ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪೆರುವಿನೊಂದಿಗೆ ವಾಣಿಜ್ಯ, ಸೇವೆಗಳು ಮತ್ತು ಹೂಡಿಕೆ ಕುರಿತಂತೆ ವಾಣಿಜ್ಯ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ತನ್ನ ಅನುಮೋದನೆ ನೀಡಿದೆ.
ಪೆರುವಿನೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳನ್ನು ಬಳಸಿಕೊಳ್ಳುವ ಸಲುವಾಗಿ 2015ರ ಜನವರಿ 15ರಂದು ಭಾರತ ಮತ್ತು ಪೆರುವಿನ ನಡುವೆ ಒಂದು ಜಂಟಿ ಅಧ್ಯಯನ ಗುಂಪು (ಜೆ.ಎಸ್.ಜಿ.) ಸ್ಥಾಪಿಸಲಾಗಿತ್ತು. ಎರಡೂ ಕಡೆಯವರು 2016ರ ಅಕ್ಟೋಬರ್ 20ರಂದು ಜಂಟಿ ಅಧ್ಯಯನ ಗುಂಪಿನ ವರದಿಯನ್ನು ಅಂತಿಮಗೊಳಿಸಿವೆ ಮತ್ತು ಸರಕು ವಾಣಿಜ್ಯ, ಸೇವೆಗಳ ವ್ಯಾಪಾರ ಮತ್ತು ಹೂಡಿಕೆಯ ಚರ್ಚೆಯನ್ನು ಮುಂದುವರಿಸಿಕೊಂಡು ಹೋಗಲು ಒಪ್ಪಿಗೆ ಸೂಚಿಸಿವೆ.
ಹಿನ್ನೆಲೆ:
2015-16ನೇ ಸಾಲಿನಲ್ಲಿ ಲ್ಯಾಟಿನ್ ಅಮೆರಿಕಾ ಮತ್ತು ಕೆರೆಬಿಯನ್ (ಎಲ್.ಎ.ಸಿ.) ವಲಯದಲ್ಲಿ ಪೆರು ಭಾರತ ರಫ್ತು ಮಾಡುವ ತಾಣಗಳ ಪೈಕಿ 3ನೇ ಶ್ರೇಯಾಂಕ ಪಡೆದಿದೆ. ಪೆರುವಿನೊಂದಿಗೆ ಭಾರತದ ದ್ವಿಪಕ್ಷೀಯ ವಾಣಿಜ್ಯ 2005-06ರ ಅವಧಿಯಲ್ಲಿ 107.32 ದಶಲಕ್ಷ ಅಮೆರಿಕನ್ ಡಾಲರ್ ಆಗಿತ್ತು, ಅದು 2015-16ರಲ್ಲಿ ಶೇ.1319.45ರಷ್ಟು ವೃದ್ಧಿ ಕಂಡಿದೆ. 2015-16ರ ಅವಧಿಯಲ್ಲಿ, ದ್ವಿಪಕ್ಷೀಯ ವಾಣಿಜ್ಯ 703.12 ದಶಲಕ್ಷ ಅಮೆರಿಕನ್ ಡಾಲರ್ ರಫ್ತು ಮತ್ತು 820.22 ದಶಲಕ್ಷ ಅಮೆರಿಕನ್ ಡಾಲರ್ ಆಮದಿನೊಂದಿಗೆ 1,523.35 ದಶಲಕ್ಷ ಡಾಲರ್ ಆಗಿತ್ತು.
ಭಾರತವು ಪೆರುವಿನೊಂದಿಗೆ ಸ್ನೇಹ ಸಂಬಂಧ ಹೊಂದಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪೆರು ಭಾರತದೊಂದಿಗೆ ಸಹಕಾರ ನೀಡುತ್ತಿದೆ ಮತ್ತು ಈ ವಾಣಿಜ್ಯ ಒಪ್ಪಂದವು ಎರಡೂ ರಾಷ್ಟ್ರಗಳ ನಡುವಿನ ವಾಣಿಜ್ಯ ಮತ್ತು ಆರ್ಥಿಕ ಸಂಬಂಧವನ್ನು ಹೆಚ್ಚಿಸುತ್ತದೆ. ಈ ವಾಣಿಜ್ಯ ಒಪ್ಪಂದವು ಭಾರತ-ಪೆರು ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಮತ್ತು ಭಾರತ ಮತ್ತು ಲ್ಯಾಕ್ ರಾಷ್ಟ್ರಗಳ ನಡುವೆ ಇರುವ ಸಾಂಪ್ರದಾಯಿಕ ಸೋದರ ಸಂಬಂಧವನ್ನು ಕ್ರೋಡೀಕರಿಸುತ್ತದೆ.
AKT/VBA/SH