ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ಕ್ಕೆ ಸೇರಿದ 4050 ಚದರ ಮೀಟರ್ ಜಮೀನನ್ನು ಅಸ್ಸಾಂ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಅಸ್ಸಾಂ ಕೈಗಾರಿಕಾಭಿವೃದ್ಧಿ ನಿಗಮ (ಎ.ಐ.ಡಿ.ಸಿ.)ಕ್ಕೆ ಬಾಡಿಗೆ ನೀಡಲು ತನ್ನ ಅನುಮೋದನೆ ನೀಡಿದೆ. ಈ ಜಮೀನನ್ನು ಗುವಾಹತಿಯ ಲೋಕಪ್ರಿಯ ಗೋಪಿನಾಥ್ ಬೋರ್ದೊಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಎಲ್.ಜಿ.ಬಿ.ಐ)ದಲ್ಲಿ ನಾಶವಾಗುವ ಸರಕುಗಳ ಕೇಂದ್ರ (ಸಿಪಿಸಿ)ಕ್ಕಾಗಿ ಮತ್ತು ಅದರ ಭವಿಷ್ಯದ ವಿಸ್ತರಣೆಗಾಗಿ ಬಳಸಿಕೊಳ್ಳಲಾಗುತ್ತದೆ.
ಈ ಜಮೀನನ್ನು ಎಎಐ ವಾರ್ಷಿಕ ಟೋಕನ್ ನೋಂದಣಿ ಶುಲ್ಕ ರೂ.1/-ರ ದರದಲ್ಲಿ ಬಾಡಿಗೆ ಕರಾರಿಗೆ ಒಳಪಟ್ಟು ಏಳು ವರ್ಷಗಳ ಅವಧಿಗೆ ನೀಡಲಿದೆ. ಏಳು ವರ್ಷಗಳ ಪ್ರಾಥಮಿಕ ಅವಧಿ ಮುಗಿದ ಬಳಿಕ, ಎ.ಎ.ಐ.ನ ಅಂದಿನ ನೀತಿಗೆ ಅನುಗುಣವಾಗಿ ಮುಂದಿನ ಭೋಗ್ಯದ ಅವಧಿ ನಿರ್ಧರಿಸಲಾಗುತ್ತದೆ.
ಹಿನ್ನೆಲೆ:
ಭಾರತದ ಈಶಾನ್ಯ ವಲಯ ಸಸ್ಯ ಹಾಗೂ ಪ್ರಾಣಿ ಸಂಕುಲದಿಂದ ಶ್ರೀಮಂತವಾಗಿದೆ. ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳ ರಫ್ತಿನಿಂದ ಬರುವ ಆದಾಯದಿಂದ ಈಶಾನ್ಯ ವಲಯದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಈ ವಲಯದಿಂದ ನಾಶವಾಗುವ ಸರಕುಗಳ ರಫ್ತು ಉತ್ತೇಜಿಸುವ ಅಗತ್ಯವಿದೆ. ಇದು ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ. ನಾಶವಾಗುವ ಸರಕುಗಳನ್ನು ಗುವಾಹಟಿಯಿಂದ ವಿಮಾನಗಳ ಮೂಲಕ ಸಾಗಿಸಲು ವ್ಯವಸ್ಥೆಯನ್ನು ಹೆಚ್ಚು ಸಮರ್ಥವಾಗಿಸಬೇಕಾಗಿದೆ. ಆದ್ದರಿಂದ ಗುವಾಹಟಿಯ ಎಲ್.ಜಿ.ಬಿ.ಐ. ವಿಮಾನ ನಿಲ್ದಾಣದಲ್ಲಿ ಸಿಪಿಸಿ ಸ್ಥಾಪನೆ ಮತ್ತು ಅದರ ಭವಿಷ್ಯದ ವಿಸ್ತರಣೆಗಾಗಿ ಎ.ಐ.ಡಿ.ಸಿ.ಗೆ ಎಎಐಗೆ ಸೇರಿದ 4050 ಚದರ ಮೀಟರ್ ಭೂಮಿಯನ್ನು ಭೋಗ್ಯಕ್ಕೆ ನೀಡಲು ನಿರ್ಧರಿಸಲಾಗಿದೆ.
AKT/VBA/SH