ಪಿಎಂಇಂಡಿಯಾ
ಕೇಂದ್ರ ಸಚಿವ ಸಂಪುಟ ಸಭೆ ದೆಹಲಿಯಲ್ಲಿಂದು ಹಠಾತ್ ನಿಧನ ಹೊಂದಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ನಿರ್ವಹಣೆ) ಖಾತೆ ಸಹಾಯಕ ಸಚಿವ ಶ್ರೀ. ಅನಿಲ್ ಮಾಧವ ದವೆ ಅವರ ನಿಧನಕ್ಕೆ ಅತೀವ ದುಃಖ ವ್ಯಕ್ತಪಡಿಸಿದೆ. ವಿಶೇಷ ಸಚಿವ ಸಂಪುಟ ಸಭೆಯಲ್ಲಿಂದು ಅಂಗೀಕರಿಸಲಾದ ನಿರ್ಣಯದಲ್ಲಿ, ದವೆ ಅವರ ನಿಧನದಿಂದ ದೇಶ ಹಿರಿಯ ಮತ್ತು ಗೌರವಾನ್ವಿತ ನಾಯಕನನ್ನು ಕಳೆದುಕೊಂಡಿದೆ, ಅವರು ಸಂಸತ್ ಸದಸ್ಯರಾಗಿ ಮತ್ತು ಕೇಂದ್ರ ಸಂಪುಟದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ನಿರ್ವಹಣೆ) ಖಾತೆ ಸಚಿವರಾಗಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಸಂಪುಟ ಉಲ್ಲೇಖಿಸಿದೆ. ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅಗಲಿದ ನಾಯಕನ ಕುಟುಂಬದವರಿಗೆ ಸರ್ಕಾರ ಮತ್ತು ಇಡೀ ದೇಶದ ಪರವಾಗಿ ಹೃದಯಾಂತರಾಳದ ಸಂವೇದನೆ ವ್ಯಕ್ತಪಡಿಸಿದೆ.
ನಿರ್ಣಯದ ಪಠ್ಯ ಈ ಕೆಳಕಂಡಂತಿದೆ:
“ಶ್ರೀ. ಅನಿಲ್ ಮಾಧವ ದವೆ ಅವರು 1956ರ ಜುಲೈ 6ರಂದು ಮಧ್ಯಪ್ರದೇಶದ ಉಜ್ಜಯಿನಿಯ ಬಾರ್ನಗರ್ ನಲ್ಲಿ ಜನಿಸಿದರು. ಇಂದೋರ್ ನ ಗುಜರಾತಿ ಕಾಲೇಜಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ನಿರ್ವಹಣೆ ವಿಷಯದಲ್ಲಿ ಎಂ.ಕಾಂ ಪದವಿ ಪಡೆದರು.
ಶ್ರೀ. ದವೆ ನದಿ ಸಂರಕ್ಷಣಾವಾದಿ, ಪರಿಸರವಾದಿ ಮತ್ತು ಸಮಾಜ ಸೇವಕರಾಗಿದ್ದರು. ಉತ್ತ ಬರಹಗಾರರೂ ಆಗಿದ್ದ ಅವರು ಹಲವು ಪುಸ್ತಕಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಬರೆದಿದ್ದಾರೆ. ಅವರು ಜನ್ ಅಭಿಯಾನ ಪರಿಷತ್ ಸ್ಥಾಪಕರಾಗಿದ್ದರು ಮತ್ತು ಮಾಸಿಕ ಪತ್ರಿಕೆ“ಚರೈವೇತಿ’ ಮತ್ತು ಜೆಎಪಿ – ಜನ್ ಅಭಿಯಾನ ಪರಿಷತ್ ನಿಯತಕಾಲಿಕದ ಸಂಪಾದಕರೂ ಆಗಿದ್ದರು. ಅವರು ತರಬೇತಿ ಪಡೆದಿದ್ದ ಪೈಲೆಟ್ ಕೂಡ ಆಗಿದ್ದರು, ಅವರು ಸೆಸ್ನಾ 173 ವಿಮಾನವನ್ನು ನರ್ಮದಾ ನದಿಯ ಮೇಲೆ ಹಾರಿಸಿದ್ದರು ಮತ್ತು 1312 ಕಿ.ಮೀ. ನದಿಯುದ್ಧಕ್ಕೂ ರಾಪ್ಟ್ ಪ್ರಯಾಣ ಪೂರ್ಣಗೊಳಿಸಿದ್ದರು. ಅಲ್ಲದೆ ಅವರು ಛತ್ರಪತಿ ಶಿವಾಜಿ ಅವರ ಕುರಿತ ನಾಟಕ ‘ಜನತಾ ರಾಜ’ದ ಪ್ರದರ್ಶನದ ವ್ಯವಸ್ಥೆ ಮಾಡಿದ್ದರು, ಇದು ಲಂಡನ್ ನ ವೆಂಬ್ಲೆಯಲ್ಲಿ ಸೇರಿದಂತೆ ಒಟ್ಟು 1000 ಬಾರಿ ಪ್ರದರ್ಶನ ಕಂಡಿದೆ.
ಅವರು 2009ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು ಮತ್ತು ಜಲ ಸಂಪನ್ಮೂಲ ಸಮಿತಿ ಮತ್ತು ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಸಮಾಲೋಚನಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿದ್ದರು. ಅಲ್ಲದೆ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಕುರಿತ ಸಂಸದೀಯ ವೇದಿಕೆಯ ಸದಸ್ಯರೂ ಆಗಿದ್ದರು. 2016ರಲ್ಲಿ ಅವರು ಮತ್ತೆ ರಾಜ್ಯಸಭೆಗೆ ಆಯ್ಕೆಯಾದರು ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ನಿರ್ವಹಣೆ) ಖಾತೆ ಸಚಿವರೂ ಆದರು.
ಶ್ರೀ. ಅನಿಲ್ ಮಾಧವ ದವೆ ಅವರು ನೈಜ ಸಮಾಜ ಸೇವಕರು, ಅವರು ಶೋಷಿತರ ಮತ್ತು ಬಡವರ ಅನುಭೂತಿಗಾಗಿ ಹೆಸರಾಗಿದ್ದರು. ಒಬ್ಬ ಪರಿಸರವಾದಿಯಾಗಿ, ಅವರು ನರ್ಮದಾ ನದಿ ಸಂರಕ್ಷಣೆಗಾಗಿ ಅವಿರತ ಶ್ರಮಿಸಿದ್ದರು. ಅವರು ಮಹಾನ್ ದೇಶಭಕ್ತರಾಗಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಸಭ್ಯತೆಯಿಂದ ಮತ್ತು ಗೌರವದಿಂದ ನಿರ್ವಹಿಸಿದ್ದರು. ಅವರ ನಿಧನದಿಂದ ದೇಶ ಮಧ್ಯಪ್ರದೇಶದ ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ.
****
AKT/NT
PM @narendramodi paid his last respects to late Shri Anil Madhav Dave. pic.twitter.com/pQgVoNTOoz
— PMO India (@PMOIndia) May 18, 2017