ನಮಸ್ಕಾರ,
ಎಫ್ಐಸಿಸಿಐ ಅಧ್ಯಕ್ಷರು, ನನ್ನ ಸಹೋದರರಾದ ಶ್ರೀ ಅನಂತ್ ಗೋಯೆಂಕಾ ಜಿ, ಎಫ್ಐಸಿಸಿಐಯ ಎಲ್ಲಾ ಸದಸ್ಯರೆ, ಉದ್ಯಮ ನಾಯಕರೆ, ನಾವೀನ್ಯಕಾರರೆ ಹಾಗೂ ಮಹಿಳೆಯರೇ ಮತ್ತು ಮಹನೀಯರೆ,
ಹಿಂದೆ ಹಲವು ಸಂದರ್ಭಗಳಲ್ಲಿ ಎಫ್ಐಸಿಸಿಐಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮತ್ತು ಅವುಗಳ ಭಾಗವಾಗುವ ಅವಕಾಶ ನನಗೆ ಸಿಕ್ಕಿದೆ. ಆದರೆ ಇಂದಿನ ಸಂದರ್ಭವು ಸ್ವಲ್ಪ ವಿಶೇಷವಾಗಿದೆ. ಫಿಕ್ಕಿ ತನ್ನ ಸಂಸ್ಥಾಪನೆಯ 100 ವರ್ಷಗಳನ್ನು ಪೂರೈಸುತ್ತಿದೆ. ಒಂದು ಸಂಸ್ಥೆಯು ಸತತ 100 ವರ್ಷಗಳ ಕಾಲ ಜಾಗೃತವಾಗಿ ಮತ್ತು ಸಕ್ರಿಯವಾಗಿರುವುದು, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಮುನ್ನಡೆಯುತ್ತಿರುವುದು ಹಾಗೂ ದೇಶದ ಆರ್ಥಿಕ ಪಯಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿರುವುದು ಅತ್ಯಂತ ಮಹತ್ವದ ಸಾಧನೆಯಾಗಿದೆ. ಈ ಸಂದರ್ಭದಲ್ಲಿ, ಈ ಸಂಸ್ಥೆಯೊಂದಿಗೆ ಹಿಂದೆ ಮತ್ತು ಪ್ರಸ್ತುತ ಸಂಬಂಧ ಹೊಂದಿರುವ ಎಲ್ಲರಿಗೂ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ.
ಸ್ನೇಹಿತರೆ,
ಕಳೆದ 100 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಅನೇಕ ಹಂತಗಳನ್ನು ಕಂಡಿದೆ. ನಾವು ‘ಲೈಸೆನ್ಸ್-ಪರ್ಮಿಟ್-ಕೋಟಾ ರಾಜ್’ ಅನ್ನು ನೋಡಿದ್ದೇವೆ, ರಾಷ್ಟ್ರೀಕರಣದ ವಿಫಲ ಪ್ರಯೋಗವನ್ನು ಕಂಡಿದ್ದೇವೆ. 21ನೇ ಶತಮಾನದಲ್ಲಿ ಒಂದು ಕಾಲಘಟ್ಟವಿತ್ತು, ಆಗ ಭಾರತದ ಆರ್ಥಿಕತೆಯನ್ನು ಅತ್ಯಂತ ದುರ್ಬಲವಾದ 5 ಆರ್ಥಿಕತೆಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಆದರೆ ಕಳೆದ 12 ವರ್ಷಗಳಲ್ಲಿ ಭಾರತದ ಜನರು ಅಂದರೆ ನೀವೆಲ್ಲರೂ ಅತ್ಯಂತ ಕಠಿಣ ಪರಿಶ್ರಮ ಪಟ್ಟಿದ್ದೀರಿ. ನಮ್ಮ ಯುವ ಜನರು, ರೈತರು, ಕಾರ್ಮಿಕ ಸಹೋದರ ಸಹೋದರಿಯರು ಮತ್ತು ಕೈಗಾರಿಕಾ ವಲಯದ ನೀವೆಲ್ಲರೂ ಸೇರಿ ಈ ಪರಿಸ್ಥಿತಿಯನ್ನು ಬದಲಾಯಿಸಿದ್ದೀರಿ. ಇಂದು ಭಾರತವು ಅತ್ಯಂತ ವೇಗವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿದೆ. ಅದೇ ಸಮಯದಲ್ಲಿ, ಜನರು ಬಡತನದಿಂದ ಹೊರಬರುತ್ತಿರುವ ವೇಗವೂ ಅಭೂತಪೂರ್ವವಾಗಿದೆ.
ಸ್ನೇಹಿತರೆ,
ವಿಶ್ವ ಬ್ಯಾಂಕ್ನ ಇತ್ತೀಚಿನ ವರದಿಯು ನಮ್ಮೆಲ್ಲರಿಗೂ ಹೆಮ್ಮೆ ತರುವಂತಹ ವಿಷಯವಾಗಿದೆ. ಕೇವಲ 12-13 ವರ್ಷಗಳಲ್ಲಿ 50 ಕೋಟಿ ಭಾರತೀಯರು ಬಡತನ ಜಯಿಸಿದ್ದಾರೆ ಎಂದು ಆ ವರದಿ ತಿಳಿಸಿದೆ.
ಸ್ನೇಹಿತರೆ,
1970ರ ದಶಕದಲ್ಲಿ ಬಡತನ ನಿರ್ಮೂಲನೆಯ ಘೋಷಣೆ ನೀಡಿದಾಗ, ದೇಶದ ಜನಸಂಖ್ಯೆಯೇ ಸುಮಾರು 50 ಕೋಟಿಯಷ್ಟಿತ್ತು. ಆಗಲೇ ಬಡತನ ನಿರ್ಮೂಲನೆ ಮಾಡಬಹುದಿತ್ತು. ಆದರೆ, ಆ ಕಾಲದ ನೀತಿಗಳಲ್ಲಿ ಲೋಪದೋಷಗಳಿದ್ದವು, ದುರದೃಷ್ಟವಶಾತ್ ಉದ್ದೇಶದಲ್ಲೂ ಕೊರತೆಗಳಿದ್ದವು ಎಂಬುದಕ್ಕೆ ‘ಫಿಕ್ಕಿ’ ಕೂಡ ಸಾಕ್ಷಿಯಾಗಿದೆ. ನಾನು ಆ ಬಗ್ಗೆ ವಿವರವಾಗಿ ಮಾತನಾಡುವುದಿಲ್ಲ.
ಆದರೆ ಸ್ನೇಹಿತರೆ,
ಸಮರ್ಪಕ ನೀತಿಗಳೊಂದಿಗೆ ಕೆಲಸ ಮಾಡಿದಾಗ, ಸರ್ಕಾರವು ಸರಿಯಾದ ಉದ್ದೇಶದೊಂದಿಗೆ ಮುನ್ನಡೆದಾಗ, ಕೇವಲ 12-13 ವರ್ಷಗಳಲ್ಲಿ 50 ಕೋಟಿ ಬಡವರು ಬಡತನದಿಂದ ಹೊರಬಂದರು ಎಂಬುದಕ್ಕೂ ‘ಎಫ್ಐಸಿಸಿಐ’ ಸಾಕ್ಷಿಯಾಗಿದೆ. ಭಾರತವು ಇಂದು ಯಾವ ಮಟ್ಟದಲ್ಲಿ ಸಾಗುತ್ತಿದೆಯೋ ಮತ್ತು ಯಾವ ಹಾದಿಯಲ್ಲಿ ಪ್ರಗತಿ ಸಾಧಿಸುತ್ತಿದೆಯೋ, ಅದು ಸರಿಯಾದ ಹಾದಿಯಾಗಿದೆ, ನಿಖರವಾಗಿದೆ ಮತ್ತು ರಾಷ್ಟ್ರದ ಯಶಸ್ಸಿಗೆ ಭರವಸೆ ನೀಡುತ್ತದೆ ಎಂಬುದನ್ನು ಇದು ತೋರಿಸುತ್ತಿದೆ.
ಸ್ನೇಹಿತರೆ,
ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಪ್ರಮುಖ ಸಂಸ್ಥೆಗಳ ಅಂದಾಜಿನ ಪ್ರಕಾರ, ಭಾರತವು ಸುಮಾರು ಶೇಕಡ 7ರ ದರದಲ್ಲಿ ಆರ್ಥಿಕ ಬೆಳವಣಿಗೆ ಮುಂದುವರಿಸಲಿದೆ. ಅಕ್ಟೋಬರ್ ತಿಂಗಳಲ್ಲಿ ಮತ್ತೊಂದು ಅಂಕಿಅಂಶ ಎಲ್ಲರ ಗಮನ ಸೆಳೆಯಿತು. ಅಕ್ಟೋಬರ್ ತಿಂಗಳಲ್ಲಿ, ಭಾರತದ ಸರಕುಗಳ ರಫ್ತು ಸುಮಾರು 50 ಶತಕೋಟಿ ಡಾಲರ್ ತಲುಪಿದೆ. ಇದು ಭಾರತದ ಇತಿಹಾಸದಲ್ಲೇ ಅತ್ಯಧಿಕ ಮಾಸಿಕ ಸರಕು ರಫ್ತು ಅಂಕಿಅಂಶವಾಗಿದೆ. ನಾನು ಇಲ್ಲಿ ನಿಮ್ಮನ್ನು ಶ್ಲಾಘಿಸುತ್ತಿದ್ದೇನೆ, ಆದರೆ ನೀವು ಸುಮ್ಮನೆ ಕುಳಿತಿದ್ದೀರಿ! ಭಾರತದ ಸಾಧನೆ ಎಷ್ಟರ ಮಟ್ಟಿಗೆ ಇದೆಯೆಂದರೆ, ಮೂಡೀಸ್ ರೇಟಿಂಗ್ಸ್, ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್, ಫಿಚ್ ರೇಟಿಂಗ್ಸ್, ವಿಶ್ವ ಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ನಂತಹ ಸಂಸ್ಥೆಗಳೆಲ್ಲವೂ ನಮ್ಮ ಬೆಳವಣಿಗೆಯ ಮುನ್ನೋಟಗಳನ್ನು ಮೇಲ್ಮುಖವಾಗಿ ಪರಿಷ್ಕರಿಸುತ್ತಿವೆ.
ಸ್ನೇಹಿತರೆ,
ನಮ್ಮ ಶಾಸ್ತ್ರಗಳು ಸಾವಿರಾರು ವರ್ಷಗಳ ಹಿಂದೆಯೇ ನಮಗೆ ಒಂದು ಅತ್ಯಂತ ಮಹತ್ವದ ಸಂದೇಶ ನೀಡಿವೆ: “ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್”(ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು, ತನ್ನನ್ನು ತಾನೇ ಅಧಃಪತನಕ್ಕೆ ತಳ್ಳಿಕೊಳ್ಳಬಾರದು). ಅಂದರೆ, ನಾವು ನಮ್ಮನ್ನು ನಾವೇ ಉನ್ನತೀಕರಿಸಿಕೊಳ್ಳಬೇಕು, ನಮ್ಮ ಸಾಮರ್ಥ್ಯಗಳನ್ನು ಗುರುತಿಸಿಕೊಳ್ಳಬೇಕು, ನಮ್ಮ ನ್ಯೂನತೆಗಳಿಂದ ಪಾಠ ಕಲಿಯಬೇಕು, ನಿರಂತರವಾಗಿ ಉತ್ತಮರಾಗಲು ಶ್ರಮಿಸಬೇಕು. ಮುಂದಿನ ದೊಡ್ಡ ಹೆಜ್ಜೆ ಪ್ರಾಮಾಣಿಕ ಆತ್ಮಾವಲೋಕನದಿಂದಲೇ ಆರಂಭವಾಗುತ್ತದೆ. ನಾವು ಮುನ್ನಡೆಯಬೇಕೆಂದರೆ, ಕಾಲಕಾಲಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯಗತ್ಯ. ಇದು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ, ಕೈಗಾರಿಕಾ ವಲಯಕ್ಕೂ, ಇಡೀ ರಾಷ್ಟ್ರಕ್ಕೂ ಅನ್ವಯಿಸುತ್ತದೆ. ತನ್ನ 100 ವರ್ಷಗಳ ಪಯಣದಲ್ಲಿ, ಭಾರತೀಯ ಕೈಗಾರಿಕಾ ವಲಯವು ಸಾಕಷ್ಟು ಸಾಧನೆ ಮಾಡಿರುವುದನ್ನು ಫಿಕ್ಕಿ ಕಂಡಿದೆ. ಈಗ ಮುಂದಿನ 20 ವರ್ಷಗಳಲ್ಲಿ ಭಾರತೀಯ ಕೈಗಾರಿಕಾ ವಲಯವು ಏನನ್ನು ಸಾಧಿಸಬಲ್ಲದು ಎಂಬುದನ್ನು ನಿರ್ಧರಿಸುವ ಸಮಯ ಬಂದಿದೆ. ‘ವಿಕಸಿತ ಭಾರತ’ ಮತ್ತು ‘ಆತ್ಮನಿರ್ಭರ ಭಾರತ’ದ ಪಯಣದಲ್ಲಿ ನಿಮ್ಮ ಕೊಡುಗೆಯನ್ನು ನೀವು ಹೇಗೆ ಹೆಚ್ಚಿಸಿಕೊಳ್ಳಬಹುದು? ಈಗಾಗಲೇ ನೆಲೆ ಕಂಡುಕೊಂಡಿರುವ ವ್ಯವಹಾರಗಳಲ್ಲಿ ಮುಂದುವರಿಯುವುದು ಸುಲಭವಾಗಬಹುದು, ಅವು ಅಲ್ಪಾವಧಿಯ ಲಾಭಗಳನ್ನೂ ನೀಡಬಹುದು. ಆದರೆ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಭವಿಷ್ಯದಲ್ಲಿ ಉದ್ಭವಿಸಲಿರುವ ಬೇಡಿಕೆಗಳಿಗೆ ಕೈಗಾರಿಕಾ ವಲಯವು ಸಿದ್ಧವಾಗಬೇಕಿದೆ. ಸಂಪನ್ಮೂಲಗಳನ್ನು ಅಸ್ತ್ರಗಳನ್ನಾಗಿ ಬಳಸಲಾಗುತ್ತಿರುವ ಇಂದಿನ ಯುಗದಲ್ಲಿ, ರಾಷ್ಟ್ರದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಅಗತ್ಯವಾದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ, ನನ್ನದೊಂದು ವಿನಂತಿ. ಮುಂದಿನ 20 ವರ್ಷಗಳಲ್ಲಿ ನೀವು ಕೈಗೊಳ್ಳುವ ಪ್ರತಿಯೊಂದು ದೀರ್ಘಕಾಲೀನ ಹೂಡಿಕೆಯ ನಿರ್ಧಾರದಲ್ಲೂ, ‘ಭಾರತವೇ ಮೊದಲು’ ಎಂಬುದನ್ನು ನಿಮ್ಮ ಆಧಾರಸ್ತಂಭವನ್ನಾಗಿ ಮಾಡಿಕೊಳ್ಳಿ. ಇದು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವುದಲ್ಲದೆ, ನಿಮ್ಮ ವ್ಯವಹಾರಗಳ ಬೆಳವಣಿಗೆಗೂ ಹೊಸ ಅವಕಾಶಗಳನ್ನು ತೆರೆದುಕೊಡುತ್ತದೆ.
ಸ್ನೇಹಿತರೆ,
ನೀವು ಈಗಷ್ಟೇ ಒಂದು ಸಾಕ್ಷ್ಯಚಿತ್ರ ಪ್ರದರ್ಶಿಸಿದಿರಿ. ಇದು ನಮ್ಮ ತಲೆಯನ್ನು ಹೆಮ್ಮೆಯಿಂದ ಎತ್ತಿ ಹಿಡಿಯುವಂತೆ ಮಾಡಬೇಕೇ ಅಥವಾ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಬೇಕೇ ಎಂಬುದನ್ನು ನೀವೇ ನಿರ್ಧರಿಸಬೇಕು. ಸದ್ಯಕ್ಕೆ ನೀವು ಚಪ್ಪಾಳೆ ತಟ್ಟುವುದಿಲ್ಲ ಎಂಬುದು ನನಗೆ ಗೊತ್ತು. ಇದರ ಬಗ್ಗೆ ಯೋಚಿಸಿ. 100 ವರ್ಷಗಳು ಕಳೆದಿವೆ. 1930ರಲ್ಲಿ ಗಾಂಧೀಜಿ ಅವರು ನಿಮ್ಮ ಬಳಿ ಬಂದು ಇದೇ ಮಾತು ಹೇಳಿದ್ದರು, ಇಷ್ಟು ವರ್ಷಗಳ ನಂತರವೂ ನಾನು ಅದೇ ಮಾತನ್ನು ಹೇಳಬೇಕಾದ ಪರಿಸ್ಥಿತಿ ಇದೆ. ಇದು ನಿಮ್ಮ ಯಶಸ್ಸೇ ಅಥವಾ ವೈಫಲ್ಯವೇ? ನನ್ನ ಮಾತುಗಳನ್ನು ಕೇಳದಿದ್ದರೂ ಪರವಾಗಿಲ್ಲ, ಕನಿಷ್ಠ ಗಾಂಧೀಜಿ ಅವರ ಮಾತುಗಳನ್ನಾದರೂ ಆಲಿಸಿ. ಅವರು ‘ಸ್ವದೇಶಿ’ ಬಗ್ಗೆ ಮಾತನಾಡಿದ್ದರು. ಇಂದು ನಾವು ‘ಆತ್ಮನಿರ್ಭರ ಭಾರತ’ ಎಂದು ಕರೆಯುತ್ತಿರುವ ಪರಿಕಲ್ಪನೆಯ ಬಗ್ಗೆಯೇ ಅವರೂ ಮಾತನಾಡಿದ್ದರು. ಆದರೂ, ನೀವು 100 ವರ್ಷಗಳನ್ನು ಪೂರೈಸಿದ್ದೀರಿ, ಆದರೆ ಪರಿಸ್ಥಿತಿ ಮಾತ್ರ ಇನ್ನೂ ಅಲ್ಲೇ ಇದೆ! ಆದ್ದರಿಂದ, ನೀವು ಮಾಡಿದ ಸಾಕ್ಷ್ಯಚಿತ್ರದಲ್ಲಿ ನನ್ನ ಈ 2 ವಾಕ್ಯಗಳನ್ನು ಸೇರಿಸಿ, ಅದನ್ನು ಪ್ರತಿ ಮನೆಗೆ ಕೊಂಡೊಯ್ಯಿರಿ ಎಂದು ನಾನು ಹೇಳುತ್ತೇನೆ.
ಸ್ನೇಹಿತರೆ,
ನಾನು ನಿಮಗೆ ಔಷಧ ಉದ್ಯಮದ ಉದಾಹರಣೆ ನೀಡುತ್ತೇನೆ. ಎಲ್ಲರೂ ಇಲ್ಲಿ ಕುಳಿತಿದ್ದಾರೆ, ಇದನ್ನು ತಿಳಿದಿದ್ದಾರೆ. ಭಾರತವನ್ನು ವಿಶ್ವದ ಔಷಧಾಲಯ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಭಾರತವು ಪ್ರತಿ ವರ್ಷ ಶತಕೋಟಿ ಡಾಲರ್ ಮೌಲ್ಯದ ಎಪಿಐಗಳು, ಬೃಹತ್ ಔಷಧಗಳು ಮತ್ತು ಔಷಧ ಮಧ್ಯವರ್ತಿಗಳನ್ನು ಆಮದು ಮಾಡಿಕೊಳ್ಳುತ್ತದೆ. ನಾವು ಇನ್ನೂ ಆಮದನ್ನು ಅವಲಂಬಿಸಿರುವ ನೂರಾರು ವರ್ಗಗಳಿವೆ. ನಮ್ಮ ಔಷಧ ಉದ್ಯಮವು ಭಾರತದಲ್ಲಿ ಯಾವ ಪದಾರ್ಥಗಳನ್ನು ಉತ್ಪಾದಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಇತರೆ ದೇಶಗಳೊಂದಿಗೆ ಸ್ಪರ್ಧಾತ್ಮಕವಾಗಲು ಯಾವ ವಲಯಗಳಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ದೊಡ್ಡ ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಮಾಡಬಹುದು? ನಾವು ಈಗಾಗಲೇ ಸಿದ್ಧಪಡಿಸಿದ ಔಷಧಿಗಳಲ್ಲಿ ಬಲವನ್ನು ಹೊಂದಿದ್ದೇವೆ. ಈಗ ನಾವು ಪದಾರ್ಥಗಳಲ್ಲಿಯೂ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.
ಸ್ನೇಹಿತರೆ,
ಕಬ್ಬಿಣ ಮತ್ತು ಉಕ್ಕಿನಲ್ಲಿ ಇದೇ ರೀತಿಯ ಸವಾಲುಗಳಿವೆ. ಭಾರತವು ಸಾವಿರಾರು ಕೋಟಿ ರೂಪಾಯಿಗಳ ಕಬ್ಬಿಣದ ಅದಿರು ರಫ್ತು ಮಾಡುತ್ತದೆ, ಆದರೂ ನಾವು ಸಿದ್ಧಪಡಿಸಿದ ಉಕ್ಕನ್ನು ಸಹ ಆಮದು ಮಾಡಿಕೊಳ್ಳುತ್ತೇವೆ. ನಮ್ಮ ಉದ್ಯಮವು ನಾವು ಯಾವ ದರ್ಜೆಯ ಉಕ್ಕಿನ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂಬುದರ ಕುರಿತು ಯೋಚಿಸಬೇಕು, ಇದರಿಂದ ನಾವು ಅವುಗಳನ್ನು ನಾವೇ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಬಹುದು. ಅಲ್ಯೂಮಿನಿಯಂನಲ್ಲಿ ಇದೇ ರೀತಿಯ ಅವಕಾಶಗಳಿವೆ. ಭಾರತವು ಸಾವಿರಾರು ಟನ್ಗಳಲ್ಲಿ ಅಳೆಯುವ ಬಾಕ್ಸೈಟ್ನ ಬೃಹತ್ ನಿಕ್ಷೇಪಗಳನ್ನು ಹೊಂದಿದೆ. ಆದರೂ ನಾವು ವಿಶೇಷ ಅಲ್ಯೂಮಿನಿಯಂ ಮಿಶ್ರಲೋಹಗಳು ಮತ್ತು ಇತರೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಈ ಉತ್ಪನ್ನಗಳನ್ನು ದೇಶೀಯವಾಗಿ ತಯಾರಿಸುವ ಸಾಮರ್ಥ್ಯವನ್ನು ನಾವು ಅಭಿವೃದ್ಧಿಪಡಿಸಬೇಕು. ಭಾರತದಲ್ಲಿ ಹೆಚ್ಚಿನ ಮೌಲ್ಯವರ್ಧನೆ ನಡೆಯುವಂತೆ ಮಾಡಲು ನಮಗೆ ಖನಿಜ ಮೌಲ್ಯ ಸರಪಳಿಯಲ್ಲಿ ಪರಿಣತಿಯೂ ಬೇಕು. ಹೇಳಿ, ಗೋಧಿಯನ್ನು ರಫ್ತು ಮಾಡುವ ಮತ್ತು ಬ್ರೆಡ್ ಆಮದು ಮಾಡಿಕೊಳ್ಳುವ ದೇಶ ಯಾವುದು? ಆ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳಿ.
ಸ್ನೇಹಿತರೆ,
ನಾನು ನಿಮಗೆ ಇನ್ನೊಂದು ಅಂಕಿಅಂಶ ನೀಡುತ್ತೇನೆ. ಭಾರತವು ಬೃಹತ್ ದೇಶ, ಆದರೆ ಜಾಗತಿಕ ಕೃಷಿ ರಫ್ತಿನಲ್ಲಿ ನಮ್ಮ ಪಾಲು ಕೇವಲ ಎರಡರಿಂದ ಎರಡೂವರೆ ಪ್ರತಿಶತದಷ್ಟಿದೆ. ನಮ್ಮ ಕಾರ್ಪೊರೇಟ್ ಜಗತ್ತು ಕೃಷಿಯಲ್ಲಿ ಹೂಡಿಕೆ ಮಾಡಲು ಹೆದರುತ್ತದೆ, ಅದರಿಂದ ದೂರವಿದೆ.
ಸ್ನೇಹಿತರೆ,
ನಾವು ಒಟ್ಟಾಗಿ ಈ ಪರಿಸ್ಥಿತಿ ಬದಲಾಯಿಸಬೇಕು. ಇದನ್ನು ಮೌಲ್ಯವರ್ಧನೆ ಮತ್ತು ಆಹಾರ ಸಂಸ್ಕರಣಾ ಉದ್ಯಮಕ್ಕೆ ಸಂಬಂಧಿಸಿದ ಒಂದು ದೊಡ್ಡ ಅವಕಾಶವೆಂದು ಪರಿಗಣಿಸಬೇಕು. ಕಳೆದ 12 ವರ್ಷಗಳಲ್ಲಿ, ಕೃಷಿ ಆಹಾರ ರಫ್ತಿನಲ್ಲಿ ಸಂಸ್ಕರಿಸಿದ ಆಹಾರದ ಪಾಲು ಶೇಕಡ 13 ರಿಂದ ಶೇಕಡ 20ಕ್ಕಿಂತ ಹೆಚ್ಚು ಏರಿಕೆಯಾಗಿದೆ. ನಾವು ಏನು ಉತ್ಪಾದಿಸುತ್ತಿದ್ದೇವೆ ಮತ್ತು ಜಗತ್ತಿಗೆ ಏನು ಬೇಕು ಎಂಬುದನ್ನು ಗುರುತಿಸಿ, ಭವಿಷ್ಯಕ್ಕಾಗಿ ಒಂದು ಕಾರ್ಯತಂತ್ರ ಮತ್ತು ಸಮಗ್ರ ಯೋಜನೆ ರೂಪಿಸಲು ಉದ್ಯಮ ವಲಯವು ಇಂದು ಒಗ್ಗೂಡುವುದು ಅಗತ್ಯವಾಗಿದೆ. ಭಾರತದ ಕೃಷಿ ವಲಯದಲ್ಲಿ ಹೂಡಿಕೆ ಹೆಚ್ಚಿಸುವಂತೆ ನಾನು ನಮ್ಮ ಉದ್ಯಮಗಳಿಗೆ ಕರೆ ನೀಡುತ್ತೇನೆ. ನಿರ್ದಿಷ್ಟ ವಿದೇಶಿ ಮಾರುಕಟ್ಟೆಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವಾಸಾರ್ಹ ಸಂಗ್ರಹಣಾ ವ್ಯವಸ್ಥೆಗಳನ್ನು ರಚಿಸಿ ಮತ್ತು ಅಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ. ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳು ಭಾರತದ ಗುರುತಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ.
ಸ್ನೇಹಿತರೆ,
ಈ ವಲಯಗಳಂತೆಯೇ, ದೈನಂದಿನ ಬಳಕೆಯ ಎಂಜಿನಿಯರಿಂಗ್ ಉತ್ಪನ್ನಗಳ ಕ್ಷೇತ್ರದಲ್ಲೂ ಭಾರತಕ್ಕೆ ಅಪಾರ ಅವಕಾಶಗಳಿವೆ. ಕೈ ಉಪಕರಣಗಳು ಮತ್ತು ವಿದ್ಯುಚ್ಛಾಲಿತ ಉಪಕರಣಗಳ ಜಾಗತಿಕ ರಫ್ತಿನಲ್ಲಿ ಭಾರತದ ಪಾಲು ಇನ್ನೂ ಬಹಳ ಕಡಿಮೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿ ಹೆಚ್ಚಿಸಲು ನಾವು ಈ ವಲಯದಲ್ಲಿ ಕೆಲಸ ಮಾಡಬಹುದು. ನಮ್ಮ ದೊಡ್ಡ ಕಂಪನಿಗಳು ಸಣ್ಣ ಕಂಪನಿಗಳಿಗೆ ಅಗತ್ಯ ಗುಣಮಟ್ಟ ಮತ್ತು ಪ್ರಮಾಣದ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದು. ಯಂತ್ರೋಪಕರಣಗಳ ತಯಾರಿಕೆಯು ನಮಗಾಗಿ ಕಾಯುತ್ತಿರುವ ಮತ್ತೊಂದು ವಲಯವಾಗಿದೆ. ಅಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಬಹುದು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ, ವಿಶೇಷವಾಗಿ ‘ಗ್ಲೋಬಲ್ ಸೌತ್’ ಅಥವಾ ಜಾಗತಿಕ ದಕ್ಷಿಣ ರಾಷ್ಟ್ರಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ನಾವು ಒಟ್ಟಾಗಿ ತಯಾರಿಸಬಹುದು. ನಮ್ಮ ಉದ್ಯಮ ವಲಯವು ಪ್ಯಾಕೇಜಿಂಗ್ ಉಪಕರಣಗಳು, ನೀರಾವರಿ ವ್ಯವಸ್ಥೆಗಳು ಮತ್ತು ಕಾರ್ಖಾನೆಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಮಾರುಕಟ್ಟೆಗಳನ್ನು ಅನ್ವೇಷಿಸಬಹುದು, ಈ ವಲಯಗಳಲ್ಲಿ ಇನ್ನೂ ಏನೆಲ್ಲಾ ಮಾಡಬಹುದು ಎಂಬುದನ್ನು ಮೌಲ್ಯಮಾಪನ ಮಾಡಬಹುದು.
ಸ್ನೇಹಿತರೆ,
ರೈತರು, ಸಣ್ಣ ಉದ್ಯಮಿಗಳು, ಕೈಗಾರಿಕೆಗಳು, ಸಂಪತ್ತು ಸೃಷ್ಟಿಸುವವರು ಮತ್ತು ತೆರಿಗೆ ಪಾವತಿದಾರರನ್ನು ಗೌರವಿಸದೆ ಯಾವುದೇ ದೇಶವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಹಗಲಿರುಳು ಅವರನ್ನು ಅವಮಾನಿಸುವುದರಿಂದ ರಾಷ್ಟ್ರವು ಪ್ರಗತಿ ಹೊಂದುವುದಿಲ್ಲ. ನಿಮ್ಮಲ್ಲಿ ಕೆಲವರಿಗೆ ಇದು ತಿಳಿದಿರಬಹುದು, ಬಹುಶಃ ಪಂಕಜ್ ಭಾಯ್ ಅವರಿಗೆ ತಿಳಿದಿರಬಹುದು. ಒಮ್ಮೆ ಗುಜರಾತ್ನಲ್ಲಿ ಆದಾಯ ತೆರಿಗೆ ಇಲಾಖೆಯ ಒಂದು ದೊಡ್ಡ ಸಭೆ ನಡೆದಿತ್ತು. ಆಗಷ್ಟೇ ನಾನು ಮುಖ್ಯಮಂತ್ರಿಯಾಗಿದ್ದೆ, ಆಡಳಿತದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಇದು ಸುಮಾರು 2001-02ರ ಸಮಯ, ಅಂದರೆ ಸುಮಾರು 25 ವರ್ಷಗಳ ಹಿಂದಿನ ಮಾತು. ಅಲ್ಲಿ ಆದಾಯ ತೆರಿಗೆ ಇಲಾಖೆಯ ಎಲ್ಲಾ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ನಾನು ಅವರನ್ನು ಕೇಳಿದೆ, “ಎಲ್ಲರನ್ನೂ ಕಳ್ಳರಂತೆ ಕಾಣುವುದನ್ನು ನೀವು ಯಾವಾಗ ನಿಲ್ಲಿಸುತ್ತೀರಿ? ಇದು ಯಾವ ರೀತಿಯ ಧೋರಣೆ?” ಅವರೆಲ್ಲರೂ ಕೂಡ ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ದೇಶ ಸೇವೆ ಮಾಡುವ ಜವಾಬ್ದಾರಿ ನಮ್ಮದು ಮಾತ್ರವೇ? ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಾನೆ. ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರು. ಕೈಗಾರಿಕಾ ವಲಯದ ಬಗ್ಗೆ ಹೇಳುವುದಾದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ವ್ಯಾಪಾರ ಸುಲಭವಾಗಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿದೆ. 2014ರಲ್ಲಿ, ಮೂಲ ಕಾರ್ಪೊರೇಟ್ ತೆರಿಗೆ ದರವು ಶೇಕಡ 30ರಷ್ಟಿತ್ತು. ನಾವು ಅದನ್ನು ಶೇಕಡ 22ಕ್ಕೆ ಇಳಿಸಿದ್ದೇವೆ. ಇಂದು ಭಾರತದಲ್ಲಿ 12 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ಆದಾಯ ತೆರಿಗೆ ಇಲ್ಲ. ನನಗೆ ಗೊತ್ತು, ನೀವು ಚಪ್ಪಾಳೆ ತಟ್ಟುವುದಿಲ್ಲ ಎಂದು. ಏಕೆಂದರೆ ಸರ್ಕಾರ ಎಷ್ಟೇ ನೀಡಿದರೂ, ನಿಮ್ಮ ಬೇಡಿಕೆಗಳು ಅಥವಾ ಅಪೇಕ್ಷೆಗಳು ಎಂದಿಗೂ ತೃಪ್ತಿಗೊಳ್ಳುವುದಿಲ್ಲ. ನಾನು 12 ಲಕ್ಷ ರೂ.ವರೆಗಿನ ಆದಾಯವನ್ನು ತೆರಿಗೆಯಿಂದ ಮುಕ್ತಗೊಳಿಸಿದ್ದೇನೆ. ಆದರೆ, ನೀವು ನಿಮ್ಮ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಿದಿರಾ? ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದಿರಾ? ಇಲ್ಲ. ನಿಮ್ಮ ಮನಸ್ಥಿತಿ ಇನ್ನೂ ಹೀಗೆಯೇ ಇದೆ. “ಮೋದಿ ಜೀ, ನೀವೇ ಮಾಡಿ, ನಾವು ನೋಡಿಕೊಳ್ಳುತ್ತೇವೆ.”
ಆದರೆ ಸ್ನೇಹಿತರೆ,
ಇಂತಹ ದೊಡ್ಡ ಪ್ರಮಾಣದ ಆದಾಯ ತೆರಿಗೆ ವಿನಾಯಿತಿ ನೀಡಲು ಧೈರ್ಯ ಬೇಕು. ಇದು ಜನರ ಖರೀದಿ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿದೆ. ನಾವು ಆದಾಯ ತೆರಿಗೆ ವಿವರ ಸಲ್ಲಿಕೆ ಮತ್ತು ಮರುಪಾವತಿ ವ್ಯವಸ್ಥೆಗಳನ್ನು ಸರಳೀಕರಿಸಿದ್ದೇವೆ, ಇದರಿಂದ ತೆರಿಗೆದಾರರ ಹಣವು ಅನಗತ್ಯವಾಗಿ ವ್ಯವಸ್ಥೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಹಿಂದೆ, ಮರುಪಾವತಿ ಪಡೆಯಲು 8 ತಿಂಗಳು ಬೇಕಾಗುತ್ತಿತ್ತು. ಇಂದು ಮರುಪಾವತಿಯು 1 ವಾರದೊಳಗೆ ಬರುತ್ತದೆ. ಬರುತ್ತದೆ ತಾನೆ? ಹಾಗಾದರೆ ಕನಿಷ್ಠ ಚಪ್ಪಾಳೆಯನ್ನಾದರೂ ತಟ್ಟಿ! ಏಕೆಂದರೆ, ನಾವು ಮಾಡುತ್ತಿರುವ ಕೆಲಸ ನಿಮಗೆ ಉಪಯುಕ್ತವಾಗಿದೆಯೇ ಅಥವಾ ನಾವು ಸುಮ್ಮನೆ ಇದನ್ನು ಮಾಡುತ್ತಿದ್ದೇವೆಯೇ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಜಿಎಸ್ಟಿ ಸುಧಾರಣೆಗಳಿಂದಾಗಿ, ಅನೇಕ ಉತ್ಪನ್ನಗಳ ಮೇಲಿನ ತೆರಿಗೆಗಳು ಕಡಿಮೆಯಾಗಿವೆ. ಇದು ಬೇಡಿಕೆಯನ್ನು ಹೆಚ್ಚಿಸಿದೆ, ನಮ್ಮ ಕೈಗಾರಿಕೆಗಳು ಹಾಗೂ ವ್ಯಾಪಾರ ಸಂಸ್ಥೆಗಳಿಗೆ ನೇರ ಪ್ರಯೋಜನ ನೀಡಿದೆ.
ಸ್ನೇಹಿತರೆ,
ಕಳೆದ ಕೆಲವು ವರ್ಷಗಳಲ್ಲಿ, ಭಾರತವು ವಿಶ್ವಾದ್ಯಂತ ಅನೇಕ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಫಿಕ್ಕಿ ಸದಸ್ಯರು ಎಂದಾದರೂ ಈ ಬಗ್ಗೆ ಕುಳಿತು ಯೋಚಿಸಿದ್ದೀರಾ? ವಿಶ್ವದ ಪ್ರಮುಖ ಆರ್ಥಿಕತೆಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದಾಗ, ಅದು ನಿಮಗಾಗಿ ಹೊಸ ಅವಕಾಶಗಳ ಬಾಗಿಲು ತೆರೆದಿದೆ ಎಂದರ್ಥ. ಆ ಅವಕಾಶಗಳನ್ನು ಬಳಸಿಕೊಳ್ಳಲು ನೀವು ಏನಾದರೂ ಯೋಜನೆಗಳನ್ನು ರೂಪಿಸಿದ್ದೀರಾ, ಅಥವಾ ಅದನ್ನೂ ನಾನೇ ಇಲ್ಲಿಗೆ ಬಂದು ವಿವರಿಸಬೇಕೇ?
ಸ್ನೇಹಿತರೆ,
ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಇದಕ್ಕಿಂತ ದೊಡ್ಡ ಐತಿಹಾಸಿಕ ಅವಕಾಶ ಇನ್ನೊಂದಿರಲು ಸಾಧ್ಯವಿಲ್ಲ. ನನ್ನ ಈ ಎಲ್ಲಾ ಪ್ರಯತ್ನಗಳಿಂದ ನೀವು ಲಾಭ ಪಡೆಯದಿದ್ದರೆ, ಇನ್ನಾರು ಪಡೆಯುತ್ತಾರೆ? ದಯವಿಟ್ಟು ಹೇಳಿ. ನಾನು ಇದನ್ನು ನಿಮಗಾಗಿ ಮಾಡುತ್ತಿದ್ದೇನೆ, ನಿಮ್ಮ ಮೂಲಕ ರಾಷ್ಟ್ರಕ್ಕಾಗಿ ಮಾಡುತ್ತಿದ್ದೇನೆ. ನೀವು ಅತ್ಯಂತ ಪ್ರಮುಖ ಮಾಧ್ಯಮವಾಗಿದ್ದೀರಿ. ನಿಮ್ಮ ಶಕ್ತಿಯನ್ನು ಗುರುತಿಸಿ. ನಮ್ಮಲ್ಲಿ 140 ಕೋಟಿ ಜನರ ದೇಶೀಯ ಮಾರುಕಟ್ಟೆಯಿದೆ. ಕೆಲವೊಮ್ಮೆ ನನಗೆ ಅನ್ನಿಸುತ್ತದೆ, ಇದೇ ನಿಮ್ಮ ಸಮಸ್ಯೆಯಾಗಿ ಪರಿಣಮಿಸಿದೆ ಎಂದು. ಏಕೆಂದರೆ, ನೀವು ಏನೇ ಉತ್ಪಾದಿಸಿದರೂ ಅದನ್ನು ಖರೀದಿಸಲು ಯಾರೋ ಒಬ್ಬರು ಸಿಗುತ್ತಾರೆ ಎಂಬುದು ನಿಮಗೆ ತಿಳಿದಿದೆ. ದೊಡ್ಡ ನಗರದಲ್ಲಿ ಒಬ್ಬರು ಖರೀದಿಸದಿದ್ದರೆ, ಚಿಕ್ಕ ನಗರದಲ್ಲಿ ಯಾರೋ ಖರೀದಿಸುತ್ತಾರೆ. ಅಲ್ಲಿಯೂ ಆಗದಿದ್ದರೆ, ದೊಡ್ಡ ಹಳ್ಳಿಯಲ್ಲಿ ಯಾರೋ ಖರೀದಿಸುತ್ತಾರೆ. ಅಲ್ಲಿಯೂ ಇಲ್ಲದಿದ್ದರೆ, ಸಣ್ಣ ಹಳ್ಳಿಯಲ್ಲಿ ಯಾರೋ ಖರೀದಿಸುತ್ತಾರೆ. “ನನ್ನ ಉತ್ಪನ್ನ ಹೇಗಿದ್ದರೂ ಮಾರಾಟವಾಗುತ್ತದೆ” ಎಂಬ ಈ ಮನಸ್ಥಿತಿ ಇನ್ನು ಮುಂದೆ ಮುಂದುವರಿಯಬಾರದು. ಕಾಲ ಬದಲಾಗಿದೆ. ನೀವು ಗುಣಮಟ್ಟವನ್ನು ಸುಧಾರಿಸಲೇಬೇಕು. 140 ಕೋಟಿ ಭಾರತೀಯರನ್ನು ಕೇವಲ ‘ಖಚಿತ ಮಾರುಕಟ್ಟೆ’ ಎಂದು ಮಾತ್ರ ಭಾವಿಸಬೇಡಿ. ಕೆಲವೊಮ್ಮೆ, ಕ್ಷಮಿಸಿ, ನನಗೆ ಮುಜುಗರವಾಗುತ್ತದೆ. ಇಂದು ನಾನು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದೇನೆ. ಎರಡು ರೀತಿಯ ಜನರಿದ್ದಾರೆ. ಇಲ್ಲಿ ಎರಡೂ ಗುಂಪುಗಳವರು ಇದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ಗುಂಪಿನಲ್ಲಿ ಬಿಲ್ಡರ್ಗಳು ಮತ್ತು ಆಸ್ತಿ ಡೆವೆಲಪರ್ಸ್ ಬರುತ್ತಾರೆ. ಅವರು ಒಂದು ದೊಡ್ಡ ಕಟ್ಟಡ ನಿರ್ಮಿಸಿ, ಅದರಲ್ಲಿ ಒಂದೆರಡು ಘಟಕಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಖರೀದಿದಾರರಿಗೆ, “ಇದು ನನಗಾಗಿ” ಅಥವಾ “ಇದು ನನ್ನ ಮಗನಿಗಾಗಿ” ಎಂದು ಹೇಳುತ್ತಾರೆ; ಆದರೆ “ನಿಮಗೆ ನಿಜವಾಗಿಯೂ ಬೇಕಿದ್ದರೆ, ಬಹುಶಃ ನಾವು ಇದನ್ನು ಮಾರಾಟ ಮಾಡಬಹುದು” ಎಂದೂ ಹೇಳುತ್ತಾರೆ. ಆಗ ಗ್ರಾಹಕರು ತಕ್ಷಣವೇ, “ಇದು ಅತ್ಯುತ್ತಮ ಗುಣಮಟ್ಟದ ಘಟಕವಾಗಿರಬೇಕು” ಎಂದು ಭಾವಿಸುತ್ತಾರೆ. ಇನ್ನೊಂದು ಗುಂಪಿನವರೂ ಇದ್ದಾರೆ, ಇವರು ಇಲ್ಲಿ ಹೆಚ್ಚಾಗಿ ಕಂಡುಬರಬಹುದು ಎಂದು ನನಗೆ ಅನ್ನಿಸುತ್ತದೆ. ಅವರು ಗ್ರಾಹಕರಿಗೆ, “ಇದು ರಫ್ತು ಗುಣಮಟ್ಟದ್ದು ಎಂದು ಹೇಳುತ್ತಾರೆ. ಈ ದೇಶದ ಜನರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅವರಿಗೆ ಗುಣಮಟ್ಟದ ಉತ್ಪನ್ನಗಳನ್ನು ಪಡೆಯುವ ಹಕ್ಕಿಲ್ಲವೇ? ಇಂದಿಗೂ ಕೂಡ, ನೀವು ಅವರಿಗೆ “ಇದು ರಫ್ತು ಗುಣಮಟ್ಟದ್ದು” ಎಂದು ಹೇಳುವ ಅಗತ್ಯವಿದೆ ಎಂದು ಭಾವಿಸುತ್ತೀರಾ? ಗ್ರಾಹಕರು, “ಇದು ವಿದೇಶಿಯರಿಗಾಗಿ ಇದ್ದರೆ, ಖಂಡಿತವಾಗಿಯೂ ಉತ್ತಮವಾಗಿರುತ್ತದೆ” ಎಂದು ಭಾವಿಸುತ್ತಾರೆ. ಈ ಮನಸ್ಥಿತಿ ಬದಲಾಗಬೇಕು. ನನ್ನ ದೇಶವಾಸಿಗಳು ಗುಣಮಟ್ಟ ಪಡೆಯಲು ಅರ್ಹರು. ಗೋಪಾಲ್, ದಯವಿಟ್ಟು ನಂತರ ಎಲ್ಲರಿಗೂ ಇದನ್ನು ಸರಿಯಾಗಿ ವಿವರಿಸಿ. ಆದರೆ ಈಗಿನ ಅಗತ್ಯವೇನೆಂದರೆ, ಇತರೆ ದೇಶಗಳಲ್ಲಿ ಉದ್ಭವಿಸುತ್ತಿರುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ದೇಶವು ‘ಸುಧಾರಣಾ ಎಕ್ಸ್ಪ್ರೆಸ್’ ಮೂಲಕ ಮುನ್ನಡೆಯುತ್ತಿರುವಾಗ, ಸರ್ಕಾರವೂ ನಿಮ್ಮೊಂದಿಗೆ ಹೆಜ್ಜೆ ಹಾಕಲು ಸಿದ್ಧವಾಗಿದೆ.
ಮತ್ತು ಸ್ನೇಹಿತರೆ,
ಇಂದು ನಾನು ಮುಕ್ತವಾಗಿ ಮಾತನಾಡಲು ಬಯಸುತ್ತೇನೆ. ನಾನು ಇಲ್ಲಿ ಕೇವಲ ಔಪಚಾರಿಕತೆಗಾಗಿ ಬಂದಿಲ್ಲ. ನಾನು ನಿಮ್ಮನ್ನು ಮನಃಪೂರ್ವಕವಾಗಿ ಭೇಟಿಯಾಗಲು ಬಂದಿದ್ದೇನೆ. ನಾನು ನಿಮ್ಮನ್ನು ಗೌರವಿಸುವ ಕಾರಣದಿಂದಲೇ ಇಲ್ಲಿಗೆ ಬಂದಿದ್ದೇನೆ. ಆದರೆ ಹಿಂದಿನ ಸರ್ಕಾರಗಳೊಂದಿಗೆ ನಿಮಗಿರುವ ಅನುಭವ ಎಷ್ಟು ಕಹಿಯಾಗಿದೆಯೆಂದರೆ, ಅದಕ್ಕಾಗಿ ನಾನು ಬೆಲೆ ತೆರುತ್ತಿದ್ದೇನೆ. ಇದು ಆ ಹಳೆಯ ಸರ್ಕಾರವಲ್ಲ. ಇದು ಸ್ನೇಹಪರ ಸರ್ಕಾರ. ಈ ಸರ್ಕಾರಕ್ಕೆ ಸ್ನೇಹವನ್ನು ಹೇಗೆ ಉಳಿಸಿಕೊಳ್ಳಬೇಕೆಂದು ತಿಳಿದಿದೆ. ನೀವು ನನ್ನ ನಿಜವಾದ ಸ್ನೇಹಿತರಾಗಿರುವುದರಿಂದ, ನಾನು ನಿಮ್ಮಲ್ಲಿ ಒಂದು ಕೋರಿಕೆ ಇಡಲು ಬಯಸುತ್ತೇನೆ. ನೀವು ಅದನ್ನು ಮಾಡುತ್ತೀರಾ? ಮಾಡುತ್ತೀರಾ? ಯಾವುದೇ ಹಿಂಜರಿಕೆ ಅಥವಾ ಸಂಕೋಚವಿಲ್ಲದೆ ನನಗೆ ಮುಕ್ತವಾಗಿ ಬರೆಯಿರಿ. ಇನ್ನೂ ಯಾವ ಸುಧಾರಣೆಗಳ ಅಗತ್ಯವಿದೆ ಎಂಬುದನ್ನು ತಿಳಿಸಿ. ಸಲಹೆಗಳನ್ನು ಮುಕ್ತವಾಗಿ ಕಳುಹಿಸುವಂತೆ ನಾನು ನಿಮ್ಮನ್ನು ಪದೇಪದೆ ಕೇಳುತ್ತಲೇ ಇರುತ್ತೇನೆ. 100 ಸಲಹೆಗಳಲ್ಲಿ ಕನಿಷ್ಠ ಎರಡರ ಮೇಲಾದರೂ ನಾನು ಕ್ರಮ ಕೈಗೊಳ್ಳಲು ಸಾಧ್ಯವಾದರೆ, ಅದು ನನ್ನ ಕಡೆಯಿಂದಾದ ಕೊರತೆಯೇ ಆಗಿರುತ್ತದೆ. ಆದರೆ ನೀವು ಹಿಂಜರಿಯಬೇಡಿ. ಸರ್ಕಾರದ ಬಾಗಿಲುಗಳು ಮತ್ತು ಸರ್ಕಾರದ ಮನಸ್ಸು, ಎರಡೂ ಸಂಪೂರ್ಣವಾಗಿ ತೆರೆದಿವೆ. ನಾನು ಮತ್ತೆ ಹೇಳುತ್ತೇನೆ, ನಮ್ಮ ದೇಶೀಯ ಮಾರುಕಟ್ಟೆಯು ನಮ್ಮ ‘ಸೌಕರ್ಯ ವಲಯ’ ಆಗಬಾರದು. 140 ಕೋಟಿ ಗ್ರಾಹಕರಿದ್ದಾರೆ ಎಂಬ ಕಾರಣಕ್ಕೆ ನಮ್ಮ ಉತ್ಪನ್ನಗಳು ಹೇಗಿದ್ದರೂ ಮಾರಾಟವಾಗುತ್ತವೆ ಎಂಬ ಮನಸ್ಥಿತಿಯಿಂದ ನಾವು ಹೊರಬರಬೇಕು. ಬದಲಾಗಿ, ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪರ್ಧಿಸಲು ನಾವು ಈ ಮಾರುಕಟ್ಟೆಯಿಂದ ಆತ್ಮವಿಶ್ವಾಸ ಪಡೆದುಕೊಳ್ಳಬೇಕು. ಅಂತಹ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು. ವಿಶ್ವದ ವಿವಿಧ ಭಾಗಗಳಲ್ಲಿರುವ ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ಹೂಡಿಕೆ ಮಾಡಿ. ತಂಡಗಳನ್ನು ಕಳುಹಿಸಿ. ಮಾರುಕಟ್ಟೆ ಅಧ್ಯಯನಗಳನ್ನು ನಡೆಸಿ. ಯಾರಿಗೆ ಏನು ಬೇಕು ಮತ್ತು ಅದನ್ನು ಹೇಗೆ ತಲುಪಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಬಳಕೆದಾರ ಸ್ನೇಹಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ. ಸ್ಥಳೀಯ ಗ್ರಾಹಕರು ಇಷ್ಟಪಡುವ ಬಣ್ಣಗಳು ಮತ್ತು ವಿನ್ಯಾಸಗಳಲ್ಲಿ ಉತ್ಪನ್ನಗಳನ್ನು ಸಿದ್ಧಪಡಿಸಿ. ಇಲ್ಲದಿದ್ದರೆ, ಜಾಗತಿಕ ಮಾರುಕಟ್ಟೆಗಳನ್ನು ಹೇಗೆ ವಶಪಡಿಸಿಕೊಳ್ಳಲಾಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇಂದಿನ ಪರಿಸ್ಥಿತಿಯಲ್ಲಿ, ನಾವು ಪೂಜಿಸುವ ಗಣೇಶನ ವಿಗ್ರಹಗಳು ಭಾರತದಲ್ಲಿ ತಯಾರಾಗಿವೆಯೇ ಅಥವಾ ಬೇರೆಲ್ಲಿಯಾದರೂ ತಯಾರಾಗಿವೆಯೇ ಎಂದು ಖಚಿತವಾಗಿ ಹೇಳಲು ಕೂಡ ಸಾಧ್ಯವಿಲ್ಲದಂತಾಗಿದೆ.
ಸ್ನೇಹಿತರೆ,
ಜಾಗತಿಕ ಮಾನದಂಡಗಳನ್ನು ಪೂರೈಸಲು ಮತ್ತು ಜಾಗತಿಕ ಅಗತ್ಯಗಳನ್ನು ಪೂರೈಸುವ ವಿತರಣಾ ಜಾಲಗಳನ್ನು ನಿರ್ಮಿಸಲು ನಾವು ಹೂಡಿಕೆ ಮಾಡುವುದು ಅತ್ಯಗತ್ಯ. ನಮ್ಮ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಗ್ರಾಹಕರ ವಿಶ್ವಾಸ ಗಳಿಸುವಂತಿರಬೇಕು, ಅವರನ್ನು ಭಾರತದೊಂದಿಗೆ ಬೆಸೆಯುವಂತಿರಬೇಕು.
ಈ ಮನವಿಯೊಂದಿಗೆ ಸ್ನೇಹಿತರೆ,
ಇಂದು ನಾನು ಬಹಳ ಮುಕ್ತವಾಗಿ ಮಾತನಾಡಿದ್ದೇನೆ. ನನ್ನ ಆಲೋಚನೆಗಳನ್ನು ನಿಮ್ಮೆಲ್ಲರೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದೇನೆ. ನಿಮ್ಮ 100 ವರ್ಷಗಳ ಪಯಣ ನಿಮಗೆ ಬಹಳಷ್ಟು ನೀಡಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ಮತ್ತೊಂದು 100 ವರ್ಷಗಳವರೆಗೆ ಕಾಯಬೇಡಿ. ಮುಂದಿನ 10 ವರ್ಷಗಳಲ್ಲಿ ನೀವು ದೇಶಕ್ಕೆ ಏನು ನೀಡಬಲ್ಲಿರಿ ಎಂಬುದರ ಕುರಿತು ಯೋಚಿಸಿ. 1927ರಲ್ಲಿ ಹುಟ್ಟಿದ ಸಂಸ್ಥೆಯೊಂದು 20 ವರ್ಷಗಳಲ್ಲೇ ದೇಶ ಸ್ವಾತಂತ್ರ್ಯ ಪಡೆಯುವುದನ್ನು ನೋಡಲು ಸಾಧ್ಯವಾಗಿದ್ದರೆ, ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ ಹೊತ್ತಿಗೆ, ಅಂದರೆ ಮುಂದಿನ 20 ವರ್ಷಗಳಲ್ಲಿ, ನಾವು ಖಂಡಿತವಾಗಿಯೂ ‘ವಿಕಸಿತ ಭಾರತ’ ನಿರ್ಮಿಸಬೇಕು. ಅಂತಹ ದೃಢ ಸಂಕಲ್ಪದೊಂದಿಗೆ ನಾವು ಮುನ್ನಡೆಯಬೇಕು.
ಮತ್ತು ಸ್ನೇಹಿತರೆ,
ಸ್ವಾತಂತ್ರ್ಯ ಎಂಬುದು ಕೇವಲ ಘೋಷಣೆಯಾಗಿರಲಿಲ್ಲ, ಅದು ಒಂದು ಬದ್ಧತೆಯಾಗಿತ್ತು. ಅದೇ ರೀತಿ, ‘ವಿಕಸಿತ ಭಾರತ’ ಎಂಬುದು ಕೇವಲ ಘೋಷಣೆಯಲ್ಲ; ಇದೊಂದು ಬದ್ಧತೆ. ಈ ಬದ್ಧತೆಯನ್ನು 140 ಕೋಟಿ ಭಾರತೀಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಖಂಡಿತವಾಗಿಯೂ ನಾವು ಜಯ ಸಾಧಿಸುತ್ತೇವೆ. ಇದೇ ಸ್ಫೂರ್ತಿಯೊಂದಿಗೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
India's growth story is creating new opportunities. Our industries must be ready to seize them. Speaking at FICCI's centenary convention. @ficci_india https://t.co/tJCw2NnpjW
— Narendra Modi (@narendramodi) November 19, 2026
FICCI अपनी स्थापना के 100 वर्ष पूरे कर रहा है। एक संस्था का सौ वर्षों तक लगातार सजग और सक्रिय रहना, बदलते समय के साथ खुद को आगे बढ़ाना और देश की आर्थिक यात्रा में अपनी भूमिका निभाते रहना, ये बहुत बड़ी उपलब्धि है: PM @narendramodi
— PMO India (@PMOIndia) November 19, 2026
FICCI ने अपने 100 वर्षों में देश की Industry को बहुत कुछ Achieve करते हुए देखा है। अब समय ये तय करने का है कि Indian Industry अगले 20 वर्षों में क्या Achieve कर सकती है: PM @narendramodi
— PMO India (@PMOIndia) November 19, 2026
FICCI ने अपने 100 वर्षों में देश की Industry को बहुत कुछ Achieve करते हुए देखा है। अब समय ये तय करने का है कि Indian Industry अगले 20 वर्षों में क्या Achieve कर सकती है: PM @narendramodi
— PMO India (@PMOIndia) November 19, 2026
अगले 20 वर्षों के अपने हर long-term investment decision में India First को अपना आधार बनाइए। इससे देश आत्मनिर्भर होगा और आपके business की growth के लिए भी नए अवसर खुलेंगे: PM @narendramodi at @ficci_india centenary convention
— PMO India (@PMOIndia) November 19, 2026
हमारा Domestic Market हमारा Comfort Zone नहीं होना चाहिए। हमें इससे वो आत्मविश्वास मिलना चाहिए जिससे हम Global Markets में Compete कर सकें। इसलिए दुनिया के अलग-अलग Regions के Customers की जरूरतों को समझने में Invest करिए: PM @narendramodi at @ficci_india centenary convention
— PMO India (@PMOIndia) November 19, 2026