿ ಕೇವಲ ಪಾಲ್ಗೊಳ್ಳುತ್ತಿಲ್ಲ, ಅನೇಕ ಕ್ಷೇತ್ರಗಳಲ್ಲಿ ನಾಯಕತ್ವವನ್ನೂ ವಹಿಸುತ್ತಿದೆ,” ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಈ ಸಾಧನೆಗಳ ಗೌರವವನ್ನು ಭಾರತದ ಯುವಜನತೆಗೆ ನೀಡಿದ ಪ್ರಧಾನಮಂತ್ರಿಯವರು, ಆಧುನಿಕ ಯುಗದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಯುವಕರಿಗೆ ಸಹಾಯ ಮಾಡುವಲ್ಲಿ ಆರ್ಟ್ ಆಫ್ ಲಿವಿಂಗ್ನ ಪಾತ್ರವನ್ನು ಒಪ್ಪಿಕೊಂಡರು.
ದೂರದಲ್ಲಿ ನೆಲೆಸಿರುವ ವ್ಯಕ್ತಿಗಳನ್ನು ತಕ್ಷಣವೇ ಸಂಪರ್ಕಿಸುವ ತಂತ್ರಜ್ಞಾನದ ಶಕ್ತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಇದರೊಂದಿಗೆ ಜನರು ತಮ್ಮನ್ನು ತಾವು ಅರಿತುಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವುದೂ ಅಷ್ಟೇ ಅಗತ್ಯ ಎಂದು ಅವರು ಒತ್ತಿಹೇಳಿದರು. ಭಾರತದ ವಿಕಸಿತ ಭವಿಷ್ಯವು ಮಾನಸಿಕವಾಗಿ ಶಾಂತವಾಗಿರುವ, ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರುವ ಮತ್ತು ಸಮಾಜದ ಅಗತ್ಯಗಳ ಬಗ್ಗೆ ಸಂವೇದನಾಶೀಲರಾಗಿರುವ ಯುವಕರನ್ನು ರೂಪಿಸುವುದರ ಮೇಲೆ ಅವಲಂಬಿತವಾಗಿದೆ ಎಂದು ಅವರು ಪ್ರತಿಪಾದಿಸಿದರು. ಆಧ್ಯಾತ್ಮಿಕ ಯೋಗಕ್ಷೇಮ, ಮಾನಸಿಕ ಆರೋಗ್ಯ, ಯೋಗ ಮತ್ತು ಧ್ಯಾನದ ಮೇಲೆ ಕೆಲಸ ಮಾಡುತ್ತಿರುವ ಸಂಸ್ಥೆಗಳು ಜನರ ನಡುವೆ ಸಂಪರ್ಕ, ಬಾಂಧವ್ಯ ಮತ್ತು ಸಾಮೂಹಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಹಾಗೂ ಸಾಂಸ್ಕೃತಿಕ ತಿಳುವಳಿಕೆಗೆ ಅವಕಾಶಗಳನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಅವರು ಒತ್ತಿಹೇಳಿದರು. “ಇಂತಹ ಮಾನಸಿಕವಾಗಿ ಶಾಂತ, ಸಾಮಾಜಿಕವಾಗಿ ಜವಾಬ್ದಾರಿಯುತ ಮತ್ತು ಸಮಾಜದ ಬಗ್ಗೆ ಸಂವೇದನಾಶೀಲರಾಗಿರುವ ಯುವಕರಿಂದಲೇ ವಿಕಸಿತ ಭಾರತ ನಿರ್ಮಾಣವಾಗಲಿದೆ,” ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದರು.
ನೂತನವಾಗಿ ಉದ್ಘಾಟನೆಗೊಂಡ ಧ್ಯಾನ ಮಂದಿರವು ಸಾವಿರಾರು ಜನರಿಗೆ ಶಾಂತಿ ಮತ್ತು ಸಾಂತ್ವನದ ತಾಣವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಸಮಾಜವು ಈಗಾಗಲೇ ರಾಷ್ಟ್ರದ ಬಗ್ಗೆ ತನ್ನ ಕರ್ತವ್ಯಗಳನ್ನು ಶ್ಲಾಘನೀಯವಾಗಿ ನಿರ್ವಹಿಸುತ್ತಿದೆ ಎಂದು ಒಪ್ಪಿಕೊಂಡರು. ಇದರೊಂದಿಗೆ ಸಮಗ್ರ ರಾಷ್ಟ್ರೀಯ ಅಭಿವೃದ್ಧಿಗಾಗಿ ಕೆಲವು ಪ್ರಮುಖ ಮನವಿಗಳನ್ನು ಅವರ ಮುಂದಿಡಲು ಬಯಸುವುದಾಗಿ ತಿಳಿಸಿದರು.
ಭಾರತದ ಸಮಗ್ರ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಆರ್ಟ್ ಆಫ್ ಲಿವಿಂಗ್ನಂತಹ ಸಂಸ್ಥೆಗಳು ವಹಿಸಬೇಕಾದ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ರೈತರನ್ನು ನೈಸರ್ಗಿಕ ಕೃಷಿ ಪದ್ಧತಿಗಳೊಂದಿಗೆ ಜೋಡಿಸುವತ್ತ ವಿಶೇಷ ಗಮನ ನೀಡುವಂತೆ ಆಗ್ರಹಿಸಿದರು. ಸುಸ್ಥಿರ ಕೃಷಿಯನ್ನು ‘ಆರ್ಟ್ ಆಫ್ ಲಿವಿಂಗ್’ನ (ಜೀವನ ಕಲೆ) ಒಂದು ಅಭಿವ್ಯಕ್ತಿ ಎಂದು ಬಣ್ಣಿಸಿದ ಅವರು, ಭೂಮಾತೆಯನ್ನು ರಾಸಾಯನಿಕಗಳಿಂದ ರಕ್ಷಿಸುವುದು ಆಧ್ಯಾತ್ಮಿಕ ಅಭ್ಯಾಸ ಮತ್ತು ಪರಿಸರ ಸಂರಕ್ಷಣೆ ಎರಡೂ ಆಗಿದೆ ಎಂದು ಅವರು ಒತ್ತಿಹೇಳಿದರು. “ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು ಮತ್ತು ಭೂಮಾತೆಯನ್ನು ರಾಸಾಯನಿಕಗಳಿಂದ ಉಳಿಸುವುದು ಕೂಡ ಒಂದು ಜೀವನ ಕಲೆಯಾಗಿದೆ (Art of Living),” ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು.
“ಏಕ್ ಪೇಡ್ ಮಾ ಕೆ ನಾಮ್” (ತಾಯಿಯ ಹೆಸರಲ್ಲಿ ಒಂದು ಗಿಡ) ಅಭಿಯಾನವನ್ನು ವ್ಯಾಪಕವಾಗಿ ವಿಸ್ತರಿಸಲು ಪ್ರೋತ್ಸಾಹಿಸಿದ ಪ್ರಧಾನಮಂತ್ರಿಯವರು, ಪರಿಸರ ಸಂರಕ್ಷಣೆಯನ್ನು ಉತ್ತಮ ಜೀವನದ ತತ್ವಕ್ಕೆ ನೇರವಾಗಿ ಜೋಡಿಸಿದರು. “ಪರಿಸರವನ್ನು ರಕ್ಷಿಸುವುದು ಸಹ ಜೀವನ ಕಲೆಯಾಗಿದೆ,” ಎಂದು ಪ್ರತಿಪಾದಿಸಿದ ಅವರು, ಈ ಮಿಷನ್ಗೆ ಹೊಸ ಚೈತನ್ಯದೊಂದಿಗೆ ಬದ್ಧರಾಗುವಂತೆ ಕರೆ ನೀಡಿದರು.
“ಪ್ರತಿ ಹನಿ, ಹೆಚ್ಚು ಬೆಳೆ” (Per Drop, More Crop) ಉಪಕ್ರಮದ ಮೂಲಕ ಕೃಷಿ ಸಮುದಾಯಗಳಲ್ಲಿ ಸುಧಾರಿತ ನೀರು ನಿರ್ವಹಣಾ ಪದ್ಧತಿಗಳನ್ನು ಅನುಸರಿಸುವಂತೆ ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಸಮಾಜದ ಸಹಕಾರವು ಈ ಕಾರ್ಯದಲ್ಲಿ ಹೆಚ್ಚಿನ ಫಲಿತಾಂಶಗಳನ್ನು ನೀಡುತ್ತದೆ ಎಂದು ಅವರು ಒತ್ತಿಹೇಳಿದರು. ಮುಂಗಾರು ಋತು ಹತ್ತಿರವಿರುವುದರಿಂದ ಈ ಕಾರ್ಯವು ತುರ್ತು ಅಗತ್ಯವಾಗಿದ್ದು, ವ್ಯಾಪಕ ಜಲ ಸಂರಕ್ಷಣಾ ಜಾಗೃತಿಗೆ ಇದು ಸೂಕ್ತ ಸಮಯ ಎಂದು ಅವರು ತಿಳಿಸಿದರು. “ನೀರಿನ ಪ್ರತಿಯೊಂದು ಹನಿಯನ್ನು ಉಳಿಸುವುದು ಕೂಡ ಜೀವನ ಕಲೆಯಾಗಿದೆ,” ಎಂದು ಶ್ರೀ ಮೋದಿ ಅವರು ಪುನರುಚ್ಚರಿಸಿದರು.
ಜವಾಬ್ದಾರಿಯುತ ಜೀವನದ ಈ ದೃಷ್ಟಿಕೋನವನ್ನು ವಿದ್ಯುತ್ ಉಳಿತಾಯ, ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಸ್ಥಳೀಯವಾಗಿ ಉತ್ಪಾದಿಸಿದ ವಸ್ತುಗಳ (local goods) ಪ್ರೋತ್ಸಾಹದವರೆಗೆ ವಿಸ್ತರಿಸಿದ ಪ್ರಧಾನಮಂತ್ರಿಯವರು, ಈ ಎಲ್ಲಾ ಪದ್ಧತಿಗಳನ್ನು ‘ಆರ್ಟ್ ಆಫ್ ಲಿವಿಂಗ್’ ತತ್ವದೊಂದಿಗೆ ಜೋಡಿಸಿದರು. ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಕಾಯ್ದುಕೊಳ್ಳುತ್ತಾ ಹೆಚ್ಚಿನ ಜವಾಬ್ದಾರಿ ಮತ್ತು ಜಾಗೃತಿಯೊಂದಿಗೆ ಬದುಕುವುದನ್ನು ಉತ್ತೇಜಿಸುವ ಸರ್ಕಾರದ “ಮಿಷನ್ ಲೈಫ್” (Mission LiFE) ಉಪಕ್ರಮವನ್ನು ಅವರು ಎತ್ತಿ ತೋರಿಸಿದರು. “ಪ್ರಕೃತಿಯೊಂದಿಗೆ ಸಮತೋಲನ ಕಾಯ್ದುಕೊಳ್ಳುವ ಈ ಜೀವನಶೈಲಿಯೇ ಜೀವನ ಕಲೆಯಾಗಿದೆ,” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಮುಂದಿನ ದಿನಗಳಲ್ಲಿ ಸಂಸ್ಥೆಯು ಇಂತಹ ನಿರ್ಣಾಯಕ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುವುದರೊಂದಿಗೆ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
*****
Speaking at the 45th anniversary celebrations of The Art of Living in Bengaluru. @ArtofLiving https://t.co/AX7Z2T0gXY
— Narendra Modi (@narendramodi) May 10, 2026
बेंगलुरू का माहौल...यहां का वातावरण...कुछ अलग ही होता है।
— PMO India (@PMOIndia) May 10, 2026
ये शहर software और services के लिए दुनिया भर में जाना जाता है।
लेकिन भारत की सांस्कृतिक पहचान... Spirituality...आध्यात्मिक चेतना को भी इस शहर ने नई ऊंचाई दी है: PM @narendramodi
सेवा परमो धर्मः ...ये हमारे समाज का स्वाभाविक चरित्र है: PM @narendramodi
— PMO India (@PMOIndia) May 10, 2026
हमारा स्वच्छ भारत अभियान... ये सिर्फ सरकारी कार्यक्रम नहीं है बल्कि ये लोगों के जीवन का स्वाभाविक हिस्सा बन चुका है।
— PMO India (@PMOIndia) May 10, 2026
अब ये समाज की शक्ति से ही आगे बढ़ रहा है: PM @narendramodi
विकसित भारत का निर्माण ऐसे युवाओं से ही होगा... जो मानसिक रूप से शांत हों, जो सामाजिक रूप से जिम्मेदार हों, जो समाज के प्रति संवेदनशील हों: PM @narendramodi
— PMO India (@PMOIndia) May 10, 2026