Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ


ನನ್ನ ಸಚಿವ ಸಂಪುಟದ ಸದಸ್ಯರಾದಂತಹ ಡಾ.ಮಹೇಶ್ ಶರ್ಮಾ ಅವರೇ, ಶ್ರೀ ಕಿರಣ್ ರಿಜಿಜು ಅವರೇ, ಅಂತಾರಾಷ್ಟ್ರೀಯ ಬುದ್ದಿಸಂ ಫೌಂಡೇಷನ್ ನ ಪ್ರಧಾನ ಕಾರ್ಯದರ್ಶಿಗಳಾದಂತಹ ಡಾ.ಧಮ್ಮಪಿಯಾ ಅವರೇ, ದೇಶದ ಎಲ್ಲೆಡೆಯಿಂದ ಆಗಮಿಸಿರುವಂತಹ ಬುದ್ಧ ಅನುಯಾಯಿಗಳೇ ಹಾಗೂ ಸೋದರ ಸೋದರಿಯರೇ…

ಸಾವಿರಾರು ಜನರು ಒಂದೆಡೆ ಸೇರಿ ಒಂದು ಮಂತ್ರವನ್ನು ಪಠಿಸಿದರೆ ಅಲ್ಲಿ ಒಂದು ಶಕ್ತಿಯೇ ಉತ್ಪತ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಇವತ್ತು ನಮಗೆ ಅಂಥದ್ದೊಂದು ಶಕ್ತಿಯ ಅನುಭವವಾಗುತ್ತಿದೆ. ನಮ್ಮ ಕಣ್ಣು ಯಾವಾಗ ತೆರೆದಿರುತ್ತದೋ ಆಗ ಒಬ್ಬರಿಗೊಬ್ಬರನ್ನು ನೋಡಬಹುದು, ಅದೇ ಹೊತ್ತಿನಲ್ಲಿ ಶ್ರೀ ಬುದ್ಧ ದೇವನ ನಾಮವು ಎಲ್ಲರ ಮನಸ್ಸಿನಲ್ಲೂ ಅರೆಕ್ಷಣ ಪ್ರತಿಫಲನವಾಗುತ್ತದೆ.

ಬುದ್ಧ ದೇವನ ಬಗ್ಗೆ ಇರುವ ಭಕ್ತಿ-ಭಾವವನ್ನು ಕೇವಲ ಪದಗಳಲ್ಲಿ ವರ್ಣನೆ ಮಾಡಲು ಸಾಧ್ಯವೇ ಇಲ್ಲ.

ಜನರು ಮಂತ್ರವನ್ನು ಜಪ ಮಾಡುವಂತೆಯೇ ಬುದ್ಧ ದೇವನನ್ನೂ ಪಠಣೆ ಮಾಡುತ್ತಾರೆ. ಬುದ್ಧ ಪೂರ್ಣಿಮೆಯ ಈ ಪವಿತ್ರವಾದ ದಿನದಂದು ಪೂಜ್ಯ ಧಾರ್ಮಿಕ ಮುಖಂಡರೆಲ್ಲರೂ ಸೇರಿರುವ ಈ ಸಂದರ್ಭದಲ್ಲಿ ಅವರೆಲ್ಲರ ಆಶೀರ್ವಾದವನ್ನು ಪಡೆದುಕೊಳ್ಳುವಂತಹ ಅವಕಾಶ ನನಗೆ ದೊರಕಿದ್ದು ನನ್ನ ಅದೃಷ್ಟವೆಂದೇ ಭಾವಿಸಿದ್ದೇನೆ.

ಈಗಷ್ಟೇ ಶ್ರೀ ಮಹೇಶ್ ಶರ್ಮಾ ಮತ್ತು ಶ್ರೀ ಕಿರಣ್ ರಿಜುಜು ಅವರು ಇದು ನನ್ನ ಎರಡನೇ ಭೇಟಿ ಎಂದು ಹೇಳುತ್ತಿದ್ದರು. ನಾನು ಕಳೆದ ವರ್ಷ ಬಂದಿದ್ದೇನೆ. ಆದರೆ ಇದೇ ರೀತಿಯಲ್ಲಿ ಶ್ರೀಲಂಕಾದಲ್ಲಿ ಹಮ್ಮಿಕೊಂಡಿದ್ದ ಬೈಸಾಖ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಶ್ರೀಲಂಕಾದ ಜನರು, ಶ್ರೀಲಂಕಾ ಸರ್ಕಾರ ಮತ್ತು ಜಗತ್ತಿನ ವಿವಿಧ ಮೂಲೆಗಳಿಂದ ಬಂದಿದ್ದ ಬುದ್ಧ ಅನುಯಾಯಿಗಳ ಜತೆ ಬುದ್ಧ ಪೂರ್ಣಿಮೆಯನ್ನು ಆಚರಣೆ ಮಾಡುವಂತಹ ಅವಕಾಶ ಅಂದು ನನಗೆ ಸಿಕ್ಕಿತ್ತು.

ನಾವೆಲ್ಲಾ ನಮ್ಮದೇ ಆದ ಜವಾಬ್ದಾರಿಯಿಂದಾಗಿ ಸದಾ ಕಾರ್ಯನಿರತವಾಗಿರುತ್ತೇವೆ. ಇದೆಲ್ಲವನ್ನೂ ಕ್ಷಣ ಕಾಲ ಬದಿಗಿಟ್ಟು ನಾವು ಬುದ್ಧ ದೇವನನ್ನು ಸ್ಮರಿಸಿಕೊಂಡರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ. ಬುದ್ಧ ದೇವನು ಸಾರಿದಂತಹ ಪ್ರೀತಿ ಮತ್ತು ಸೌಹಾರ್ಧತೆಯ ಸಂದೇಶವನ್ನು ಇಡೀ ಜಗತ್ತಿಗೆ ಸಾರಲು ಇಲ್ಲಿ ನೆರೆದಿರುವಂತಹ ಬುದ್ಧ ಬಿಕ್ಷುಗಳು ಸದಾಕಾಲ ಶ್ರಮಿಸುತ್ತಾರೆ. ಅವರೆಲ್ಲಾ ಬುದ್ಧ ದೇವ ತೋರಿಸಿದಂತಹ ದಾರಿಯಲ್ಲೇ ಸಾಗುತ್ತಿದ್ದಾರೆ. ಇಡೀ ವಿಶ್ವದ ಉದ್ದಗಲಕ್ಕೆ ಬುದ್ಧನ ಶಾಂತಿ ಸಂದೇಶವನ್ನು ಸಾರುತ್ತಿರುವ ಎಲ್ಲಾ ಆತ್ಮಗಳಿಗೂ ನಾನು ನನ್ನ ಹೃದಯಪೂರ್ವಕವಾದ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ದೇಶದ ವಿವಿಧ ಮೂಲೆಗಳಿಂದ ಬಂದಿರುವ ಎಲ್ಲ ಜನರನ್ನೂ ನಾನು ಪ್ರೀತಿಪೂರ್ವಕವಾಗಿ ಸ್ವಾಗತಿಸುತ್ತೇನೆ. ಬುದ್ಧ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲು ತಮ್ಮದೇ ಕೊಡುಗೆಯನ್ನು ನೀಡಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಅವರ ಮುಂದಿನ ಕೆಲಸ ಕಾರ್ಯಗಳಿಗೂ ನಾನು ಶುಭಕೋರುತ್ತೇನೆ. ಸಾರಾನಾಥದಲ್ಲಿರುವ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್್ ಹೈಯರ್ ಟಿಬೆಟಿಯನ್ ಸ್ಟಡೀಸ್ ಸಂಸ್ಥೆ ಮತ್ತು ಬುದ್ಧ ಗಯಾದಲ್ಲಿರುವ ಾಲ್ ಇಂಡಿಯಾ ಭಿಕ್ಷುಕ್ ಸಂಘಗಳನ್ನು ಬೈಸಾಕ್್ ಗೌರವವನ್ನು ಸ್ವೀಕರಿಸಿದ್ದಕ್ಕಾಗಿ ನಾನು ವಿಶೇಷವಾಗಿ ಅಭಿನಂದಿಸಲು ಇಚ್ಚಿಸುತ್ತೇನೆ.

ಸ್ನೇಹಿತರೇ,

ವಿಶ್ವದ ಈ ಭಾಗ ಅಂದರೆ ನಮ್ಮ ಭಾರತ, ಬೇರೆ ಯಾವುದೇ ಪ್ರದೇಶದಲ್ಲಿ ಕಂಡು ಬರದಂತಹ ಅತ್ಯಮೂಲ್ಯವಾದ ಸಮೃದ್ಧ ಪರಂಪರೆಯನ್ನು ಹೊಂದಿದೆ.

ಗೌತಮ ಬುದ್ಧನ ಹುಟ್ಟು, ಶಿಕ್ಷಣ ಮತ್ತು ಮಹಾ ಪರಿನಿಬ್ಬಾಣದ ಬಗ್ಗೆ ಕಳೆದ ಹಲವು ಶತಮಾನಗಳಿಂದ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡು ಬರಲಾಗುತ್ತಿದೆ ಮತ್ತು ಲಿಖಿತವಾಗಿ ಬರೆಯಲಾಗುತ್ತಿದೆ. ಆದರೂ ಪ್ರಸ್ತುತದ ಪೀಳಿಗೆಯ ಒಂದಷ್ಟು ಭಾಗವು ಇದನ್ನು ತಿಳಿಯಲು ಸಾಕಷ್ಟು ಕಷ್ಟಪಡಬೇಕಿದೆ.

ನಮ್ಮ ದೇಶದ ನೆಲದಿಂದ ಮೂಡಿ ಬಂದಂತಹ ಎಲ್ಲ ತತ್ವಗಳ ಸಾರವೂ ಮಾನವ ಕಲ್ಯಾಣದ ಸಂದೇಶವನ್ನೇ ಹೊಂದಿದೆ ಎನ್ನುವ ವಿಚಾರವನ್ನು ಕೇಳಿದರೆ ನಮಗೆ ರೋಮಾಂಚನ ಮತ್ತು ಹೆಮ್ಮೆ ಎನಿಸುತ್ತದೆ. ಇತರೆ ಹಕ್ಕುಗಳು ಅಥವಾ ಭಾವನೆಗಳಿಂದ ಯಾರೂ ಕೂಡ ಹೊಸ ತಲೆಮಾರಿನ ಆಲೋಚನೆಗಳನ್ನು ಕಬಳಿಕೆ ಮಾಡಿದಂತಹವಲ್ಲ ಎನ್ನುವ ಗರ್ವವೂ ನಮಗಿದೆ. ನಾವು ಯಾವತ್ತೂ ಒಬ್ಬರಿಗೊಬ್ಬರ ಸಿದ್ಧಾಂತಗಳು ಮತ್ತಿ ಧಾರ್ಮಿಕ ನಂಬಿಕೆಗಳನ್ನು ತಾರತಮ್ಯದಿಂದ ನೋಡಿಯೇ ಇಲ್ಲ.

ಭಾರತದ ಹೊರಗೆ ಹುಟ್ಟಿಕೊಂಡ ಸಿದ್ಧಾಂತ ಅಥವಾ ವಿಚಾರ ಧಾರೆಗಳೆಲ್ಲವನ್ನೂ ಇಡೀ ಮಾನವ ಕುಲವನ್ನು ಸುಧಾರಿಸುವ ನಿಟ್ಟಿನಲ್ಲಿಯೇ ಅಳವಡಿಸಿಕೊಂಡಂತಹವು ಎನ್ನುವ ಹೆಮ್ಮೆಯೂ ನಮಗಿದೆ. ಯಾರು ನಮ್ಮನ್ನು ಹಿಂಬಾಲಿಸುತ್ತಾರೋ ಅವರು ಮಾತ್ರ ಲಾಭ ಪಡೆದುಕೊಳ್ಳುತ್ತಾರೆ ಎಂದು ನಾವೆಂದೂ ಹೇಳಿಲ್ಲ. ಬುದ್ಧನ ಸಿದ್ಧಾಂತಗಳು ಹೊಸ ಪ್ರಜ್ಞೆಯನ್ನಷ್ಟೇ ನಿರ್ಮಾಣ ಮಾಡಿಲ್ಲ. ಇವತ್ತು ಬುದ್ಧನ ಮೌಲ್ಯಗಳು ಏಷ್ಯಾದ ಬಹುತೇಕ ರಾಷ್ಟ್ರಗಳ ರಾಷ್ಟ್ರೀಯ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತಿವೆ.

ಸ್ನೇಹಿತರೇ,

ಇದು ಈ ನೆಲದ ವಿಶೇಷತೆ, ಯಾವುದೇ ದೇಶದ ಆಸಕ್ತಿಗಳನ್ನು ಒತ್ತುವರಿ ಮಾಡಿಕೊಂಡು ಭಾರತವು ಯಾವುತ್ತೂ ತನ್ನ ಪರಂಪರೆಯ ಮೌಲ್ಯಗಳನ್ನು ವೃದ್ಧಿಸಿಕೊಂಡಿಲ್ಲ. ಬದಲಾಗಿ ಅದು ತನ್ನದೇ ನೆಲದಲ್ಲಿ ಅಪೂರ್ವವಾದ ಸಾಂಪ್ರದಾಯಿಕ ಪರಂಪರೆಯನ್ನು ಸೃಷ್ಟಿಸಿಕೊಂಡಿದೆ ಎಂದು ಹೇಳಲು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಕಳೆದ ಸಹಸ್ರಾರು ವರ್ಷಗಳಿಂದಲೂ ನಮ್ಮ ದೇ ಈ ಪಥ ಮತ್ತು ಸಿದ್ಧಾಂತವನ್ನು ಪಸರಿಸಿಕೊಂಡೇ ಬರುತ್ತಿದೆ.

ಸ್ನೇಹಿತರೇ,

ಸಿದ್ಧಾರ್ಥನಿಂದ ಗೌತಮ ಬುದ್ಧನವರೆಗೆ ಸಾಗಿ ಹೋದ ಆ ಯಾನವು ಕೇವಲ ನಿರ್ವಾಣದ ಕಥೆಯಲ್ಲ. ಯಾರಾದರೂ ತಮ್ಮ ಜ್ಞಾನ ಮತ್ತು ಸಂಪತ್ತಿನ ಮೂಲಕ ಪರರ ನೋವು ಮತ್ತು ಸಂಕಷ್ಟಗಳನ್ನು ನಿವಾರಣೆ ಮಾಡುವ ಪ್ರಯತ್ನವನ್ನು ನಡೆಸುವ ದಾರಿಯಲ್ಲಿ ಯಶಸ್ಸನ್ನು ಕಾಣುವ ಮೂಲಕ ಸಿದ್ದಾರ್ಥನಿಂದ ಗೌತಮ ಬುದ್ಧನಾಗುವ ಕಡೆಗೆ ಸಾಗುತ್ತಾರೆ ಎನ್ನುವುದೇ ಸತ್ಯ ಕಥೆ. ಅವನು ವಿವೇಕದ ಪಥವನ್ನೂ ದಾಟಿ ಹೋಗಬಲ್ಲ.

ಬುದ್ಧ ಪೂರ್ಣಿಮೆಯ ಈ ಸಂದರ್ಭದಲ್ಲಿ ನಾವುಗಳೆಲ್ಲರೂ ನಮ್ಮಲ್ಲಿ ಸಹಾನುಭೂತಿ ಮತ್ತು ಸಹೋದರತ್ವವನ್ನು ನೆನಪಿಸಿಕೊಳ್ಳುತ್ತೇವೆ. ಭಯೋತ್ಪಾದನೆ, ಜನಾಂಗೀಯ ದ್ವೇಷ ಮತ್ತು ಪ್ರತ್ಯೇಕತೆಯು ಬುದ್ಧನ ಸಂದೇಶವನ್ನು ಕಾರ್ಮೋಡದ ಅಂಚಿಗೆ ಸರಿಸಿದ್ದವು. ಈ ಸಂದರ್ಭದಲ್ಲಿ ಬುದ್ಧನ ಸಹಾನುಭೂತಿ ಮತ್ತು ಸಹೋದರತ್ವದ ಸಂದೇಶಗಳು ಅತ್ಯಂತ ಪ್ರಸ್ತುತ ಮತ್ತು ಅತ್ಯಗತ್ಯ ಎನಿಸಿಕೊಳ್ಳುತ್ತಿವೆ. ವಿನಾಶ, ಹಿಂಸೆ ಮತ್ತು ದ್ವೇಷದಿಂದ ಜಯ ಸಾಧಿಸುವುದು ಜೀವನವಲ್ಲ. ಜೀವನ ಎನ್ನುವುದು ದ್ವೇಷ, ಹಿಂಸೆ ಮತ್ತು ಅನ್ಯಾಯವನ್ನು ಸಹೋದರತ್ವ ಮತ್ತು ಸಹಾನುಭೂತಿಯ ಮೂಲಕ ಗೆಲ್ಲುವುದು.

ಯಾರಾದರೂ ತಮ್ಮ ಸಿಡುಕು ಮನಸ್ಸಿನ ಮೇಲೆ ಜಯ ಸಾಧಿಸಿದ್ದರೆ ಮತ್ತು ಅಮರತೆಯನ್ನು ಪಡೆದುಕೊಂಡರೆ ಅದು ಬುದ್ಧನ ಧ್ಯಾನದಿಂದ ಮಾತ್ರ. ಸತ್ಯ ಮತ್ತು ಸಹಾನುಭೂತಿಯ ಸಮ್ಮಿಲನವು ನಮ್ಮಲ್ಲಿ ಬುದ್ಧ ತತ್ವವನ್ನು ಉದ್ದೀಪನಗೊಳಿಸುತ್ತದೆ.

ಬುದ್ಧ ಎಂದರೆ ಹಿಂಸೆಯ ಮನಸ್ಸುಗಳನ್ನು ಶುದ್ಧ ಮತ್ತು ಶಾಂತಗೊಳಿಸುವುದು ಎಂದರ್ಥ. ಜಾತಿ, ಬಣ್ಣ ಮತ್ತು ಭಾಷೆಯ ಮೂಲಕ ಮಾನವನ ನಡುವೆ ಪ್ರತ್ಯೇಕತೆಯ ತಪ್ಪು ಸಂದೇಶವನ್ನು ಹರಡಬಹುದು ಎನ್ನುವುದು ಭಾರತ ಅಥವಾ ಬುದ್ಧನಿಂದ ತಗೆದುಹಾಕಲು ಸಾಧ್ಯವೇ ಇಲ್ಲ. ಯಾವುದೇ ಜಾತಿ, ವರ್ಣ, ವರ್ಗ ಅಥವಾ ಧರ್ಮದ ಜನರು ತಮ್ಮದೇ ವೈಯಕ್ತಿಕತೆಗಳನ್ನು ಸ್ವೀಕರಿಸುತ್ತಲೇ ಸಾಗುತ್ತಾರೆ. ಉದಾಹರಣೆಗೆ ಜೂಸ್ ಅಥವಾ ಪಾರ್ಇಗಳು. ಸಹಸ್ರಾರು ವರ್ಷಗಳಿಂದಲೂ ನಮ್ಮೊಂದಿಗೆ ಬೆರೆತು ಹೋಗಿದ್ದಾರೆ ಮತ್ತು ನಮ್ಮ ಸಮಾಜದ ಅವಿಭಾಜ್ಯ ಅಂಗವೂ ಆಗಿಹೋಗಿದ್ದಾರೆ. ನಾವು ಅವರೊಂದಿಗೆ ಪ್ರತ್ಯೇಕತೆಯನ್ನು ಹೊಂದಬೇಕು ಎನ್ನುವುದನ್ನು ನಾವು ಯಾವತ್ತೂ ಆಲೋಚಿಸಿಲ್ಲ. ಸಮಾನತೆಯ ತತ್ವವನ್ನು ನಾವು ಪಾಲಿಸುತ್ತಾ ಸಾಗಿದ್ದೇವೆ ಎಂದರೆ ಅದು ಬುದ್ಧನ ದಾರಿಯಲ್ಲಿ ನಾವು ಸಾಗಿದ್ದೇವೆ ಎಂದೇ ಅರ್ಥ. ಬ್ರಾತೃತ್ವ ಮತ್ತು ಸಮಾನತೆಯ ತತ್ವದ ಕಾರಣಕ್ಕೆ ಇಂದು ಬುದ್ಧ ಇಡೀ ಜಗತ್ತಿನ ಅತ್ಯಂತ ಪೂಜ್ಯ ಮಹಾಪುರುಷ ಎನಿಸಿಕೊಂಡಿದ್ದಾರೆ. ಬುದ್ಧನ ತತ್ವಗಳನ್ನು ಪಾಲನೆ ಮಾಡುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಬುದ್ಧ ದೇವ ತೋರಿದ ಪಥವನ್ನು ಅನುಸರಿಸಿದರು.

ಪ್ರಾಪಂಚಿಕ ಜಾಗದಲ್ಲಿ ಇಂದು ಭಾರತವು ಬುದ್ಧನ ನಾಡು ಎಂದೇ ಕರೆಸಿಕೊಳ್ಳುತ್ತಿದೆ. ವಿಶ್ವದ ಉದ್ದಗಲಕ್ಕೆ ಬೌದ್ಧ ತತ್ವದ ಕಾರಣಕ್ಕೆ ಭಾರತ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ‘ಬುದ್ಧಂ ಶರಣಂ ಗಚ್ಚಾಮಿ..ಧಮ್ಮಂ ಶರಣಂ ಗಚ್ಚಾಮಿ, ಸಂಘಂ ಶರಣಂ ಗಚ್ಚಾಮಿ’ ಎಂಬ ಮಂತ್ರವು ನಮ್ಮ ಪವಿತ್ರ ನೆಲದ ಮೂಲಕ ಇಡೀ ವಿಶ್ವಕ್ಕೆ ಮಾನವೀಯತೆಯ ಪಾಠವನ್ನು ಕಲಿಸುತ್ತಿದೆ. ಹೀಗಾಗಿ ಬುದ್ಧ ಪೂರ್ಣಿಮಿಯ ಸಂದೇಶ ಏನೆಂದರೆ ‘ನೀವು ಬದಲಾಗುವ ಪ್ರಯತ್ನ ಮಾಡುವ ಮುನ್ನ ನಿಮ್ಮನ್ನು ಯಾರಾದರೂ ಪರಿವರ್ತಿಸುತ್ತಿರಬೇಕು. ಆಗ ಮಾತ್ರ ನೀವೂ ಬುದ್ಧನಾಗಬಲ್ಲಿರಿ.ಬೇರೊಬ್ಬರಲ್ಲಿ ತಪ್ಪು ಹುಡುಕುವ ಮುನ್ನ ನೀವು ನಿಮ್ಮೊಳಗಿನ ಸಮರವನ್ನು ಮೊದಲು ಜಯಿಸಿ. ಆಗ ನೀವು ಬುದ್ಧನಾಗಲು ಸಾಧ್ಯ’ ಅಪೋ ದೀಪಹ್ ಆಪ್ ಭಾವಾ ಅಂದರೆ ಇದರ ಅರ್ಥ ನಿಮ್ಮಲ್ಲೇ ನೀವು ಬೆಳಕನ್ನು ಶೋಧ ಮಾಡಿ. ಆಗ ನೀವೂ ಬುದ್ಧನಾಗಲು ಸಾಧ್ಯ ಎನ್ನುವುದೇ ಆಗಿದೆ.

ಭಗವಾನ್ ಬುದ್ಧನು ಸದಾ ಶಾಂತಿ ಮತ್ತು ಸಹಬಾಳ್ವೆಯ ಸಂದೇಶದ ಮೂಲಕ ಸದಾ ಎಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದಾರೆ. ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳು ಇಂದಿನ ಪ್ರಜಾಪ್ರಭುತ್ವ ಜಗತ್ತಿನ ಮೂಲ ಮೌಲ್ಯಗಳಾಗಿವೆ. ಆದರೆ ಭಗವಾನ್ ಬುದ್ಧ 2500 ವರಷಗಳ ಹಿಂದೆಯೇ ಈ ಮೂಲ ತತ್ವಗಳ ಬಗ್ಗೆ ಸ್ಪಷ್ಟವಾದಂತಹ ಸಂದೇಶಗಳನ್ನು ನೀಡಿದ್ದರು. ಭಾರತಕ್ಕೆ ಮಾತ್ರ ಇದು ಪ್ರತ್ಯೇಕ ಆಲೋಚನೆಯೇನೂ ಆಗಿರಲಿಲ್ಲ. ಅದು ಇಡೀ ವಿಶ್ವದ ದೃಷ್ಟಿಕೋನವೇ ಆಗಿತ್ತು.

ಬುದ್ಧನ ತತ್ವಶಾಸ್ತ್ರದ ಪ್ರಕಾರ, ಸಮಾನತೆ ಎಂದರೆ ಈ ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನಿಗೂ ಗೌರವಯುತ ಬದುಕಿದೆ ಎನ್ನುವುದಾಗಿತ್ತು. ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಅವಕಾಶಗಳನ್ನು ನೀಡಬೇಕು. ಯಾವುದೇ ತಾರತಮ್ಯ ಮಾಡದೇ ಹಕ್ಕುಗಳನ್ನು ನೀಡಬೇಕು ಎನ್ನುವುದೇ ಆಗಿತ್ತು.

ಸ್ನೇಹಿತರೇ,

ಪ್ರತಿಯೊಂದು ದೇಶಕ್ಕೂ, ಪ್ರತಿಯೊಂದು ಸವಾಲೂ ಭಯೋತ್ಪಾದನೆ, ಜಾತೀಯತೆ ಮತ್ತು ಇತರೆ ಅಸಮಾನತೆಯಾಗಿದೆ. ಅದೆಲ್ಲವನ್ನೂ ಮನುಷ್ಯನೇ ಸೃಷ್ಟಿಸಿಕೊಂಡಿದ್ದಾನೆ. ಅನ್ಯಾಯ, ದುರ್ಬಳಕೆ, ದೌರ್ಜನ್ಯ, ಹಿಂಸಾಚಾರ ಮತ್ತು ಸಾಮಾಜಿಕ ಅಯೋಗ್ಯತೆಯ ಸಮಸ್ಯೆಗಳು ಇದರಿಂದಲೇ ಸೃಷ್ಟಿಯಾಗಿವೆ. ಇನ್ನೊಂದೆಡೆ ನ್ಯಾಯದ ಮೂಲತತ್ವಗಳು, ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳು ಸಮಾನತೆಯ ಮೂಲತತ್ವದಿಂದ ಹುಟ್ಟಿಕೊಂಡಿವೆ. ಇದರ ಅರ್ಥ ಸಮಾನತೆಯೇ ಈ ತತ್ವಗಳ ಮೂಲಕ ಸಲಕರಣೆ ಎನ್ನುವುದು ಸುಸ್ಪಷ್ಟ.

ನಮ್ಮ ಸಮಾಜದಲ್ಲಿ ಸಮಾನತೆಯ ಭಾವನೆಯು ಗಟ್ಟಿಗೊಂಡರೆ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಮಾನ ಹಕ್ಕುಗಳು, ಸಾಮಾಜಿಕ ಬದಲಾವಣೆ, ವೈಯಕ್ತಿಕ ಹಕ್ಕುಗಳು, ಶಾಂತಿ, ಸಹಬಾಳ್ವೆ ಮತ್ತು ಸಮೃದ್ಧಿ ಎನ್ನುವುವು ತನ್ನಿಂದ ತಾನೇ ತೆರೆದುಕೊಳ್ಳುತ್ತವೆ. ಆಗ ನಾವು ವೇಗವಾಗಿ ಮುನ್ನಡೆಯಲು ಸಾಧ್ಯವಿದೆ. ಬುದ್ಧ ದೇವನು ತನ್ನ ಪ್ರವಚನದಲ್ಲಿ ಅಷ್ಟಾಂಗಗಳನ್ನು ಉಲ್ಲೇಖಿಸಿದ್ದಾರೆ. ಅಷ್ಟಾಂಗಗಳ ಪಥವನ್ನು ಅರ್ಥ ಮಾಡಿಕೊಳ್ಳದೇ ಬುದ್ಧನ ತತ್ವಗಳನ್ನು ಅರಿತುಕೊಳ್ಳುವುದು ಅಸಾಧ್ಯ ಎಂಬುದು ನನ್ನ ನಂಬಿಕೆಯಾಗಿದೆ. ಸರಿಯಾದ ನೋಟ, ಸರಿಯಾದ ಆಲೋಚನೆ,ಸರಿಯಾದ ಬೋಧನೆ, ಸರಿಯಾದ ಅನ್ವಯಿಕೆ, ಸರಿಯಾದ ಜೀವನ, ಸರಿಯಾದ ಪ್ರಯತ್ನ, ಸರಿಯಾದ ಪ್ರಜ್ಞೆ ಮತ್ತು ಸರಿಯಾದ ಸಮಾಲೋಚನೆಯಂತಹ ಬುದ್ಧನ ಅಷ್ಠ ಪಥವಾಗಿದೆ.

ಭಗವಾನ್ ಬುದ್ಧ ತೋರಿದ ದಾರಿಯಲ್ಲಿ ಸಾಗಿದ್ದೇ ಆದರೆ ಇವತ್ತು ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಸಲೀಸಾಗಿ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಇವತ್ತು ಇಡೀ ಜಗತ್ತಿಗೆ ಒದಗಿಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ವಿಶ್ವವನ್ನು ಕಾಪಾಡಿಕೊಳ್ಳಬೇಕಾದರೆ ಬುದ್ಧನ ಪ್ರೀತಿ ಮತ್ತು ಸಹಾನುಭೂತಿಯ ಸಂದೇಶಗಳನ್ನು ಅನಿವಾರ್ಯವಾಗಿ ಪಾಲಿಸುವುದೇ ಆಗಿದೆ. ಯಾರು ಈ ಪಥದಲ್ಲಿ ಸಾಗುತ್ತಾನೋ ಆತ ಸಾಮರ್ಥ್ಯವನ್ನು ಪಡೆಯಬಲ್ಲ ಎಂದು ಭಗವಾನ್್ ಬುದ್ಧನೇ ಹೇಳಿಕೊಂಡಿದ್ದಾರೆ.

ಸ್ನೇಹಿತರೇ,

ಭಗವಾನ್ ಬುದ್ಧ ಕಾರಣಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ ಹುಡುಕಿದಂತಹ ಮಹಾನ್ ತತ್ವಜ್ಞಾನಿಗಳಲ್ಲಿ ಒಬ್ಬರು. ತನ್ನ ಧರ್ಮ ತತ್ವದ ತಾತ್ವಿಕ ಪರೀಕ್ಷೆಗೆ ಅವರು ಹೆಚ್ಚು ಒತ್ತನ್ನು ನೀಡಿದ್ದರು.

ಅವರು ಯಾವುದೇ ಅಹಂಗೆ ಆಸ್ಪದ ಕೊಡದಂತೆ ತನ್ನದೇ ಮೌಲ್ಯಗಳನ್ನು ಪರೀಕ್ಷೆ ಮಾಡುವಂತೆ ಬುದ್ಧ ದೇವರು ತಮ್ಮ ಶಿಷ್ಯರಿಗೆ ಹೇಳುತ್ತಿದ್ದರಂತೆ. ಎರಡನೇ ಶತಮಾನದಲ್ಲಿ ದೊರೆ ಉದಯನಿಗೆ ನಾಗಾರ್ಜುನನು ಬುದ್ಧನ ತತ್ವಗಳನ್ನೇ ಆಧಾರವಾಗಿಟ್ಟುಕೊಂಡು ಸಂದೇಶವನ್ನು ನೀಡಿದ್ದ ಎನ್ನುವುದು ಇಂದಿಗೂ ಪ್ರಸ್ತುತ ಎನಿಸಿದೆ.

ಆಗ ಆತ ಹೇಳಿದ್ದೇನೆಂದರೆ-ಕುರುಡರಿಗೆ, ನರಳುವವರಿಗೆ, ಅವಕಾಶ ವಂಚಿತರಿಗೆ, ಅಸಹಾಯಕರಿಗೆ ಮತ್ತು ಬಡವರಿಗೆ ಯಾವುದೇ ಅಡಚಣೆ ಇಲ್ಲದೇ ಆಹಾರ ಮತ್ತು ನೀರನ್ನು ನೀಡು. ರೋಗಿಗಳ ಆರೈಕೆಗೆ ಹೆಚ್ಚು ಆದ್ಯತೆ ನೀಡು ಮತ್ತು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಬೀಜ ಮತ್ತು ಇತರೆ ಅಗತ್ಯ ಸಲಹಕಾರವನ್ನು ನೀಡುವುದೇ ನಿನ್ನ ಆದ್ಯತೆ ಎಂದು ಅವನು ಹೇಳಿದ್ದ.

ಸಂಕಷ್ಟಕ್ಕೆ ಸಿಲುಕಿದ ಇಡೀ ವಿಶ್ವ ಹೇಗೆ ಸುಧಾರಣೆಯನ್ನು ಕಂಡುಕೊಳ್ಳಬಹುದು ಎನ್ನುವುದು ಭಗವಾನ್್ ಬುದ್ಧನ ಸಂದೇಶಗಳಲ್ಲಿದೆ. ಪ್ರತಿಯೊಬ್ಬ ಮನುಷ್ಯನೂ ತನ್ನ ಸಂಕಷ್ಟ ಮತ್ತು ದುಃಖಗಳಿಂದ ಹೊರಬರಲು ಸಮರ್ಥನನ್ನಾಗಿ ಮಾಡಿ ಎಂದು ಬುದ್ಧ ಹೇಳಿದ್ದರು. ಆನಂತರ ವ್ಯಕ್ತಿಯ ದುಃಖದೊಳಗೆ ಪ್ರವೇಶಿಸೋಣ ಎಂದಿದ್ದರು.

ನಮ್ಮ ಸರ್ಕಾರವು ಬುದ್ಧನ ಪ್ರೇರಣೆಯಿಂದಾಗಿಯೇ ಸಹಾನುಭೂತಿ ಮತ್ತು ಸೇವೆಯ ಮಾರ್ಗದಲ್ಲಿ ಹೆಜ್ಜೆ ಇಟ್ಟಿದೆ. ಜನರ ಸಂಕಷ್ಟ ಮತ್ತು ದುಃಖವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಪರಿಹಾರಗಳಿಗೆ ಹೆಚ್ಚೆಚ್ಚು ಆದ್ಯತೆಗಳನ್ನು ನೀಡುತ್ತಿದ್ದೇವೆ.

ನಮ್ಮ ಸರ್ಕಾರವು ಜನಧನ್ ಯೋಜನೆಯ ಮೂಲಕ 31 ಕೋಟಿ ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆದು ಕೊಟ್ಟು ಅವರನ್ನು ಸ್ವಾವಲಂಬನೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಹೆಜ್ಜೆಗಳನ್ನು ಇಟ್ಟಿದೆ. ಪ್ರತಿ ದಿನಕ್ಕೆ 90 ಪೈಸೆ ಕಂತು ಮತ್ತು ತಿಂಗಳಿಗೆ 1 ರೂಪಾಯಿ ಕಂತಿನಡಿ ಖಾತೆ ತೆರೆದಿದ್ದೇವೆ. ಬಡವರಿಗೆ ಅಂದಾಜು 19 ಕೋಟಿ ವಿಮೆ ಹಣವನ್ನು ಒದಗಿಸಲಾಗಿದೆ. 3 ಕೋಟಿ 70 ಲಕ್ಷ ಬಡ ಮಹಿಳೆಯರು ಉಚಿತ ಅಡುಗೆ ಅನಿಲ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. 3 ಕೋಟಿಗೂ ಅಧಿಕ ಮಕ್ಕಳಿಗೆ 80 ಲಕ್ಷಕ್ಕೂ ಅಧಿಕ ಗರ್ಭಿಣಿಯರಿಗೆ ಮಿಷನ್ ಇಂದ್ರ ಧನುಷ್ ಮೂಲಕ ಲಸಿಕೆಗಳನ್ನು ಹಾಕಲಾಗಿದೆ. ಮುದ್ರಾ ಯೋಜನೆ ಅಡಿಯಲ್ಲಿ ಯಾವುದೇ ಖಾತ್ರಿ ಇಲ್ಲದೇ 12 ಕೋಟಿ ಸಾಲಗಳನ್ನು ಮಂಜೂರು ಮಾಡಲಾಗಿದೆ. ಇದೀಗ ನಮ್ಮ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಪ್ರತಿವರ್ಷ 50 ಕೋಟಿ ಕುಟುಂಬಗಳ ಒಬ್ಬ ಸದಸ್ಯನ ವೈದ್ಯಕೀಯ ವೆಚ್ಚಕ್ಕೆ 5 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದು, ಇದು ಬಡಕುಟುಂಬದ ವೈದ್ಯಕೀಯ ಚಿಕಿತ್ಸೆಗೆ ಸಹಕಾರಿಯಾಗಿದೆ.

ಸ್ನೇಹಿತರೇ,

ಎಲ್ಲರನ್ನೂ ಒಳಗೊಳಿಸಿಕೊಳ್ಳುವ ಮತ್ತು ಒಟ್ಟು ಗೂಡಿಸುವ ತತ್ವವು ಬುದ್ಧ ಭಗವಾನರಿಂದಲೇ ಬಂದಂತಹ ತತ್ವವಾಗಿದೆ. ಬುದ್ಧ ಈ ನೆಲದ ದೊರೆಯಾಗಿದ್ದರು. ಆತನ ಜೀವನದಲ್ಲಿ ಎಲ್ಲ ವೈಭೋಗಗಳೂ ಇದ್ದವು. ಆದರೆ ಅವರು ಒಬ್ಬ ಮನುಷ್ಯನ ನರಳಾಟವನ್ನು ಕಂಡಾಗ ತನ್ನ ಮತ್ತು ಆತನಲ್ಲಿ ವ್ಯತ್ಯಾಸ ಕಾಣಲು ಶುರುಮಾಡಿದರು. ಅವನಂತೆಯೇ ಸಾಮಾನ್ಯನಾಗಲು ಹೊರಟರು.

ಸತ್ಯ ಎನ್ನುವುದು ಬುದ್ಧನಿಗೆ ಲೋಕಜ್ಞಾನದ ಸೂಕ್ಷ್ಮತೆ, ವಿವೇಚನಾಶೀಲತೆ, ಸಂವೇದನೆ, ನೀತಿ ಶಾಸ್ತ್ರವನ್ನು ಅರಿಯಲು ಅವಕಾಶ ಮಾಡಿಕೊಟ್ಟಿತು. ಆ ತೇಜಸ್ಸೇ ಕೊನೆಗೆ ಬುದ್ಧನ ಒಳಗೆ ಶಕ್ತಿಯು ಹುಟ್ಟಿಕೊಳ್ಳುವಂತೆ ಮಾಡಿತು.

ನಾವು ಈ ಭಾವನೆಗಳಲ್ಲಿ ಆಲೋಚಿಸುವಾಗ ಗಮನಿಸುವುದಾದರೆ ನಾವು ಮೊದಲು ನಿಜವಾದ ಮಾನವರಾಗಬೇಕು ಎನಿಸುತ್ತದೆ. ಮಾನವೀಯತೆಯ ರಕ್ಷಣೆ ದೃಷ್ಟಿಯಿಂದ ಇದನ್ನು ಮೊದಲು ನಾವು ಮಾಡಬೇಕು. 21ನೇ ಶತಮಾನವನ್ನು ವಿಶ್ವದ ಮಹತ್ತರವಾದ ಶತಮಾನವನ್ನಾಗಿ ನಾವು ಮಾಡಬೇಕಿದೆ.

ಸೋದರ-ಸೋದರಿಯರೇ,

ಸುದೀರ್ಘ ಕಾಲದ ಗುಲಾಮಗಿರಿಯ ನಂತರವೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಣೆ ಮಾಡಿಕೊಳ್ಳುವ ಸರಿಯಾದ ಪ್ರಯತ್ನಗಳು ಆಗುತ್ತಿಲ್ಲ. ಒಂದು ದೇಶ ತನ್ನ ಇತಿಹಾಸವನ್ನು ರಕ್ಷಣೆ ಮಾಡಿಕೊಳ್ಳದಿದ್ದರೆ ಮತ್ತು ಅದೇ ಇತಿಹಾಸ,ಪರಂಪರೆಯನ್ನು ತನ್ನ ಮುಂದಿನ ಪೀಳಿಗೆಗೆ ದಯಪಾಲಿಸದೇ ಇದ್ದರೆ ಅದು ಪರಿಪೂರ್ಣತೆಯನ್ನು ಸಾಧಿಸಿಕೊಳ್ಳುವುದು ಕಷ್ಟ. ಇದನ್ನೇ ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರವು ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು ಸಂರಕ್ಷಣೆ ಮಾಡುವ ಮತ್ತು ಬುದ್ಧನ ಸ್ಮರಣೆಗೆ ಸಂಬಂಧಿಸಿದ್ದನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ನಮ್ಮ ದೇಶದ 18 ರಾಜ್ಯಗಳಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದಂತಹ ಧಾರ್ಮಿಕ ಸ್ಥಳಗಳಿವೆ. ಅದರಲ್ಲಿ ಬಹುತೇಕ ಕೇಂದ್ರಗಳು 2000 ವರ್ಷಗಳ ಇತಿಹಾಸವನ್ನು ಹೊಂದಿವೆ. ಇಡೀ ವಿಶ್ವದ ಪ್ರವಾಸಿಗರನ್ನು ಈ ಕೇಂದ್ರಗಳು ಆಕರ್ಷಣೆ ಮಾಡುತ್ತಿವೆ. ಈ ದೃಷ್ಟಿಕೋನದಲ್ಲಿ, ಈ ಸ್ಥಳಗಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸ್ವದೇಶ್ ದರ್ಶನ್ ಸ್ಕೀಮ್ ಅಡಿಯಲ್ಲಿ ಬುದ್ಧಿಸ್ಟ್ ಸರ್ಕಿಟ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ಬುದ್ಧಿಸ್ಟ್ ಸರ್ಕಿಟ್ ಗೆ ಕೇಂದ್ರ ಸರ್ಕಾರವು 360 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಆಂಧ್ರ ಪ್ರದೇಶ ಮತ್ತು ಗುಜರಾತ್ ನಲ್ಲಿರೋ ಬುದ್ಧ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಇದಲ್ಲದೇ ರಸ್ತೆ ಸಾರಿಗೆ ಇಲಾಖೆಯು ಗಯಾ-ವಾರಣಾಸಿ-ಖುಷಿನಗರ್ ಮಾರ್ಗದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಿದೆ. ಪ್ರವಾಸೋದ್ಯಮ ಸಚಿವಾಲಯದಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಬುದ್ಧ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಈ ವರ್ಷ ವಿಶ್ವದ ವಿವಿಧೆಡೆಯಿಂದ ಪ್ರಾಜ್ಞರು ಈ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲ ಉದ್ದೇಶವೇನೆಂದರೆ ನಮ್ಮ ಸಾಂಸ್ಕೃತಿಕ ಐತಿಹ್ಯವನ್ನು ಇತರೆ ದೇಶಗಳಿಂದ ಬಂದ ಜನರಿಗೆ ತಿಳಿಹೇಳುವುದು ಆ ಮೂಲಕ ಬುದ್ಧ ಕೇಂದ್ರಗಳಿಗೆ ಅವರು ಭೇಟಿ ನೀಡಿ ಹೆಚ್ಚು ಜ್ಞಾನ ಸಂಪಾದನೆ ಮಾಡಿಕೊಳ್ಳುವಂತೆ ಮಾಡುವುದೇ ಆಗಿದೆ. ಇದಲ್ಲದೇ ಕೇಂದ್ರ ಸರ್ಕಾರವು ಬುದ್ಧನ ಪಾರಂಪರಿಕ ಕುರುಹುಗಳನ್ನು ಸಂರಕ್ಷಣೆ ಮಾಡುವಂತೆ ನೆರೆಯ ರಾಷ್ಟ್ರಗಳಿಗೂ ಮನವಿ ಮಾಡಿಕೊಳ್ಳುತ್ತಿದೆ. ಇದರ ಪರಿಣಾದಿಂದಾಗಿಯೇ ಮಾಯನ್ಮಾರ್ ನಲ್ಲಿ ಬಾಗನ್ ಮತ್ತು ಆನಂದ ದೇಗುಲಗಳ ಜೀರ್ಣೋದ್ಧಾರ ಕಾರ್ಯವು ಭಾರತೀಯ ಪುರಾತತ್ವ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿದೆ. ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಭಯೋತ್ಪಾದನೆ ಸಂದರ್ಭದಲ್ಲಿ ಈ ದೇಗುಲವು ನೆಲಸಮಗೊಂಡಿತ್ತು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ಆಫ್ಘಾನಿಸ್ಥಾನದ ಬೋಮಿಯಾನ್, ಕಾಂಬೋಡಿಯಾದ ಆಂಗ್ ಕೋರ್ ಮತ್ತು ತಾ ಪ್ರೋಮ್, ಲಾವೋಸ್ ನ ವಾಟ್ ಪುವಾ ಮತ್ತು ವಿಯಟ್ನಾಮ್ ದೇಶದ ಮೈ ಸನ್ ದೇಗುಲಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮಂಗೋಲಿಯಾದ ಗಂಧಾನ್ ಕೇಂದ್ರದ ಹಸ್ತಪ್ರತಿಗಳ ರಕ್ಷಣೆ ಮತ್ತು ಅವುಗಳ ಡಿಜಿಟಲೀಕರಣವನ್ನು ಮಾಡಲಾಗುತ್ತಿದೆ.

ನಾನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳನ್ನು ಮನವಿ ಮಾಡಿಕೊಳ್ಳುವುದು ಇಷ್ಟೇ, ಬುದ್ಧನ ಬೋಧನೆಯ ಸರಕುಗಳಾದ ಬುದ್ಧನ ತತ್ವಕ್ಕೆ ಹೊಂದಿಕೊಂಡ ತ್ರಿಪಿಟಿಕಗಳನ್ನು ಹಲವು ಸಂಸ್ಥೆಗಳು ಹೇಗೆ ಒಂದೆಡೆ ಸೇರಿ ಪುನರ್ ಸಂರಚಿಸುವುದನ್ನು ಮಾಡಬಹುದು..? ಸರಳ ಭಾಷೆಯಲ್ಲಿ ಬುದ್ಧನ ತತ್ವಗಳನ್ನು ಅರಿತುಕೊಳ್ಳಬಹುದಾದ ಪೋರ್ಟಲ್ ಅನ್ನು ಸ್ಥಾಪನೆ ಮಾಡಬಹುದೇ..?ಈ ಸಂಸ್ಥೆಗಳ ಸಹಕಾರದಿಂದಲ ಇದನ್ನು ಸಾಧಿಸಬಹುದೇ..? ಎಂದು ಆಲೋಚಿಸಬೇಕಿದೆ. ನಾನು ಮಹೇಶ್ ಶರ್ಮಾ ಅವರನ್ನು ಮನವಿ ಮಾಡಿಕೊಳ್ಳುವುದೇನೆಂದರೆ ಈ ಯೋಜನೆಯ ನೇತೃತ್ವವನ್ನು ವಹಿಸಿಕೊಳ್ಳಿ ನಿರ್ದಿಷ್ಟ ಅವಧಿಯಲ್ಲಿ ಇದೆಲ್ಲವನ್ನೂ ಕಾರ್ಯರೂಪಗೊಳಿಸುವ ಕೆಲಸವನ್ನು ಮಾಡಿ.

ಸ್ನೇಹಿತರೇ,

2500 ವರ್ಷಗಳು ಕಳೆದರೂ ಬುದ್ಧನ ಎಲ್ಲಾ ಬೋಧನೆಗಳು ನಮ್ಮೊಂದಿಗೆ ಉಳಿದುಕೊಂಡಿವೆ ಎನ್ನುವುದೇ ನಮ್ಮ ಅದೃಷ್ಟ. ಇದು ನಮ್ಮ ಮಾನದ ಪ್ರಶ್ನೆ ಮತ್ತು ಅದೃಷ್ಟ ನಾನು ಏಕೆ ಹೇಳುತ್ತಿದ್ದೇನೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.

ನಮ್ಮ ಪೂರ್ವಜರು ಈ ತತ್ವಗಳನ್ನು ಸಂರಕ್ಷಣೆ ಮಾಡುವಲ್ಲಿ ದೊಡ್ಡ ಪಾತ್ರವನ್ನೇ ವಹಿಸಿದ್ದಾರೆ. ಬುದ್ಧ ಪೂರ್ಣಿಮೆಯ ದಿನ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುವಂತಹ ಅವಕಾಶಗಳನ್ನು ಮಾಡಿಕೊಟ್ಟ ನಮ್ಮ ಪೂರ್ವಜರಿಗೆ ನಾವು ಧನ್ಯವಾದಗಳನ್ನು ಹೇಳಲೇಬೇಕು. ಮುಂದಿನ ಪೀಳಿಗೆಗೂ ಈ ತತ್ವಗಳನ್ನು ಕಾಪಾಡಿಕೊಂಡು ಹೋಗಲು 2500 ವರಷಗಳ ಹಿಂದಿನ ಬುದ್ಧ ಚಿಂತನೆಗಳನ್ನು ಸಂರಕ್ಷಣೆ ಮಾಡಿಟ್ಟ ನಮ್ಮ ಪೂರ್ವಜರ ಪ್ರಯತ್ನ ನಿಜಕ್ಕೂ ಆದರಿಸುವಂಥದ್ದೇ. ಮುಂದಿನ ಮಾನವ ಪೀಳಿಗೆಯು ನಿಮ್ಮ ಸಂಕಲ್ಪಗಳನ್ನು ಮತ್ತು ಚಲನಾತ್ಮಕ ಪಾಲುದಾರಿಕೆಯನ್ನು ಕಾಯುತ್ತಿದೆ.

ನಾನು ಮತ್ತೊಮ್ಮೆ ವಾಪಸ್ ಬಂದು ಹೇಳುವುದೇನೆಂದರೆ, 2022ರ ವೇಳೆಗೆ 5 ಅಥವಾ 10 ಸಂಕಲ್ಪಗಳನ್ನು ಈಡೇರಿಸುವಂತಹ ಪ್ರಯತ್ನ ಮಾಡಲೇಬೇಕು. ನಮ್ಮ ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷಾಚರಣೆ ಮಾಡುವ ಹೊತ್ತಿಗೆ ಸಂಕಲ್ಪಗಳನ್ನು ಈಡೇರಿಸಬೇಕಿದೆ. ನಮ್ಮ ಸಂಪ್ರದಾಯದ ಸುರಕ್ಷತೆ, ರಕ್ಷಣೆ ಅಥವಾ ಗೌತಮ ಬುದ್ಧನ ಸಂದೇಶಗಳನ್ನು ಪಸರಿಸುವುದನ್ನು ಮಾಡಬೇಕಿದೆ. ಇಲ್ಲಿ ಸೇರಿರುವಂತಹ ಪ್ರತಿಯೊಬ್ಬ ನಾಗರಿಕ, ಸಂಸ್ಥೆ ಮತ್ತು ಸಂಘಟನೆಗೆ ನನ್ನ ಮನವಿಯೇನೆಂದರೆ 2022ರ ಒಳಗೆ ಯಾವುದಾದರೂ ಸಂಕಲ್ಪವನ್ನು ತೊಟ್ಟು ಅದನ್ನುಸಾಕಾರ ಮಾಡಿಕೊಳ್ಳಿ. ನಿಮ್ಮ ಪ್ರಯತ್ನಗಳು ನವಭಾರತವನ್ನು ನಿರ್ಮಾಣ ಮಾಡುವ ನಮ್ಮ ಕಾರ್ಯಕ್ಕೆ ಸಹಕಾರಿಯಾಗಲಿದೆ. ನಮಗೆ ಸವಾಲುಗಳ ಅರಿವಿದೆ. ನಮಗೆ ಭಗವಾನ್ ಬುದ್ಧನ ಆಶೀರ್ವಾದ ಇದೆ. ಆದ್ದರಿಂದ ನಾನು ನಮ್ಮೆಲ್ಲಾ ಸಂಕಲ್ಪಗಳನ್ನು ಈ ಆಶೀರ್ವಾದವು ಈಡೇರಿಸುತ್ತದೆ ಎಂದು ನಂಬಿದ್ದೇನೆ.

ಬುದ್ಧ ಪೂರ್ಣಿಮೆಯ ಪವಿತ್ರ ದಿನವಾದ ಇವತ್ತು ಭಗವಾನ್ ಬುದ್ಧನ ಮೂರ್ತಿಯ ಹಿಂದೆ ಕೂರುವ ಪುಣ್ಯವನ್ನು ಪಡೆದುಕೊಂಡಿದ್ದೇನೆ. ನಿಮ್ಮನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ನಿಮ್ಮ ಆಶೀರ್ವಾದ ನನಗೆ ಸಿಕ್ಕಿದೆ ಎಂದು ಭಾವಿಸಿಕೊಂಡಿದ್ದೇನೆ.

ಮತ್ತೊಮ್ಮೆ ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು. ಇದರೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

ನಿಮಗೆಲ್ಲರಿಗೂ ಅನಂತ ಧನ್ಯವಾದಗಳು..