ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಇಂದು, ತೆರಿಗೆಗೆ ಸಂಬಂಧಿಸಿದ ಮಾಹಿತಿಯ ವಿನಿಮಯಕ್ಕಾಗಿ ಭಾರತ ಮತ್ತು ಸಮೋವಾ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
ಈ ಒಪ್ಪಂದವು ತೆರಿಗೆಯ ಉದ್ದೇಶಕ್ಕಾಗಿ ಭಾರತ ಮತ್ತು ಸಮೋವಾ ನಡುವೆ ಮಾಹಿತಿಯ ವಿನಿಮಯಕ್ಕೆ ಅವಕಾಶ ನೀಡಲಿದ್ದು, ಇದರಿಂದ ತೆರಿಗೆ ವಂಚನೆ ಮತ್ತು ತೆರಿಗೆ ತಪ್ಪಿಸಿಕೊಳ್ಳುವುದನ್ನು ನಿಗ್ರಹಿಸಲು ಅನುಕೂಲವಾಗಲಿದೆ.
ಇದರಿಂದ ಸದ್ಯಕ್ಕೆ ಯಾವುದೇ ರೀತಿಯ ಆರ್ಥಿಕ ಪರಿಣಾಮ ಇರುವುದಿಲ್ಲ. ಒಂದೊಮ್ಮೆ 500 ಅಮೆರಿಕನ್ ಡಾಲರ್ ಗಿಂತ ಹೆಚ್ಚಿನ ವಿಶೇಷ ವೆಚ್ಚ ತಗುಲಿದಲ್ಲಿ ಅದನ್ನು ಭಾರತ ಭರಿಸಲಿದೆ. ಭಾರತವು ಇದೇ ರೀತಿಯ ನಿಬಂಧನೆಗಳನ್ನು ತೆರಿಗೆ ಮಾಹಿತಿ ವಿನಿಮಯದ ಇತರ ಒಪ್ಪಂದಗಳಲ್ಲೂ ಹೊಂದಿದೆ.
ಒಪ್ಪಂದದ ಮುಖ್ಯಾಂಶಗಳು:
1. ಈ ಒಪ್ಪಂದವು ಭಾರತ ಮತ್ತು ಸಮಾವೋದ ಸಂಬಂಧಿತ ಪ್ರಾಧಿಕಾರಗಳಿಗೆ ಈ ಒಪ್ಪಂದದ ವ್ಯಾಪ್ತಿಗೆ ಬರುವ ತೆರಿಗೆಗಳಿಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ದೇಶೀಯ ಕಾನೂನು ಜಾರಿಗೆ ಮತ್ತು ಆಡಳಿತಕ್ಕೆ ಬಲವಂತವಾಗಿ ಸೂಕ್ತವೆನಿಸುವ ಮಾಹಿತಿಯ ವಿನಿಮಯದ ಮೂಲಕ ನೆರವಾಗಲು ಅವಕಾಶ ನೀಡುತ್ತದೆ.
2. ಈ ಒಪ್ಪಂದದ ಅಡಿಯಲ್ಲಿ ಪಡೆಯಲಾಗುವ ಮಾಹಿತಿಯನ್ನು ಗೌಪ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಮಾಹಿತಿಯನ್ನು ನಿರ್ಧರಣೆ, ಸಂಗ್ರಹಣೆ, ಜಾರಿ, ಕಾನೂನು ಕ್ರಮ ಜರುಗಿಸಲು ಅಥವಾ ಈ ಒಪ್ಪಂದದ ಅಡಿ ಬರುವ ತೆರಿಗೆಗೆ ಸಂಬಂಧಿಸಿದ ಮನವಿಗಳ ನಿರ್ಧರಣೆಗಾಗಿ ಸಂಬಂಧಿಸಿದ ವ್ಯಕ್ತಿ ಅಥವಾ ಪ್ರಾಧಿಕಾರ (ಕೋರ್ಟ್ ಅಥವಾ ಆಡಳಿತಾತ್ಮಕ ಕಾಯಗಳು ಸೇರಿದಂತೆ)ಗಳಿಗೆ ಮಾತ್ರವೇ ಬಹಿರಂಗಪಡಿಸಬಹುದಾಗಿದೆ. ಮಾಹಿತಿ ಒದಗಿಸುವ ದೇಶದ ಲಿಖಿತ ಪೂರ್ವಾನುಮತಿಯೊಂದಿಗೆ ಯಾವುದೇ ಇತರ ವ್ಯಕ್ತಿ ಅಥವಾ ಕಾಯ ಅಥವಾ ಪ್ರಾಧಿಕಾರ ಅಥವಾ ನ್ಯಾಯಾಡಳಿತಕ್ಕೆ ಇದನ್ನು ಬಹಿರಂಗ ಮಾಡಬಹುದಾಗಿರುತ್ತದೆ.
3. ಈ ಒಪ್ಪಂದವು ಯಾವುದೇ ರೀತಿಯ ಭಿನ್ನಾಭಿಪ್ರಾಯ ನಿವಾರಣೆಗೆ ಅಥವಾ ಒಪ್ಪಂದದ ಅಡಿ ಒಪ್ಪಿಕೊಂಡ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಂದದ ಪ್ರಕ್ರಿಯೆಗೂ ಅವಕಾಶ ನೀಡುತ್ತದೆ.
4. ಒಪ್ಪಂದದ ಜಾರಿ ಕುರಿತಂತೆ ಎರಡೂ ರಾಷ್ಟ್ರಗಳಲ್ಲಿನ ಕಾನೂನಿನ ಅಗತ್ಯಗಳ ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ ಅಧಿಸೂಚನೆಯಾದ ದಿನಾಂಕದಿಂದ ಒಪ್ಪಂದವು ಜಾರಿಗೆ ಬರುತ್ತದೆ.
ಹಿನ್ನೆಲೆ:
ಆದಾಯ ತೆರಿಗೆ ಕಾಯಿದೆ 1961ರ ಅಡಿಯಲ್ಲಿ ವಿಧಿಸಬಹುದಾದ ತೆರಿಗೆಯ ವಂಚನೆ ಅಥವಾ ತೆರಿಗೆ ತಪ್ಪಿಸಿಕೊಳ್ಳುವುದನ್ನು ತಡೆಯಲು ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 90ರ ಅಡಿಯಲ್ಲಿ ವಿದೇಶಗಳೊಂದಿಗೆ ಅಥವಾ ನಿರ್ದಿಷ್ಟ ಪ್ರಾಂತ್ಯದೊಂದಿಗೆ ಮಾಹಿತಿಯ ವಿನಿಮಯಕ್ಕಾಗಿ ಒಪ್ಪಂದ ಮಾಡಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ತೆರಿಗೆಗೆ ಸಂಬಂಧಿಸಿದ ಮಾಹಿತಿಯ ವಿನಿಮಯ ಕುರಿತಂತೆ ಒಪ್ಪಂದ ಮಾಡಿಕೊಳ್ಳಲು ಭಾರತ ಮತ್ತು ಸಮೋವಾ ನಡುವೆ 2016ರ ಜೂನ್ ನಲ್ಲಿ ಮಾತುಕತೆ ಪೂರ್ಣಗೊಂಡಿತ್ತು ಮತ್ತು ಎರಡೂ ರಾಷ್ಟ್ರಗಳು ಒಪ್ಪಂದದ ಪಠ್ಯಕ್ಕೆ ತಮ್ಮ ಸಮ್ಮತಿ ಸೂಚಿಸಿದ್ದವು.
AKT/VBA/SH