ಪಿಎಂಇಂಡಿಯಾ
ಪುದುಚೇರಿಯ ಮುಖ್ಯಮಂತ್ರಿ ಶ್ರೀ ಎನ್. ರಂಗಸ್ವಾಮಿ ಅವರೇ, ನನ್ನ ಕೇಂದ್ರ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಮನ್ಸುಖ್ ಮಾಂಡವೀಯ ಅವರೇ, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಕೆ. ಕೈಲಾಸನಾಥನ್ ಅವರೇ, ಸಭಾಪತಿ ಶ್ರೀ ಆರ್. ಸೆಲ್ವಂ ಅವರೇ, ಗೃಹ ಸಚಿವ ಶ್ರೀ ಎ. ನಮಶಿವಾಯಂ ಅವರೇ, ಇತರ ನಾಯಕರೇ, ಪುದುಚೇರಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ವಣಕ್ಕಂ!
ಸ್ನೇಹಿತರೇ,
ಪುದುಚೇರಿಯಲ್ಲಿರುವುದು ಒಂದು ಗೌರವದ ಸಂಗತಿಯಾಗಿದೆ. ಇದು ಸಿದ್ಧರು, ಸಂತರು, ಕವಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭೂಮಿ. ಇಲ್ಲೇ ಮಹಾಕವಿ ಸುಬ್ರಮಣ್ಯ ಭಾರತಿ ಅವರು ರಾಷ್ಟ್ರೀಯತೆಯ ಕಿಚ್ಚನ್ನು ಹೊತ್ತಿಸಿದ್ದು. ಇಲ್ಲಿಂದಲೇ ಶ್ರೀ ಅರವಿಂದರು ಮತ್ತು ಶ್ರೀ ಮಾತೆಯವರು ಇಡೀ ಜಗತ್ತಿಗೆ ಹೊಸ ಆಧ್ಯಾತ್ಮಿಕ ದೃಷ್ಟಿಕೋನವನ್ನು ನೀಡಿದರು.
ಸ್ನೇಹಿತರೇ,
ನಾನು ಈ ಹಿಂದೆ ಇಲ್ಲಿಗೆ ಬಂದಾಗ, ‘BEST’ ಪುದುಚೇರಿಯ ಮಂತ್ರವನ್ನು ನೀಡಿದ್ದೆ. BEST ಎಂದರೆ ವ್ಯವಹಾರ (Business), ಶಿಕ್ಷಣ (Education), ಆಧ್ಯಾತ್ಮಿಕತೆ (Spirituality) ಮತ್ತು ಪ್ರವಾಸೋದ್ಯಮ (Tourism). ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಈ ದೃಷ್ಟಿಕೋನವು ಫಲ ನೀಡುತ್ತಿದೆ. ಪುದುಚೇರಿಯು ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶವು ಒಂದೇ ದೃಷ್ಟಿಕೋನ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದಾಗ, ಫಲಿತಾಂಶಗಳು ವೇಗವಾಗಿ ಮತ್ತು ಉತ್ತಮವಾಗಿರುತ್ತವೆ. ಪುದುಚೇರಿಯು ತಲಾದಾಯದಲ್ಲಿ ಪ್ರಭಾವಶಾಲಿ ಏರಿಕೆಯನ್ನು ತೋರಿಸಿದೆ. ಇದು ದೇಶದಲ್ಲೇ ಅತ್ಯಧಿಕ ಸಾಮಾಜಿಕ ಪ್ರಗತಿ ಸೂಚ್ಯಂಕದ (Social Progress Index) ಸ್ಕೋರ್ ಅನ್ನು ಸಹ ಸಾಧಿಸಿದೆ. ಈಗ, ಡಬಲ್ ಎಂಜಿನ್ ಎನ್ ಡಿ ಎ ಸರ್ಕಾರವು ಪುದುಚೇರಿಯ ಬೆಳವಣಿಗೆಗೆ ಹೆಚ್ಚಿನ ವೇಗವನ್ನು ನೀಡಲಿದೆ. ಇಂದು, ಎರಡು ಸಾವಿರದ ಏಳು ನೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಈ ಯೋಜನೆಗಳು ಜನರ ಜೀವನವನ್ನು ಪರಿವರ್ತಿಸಲಿವೆ.
ಸ್ನೇಹಿತರೇ,
ಭಾರತದಾದ್ಯಂತ ಉತ್ತಮ ಗುಣಮಟ್ಟದ ಮೂಲಸೌಕರ್ಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ವರ್ಷದ ಬಜೆಟ್ ನಲ್ಲಿ, ಮೂಲಸೌಕರ್ಯ ನಿರ್ಮಾಣಕ್ಕಾಗಿ ನಾವು ದಾಖಲೆಯ ಹನ್ನೆರಡು ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇವೆ. ಇದು ಪುದುಚೇರಿಯ ಜನರಿಗೂ ಪ್ರಯೋಜನಕಾರಿಯಾಗಲಿದೆ. ಈ ಹಿಂದೆ ಕೇವಲ ರಾಜ್ಯಗಳಿಗೆ ಮಾತ್ರ ಮುಕ್ತವಾಗಿದ್ದ ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು’ (Special Assistance to States for Capital Investment) ಯೋಜನೆಯಡಿ ನಾವು ಪುದುಚೇರಿಯನ್ನು ಸೇರಿಸಿದ್ದೇವೆ. ಮೂಲಸೌಕರ್ಯಕ್ಕೆ ಹೆಚ್ಚಿನ ಹಣಕಾಸು ಎಂದರೆ ಉತ್ತಮ ರಸ್ತೆಗಳು, ನೀರು ಸರಬರಾಜು, ಕರಾವಳಿ ಮೂಲಸೌಕರ್ಯ, ಶಾಲೆಗಳು, ಆಸ್ಪತ್ರೆಗಳು ಮತ್ತು ಅಂತಹ ಅನೇಕ ಯೋಜನೆಗಳು ಎಂದರ್ಥ. ಈ ಸೌಲಭ್ಯಗಳು ನೇರವಾಗಿ ಜನರ ಜೀವನವನ್ನು ಉತ್ತಮಗೊಳಿಸುತ್ತವೆ.
ಸ್ನೇಹಿತರೇ,
ಬಲಿಷ್ಠ ಮತ್ತು ಸಬಲೀಕರಣಗೊಂಡ ಯುವಶಕ್ತಿಯು ನಮ್ಮ ಬೆಳವಣಿಗೆಯ ಅಡಿಪಾಯವಾಗಿದೆ. ನಾವು ಅವರ ಕನಸುಗಳನ್ನು ಬೆಂಬಲಿಸಲು ಕೆಲಸ ಮಾಡುತ್ತಿದ್ದೇವೆ. ಎನ್ ಐ ಟಿ (NIT) ಕಾರೈಕಲ್ ನಲ್ಲಿರುವ ಹೊಸ ಡಾ. ಎಪಿಜೆ ಅಬ್ದುಲ್ ಕಲಾಂ ಇಂಜಿನಿಯರಿಂಗ್ ಬ್ಲಾಕ್ ಮತ್ತು ಆಧುನಿಕ ಹಾಸ್ಟೆಲ್ ಸೌಲಭ್ಯಗಳು ಅನೇಕ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ಬಲಪಡಿಸುತ್ತವೆ. ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಕೆಲಸ ಮಾಡಲಾಗಿದೆ. ಅದರ ಹೊಸ ಉಪನ್ಯಾಸ ಸಭಾಂಗಣಗಳು, ಬಾಲಕಿಯರ ಹಾಸ್ಟೆಲ್ ಗಳು ಮತ್ತು ಇತರ ಮೂಲಸೌಕರ್ಯಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತವೆ. ಪುದುಚೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಇವುಗಳಲ್ಲಿ ಹಲವು ಹುದ್ದೆಗಳಿಗೆ ದಶಕಗಳಿಂದ ನೇರ ನೇಮಕಾತಿ ಪರೀಕ್ಷೆಗಳು ನಡೆದಿರಲಿಲ್ಲ. ಆದರೆ ಡಬಲ್ ಎಂಜಿನ್ ಸರ್ಕಾರ ಇದನ್ನು ಮಾಡಿ ತೋರಿಸಿದೆ. ಜನರ ಸೇವೆಗಾಗಿ ಸೇರ್ಪಡೆಗೊಂಡಿರುವ ಎಲ್ಲಾ ಯುವಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.
ಸ್ನೇಹಿತರೇ,
ಇಂದು, ಜಗತ್ತು ಸ್ವಚ್ಛ ಮತ್ತು ಹಸಿರು ಸಂಚಾರದ (mobility) ಕಡೆಗೆ ಗಮನ ಹರಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳು ನಮ್ಮ ಜೀವನದ ಪ್ರಮುಖ ಭಾಗವಾಗಿವೆ. ಪುದುಚೇರಿಯಂತಹ ಪ್ರವಾಸಿ ತಾಣದಲ್ಲಿ, ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಮಹತ್ವದ ಬದಲಾವಣೆ ತರಬಲ್ಲವು. ‘ಪಿಎಂ ಇ-ಬಸ್ ಸೇವೆ’ (PM e-Bus Sewa) ಅಡಿಯಲ್ಲಿ ಇಂದು ಎಲೆಕ್ಟ್ರಿಕ್ ಬಸ್ ಗಳನ್ನು ಒದಗಿಸಲಾಗುತ್ತಿದೆ. ಇಂದಿನ ನಮ್ಮ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಸತಿ ಯೋಜನೆಗಳು ಕುಟುಂಬಗಳಿಗೆ ಸ್ಥಿರತೆ ಮತ್ತು ಘನತೆಯನ್ನು ನೀಡುತ್ತವೆ. ಪುದುಚೇರಿ, ಕಾರೈಕಲ್, ಮಾಹೆ ಮತ್ತು ಯಾನಂನಾದ್ಯಂತ ಹಲವಾರು ನೂರು ಕೋಟಿ ರೂಪಾಯಿಗಳ ಯೋಜನೆಗಳಿದ್ದು, ಇವು ಜನರಿಗೆ ಸಹಾಯ ಮಾಡಲಿವೆ. ನೀರು ನಿರ್ಲವಣೀಕರಣ ಘಟಕಗಳು (Water desalination plants) ಶುದ್ಧ ಕುಡಿಯುವ ನೀರನ್ನು ಖಚಿತಪಡಿಸುತ್ತವೆ. ಹೊಸ ಒಳಚರಂಡಿ ಸಂಸ್ಕರಣಾ ಘಟಕಗಳು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುತ್ತವೆ. ಮುಂಗಾರು ಸಮಯದಲ್ಲಿ ಪ್ರವಾಹ ಮತ್ತು ನೀರು ನಿಲ್ಲುವುದನ್ನು ಕಡಿಮೆ ಮಾಡಲು ಸರ್ಕಾರವು ಕೆಲಸ ಮಾಡುತ್ತಿದೆ. ನಮ್ಮ ಎಲ್ಲಾ ಪ್ರಯತ್ನಗಳು ಪುದುಚೇರಿಯ ಜನರ ಜೀವನವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿವೆ. ಇಲ್ಲಿ ಕೆಲವು ಮಕ್ಕಳು ಉತ್ತಮವಾದ ಚಿತ್ರಗಳನ್ನು ಬಿಡಿಸಿಕೊಂಡು ಬಂದಿದ್ದಾರೆ. ಎಸ್ ಪಿ ಜಿ (SPG) ತಂಡದವರಿಗೆ ನಾನು ಹೇಳುತ್ತೇನೆ, ದಯವಿಟ್ಟು ಅವುಗಳನ್ನು ಸಂಗ್ರಹಿಸಿಕೊಳ್ಳಿ. ಧನ್ಯವಾದಗಳು ನನ್ನ ಸ್ನೇಹಿತರೇ, ನಿಮಗೆ ತುಂಬಾ ಧನ್ಯವಾದಗಳು. ದಯವಿಟ್ಟು ಎಲ್ಲಾ ಉಡುಗೊರೆಗಳನ್ನು ಸಂಗ್ರಹಿಸಿ.
ಸ್ನೇಹಿತರೇ,
ಯಾವುದೇ ರಾಷ್ಟ್ರವು ತನ್ನ ಮಾನವ ಬಂಡವಾಳವು ಆರೋಗ್ಯವಾಗಿದ್ದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಅದಕ್ಕಾಗಿಯೇ ಆರೋಗ್ಯ ರಕ್ಷಣೆಯು ನಮ್ಮ ಪ್ರಮುಖ ಆದ್ಯತೆಯಾಗಿ ಉಳಿದಿದೆ. ಆರೋಗ್ಯ ರಕ್ಷಣೆಯು ಎಲ್ಲರಿಗೂ ಸುಲಭವಾಗಿ ಸಿಗುವಂತಿರಬೇಕು, ಲಭ್ಯವಿರಬೇಕು ಮತ್ತು ಕೈಗೆಟುಕುವಂತಿರಬೇಕು ಎಂದು ನಾವು ನಂಬುತ್ತೇವೆ. ಆಯುಷ್ಮಾನ್ ಭಾರತ್ ಯೋಜನೆಯು ಈಗಾಗಲೇ ಭಾರತದಾದ್ಯಂತ ಕೋಟ್ಯಂತರ ಕುಟುಂಬಗಳಿಗೆ ಈ ದೃಷ್ಟಿಕೋನವನ್ನು ಪೂರೈಸುತ್ತಿದೆ. ಚಿಕಿತ್ಸೆಗಾಗಿ ಪುದುಚೇರಿಯ ಯಾವುದೇ ನಾಗರಿಕರು ದೂರ ಪ್ರಯಾಣ ಮಾಡುವಂತಾಗಬಾರದು ಬದಲಾಗಿ, ಇತರ ಪ್ರದೇಶಗಳ ಜನರು ಗುಣಮುಖರಾಗಲು ಇಲ್ಲಿಗೆ ಬರಬೇಕೆಂದು ನಾವು ಬಯಸುತ್ತೇವೆ. ಪುದುಚೇರಿಯು ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರವಾಗಬಲ್ಲದು ಎಂದು ನಾನು ಬಲವಾಗಿ ನಂಬುತ್ತೇನೆ. ಪುದುಚೇರಿಯು ಈಗಾಗಲೇ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ. ಜಿಪ್ಮರ್ ನಲ್ಲಿರುವ (JIPMER) ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದ ಆಧುನೀಕರಣವು ಆರೋಗ್ಯ ರಕ್ಷಣೆಯ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುತ್ತದೆ. ಇಂದು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ PM-ABHIM ಅಡಿಯಲ್ಲಿ ಮೂರು ಕ್ರಿಟಿಕಲ್ ಕೇರ್ ಬ್ಲಾಕ್ ಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಪುದುಚೇರಿ ಮತ್ತು ಕಾರೈಕಲ್‌ನಲ್ಲಿರುವ ಈ ಹೊಸ ಕ್ರಿಟಿಕಲ್ ಕೇರ್ ಬ್ಲಾಕ್ ಗಳು ತುರ್ತು ಚಿಕಿತ್ಸಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿವೆ. ಪುದುಚೇರಿಯು ಸಿದ್ಧ ವೈದ್ಯಕೀಯ ಮತ್ತು ಸಮಗ್ರ ಆರೋಗ್ಯ ರಕ್ಷಣೆಗೆ ಹೆಸರುವಾಸಿಯಾಗಿದೆ. ಕಾರೈಕಲ್ ನಲ್ಲಿರುವ ಹೊಸ ಸಂಯೋಜಿತ ಆಯುಷ್ ಆಸ್ಪತ್ರೆಯು ಜನರಿಗೆ ಸೇವೆಯನ್ನು ನೀಡಲಿದೆ.
ಸ್ನೇಹಿತರೇ,
ಸಂಪರ್ಕವು ಪ್ರಗತಿಯ ಬೆನ್ನೆಲುಬಾಗಿದೆ. ನಾವು ಗ್ರಾಮೀಣ ಮತ್ತು ನಗರ ಮೂಲಸೌಕರ್ಯಗಳೆರಡರ ಮೇಲೂ ಗಮನ ಹರಿಸುತ್ತಿದ್ದೇವೆ. ಒಂದು ಕಡೆ, ನೂರಾರು ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಅವು ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳಿಗೆ ಸಂಪರ್ಕವನ್ನು ಸುಧಾರಿಸುತ್ತಿವೆ. ಅದೇ ಸಮಯದಲ್ಲಿ, ನಾವು ಪುದುಚೇರಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇವೆ. ನಾವು ಪುದುಚೇರಿ ಪಟ್ಟಣದಲ್ಲಿ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಘೋಷಿಸಿದ್ದೇವೆ. ಇದರಲ್ಲಿ ನಾಲ್ಕು ನೂರ ನಲವತ್ತು ಕೋಟಿ ರೂಪಾಯಿ ಮೌಲ್ಯದ ಫ್ಲೈಓವರ್ ಕೂಡ ಸೇರಿದೆ.
ಸ್ನೇಹಿತರೇ,
ಈಸ್ಟ್ ಕೋಸ್ಟ್ ರಸ್ತೆ ಮತ್ತು ಗ್ರಾಂಡ್ ಸದರ್ನ್ ಟ್ರಂಕ್ ರಸ್ತೆಗಳ ಮೇಲ್ದರ್ಜೆಗೇರಿಸುವ ಮೂಲಕ ಚೆನ್ನೈಗೆ ಸಂಪರ್ಕವನ್ನು ಸುಧಾರಿಸಲಾಗುತ್ತಿದೆ. ಪುದುಚೇರಿ ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ ಸುಮಾರು 1.5 ರಿಂದ 2 ಗಂಟೆಗಳಿಗೆ ಇಳಿಕೆಯಾಗಲಿದೆ. ಪುದುಚೇರಿಯಿಂದ ಕಡಲೂರು ರಾಷ್ಟ್ರೀಯ ಹೆದ್ದಾರಿಯು ಈಗಾಗಲೇ ಪೂರ್ಣಗೊಂಡಿದೆ ಮತ್ತು ಕಾರೈಕಲ್ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಕನ್ಯಾಕುಮಾರಿಯವರೆಗಿನ ಈಸ್ಟ್ ಕೋಸ್ಟ್ ಕಾರಿಡಾರ್ ನಲ್ಲಿ ರಸ್ತೆ ಯೋಜನೆಗಳಿಗಾಗಿ ನಾವು ಮೂವತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಹೂಡಿಕೆ ಮಾಡುತ್ತಿದ್ದೇವೆ. ಈ ಯೋಜನೆಗಳು ಪುದುಚೇರಿಯ ಭಾಗಗಳನ್ನು ಚೆನ್ನೈ, ಬೆಂಗಳೂರು ಮತ್ತು ಕೊಯಮತ್ತೂರಿನಂತಹ ಪ್ರಮುಖ ಆರ್ಥಿಕ ಕೇಂದ್ರಗಳೊಂದಿಗೆ ಸಂಪರ್ಕಿಸುತ್ತವೆ. ಇಂತಹ ಸಂಪರ್ಕವು ಪ್ರವಾಸೋದ್ಯಮ, ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಗಮನಾರ್ಹ ಉತ್ತೇಜನ ನೀಡುತ್ತದೆ.
ಸ್ನೇಹಿತರೇ,
ಪ್ರವಾಸೋದ್ಯಮವು ಪುದುಚೇರಿಯ ಅತಿದೊಡ್ಡ ಸಾಮರ್ಥ್ಯಗಳಲ್ಲಿ ಒಂದಾಗಿದೆ. ವಾರಾಂತ್ಯದ ತಾಣವಾಗಿ ಇದು ಈಗಾಗಲೇ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ರೈಲುಗಳು ಮತ್ತು ವಿಮಾನಗಳು ಯಾವಾಗಲೂ ಭರ್ತಿಯಾಗಿರುತ್ತವೆ. ಪುದುಚೇರಿಯ ಜನರ ಆತ್ಮೀಯತೆಯಿಂದಾಗಿ ಇದು ಸಾಧ್ಯವಾಗುತ್ತಿದೆ. ಆಧ್ಯಾತ್ಮಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ ಮತ್ತು ಆರೋಗ್ಯ ಪ್ರವಾಸೋದ್ಯಮದಲ್ಲಿನ ಹೂಡಿಕೆಗಳೊಂದಿಗೆ ನಾವು ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದೇವೆ. ಪ್ರಸಾದ್ (PRASHAD) ಯೋಜನೆಯಡಿ ವಿವಿಧ ದೇವಾಲಯಗಳಲ್ಲಿ ಯಾತ್ರಾ ಸೌಲಭ್ಯಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಶ್ರೀ ಅರವಿಂದರು ಮತ್ತು ಶ್ರೀ ಮಾತೆಯವರು ಆರೋವಿಲ್ ಅನ್ನು ‘ಜಾಗತಿಕ ಪ್ರಜ್ಞೆಯ ನಗರ’ (Universal City of Consciousness) ಎಂದು ಕಂಡಿದ್ದರು. ಇಂದು ಆರೋವಿಲ್ ನಲ್ಲಿ ಜಾಗತಿಕ ಆಧ್ಯಾತ್ಮಿಕ ಮಹೋತ್ಸವ ಆರಂಭವಾಗುತ್ತಿರುವುದು ನನಗೆ ಸಂತೋಷ ತಂದಿದೆ. ಇಂತಹ ಕೂಟಗಳು ವಿವಿಧ ಪ್ರದೇಶಗಳು ಮತ್ತು ಧರ್ಮಗಳ ಜನರನ್ನು ಒಗ್ಗೂಡಿಸುತ್ತವೆ.
ಸ್ನೇಹಿತರೇ,
ಡಬಲ್ ಎಂಜಿನ್ ಸರ್ಕಾರ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಸಂಭ್ರಮಿಸುವುದು ಮುಖ್ಯವಾಗಿದೆ. ಆದರೆ ಈ ಮೊದಲು ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಕಾಂಗ್ರೆಸ್-ಡಿಎಂಕೆ ಆಡಳಿತದ ಅವಧಿಯಲ್ಲಿ ಪುದುಚೇರಿಯ ಜನರು ಅಪಾರ ಸಂಕಷ್ಟ ಅನುಭವಿಸಿದರು. ಆ ವರ್ಷಗಳು ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ, ಅಪರಾಧ ಮತ್ತು ಬಡವರ ದುಃಖದಿಂದ ಕೂಡಿದ್ದವು. ಪಡಿತರ ಅಂಗಡಿಗಳಲ್ಲಿ ಅಕ್ಕಿ ಇರಲಿಲ್ಲ. ಸಂಬಳ ವಿಳಂಬವಾಗುತ್ತಿತ್ತು. ಗೂಂಡಾಗಳು ಮತ್ತು ಡ್ರಗ್ ಮಾಫಿಯಾಗಳು ಬೀದಿಗಳಲ್ಲಿ ಅಟ್ಟಹಾಸ ಮೆರೆಯುತ್ತಿದ್ದವು.
ಸ್ನೇಹಿತರೇ,
ದೆಹಲಿಯಲ್ಲಿ ಕುಳಿತಿರುವ ಒಂದು ಕುಟುಂಬಕ್ಕಾಗಿ ಕಾಂಗ್ರೆಸ್ ಪುದುಚೇರಿಯನ್ನು ಎಟಿಎಂ (ATM) ಆಗಿ ಮಾಡಿಕೊಂಡಿತ್ತು. ಇನ್ನು ಡಿಎಂಕೆ ವಿಷಯಕ್ಕೆ ಬಂದರೆ, ತಮಿಳುನಾಡಿನಲ್ಲಿಯೂ ನಡೆಯುತ್ತಿರುವ ಹಗರಣಗಳ ಸುದೀರ್ಘ ಪಟ್ಟಿಯನ್ನು ನೀವು ನೋಡುತ್ತಿದ್ದೀರಿ. ಕಾಂಗ್ರೆಸ್ ಮತ್ತು ಡಿಎಂಕೆ ಪುದುಚೇರಿಯ ಅಭಿವೃದ್ಧಿ ಪಯಣದಲ್ಲಿ ಸ್ಪೀಡ್ ಬ್ರೇಕರ್ ಗಳಾಗಿದ್ದವು. ಈಗ ಅದೇ ಶಕ್ತಿಗಳು ಮತ್ತೆ ಅಧಿಕಾರದ ಹಸಿವಿನಲ್ಲಿದ್ದಾರೆ. ಪುದುಚೇರಿ ಮತ್ತೆ ಆ ಭ್ರಷ್ಟಾಚಾರ ಮತ್ತು ಅಪರಾಧದ ಯುಗಕ್ಕೆ ಮರಳಬೇಕೆ? ಪುದುಚೇರಿಯ ಜನರು ಅದನ್ನು ಬಯಸುವುದಿಲ್ಲ ಎಂದು ನನಗೆ ಖಾತ್ರಿಯಿದೆ.
ಸ್ನೇಹಿತರೇ,
ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಪುದುಚೇರಿಯು ಅತ್ಯಂತ ಪ್ರಮುಖ ಭಾಗವಾಗಿದೆ. ಅನೇಕ ನಾಯಕರು ಇಲ್ಲಿ ಜನಿಸಿದರು. ಅವರಲ್ಲಿ ಕೆಲವರು ಇಲ್ಲಿಗೆ ಬಂದು ಇಲ್ಲಿಂದಲೇ ಕೆಲಸ ಮಾಡಿದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಈ ಭೂಮಿ ನಿರ್ಣಾಯಕವಾಗಿತ್ತು. ಈಗ, 2047ರ ವೇಳೆಗೆ ನಾವು ಅಭಿವೃದ್ಧಿ ಹೊಂದಿದ ಪುದುಚೇರಿ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕು. ಪುದುಚೇರಿಯ ಡಬಲ್ ಎಂಜಿನ್ ಸರ್ಕಾರವು ಈ ಅಭಿಯಾನದಲ್ಲಿ ನಿಮ್ಮೊಂದಿಗಿದೆ. ನಾವು ‘BEST’ ಪುದುಚೇರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.
ನಂಡ್ರಿ!
*****
Delighted to be among the wonderful people of Puducherry. Today, multiple development works are being launched that will enhance ease of living and boost the region’s economic growth.
— Narendra Modi (@narendramodi) March 1, 2026
https://t.co/EkAhZQ2xqr
When I came here earlier, I had given the mantra of BEST Puducherry.
— PMO India (@PMOIndia) March 1, 2026
BEST means Business, Education, Spirituality and Tourism.
In the last four and a half years, this vision is bearing fruit.
Puducherry has witnessed good governance and development: PM @narendramodi
A strong and empowered youth is the foundation of our growth.
— PMO India (@PMOIndia) March 1, 2026
We are working to support their dreams.
At NIT Karaikal, the new Dr. APJ Abdul Kalam Engineering Block and modern hostel facilities will strengthen technical education for many students.
Infrastructure upgrades have…
We believe that healthcare should be accessible, available and affordable to all.
— PMO India (@PMOIndia) March 1, 2026
Ayushman Bharat scheme is already fulfilling this vision for crores of families across India: PM @narendramodi
I strongly believe that Puducherry can become a medical tourism hub.
— PMO India (@PMOIndia) March 1, 2026
Puducherry already has nine medical colleges.
The modernisation of the Regional Cancer Centre at JIPMER will further expand healthcare capacity.
Today, the foundation stone has been laid for three Critical…