ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸುಸ್ಥಿರ ಗ್ರಾಮೀಣ ಪೈಪ್‌ಲೈನ್ ಕುಡಿಯುವ ನೀರು ಪೂರೈಕೆಗಾಗಿ ‘ಜಲ ಜೀವನ್ ಮಿಷನ್’ (JJM) ಯೋಜನೆಯನ್ನು ಮರುಸಂಘಟಿಸುವ ಜಲಶಕ್ತಿ ಸಚಿವಾಲಯದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಈ ಬದಲಾವಣೆಯ ಮೂಲಕ ಯೋಜನೆಯ ಗಮನವು ಕೇವಲ ‘ಮೂಲಸೌಕರ್ಯ ನಿರ್ಮಾಣ’ದಿಂದ ‘ಸೇವಾ ವಿತರಣೆ’ಯತ್ತ (Service Delivery) ಮರುನಿರ್ದೇಶಿತವಾಗಲಿದೆ. ಇದು ಕುಡಿಯುವ ನೀರಿನ ಆಡಳಿತ ಮತ್ತು ಸಾಂಸ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಗುರಿ ಹೊಂದಿದೆ.
ರಚನಾತ್ಮಕ ಸುಧಾರಣೆಗಳ ಮೇಲೆ ಕೇಂದ್ರೀಕರಿಸಿ ಜಲ ಜೀವನ್ ಮಿಷನ್ ಮರುರಚನೆಗಾಗಿ, ಒಟ್ಟು ವೆಚ್ಚವನ್ನು 8.69 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ. ಇದರಲ್ಲಿ ಕೇಂದ್ರದ ಒಟ್ಟು ಸಹಾಯಧನವು 3.59 ಲಕ್ಷ ಕೋಟಿ ರೂಪಾಯಿಗಳಾಗಿದ್ದು, 2019-20ರಲ್ಲಿ ಅನುಮೋದಿಸಲಾದ 2.08 ಲಕ್ಷ ಕೋಟಿ ರೂಪಾಯಿಗಳಿಂದ 1.51 ಲಕ್ಷ ಕೋಟಿ ರೂಪಾಯಿಗಳಷ್ಟು ಕೇಂದ್ರದ ಪಾಲನ್ನು ಹೆಚ್ಚಿಸಲಾಗಿದೆ.
ಈ ಗುರಿ ಸಾಧನೆಗಾಗಿ “ಸುಜಲಂ ಭಾರತ್” ಎಂಬ ಏಕರೂಪದ ರಾಷ್ಟ್ರೀಯ ಡಿಜಿಟಲ್ ಚೌಕಟ್ಟನ್ನು ರೂಪಿಸಲಾಗುವುದು. ಇದರ ಅಡಿಯಲ್ಲಿ ಪ್ರತಿ ಹಳ್ಳಿಗೂ ವಿಶಿಷ್ಟವಾದ ‘ಸುಜಲ್ ಗಾಂವ್’ ಅಥವಾ ‘ಸೇವಾ ಪ್ರದೇಶದ ಐಡಿ’ (Service Area ID) ನೀಡಲಾಗುವುದು. ಇದು ನೀರಿನ ಮೂಲದಿಂದ ಮನೆಮನೆಯ ನಲ್ಲಿಯ ಸಂಪರ್ಕದವರೆಗೆ ಸಂಪೂರ್ಣ ಪೂರೈಕೆ ವ್ಯವಸ್ಥೆಯನ್ನು ಡಿಜಿಟಲ್ ಆಗಿ ನಕ್ಷೆ ಮಾಡುತ್ತದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, “ಜಲ ಅರ್ಪಣ್” ಮೂಲಕ ಯೋಜನೆಗಳ ಕಾರ್ಯಾರಂಭ ಮತ್ತು ಅಧಿಕೃತ ಹಸ್ತಾಂತರದಲ್ಲಿ ಗ್ರಾಮ ಪಂಚಾಯತ್ ಗಳು ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳನ್ನು (VWSCs) ತೊಡಗಿಸಿಕೊಳ್ಳಲಾಗುವುದು.
ಗ್ರಾಮ ಪಂಚಾಯತಿಯು ತನ್ನ ವ್ಯಾಪ್ತಿಯಲ್ಲಿ ಸೂಕ್ತವಾದ ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರವು ಸ್ಥಾಪಿಸಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಕಾಮಗಾರಿಗಳ ಪೂರ್ಣಗೊಳಿಸುವಿಕೆಯನ್ನು ದೃಢೀಕರಿಸಿ, ತನ್ನನ್ನು “ಹರ್ ಘರ್ ಜಲ್” (ಪ್ರತಿ ಮನೆಗೂ ನೀರು) ಎಂದು ಘೋಷಿಸಿಕೊಳ್ಳಬೇಕು. ಸಮುದಾಯದ ಮಾಲೀಕತ್ವ ಮತ್ತು ಭಾಗವಹಿಸುವಿಕೆಯು ಕಾರ್ಯಾಚರಣೆಯ ದಕ್ಷತೆ ಮತ್ತು ನೀರಿನ ಮೂಲದ ಸುಸ್ಥಿರತೆಗೆ ನಿರ್ಣಾಯಕ ಎಂಬುದನ್ನು ಗುರುತಿಸಿರುವ ಈ ಕಾರ್ಯಕ್ರಮವು “ಜಲ ಉತ್ಸವ”ವನ್ನು ಉತ್ತೇಜಿಸಲಿದೆ. ಇದು ಸ್ಥಳೀಯ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿರುವ, ಸಮುದಾಯದ ನೇತೃತ್ವದ ವಾರ್ಷಿಕ ನಿರ್ವಹಣೆ ಮತ್ತು ಪರಿಶೀಲನಾ ಕಾರ್ಯಕ್ರಮವಾಗಿದ್ದು, ಕುಡಿಯುವ ನೀರಿನ ಸುರಕ್ಷಿತ ಭವಿಷ್ಯಕ್ಕಾಗಿ ಸಾಮೂಹಿಕ ಜವಾಬ್ದಾರಿಯನ್ನು ಬಲಪಡಿಸುತ್ತದೆ.
2019ರಲ್ಲಿ ನಲ್ಲಿ ನೀರು ಸಂಪರ್ಕ ಹೊಂದಿದ್ದ 3.23 ಕೋಟಿ (17%) ಗ್ರಾಮೀಣ ಕುಟುಂಬಗಳ ಆರಂಭಿಕ ಸಂಖ್ಯೆಯಿಂದ, ಇದುವರೆಗೆ ಜಲ ಜೀವನ್ ಮಿಷನ್ (JJM) ಅಡಿಯಲ್ಲಿ 12.56 ಕೋಟಿಗೂ ಹೆಚ್ಚು ಹೆಚ್ಚುವರಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಪ್ರಸ್ತುತ, ದೇಶದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗುರುತಿಸಿರುವ 19.36 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ, ಇಂದಿನವರೆಗೆ ಸುಮಾರು 15.80 ಕೋಟಿ (81.61%) ಕುಟುಂಬಗಳು ನಲ್ಲಿ ನೀರು ಸಂಪರ್ಕ ಹೊಂದಿವೆ ಎಂದು ವರದಿಯಾಗಿದೆ.
ಭೌತಿಕ ಸಾಧನೆಗಳಾಚೆಗೆ, ಜಲ ಜೀವನ್ ಮಿಷನ್ ನ (JJM) ಪ್ರಭಾವಗಳನ್ನು ಹೆಸರಾಂತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಮೌಲ್ಯಮಾಪನ ಮಾಡಿದ್ದಾರೆ. ಎಸ್.ಬಿ.ಐ ರಿಸರ್ಚ್ (SBI Research) ವರದಿಯ ಪ್ರಕಾರ, ಜಲ ಜೀವನ್ ಮಿಷನ್ 9 ಕೋಟಿ ಮಹಿಳೆಯರನ್ನು ನೀರು ತರುವ ಕಷ್ಟದ ಕೆಲಸದಿಂದ ಮುಕ್ತಗೊಳಿಸಿದೆ, ಇದು ಅವರು ಇತರ ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ಪ್ರತಿದಿನ 5.5 ಕೋಟಿ ಗಂಟೆಗಳ ಸಮಯವನ್ನು ಉಳಿಸುವ ಮೂಲಕ ಮಹಿಳೆಯರ ಶ್ರಮದ ಇಳಿಕೆ, 4,00,000 ಅತಿಸಾರ ಸಂಬಂಧಿತ ಸಾವುಗಳ ತಡೆಗಟ್ಟುವಿಕೆ ಮತ್ತು 1.4 ಕೋಟಿ ವಿಕಲಚೇತನ ಹೊಂದಾಣಿಕೆಯ ಜೀವನ ವರ್ಷಗಳ (DALYs) ಉಳಿತಾಯವನ್ನು ಅಂದಾಜಿಸಿದೆ. ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಮೈಕೆಲ್ ಕ್ರೆಮರ್ ಅವರು ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣದಲ್ಲಿ ಶೇ. 30 ರಷ್ಟು ಇಳಿಕೆಯಾಗುವ ಸಾಧ್ಯತೆಯನ್ನು ಅಂದಾಜಿಸಿದ್ದಾರೆ, ಇದು ವಾರ್ಷಿಕವಾಗಿ 1,36,000 ಜೀವಗಳನ್ನು ಉಳಿಸುತ್ತದೆ. ಐಐಎಂ ಬೆಂಗಳೂರು ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ILO), ಈ ಮಿಷನ್ ಮೂಲಕ 59.9 ಲಕ್ಷ ನೇರ ಮತ್ತು 2.2 ಕೋಟಿ ಪರೋಕ್ಷ ಉದ್ಯೋಗ ಸೃಷ್ಟಿಯ ಸಾಧ್ಯತೆಯನ್ನು ಅಂದಾಜಿಸಿದ್ದು, ಇದು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುತ್ತದೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳು ಈ ಯೋಜನೆಯ ಪ್ರಮುಖ ಫಲಾನುಭವಿಗಳಾಗಿ ಹೊರಹೊಮ್ಮಿದ್ದಾರೆ. ಕಡಿಮೆ ಶ್ರಮ, ಸುಧಾರಿತ ಆರೋಗ್ಯ ಮತ್ತು ನೈರ್ಮಲ್ಯ, ಹೆಚ್ಚಿದ ಘನತೆ ಹಾಗೂ ಶಿಕ್ಷಣ ಮತ್ತು ಜೀವನೋಪಾಯದ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶಗಳ ರೂಪದಲ್ಲಿ ಅವರು ಗಣನೀಯ ಪ್ರಯೋಜನಗಳನ್ನು ಪಡೆದಿದ್ದಾರೆ.
ಜೆಜೆಎಂ (JJM) 2.0 ಅಡಿಯಲ್ಲಿ, ಡಿಸೆಂಬರ್ 2028ರ ವೇಳೆಗೆ ದೇಶಾದ್ಯಂತ ಇರುವ ಎಲ್ಲಾ 19.36 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕವನ್ನು ಒದಗಿಸುವ ಮೂಲಕ ಎಲ್ಲಾ ಗ್ರಾಮ ಪಂಚಾಯತ್ ಗಳನ್ನು ‘ಹರ್ ಘರ್ ಜಲ್’ ಎಂದು ಪ್ರಮಾಣೀಕರಿಸಲು ಅನುವು ಮಾಡಿಕೊಡಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ನಿಗದಿತ ಕಾಲಮಿತಿ, ಯೋಜನೆಯ ಸುಸ್ಥಿರತೆ ಮತ್ತು ನಾಗರಿಕ ಕೇಂದ್ರಿತ ಜಲ ಸೇವೆಗಳ ವಿತರಣೆಯನ್ನು ಇದು ಖಚಿತಪಡಿಸುತ್ತದೆ. ಅಲ್ಲದೆ, ಜೆಜೆಎಂ 2.0 ರಚನಾತ್ಮಕ ಸುಧಾರಣೆಗಳ ಮೂಲಕ ಮೂಲಸೌಕರ್ಯ-ಕೇಂದ್ರಿತ ವಿಧಾನದಿಂದ ನಾಗರಿಕ-ಕೇಂದ್ರಿತ ಉಪಯುಕ್ತತೆ ಆಧಾರಿತ ಸೇವಾ ವಿತರಣಾ ವಿಧಾನಕ್ಕೆ ಬದಲಾಗುವ ಮೂಲಕ, 24×7 ಖಾತರಿಯ ಗ್ರಾಮೀಣ ಕುಡಿಯುವ ನೀರು ಪೂರೈಕೆಯೊಂದಿಗೆ ‘ವಿಕಸಿತ ಭಾರತ @2047’ ದೃಷ್ಟಿಕೋನವನ್ನು ಪೋಷಿಸುತ್ತದೆ.
‘ಸಮಗ್ರ ಸರ್ಕಾರಿ ವಿಧಾನ’ದೊಂದಿಗೆ (Whole of Government approach), ಗ್ರಾಮೀಣ ನೀರು ಸರಬರಾಜು ಮೂಲಸೌಕರ್ಯಗಳ ಸುಸ್ಥಿರ ಮತ್ತು ದೀರ್ಘಕಾಲೀನ ಕಾರ್ಯಾಚರಣೆ ಹಾಗೂ ನಿರ್ವಹಣೆ ಮತ್ತು ಯೋಜನೆಯ ಮೂಲದ ಸುಸ್ಥಿರತೆಗಾಗಿ ಭಾರತ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಆಯಕಟ್ಟಿನ ಸಮನ್ವಯವನ್ನು ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಯೋಜಿಸಲಾಗಿದೆ.
*****