ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಆರ್ಮೇನಿಯಾ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ
01 Nov, 2017
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಆರ್ಮೇನಿಯಾ ನಡುವೆ ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಅದನ್ನು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
ಎರಡೂ ಸರ್ಕಾರಗಳ ಅನುಮೋದನೆಯ ತರುವಾಯ ಎರಡೂ ದೇಶಗಳ ಪರವಾಗಿ ಈ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಈ ಒಪ್ಪಂದದ ಅನುಷ್ಠಾನಕ್ಕೆ ಅಗತ್ಯವಾದ ರಾಷ್ಟ್ರೀಯ ಕಾನೂನು ಅಗತ್ಯಗಳನ್ನು ಪೂರೈಸಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಒಪ್ಪಂದದ ರಾಷ್ಟ್ರಗಳು ಅಧಿಸೂಚನೆ ಹೊರಡಿಸಿದ ಎರಡನೇ ತಿಂಗಳ ಮೊದಲ ದಿನದಿಂದ ಇದು ಜಾರಿಗೆ ಬರಲಿದೆ.
ಕಸ್ಟಮ್ಸ್ ಅಪರಾಧಗಳ ತನಿಖೆ ಮತ್ತು ತಡೆಗೆ ಸೂಕ್ತ ಮಾಹಿತಿಯ ಲಭ್ಯತೆಗೆ ಈ ಒಪ್ಪಂದ ನೆರವಾಗಲಿದೆ. ಇದು ಎರಡೂ ರಾಷ್ಟ್ರಗಳ ನಡುವೆ ವಾಣಿಜ್ಯಕ್ಕೆ ಅವಕಾಶ ನೀಡಿ ಮತ್ತು ಮಾರಾಟ ಮಾಡಲಾದ ಸರಕಿನ ಸಮರ್ಥ ನಿರ್ವಹಣೆಯ ಖಾತ್ರಿ ಒದಗಿಸುವ ನಿರೀಕ್ಷೆ ಇದೆ.
ಹಿನ್ನೆಲೆ :
ಈ ಒಪ್ಪಂದವು ಎರಡೂ ರಾಷ್ಟ್ರಗಳ ಕಸ್ಟಮ್ಸ್ ಪ್ರಾಧಿಕಾರಗಳ ನಡುವೆ ಮಾಹಿತಿ ಮತ್ತು ಬೇಹುಗಾರಿಕೆ ವಿಚಾರಗಳನ್ನು ಹಂಚಿಕೊಳ್ಳಲು ಚೌಕಟ್ಟು ಒದಗಿಸುತ್ತದೆ ಮತ್ತು ಕಸ್ಟಮ್ಸ್ ಕಾನೂನುಗಳ ಸೂಕ್ತ ಬಳಕೆಗೆ ಮತ್ತು ಕಸ್ಟಮ್ಸ್ ಅಪರಾಧಗಳ ನಿಗ್ರಹ ಮತ್ತು ತಡೆಗೆ ಹಾಗೂ ಕಾನೂನಾತ್ಮಕ ವ್ಯಾಪಾರಕ್ಕೆ ಅವಕಾಶ ನೀಡುತ್ತದೆ. ಎರಡೂ ದೇಶಗಳ ಆಡಳಿತಗಳ ಸಮ್ಮತಿಯೊಂದಿಗೆ ಒಪ್ಪಂದದ ಕರಡನ್ನು ಆಖೈರುಗೊಳಿಸಲಾಗಿದೆ. ಈ ಒಪ್ಪಂದದ ಕರಡಲ್ಲಿ, ಭಾರತೀಯ ಕಸ್ಟಮ್ಸ್ ಕಳಕಳಿಗಳನ್ನು ಮತ್ತು ಅಗತ್ಯಗಳನ್ನು, ಅದರಲ್ಲೂ ಘೋಷಿತ ಕಸ್ಟಮ್ಸ್ ಮೌಲ್ಯ ಮತ್ತು ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರವಾದ ಸರಕಿನ ಮೂಲದ ನಿಖರತೆಯ ಪ್ರಮಾಣ ಪತ್ರದ ನಿಖರತೆಯ ಮಾಹಿತಿ ವಿನಿಮಯದ ಕಾಳಜಿ ವಹಿಸಿದೆ.