ಪಿಎಂಇಂಡಿಯಾ
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ.
ಮತ್ತೊಮ್ಮೆ, ‘ಮನದ ಮಾತು’ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ. ಮಾರ್ಚ್ ನ ಈ ತಿಂಗಳು ಜಾಗತಿಕ ಮಟ್ಟದಲ್ಲಿ ಅತೀವವಾದ ಪ್ರಕ್ಷುಬ್ಧತೆಯಿಂದ ಕೂಡಿದ ಕಾಲವಾಗಿದೆ. ಈ ಹಿಂದೆ, ಇಡೀ ಜಗತ್ತು ಕೋವಿಡ್ ನಿಂದಾಗಿ ದೀರ್ಘಕಾಲದವರೆಗೆ ಹಲವಾರು ಸಮಸ್ಯೆಗಳನ್ನು ಹೇಗೆ ಎದುರಿಸಿತ್ತು ಎಂಬುದು ಎಲ್ಲರಿಗೂ ನೆನಪಿದೆ. ಕೊರೋನಾ ಬಿಕ್ಕಟ್ಟಿನಿಂದ ಹೊರಬಂದ ನಂತರ, ಜಗತ್ತು ಹೊಸ ಚೈತನ್ಯದೊಂದಿಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುವುದು ಎಂದು ನಾವೆಲ್ಲರೂ ನಿರೀಕ್ಷಿಸಿದ್ದೆವು. ಆದಾಗ್ಯೂ, ಪ್ರಪಂಚದ ವಿವಿಧ ಭಾಗಗಳಲ್ಲಿ ನಿರಂತರ ಯುದ್ಧ ಮತ್ತು ಸಂಘರ್ಷದ ಪರಿಸ್ಥಿತಿಗಳು ಉದ್ಭವಿಸುತ್ತಲೇ ಇವೆ. ಪ್ರಸ್ತುತ, ಕಳೆದ ಒಂದು ತಿಂಗಳಿನಿಂದ ನಮ್ಮ ನೆರೆಹೊರೆಯಲ್ಲಿ ಭೀಕರ ಯುದ್ಧ ನಡೆಯುತ್ತಿದೆ. ನಮ್ಮ ಲಕ್ಷಾಂತರ ಕುಟುಂಬಗಳ ಸಂಬಂಧಿಕರು ಈ ದೇಶಗಳಲ್ಲಿ – ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ, ಕೆಲಸ ಮಾಡುತ್ತಿದ್ದಾರೆ. ಅವರು ಅಲ್ಲಿ ವಾಸಿಸುವ ಹತ್ತು ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯವನ್ನು ನೀಡುತ್ತಿದ್ದಾರೆ. ಹಾಗಾಗಿ ನಾನು ಗಲ್ಫ್ ರಾಷ್ಟ್ರಗಳಿಗೆ ತುಂಬಾ ಕೃತಜ್ಞನಾಗಿದ್ದೇನೆ.
ಸ್ನೇಹಿತರೇ,
ಪ್ರಸ್ತುತ ಯುದ್ಧ ನಡೆಯುತ್ತಿರುವ ಪ್ರದೇಶವು ನಮ್ಮ ಇಂಧನ ಅಗತ್ಯಗಳ ಪ್ರಮುಖ ಕೇಂದ್ರವಾಗಿದೆ. ಪರಿಣಾಮವಾಗಿ, ಪ್ರಪಂಚದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಗೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಪರಿಸ್ಥಿತಿ ವೃಧ್ಧಿಸುತ್ತಿದೆ. ನಮ್ಮ ಜಾಗತಿಕ ರಾಜತಾಂತ್ರಿಕ ಸಂಬಂಧಗಳು, ವಿವಿಧ ರಾಷ್ಟ್ರಗಳಿಂದ ನಾವು ಪಡೆಯುತ್ತಿರುವ ಸಹಕಾರ ಮತ್ತು ಕಳೆದ ದಶಕದಲ್ಲಿ ನಾವು ನಿರ್ಮಿಸಿರುವ ರಾಷ್ಟ್ರೀಯ ಸಾಮರ್ಥ್ಯದಿಂದಾಗಿ, ಭಾರತವು ಈ ಸಂದರ್ಭಗಳನ್ನು ಅತ್ಯಂತ ದಿಟ್ಟತನದಿಂದ ಎದುರಿಸುತ್ತಿದೆ.
ಸ್ನೇಹಿತರೇ,
ನಿಸ್ಸಂದೇಹವಾಗಿ ಇದೊಂದು ಸವಾಲಿನ ಸಮಯ. ಇಂದು ‘ಮನದ ಮಾತಿನ’ ಮೂಲಕ, ನಾನು ಮತ್ತೊಮ್ಮೆ ಎಲ್ಲಾ ದೇಶಬಾಂಧವರಲ್ಲಿ ಈ ಬಿಕ್ಕಟ್ಟನ್ನು ಜಯಿಸಲು ಒಗ್ಗಟ್ಟಿನಿಂದ ಜೊತೆಗೂಡಬೇಕೆಂದು ಆಗ್ರಹಿಸುತ್ತೇನೆ. ಈ ವಿಷಯವನ್ನು ಕೂಡ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿರುವವರು ಅದನ್ನು ನಿಲ್ಲಿಸಬೇಕು. ಈ ವಿಷಯವು ಈ ದೇಶದ 140 ಕೋಟಿ ನಾಗರಿಕರ ಹಿತಾಸಕ್ತಿಗಳಿಗೆ ಸಂಬಂಧಿಸಿದ್ದಾಗಿದೆ, ಇಂಥ ಸಂದರ್ಭದಲ್ಲಿ ಸ್ವಾರ್ಥಪರ ರಾಜಕೀಯ ಸಲ್ಲದು. ಇಂತಹ ಸಮಯದಲ್ಲಿ, ವದಂತಿಗಳನ್ನು ಹರಡುತ್ತಿರುವವರು ರಾಷ್ಟ್ರಕ್ಕೆ ಅಪಾರ ಹಾನಿಯನ್ನುಂಟುಮಾಡುತ್ತಿದ್ದಾರೆ. ಎಲ್ಲಾ ನಾಗರಿಕರು ಜಾಗರೂಕರಾಗಿರಿ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಾನು ಮನವಿ ಮಾಡುತ್ತೇನೆ. ದಯವಿಟ್ಟು ಸರ್ಕಾರವು ನಿಮಗೆ ನಿರಂತರವಾಗಿ ಒದಗಿಸುತ್ತಿರುವ ಮಾಹಿತಿಯ ಮೇಲೆ ನಂಬಿಕೆಯಿರಿಸಿ ಮತ್ತು ಆ ಅಧಿಕೃತ ಮಾಹಿತಿಯನ್ನಾಧಿರಿಸಿಯೇ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿ. ಹಿಂದೆಂದಿನಂತೆ, ಈ ಬಾರಿಯೂ ಸಹ 140 ಕೋಟಿ ದೇಶವಾಸಿಗಳ ಸಾಮೂಹಿಕ ಶಕ್ತಿಯ ಮೂಲಕ ಈ ಹಿಂದೆ ನಾವು ಬಿಕ್ಕಟ್ಟುಗಳನ್ನು ಜಯಿಸಿದಂತೆಯೇ, ಈ ಕಠಿಣ ಪರಿಸ್ಥಿತಿಯಿಂದಲೂ ಯಶಸ್ವಿಯಾಗಿ ಹೊರಬರುತ್ತೇವೆ ಎಂದು ನನಗೆ ವಿಶ್ವಾಸವಿದೆ.
ನನ್ನ ಪ್ರಿಯ ದೇಶವಾಸಿಗಳೇ,
ಭಾರತದ ಶಕ್ತಿ ಇಲ್ಲಿನ ಕೋಟ್ಯಾಂತರ ಜನರಲ್ಲಿಯೇ ಮಿಳಿತವಾಗಿದೆ. ಇಂದು, ‘ಮನದ ಮಾತಿನಲ್ಲಿ’, ನಮ್ಮ ನಾಗರಿಕರಲ್ಲಿ ಸಾರ್ವಜನಿಕ ಸಹಭಾಗಿತ್ವದ ಮನೋಭಾವವನ್ನು ಪ್ರತಿಬಿಂಬಿಸುವ ಒಂದು ಉಪಕ್ರಮದ ಬಗ್ಗೆ ನಾನು ಮಾತನಾಡಲು ಬಯಸುತ್ತೇನೆ. ಅದೇ ‘ಜ್ಞಾನ ಭಾರತಂ ಸಮೀಕ್ಷೆ’, ಇದು ನಮ್ಮ ಭವ್ಯ ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯೊಂದಿಗೆ ಆಳವಾದ ಸಂಪರ್ಕ ಹೊಂದಿದೆ. ದೇಶಾದ್ಯಂತ ಅಸ್ತಿತ್ವದಲ್ಲಿರುವ ಹಸ್ತಪ್ರತಿಗಳು ಅಂದರೆ *ಪಾಂಡುಲಿಪಿಗಳು* – ಕುರಿತು ಮಾಹಿತಿಯನ್ನು ಸಂಗ್ರಹಿಸುವುದು ಇದರ ಉದ್ದೇಶವಾಗಿದೆ. ‘ಜ್ಞಾನ ಭಾರತಂ ಅಪ್ಲಿಕೇಶನ್’ ಈ ಸಮೀಕ್ಷೆಯಲ್ಲಿ ಭಾಗವಹಿಸಲು ಒಂದು ಮಾಧ್ಯಮದ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಬಳಿ ಹಸ್ತಪ್ರತಿಗಳಿದ್ದರೆ ಅಥವಾ ಅವುಗಳ ಬಗ್ಗೆ ಮಾಹಿತಿಯನ್ನು ಹೊಂದಿದ್ದರೆ – ‘ಜ್ಞಾನ ಭಾರತಂ ಅಪ್ಲಿಕೇಶನ್’ ನಲ್ಲಿ ಅದರ ಛಾಯಾಚಿತ್ರವನ್ನು ದಾಖಲಿಸುವಂತೆ ನಿಮ್ಮನ್ನು ಆಗ್ರಹಿಸುತ್ತೇನೆ. ಯಾವುದೇ ನಮೂದು ಅಥವಾ ಸಂಬಂಧಿತ ಮಾಹಿತಿಯನ್ನು ದಾಖಲಿಸುವ ಮೊದಲು, ಅದು ಪರಿಶೀಲನಾ ಪ್ರಕ್ರಿಯೆಗೆ ಒಳಗಾಗುತ್ತದೆ. ಇಲ್ಲಿಯವರೆಗೆ, ಸಾವಿರಾರು ಹಸ್ತಪ್ರತಿಗಳನ್ನು ಸಾರ್ವಜನಿಕರು ಹಂಚಿಕೊಂಡಿದ್ದಾರೆ ಎಂಬುದು ಸಂತಸದ ಸಂಗತಿ. ಉದಾಹರಣೆಗೆ, ಅರುಣಾಚಲ ಪ್ರದೇಶದ ನಾಮ್ಸೈನ ಚಾವೊ ನಂತಿಸಿಂಧ್ ಲೋಕಾಂಗ್ ಜಿ, ತಾಈ ಲಿಪಿಯಲ್ಲಿ ಬರೆದ ಹಸ್ತಪ್ರತಿಗಳನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ, ಅಮೃತಸರದ ಸೋದರ ಅಮಿತ್ ಸಿಂಗ್ ರಾಣಾ ಅವರು ಗುರುಮುಖಿ ಲಿಪಿಯಲ್ಲಿ ಬರೆದ ಹಸ್ತಪ್ರತಿಗಳನ್ನು ಹಂಚಿಕೊಂಡಿದ್ದಾರೆ – ಇದು ನಮ್ಮ ಶ್ರೇಷ್ಠ ಸಿಖ್ ಸಂಪ್ರದಾಯ ಮತ್ತು ಪಂಜಾಬಿ ಭಾಷೆಗೆ ಸಂಬಂಧಿಸಿದ ಲಿಪಿಯಾಗಿದೆ. ಹಲವಾರು ಸಂಸ್ಥೆಗಳು ತಾಳೆ ಎಲೆಗಳ ಮೇಲೆ ಕೆತ್ತಲಾದ ಹಸ್ತಪ್ರತಿಗಳನ್ನು ಕೊಡುಗೆಯಾಗಿ ನೀಡಿವೆ. ರಾಜಸ್ಥಾನದಲ್ಲಿರುವ ಅಭಯ್ ಜೈನ್ ಗ್ರಂಥಾಲಯವು ತಾಮ್ರ ಫಲಕಗಳ ಮೇಲೆ ಕೆತ್ತಲಾದ ಪ್ರಾಚೀನ ಹಸ್ತಪ್ರತಿಗಳನ್ನು ನೀಡಿದೆ. ಈ ಮಧ್ಯೆ, ಲಡಾಖ್‌ನಲ್ಲಿರುವ ಹೆಮಿಸ್ ಮಠವು ಟಿಬೆಟಿಯನ್ ಭಾಷೆಯಲ್ಲಿ ಬರೆಯಲಾದ ಅಮೂಲ್ಯ ಹಸ್ತಪ್ರತಿಗಳ ಬಗ್ಗೆ ಮಾಹಿತಿಯನ್ನು ಒದಗಿಸಿದೆ. ಇವು ಹಲವು ಉದಾಹರಣೆಗಳು ಮಾತ್ರವಾಗಿವೆ. ಈ ಸಮೀಕ್ಷೆಯನ್ನು ಜೂನ್ ಮಧ್ಯದವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ನಮ್ಮ ಸಂಸ್ಕೃತಿಯ ಆ ಅಂಶಗಳನ್ನು ಬೆಳಕಿಗೆ ತಂದು ಹಂಚಿಕೊಳ್ಳುವಂತೆ ಆಗ್ರಹಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೇ,
ಭಾರತವು ವಿಶ್ವದ ಅತ್ಯಂತ ಯುವ ರಾಷ್ಟ್ರವಾಗಿದೆ. ರಾಷ್ಟ್ರದ ಯುವಕರ ಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿದಾಗ, ಅದು ಅಪಾರ ಬಲವನ್ನು ಒದಗಿಸುತ್ತದೆ. ರಾಷ್ಟ್ರ ನಿರ್ಮಾಣದ ಈ ಜವಾಬ್ದಾರಿಯನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ‘ನನ್ನ ಯುವ ಭಾರತ’ ಅಂದರೆ MY Bharat ಸಂಘಟನೆ. ಈ ಸಂಸ್ಥೆಯು ದೇಶದ ಯುವಕರನ್ನು ವೈವಿಧ್ಯಮಯ ರಚನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇತ್ತೀಚೆಗೆ, ‘MY Bharat‘ ಸಂಘಟನೆ ‘ಬಜೆಟ್ ಅನ್ವೇಷಣೆ’ಯನ್ನು ಆಯೋಜಿಸಿದೆ. ದೇಶಾದ್ಯಂತದ ಯುವಕರಿಗೆ ಬಜೆಟ್ ಪ್ರಕ್ರಿಯೆ ಮತ್ತು ನೀತಿ ನಿರೂಪಣೆಯ ಜಟಿಲತೆಗಳ ಬಗ್ಗೆ ಪರಿಚಯಿಸುವುದು ಈ ಉಪಕ್ರಮದ ಉದ್ದೇಶವಾಗಿತ್ತು. ಈ ಉಪಕ್ರಮಕ್ಕೆ ಸಂಬಂಧಿಸಿದ ರಸಪ್ರಶ್ನೆಯಲ್ಲಿ ದೇಶಾದ್ಯಂತ ಸುಮಾರು 12 ಲಕ್ಷ ಯುವಜನರು ಭಾಗವಹಿಸಿದ್ದರು. ರಸಪ್ರಶ್ನೆಯ ನಂತರ, ಭಾಗವಹಿಸಿದವರಲ್ಲಿ ಸುಮಾರು 160,000 ಅಭ್ಯರ್ಥಿಗಳನ್ನು ಪ್ರಬಂಧ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಈ ಪ್ರಬಂಧಗಳಲ್ಲಿ ಕೆಲವನ್ನು ಓದುವ ಅವಕಾಶ ನನಗೆ ಲಭಿಸಿತು. ನನ್ನ ಯುವ ಸ್ನೇಹಿತರು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ಅವು ಬಹಿರಂಗಪಡಿಸುತ್ತವೆ. ತೆಲಂಗಾಣದ ಸೂರ್ಯಪೇಟೆಯ ಕೋಟ್ಲಾ ರಘುವೀರ್ ರೆಡ್ಡಿ, ಉತ್ತರ ಪ್ರದೇಶದ ಬಾರಾಬಂಕಿಯ ಸೌರಭ್ ಬೈಸ್ವಾರ್ ಮತ್ತು ಬಿಹಾರದ ಗೋಪಾಲ್‌ಗಂಜ್‌ನ ಸುಮಿತ್ ಕುಮಾರ್ ರೈತರ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಬರೆದಿದ್ದಾರೆ. ಪಂಜಾಬ್‌ನ ಮೊಹಾಲಿಯ ಆಂಚಲ್ ಮತ್ತು ಒಡಿಶಾದ ಕೇಂದ್ರಪಾರದ ಓಂ ಪ್ರಕಾಶ್ ರಥ್ ಅವರು ಮಹಿಳೆಯರ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸುವ ಮಾರ್ಗಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಹರಿಯಾಣದ ಯಮುನಾನಗರದ ಪ್ರಥಮ್ ಬ್ರಾರ್ ಅವರು ‘Green ಮತ್ತುClean Bharat‘ ಸಮೃದ್ಧ ಭಾರತಕ್ಕೆ ರಹದಾರಿ ಎಂದು ಬರೆದಿದ್ದಾರೆ. ಇದು ಅವರ ಚಿಂತನೆಯ ಆಳವನ್ನು ಪ್ರತಿಬಿಂಬಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕೆಂದು ದೆಹಲಿಯ ಶಂಖ್ ಗುಪ್ತಾ ಸಲಹೆ ನೀಡಿದ್ದಾರೆ. ನಮ್ಮ ಯುವ ಸ್ನೇಹಿತರು ಕೌಶಲ್ಯ ಅಭಿವೃದ್ಧಿ ಮತ್ತು ‘ವ್ಯಾಪಾರ ಸರಳೀಕರಣ’ದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವ ಎಲ್ಲ ಯುವಕರನ್ನು ನಾನು ಶ್ಲಾಘಿಸುತ್ತೇನೆ; ದೇಶವನ್ನು ಮುಂದೆ ಕೊಂಡೊಯ್ಯಲು ಈ ಆಲೋಚನೆಗಳು ನಿರ್ಣಾಯಕವಾಗಿವೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಈ ತಿಂಗಳು ದೇಶಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಅಪಾರ ಉತ್ಸಾಹ ಮತ್ತು ಉಲ್ಲಾಸಭರಿತವಾದುದಾಗಿದೆ. ಭಾರತವು ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದಾಗ, ದೇಶದಾದ್ಯಂತ ಸಂತೋಷ ಅಲೆಯೇ ಪಸರಿಸಿತು. ನಮ್ಮ ತಂಡದ ಅದ್ಭುತ ಯಶಸ್ಸಿನ ಬಗ್ಗೆ ನಮಗೆಲ್ಲರಿಗೂ ಅಪಾರ ಹೆಮ್ಮೆಯಿದೆ. ಕಳೆದ ತಿಂಗಳ ಅಂತ್ಯಭಾಗದಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ರೋಮಾಂಚಕ ಸ್ಪರ್ಧೆಯೊಂದು ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡವು ರಣಜಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಸುಮಾರು ಏಳು ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ತಂಡವು ಅಂತಿಮವಾಗಿ ತನ್ನ ಮೊದಲ ರಣಜಿ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಅತ್ಯಂತ ಸಂತೋಷಕರ ಅಂಶವಾಗಿದೆ. ಈ ಅಭೂತಪೂರ್ವ ಯಶಸ್ಸು ಕ್ರೀಡಾಳುಗಳ ಹಲವಾರು ವರ್ಷಗಳ ನಿರಂತರ ಪ್ರಯತ್ನದ ಪರಾಕಾಷ್ಠೆಯಾಗಿದೆ. ತಂಡದ ನಾಯಕ ಪರಾಸ್ ಡೋಗ್ರಾ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸಿದರು, ತಮ್ಮ ಅಸಾಧಾರಣ ನಾಯಕತ್ವದ ಮೂಲಕ ಈ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ರಣಜಿ ಸೀಸನ್ ನಲ್ಲಿ ಅಭೂತಪೂರ್ವ 60 ವಿಕೆಟ್‌ಗಳನ್ನು ಪಡೆದ ಯುವ ಕಾಶ್ಮೀರಿ ಬೌಲರ್ ಅಕ್ವಿಬ್ ನಬಿ ಅವರ ಪ್ರದರ್ಶನದ ಬಗ್ಗೆ ದೇಶದಾದ್ಯಂತ ಚರ್ಚೆಗಳಾಗುತ್ತಿವೆ. ಈ ಗೆಲುವಿನಿಂದ ಜಮ್ಮು ಮತ್ತು ಕಾಶ್ಮೀರದ ಜನರ ಜೊತೆ ಜೊತೆಗೆ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಕೂಡ ರೋಮಾಂಚಿತಗೊಂಡಿದೆ. ಕ್ರಿಕೆಟ್ ಮೈದಾನದಲ್ಲಿನ ಈ ಅದ್ಭುತ ಪ್ರದರ್ಶನದ ನಂತರ, ಸ್ಥಳೀಯ ಯುವಕರಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹ ,ಮತ್ತಷ್ಟು ಹೆಚ್ಚಾಗಿದೆ. ನಿಸ್ಸಂದೇಹವಾಗಿ ಮುಂಬರುವ ದಿನಗಳಲ್ಲಿ, ಅನೇಕ ಯುವಜನರು ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳುವಲ್ಲಿ ಇದು ಸ್ಫೂರ್ತಿ ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರದ ಜನರು ಯಾವಾಗಲೂ ಕ್ರೀಡೆಗಳ ಬಗ್ಗೆ ಅಪಾರ ಉತ್ಸಾಹವನ್ನು ಹೊಂದಿದ್ದಾರೆ. ಈ ಪ್ರದೇಶವು ಈಗ ಪ್ರಮುಖ ಕ್ರೀಡಾಕೂಟಗಳ ಕೇಂದ್ರವಾಗಿ ಹೊರಹೊಮ್ಮುತ್ತಿರುವುದು ಸಂತೋಷದ ಸಂಗತಿಯಾಗಿದೆ. ಗುಲ್ಮಾರ್ಗ್ ಈಗಾಗಲೇ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟಕ್ಕೆ ಪ್ರಮುಖ ತಾಣವಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಫುಟ್ಬಾಲ್‌ನಂತಹ ಕ್ರೀಡೆಗಳು ಸ್ಥಳೀಯ ಯುವಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಕ್ರೀಡಾಪಟುಗಳ ಈ ಗೆಲುವಿನ ಹಾದಿಯು ಭವಿಷ್ಯದಲ್ಲಿಯೂ ನಿರಂತರವಾಗಿ ಹೀಗೆ ಮುಂದುವರಿಯಲಿ ಎಂದು ನಾನು ಆಶಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೇ,
ನಾನು ಆಗಾಗ್ಗೆ “ಜೋ ಖೇಲೇಂಗೇ ವೋ ಖಿಲೇಂಗೆ” ಅಂದರೆ “ಯಾರು ಆಟ ಆಡುತ್ತಾನೋ ಅವನು ಅರಳುತ್ತಾನೆ” ಎಂದು ಹೇಳುತ್ತಿರುತ್ತೇನೆ. ನಮ್ಮ ದೇಶದ ಯುವಕರು ಈಗ ಹಿಂದೆ ಅಷ್ಟೊಂದು ಜನಪ್ರಿಯವಾಗಿಲ್ಲದ ಕ್ರೀಡೆಗಳನ್ನು ಕೂಡಾ ಉತ್ಸಾಹದಿಂದ ಆಡುತ್ತಿದ್ದಾರೆ ಎಂಬುದನ್ನು ಗಮನಿಸಿದಾಗ ನನಗೆ ತುಂಬಾ ಸಂತೋಷವಾಗುತ್ತದೆ. ಉತ್ತರ ಪ್ರದೇಶದ ಪ್ರತಿಭಾನ್ವಿತ ಕ್ರೀಡಾಪಟು ಗುಲ್ವೀರ್ ಸಿಂಗ್ ಅಂತಹ ಒಂದು ಕ್ರೀಡೆಯಲ್ಲಿ ನಿಜವಾಗಿಯೂ ಗಮನಾರ್ಹ ಸಾಧನೆಗೈದಿದ್ದಾರೆ. ಕೆಲವೇ ವಾರಗಳ ಹಿಂದೆ, ಅವರು ನ್ಯೂಯಾರ್ಕ್ ಸಿಟಿ ಹಾಫ್ ಮ್ಯಾರಥಾನ್‌ನಲ್ಲಿ ಮೂರನೇ ಸ್ಥಾನವನ್ನು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಅವರು ಒಂದು ಗಂಟೆಯೊಳಗೆ ಹಾಫ್ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಕ್ರೀಡಾಪಟುವಾದರು. ಈ ಮಧ್ಯೆ, ಯುವ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ‘ಸ್ಕ್ವಾಷ್ ಆನ್ ಫೈರ್ ಓಪನ್’ ನ ಪ್ರಮುಖ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ಅವರು ಕೇವಲ 17 ನೇ ವಯಸ್ಸಿನಲ್ಲಿ ಈ ಗಮನಾರ್ಹ ಸಾಧನೆಗೈದಿದ್ದಾರೆ. ಈ ಸಾಧನೆ ಮೂಲಕ, ಅವರು PSA ವಿಶ್ವ ಶ್ರೇಯಾಂಕದ ಟಾಪ್ 20 ರಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ಏಷ್ಯಾದ ಮಹಿಳಾ ಆಟಗಾರ್ತಿಯಾಗಿದ್ದಾರೆ. ‘ಅಸ್ಮಿತಾ ಅಥ್ಲೆಟಿಕ್ಸ್ ಲೀಗ್’ ಬಗ್ಗೆಯೂ ನನಗೆ ಮಾಹಿತಿ ಲಭಿಸಿದೆ. ಮಾರ್ಚ್ 8 ರಂದು, ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಈ ಲೀಗ್‌ನ ಭಾಗವಾಗಿ ಭವ್ಯವಾದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಸುಮಾರು 2,00,000 ಯುವತಿಯರು ಲೀಗ್‌ನಲ್ಲಿ ಭಾಗವಹಿಸಿದ್ದರು. ಪ್ರಸ್ತುತ ದೇಶಾದ್ಯಂತ ವ್ಯಾಪಿಸುತ್ತಿರುವ ಕ್ರೀಡಾ ಪರಿವರ್ತನೆಯಲ್ಲಿ ಭಾರತದ ‘ನಾರಿ ಶಕ್ತಿ’ ಪ್ರಮುಖ ಪಾತ್ರ ವಹಿಸುತ್ತಿರುವುದು ಹೃದಯಸ್ಪರ್ಶಿಯಾಗಿದೆ.
ಸ್ನೇಹಿತರೇ,
ನಿಮ್ಮ ಆರೋಗ್ಯದ ಕುರಿತು ಖಂಡಿತ ಕಾಳಜಿವಹಿಸಿ ಎಂಬುದು ನನ್ನ ಆದ್ಯ ಮನವಿಯಾಗಿದೆ. ಅಂತಾರಾಷ್ಟ್ರೀಯ ಯೋಗ ದಿನಕ್ಕೆ 100 ದಿನಗಳಿಗಿಂತ ಕಡಿಮೆ ಸಮಯ ಉಳಿದಿದೆ. ಜೊತೆಗೆ ಯೋಗದ ಬಗ್ಗೆ ಜಾಗತಿಕ ಆಕರ್ಷಣೆ ನಿರಂತರವಾಗಿ ಬೆಳೆಯುತ್ತಲೇ ಇದೆ. ಆಫ್ರಿಕಾದ ಜಿಬೌಟಿಯಲ್ಲಿ, ಶ್ರೀ ಅಲ್ಮಿಸ್ ಅವರು ತಮ್ಮ ‘ಅರವಿಂದ್ ಯೋಗ ಕೇಂದ್ರ’ದ ಮೂಲಕ ಯೋಗವನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರು ಇಲ್ಲಿಯ ಹಲವಾರು ಪ್ರದೇಶಗಳಲ್ಲಿ ಜನರಿಗೆ ಯೋಗವನ್ನು ಕಲಿಸುತ್ತಾರೆ. Instagram Content Creator ಯುವರಾಜ್ ದುವಾ ಅವರ ಪೋಸ್ಟ್‌ಗೆ ನನ್ನ ಉತ್ತರದ ಕುರಿತು ನಿಮ್ಮಲ್ಲಿ ಹಲವರು ಕಾಮೆಂಟ್ ಮಾಡಿದ್ದೀರಿ. ಅವರು ತಮ್ಮ ತಂದೆಯವರಿಗೆ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವಂತೆ ಹೇಳಲು ನನ್ನನ್ನು ಕೇಳಿಕೊಂಡಿದ್ದರು. ನನ್ನ ವಿನಂತಿಯು ಅವರ ತಂದೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ತಿಳಿದು ನನಗೆ ಸಂತೋಷವಾಯಿತು. ನೀವೆಲ್ಲರೂ ನಿಮ್ಮ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ; ಇದಲ್ಲದೆ – ನಾನು ಮೊದಲೇ ಹೇಳಿದಂತೆ – ಅಡುಗೆ ಎಣ್ಣೆಯ ಸೇವನೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವ ಗುರಿಯನ್ನು ನಾವು ಹೊಂದಿರಬೇಕು. ಈ ಸಣ್ಣ, ಸ್ಥಿರ ಪ್ರಯತ್ನಗಳ ಮೂಲಕ, ಬೊಜ್ಜು ಮತ್ತು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.
ನನ್ನ ಪ್ರಿಯ ದೇಶವಾಸಿಗಳೇ,
ಒಂದು ಹಳೆಯ ಗಾದೆ ಇದೆ: “ಕರತಾ ಕರತಾ ಅಭ್ಯಾಸ ಕೆ, ಜಡಮತಿ ಹೋತ ಸುಜಾನ” – ಅಂದರೆ ನಿರಂತರ ಅಭ್ಯಾಸದ ಮೂಲಕ, ಮಂದ ಬುಧ್ಧಿ ಕೂಡ ಚುರುಕಾಗಿ ಪರಿವರ್ತನೆಯಾಗುವುದು. ಜನರು ಕೂಡಾ ಯಾವುದೇ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿ ಕಲಿಯುತ್ತಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಒಂದು ವಿಶಿಷ್ಟ ಶೈಕ್ಷಣಿಕ ಉಪಕ್ರಮದ ಬಗ್ಗೆ ನಾನು ಇತ್ತೀಚೆಗೆ ತಿಳಿದುಕೊಂಡಿದ್ದೇನೆ. ಅಲ್ಲಿನ ಒಂದು ತಂಡವು ‘ಪ್ರಯೋಗ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್’ ಎಂಬ ಸಂಸ್ಥೆಯನ್ನು ನಡೆಸುತ್ತಿದೆ. ಈ ತಂಡವು ಸಂಶೋಧನಾ ಯೋಜನೆಗಳಿಗೆ ವಿಶೇಷ ಒತ್ತು ನೀಡುತ್ತದೆ. ಶಾಲಾ ಮಟ್ಟದಲ್ಲಿ ವಿಜ್ಞಾನ ಶಿಕ್ಷಣವನ್ನು ಜನಪ್ರಿಯಗೊಳಿಸುವುದು ಅವರ ಧ್ಯೇಯವಾಗಿದೆ. ಅವರು ‘ಅನ್ವೇಷಣ್’ ಎಂಬ ಪ್ರಯೋಗವನ್ನು ನಡೆಸಿದ್ದಾರೆ, ಇದರ ಮೂಲಕ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ರಸಾಯನಶಾಸ್ತ್ರ, ಭೂ ವಿಜ್ಞಾನ ಮತ್ತು ಸ್ವಾಸ್ಥ್ಯದಂತಹ ಕ್ಷೇತ್ರಗಳಲ್ಲಿ ಹೊಸತನವನ್ನು ಕಂಡುಕೊಳ್ಳಲು ಅವಕಾಶ ಪಡೆಯುತ್ತಾರೆ. ಇದು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಂಶೋಧನಾ ಅನುಭವವನ್ನು ಒದಗಿಸುತ್ತದೆ ಮತ್ತು ಅವರ ಯೋಜನೆಗಳನ್ನು ಪ್ರಕಟಿಸಲು ವೇದಿಕೆಯನ್ನು ಸಹ ಕಲ್ಪಿಸುತ್ತದೆ.
ಸ್ನೇಹಿತರೇ,
‘ಪರೀಕ್ಷಾ ಪೆ ಚರ್ಚಾ’ ಸಮಯದಲ್ಲಿ, ಕೆಲವು ವಿದ್ಯಾರ್ಥಿಗಳು ವಿಜ್ಞಾನ ವಿಷಯ ಅಧ್ಯಯನ ಮಾಡಲು ಬಯಸಿದ್ದರೂ, ಅದರಿಂದ ತಮಗೆ ಭಯವಾಗುತ್ತದೆ ಎಂಬ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಈ ನಿಟ್ಟಿನಲ್ಲಿ, ‘ಪ್ರಯೋಗ್’ ತಂಡದ ಪ್ರಯತ್ನಗಳು ತುಂಬಾ ಶ್ಲಾಘನೀಯವಾಗಿವೆ. ಈ ಉಪಕ್ರಮವು ವಿದ್ಯಾರ್ಥಿಗಳು ವಿಜ್ಞಾನದಲ್ಲಿ ತೊಡಗಿಸಿಕೊಳ್ಳಲು ಮತ್ತು ಪ್ರಾಯೋಗಿಕ ಅನ್ವಯದ ಮೂಲಕ ತಮ್ಮ ಕಲಿಕೆಯನ್ನು ಪ್ರದರ್ಶಿಸಲು ಅವರಿಗೆ ಅವಕಾಶವನ್ನು ಒದಗಿಸುತ್ತದೆ. ಯಾವುದೇ ಕೆಲಸವನ್ನು ನಾವು ನೇರವಾಗಿ ಸ್ವತಃ ಮಾಡಿ ಅನುಭವ ಪಡೆದಾಗ, ಅದು ಕುತೂಹಲ ಮತ್ತು ಆಸಕ್ತಿ ಎರಡನ್ನೂ ಹುಟ್ಟುಹಾಕುತ್ತದೆ. ಬಹುಶಃ ನನ್ನ ಈ ಯುವ ಸ್ನೇಹಿತರಲ್ಲಿ ಯಾರೋ ಒಬ್ಬರು ಭವಿಷ್ಯದಲ್ಲಿ ಅಸಾಧಾರಣ ವಿಜ್ಞಾನಿಯಾಗಿ ಹೊರಹೊಮ್ಮಬಹುದು.
ಸ್ನೇಹಿತರೇ,
ಶಿಕ್ಷಣದ ಮೂಲಕ ಭೂತಕಾಲವನ್ನು ಸಂರಕ್ಷಿಸಲು ಮತ್ತು ಭವಿಷ್ಯಕ್ಕಾಗಿ ಸಿದ್ಧರಾಗಲು ನಾಗಾ ಸಮುದಾಯ ಪ್ರಯತ್ನವೊಂದನ್ನು ಮಾಡುತ್ತಿದೆ. ಈ ಸಮುದಾಯದ ಜನರು ತಮ್ಮ ಬುಡಕಟ್ಟು ಸಂಪ್ರದಾಯಗಳನ್ನು ಅತ್ಯಂತ ಗೌರವಿಸುತ್ತಾರೆ, ಅವುಗಳ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ಅದರೊಂದಿಗೆ ಆಧುನಿಕ ವಿಧಾನವನ್ನೂ ಅಳವಡಿಸಿಕೊಳ್ಳುತ್ತಾರೆ. ನಾಗಾ ಬುಡಕಟ್ಟು ಜನಾಂಗದಲ್ಲಿ ಮೋರೂಂಗ್ ಲರ್ನಿಂಗ್ ನ ಒಂದು ಸಾಂಪ್ರದಾಯಿಕ ವ್ಯವಸ್ಥೆಯಿತ್ತು, ಇದರಲ್ಲಿ ವೃದ್ಧರು ತಮ್ಮ ಅನುಭವಗಳಿಂದ ಯುವ ಜನತೆಗೆ ಸಾಂಪ್ರದಾಯಿಕ ಅರಿವು, ಇತಿಹಾಸ ಹಾಗೂ ಜೀವನ ನೈಪುಣ್ಯತೆಗಳ ಬಗ್ಗೆ ತಿಳಿಸಿ ಹೇಳುತ್ತಿದ್ದರು. ಕಾಲಕ್ರಮೇಣ ಈ ವ್ಯವಸ್ಥೆ ಈಗ ಮೋರೂಂಗ್ ಶಿಕ್ಷಣದ ಪರಿಕಲ್ಪನೆಯಾಗಿ ಬದಲಾಗಿದೆ. ಇದರ ಮೂಲಕ ಮಕ್ಕಳಲ್ಲಿ ಗಣಿತ ಮತ್ತು ವಿಜ್ಞಾನದಂತಹ ವಿಷಯಗಳಲ್ಲಿ ಆಸಕ್ತಿ ಬೆಳೆಸಲಾಗುತ್ತದೆ. ಇದರಲ್ಲಿ, ಸಮುದಾಯದ ಹಿರಿಯರು ಕಥೆಗಳು, ಜಾನಪದ ಗೀತೆಗಳು ಮತ್ತು ಸಾಂಪ್ರದಾಯಿಕ ಆಟಗಳ ಮೂಲಕ ಮಕ್ಕಳಿಗೆ ಜೀವನ ಕೌಶಲ್ಯಗಳನ್ನು ಕಲಿಸುತ್ತಾರೆ. ಈ ರೀತಿಯಾಗಿ, ನಾಗಾಲ್ಯಾಂಡ್ ತನ್ನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಮಕ್ಕಳ ಶಿಕ್ಷಣವನ್ನು ಮುನ್ನಡೆಸುತ್ತಿದೆ. ನೀವು ವಾಸಿಸುವ ಪ್ರದೇಶದಲ್ಲೂ ಇಂತಹ ಪ್ರಯತ್ನಗಳ ಬಗ್ಗೆ ನಿಮಗೆ ತಿಳಿದುಬಂದರೆ, ದಯವಿಟ್ಟು ಅವುಗಳನ್ನು ನನ್ನೊಂದಿಗೆ ಖಂಡಿತವಾಗಿಯೂ ಹಂಚಿಕೊಳ್ಳಿ.
ನನ್ನ ಪ್ರೀತಿಯ ದೇಶಬಾಂಧವರೇ,
ದೇಶದ ಅನೇಕ ಭಾಗಗಳಲ್ಲಿ ಬೇಸಿಗೆ ಈಗಾಗಲೇ ಆರಂಭವಾಗಿದೆ, ನೀರಿನ ಸಂರಕ್ಷಣೆಗೆ ನಮ್ಮ ಬದ್ಧತೆಯನ್ನು ನವೀಕರಿಸುವ ಸಮಯ ಬಂದಿದೆ. ಕಳೆದ, 11 ವರ್ಷಗಳಲ್ಲಿ, “ಜಲ ಸಂರಕ್ಷಣಾ ಅಭಿಯಾನ” ಸಾರ್ವಜನಿಕರಲ್ಲಿ ಗಮನಾರ್ಹ ಜಾಗೃತಿ ಮೂಡಿಸಿದೆ. ಈ ಅಭಿಯಾನದಡಿಯಲ್ಲಿ, ದೇಶಾದ್ಯಂತ ಸುಮಾರು 50 ಲಕ್ಷ ಕೃತಕ ನೀರು ಕೊಯ್ಲು ರಚನೆಗಳನ್ನು(Artificial Water Harvesting Structure) ನಿರ್ಮಿಸಲಾಗಿದೆ. ನೀರಿನ ಕೊರತೆ ಸಮಸ್ಯೆಯನ್ನು ಬಗೆಹರಿಸಲು ಹಳ್ಳಿ ಹಳ್ಳಿಗಳಲ್ಲಿ ಸಮುದಾಯ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿರುವುದನ್ನು ನೋಡಿದಾಗ ನನಗೆ ಸಂತಸವೆನಿಸುತ್ತದೆ. ಕೆಲವೆಡೆ ಪ್ರಾಚೀನ ಕೆರೆಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದ್ದರೆ, ಕೆಲವೆಡೆ ಮಳೆಯ ನೀರನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಅಮೃತ್ ಸರೋವರ್ ಅಭಿಯಾನದ ಅಡಿಯಲ್ಲಿ, ದೇಶಾದ್ಯಂತ ಸುಮಾರು 70 ಸಾವಿರ ಅಮೃತ್ ಸರೋವರಗಳನ್ನು ನಿರ್ಮಿಸಲಾಗಿದೆ. ಮಳೆಗಾಲ ಆರಂಭವಾಗುವ ಮುನ್ನ ಈ ಸರೋವರಗಳನ್ನು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಿದೆ. ಇಂದು ನಿಮ್ಮೊಂದಿಗೆ ಕೆಲವು ಸ್ಫೂರ್ತಿದಾಯಕ ಉದಾಹರಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಸಾರ್ವಜನಿಕ ಪಾಲ್ಗೊಳ್ಳುವಿಕೆಯಿಂದಾಗಿ ಈ ಜಲ ಸಂರಕ್ಷಣೆಯ ಕೆಲಸ ಎಷ್ಟು ವ್ಯಾಪಕವಾಗುತ್ತವೆ ಎನ್ನುವುದನ್ನು ಈ ಉದಾಹರಣೆಗಳು ಹೇಳುತ್ತವೆ.
ಸ್ನೇಹಿತರೇ,
ತ್ರಿಪುರಾದ ಜಾಂಪುಯಿ ಬೆಟ್ಟಗಳಲ್ಲಿ ಸುಮಾರು 3000 ಅಡಿಗಳಷ್ಟು ಎತ್ತರದಲ್ಲಿ ವಾಂಗ್ಮುನ್ ಗ್ರಾಮ ನೆಲೆಗೊಂಡಿದೆ. ಈ ಗ್ರಾಮವು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಬೇಸಿಗೆಯಲ್ಲಿ, ಗ್ರಾಮಸ್ಥರು ನೀರು ತರಲು ಬಹಳ ದೂರ ಹೋಗಬೇಕಿತ್ತು. ಅಂತಿಮವಾಗಿ, ಈ ಗ್ರಾಮಸ್ಥರು ಮಳೆಯ ಪ್ರತಿ ಹನಿಯನ್ನೂ ಸಂರಕ್ಷಿಸಬೇಕೆಂದು ನಿರ್ಧರಿಸಿದರು. ಇಂದು, ವಾಂಗ್ಮುನ್ ಗ್ರಾಮದ ಬಹುತೇಕ ಪ್ರತಿಯೊಂದು ಮನೆಯ ಛಾವಣಿಯ ಮೇಲೂ ಮಳೆನೀರು ಕೊಯ್ಲು ವ್ಯವಸ್ಥೆ ಇದೆ. ಯಾವ ಗ್ರಾಮ ಹಿಂದೊಮ್ಮೆ ನೀರಿನ ಕೊರತೆಯಿಂದ ಬಳಲುತ್ತಿತ್ತೋ, ಅದೇ ಗ್ರಾಮ ಈಗ ಜಲ ಸಂರಕ್ಷಣೆಗೆ ಒಂದು ಸ್ಫೂರ್ತಿದಾಯಕ ಉದಾಹರಣೆ ಎನಿಸಿದೆ.
ಸ್ನೇಹಿತರೇ,
ಇದೇ ರೀತಿ ಛತ್ತೀಸ್ ಗಢ್ ನ ಕೋರಿಯಾ ಜಿಲ್ಲೆಯಲ್ಲಿ ಕೂಡಾ ಒಂದು ವಿಶಿಷ್ಟ ಉದಾಹರಣೆ ದೊರೆತಿದೆ. ಇಲ್ಲಿನ ರೈತರು ಒಂದು ಸರಳ ಆದರೆ, ಒಂದು ಪರಿಣಾಮಕಾರಿ ಉಪಾಯ ಅನುಸರಿಸಿದರು. ಇಲ್ಲಿನ ರೈತರು ತಮ್ಮ ಹೊಲದಲ್ಲಿ ಪುಟ್ಟ-ಪುಟ್ಟ recharge ಕೊಳಗಳನ್ನು ಮತ್ತು ಇಂಗು ಗುಂಡಿ ನಿರ್ಮಿಸಿದ್ದು, ಇದರಿಂದ ಮಳೆಯ ನೀರು ಹೊಲದಲ್ಲೇ ನಿಲ್ಲತೊಡಗಿತು ಮತ್ತು ಕ್ರಮೇಣ ಭೂಮಿಯೊಳಗೆ ಇಳಿಯತೊಡಗಿತು. ಇಂದು ಈ ಪ್ರದೇಶದ 1200 ಕ್ಕೂ ಅಧಿಕ ರೈತರು ಈ ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಹಳ್ಳಿಯ ಅಂತರ್ಜಲ ಮಟ್ಟವು ಬಹಳಷ್ಟು ಉತ್ತಮವಾಗಿದೆ. ಇದೇ ರೀತಿ ತೆಲಂಗಾಣದ ಮಂಚೇರಿಯಾಲ್ ಜಿಲ್ಲೆಯ ಮುಧಿಗುಂಟ ಗ್ರಾಮದಲ್ಲಿ ಕೂಡಾ ಜನರು ಒಂದುಗೂಡಿ ನೀರಿನ ಸಮಸ್ಯೆನ್ನು ದೂರ ಮಾಡಿದ್ದಾರೆ. ಗ್ರಾಮದ 400 ಕುಟುಂಬಗಳು ತಮ್ಮ ಮನೆಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಜಲ ಸಂರಕ್ಷಣೆಯನ್ನು ಜನಾಂದೋಲನವನ್ನಾಗಿ ಮಾಡಿದ್ದಾರೆ. ಇದರಿಂದ ಗ್ರಾಮದ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಂಡುಬಂದಿರುವ ಜೊತೆಗೇ ಕಲುಷಿತ ನೀರಿನಿಂದ ಉಂಟಾಗುತ್ತಿದ್ದ ರೋಗಗಳು ಕೂಡಾ ಬಹುತೇಕ ಕಡಿಮೆಯಾಗಿವೆ.
ನನ್ನ ಪ್ರೀತಿಯ ದೇಶವಾಸಿಗಳೇ,
ನಮ್ಮ ಮೀನುಗಾರ ಸೋದರ-ಸೋದರಿಯರು ಕೇವಲ ಕಡಲ ಯೋಧರು ಮಾತ್ರವಲ್ಲ, ಅವರು ಸ್ವಾವಲಂಬಿ ಭಾರತದ ಬಲವಾದ ಅಡಿಪಾಯವೂ ಹೌದು. ಬೆಳಕು ಹರಿಯುವುದಕ್ಕೆ ಮುನ್ನವೇ ಸಮುದ್ರದ ಅಲೆಗಳ ಮೇಲೆ ತೇಲುತ್ತಾ, ತಮ್ಮ ಕುಟುಂಬಗಳನ್ನು ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಕೆಲಸ ಮಾಡುತ್ತಾರೆ. ಇಂದು, ಈ ಶ್ರಮಶೀಲ ಮೀನುಗಾರರ ಜೀವನವನ್ನು ಹಲವು ರೀತಿಯಲ್ಲಿ ಸುಗಮಗೊಳಿಸಲಾಗುತ್ತಿದೆ. ಬಂದರು ಅಭಿವೃದ್ಧಿಯೇ ಆಗಿರಲಿ ಅಥವಾ ಮೀನುಗಾರರಿಗೆ ವಿಮೆ ಸೌಲಭ್ಯ ಕಲ್ಪಿಸುವುದೇ ಆಗಿರಲಿ, ಇಂತಹ ಅನೇಕ ಉಪಕ್ರಮಗಳು ಅತ್ಯಂತ ಸಹಾಯಕವಾಗಿವೆ. ಹವಾಮಾನ ಮಾದರಿಗಳು ಸಮುದ್ರದಲ್ಲಿನ ಅವರ ಚಟುವಟಿಕೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ ಎಂದು ನಮಗೆ ತಿಳಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ತಂತ್ರಜ್ಞಾನದ ಮೂಲಕ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ. ಅಂತಹ ಪ್ರಯತ್ನಗಳು ನಮ್ಮ ಮೀನುಗಾರಿಕೆ ವಲಯವನ್ನು ಶ್ರೀಮಂತಗೊಳಿಸುವುದು ಮಾತ್ರವಲ್ಲದೆ, ನಾವೀನ್ಯತೆಯ ಮನೋಭಾವವನ್ನು ತುಂಬುತ್ತಿವೆ ಎಂಬುದು ನನಗೆ ಸಂತೋಷ ನೀಡುವ ವಿಷಯವಾಗಿದೆ. ಇಂದು ಮೀನುಗಾರಿಕೆ ಮತ್ತು ಸೀ ವೀಡ್ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ, ನಮ್ಮ ಮೀನುಗಾರ ಸೋದರ-ಸೋದರಿಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಒಡಿಶಾದ ಸಂಬಲ್ ಪೂರ್ ನ ಸುಜಾತಾ ಭೂಯಾನ್ ಓರ್ವ ಗೃಹಿಣಿಯಾಗಿದ್ದರು, ಆದರೆ ಅವರು ಹೊಸದೇನನ್ನಾದರೂ ಮಾಡಿ, ತಮ್ಮ ಕುಟುಂಬಕ್ಕೆ ಮತ್ತಷ್ಟು ಸಹಾಯ ಮಾಡಬೇಕೆಂದು ಬಯಸುತ್ತಿದ್ದರು. ಹೀಗಾಗಿ, ಕೆಲವು ವರ್ಷಗಳ ಹಿಂದೆ ಆಕೆ ಹೀರಾಕುಂಡ್ ಜಲಾಶಯದಲ್ಲಿ ಮೀನು ಸಾಕಣೆ ಪ್ರಾರಂಭಿಸಿದರು. ಆರಂಭಿಕ ದಿನಗಳು ಆಕೆಗೆ ಸುಲಭವಾಗಿರಲಿಲ್ಲ. ಹವಾಮಾನದಲ್ಲಿ ಉಂಟಾಗುವ ಬದಲಾವಣೆಗಳು, ಮೀನುಗಳಿಗೆ ಆಹಾರ ಒದಗಿಸುವ ವ್ಯವಸ್ಥೆ ಮಾಡುವುದು, ಮತ್ತು ಮನೆಯನ್ನು ನಿರ್ವಹಿಸಬೇಕಾದ ಜವಾಬ್ದಾರಿಗಳೊಂದಿಗೆ ಸಮತೋಲನ ಮಾಡುವಂತಹ ಸವಾಲುಗಳನ್ನು ಎದುರಿಸಬೇಕಿತ್ತು. ಆದರೆ ಆಕೆಯ ಸಂಕಲ್ಪ ದೃಢವಾಗಿತ್ತು. ಕೇವಲ ಎರಡರಿಂದ ಮೂರು ವರ್ಷಗಳೊಳಗಾಗಿ ಅವರು ತಮ್ಮ ಪ್ರಯತ್ನವನ್ನು ಯಶಸ್ವೀ ವ್ಯಾಪಾರವನ್ನಾಗಿ ಬದಲಾಯಿಸಿದರು. ಇಂದು ಈಕೆಯ ಯಶಸ್ಸು ಸಮುದಾಯದ ಮಹಿಳೆಯರಿಗೆ ಭರವಸೆಯ ಹೊಸ ಕಿರಣವಾಗಿದೆ.
ಸ್ನೇಹಿತರೇ,
ಲಕ್ಷದ್ವೀಪದ ಮಿನಿಕಾಯ್ ನ ಹವ್ವಾ ಗುಲ್ಜಾರ್ ಜಿ ಅವರ ಕಥೆಯು ನಮ್ಮ ತಾಯಂದಿರು ಮತ್ತು ಸೋದರಿಯರ ಅದ್ಭುತ ದೃಢಸಂಕಲ್ಪವನ್ನು ಎತ್ತಿ ತೋರಿಸುತ್ತದೆ. ವಾಸ್ತವದಲ್ಲಿ ಅವರು ಮೀನು, ಸಂಸ್ಕರಣಾ ಘಟಕವನ್ನು ನಡೆಸುತ್ತಿದ್ದರು. ತಮ್ಮ ಬಳಿ ಒಂದು ಉತ್ತಮ ಕೋಲ್ಡ್ ಸ್ಟೋರೇಜ್ ಸೌಲಭ್ಯವಿದ್ದಲ್ಲಿ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಬಹುದೆಂದು ಅವರಿಗೆ ತೋಚಿತು, ಹೀಗಾಗಿ ಅವರು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸಲು ನಿರ್ಧರಿಸಿದರು. ಇಂದು ಅದೇ ಅವರ ಬಲವಾಗಿದೆ. ಅವರಿಗೆ ಈಗ ಉತ್ತಮ ಯೋಜನೆಯೊಂದಿಗೆ ವ್ಯವಹಾರ ನಡೆಸಲು ಸಾಧ್ಯವಾಗುತ್ತಿದೆ.
ಸ್ನೇಹಿತರೆ,
ಇಂದು ದೇಶದಲ್ಲಿ ಸ್ಫೂರ್ತಿ ನೀಡುವಂತಹ ಪ್ರತಿಯೊಂದು ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಬೆಳಗಾವಿ ನಿವಾಸಿ ಶಿವಲಿಂಗ ಸಾತಪ್ಪ ಹುದ್ದಾರ್ ಅವರು ಸಾಂಪ್ರದಾಯಿಕ ಕೃಷಿಯಿಂದ ಭಿನ್ನವಾದ ಒಂದು ವಿಧಾನ ಆರಿಸಿಕೊಂಡರು. ಇದಕ್ಕಾಗಿ ಅವರು ಒಂದು Pond Farm ನಿರ್ಮಿಸಿದರು. ಈ ಕೆಲಸಕ್ಕಾಗಿ ಅವರಿಗೆ ತರಬೇತಿಯೂ ದೊರೆಯಿತು. ಈಗ ಅವರು ತಮ್ಮ ಕೊಳದಿಂದ ಮೀನುಗಳನ್ನು ಮಾರಾಟ ಮಾಡಿ ಉತ್ತಮ ವರಮಾನ ಗಳಿಸುತ್ತಿದ್ದಾರೆ. ಅಂತೆಯೇ ಸಮುದ್ರ ಕಳೆ – Seaweed ಗೆ ಇರುವ ಬೇಡಿಕೆಯನ್ನು ನೋಡಿದ ಹಲವರು ಸೀ ವೀಡ್ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದ ಅವರಿಗೆ ಲಾಭವೂ ದೊರೆಯುತ್ತಿದೆ. ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರನ್ನು ನಾನು ಮತ್ತೊಮ್ಮೆ ಪ್ರಶಂಸಿಸುತ್ತೇನೆ. ನಮ್ಮ ಆರ್ಥಿಕತೆಯನ್ನು ಬಲಪಡಿಸಲು ಅವರ ಪ್ರಯತ್ನಗಳು ಅತ್ಯಂತ ಶ್ಲಾಘನೀಯವಾಗಿವೆ.
ನನ್ನ ಪ್ರೀತಿಯ ದೇಶಬಾಂಧವರೇ,
ಸಮಾಜ ತಾನಾಗೇ ಮುಂದೆ ಬಂದಾಗ, ಸಣ್ಣ – ಸಣ್ಣ ಪ್ರಯತ್ನಗಳು ಕೂಡಾ ದೊಡ್ಡ ಬದಲಾವಣೆಗೆ ಅಡಿಪಾಯವಾಗುತ್ತವೆ. ನಮ್ಮ ದೇಶದ ಬೇರೆ ಬೇರೆ ಭಾಗಗಳಲ್ಲಿ ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದೆ ಬರುತ್ತಿವೆ ಮತ್ತು ನಮಗೆ ಇದನ್ನೇ ತಿಳಿಯಪಡಿಸುತ್ತಿವೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಒಂದು ಸ್ಫೂರ್ತಿದಾಯಕ ಪ್ರಯತ್ನ ಕಂಡುಬಂದಿದೆ. ಅಲ್ಲಿ ಕೇವಲ ಒಂದೇ ಗಂಟೆಯೊಳಗಾಗಿ 2 ಲಕ್ಷ 51 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ ಮತ್ತು ಇದು ಗಿನ್ನೀಸ್ ಪುಸ್ತಕದಲ್ಲಿ ಹೊಸ ದಾಖಲೆ ಎನಿಸಿದೆ. ಸಾವಿರಾರು ಜನರು ಇದರಲ್ಲಿ ಕೈಜೋಡಿಸಿದ್ದಾರೆ ಎನ್ನುವುದು ಈ ಪ್ರಯತ್ನದ ಬಹು ಮುಖ್ಯ ಅಂಶವಾಗಿದೆ. ವಿದ್ಯಾರ್ಥಿಗಳು, ಯುವಜನತೆ, ಸ್ವಯಂಸೇವಕ ಸಂಘಗಳು, ವಿವಿಧ ಸಂಸ್ಥೆಗಳು, ಎಲ್ಲರೂ ಸೇರಿ ಈ ಕೆಲಸವನ್ನು ಸಾಧ್ಯವಾಗಿಸಿದ್ದಾರೆ. ಇದೇ ರೀತಿಯ ಸಾರ್ವಜನಿಕರ ಪಾಲ್ಗೊಳ್ಳುವಿಕೆಯು ‘ತಾಯಿಯ ಹೆಸರಿನಲ್ಲಿ ಒಂದು ಸಸಿ’ ಅಭಿಯಾನದಲ್ಲೂ ಸ್ಪಷ್ಟವಾಗಿ ಕಂಡು ಬರುತ್ತದೆ. ಈ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಕೋಟ್ಯಂತರ ಸಸಿಗಳನ್ನು ನೆಡಲಾಗಿದೆ.
ಸ್ನೇಹಿತರೇ,
ನಾಗಾಲ್ಯಾಂಡ್ ನ ಚಿಜಾಮಿ ಗ್ರಾಮದಿಂದ ಬಹಳ ಸ್ಪೂರ್ತಿದಾಯಕ ಪ್ರಯತ್ನವೊಂದು ಹೊರಹೊಮ್ಮಿದೆ. ಚಿಜಾಮಿ ಗ್ರಾಮದ ಮಹಿಳೆಯರು ಸಾಮೂಹಿಕವಾಗಿ 150 ಕ್ಕೂ ಅಧಿಕ ಬಗೆಯ ಸಾಂಪ್ರದಾಯಿಕ ಬೀಜಗಳನ್ನು ಸಂರಕ್ಷಿಸುತ್ತಿದ್ದಾರೆ. ಈ ಬೀಜಗಳನ್ನು ಗ್ರಾಮದ ಮಹಿಳೆಯರೇ ನಡೆಸುವ ‘ಸಮುದಾಯ ಬೀಜ ಬ್ಯಾಂಕ್’ ನಲ್ಲಿ ಸಂರಕ್ಷಿಸಲಾಗುತ್ತಿದೆ. ಇವುಗಳಲ್ಲಿ ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು, ತರಕಾರಿಗಳು ಮತ್ತು ವಿವಿಧ ಗಿಡಮೂಲಿಕೆಗಳ ಬೀಜಗಳು ಸೇರಿವೆ. ಇದು ಜ್ಞಾನವನ್ನು ಸಂರಕ್ಷಿಸುವ, ಸಂಪ್ರದಾಯವನ್ನು ಜೀವಂತವಾಗಿಡುವ ಮತ್ತು ಭವಿಷ್ಯದ ಪೀಳಿಗೆಗೆ ಬಲವಾದ ಅಡಿಪಾಯವನ್ನು ಹಾಕುವ ಪ್ರಯತ್ನವಾಗಿದೆ.
ಸ್ನೇಹಿತರೇ,
ಇಂದು ಜಗತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ, ಪರಿಹಾರ ಯಾವಾಗಲೂ ಎಲ್ಲೋ ದೂರ ಇರುವುದಿಲ್ಲ ಎಂಬುದನ್ನು ಇಂತಹ ಪ್ರಯತ್ನಗಳು ನಮಗೆ ಹೇಳುತ್ತವೆ. ಕೆಲವೊಮ್ಮೆ ನಮ್ಮದೇ ಆದ ಸಾಂಪ್ರದಾಯಿಕ ಜ್ಞಾನ ಮತ್ತು ಸಮುದಾಯದ ಪ್ರಯತ್ನಗಳೇ ನಮಗೆ ಎಲ್ಲಕ್ಕಿಂತ ಬಲವಾದ ಮಾರ್ಗ ತೋರಿಸುತ್ತವೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಈಗ ನೀವು ದೇಶದ ಯಾವುದೇ ಸಣ್ಣ-ದೊಡ್ಡ ನಗರಗಳಿಗೆ ಹೋದಾಗ, ಒಂದು ಬದಲಾವಣೆಯನ್ನು ಖಂಡಿತವಾಗಿಯೂ ಗಮನಿಸುತ್ತೀರಿ. ಹೆಚ್ಚಿನ ಸಂಖ್ಯೆಯ ಮನೆಗಳ ಮೇಲ್ಛಾವಣಿಯ ಮೇಲೆ ನಿಮಗೆ ಸೌರ ಫಲಕ ಕಂಡುಬರುತ್ತದೆ. ಕೆಲವು ವರ್ಷಗಳ ಹಿಂದೆ ಇವು ಅಲ್ಲೊಂದು – ಇಲ್ಲೊಂದು ಮನೆಗಳ ಮೇಲೆ ಕಂಡುಬರುತ್ತಿದ್ದವು. ಆದರೆ ಇಂದು ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜಲೀ ಯೋಜನೆ’ ಯ ಪರಿಣಾಮ ದೇಶದ ಮೂಲೆ ಮೂಲೆಗಳಲ್ಲಿ ಕಂಡು ಬರುತ್ತಿದೆ. ಈ ಯೋಜನೆಯ ಕಾರಣದಿಂದಾಗಿ, ಗುಜರಾತ್ ನ ಸುರೇಂದ್ರ ನಗರ್ ಜಿಲ್ಲೆಯ ಪಾಯಲ್ ಮುಂಜಪಾರಾ ಅವರ ಜೀವನದಲ್ಲಿ ಬಲು ದೊಡ್ಡ ಬದಲಾವಣೆ ಉಂಟಾಗಿದೆ. ಅವರು ಸೂರ್ಯ ಉಪಕ್ರಮದ ಅಡಿಯಲ್ಲಿ solar power technology ಯ ತರಬೇತಿ ಪಡೆದುಕೊಂಡರು ಮತ್ತು ನಾಲ್ಕು ತಿಂಗಳ ಅವಧಿಯ Solar PV technician course ಪೂರ್ಣಗೊಳಿಸಿದರು. ಅವರು ಈಗ ಓರ್ವ ನುರಿತ ಸೌರ ಶಕ್ತಿ ತಂತ್ರಜ್ಞರಾಗಿದ್ದಾರೆ. ಪಾಯಲ್ ಓರ್ವ ಸೌರ ಶಕ್ತಿ ಉದ್ಯಮಿಯ ರೂಪದಲ್ಲಿ ತಮ್ಮ ಗುರುತು ಮೂಡಿಸುತ್ತಿದ್ದಾರೆ. ಅವರು ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಮೇಲ್ಛಾವಣಿ ಸೌರ ಶಕ್ತಿ ಅಳವಡಿಕೆ – solar rooftop installation ನ ಕೆಲಸ ಮಾಡುತ್ತಾರೆ ಮತ್ತು ಇದರಿಂದ ಅವರಿಗೆ ಪ್ರತಿ ತಿಂಗಳೂ ಸಾವಿರಾರು ರೂಪಾಯಿ ಸಂಪಾದಿಸುತ್ತಾರೆ.
ಸ್ನೇಹಿತರೇ,
ಮೀರಟ್ ನ ಅರುಣ್ ಕುಮಾರ್ ಕೂಡಾ ಈಗ ತಾವು ವಾಸಿಸುವ ಪ್ರದೇಶದಲ್ಲಿ ಶಕ್ತಿದಾತ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊದರಲ್ಲಿ ಅರುಣ್ ಕುಮಾರ್ ಪಾಲ್ಗೊಂಡಿದ್ದರು ಮತ್ತು ತಮ್ಮ ಅನುಭವ ಹಂಚಿಕೊಂಡಿದ್ದರು. ತಾವು ಕೇವಲ ವಿದ್ಯುತ್ ಬಿಲ್ ನಲ್ಲಿ ಉಳಿತಾಯ ಮಾಡುತ್ತಿರುವುದು ಮಾತ್ರವಲ್ಲದೇ, ತಮ್ಮ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಕೂಡಾ ಮಾಡುತ್ತಿರುವುದಾಗಿ ಅವರು ಹೇಳಿದರು.
ಸ್ನೇಹಿತರೇ,
ಜೈಪೂರ್ ನಿವಾಸಿ ಮುರಳೀಧರ್ ಅವರ ಯಶಸ್ಸಿನ ಕತೆ ಕೂಡಾ ಇದೇ ರೀತಿ ಇದೆ. ಮೊದಲು ಅವರ ಹೊಲ ಡೀಸೆಲ್ ಪಂಪ್ ಮೇಲೆ ಅವಲಂಬಿತವಾಗಿತ್ತು, ಇದಕ್ಕಾಗಿ ಪ್ರತಿವರ್ಷ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾಗುತ್ತಿತ್ತು. ಅವರು ಸೌರ ಶಕ್ತಿ ಪಂಪ್ ಅನ್ನು ತಮ್ಮದಾಗಿಸಿಕೊಂಡಾಗ ಅವರ ಕೃಷಿ ವಿಧಾನವೇ ಬದಲಾಯಿತು. ಈಗ ಅವರಿಗೆ ಇಂಧನದ ಚಿಂತೆ ಇರುವುದಿಲ್ಲ, ಸಕಾಲದಲ್ಲಿ ನೀರಾವರಿ ಆಗುತ್ತದೆ, ಮತ್ತು ಅವರ ವಾರ್ಷಿಕ ವರಮಾನ ಕೂಡಾ ಏರಿಕೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ, ಈಗ ಅವರ ಕುಟುಂಬ ಶುದ್ಧ ವಿದ್ಯುತ್ ಶಕ್ತಿಯೊಂದಿಗೆ, ಉತ್ತಮ ಜೀವನ ನಡೆಸುತ್ತಿದ್ದಾರೆ.
ಸ್ನೇಹಿತರೇ,
‘ಪಿಎಂ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆ’ಯ ಲಾಭ ಈಶಾನ್ಯ ಪ್ರದೇಶಗಳಲ್ಲಿ ಕೂಡಾ ದೊರೆಯುತ್ತಿದೆ. ತ್ರಿಪುರಾದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ರಿಯಾಂಗ್ ಬುಡಕಟ್ಟು ಜನಾಂಗದ ಹಲವಾರು ಗ್ರಾಮಗಳಿದ್ದವು. ಈಗ ಸೌರ ಮಿನಿ ಗ್ರಿಡ್ ಮೂಲಕ ಅಲ್ಲಿ ಮನೆಗಳಲ್ಲಿ ಬೆಳಕು ಮಾಡಿದೆ. ಅಲ್ಲಿನ ಮಕ್ಕಳು ಈಗ ಸಂಜೆಯ ನಂತರವೂ ಓದಲು ಸಾಧ್ಯವಾಗುತ್ತಿದೆ. ಜನರಿಗೆ ಮೊಬೈಲ್ ಚಾರ್ಜ್ ಮಾಡಲು ಸಾಧ್ಯವಾಗುತ್ತಿದೆ ಮತ್ತು ಗ್ರಾಮದ ಸಾಮಾಜಿಕ ಜನಜೀವನ ಬದಲಾಗಿದೆ.
ಸ್ನೇಹಿತರೆ,
ದೇಶದಲ್ಲಿ ಸೌರ ಶಕ್ತಿ ಕ್ರಾಂತಿಯ ಇಂತಹ ಅದೆಷ್ಟೋ ಉದಾಹರಣೆಗಳಿವೆ. ನೀವು ಕೂಡಾ ಈ ಕ್ರಾಂತಿಯ ಭಾಗವಾಗಿ ಮತ್ತು ಇತರರನ್ನೂ ಈ ಕ್ರಾಂತಿಯಲ್ಲಿ ಕೈಜೋಡಿಸುವಂತೆ ಮಾಡಿ.
ನನ್ನ ಪ್ರೀತಿಯ ದೇಶಬಾಂಧವರೆ,
‘ಮನದ ಮಾತಿಗಾಗಿ’ ಪ್ರತಿ ತಿಂಗಳೂ ನನಗೆ ದೇಶದ ವಿಭಿನ್ನ ಭಾಗಗಳಿಂದ ಸಂದೇಶ ದೊರೆಯುತ್ತದೆ. ದೂರ ದೂರದ ಪ್ರದೇಶಗಳಲ್ಲೂ ಜನರು ಈ ಕಾರ್ಯಕ್ರಮವನ್ನು ಅದೆಷ್ಟು ಉತ್ಸಾಹದಿಂದ ಆಲಿಸುತ್ತಾರೆ ಎಂಬುದು ಈ ಸಂದೇಶಗಳಿಂದ ತಿಳಿದುಬರುತ್ತದೆ. ನಿಮ್ಮ ಸಲಹೆಗಳನ್ನು ಓದುವಾಗ, ಇದು ಕೇವಲ ಒಂದು ಕಾರ್ಯಕ್ರಮ ಮಾತ್ರವಲ್ಲ, ಇದು ನಮ್ಮೆಲ್ಲರಿಗೂ ಒಂದು ಹಂಚಿಕೆಯ ಸಂವಾದ ಎನಿಸಿದೆ ಎಂದು ನನಗೆ ಭಾಸವಾಗುತ್ತದೆ. ನಿಮ್ಮ ಅಭಿಪ್ರಾಯಗಳು, ನಿಮ್ಮ ಅನುಭವ, ಈ ಕಾರ್ಯಕ್ರಮವನ್ನು ಸತತವಾಗಿ ಮತ್ತಷ್ಟು ಉತ್ತಮವಾಗಿ ಮಾಡುವ ಪ್ರೇರಣೆ ನೀಡುತ್ತವೆ. ನೀವೆಲ್ಲರೂ ನಿಮ್ಮ ಸುತ್ತಮುತ್ತಲಿನ ಇಂತಹ ಸ್ಪೂರ್ತಿದಾಯಕ ಕತೆಗಳನ್ನು ಹಂಚಿಕೊಳ್ಳುತ್ತಿರಿ. ನಿಮ್ಮ ಒಂದು ಸಣ್ಣ ಪ್ರಯತ್ನ ಬೇರೊಬ್ಬರ ಜೀವನದಲ್ಲಿ ಅತಿ ದೊಡ್ಡ ಪರಿವರ್ತನೆ ತರಬಹುದು, ಮುಂದೆ ಸಾಗಲು ಹೊಸ ಧೈರ್ಯ ತುಂಬಬಹುದು – ಇದೇ ರೇಡಿಯೋಗಿರುವ ನಿಜವಾದ ಶಕ್ತಿ. ಇದು ದೇಶದ ಮೂಲೆ ಮೂಲೆಯಲ್ಲಿರುವ ಜನರನ್ನು ಒಂದು ಚಿಂತನೆ, ಒಂದು ಭಾವನೆ ಮತ್ತು ಒಂದು ಗುರಿಯೊಂದಿಗೆ ಜೋಡಿಸುತ್ತದೆ. ಹೊಸ ಸ್ಫೂರ್ತಿದಾಯಕ ವ್ಯಕ್ತಿತ್ವ ವಿಚಾರಗಳೊಂದಿಗೆ, ಮುಂದೆ ಸಾಗಲು ನಮ್ಮಲ್ಲಿ ಶಕ್ತಿ ತುಂಬುವಂತಹ ಇಂತಹ ಹಲವು ಪ್ರಯತ್ನಗಳೊಂದಿಗೆ ಮುಂದಿನ ತಿಂಗಳು ಪುನಃ ಭೇಟಿಯಾಗೋಣ. ಅಲ್ಲಿಯವರೆಗೆ ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಕಾಳಜಿ ಇರಲಿ – ಆರೋಗ್ಯವಾಗಿರಿ, ಸಂತೋಷದಿಂದಿರಿ. – ಅನೇಕಾನೇಕ ಧನ್ಯವಾದ.
*****
#MannKiBaat has begun. Do listen. https://t.co/uGQRfbExDE
— PMO India (@PMOIndia) March 29, 2026
Amid the West Asia conflict, PM @narendramodi's appeal to 140 crore Indians.#MannKiBaat pic.twitter.com/wwp8gMV3qY
— PMO India (@PMOIndia) March 29, 2026
Gyan Bharatam survey aims to document and preserve manuscripts from across the country. If you have a manuscript or information about it, do share its image on the Gyan Bharatam App. #MannKiBaat pic.twitter.com/ujcoPuNJvL
— PMO India (@PMOIndia) March 29, 2026
From Team India's victory in the ICC Men's T20 World Cup to Jammu and Kashmir's maiden Ranji Trophy win, the nation has witnessed moments of sporting excellence.#MannKiBaat pic.twitter.com/tFAex6tQlj
— PMO India (@PMOIndia) March 29, 2026
India's growing sporting culture.#MannKiBaat pic.twitter.com/vMxDmA0DZY
— PMO India (@PMOIndia) March 29, 2026
Adopt healthier habits like regular exercise, yoga and mindful eating to prevent lifestyle diseases.#MannKiBaat pic.twitter.com/dSiUA8IRrD
— PMO India (@PMOIndia) March 29, 2026
An innovative initiative in Bengaluru is making learning science more engaging.#MannKiBaat pic.twitter.com/K2cuLOdyiD
— PMO India (@PMOIndia) March 29, 2026
The Naga community is blending tradition with modern education through the Morung system.#MannKiBaat pic.twitter.com/Sx8ccWHLOQ
— PMO India (@PMOIndia) March 29, 2026
With the onset of summer, communities across India are coming together to conserve water through initiatives like rainwater harvesting, rejuvenation of ponds, creation of soak pits and more.#MannKiBaat pic.twitter.com/gBApKeFBF9
— PMO India (@PMOIndia) March 29, 2026
Efforts are being made to improve the quality of life for fishermen.#MannKiBaat pic.twitter.com/AtYBkCaON1
— PMO India (@PMOIndia) March 29, 2026
Innovations in fisheries and seaweed are helping fishermen become self-reliant.#MannKiBaat pic.twitter.com/lvVTNU138U
— PMO India (@PMOIndia) March 29, 2026
Across India, community efforts are creating big change. Here are examples from Varanasi and Nagaland. #MannKiBaat pic.twitter.com/gCkZimxb8l
— PMO India (@PMOIndia) March 29, 2026
The PM Surya Ghar Muft Bijli Yojana is transforming lives across India.#MannKiBaat pic.twitter.com/YzjV5sfnWe
— PMO India (@PMOIndia) March 29, 2026