Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೋಲ್ಕತ್ತಾದ ಹಿಂದೂಸ್ತಾನ್ ಕೇಬಲ್ಸ್ ಲಿಮಿಟೆಡ್ ಮುಚ್ಚಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೋಲ್ಕತ್ತಾದ ಹಿಂದೂಸ್ತಾನ್ ಕೇಬಲ್ಸ್ ಲಿಮಿಟೆಡ್ (ಎಚ್.ಸಿ.ಎಲ್)ಅನ್ನು ಕಂಪನಿಗಳ ಕಾಯಿದೆ 1956/2013, ಕೈಗಾರಿಕಾ ವ್ಯಾಜ್ಯಗಳ ಕಾಯಿದೆ 1947 ಮತ್ತು ಇತರ ಸೂಕ್ತ ಕಾಯಿದೆಗಳ ನಿಬಂಧನೆಗಳ ಅಡಿಯಲ್ಲಿ ಮುಚ್ಚಲು ತನ್ನ ಸಮ್ಮತಿ ಸೂಚಿಸಿದೆ. ಕಾರ್ಮಿಕರಿಗೆ 2007ರ ನಾಮಮಾತ್ರ ವೇತನ ಶ್ರೇಣಿಯಂತೆ ಆಕರ್ಷಕ ವಿ.ಆರ್.ಎಸ್/ವಿ.ಎಸ್.ಎಸ್. ಮತ್ತು ಕಾರ್ಮಿಕರ ಸಂಬಂಧಿತ ಇತರ ಋಣಗಳಾದ ವೇತನ ಪಾವತಿ ಮತ್ತು ಕೂಲಿಯನ್ನು ಏಪ್ರಿಲ್ 2015ರಿಂದ ಅವರು ವಿಆರ್.ಎಸ್./ವಿ.ಎಸ್.ಎಸ್. ತೆಗೆದುಕೊಂಡು ಕಂಪನಿಯಿಂದ ಪ್ರತ್ಯೇಕವಾಗುವತನಕ ನೀಡಲಾಗುತ್ತದೆ. ಕಂಪನಿಯ ಆಸ್ತಿಯನ್ನು ರೋಗಗ್ರಸ್ಥ/ನಷ್ಟದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆ (ಸಿಪಿಎಸ್.ಇ.ಗಳು)ಯ ಕಾಲಮಿತಿಯಲ್ಲಿ ಮುಚ್ಚುವ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಮಾರ್ಗಸೂಚಿಯಂತೆ ವಿಲೇವಾರಿ ಮಾಡಲಾಗುವುದು ಮತ್ತು ಚರ ಸ್ಥಿರ ಆಸ್ತಿಯನ್ನೂ ವಿಲೆ ಮಾಡಲಾಗುವುದು.

ಕಂಪನಿಯನ್ನು ಮುಚ್ಚಲು ಒಟ್ಟು 1309.90 ಕೋಟಿ ರೂಪಾಯಿ ನಗದು ಪೂರಣ ಮತ್ತು 3,467.15 ಕೋಟಿ ರೂಪಾಯಿ ನಗದಲ್ಲದ ಹಣಪೂರಣವನ್ನು 20.09.2016ರಲ್ಲಿದ್ದಂತೆ ಭಾರತ ಸರ್ಕಾರದ ಸಾಲವನ್ನು (ಬಡ್ಡಿ ಸಹಿತ) ಈಕ್ವಿಟಿಯಾಗಿ ಪರಿವರ್ತಿಸುವ ಮೂಲಕ ಮಾಡಲಾಗುವುದು.

ಕೋಲ್ಕತ್ತಾದ ಎಚ್.ಸಿ.ಎಲ್.ನ ಸುರಕ್ಷಿತ ಸಾಲದಾತರು ಎಸ್.ಬಿ.ಐ. ನೇತೃತ್ವದ ಕಂಪನಿಯ ಸಾಲದಾತರ ಒಕ್ಕೂಟವಾಗಿ ಉದಾರವಾಗಿ ತಮ್ಮ ಬೆಂಬಲವನ್ನು ನೀಡಿದ್ದಾರೆ. ಒಂದು ಬಾರಿಯ ಪಾವತಿ (ಸೆಟ್ಲ್ ಮೆಂಟ್)ಯ ನಿಯಮಗಳು ಬಡ್ಡಿಯ ಸಂಪೂರ್ಣ ಮನ್ನಾ ಮತ್ತು 305.63 ಕೋಟಿ ರೂಪಾಯಿಗಳ ಅಸಲಿನ ಮೊತ್ತಕ್ಕೆ ಸಂಬಂಧಿಸಿದಂತೆ ಅದು ಹೊಂದಿರುವ ಮೇಲಾಧಾರದ ಅದಕ್ಕೆ ಸರಿಸಮನಾದ ಇತ್ಯರ್ಥದ ಹಣ ಒಳಗೊಂಡಿರುತ್ತದೆ.

2003ರಿಂದ ಕಂಪನಿಯಲ್ಲಿ ಯಾವುದೇ ರೀತಿಯ ಉತ್ಪಾದನಾ ಚಟುವಟಿಕೆ ನಡೆಯುತ್ತಿಲ್ಲ. ಕಂಪನಿಯ ಉದ್ಯೋಗಿಗಳು 1997ರ ವೇತನಶ್ರೇಣಿಯಲ್ಲಿಯೇ ಇದ್ದಾರೆ. ಸಂಬಳ ಮತ್ತು ಭತ್ಯೆ ಪಾವತಿ ಮಾಡದಿರುವ ಕಾರಣ ನೌಕರರಿಗೆ ಜೀವನ ನಡೆಸುವುದು ಮತ್ತು ತಮ್ಮ ತತ್ ಕ್ಷಣದ ಆರ್ಥಿಕ ಅಗತ್ಯ ಪೂರೈಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ವಿಆರ್.ಎಸ್/ವಿ.ಎಸ್.ಎಸ್. ಪ್ಯಾಕೇಜ್ ಮತ್ತು ಬಾಕಿ ಇರುವ ಋಮಗಳನ್ನು ಪಾವತಿ ಮಾಡುತ್ತಿರುವ ಹಿನ್ನೆಲೆಯಲ್ಲಿ, ನೌಕರರು ತಮ್ಮ ಇಂದಿನ ಆರ್ಥಿಕ ಸಂಕಷ್ಟದಿಂದ ಹೊರಬರಲಿದ್ದಾರೆ. ಇದು ಉದ್ಯೋಗಿಗಳ ನಿವೃತ್ತಿ ನಂತರದ ಪುನರ್ವಸತಿಗೂ ನೆರವಾಗಲಿದೆ. ಪ್ರಸಕ್ತ ಕಾಲಮಿತಿಯಲ್ಲಿ ಕಂಪನಿಯನ್ನು ಮುಚ್ಚುವುದರಿಂದ, ಕಂಪನಿಯ ಅಮೂಲ್ಯವಾದ ಆಸ್ತಿ, ಇತರ ಗರಿಷ್ಠ ಬಳಕೆಗೆ ಲಭ್ಯವಾಗಲಿದೆ.

ಹಿನ್ನೆಲೆ:-

ಎಚ್.ಸಿ.ಎಲ್. ಅನ್ನು 1952ರಲ್ಲಿ ಸ್ಥಾಪಿಸಲಾಗಿತ್ತು. ಅದು ರೂಪ್ ನರೈನ್ ಪುರ (ಪಶ್ಚಿಮ ಬಂಗಾಳ), ಹೈದ್ರಾಬಾದ್ (ತೆಲಂಗಾಣ), ನೈನಿ (ಯು.ಪಿ.) ಮತ್ತು ನರೇಂದ್ರಪುರ್ (ಪಶ್ಚಿಮ ಬಂಗಾಳ)ದಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಹೊಂದಿದೆ. ಎಚ್.ಸಿ.ಎಲ್.ನ ನೋಂದಾಯಿತ ಕಚೇರಿ ಕೋಲ್ಕತ್ತಾದಲ್ಲಿದೆ. ಸರ್ಕಾರಿ ಒಡೆತನದ ಟೆಲಿಕಾಂ ಕಂಪನಿಗಳಾದ ಬಿ.ಎಸ್.ಎನ್.ಎಲ್. ಮತ್ತು ಎಂ.ಟಿ.ಎನ್.ಎಲ್. ಅಗತ್ಯಗಳನ್ನು ಪೂರೈಸಲು ಟೆಲಿಕಾಂ ತಂತಿಗಳನ್ನು ಉತ್ಪಾದಿಸುತ್ತಿತ್ತು. ದೂರಸಂಪರ್ಕ ತಂತ್ರಜ್ಞಾನದಲ್ಲಿ ಆದ ತ್ವರಿತ ಬದಲಾವಣೆ (ತಂತಿ ಮಾರ್ಗದಿಂದ ನಿಸ್ತಂತು)ಯಿಂದಾಗಿ ದೂರಸಂಪರ್ಕ ತಂತಿಗಳಿಗೆ ಬೇಡಿಕೆ ಗಣನೀಯವಾಗಿ ಕಡಿಮೆ ಆಗಿತ್ತು. ಬೃಹತ್ ಕೈಗಾರಿಕಾ ಇಲಾಖೆ ಈ ಕಂಪನಿಯನ್ನು ಪುನಶ್ಚೇತನಗೊಳಿಸಲು ಹಲವು ಪ್ರಯತ್ನ ಮಾಡಿತ್ತು ಆದರೆ ಅದು ಸಫಲವಾಗಿರಲಿಲ್ಲ. ಎಚ್.ಸಿ.ಎಲ್.ನ್ನು ರಕ್ಷಣೆ/ರಕ್ಷಣಾ ಉತ್ಪಾದನಾ ಇಲಾಖೆಗೆ ಹಸ್ತಾಂತರಿಸುವ ಪ್ರಯತ್ನವೂ ಫಲ ನೀಡಿರಲಿಲ್ಲ. ಬಿ.ಐ.ಎಫ್.ಆರ್., ಬಿ.ಆರ್.ಪಿ.ಎಸ್.ಇ. ಶಿಫಾರಸುಗಳಂತೆ ಕಂಪನಿಯನ್ನು ಮುಚ್ಚುವ ಪ್ರಸ್ತಾಪ ಮಾಡಲಾಯಿತು ಮತ್ತು ರೋಗಗ್ರಸ್ಥ ಸಿಪಿಎಸ್.ಇ.ಗಳಿಗೆ ಯೋಜನೇತರ ಆಯವ್ಯಯ ಬೆಂಬಲವನ್ನು ಹಂತಹಂತವಾಗಿ ನಿಲ್ಲಿಸುವ ಸಿಸಿಇಎ 29.12.2014ರಲ್ಲಿ ಅನುಮೋದಿಸಿದ ನಕ್ಷೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಈ ಕಂಪನಿಯು 2002ರವರೆಗೆ ಬಿ.ಐ.ಎಫ್.ಆರ್. ಕಂಪನಿ ಎಂದು ಕರೆಯಲಾಗಿತ್ತು. ಈ ಕಂಪನಿ ಮುಚ್ಚುವ ಭಾರತ ಸರ್ಕಾರದ ನಿರ್ಧಾರವನ್ನು ಬಿ.ಐ.ಎಫ್.ಆರ್.ಗೆ ತಿಳಿಸಲಾಗಿತ್ತು ಮತ್ತು ಅದರ ಅನುಮೋದನೆ ಕೋರಲಾಗಿತ್ತು. ಕಂಪನಿಯ ನೌಕರರಿಗೆ ಆಕರ್ಷಕವಾದ ವಿ.ಆರ್.ಎಸ್./ವಿ.ಎಸ್.ಎಸ್. ಘೋಷಿಸಲಾಯಿತು. ಉದ್ಯೋಗಿಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಕೂಡ 1947ರ ಕೈಗಾರಿಕಾ ವ್ಯಾಜ್ಯ ಕಾಯಿದೆ ರೀತ್ಯ ಕೈಗೊಳ್ಳಲಾಯಿತು. ಓಟಿಎಸ್ ನೊಂದಿಗೆ ಸುರಕ್ಷಿತ ಸಾಲದಾತರು ಕಂಪನಿಯ ಭೂ ಆಸ್ತಿಯನ್ನು ಮುಕ್ತಗೊಳಿಸುತ್ತಿದ್ದಾರೆ. ಕಂಪನಿಯ ಇತರ ಋಣಗಳಲ್ಲಿ ಕಂಪನಿಯನ್ನು ಮುಚ್ಚುವ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ಶಾಸನಾತ್ಮಕ ಋಣಗಳೂ ಸೇರಿದ್ದು, ಅದನ್ನು ಕಾನೂನಿನ ನಿಬಂಧನೆಗಳ ರೀತ್ಯ ಮತ್ತು ಮೇಲೆ ಹೇಳಲಾದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಮಾರ್ಗಸೂಚಿಯಂತೆ ನಿರ್ವಹಿಸಲಾಗುತ್ತದೆ.

AKT/VBA/SH