Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪೋರ್ಚುಗಲ್ ಗೆ ಭೇಟಿ ನೀಡಿದ ವೇಳೆ (ಜೂನ್ 24, 2017) ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ

ಪೋರ್ಚುಗಲ್ ಗೆ ಭೇಟಿ ನೀಡಿದ ವೇಳೆ (ಜೂನ್ 24, 2017) ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ

ಪೋರ್ಚುಗಲ್ ಗೆ ಭೇಟಿ ನೀಡಿದ ವೇಳೆ (ಜೂನ್ 24, 2017) ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ


ಘನತೆವೆತ್ತ ಪ್ರಧಾನಮಂತ್ರಿ ಆಂಟೋನಿಯಾ ಕೋಸ್ಟಾ ಅವರೇ, ಗೌರವಾನ್ವಿತ ಪ್ರತಿನಿಧಿಗಳೇ, ಮಾಧ್ಯಮದ ಸದಸ್ಯರೇ,

ಮೊದಲಿಗೆ, ನಾನು ಕಳೆದ ವಾರ ಪೋರ್ಚುಗಲ್ ನಲ್ಲಿ ಸಂಭವಿಸಿದ ಕಾಳ್ಗಿಚ್ಚಿಗೆ ಬಲಿಯಾದವರಿಗೆ ತೀವ್ರ ಸಂತಾಪ ಮತ್ತು ಅನುಕಂಪವನ್ನು ವ್ಯಕ್ತಪಡಿಸುತ್ತೇನೆ. ಸಂತ್ರಸ್ತರ ಕುಟುಂಬದೊಂದಿಗೆ ನಮ್ಮ ಸಂವೇದನೆ ಮತ್ತು ಪ್ರಾರ್ಥನೆ ಇದೆ.

ಸ್ನೇಹಿತರೆ,

ನಮ್ಮ ಎರಡೂ ದೇಶಗಳ ನಡುವೆ ಆಳವಾದ ಐತಿಹಾಸಿಕ ನಂಟಿದೆ ಮತ್ತು ಬಲವಾದ ಆರ್ಥಿಕ ಹಾಗೂ ಜನರೊಂದಿಗಿನ ಸಂಪರ್ಕವಿದೆ. ಹೀಗಿದ್ದೂ, ದ್ವಿಪಕ್ಷೀಯ ಮಾತುಕತೆಗೆ ಭಾರತದ ಪ್ರಧಾನಿಯವರು ಪೋರ್ಚುಗಲ್ ಗೆ ಭೇಟಿ ನೀಡಿಲ್ಲ ಎಂದು ತಿಳಿದು ನನಗೆ ಅಚ್ಚರಿ ಆಯಿತು. ಆದಾಗ್ಯೂ, ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಇದು ಭಾರತ ಮತ್ತು ಪೋರ್ಚುಗಲ್ ನಡುವಿನ ಎರಡನೇ ಶೃಂಗವಾಗಿದೆ ಎಂಬುದು ನನಗೆ ತೃಪ್ತಿ ತಂದಿದೆ. ಈ ಅಲ್ಪಾವಧಿಯಲ್ಲಿ ಪ್ರಧಾನಿ ಕೋಸ್ಟಾ ಅವರು, ನನ್ನನ್ನು ಆತ್ಮೀಯವಾಗಿ ಮತ್ತು ವಾತ್ಸಲ್ಯದಿಂದ ಬರಮಾಡಿಕೊಂಡಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನಾವು ಕಳೆದ ಜನವರಿಯಲ್ಲಿ ಪ್ರಧಾನಮಂತ್ರಿ ಕೋಸ್ಟಾ ಅವರನ್ನು ಭಾರತದಲ್ಲಿ ಸ್ವಾಗತಿಸುವ ಗೌರವ ಪಡೆದೆವು. ಇದು ಕೇವಲ ದ್ವಿಪಕ್ಷೀಯ ಭೇಟಿ ಅಷ್ಟೇ ಆಗಿರಲಿಲ್ಲ, ಅವರು ಅನಿವಾಸಿ ಭಾರತೀಯರ ಸಂಭ್ರಮದ ನಮ್ಮ ಪ್ರವಾಸಿ ಭಾರತೀಯ ದಿವಸ್ ನ ಮುಖ್ಯ ಅತಿಥಿಯಾಗಿದ್ದರು. ಪ್ರಧಾನ ಮಂತ್ರಿ ಕೋಸ್ಟಾ ಅವರು ಪ್ರಪಂಚದಾದ್ಯಂತದ ಅತ್ಯುತ್ತಮ ಭಾರತೀಯ ವಲಸಿಗರನ್ನು ಪ್ರತಿನಿಧಿಸುತ್ತಾರೆ.

ಸ್ನೇಹಿತರೆ,

ಪ್ರಧಾನಮಂತ್ರಿ ಕೋಸ್ಟಾ ಹಾಗೂ ನಾನು, ವಿಸ್ತೃತ ಶ್ರೇಣಿಯ ಮಾತುಕತೆಯನ್ನು ಇಂದು ನಡೆಸಿದ್ದೇವೆ ಮತ್ತು ಅವರ ಭಾರತ ಭೇಟಿಯ ನಂತರದ ಪ್ರಗತಿಯನ್ನು ಪರಾಮರ್ಶಿಸಿದ್ದೇವೆ. ನಮ್ಮ ಆರ್ಥಿಕ ಬಾಂಧವ್ಯ ಏರುಮುಖವಾಗಿ ಸಾಗಿದೆ. ದ್ವಿಪಕ್ಷೀಯ ವಾಣಿಜ್ಯ ಕಳೆದ ವರ್ಷ ಶೇ.17ರಷ್ಟು ಹೆಚ್ಚಳ ಆಗಿದೆ. ಪೋರ್ಚುಗಲ್ ನಿಂದ ಭಾರತಕ್ಕೆ ಸಣ್ಣ ಪ್ರಮಾಣದ ಮೂಲಕ ಬರುವ ನೇರ ವಿದೇಶೀ ಬಂಡವಾಳ, 2016-17ರಲ್ಲಿ ದುಪ್ಪಟ್ಟಾಗಿದೆ. ಆದರೆ, ನಾವು ನಮ್ಮ ಎರಡು ರಾಷ್ಟ್ರಗಳ ನಡುವೆ ಸರಕು, ಸೇವೆಗಳು, ಬಂಡವಾಳ ಮತ್ತು ಮಾನವ ಸಂಪನ್ಮೂಲವನ್ನು ಹೆಚ್ಚಿಸಲು ಇನ್ನೂ ಹೆಚ್ಚಿನದನ್ನು ನಾವು ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ, ಪೋರ್ಚುಗೀಸ್ ನ ಆರ್ಥಿಕ ಪುನಃಚೇತರಿಕೆ ಮತ್ತು ಭಾರತದ ಬಲವಾದ ಬೆಳವಣಿಗೆ ನಮಗೆ ಒಟ್ಟಾಗಿ ಬೆಳೆಯಲು ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ.

ಸ್ನೇಹಿತರೆ,

ಉದ್ಯಮಶೀಲತೆಯಲ್ಲಿ ಪೋರ್ಚುಗಲ್ ಯುರೋಪ್ ನ ಚೈತನ್ಯಶೀಲ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ಭಾರತ ಸಹ ದೃಢ ಮತ್ತು ಕ್ರಿಯಾತ್ಮಕ ನವೋದ್ಯಮ ಕೈಗಾರಿಕೆಗಳ ತವರಾಗಿದೆ. ಸಮಾಜದ ಪ್ರಯೋಜನಕ್ಕಾಗಿ ಮೌಲ್ಯ ಮತ್ತು ಸಂಪತ್ತನ್ನು ಸೃಷ್ಟಿಸಲು ನವೋದ್ಯಮ ಜಗತ್ತು ಯುವಜನತೆಯ, ಕಲ್ಪನೆಗಳು, ತಂತ್ರಜ್ಞಾನ, ನಾವೀನ್ಯತೆ ಮತ್ತು ಸೃಜನಶೀಲತೆಯ ಅದ್ಭುತ ತಾಣವಾಗಿದೆ. ಪ್ರಧಾನಿ ಕೋಸ್ಟಾ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾನು ಮತ್ತು ಅವರು ಭಾರತ-ಪೋರ್ಚುಗಲ್ ಅಂತಾರಾಷ್ಟ್ರೀಯ ನವೋದ್ಯಮ ತಾಣದ ಬಗ್ಗೆ ಚರ್ಚಿಸಿದ್ದೆವು. ಈ ಅಲ್ಪಾವಧಿಯಲ್ಲಿ ಇದು ಸಾಕಾರವಾಗಿರುವುದನ್ನು ಕಾಣಲು ನನಗೆ ಹೆಮ್ಮೆ ಎನಿಸುತ್ತದೆ. ನಾನು ಇದನ್ನು ಪ್ರಧಾನಿ ಕೋಸ್ಟಾ ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಲು ಎದಿರು ನೋಡುತ್ತಿದ್ದೇನೆ. ತೆರಿಗೆ, ಆಡಳಿತ ಸುಧಾರಣೆ, ವಿಜ್ಞಾನ, ಬಾಹ್ಯಾಕಾಶ, ಯುವ ವ್ಯವಹಾರ ಮತ್ತು ಕ್ರೀಡಾ ಕ್ಷೇತ್ರದ ಹೊಸ ಒಪ್ಪಂದಗಳು ನಮ್ಮ ಪಾಲುದಾರಿಕೆಯ ವಿಸ್ತೃತ ಸ್ವರೂಪವನ್ನು ಒತ್ತಿ ಹೇಳುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ನಮ್ಮ ಸಹಕಾರ ಸಹ ಚಾಲನೆ ಪಡೆಯುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿನ ನಮ್ಮ ಸಹಯೋಗಕ್ಕೆ ಬೆಂಬಲ ನೀಡಲು, ನಾವು 4 ದಶಲಕ್ಷ ಯೂರೋದ ಜಂಟಿ ಎಸ್ ಅಂಡ್ ಟಿ ನಿಧಿ ಸ್ಥಾಪಿಸುತ್ತಿದ್ದೇವೆ. ನಾವು ನ್ಯಾನೋ ತಂತ್ರಜ್ಞಾನ, ಸಾಗರ ವಿಜ್ಞಾನ ಮತ್ತು ಸಾಗರ ಶಾಸ್ತ್ರದಲ್ಲಿನ ಪೋರ್ಚುಗೀಸ್ ಅನುಭವದಿಂದ ಕಲಿಯಲು ಉತ್ಸುಕರಾಗಿದ್ದೇವೆ. ಬಾಹ್ಯಾಕಾಶ ನಮ್ಮ ಹೊಸ ದ್ವಿಪಕ್ಷೀಯ ಸಹಕಾರ ಕ್ಷೇತ್ರವಾಗಿದೆ. ಈ ವರ್ಷದ ಆರಂಭದಲ್ಲಿ ಪ್ರಧಾನಿ ಕೋಸ್ಟಾ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕಲ್ಪನೆ ಮೂಡಿತ್ತು. ನಾವು ಪೋರ್ಚುಗಲ್ ನಲ್ಲಿರುವ ಆಟ್ಲಾಂಟಿಕ್ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರದೊಂದಿಗೆ ಬಾಹ್ಯಾಕಾಶ ಮತ್ತು ಸಾಗರ ವಿಜ್ಞಾನ ಕ್ಷೇತ್ರದಲ್ಲಿ ತೊಡಗಲು ಉತ್ಸುಕರಾಗಿದ್ದೇವೆ.

ಸ್ನೇಹಿತರೆ,

ನಮ್ಮ ಎರಡೂ ರಾಷ್ಟ್ರಗಳು ಕ್ರೀಯಾಶೀಲ ಮತ್ತು ಬೆಳೆಯುತ್ತರುವ ಜನರೊಂದಿಗಿನ ಬಾಂಧವ್ಯವನ್ನು ಹೊಂದಿವೆ. ಪೋರ್ಚುಗಲ್ ನಲ್ಲಿರುವ ಭಾರತೀಯ ಸಮುದಾಯ ನಮ್ಮ ದ್ವಿಪಕ್ಷೀಯ ಬಾಂಧವ್ಯ ಆಳಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಪೋರ್ಚುಗೀಸರ ಫುಟ್ಬಾಲ್ ಮೇಲಿನ ಒಲವು ಆಳವಾಗಿದೆ. ಕೋಸ್ಟಾ ಅವರೇ ಸ್ವತಃ ಅತಿ ದೊಡ್ಡ ಫುಟ್ಬಾಲ್ ಪ್ರೇಮಿ. ಇದು ಕೂಡ ನಮ್ಮ ಸಮಾಜವನ್ನು ಮತ್ತಷ್ಟು ಸಂಪರ್ಕಿಸಲಿದೆ. ನಮ್ಮ ಸಾಂಸ್ಕೃತಿಕ ಚಟುವಟಿಕೆಗಳು ವಿಸ್ತಾರವಾಗುತ್ತಿವೆ. ನಾವು ಲಿಸ್ಬನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಅಧ್ಯಯನ ಪೀಠವನ್ನು ಸ್ಥಾಪಿಸಿದ್ದೇವೆ. ಭಾರತೀಯ ಚಲನಚಿತ್ರಗಳು ಪೋರ್ಚುಗೀಸ್ ಭಾಷೆಯ ಶೀರ್ಷಿಕೆಗಳನ್ನು ಹೊಂದಿವೆ. ಪರಸ್ಪರರ ಅನುಕೂಲಕ್ಕಾಗಿ ಹಿಂದಿ-ಪೋರ್ಚುಗೀಸ್ ನಿಘಂಟು ಅಭಿವೃದ್ಧಿಪಡಿಸಲಾಗಿದೆ. 17ನೇ ಶತಮಾನದಲ್ಲಿ ಗೋವಾ ಮತ್ತು ಪೋರ್ಚುಗಲ್ ನಡುವೆ ವಿನಿಮಯವಾದಪತ್ರಗಳ 12 ಸಾವಿರ ಡಿಜಿಟಲ್ ದಸ್ತಾವೇಜುಗಳನ್ನು ಹಂಚಿಕೊಂಡ ಪೋರ್ಚುಗಲ್ ಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಮಹತ್ವದ ಸಂಗ್ರಹ ನಮ್ಮ ಸಂಶೋಧಕರಿಗೆ ದೊಡ್ಡ ಲಾಭ ತರಲಿದೆ.

ಸ್ನೇಹಿತರೇ,

ಭಾರತ ಮತ್ತು ಪೋರ್ಚುಗಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲವಾದ ಪಾಲುದಾರರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ್ತು ಬಹುಪಕ್ಷೀಯ ರಫ್ತು ನಿಯಂತ್ರಣ ಆಡಳಿತದಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡುವ ಬಗ್ಗೆ ನಿಮ್ಮ ನಿರಂತರ ಬೆಂಬಲಕ್ಕೆ ನಾನು ಪೋರ್ಚುಗಲ್ ಗೆ ಧನ್ಯವಾದ ಅರ್ಪಿಸುತ್ತೇನೆ. ನಾವು ಭಯೋತ್ಪಾದನೆ ಮತ್ತು ಹಿಂಸಾತ್ಮಕ ವಿಧ್ವಂಸಕತೆಯ ವಿರುದ್ಧ ಹೋರಾಟವನ್ನು ಆಳಗೊಳಿಸಲು ಸಂಕಲ್ಪಿಸಿದ್ದೇವೆ.

ಘನತೆವೆತ್ತರೇ,

ನಾನು ಮತ್ತೊಮ್ಮೆ ತಮ್ಮ ಬಿಡುವಿಲ್ಲದ ಕಾರ್ಯಭಾರದ ನಡುವೆಯೂ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದಕ್ಕೆ ಮತ್ತು ನೀಡಿದ ಆದರಕ್ಕೆ ಧನ್ಯವಾದ ಅರ್ಪಿಸುತ್ತೇನೆ.

ಮ್ಯುಟೊ ಓಬ್ರಿಗಡೋ ತುಂಬಾ ಧನ್ಯವಾದಗಳು.

***

VBA/HS