ಪಿಎಂಇಂಡಿಯಾ
ಕಂಪೆನಿಯ ಕಳೆದ 10 ವರ್ಷಗಳಿಗೂ ಅಧಿಕ ಅವಧಿಯಿಂದ ಸತತವಾಗಿ ಅತ್ಯಂತ ಕಳಪೆ ಬೌತಿಕ ಮತ್ತು ಆರ್ಥಿಕ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿಯೂ ಈ ಕಂಪೆನಿಯ ಪುನಃಶ್ಚೇತನ ಸಾಧ್ಯತೆ ಕಡಿಮೆ ಇರುವುದರಿಂದ ನಷ್ಟ ಪೀಡಿತ ಬಿ.ಎಸ್. ಸಿ.ಎಲ್.ನಲ್ಲಿ ಬಳಕೆಯಾಗುವ ಸಾರ್ವಜನಿಕ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರೈಲ್ವೇ ಮಂತ್ರಾಲಯದಡಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ರಂಗದ ಉದ್ದಿಮೆಯಾದ (ಸಿ.ಪಿ.ಎಸ್.ಇ.) ಬರ್ನ್ ಸ್ಟ್ಯಾಂಡರ್ಡ್ ಕಂಪೆನಿ (ಬಿ.ಎಸ್.ಸಿ.ಎಲ್.) ಯನ್ನು ಮುಚ್ಚುವುದಕ್ಕೆ ತೀರ್ಮಾನಿಸಲಾಯಿತು. ಸರಕಾರದಿಂದ ಹಣಕಾಸು ನೆರವು ಮತ್ತು ಇತರ ಬೆಂಬಲ ನೀಡಿದ್ದರೂ 10 ವರ್ಷಗಳಿಗೂ ಅಧಿಕ ಅವಧಿಯಿಂದ ಸತತವಾಗಿ ಕಳಪೆ ಭೌತಿಕ ಮತ್ತು ಆರ್ಥಿಕ ಸಾಧನೆಯ ಕಾರಣದಿಂದ ಮತ್ತು ಭವಿಷ್ಯದಲ್ಲಿ ಇದರ ಪುನಃಶ್ಚೇತನ ಸಾಧ್ಯತೆ ಕಡಿಮೆಯಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಯಿತು. ಈ ಕ್ರಮದಿಂದಾಗಿ ನಷ್ಟ ಪೀಡಿತ ಬಿ.ಎಸ್.ಸಿ.ಎಲ್ .ನಲ್ಲಿ ಬಳಕೆಯಾಗುತ್ತಿರುವ ಸಾರ್ವಜನಿಕ ಹಣ ಉಳಿತಾಯವಾಗಲಿದೆ, ಮತ್ತು ಅದನ್ನು ಇತರ ಅಭಿವೃದ್ದಿ ಕಾಮಗಾರಿಗಳಿಗೆ ಬಳಸಬಹುದಾಗಿದೆ.
ಕಂಪೆನಿಯು ಪ್ರಸಕ್ತ ಹೊಂದಿರುವ ಸಾಲ ಭಾದ್ಯತೆಗಳನ್ನು ಪೂರೈಸಲು ಮತ್ತು ವಿಭಜನೆ ಪ್ಯಾಕೇಜ್ ಆಗಿ ಸರಕಾರವು ಒಂದು ಬಾರಿಗೆ 417.10 ಕೋ.ರೂ.ಗಳ ಅನುದಾನವನ್ನು ಒದಗಿಸಲಿದೆ. ಜತೆಗೆ ಭಾರತ ಸರಕಾರ ( ರೈಲ್ವೇ ಮಂತ್ರಾಲಯ )ವು ಕಂಪೆನಿಗೆ ನೀಡಿದ ಬಾಕಿ ಇರುವ 35 ಕೋ.ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಬಿ.ಎಸ್.ಸಿ.ಎಲ್. ನ 508 ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯ (ವಿ.ಆರ್.ಎಸ್.) ಸೌಲಭ್ಯ ಒದಗಿಸಲಾಗುವುದು
ಹಿನ್ನೆಲೆ:
ಬರ್ನ್ ಸ್ಟ್ಯಾಂಡರ್ಡ್ ಕಂಪೆನಿ ಲಿಮಿಟೆಡ್ ಅನ್ನು 1976 ರಲ್ಲಿ ಸ್ಥಾಪಿಸಲಾಗಿತ್ತು. ಬರ್ನ ಆಂಡ್ ಕಂಪೆನಿಯ ರಾಷ್ಟ್ರೀಕರಣ ಮತ್ತು ವಿಲಯನದ ಹಿನ್ನೆಲೆಯಲ್ಲಿ ಈ ಕಂಪೆನಿ ಅಸ್ತಿತ್ವಕ್ಕೆ ಬಂದಿತ್ತು . ಮತ್ತು 1987 ರಲ್ಲಿ ಭಾರೀ ಕೈಗಾರಿಕೆಗಳ ಇಲಾಖೆಯ (ಡಿ.ಎಚ್.ಐ.) ಅಡಿಯಲ್ಲಿ ಭಾರತೀಯ ಸ್ಟ್ಯಾಂಡರ್ಡ್ ವ್ಯಾಗನ್ ಕಂಪೆನಿ ಲಿಮಿಟೆಡ್ ಅನ್ನು ಸ್ಥಾಪಿಸಲಾಗಿತ್ತು. ಕಂಪೆನಿಯನ್ನು 1994 ರಲ್ಲಿ ಕೈಗಾರಿಕಾ ಮತ್ತು ಹಣಕಾಸು ಪುನಾರಚನಾ ಮಂಡಳಿಗೆ (ಬಿ.ಐ.ಎಫ್.ಆರ್.) ರವಾನಿಸಲಾಗಿತ್ತು ಮತ್ತು 1995 ರಲ್ಲಿ ಅದನ್ನು ರೋಗಗ್ರಸ್ತ ಎಂದು ಘೋಷಿಸಲಾಗಿತ್ತು. ಆ ಬಳಿಕ ಕಂಪೆನಿಯು ರೋಗಗ್ರಸ್ತ ಕಂಪೆನಿಯಾಗಿಯೇ ಮುಂದುವರಿದಿತ್ತು. ಕಂಪೆನಿಯ ಆಡಳಿತಾತ್ಮಕ ನಿಯಂತ್ರಣವನ್ನು 2010 ರ ಸೆಪ್ಟೆಂಬರ್ 15 ರಂದು ಡಿ.ಎಚ್.ಐ. ಯಿಂದ ರೈಲ್ವೇ ಮಂತ್ರಾಲಯಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅನುಮೋದನೆಯ ಹಿನ್ನೆಲೆಯಲ್ಲಿ ವರ್ಗಾಯಿಸಲಾಗಿತ್ತು. ಕಂಪೆನಿಯು ವ್ಯಾಗನ್ ಗಳ ದುರಸ್ತಿ ಮತ್ತು ಉಕ್ಕು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿತ್ತು.