Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖೇಲೊ ಇಂಡಿಯಾ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವೀಡಿಯೊ ಕಾನ್ಫರೆನ್ಸ್ ಭಾಷಣ

ಖೇಲೊ ಇಂಡಿಯಾ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವೀಡಿಯೊ ಕಾನ್ಫರೆನ್ಸ್ ಭಾಷಣ


ನಮಸ್ಕಾರ.

ನೀವೆಲ್ಲರೂ ಈ ಖೇಲೊ ಇಂಡಿಯಾ ಸಂವಾದ ಕಾರ್ಯಕ್ರಮವನ್ನು ಅದ್ಭುತ ರೀತಿಯಲ್ಲಿ ಆಯೋಜಿಸಿದ್ದೀರಿ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಂತ್ರಜ್ಞಾನದ ಮೂಲಕ, ಈ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿರುವ ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳು, ಎಲ್ಲಾ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರಗಳ ಅನೇಕ ಸಚಿವರು, ಸಂಸತ್ತಿನ ನನ್ನ ಸಹೋದ್ಯೋಗಿಗಳು ಮತ್ತು ದೇಶದ ಲಕ್ಷಾಂತರ ಸ್ವಯಂಸೇವಕರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇಂದು ದೇಶಾದ್ಯಂತದ ಕ್ರೀಡಾಪಟುಗಳು ಮತ್ತು ಕ್ರೀಡಾ ರಂಗದ ಗಣ್ಯ ವ್ಯಕ್ತಿಗಳು ಸಹ ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದಾರೆ.

ನಿಮಗೆಲ್ಲ ತಿಳಿದಿರುವಂತೆ ಸ್ನೇಹಿತರೆ,

2 ದಿನಗಳ ನಂತರ, ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನ ಬರಲಿದೆ. ನಿಮ್ಮೆಲ್ಲರಿಗೂ, ದೇಶಾದ್ಯಂತದ ಯುವಕರಿಗೆ ಮತ್ತು ಕ್ರೀಡಾ ರಂಗದೊಂದಿಗೆ ಸಂಪರ್ಕ ಹೊಂದಿರುವ ಎಲ್ಲಾ ಸ್ನೇಹಿತರಿಗೆ ನಾನು ಕ್ರೀಡಾ ದಿನದ ಶುಭಾಶಯಗಳನ್ನು ಮುಂಚಿತವಾಗಿ ಕೋರುತ್ತೇನೆ. ಈ ದಿನವು ಭಾರತ ಮಾತೆಯ ಮಹಾನ್ ಪುತ್ರರಲ್ಲಿ ಒಬ್ಬರಾದ ಮೇಜರ್ ಧ್ಯಾನ್ ಚಂದ್ ಜಿ ಅವರನ್ನು ನೆನಪಿಸಿಕೊಳ್ಳುವ ಸಂದರ್ಭವಾಗಿದೆ. 100 ವರ್ಷಗಳ ಹಿಂದೆ, ಭಾರತೀಯ ಸೇನೆಯ ಹಾಕಿ ತಂಡವು ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿತ್ತು, ಧ್ಯಾನ್ ಚಂದ್ ಜಿ ಆ ತಂಡದ ಭಾಗವಾಗಿದ್ದರು. ಆ ಪ್ರವಾಸವು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 100 ವರ್ಷಗಳ ಕ್ರೀಡಾ ಸಂಬಂಧಗಳಿಗೆ ಭದ್ರ ಬುನಾದಿ ಹಾಕಿತು. ಕೆಲವು ದಿನಗಳ ಹಿಂದೆ, ನಾನು ನ್ಯೂಜಿಲೆಂಡ್‌ಗೆ ಭೇಟಿ ನೀಡಿದ್ದೆ. ಅಲ್ಲಿಯೂ ನಾನು ಅವರನ್ನು ನೆನಪಿಸಿಕೊಂಡೆ. ಮೇಜರ್ ಧ್ಯಾನ್ ಚಂದ್ ಜಿ ಅಡಿಪಾಯ ಹಾಕಿದ ಸಂಬಂಧಗಳು, ಇಂದು ಭಾರತವು ಸಮೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.

ಸ್ನೇಹಿತರೆ,

ಈ ಆಗಸ್ಟ್ 15ರಂದು ಕೆಂಪುಕೋಟೆಯಿಂದ ನಾನು ಭಾರತದ ಕ್ರೀಡಾ ದೃಷ್ಟಿಕೋನವನ್ನು ದೇಶದ ಮುಂದೆ ಇಟ್ಟಿದ್ದೇನೆ. ನಾನು ಕ್ರೀಡೆಯ ಬಗ್ಗೆ ಮಾತನಾಡುವಾಗ, ಅದು ಪದಕಗಳನ್ನು ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ಭಾರತದ ಕ್ರೀಡಾ ಶಕ್ತಿ ಮತ್ತು ಭಾರತದ ಯುವ ಶಕ್ತಿಯನ್ನು ಸಂಯೋಜಿಸುವ ಅಭಿಯಾನ ಇದಾಗಿದೆ. ನಾನು ಯಾವಾಗಲೂ ಹೇಳುತ್ತಿರುತ್ತೇನೆ – ಜೋ ಖೇಲೇಗಾ, ವೋ ಖೀಲೇಗಾ – “ಯಾರು ಆಡುತ್ತಾರೋ ಅವರು ಅರಳುತ್ತಾರೆ ಅಥವಾ ವಿಕಸನಗೊಳ್ಳುತ್ತಾರೆ.” ಕ್ರೀಡೆಯಲ್ಲಿ ಅರಳುವುದು ಎಂದರೆ ಮೈದಾನದಲ್ಲಿ ಗೆಲ್ಲುವುದು ಮಾತ್ರವಲ್ಲ. ಕ್ರೀಡೆಯಲ್ಲಿ ಅರಳುವುದು ಎಂದರೆ ವ್ಯಕ್ತಿತ್ವದ ವಿಕಸನ, ಕುಟುಂಬದ ವಿಕಸನ ಮತ್ತು ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸುವುದಾಗಿದೆ.

ಸ್ನೇಹಿತರೆ,

ಒಬ್ಬ ಆಟಗಾರ ಯಶಸ್ವಿಯಾದಾಗ, ಆ ಯಶಸ್ಸು ಅವನ ಅಥವಾ ಅವಳದ್ದಲ್ಲ. ಆ ಯಶಸ್ಸು ಅವನ ಕುಟುಂಬದ ಗುರುತನ್ನು ನಿರ್ಮಿಸುತ್ತದೆ, ಅವರ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಅವನು ಓದಿದ ಶಾಲೆ ಮತ್ತು ಕಾಲೇಜು, ಅದರ ಪ್ರತಿಷ್ಠೆ ಹೆಚ್ಚಾಗುತ್ತದೆ. ಅವನ ಜಿಲ್ಲೆ ಮತ್ತು ರಾಜ್ಯದ ಗುರುತು ಬಲಗೊಳ್ಳುತ್ತದೆ. ಅಂದರೆ, ಜಗತ್ತು ಆ ನಗರ ಅಥವಾ ರಾಜ್ಯವನ್ನು ಆ ಆಟಗಾರನ ಹೆಸರಿನಿಂದ ಗುರುತಿಸಲು ಪ್ರಾರಂಭಿಸುತ್ತದೆ. ಅಂತಹ ಅನೇಕ ಯಶಸ್ಸುಗಳು ಒಂದು ಪ್ರದೇಶವನ್ನು ಜಾಗತಿಕ ಕ್ರೀಡಾ ನಕ್ಷೆಯಲ್ಲಿ ಹೊಳೆಯುವಂತೆ ಮಾಡಿದಾಗ, ಆ ನಗರದ ಬಗ್ಗೆ ಪ್ರಪಂಚದ ದೃಷ್ಟಿಕೋನವೂ ಬದಲಾಗುತ್ತದೆ. ಇಂದಿನ ಕಾರ್ಯಕ್ರಮದಲ್ಲಿ, ದೇಶದ ನೂರಾರು ಜಿಲ್ಲೆಗಳ ಆಟಗಾರರು ಸಂಪರ್ಕ ಹೊಂದಿದ್ದಾರೆ. ಪ್ರತಿಯೊಂದು ಜಿಲ್ಲೆಯೂ ವಿಶ್ವದ ಕ್ರೀಡಾ ಭೂಪಟದಲ್ಲಿ ಮಿಂಚುವ ಶಕ್ತಿಯನ್ನು ಹೊಂದಿದೆ. ಈ ಶಕ್ತಿಯನ್ನು ಅರ್ಥ ಮಾಡಿಕೊಂಡು, ನಾವು ಈ ಸಂವಾದ ಕಾರ್ಯಕ್ರಮವನ್ನು ಮುಂದುವರಿಸಬೇಕು.

ಸ್ನೇಹಿತರೆ,

ಈ ಬಾರಿ ಕೆಂಪುಕೋಟೆಯಿಂದ ನಾನು ದೇಶದ ಗಮನವನ್ನು ಕ್ರೀಡೆಗೆ ಸಂಬಂಧಿಸಿದ ಒಂದು ದೊಡ್ಡ ಸವಾಲಿನತ್ತ ಸೆಳೆದಿದ್ದೇನೆ. ಈ ಸವಾಲು ಒಲಿಂಪಿಕ್ಸ್‌ನೊಂದಿಗೆ ಸಂಪರ್ಕ ಹೊಂದಿದೆ. ಒಂದು ಕಹಿ ಸತ್ಯವೆಂದರೆ ಒಲಿಂಪಿಕ್ಸ್‌ನಲ್ಲಿ, ಎಲ್ಲಾ ವಿಭಿನ್ನ ಕ್ರೀಡೆಗಳ ಪೈಕಿ ಭಾರತದ ತಂಡಗಳು ಅವುಗಳಲ್ಲಿ ಅರ್ಧದಷ್ಟು ಕ್ರೀಡೆಗಳಲ್ಲಿ ಮಾತ್ರ ಭಾಗವಹಿಸುತ್ತವೆ. ಅಂದರೆ ಪದಕಗಳ ಪಟ್ಟಿಯಲ್ಲಿ ಹೆಚ್ಚಿನ ಭಾಗದ ಕ್ರೀಡೆಗಳಿಗೆ ನಾವು ಸ್ಪರ್ಧಿಸುವುದಿಲ್ಲ. ಇದು ದಶಕಗಳಿಂದಲೂ ನಡೆಯುತ್ತಿದೆ. 2012ರ ಒಲಿಂಪಿಕ್ಸ್‌ನಲ್ಲಿ ಭಾರತ ಕೇವಲ 13 ಕ್ರೀಡೆಗಳಲ್ಲಿ ಮಾತ್ರ ಭಾಗವಹಿಸಿತ್ತು. 20ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ಭಾರತ ಭಾಗವಹಿಸಲಿಲ್ಲ. ಆ 20+ ಕ್ರೀಡೆಗಳಲ್ಲಿ, ಅನೇಕವು ದೇಶದಲ್ಲಿ ಜನರು ಅವುಗಳ  ಹೆಸರುಗಳನ್ನು ಕೇಳಿಲ್ಲದಿರಬಹುದು. ಇತರೆ ದೇಶಗಳು ಆ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುತ್ತವೆ, ಆದರೆ ನಾವು ಮಾತ್ರ ಭಾಗವಹಿಸುತ್ತಿಲ್ಲ. ನಮ್ಮ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು, ನಾವು ಆ ಕ್ರೀಡೆಗಳಲ್ಲಿಯೂ ಪಾಂಡಿತ್ಯವನ್ನು ಸಾಧಿಸಬೇಕು. ಉದಾಹರಣೆಗೆ, ಸರ್ಫಿಂಗ್ ಮತ್ತು ಸ್ಪೋರ್ಟ್ಸ್ ಕ್ಲೈಂಬಿಂಗ್ – ನಮಗೆ ಅಂತಹ ದೊಡ್ಡ ಕರಾವಳಿ ಇದೆ, ಅಂತಹ ವಿಶಾಲ ಪರ್ವತ ಪ್ರದೇಶವಿದೆ, ಅಲ್ಲಿ ಈ ಕ್ರೀಡೆಗಳಲ್ಲಿ ಸ್ವಾಭಾವಿಕವಾಗಿ ಆಸಕ್ತಿ ಇರಬಹುದು. ಜಲ ಕ್ರೀಡೆಗಳು ಮತ್ತು ಚಳಿಗಾಲದ ಕ್ರೀಡೆಗಳಿಗೆ ಜನಸಂಖ್ಯಾಶಾಸ್ತ್ರ ಮತ್ತು ಭೌಗೋಳಿಕತೆ ನಮ್ಮಲ್ಲಿದೆ. ಆದರೂ ಜಾಗತಿಕವಾಗಿ ಅಂತಹ ಕ್ರೀಡೆಗಳಲ್ಲಿ ನಾವು ಗೋಚರಿಸುವುದಿಲ್ಲ. ಆದ್ದರಿಂದ, ನಾವು ವಿವಿಧ ಜಿಲ್ಲೆಗಳಲ್ಲಿ ನಿರ್ದಿಷ್ಟ ಕ್ರೀಡೆಗೆ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದಾದ ಸಾಧ್ಯತೆಗಳನ್ನು ಅನ್ವೇಷಿಸಬೇಕು. ಇದರಲ್ಲಿ, ಇಂದಿನ ಕಾರ್ಯಕ್ರಮವು ಬಹು ದೊಡ್ಡ ಪಾತ್ರ ವಹಿಸುತ್ತದೆ.

ಸ್ನೇಹಿತರೆ,

ನಾವು 2036ರ ಒಲಿಂಪಿಕ್ಸ್‌ಗೆ ತಯಾರಿ ಮಾಡುವ ಬಗ್ಗೆ ಮಾತನಾಡುವಾಗ, 2036ರಲ್ಲಿ ವಿವಿಧ ಕ್ರೀಡೆಗಳಲ್ಲಿ ಅರ್ಹತೆ ಪಡೆಯುವ ಮತ್ತು ಸ್ಪರ್ಧಿಸುವ ಆಟಗಾರರನ್ನು ಇಂದು ನಾವು ಸಿದ್ಧಪಡಿಸಬೇಕು ಎಂಬುದು ನಮ್ಮ ಗಮನವಾಗಿರಬೇಕು. ಅದಕ್ಕಾಗಿಯೇ, ಕೆಂಪುಕೋಟೆಯಿಂದ, 5ರಿಂದ 15 ವರ್ಷದೊಳಗಿನ ಆಟಗಾರರನ್ನು ಗುರುತಿಸಲು ನಾನು ಪ್ರಮುಖ ಪ್ರತಿಭಾನ್ವೇಷಣಾ ಅಭಿಯಾನ ಘೋಷಿಸಿದೆ. ಇದರಲ್ಲಿಯೂ ಸಹ, ಯಾವ ಮಗು ಯಾವ ಕ್ರೀಡೆಯಲ್ಲಿ ಆಸಕ್ತಿ ಹೊಂದಿದೆ ಎಂಬುದನ್ನು ನಾವು ನೋಡಬೇಕು, ಆದರೆ ಯಾವ ಮಗು ಯಾವ ಕ್ರೀಡೆಗೆ ಯೋಗ್ಯವಾಗಿದೆ ಎಂಬುದನ್ನು ಸಹ ನಾವು ನೋಡಬೇಕು. ಅದಕ್ಕೆ ಅನುಗುಣವಾಗಿ ನಾವು ಮಗುವಿಗೆ ತರಬೇತಿ ನೀಡಬೇಕು.  ಸರ್ಕಾರದಿಂದ ಯಾವುದೇ ಬೆಂಬಲ ಬೇಕಾದರೂ, ಸರ್ಕಾರವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತದೆ ಎಂದು ನಾನು ನಿಮಗೆಲ್ಲರಿಗೂ ಭರವಸೆ ನೀಡುತ್ತೇನೆ.

ಸ್ನೇಹಿತರೆ,

ಭಾರತದಲ್ಲಿ 21ನೇ ಶತಮಾನದ ಆಧುನಿಕ ಕ್ರೀಡಾ ಪರಿಸರ ವ್ಯವಸ್ಥೆ ನಿರ್ಮಿಸಲು ನಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಇಂದು ಕ್ರೀಡಾ ವಿಶ್ವವಿದ್ಯಾಲಯಗಳಿಂದ ಆಧುನಿಕ ತರಬೇತಿ ಕೇಂದ್ರಗಳವರೆಗೆ, ದೇಶದಲ್ಲಿ ಒಂದು ವ್ಯವಸ್ಥೆಯನ್ನು ರಚಿಸಲಾಗುತ್ತಿದೆ, ಅಲ್ಲಿ ಪ್ರತಿ ಹಂತದಲ್ಲೂ – ಪ್ರತಿಭೆಯನ್ನು ಗುರುತಿಸುವುದರಿಂದ ಹಿಡಿದು ಅದನ್ನು ವಿಶ್ವ ವೇದಿಕೆಗೆ ತರುವವರೆಗೆ – ಬೆಂಬಲ ಲಭ್ಯವಿದೆ. ಕ್ರೀಡಾ ವಿಜ್ಞಾನ, ತರಬೇತಿ, ಅಭ್ಯಾಸ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ನಾವು ವಿಶ್ವದ ಇತರೆ ದೇಶಗಳೊಂದಿಗೆ ಸಹಕಾರ ಹೆಚ್ಚಿಸುತ್ತಿದ್ದೇವೆ.

ಸ್ನೇಹಿತರೆ,

ಸರ್ಕಾರವು ಕ್ರೀಡೆಯ ಬಗ್ಗೆ ಎಷ್ಟು ಗಂಭೀರವಾಗಿದೆಯೋ, ಈ ಕಾರ್ಯಕ್ರಮವೇ ಅದಕ್ಕೆ ಒಂದು ಉದಾಹರಣೆಯಾಗಿದೆ. ಖೇಲೊ ಇಂಡಿಯಾ ಸಂವಾದವು ಕೇವಲ ಕ್ರೀಡೆಯ ಬಗ್ಗೆ ಮಾತನಾಡುವ ಕಾರ್ಯಕ್ರಮವಲ್ಲ. ಇದು ಸಂವಾದ ವೇದಿಕೆಯಾಗಿದ್ದು, ಅಲ್ಲಿ ಪ್ರತಿಯೊಂದು ವಿಚಾರವೂ ದೇಶದ ಕ್ರೀಡಾ ದೃಷ್ಟಿಕೋನಕ್ಕೆ ಹೊಸ ದಿಕ್ಕು ನೀಡುತ್ತದೆ. ಇದರೊಂದಿಗೆ, ಇಲ್ಲಿ ನಡೆಯುತ್ತಿರುವ ಯುವ ಸಂವಾದವು ನಿಮ್ಮ ಆಲೋಚನೆಗಳು ಮತ್ತು ಆಕಾಂಕ್ಷೆಗಳನ್ನು ರಾಷ್ಟ್ರದ ಕನಸುಗಳೊಂದಿಗೆ ಸಂಪರ್ಕಿಸಲು ಉತ್ತಮ ಮಾಧ್ಯಮವಾಗಿದೆ. ಈ ಕಾರ್ಯಕ್ರಮದಲ್ಲಿ, ಯುವಕರು ಕ್ರೀಡಾ ಪರಿಸರ ವ್ಯವಸ್ಥೆ, ಪ್ರತಿಭಾ ಅಭಿವೃದ್ಧಿ, ಆಡಳಿತ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಏನು ಯೋಚಿಸುತ್ತಾರೆ, ಅವರ ಸಲಹೆಗಳು ಯಾವುವು – ಇವುಗಳನ್ನು ಕೇಳಲಾಗುತ್ತದೆ, ನೀತಿ ಪ್ರಕ್ರಿಯೆಯಲ್ಲಿ ಸೇರಿಸಲಾಗುತ್ತದೆ. ಆದ್ದರಿಂದ, ಈ ವೇದಿಕೆಯನ್ನು ಗರಿಷ್ಠ ಅರ್ಥಪೂರ್ಣವಾಗಿ ಬಳಸಿಕೊಳ್ಳಲು, ಹೊಸ ವಿಚಾರಗಳನ್ನು ತರುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಯುವ ಶಕ್ತಿಯ ಈ ಹೊಸ ವಿಚಾರಗಳು ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸಲು ಶಕ್ತಿಯಾಗುತ್ತವೆ.

ಸ್ನೇಹಿತರೆ,

ಆರೋಗ್ಯಕರ ಸಮಾಜಕ್ಕಾಗಿ, ಉತ್ತಮ ಕುಟುಂಬ ವ್ಯವಸ್ಥೆಗಾಗಿ, ಉತ್ತಮ ಕೆಲಸ ಸಂಸ್ಕೃತಿಗಾಗಿ, ಕ್ರೀಡಾ ವ್ಯಕ್ತಿ ಮನೋಭಾವವು ಬಹಳ ಅವಶ್ಯಕ ಎಂದು ನಾವು ಆಗಾಗ್ಗೆ ಕೇಳುತ್ತೇವೆ. ಕ್ರೀಡಾ ಕ್ಷೇತ್ರಕ್ಕೆ ಹೋಗದೆ ಈ ಕ್ರೀಡಾ ವ್ಯಕ್ತಿ ಮನೋಭಾವ ಕಲಿಯುವುದು ತುಂಬಾ ಕಷ್ಟ. ಕ್ರೀಡೆಗಳು ನಮಗೆ ಚಾಂಪಿಯನ್ ಆಗಲು ಕಲಿಸುವುದಲ್ಲದೆ, ಉತ್ತಮ ಸ್ಪರ್ಧಿಗಳಾಗಲು ಕಲಿಸುತ್ತವೆ. ಏಳುವುದು, ಬೀಳುವುದು, ಬಿದ್ದ ನಂತರ ಮತ್ತೆ ಏಳುವುದು – ಕ್ರೀಡೆಗಳು ಈ ಚೈತನ್ಯವನ್ನು ನಮ್ಮಲ್ಲಿ ತರುತ್ತವೆ.

ಸ್ನೇಹಿತರೆ,

ಕ್ರೀಡೆ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದಕ್ಕೆ ನಮ್ಮ ಪ್ಯಾರಾ ಕ್ರೀಡಾಪಟುಗಳು ಒಂದು ದೊಡ್ಡ ಉದಾಹರಣೆ. ಯಾರಾದರೂ ಪ್ಯಾರಾ ಕ್ರೀಡಾಪಟುಗಳನ್ನು ಮೈದಾನದಲ್ಲಿ ನೋಡಿದಾಗ, ಜೀವನದ ಬಗ್ಗೆ ಅವರ ದೃಷ್ಟಿಕೋನ ಬದಲಾಗುತ್ತದೆ. ಅವರು ಏನನ್ನಾದರೂ ಸಾಧಿಸಿದಾಗ, ಆ ಕ್ರೀಡಾಪಟುವಿನೊಂದಿಗೆ, ಅವರ ಇಡೀ ಕುಟುಂಬವು ಹೊಸ ಜೀವನ ಪಡೆಯುತ್ತದೆ. ಆರಂಭಿಕ ದಿನಗಳಲ್ಲಿ ತಮ್ಮ ಮಗು ಕಷ್ಟಪಡುವುದನ್ನು ನೋಡಿದ ಪೋಷಕರು, ಸಹೋದರರು, ಸಹೋದರಿಯರು – ಅವರಿಗೆ, ಆ ವಿಭಿನ್ನ ಸಾಮರ್ಥ್ಯದ ಕ್ರೀಡಾಪಟುವಿನ ಯಶಸ್ಸು ಅವರ ಕನಸುಗಳು ಮತ್ತು ಧೈರ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.

ಸ್ನೇಹಿತರೆ,

ನಾನು ಯಾವಾಗಲೂ ಅಂತಹ ಆಟಗಾರರಿಂದ ಸ್ಫೂರ್ತಿ ಪಡೆದಿದ್ದೇನೆ. ಉದಾಹರಣೆಗೆ, ನೀವೆಲ್ಲರೂ ಆ ಹೆಸರನ್ನು ಕೇಳಿದ್ದೀರಿ – ಬಿಲ್ಲುಗಾರಿಕೆಯಲ್ಲಿ ನಮ್ಮ ಮಗಳು, ಅದ್ಭುತ ಆಟಗಾರ್ತಿ, ಅವಳ ಹೆಸರು ನಿಮಗೆ ತಿಳಿದಿದೆಯೇ? ಶೀತಲ್. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಾಗ ಇಡೀ ಜಮ್ಮು ಮತ್ತು ಕಾಶ್ಮೀರ, ಇಡೀ ಹಿಂದೂಸ್ತಾನ್ ಹೆಮ್ಮೆಯಿಂದ ತುಂಬಿತ್ತು. ಅದೇ ರೀತಿ, ಪ್ಯಾರಾಲಿಂಪಿಕ್ಸ್‌ನಲ್ಲಿ 2 ಬಾರಿ ಪದಕಗಳನ್ನು ಗೆದ್ದ ನಮ್ಮ ಮಗಳು ಅವನಿ ಲೇಖರಾ. ನಾನು ಅವನಿಯನ್ನು ಭೇಟಿಯಾದಾಗಲೆಲ್ಲಾ, ನನಗೆ ತುಂಬಾ ಹೆಮ್ಮೆಯಾಗುತ್ತದೆ. ಅದು ಸುಮಿತ್ ಆಂಟಿಲ್ ಆಗಿರಲಿ, ನಿತೇಶ್ ಕುಮಾರ್ ಆಗಿರಲಿ ಅಥವಾ ಇತ್ತೀಚೆಗೆ ನೀವು ನಮ್ಮ ಝಂಡು ಕುಮಾರ್ ಅವರ ಹೆಸರನ್ನು ಕೇಳಿರಬೇಕು – ಅಂತಹ ಪ್ಯಾರಾ ಕ್ರೀಡಾಪಟುಗಳು, ಅಂತಹ ಸ್ನೇಹಿತರು ನಮಗೂ ಸ್ಫೂರ್ತಿ.

ಸ್ನೇಹಿತರೆ,

ಕ್ರೀಡೆಗಳು ಉತ್ತಮ ಜೀವನದ ಖಾತರಿಯಾಗಿವೆ. ಕ್ರೀಡೆಗಳು ನಮ್ಮನ್ನು ಉತ್ತಮ ಜೀವನ ನಡೆಸಲು ಸದೃಢರನ್ನಾಗಿಸುತ್ತವೆ, ನಮ್ಮ ಜೀವನದ ಗುಣಮಟ್ಟ ಸುಧಾರಿಸುತ್ತವೆ. ಫೌಜಾ ಸಿಂಗ್ ಜಿ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಕಳೆದ ವರ್ಷ 100 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಫೌಜಾ ಸಿಂಗ್ ಜಿ ನಿಧನರಾದರು. ಕ್ರೀಡೆ, ಫಿಟ್ನೆಸ್ ಮೇಲಿನ ಪ್ರೀತಿ – ಅದು ಹೇಗೆ ಜೀವಿತಾವಧಿಯಲ್ಲಿ ಮುಂದುವರಿಯುತ್ತದೆ, ಫೌಜಾ ಸಿಂಗ್ ಜಿ ಇದಕ್ಕೆ ಉದಾಹರಣೆಯಾಗಿದ್ದರು. ಅವರ ಜೀವನವು ಕ್ರೀಡೆ ಮತ್ತು ಜೀವನದ ಗುಣಮಟ್ಟ ಹೇಗೆ ಸಂಪರ್ಕ ಹೊಂದಿದೆ ಎಂಬುದನ್ನು ತೋರಿಸುವ ಒಂದು ದೊಡ್ಡ ಸ್ಫೂರ್ತಿಯಾಗಿದೆ.

ಸ್ನೇಹಿತರೆ,

ಕ್ರೀಡೆಯ ಮತ್ತೊಂದು ದೊಡ್ಡ ಪ್ರಯೋಜನವೆಂ,ದರೆ ನಿಜವಾದ ಆಟಗಾರರು ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರಲು ಇಚ್ಛಾಶಕ್ತಿ ಬೆಳೆಸಿಕೊಳ್ಳುತ್ತಾರೆ. ಇಂದು ವ್ಯಸನದ ದೊಡ್ಡ ಸವಾಲು ಯುವಕರ ಮುಂದೆ ಇರುವಾಗ, ಕ್ರೀಡೆಗಳು ಇದರಲ್ಲಿಯೂ ಬಹಳ ಅರ್ಥಪೂರ್ಣ ಪಾತ್ರ ವಹಿಸುತ್ತವೆ.

ಸ್ನೇಹಿತರೆ,

ಇಂದು ಭಾರತದಲ್ಲಿ ಕ್ರೀಡೆಗಳು ಅತ್ಯುತ್ತಮ ವೃತ್ತಿಯಾಗಿ ಹೊರಹೊಮ್ಮಿವೆ ಎಂಬುದರಿಂದ ನನಗೆ ಸಂತೋಷವಾಗಿದೆ. ಕ್ರೀಡೆಗಳ ಕಡೆಗೆ ಸಮಾಜದ ದೃಷ್ಟಿಕೋನ ಬದಲಾಗಿದೆ. ಇಂದು ನಮ್ಮ ದೇಶದಲ್ಲಿ ಜನರು ಟ್ರಯಥ್ಲಾನ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ, 5 ಕಿಮೀ ಮತ್ತು 10 ಕಿಮೀ ಓಟಗಳನ್ನು ನಡೆಸುತ್ತಿದ್ದಾರೆ. ಹೈರಾಕ್ಸ್‌ನಂತಹ ಸವಾಲುಗಳನ್ನು ಪೂರ್ಣಗೊಳಿಸಲು ಸ್ನೇಹಿತರು ಒಟ್ಟಿಗೆ ಬರುತ್ತಿದ್ದಾರೆ. ಯಾರೋ ಮೊದಲ ಬಾರಿಗೆ ಹೆಡ್‌ಸ್ಟ್ಯಾಂಡ್ ಮಾಡುವುದನ್ನು ಆಚರಿಸುತ್ತಿದ್ದಾರೆ, ಯಾರೋ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ. ಇವು ಸಣ್ಣ ವಿಷಯಗಳು, ಆದರೆ ನೀವು ಅವುಗಳನ್ನು ವಿಶಾಲ ದೃಷ್ಟಿಕೋನದಿಂದ ನೋಡಿದರೆ, ನೀವು ದೊಡ್ಡ ಬದಲಾವಣೆಯನ್ನು ನೋಡುತ್ತೀರಿ. ಬದಲಾವಣೆಯೆಂದರೆ ಕ್ರೀಡೆಗಳು ಈಗ ನಮ್ಮ ಜೀವನದ ಭಾಗವಾಗುತ್ತಿವೆ. ಅಧ್ಯಯನ ಮತ್ತು ವೃತ್ತಿ ಜೀವನಕ್ಕಾಗಿ ವೇಳಾಪಟ್ಟಿಗಳನ್ನು ಮಾಡಲಾಗುತ್ತಿದ್ದರೆ, ಕ್ರೀಡೆಗಳು ದೈನಂದಿನ ದಿನಚರಿಯಲ್ಲಿ ಸ್ಥಾನ ಪಡೆಯುತ್ತಿವೆ. ಇದು ಬದಲಾವಣೆ, ಇದು ರೂಪಾಂತರ, ಇದರಿಂದಾಗಿ ಭಾರತದ ಕ್ರೀಡಾ ಭವಿಷ್ಯದಲ್ಲಿ ನಂಬಿಕೆ ಹೆಚ್ಚುತ್ತಿದೆ.

ಸ್ನೇಹಿತರೆ,

ಸಾಮಾನ್ಯ ಜನರು ಕ್ರೀಡಾ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿದಾಗ ಮಾತ್ರ ದೇಶದಲ್ಲಿ ಕ್ರೀಡಾ ಸಂಸ್ಕೃತಿ ನಿರ್ಮಾಣವಾಗುತ್ತದೆ. ಶಾಲೆಗಳು ಕ್ರೀಡಾ ಅವಧಿಗಳನ್ನು ಸಹಪಠ್ಯವಾಗಿ ಪರಿಗಣಿಸದೆ, ಜೀವನದ ಒಂದು ಭಾಗವಾಗಿ ಪರಿಗಣಿಸಿದಾಗ. ಇದು ಸಂಭವಿಸಿದಾಗ, ಪ್ರತಿಭಾನ್ವಿತ ಗುಂಪು ಹೆಚ್ಚಾಗುತ್ತದೆ, ಕ್ರೀಡೆಗಳನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಬಯಸುವ ಮಕ್ಕಳು ತಮ್ಮ ಕುಟುಂಬಗಳಿಂದ ಬೆಂಬಲ ಪಡೆಯುತ್ತಾರೆ. ಅದಕ್ಕಾಗಿಯೇ ನಾನು ಹೇಳುತ್ತೇನೆ – ಪರದೆಗಳಿಗಿಂತ ಹೆಚ್ಚು ಮುಖ್ಯ ಕ್ರೀಡಾ ಕೇಂದ್ರಗಳು. ಪ್ಲೇಸ್ಟೇಷನ್‌ಗಿಂತ ಆಟದ ಮೈದಾನ ಹೆಚ್ಚು ಮುಖ್ಯ. ನಮ್ಮ ಎಲ್ಲಾ ಯುವ ಸ್ನೇಹಿತರು ಈ ವಿಧಾನವನ್ನು ಮುಂದುವರಿಸಿದಾಗ ಮಾತ್ರ ಇದು ಸಂಭವಿಸುತ್ತದೆ.

ಸ್ನೇಹಿತರೆ,

ಭಾರತದ ಯುವ ಶಕ್ತಿಯ ಸಾಮರ್ಥ್ಯ ಮತ್ತು ಯಶಸ್ಸಿನಲ್ಲಿ ನನಗೆ ಅಪಾರ ನಂಬಿಕೆ ಇದೆ. ನಾನು ದೇಶದ ಪ್ರತಿಯೊಬ್ಬ ಯುವಕರಿಗೂ ಹೇಳಲು ಬಯಸುತ್ತೇನೆ – ಕ್ರೀಡಾ ಮೈದಾನದಲ್ಲಾಗಲಿ ಅಥವಾ ಸಮಾಜದಲ್ಲಾಗಲಿ, ನಿಮ್ಮ ಭಾಗವಹಿಸುವಿಕೆಯು ಭಾರತದ ಶಕ್ತಿಯಾಗಿದೆ. ನೀವು ಕ್ರೀಡೆಗಳನ್ನು ಪ್ರೀತಿಸುತ್ತಿದ್ದರೆ, ಅದರೊಂದಿಗೆ ಸಂಪರ್ಕ ಸಾಧಿಸಲು ಹಲವು ಮಾರ್ಗಗಳನ್ನು ರೂಪಿಸಲಾಗುತ್ತಿದೆ. ಈಗ ಹೊಸ ಕ್ರೀಡಾ ಉಪಕರಣಗಳು ಬಂದಿವೆ, ಹೊಸ ತಂತ್ರಜ್ಞಾನ ಬಂದಿದೆ. ತರಬೇತಿ ಮತ್ತು ತರಬೇತಿ ವಿಧಾನಗಳು ಬದಲಾಗಿವೆ. ಕ್ರೀಡೆಗಳನ್ನು ಆಯೋಜಿಸುವ, ಸ್ಪರ್ಧೆಯ, ವಿಭಾಗಗಳ ಅಗತ್ಯತೆಗಳು ಬದಲಾಗಿವೆ. ಸಲಕರಣೆಗಳ ವಿನ್ಯಾಸ, ಕ್ರೀಡಾ ತಂತ್ರಜ್ಞಾನ, ಕ್ರೀಡಾ ಔಷಧ, ಪೋಷಣೆ, ಮನೋವಿಜ್ಞಾನ, ವಿಶ್ಲೇಷಣೆ – ಈ ಎಲ್ಲಾ ಕ್ಷೇತ್ರಗಳಲ್ಲಿ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ನೀವು ಈ ಅವಕಾಶಗಳನ್ನು ಕಳೆದುಕೊಳ್ಳಬಾರದು. ಆದ್ದರಿಂದ, ಈ ಸಂವಾದದಲ್ಲಿ ನಿಮ್ಮ ಆಲೋಚನೆಗಳನ್ನು ಮುಕ್ತವಾಗಿ ಮಂಡಿಸಿ. ಯುವ ಶಕ್ತಿಯ ಈ ಭಾಗವಹಿಸುವಿಕೆಯು ಅಭಿವೃದ್ಧಿ ಹೊಂದಿದ ಭಾರತದ ದೊಡ್ಡ ಶಕ್ತಿಯಾಗಿದೆ. ಮತ್ತೊಮ್ಮೆ, ನಮ್ಮೆಲ್ಲ ಯುವ ಸ್ನೇಹಿತರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ಧನ್ಯವಾದಗಳು.

ವಂದೇ ಮಾತರಂ.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****