Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರೊಂದಿಗೆ ವೀಡಿಯೊ ಕರೆ ಮೂಲಕ ಸಂವಾದ ನಡೆಸಿದರು. ಕ್ಯಾಪ್ಟನ್ ಸ್ಮಿತ್ ಆರೋಗ್ಯ ವಿಚಾರಿಸುವ ಮೂಲಕ ಸಂಭಾಷಣೆ ಆರಂಭಿಸಿದ ಪ್ರಧಾನಮಂತ್ರಿ, ನೀವು ಶೀಘ್ರವೇ ಚೇತರಿಸಿಕೊಳ್ಳಬೇಕು ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ ಎಂದು ಧೈರ್ಯ ತುಂಬಿದರು. ಅನೇಕ ಜೀವಗಳನ್ನು ಉಳಿಸಲು ಕ್ಷಣ ಮಾತ್ರದಲ್ಲೇ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪೈಲಟ್ ತೋರಿದ ಧೈರ್ಯ, ತಾಳ್ಮೆ ಮತ್ತು ಸಮಯಪ್ರಜ್ಞೆಯನ್ನು ಅವರು ಶ್ಲಾಘಿಸಿದರು. ಸಾವು-ಬದುಕಿನ ನಡುವಿನ ಹೋರಾಟ ಮತ್ತು ಗಂಭೀರ ಗಾಯಗಳ ನಡುವೆಯೂ ಕ್ಯಾಪ್ಟನ್, ತಮ್ಮ ಸ್ವಂತ ಪ್ರಾಣಕ್ಕಿಂತ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ 140 ಕೋಟಿ ದೇಶವಾಸಿಗಳ ಗೌರವ ಹೆಚ್ಚಿಸಿದ್ದಾರೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು. “ಇಂದು ಇಡೀ ದೇಶವು ಹೆಮ್ಮೆಯಿಂದ ಹೇಳಬಲ್ಲದು – ನಾವು ಭಾರತೀಯರು ಜೀವಗಳನ್ನು ಕಸಿದುಕೊಳ್ಳುವವರಲ್ಲ, ಬದಲಾಗಿ ಜೀವಗಳನ್ನು ಉಳಿಸುವವರು,” ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಪ್ರಧಾನ ಮಂತ್ರಿ ಅವರು ಪೈಲಟ್‌ ಸ್ಮಿತ್ ಕುಟುಂಬ ಸದಸ್ಯರಾದ ಭೂಪೇಂದ್ರ ಭಾಯಿ, ಗೀತಾ ಬೆಹನ್ ಮತ್ತು ಸೋನಲ್ ಬೆಹನ್ ಅವರೊಂದಿಗೆ ನಡೆಸಿದ ಸಾತ್ವನದ ಮಾತುಕತೆಯನ್ನು ಪ್ರೀತಿಯಿಂದ ಸ್ಮರಿಸಿದರು. ಗೀತಾ ಬೆಹನ್ ಅವರು ತಮ್ಮ ಮಗನಲ್ಲಿ ಆಳವಾದ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಿದ್ದಾರೆ ಎಂದು ಶ್ಲಾಘಿಸಿದ ಪ್ರಧಾನಮಂತ್ರಿ, ಅವರು ಭಗವದ್ಗೀತೆಯ ಬೋಧನೆಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ಜೀವನದಲ್ಲಿ ಪಾಲಿಸುತ್ತಿದ್ದಾರೆ ಎಂದರು.

ಕ್ಯಾಪ್ಟನ್ ಸ್ಮಿತ್ ಅವರು ಪ್ರಧಾನ ಮಂತ್ರಿ ಅವರಿಗೆ ನೀವೇ ನನಗೆ ಅತಿದೊಡ್ಡ ಆದರ್ಶ ಎಂದು ಕರೆದರು. 17 ವರ್ಷಗಳ ವಿಮಾನಯಾನ ಅನುಭವವು ವಿಮಾನವು ಕೆಳಗೆ ಬೀಳುತ್ತಿದೆ ಎಂಬುದನ್ನು ಅರಿತುಕೊಳ್ಳಲು ಹೇಗೆ ಸಹಾಯ ಮಾಡಿತು ಎಂಬುದನ್ನು ಸ್ಮಿತ್ ವಿವರಿಸಿದಾಗ ಪ್ರಧಾನ ಮಂತ್ರಿ ಅವರು ಅದನ್ನು ಆಸಕ್ತಿ, ಕುತೂಹಲದಿಂದ ಆಲಿಸಿದರು. ತೀವ್ರವಾಗಿ ಸಿಕ್ಕಿಹಾಕಿಕೊಂಡು, ಗಂಭೀರ ಗಾಯಗೊಂಡಿದ್ದರೂ ಪ್ರಯಾಣಿಕರು ಸಾವನ್ನಪ್ಪಲು ಬಿಡಬಾರದೆಂಬ ದೃಢ ನಿರ್ಧಾರದಿಂದ, ಬಾಗಿಲು ತೆರೆಯಲು ನಡೆಸಿದ ಅಂತಿಮ ಪ್ರಯತ್ನದ ಆ ಭಯಾನಕ ಕ್ಷಣವನ್ನು ಪೈಲಟ್ ಸ್ಮಿತ್ ವಿವರಿಸಿದ್ದನ್ನು ಪ್ರಧಾನಮಂತ್ರಿ  ಸೂಕ್ಷ್ಮತೆಯಿಂದ ಆಲಿಸಿದರು. ಬದುಕುಳಿಯುವ ಹೋರಾಟದ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಕ್ಯಾಪ್ಟನ್ ಪಡೆದ ಆಧ್ಯಾತ್ಮಿಕ ಶಕ್ತಿಯನ್ನು ಪ್ರಧಾನಮಂತ್ರಿ ಮನಸಾರೆ ಮೆಚ್ಚಿಕೊಂಡರು. ಅಂತಹ ಕಠಿಣ ಹೋರಾಟದ ನಂತರ ಕ್ಯಾಪ್ಟನ್ ಭಾವುಕರಾಗಿದ್ದು ನಿಜಕ್ಕೂ ಸಹಜ ಸ್ಪಂದನೆಯಾಗಿತ್ತು. “ಆ ಕ್ಷಣದ ನಿಮ್ಮ ಧೈರ್ಯಶಾಲಿ ಹೋರಾಟಗಳು ಇಡೀ ಜಗತ್ತೇ ನಿಮ್ಮೊಂದಿಗೆ ಮಾತನಾಡಲು ಉತ್ಸುಕವಾಗುವಂತೆ ಮಾಡಿವೆ, ನಿಮ್ಮ ಕುಟುಂಬವು ನಿಜವಾಗಿಯೂ ದೇಶಕ್ಕೆ ಕೀರ್ತಿ ತಂದಿದೆ,” ಎಂದು ಶ್ರೀ ಮೋದಿ ಶ್ಲಾಘಿಸಿದರು.

ಪೈಲಟ್ ಅವರ ದೀರ್ಘಾಯುಷ್ಯ ಕೋರಿ ಸಾವರ್‌ಕುಂಡ್ಲಾದಿಂದ ವಾಧ್ವಾನ್‌ವರೆಗೆ ವಿಶೇಷ ಪ್ರಾರ್ಥನೆಗಳು ಮತ್ತು ಆರತಿ ಪೂಜೆಗಳನ್ನು ನಡೆಸಲಾಗುತ್ತಿದೆ ಎಂದು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ದೇಶಾದ್ಯಂತ ಭಾವನಾತ್ಮಕ ಒಗ್ಗಟ್ಟು ವ್ಯಕ್ತವಾಗುತ್ತಿದೆ. ತಮ್ಮ ಚೇತರಿಕೆಯ ಪ್ರಕ್ರಿಯೆ ನಿಧಾನಗತಿಯಲ್ಲಿ ಆಗಲಿ ಎಂದು ತಾಳ್ಮೆಯ ಪಯಣದಂತೆ ಸ್ವೀಕರಿಸಿರುವ ಕ್ಯಾಪ್ಟನ್ ಅವರ ದೃಢಸಂಕಲ್ಪ ಶ್ಲಾಘನೀಯ. ಹಾಗೆಯೇ, ಭಾರತೀಯ ಸಂಸ್ಕೃತಿಯೊಂದಿಗೆ ಸಂಪರ್ಕ ಕಾಯ್ದುಕೊಳ್ಳಲು ಅವರು ತಮ್ಮ 2 ವರ್ಷದ ಮಗನೊಂದಿಗೆ ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುವುದನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಜನರಿಂದ ದೊರೆತ ಅಪಾರ ಪ್ರೀತಿ ವಾತ್ಸಲ್ಯಕ್ಕೆ ತುಂಬು ಕೃತಜ್ಞತೆಯ ಭಾವನೆಗಳನ್ನು ವ್ಯಕ್ತಪಡಿಸಿರುವ ಕ್ಯಾಪ್ಟನ್ ಸ್ಮಿತ್, ಅತ್ಯುತ್ತಮ ವೈದ್ಯಕೀಯ ಆರೈಕೆ ಒದಗಿಸಿದ್ದಕ್ಕಾಗಿ ಸೌದಿ ಅರೇಬಿಯಾ ಮತ್ತು ಯುಎಇ ಸರ್ಕಾರಗಳಿಗೆ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಕ್ಯಾಪ್ಟನ್ ಅವರ ನಡೆ ಜಾಗತಿಕ ಮಟ್ಟದಲ್ಲಿ ಎಲ್ಲಾ ಭಾರತೀಯ ಪೈಲಟ್‌ಗಳ ಘನತೆ ಮತ್ತು ಗೌರವವನ್ನು ಎತ್ತಿಹಿಡಿದಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. “ಇಂದು ಗಾಂಧಿ ಜಯಂತಿ; ಅಹಿಂಸೆಯ ನಿಜವಾದ ಸಾರವೇನೆಂಬುದನ್ನು ನೀವು ಅದನ್ನು ಸ್ವತಃ ಆಚರಣೆಗೆ ತರುವ ಮೂಲಕ ತೋರಿಸಿಕೊಟ್ಟಿದ್ದೀರಿ,” ಎಂದು ಶ್ರೀ ಮೋದಿ ಪ್ರಶಂಸಿಸಿದರು.

ಗುಜರಾತಿ ಭಾಷೆಯಲ್ಲಿ ಆತ್ಮೀಯವಾಗಿ ಮಾತನಾಡಿದ ಪ್ರಧಾನ ಮಂತ್ರಿಯ, ಕ್ಯಾಪ್ಟನ್ ಅವರ ಪುಟ್ಟ ಮಕ್ಕಳಾದ ಬಾಬಿ ಮತ್ತು ಜೀವಾ ಅವರ ಯೋಗಕ್ಷೇಮ ವಿಚಾರಿಸಿದರು. ಇತ್ತೀಚಿನ ಸಂಭಾಷಣೆಗಳ ಸಂದರ್ಭದಲ್ಲಿ ಯಾವುದೇ ದೂರು-ದುಮ್ಮಾನಗಳಿಲ್ಲದೆ ಅತ್ಯದ್ಭುತ ಸಂಯಮ ಮತ್ತು ದೃಢ ನಂಬಿಕೆಯನ್ನು ಪ್ರದರ್ಶಿಸಿದ ಪೈಲಟ್ ಅವರ ಪೋಷಕರು ಹಾಗೂ ಪತ್ನಿ ಸೋನಲ್‍ಬೆನ್ ಅವರ ಬಗ್ಗೆ ಪ್ರಧಾನಮಂತ್ರಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ತಾನು ಕೇವಲ ಒಂದು ದೂರವಾಣಿ ಕರೆ ಮಾಡಿದರೆ ಸಾಕು, ನಾನು ನಿಮಗೆ ಸಿಗುತ್ತೇನೆ ಎಂದು ಕ್ಯಾಪ್ಟನ್ ಅವರಿಗೆ ಭರವಸೆ ನೀಡಿದ ಪ್ರಧಾನಮಂತ್ರಿ, ಖುದ್ದಾಗಿ ಭೇಟಿಯಾದಾಗ ಘಟನೆಯ ಸಂಪೂರ್ಣ ವಿವರಗಳನ್ನು ಆಲಿಸುವುದಾಗಿ ತಿಳಿಸಿದರು. ಇಡೀ ದೇಶವೇ ಅವರೊಂದಿಗೆ ಸದೃಢವಾಗಿ ನಿಂತಿದೆ. ಅವರು ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು. “ನಾವು ಭೇಟಿ ಆಗುವಂತಾಗಲು ಶೀಘ್ರವಾಗಿ ಗುಣಮುಖರಾಗಿ; ದೇವರು ನಿಮಗೆ ಒಳಿತನ್ನು ಮಾಡಲಿ ಮತ್ತು ಜೈ ಹಿಂದ್,” ಎಂದು ಶ್ರೀ ಮೋದಿ ಹಾರೈಸಿದರು.

 

*****