ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 1650 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಮಂತ್ರಿಯವರ ಸಂಶೋಧನಾ ಶಿಷ್ಯವೇತನ (ಪಿ.ಎಂ.ಆರ್.ಎಫ್.) ಯೋಜನೆಯನ್ನು 2018-19ರಿಂದ ಏಳು ವರ್ಷಗಳ ಅವಧಿಗೆ ಜಾರಿ ಮಾಡಲು ತನ್ನ ಅನುಮೋದನೆ ನೀಡಿದೆ.
ಪ್ರಧಾನಮಂತ್ರಿಯವರು ದೇಶದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ನಾವಿನ್ಯತೆ ಮತ್ತು ತಂತ್ರಜ್ಞಾನದ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಈ ಶಿಷ್ಯವೇತನ ಯೋಜನೆಯು ನಾವಿನ್ಯತೆಯ ಮೂಲಕ ಅಭಿವೃದ್ಧಿ ಸಾಧಿಸುವ ಅವರ ದೂರದರ್ಶಿತ್ವದ ಸಾಕಾರಕ್ಕೆ ಪ್ರಮುಖವಾಗಿದೆ. ಈ ಯೋಜನೆಯನ್ನು 2018-19ನೇ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.
ಈ ಯೋಜನೆಯಡಿ, ಐಐಎಸ್.ಸಿ/ಐಐಟಿಗಳು/ಎನ್.ಐ.ಟಿಗಳು/ಐಐಎಸ್ಇಆರ್ ಗಳು/ಐಐಐಟಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಬಿಟೆಕ್ ಅಥವಾ ಸಮ್ಮಿಲಿತ ಎಂ.ಟೆಕ್ ಅಥವಾ ಎಂ.ಎಸ್ಸಿ ಪದವಿ ಪೂರ್ಣಗೊಳಿಸಿದ ಅಥವಾ ಅಂತಿಮ ವರ್ಷದಲ್ಲಿ ಓದುತ್ತಿರುವ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಐಐಟಿಗಳು/ಐಐಎಸ್ಸಿಯಲ್ಲಿ ಪಿಎಚ್ಡಿಗೆ ನೇರವಾಗಿ ಪ್ರವೇಶ ನೀಡಲಾಗುತ್ತದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಮತ್ತು ಪಿಎಮ್ಆರ್.ಎಫ್ ಮಾರ್ಗಸೂಚಿಯಲ್ಲಿ ನೀಡಲಾಗಿರುವಂತೆ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಅಂತಹ ವಿದ್ಯಾರ್ಥಿಗಳಿಗೆ, ಮೊದಲ ಎರಡು ವರ್ಷಗಳಲ್ಲಿ ತಿಂಗಳಿಗೆ ರೂ .70,000, 3ನೇ ವರ್ಷದಲ್ಲಿ ತಿಂಗಳಿಗೆ ರೂ .75,000 ಮತ್ತು 4 ನೇ ಮತ್ತು 5 ನೇ ವರ್ಷಗಳಲ್ಲಿ ರೂ .80,000 ಶಿಷ್ಯವೇತನ ನೀಡಲಾಗುತ್ತದೆ. ಇದರ ಜೊತೆಗೆ 5 ವರ್ಷಗಳ ಅವಧಿಗೆ ಸಂಶೋಧನಾ ಅನುದಾನವಾಗಿ 2 ಲಕ್ಷ ರೂಪಾಯಿಗಳನ್ನು ಪ್ರತಿಯೊಬ್ಬ ಶಿಷ್ಯವೇತನ ಪಡೆದ ವಿದ್ಯಾರ್ಥಿಗೆ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಮತ್ತು ವಿಚಾರಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಅವರ ವಿದೇಶೀ ಪ್ರವಾಸದ ವೆಚ್ಚಕ್ಕಾಗಿ ನೀಡಲಾಗುತ್ತದೆ. 2018-19ರಿಂದ ಆರಂಭವಾಗುವ ಮೂರು ವರ್ಷಗಳ ಅವಧಿಯಲ್ಲಿ ಗರಿಷ್ಠ 3 ಸಾವಿರ ಫೆಲೋಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ಯೋಜನೆಯು ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶೀಯವಾಗಿ ಸಂಶೋಧನೆ ಕೈಗೊಳ್ಳಲು ದೇಶದ ಪ್ರತಿಭಾವಂತರನ್ನು ಶೋಧಿಸಲು ದೊಡ್ಡ ಮಾರ್ಗವನ್ನು ತೋರುತ್ತದೆ. ಯೋಜನೆಯಡಿಯಲ್ಲಿ ನಡೆವ ಸಂಶೋಧನೆಯು ಒಂದೆಡೆ ನಮ್ಮ ರಾಷ್ಟ್ರೀಯ ಆದ್ಯತೆಯನ್ನು ನಿಭಾಯಿಸುತ್ತದೆ ಮತ್ತು ಮತ್ತೊಂದೆಡೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಗುಣಮಟ್ಟದ ಬೋಧಕರ ಕೊರತೆಯನ್ನು ನೀಗಿಸುತ್ತದೆ.