ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ 2017ರ ಸರಕುಗಳು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಕಾಯಿದೆಗೆ ಸೂಕ್ತ ತಿದ್ದುಪಡಿ ತರಲು ವಿಶೇಷಾಜ್ಞೆ ಹೊರಡಿಸುವ ಸಂಬಂಧದ ಹಣಕಾಸು ಸಚಿವಾಲಯದ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.
ಈ ಅನುಮೋದನೆ ಈ ಕೆಳಗಿನವುಗಳಿಗೆ ವಿಧಿಸಬಹುದಾದ ಪರಿಹಾರ ಸೆಸ್ ನ ಗರಿಷ್ಠ ದರವನ್ನು ಶೇಕಡ 15ರಿಂದ ಶೇಕಡ 25ಕ್ಕೆ ಹೆಚ್ಚಿಸಲು ಅನುವುಮಾಡಿಕೊಡಲಿದೆ:
ಅ) ಚಾಲಕ ಸೇರಿ 13ಕ್ಕಿಂತ ಕಡಿಮೆ ಜನರನ್ನು ಸಾಗಿಸುವ ಮೋಟಾರು ವಾಹನಗಳು (ಉಪಶೀರ್ಷಿಕೆಗಳಾದ 870210, 870220, 870230 ಅಥವಾ 870290 ಅಡಿಯಲ್ಲಿ ಬರುವ); ಹಾಗೂ
ಆ) ಶೀರ್ಷಿಕೆ 8703ರ ಅಡಿಯಲ್ಲಿ ಬರುವ ಮೋಟಾರು ವಾಹನಗಳು.
2017ರ ಆಗಸ್ಟ್ ನಲ್ಲಿ ಜರುಗಿದ ಜಿ ಎಸ್ ಟಿ ಪರಿಷತ್ ಸಭೆ, ಜಿ ಎಸ್ ಟಿ ಜಾರಿಯಾದ ಬಳಿಕ ಮೋಟಾರು ವಾಹನಗಳ ಮೇಲಿನ ಒಟ್ಟಾರೆ ಕರಭಾರ (ಜಿ ಎಸ್ ಟಿ + ಪರಿಹಾರ ಸೆಸ್) ಜಿ ಎಸ್ ಟಿ ಜಾರಿಯಾಗುವುದಕ್ಕೆ ಮುಂಚಿನ ಅವಧಿಗೆ ಹೋಲಿಸಿದರೆ ಕಡಿಮೆಯಾಗಿರುವುದನ್ನು ಪರಿಗಣಿಸಿ, ಶೀರ್ಷಿಕೆ 8702 ನತ್ತು 8703ರ ವ್ಯಾಪ್ತಿಗೆ ಒಳಪಡುವ ಮೋಟಾರು ವಾಹನಗಳಿಗೆ ವಿಧಿಸಬಹುದಾದ ಪರಿಹಾರ ಸೆಸ್ ನ ಗರಿಷ್ಠ ದರವನ್ನು ಶೇ.15ರಿಂದ ಶೇ.25ಕ್ಕೆ ಹೆಚ್ಚಿಸಲು ಶಿಫಾರಸ್ ಮಾಡಿತ್ತು.
ಮೋಟಾರು ವಾಹನಗಳ ಮೇಲಿನ ಕಾರ್ಯಗತವಾಗುವ ಪರಿಹಾರ ಸೆಸ್ ದರವನ್ನು ಹೆಚ್ಚಿಸುವ ಬಗ್ಗೆ ಜಿ ಎಸ್ ಟಿ ಪರಿಷತ್ ಕಾಲಕ್ರಮದಲ್ಲಿ ಪರಿಶೀಲಿಸಲಿದೆ.