Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 30.08.2026 ರಂದು ಮಾಡಿದ ‘ಮನ್ ಕಿ ಬಾತ್’ – 137ನೇ ಸಂಚಿಕೆಯ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ!

ಮನದ ಮಾತಿನ ಈ ಹೊಸ ಸಂಚಿಕೆಗೆ ನಿಮ್ಮೆಲ್ಲರನ್ನೂ ಮತ್ತೊಮ್ಮೆ ಸ್ವಾಗತಿಸುತ್ತೇನೆ. ಇದು ಹೊಸ ಉಪಕ್ರಮಗಳನ್ನು ಎಲ್ಲರೆದುರಿಗೆ ತರುವಂತಹ ಮತ್ತು ನಮ್ಮ ದೇಶಬಾಂಧವರ ವಿನೂತನ ಆಲೋಚನೆಗಳನ್ನು ಚರ್ಚಿಸುವ ಒಂದು ವೇದಿಕೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಇದರಲ್ಲಿ ಜನರು ದಣಿವರಿಯದೆ ತಮ್ಮ ಶಕ್ತಿ ಮತ್ತು ಉತ್ಸಾಹದಿಂದ ತಮ್ಮ ಜೀವನವನ್ನೇ ಸವೆಸಿರುವಂತಹ ಕೆಲವು ಯೋಚನೆಗಳು ಇವೆ.

ಸ್ನೇಹಿತರೇ,

ಕೆಲವು ದಿನಗಳ ಹಿಂದೆ, ಸಾಮಾಜಿಕ ಮಾಧ್ಯಮದಲ್ಲಿ ಯಾರೋ, “ಆಷಾಢ ಏಕಾದಶಿಯ ಶುಭ ಸಂದರ್ಭದಲ್ಲಿ, ಇತಿಹಾಸವನ್ನು ಆಸಕ್ತಿದಾಯಕವಾಗಿಸಲು ಒಂದು ಯೋಚನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಲು ನನಗೆ ಸಂತೋಷವಾಗಿದೆ.” ಎಂದು ಬರೆದಿದ್ದರು. ಮುಂದುವರಿದು ಅವರು ಹೀಗೆ ವಿವರಿಸಿದ್ದರು. “ಈ ಕಲ್ಪನೆ ತುಂಬಾ ಸರಳವಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಯಾವುದೇ ವರ್ಷವನ್ನು ಆಯ್ಕೆಮಾಡಿ, ಮತ್ತು ಆ ಸಮಯದಲ್ಲಿ ಭಾರತದ ಯಾವ ಭಾಗದ ಮೇಲೆ ಯಾವ ಆಡಳಿತಗಾರ ಅಧಿಕಾರ ಹೊಂದಿದ್ದನೆಂದು ಸುಲಭವಾಗಿ ಕಂಡುಹಿಡಿಯಬಹುದು.” ಎಂದು. ನನಗು ಇದು ತುಂಬಾ ಆಸಕ್ತಿಕರವೆನಿಸಿತು. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂದು ನಾನು ಆಲೋಚಿಸಿದೆ. ಈ ಯೋಜನೆಯನ್ನು ಮುಂಬೈನಲ್ಲಿ ವಾಸಿಸುವ ಶ್ರೀ ಕೃಷ್ಣ ಶೇಷಾದ್ರಿ ಅವರು ಕೈಗೆತ್ತಿಕೊಂಡಿದ್ದಾರೆ ಎಂದು ನನಗೆ ತಿಳಿಯಿತು. ಕುತೂಹಲಕಾರಿ ವಿಷಯವೆಂದರೆ, ಕೃಷ್ಣ ಅವರು ವೆಬ್‌ಸೈಟ್‌ ಹೆಸರನ್ನು ಕೂಡಾ ತುಂಬಾ ಸರಳವಾದದ್ದನ್ನೇ ಆಯ್ದುಕೊಂಡಿದ್ದಾರೆ: www.bharatrajya.com. ಅವರ ಪ್ರಯತ್ನದ ವಿವರಗಳು ಖಂಡಿತ ನಿಮ್ಮೆಲ್ಲರಿಗೂ ತಲುಪಬೇಕು. ಹಾಗಾಗಿ ನಾನು ಯಾಕೆ ನೇರವಾಗಿ ಕೃಷ್ಣ ಅವರೊಂದಿಗೆ ಮಾತನಾಡಬಾರದು ಎಂದು ಯೋಚಿಸಿದೆ.

ಸ್ನೇಹಿತರೇ,

ಕೃಷ್ಣ ಅವರು ನಮ್ಮೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದಾರೆ.

ಪ್ರಧಾನಮಂತ್ರಿ: ನಮಸ್ಕಾರ, ಕೃಷ್ಣ ಅವರೇ.

ಕೃಷ್ಣ ಶೇಷಾದ್ರಿ: ನಮಸ್ಕಾರ, ಸರ್; ನಮಸ್ಕಾರ.

ಪ್ರಧಾನಮಂತ್ರಿ: ಗೆಳೆಯನೇ, ತಾವು ತಂತ್ರಜ್ಞಾನ ಹಿನ್ನೆಲೆಯುಳ್ಳವರಲ್ಲ ಅಥವಾ ನೀವು ಇತಿಹಾಸ ಶಿಕ್ಷಕರು ಅಲ್ಲ ಎಂದು ನನಗೆ ತಿಳಿದುಬಂದಿದೆ. ಆದರೂ, ನೀವು ತಂತ್ರಜ್ಞಾನವನ್ನು ಬಳಸಿ ಇತಿಹಾಸಕ್ಕೆ ಮೀಸಲಾದ ವೆಬ್‌ಸೈಟ್ ರಚಿಸಿದ್ದೀರಿ. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ನನಗೆ ತುಂಬಾ ಕುತೂಹಲ ಮೂಡಿದೆ.

ಕೃಷ್ಣ ಶೇಷಾದ್ರಿ: ಧನ್ಯವಾದಗಳು ಸರ್, ನಿಮ್ಮೊಂದಿಗೆ ಮಾತನಾಡಲು ಅವಕಾಶ ಸಿಕ್ಕಿರುವುದು ದೊಡ್ಡ ಸೌಭಾಗ್ಯ. ನನ್ನ ಬಗ್ಗೆ ಸ್ವಲ್ಪಪರಿಚಯ ಹಂಚಿಕೊಳ್ಳಬಹುದೇ – ನಾನು ಎಂಜಿನಿಯರ್ ಆಗಿದ್ದೆ, ನಂತರ ನಾನು ಎಂಬಿಎ ಓದಿದೆ ಮತ್ತು ಮಾರ್ಕೆಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟೆ, ಆದಾಗ್ಯೂ, ಈ ಎಲ್ಲದರ ಮಧ್ಯೆ ಬಾಲ್ಯದಿಂದಲೂ ಇದ್ದ ನನ್ನ ಇತಿಹಾಸದ ಅತೀವ ಆಸಕ್ತಿಯನ್ನು ಹಾಗೆ ಉಳಿಸಿಕೊಂಡಿದ್ದೆ. ಇತಿಹಾಸವನ್ನು ಆಸಕ್ತಿಕರಗೊಳಿಸುವ ಕುರಿತು ಏನನ್ನಾದರೂ ಮಾಡುವ ಬಯಕೆ ನನ್ನಲ್ಲಿ ಯಾವಾಗಲೂ ತುಡಿಯುತ್ತಿತ್ತು. ಅಲ್ಲದೆ ಇತಿಹಾಸವನ್ನು ಪಾಠ ಮಾಡುವ ವಿಧಾನದಲ್ಲಿ ಸುಧಾರಣೆ ಮತ್ತು ಬದಲಾವಣೆಗೆ ಗಮನಾರ್ಹ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ನಾವು ಅದನ್ನು ಕಥೆಯ ರೂಪದಲ್ಲಿ ಜನರಿಗೆ ಪ್ರಸ್ತುತಪಡಿಸಬಹುದು.

ಪ್ರಧಾನಮಂತ್ರಿ: ಕೃಷ್ಣ ಅವರೇ, ಭಾರತೀಯ ಇತಿಹಾಸದ ಯಾವ ಅಂಶವನ್ನು ಹೆಚ್ಚಿನ ಸಂಖ್ಯೆಯ ಜನರು ತಿಳಿದುಕೊಳ್ಳಬೇಕು ಎಂದು ನೀವು ಭಾವಿಸುತ್ತೀರಿ?

ಕೃಷ್ಣ ಶೇಷಾದ್ರಿ: ಸರ್, ನಮ್ಮ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಭಾರತೀಯ ಇತಿಹಾಸವನ್ನು ಕಲಿಸುವ ವಿಧಾನವು ಸಾಮಾನ್ಯವಾಗಿ ಒಂದೇ ಸಾಮ್ರಾಜ್ಯ ಅಥವಾ ಸಾಮ್ರಾಜ್ಯದ ದೃಷ್ಟಿಕೋನದ ಮೇಲೆ ಕೇಂದ್ರೀಕರಿಸುತ್ತದೆ, ಆ ನಿರ್ದಿಷ್ಟ ಸಾಮ್ರಾಜ್ಯಗಳು ಅಸಮಾನ ಗಮನವನ್ನು ಪಡೆಯುತ್ತವೆ. ಇದರ ಪರಿಣಾಮವಾಗಿ, ಚೋಳರು, ಪಲ್ಲವರು, ಕಾಶ್ಮೀರದ ಕಾರ್ಕೋಟ ರಾಜವಂಶ ಅಥವಾ ಕನಿಷ್ಠ 600 ವರ್ಷಗಳ ಕಾಲ ಅಸ್ಸಾಂನಲ್ಲಿ ತಮ್ಮ ಸಂಸ್ಕೃತಿ ಮತ್ತು ಮೌಲ್ಯ ವ್ಯವಸ್ಥೆಯನ್ನು ಸಂರಕ್ಷಿಸಿದೆ ಅಹೋಮ್‌ಗಳಂತಹ ಇತರ ಅನೇಕ ಮಹಾನ್ ಸಾಮ್ರಾಜ್ಯಗಳ ಬಗ್ಗೆ ನಮಗೆ ತಿಳಿದೇ ಇಲ್ಲ. ಆದ್ದರಿಂದ, ಇಂಥ ಮಹಾನ್ ಸಾಮ್ರಾಜ್ಯಗಳ ಬಗ್ಗೆಯೂ ಜನರಿಗೆ ಮಾಹಿತಿಯನ್ನು ಒದಗಿಸುವ ಒಂದು ವೇದಿಕೆಯನ್ನು ರಚಿಸಬೇಕೆಂದು ನಾನು ಯೋಚಿಸಿದೆ.

ಪ್ರಧಾನಮಂತ್ರಿ: ಕೃಷ್ಣ ಅವರೇ, ತಾವು ಇಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದ್ದೀರಿ, ನಾನು ನಿಮಗೆ ಒಂದು ಕಾಲ್ಪನಿಕ ಪ್ರಶ್ನೆಯನ್ನು ಕೇಳಬಯಸುತ್ತೇನೆ. ಭಾರತೀಯ ಇತಿಹಾಸದ ಯಾವುದೇ ಮೂವರು ವ್ಯಕ್ತಿಗಳೊಂದಿಗೆ ಮಾತನಾಡಲು ನಿಮಗೆ ಅವಕಾಶವಿದ್ದರೆ, ನೀವು ಯಾರನ್ನು ಆಯ್ಕೆ ಮಾಡುತ್ತೀರಿ ಮತ್ತು ಏಕೆ?

ಕೃಷ್ಣ ಶೇಷಾದ್ರಿ: ಆಗಲಿ, ಸರ್. ಮೊದಲಿಗೆ, ನಾನು ಚೋಳ ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ಮತ್ತು ಮೇರು ರಾಜರುಗಳಾದ – ರಾಜ ರಾಜ ಚೋಳ ಅಥವಾ ರಾಜೇಂದ್ರ ಚೋಳರೊಂದಿಗೆ ಮಾತನಾಡಬಯಸುತ್ತೇನೆ. ಶಿವನಿಗೆ ಸಮರ್ಪಿತವಾದ, ಬೃಹದೀಶ್ವರ ದೇವಾಲಯ ಅಥವಾ ಗಂಗೈಕೊಂಡ ಚೋಳಪುರಂ ನಂತಹ ಬೃಹತ್ ಯೋಜನೆಗಳ ಹಿಂದಿನ ದೃಷ್ಟಿಕೋನವನ್ನು ನಾನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ. ಆ ದೃಷ್ಟಿಕೋನ ಎಲ್ಲಿಂದ ಬಂತು? ಅಂತಹ ಸ್ಮಾರಕಗಾಲ ಯೋಜನೆಗಳನ್ನು ಅವರು ಹೇಗೆ ರೂಪಿಸಿದರು ಮತ್ತು ಕಾರ್ಯಗತಗೊಳಿಸಿದರು? ಮುಂದಿನ ಒಂದೆರಡು ಸಾವಿರ ವರ್ಷಗಳವರೆಗೆ ಇತರರಿಗೆ ಸ್ಫೂರ್ತಿ ನೀಡುವಂತಹದ್ದನ್ನು ರಚಿಸಲು ಚಿಂತನೆಗೆ ಏನು ಪ್ರೇರೇಪಣೆ? ಅದನ್ನೇ ನಾನು ಅವರಿಂದ ತಿಳಿದುಕೊಳ್ಳಲು ಬಯಸುತ್ತೇನೆ. ಎರಡನೇ ವ್ಯಕ್ತಿತ್ವ – ನನ್ನ ಅಭಿಪ್ರಾಯದಲ್ಲಿ, ಭಾರತೀಯ ಇತಿಹಾಸದಲ್ಲಿ ಅತ್ಯಂತ ಕಡಿಮೆ ಉಲ್ಲೇಖವಿರುವಂತಹ ಹೇಮು. ನಾವು ಸಾಮಾನ್ಯವಾಗಿ ನಮ್ಮ ಇತಿಹಾಸ ಪುಸ್ತಕಗಳಲ್ಲಿ ಅವರ ಬಗ್ಗೆ ಎರಡು ಅಥವಾ ಮೂರು ಸಾಲುಗಳನ್ನು ಮಾತ್ರ ಓದುತ್ತೇವೆ. ಹೇಮು ಒಬ್ಬ ಸಾಮಾನ್ಯ ವ್ಯಕ್ತಿ – ವ್ಯಾಪಾರಿಯಾಗಿದ್ದರು. ಮುಂದೆ ಒಂದು ಸಾಮ್ರಾಜ್ಯವನ್ನೇ ನಿರ್ಮಿಸಿದರು. ಅವರು ಕೇವಲ ಸಾಮ್ರಾಜ್ಯ ನಿರ್ಮಾಪಕರಲ್ಲ ಜೊತೆಗೆ ಮಿಲಿಟರಿ ಚಿಂತಕರೂ ಆಗಿದ್ದರು. ಅಲ್ಲದೆ ಸೇನಾ ಮೇಧಾವಿ ಆಗಿದ್ದರು ಎಂಬುದು ಬಹಳ ಜನರಿಗೆ ತಿಳಿದೇ ಇಲ್ಲ. ಅವರು ತಮ್ಮ ಕಾಲಘಟ್ಟದಲ್ಲಿ ಇಪ್ಪತ್ತಮೂರು ಯುದ್ಧಗಳನ್ನು ಮಾಡಿದರು ಮತ್ತು ಅವುಗಳಲ್ಲಿ ಇಪ್ಪತ್ತೆರಡು ಯುದ್ಧಗಳನ್ನು ಗೆದ್ದರು. ಅವರ ಆಲೋಚನಾ ಪ್ರಕ್ರಿಯೆಯನ್ನು ಮತ್ತು ಅವರನ್ನು ಸಾಮಾನ್ಯ ಮನುಷ್ಯನಿಂದ ಅಂತಹ ಶಕ್ತಿಶಾಲಿ ರಾಜನನ್ನಾಗಿ ಪರಿವರ್ತಿಸಿದ ಪ್ರಯಾಣವನ್ನು ಅರ್ಥಮಾಡಿಕೊಳ್ಳುವಲ್ಲಿ ನನಗೆ ತೀವ್ರ ಆಸಕ್ತಿ ಇದೆ. ಮೂರನೆಯ ವ್ಯಕ್ತಿತ್ವ ಬಹಳ ಆಸಕ್ತಿಕರವಾದದ್ದು ಸರ್, ಆಕೆ ಓರ್ವ ಮಹಿಳೆ. ಒಡಿಶಾದ ಭೌಮಾಕಾರಾ ರಾಜವಂಶಕ್ಕೆ ಸೇರಿದ ತ್ರಿಭುವನ ಮಹಾದೇವಿ. ಆಕೆಯ ಕಥೆ ನಿಜಕ್ಕೂ ಬಹಳ ಆಸಕ್ತಿದಾಯಕವಾಗಿದೆ. ಕ್ರಿ.ಶ. 850 ರ ಸುಮಾರಿಗೆ, ನೆರೆಯ ಪಾಲ ಸಾಮ್ರಾಜ್ಯ ಆಕೆಯ ರಾಜ್ಯವನ್ನು ಆಕ್ರಮಿಸಿದಾಗ, ಅಲ್ಲಿಯ ರಾಜ – ಆಕೆಯ ಪತಿ ಯುದ್ಧದಲ್ಲಿ ಹುತಾತ್ಮರಾದರು. ಈ ಬಿಕ್ಕಟ್ಟು ಸಾಮ್ರಾಜ್ಯವನ್ನು ದುರ್ಬಲಗೊಳಿಸಿತು, ಇದರಿಂದಾಗಿ ರಾಜ್ಯದ ಪ್ರಮುಖರು ಮತ್ತು ಇತರ ನಾಯಕರು ರಾಜ್ಯ ತ್ಯಜಿಸಿ ಹೊರನಡೆದರು. ಆ ಸಮಯದಲ್ಲಿ, ತ್ರಿಭುವನ ಮಹಾದೇವಿ ಅಧಿಕಾರ ವಹಿಸಿಕೊಳ್ಳಲು ಮುಂದಾದರು. ಅವರು ಭಾರತದ ಮೊದಲ ಸ್ವತಂತ್ರ ಮಹಿಳಾ ಆಡಳಿತಗಾರರಲ್ಲಿ ಒಬ್ಬರಾದರು, ಆಡಳಿತವನ್ನು ಸ್ಥಿರಗೊಳಿಸಿದರು ಅಷ್ಟೇ ಅಲ್ಲ ಮುಂದಿನ ನೂರು ವರ್ಷಗಳವರೆಗೆ ಕಳಿಂಗ ಮತ್ತು ಸುತ್ತಮುತ್ತಲಿನ ಪ್ರದೇಶದ ಮೇಲೆ ಆಳ್ವಿಕೆ ಮುಂದುವರೆಸುವ ಮಟ್ಟಿಗೆ ರಾಜ್ಯವನ್ನು ಬಲಿಷ್ಠಗೊಳಿಸಿದರು. ಇವರು ನಾನು ಭೇಟಿಯಾಗಲು ಇಷ್ಟಪಡುವ ಮೂವರು ಐತಿಹಾಸಿಕ ವ್ಯಕ್ತಿಗಳು, ಸರ್.

ಪ್ರಧಾನಮಂತ್ರಿ: ಕೃಷ್ಣಾ ಅವರೇ, ಈಗ ನೀವು ಇತಿಹಾಸದ ಅನುಭವ ಪಡೆಯುತ್ತಿರುವಂತೆ ಭಾಸವಾಗುತ್ತಿದೆಯಲ್ಲವೇ. ತಾವು ಇತಿಹಾಸದಲ್ಲಿಯೇ ಸಂಪೂರ್ಣವಾಗಿ ಮುಳುಗಿ ಹೋಗಿದ್ದೀರಿ. ನೋಡಿ, ನಾನು ಕೂಡ ನಿಮ್ಮ ವೆಬ್ ಸೈಟ್‌ಗೆ ಬಹಳ ಕುತೂಹಲದಿಂದಲೇ ಭೇಟಿ ನೀಡಿದ್ದೇನೆ ಮತ್ತು ನನಗೆ ಅತ್ಯಂತ ಆಸಕ್ತಿದಾಯಕವೆನಿಸಿದ್ದೇನೆಂದರೆ ನಿಮ್ಮ ಸೈಟ್‌ನಲ್ಲಿ ಜನರು ತಿದ್ದುಪಡಿಗಳು ಮತ್ತು ಸಲಹೆಗಳನ್ನು ನೀಡಬಹುದಾದ ಒಂದು ಟ್ಯಾಬ್ ಕೂಡಾ ಇದೆ. ಅಂತಹ ರಚನಾತ್ಮಕ ಪ್ರತಿಕ್ರಿಯೆಗೆ ಮುಕ್ತವಾಗಿರುವುದು ಒಂದು ದೊಡ್ಡ ವಿಷಯವೇ ಆಗಿದೆ. ನೀವು ಜನರಿಂದ ಸಲಹೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದೀರಾ? ಮತ್ತು ನೀವು ಅವುಗಳ ಮೇಲೆ ಹೇಗೆ ಕೆಲಸ ಮಾಡುತ್ತೀರಿ?

ಕೃಷ್ಣ ಶೇಷಾದ್ರಿ: ಹೌದು ಸರ್, ಈಗ ಜನರಿಂದ ನಮಗೆ ಬಹಳಷ್ಟು ಸಲಹೆಗಳು ಬರುತ್ತಿವೆ. ಎರಡು ರೀತಿಯ ಸಲಹೆಗಳಿವೆ. ಒಂದು ತಿದ್ದುಪಡಿಗಳನ್ನು ಸೂಚಿಸುವವು – ಈ ರಾಜ್ಯದಲ್ಲಿ, ಈ ಸಮಯದಲ್ಲಿ, ಈ ರಾಷ್ಟ್ರದಲ್ಲಿ, ಈ ರಾಜ ಇದ್ದ ಅಥವಾ ಈ ಸಮಯದಲ್ಲಿ ಈ ಯುದ್ಧ ನಡೆದಿತ್ತು, ಎಂದು ಹೇಳುವ ಕೆಲವು ಸಲಹೆಗಳು ಬರುತ್ತವೆ. ಇನ್ನೊಂದು ರೀತಿಯ ಸಲಹೆಗಳೆಂದರೆ- ನೀವು ಈ ವೈಶಿಷ್ಟ್ಯ ಸೇರಿಸಬಹುದು ಅಥವಾ ಆ ವೈಶಿಷ್ಟ್ಯವನ್ನು ಈ ವೆಬ್‌ಸೈಟ್‌ಗೆ ಸೇರಿಸಬಹುದು ಎನ್ನುವಂತಹವು. ಹೀಗೆ ಎರಡೂ ರೀತಿಯ ಸಲಹೆಗಳನ್ನು ಪಡೆಯುತ್ತೇವೆ. ಉದಾಹರಣೆಗೆ, ಈ ರಾಜ್ಯದಲ್ಲಿ, ಈ ರಾಜ ಈ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ಎಂಬ ಸಲಹೆ ನಮಗೆ ಬಂದರೆ, ನಮ್ಮ ಮೂಲಗಳು ಏನೇ ಇರಲಿ ನಾವು ಆ ಸಲಹೆಯನ್ನು ತೆಗೆದುಕೊಳ್ಳುತ್ತೇವೆ. ನೀವು ಈಗಾಗಲೇ ಭಾರತವನ್ನು ತೋರಿಸಿದ್ದೀರಿ, ರಾಜ್ಯ ಮಟ್ಟದಲ್ಲಿ ತೋರಿಸಿದರೆ ಇನ್ನೂ ಉತ್ತಮ ಎಂದು ಯಾರೋ ನಮಗೆ ಸಲಹೆ ನೀಡಿದರು. ಆದ್ದರಿಂದ, ನಾವು ಆ feature implement ಮಾಡಿದ್ದೇವೆ. ನಂತರ, ನಾವು ಮತ್ತೊಂದು feature ಸೇರಿಸಿದೆವು, ಅದರಲ್ಲಿ ಇಡೀ ಸಾಮ್ರಾಜ್ಯದ ದತ್ತಾಂಶ ಅಂಕಿಅಂಶಗಳನ್ನು ಒದಗಿಸುವ ಮೂಲಕ ನಾವು ಟ್ರಂಪ್ ಕಾರ್ಡ್‌ನಂತಹ ರಚನೆಯನ್ನು ರಚಿಸಿದ್ದೇವೆ ಇದರಿಂದ ಮಾಹಿತಿ ಸುಲಭವಾಗಿ ಮಕ್ಕಳನ್ನು ತಲುಪಬಹುದು. ಎಲ್ಲರೂ ಅದನ್ನು ಡೌನ್‌ಲೋಡ್ ಮಾಡಿ ಹಂಚಿಕೊಳ್ಳಬಹುದಾದಂತಹ ಒಂದೇ ಸ್ಥಳದಲ್ಲಿ ಮಾಹಿತಿ ಒಟ್ಟುಗೂಡಿಸಬೇಕೆಂದು ಒಬ್ಬರು ಸೂಚಿಸಿದ್ದರು. ಆದ್ದರಿಂದ, ನಾವು ಆ feature ಕೂಡಾ ಕಾರ್ಯಗತಗೊಳಿಸುತ್ತಿದ್ದೇವೆ. ನಾವು ತಪ್ಪುಗಳನ್ನು ಮಾಡುತ್ತೇವೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ, ಏಕೆಂದರೆ ನಾವೇನೂ ಸರ್ವಶ್ರೇಷ್ಠರಲ್ಲ. ಅದನ್ನು ಗಮನದಲ್ಲಿಟ್ಟುಕೊಂಡೆ, ತಿದ್ದುಪಡಿ ಟ್ಯಾಬ್ ಅನ್ನು ಸೇರಿಸಿದ್ದೇವೆ. ಇದು ಎಲ್ಲರಿಗೂ ಮುಕ್ತವಾಗಿರಬೇಕು. ಎಲ್ಲಾ ಕೊಡುಗೆಗಳ ಆಧಾರದ ಮೇಲೆ, ಮುಂದಿನ ಕೆಲವು ವರ್ಷಗಳವರೆಗೆ ಇತಿಹಾಸವನ್ನು ಆಸಕ್ತಿದಾಯಕ ವಿಷಯವನ್ನಾಗಿ ಮಾಡುವ ಸೈಟ್ ಅನ್ನು ನಾವು ರಚಿಸಬೇಕು.

ಕೃಷ್ಣ ಶೇಷಾದ್ರಿ: ಹೌದು, ಇಲ್ಲ ಸರ್ ನಾನೇನೂ ಅಷ್ಟೊಂದು ಆಸಕ್ತಿಕರ ವ್ಯಕ್ತಿತ್ವದವನಲ್ಲ ಸರ್.

ಪ್ರಧಾನಮಂತ್ರಿ : ನಗುತ್ತಾ

ಕೃಷ್ಣ ಶೇಷಾದ್ರಿ: ನನಗೆ ತಂತ್ರಜ್ಞಾನದಲ್ಲಿ ತುಂಬಾ ಆಸಕ್ತಿಯಿದೆ ಮತ್ತು ಇತಿಹಾಸದಲ್ಲಿಯೂ ಆಸಕ್ತಿಯಿದೆ. ಇನ್ನು ತಂತ್ರಜ್ಞಾನ ಮತ್ತು ಇತಿಹಾಸ ಎರಡೂ ಒಗ್ಗೂಡಿದ ಮೇಲೆ, ಇಡೀ ದಿನ ಇದರಲ್ಲೇ ಮುಳುಗಿರುತ್ತೇನೆ .

ಪ್ರಧಾನಮಂತ್ರಿ: ಸರಿ ಕೃಷ್ಣ ಅವರೇ, ನಿಮಗೆ ನನ್ನ ಅನಂತ ಶುಭಾಶಯಗಳು. ನೀವು ಒಂದು ಒಳ್ಳೆ ಆರಂಭ ಮಾಡಿದ್ದೀರಿ ಮತ್ತು ನಿಮ್ಮ ಶೈಲಿ ಹೇಗಿದೆ ಎಂದರೆ ಜನರು ಖಂಡಿತ ಒಗ್ಗೂಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಿಮಗೆ ಅನೇಕಾನೇಕ ಶುಭಾಶಯಗಳು.

ಪ್ರಧಾನಮಂತ್ರಿ: ಕೃಷ್ಣ ಅವರೇ ತಾವು ನಿಜವಾಗಲೂ ಒಂದು ಮಹತ್ವದ ಕೆಲಸವನ್ನು ಮಾಡಿದ್ದೀರಿ. ನಿಮಗೆ ಇತಿಹಾಸದ ಹೊರತಾಗಿ ಇನ್ನೂ ಅನೇಕ ಹವ್ಯಾಸಗಳಿರಬೇಕಲ್ಲವೇ? ಬೇರೆ ಏನೇನು ಮಾಡುವಿರಿ?

ಸ್ನೇಹಿತರೇ,

ಕೃಷ್ಣ ಅವರ ಈ ಪ್ರಯತ್ನವು, ಕೇವಲ ಇತಿಹಾಸದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ನಮಗೆಲ್ಲರಿಗೂ ನಮ್ಮ ಗತಕಾಲವನ್ನು ಸ್ವಾರಸ್ಯಕರ ರೀತಿಯಲ್ಲಿ ತಿಳಿದುಕೊಳ್ಳಲು ನೆರವಾಗುತ್ತದೆ. ನಿಮ್ಮ ಬಳಿಯೂ ಇಂತಹ ಪ್ರಯತ್ನಗಳ ಕುರಿತು ಮಾಹಿತಿ ಇದ್ದರೆ, ಅದನ್ನು ಖಂಡಿತವಾಗಿ ಹಂಚಿಕೊಳ್ಳಿ.

ನನ್ನ ಪ್ರೀತಿಯ ದೇಶವಾಸಿಗಳೇ,

‘ವಿಕಸಿತ ಭಾರತಕ್ಕಾಗಿ ಮಾದಕದ್ರವ್ಯ ಮುಕ್ತ ಯುವಸಮೂಹ’ ಅನ್ನೋ ಈ ಅಭಿಯಾನ, ಇಡೀ ದೇಶಾದ್ಯಂತ ಈಗ ತುಂಬಾ ವೇಗವಾಗಿ ಮುಂದೆ ಸಾಗ್ತಿದೆ. ಇದರ ಗುರಿ ತುಂಬಾ ಸ್ಪಷ್ಟವಾಗಿದೆ – ನಮ್ಮ ಯುವಜನತೆ ಮಾದಕ ವಸ್ತುಗಳಿಂದ ದೂರವಿರಬೇಕು, ಡ್ರಗ್ ಫ್ರೀ ಇಂಡಿಯಾ ಆಗಬೇಕು. ಬಹಳಷ್ಟು ಜನ, ಅದರಲ್ಲೂ ಮುಖ್ಯವಾಗಿ ನಮ್ಮ ಯುವಕರು ಸಾಲು ಸಾಲಾಗಿ ಇದರ ಜೊತೆ ಕೈಜೋಡಿಸ್ತಿದ್ದಾರೆ. ಕೊನೆಗೆ ಇದು ನಮ್ಮ ಭಾರತದ ಯುವಕರ ಆರೋಗ್ಯ, ಅವರ ಸಂತೋಷ ಮತ್ತು ಒಳ್ಳೆ ಭವಿಷ್ಯಕ್ಕಾಗಿ ನಾವೆಲ್ಲರೂ ಸೇರಿ ತಗೊಂಡಿರೋ ಒಂದು ದೃಢ ಸಂಕಲ್ಪ!

ಸ್ನೇಹಿತರೇ,

ಈ ಕುಡಿತ ಅಥವಾ ಮಾದಕ ವಸ್ತುಗಳ ಚಟ ಅನ್ನೋದು ಬರೀ ಒಬ್ಬ ವ್ಯಕ್ತಿಯನ್ನು ಮಾತ್ರ ಹಾಳು ಮಾಡಲ್ಲ, ಇದರ ಕೆಟ್ಟ ಪರಿಣಾಮ ಇಡೀ ಕುಟುಂಬ ಮತ್ತು ಸಮಾಜವೇ ಅನುಭವಿಸಬೇಕಾಗುತ್ತೆ. ಮಾದಕ ವಸ್ತುಗಳ ವಿರುದ್ಧ ಬೇರೆಯವರಿಗೆ ಜಾಗೃತಿ ಮೂಡಿಸ್ತಿರೋ ಹಾಗೆ, ಈ ಚಟಕ್ಕೆ ಬಿದ್ದಿರೋರಿಗೆ ನೆರವಿನ ಹಸ್ತ ಚಾಚುತ್ತಿರೋ ಪ್ರತಿಯೊಬ್ಬರನ್ನೂ ನಾನು ಮನಸಾರೆ ಮೆಚ್ಚಿಕೊಳ್ತೀನಿ. ಮಾದಕದ್ರವ್ಯ ಮುಕ್ತ ಭಾರತಕ್ಕಾಗಿ ನೀವು ಏನಾದ್ರೂ ಅದ್ಭುತವಾದ ಸ್ಲೋಗನ್ ಅಥವಾ ಘೋಷಣೆಗಳನ್ನು ರೆಡಿ ಮಾಡಬಾರದೇಕೆ? ನಮ್ಮ ಯುವ ಸಂಗೀತಗಾರರು ಮಾದಕ ವಸ್ತುಗಳಿಲ್ಲದ ಜೀವನ ಎಷ್ಟು ಚೆಂದ ಅನ್ನೋ ಸಂದೇಶ ಕೊಡುವ ಒಳ್ಳೆ ಹಾಡುಗಳನ್ನು ಕಟ್ಟಿಕೊಡಬಾರದೇಕೆ? ವಿದ್ಯಾರ್ಥಿಗಳು ಮತ್ತೆ ನಾಟಕ ತಂಡದವರು ಮಾದಕ ವಸ್ತುಗಳ ಅಪಾಯಗಳ ಬಗ್ಗೆ, ಹಾಗೇ ಅದರಿಂದ ಆಚೆಗೆ ಬರೋ ಹಾದಿಗಳನ್ನು ತೋರಿಸೋ ತರಹದ ಹೃದಯ ತಟ್ಟುವ ಸಣ್ಣ ನಾಟಕಗಳನ್ನು ಬರೆಯಬಾರದೇಕೆ? ನಮ್ಮ ದೇಶದಲ್ಲಿ ಅದ್ಭುತವಾದ ಕಂಟೆಂಟ್ ಕ್ರಿಯೇಟ್ ಮಾಡೋರಿಗೆ ಏನೂ ಕೊರತೆಯಿಲ್ಲ. ಸಮಾಜಕ್ಕೆ ಹೆಲ್ಪ್ ಆಗೋ ತರ ಬೇರೆ ಬೇರೆ ಭಾಷೆಗಳಲ್ಲಿ ಇಂತಾ ಕಂಟೆಂಟ್ ಮಾಡಿ ಅಂತ ನಾನು ವಿನಂತಿ ಮಾಡಿಕೊಳ್ತೀನಿ. ನೀವು ಮಾಡೋ ಈ ಪ್ರಯತ್ನಗಳನ್ನು ಹ್ಯಾಶ್‌ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮದಲ್ಲೂ ಖಂಡಿತ ಹಂಚಿಕೊಳ್ಳಿ. ಯಾಕಂದ್ರೆ ಕೆಲವೊಮ್ಮೆ ಇಂತಾ ಸೃಜನಶೀಲ ಪ್ರಯತ್ನಗಳು, ಔಪಚಾರಿಕ ಅಭಿಯಾನಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ! ಬನ್ನಿ, ಭಾರತದ ಯುವಕರನ್ನು ಈ ಕೆಟ್ಟ ಚಟಗಳಿಂದ ದೂರವಿಡೋ, ಅವರನ್ನು ಮುಕ್ತವಾಗಿಡೋ ಈ ಪವಿತ್ರ ಕೆಲಸದಲ್ಲಿ ನಾವೆಲ್ಲರೂ ನಮ್ ನಮ್ ಪಾತ್ರವನ್ನು ವಹಿಸೋಣ. ನಿಮ್ಮ ಪ್ರಯತ್ನಗಳನ್ನು ಹ್ಯಾಶ್‌ಟ್ಯಾಗ್ #NashaMuktYuva ಜೊತೆ ಸಾಮಾಜಿಕ ಮಾಧ್ಯಮದಲ್ಲಿ ಖಂಡಿತ ಹಂಚಿಕೊಳ್ಳಿ.

ನನ್ನ ಪ್ರೀತಿಯ ದೇಶವಾಸಿಗಳೇ,

ಈ ಆಗಸ್ಟ್ ತಿಂಗಳಲ್ಲಿ ನಮಗೆಲ್ಲಾ ಎಲ್ಲೆಲ್ಲೂ ದೇಶಭಕ್ತಿಯ ಹಲವು ಬಣ್ಣಗಳು ಕಾಣಸಿಗುತ್ತವೆ. ಈ ಸಮಯದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲೂ ದೇಶಪ್ರೇಮದ ಭಾವನೆ ಇನ್ನೂ ಹೆಚ್ಚಾಗುತ್ತೆ. ‘ರಾಷ್ಟ್ರೀಯ ಕೈಮಗ್ಗ ದಿನ’ ಮತ್ತು ‘ಕ್ವಿಟ್ ಇಂಡಿಯಾ ಚಳವಳಿ’ಯ ವಾರ್ಷಿಕೋತ್ಸವದಿಂದ ಹಿಡಿದು ದೇಶ ವಿಭಜನೆಯ ಭೀಕರತೆಯನ್ನು ನೆನಪಿಸಿಕೊಳ್ಳೋ ದಿನದವರೆಗೂ ಇವೆಲ್ಲವೂ ಈ ತಿಂಗಳನ್ನು ತುಂಬಾ ವಿಶೇಷ ಮಾಡುತ್ತವೆ. ಇನ್ನು ‘ಸ್ವಾತಂತ್ರ್ಯ ದಿನಾಚರಣೆ’ ಮತ್ತು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಅಂತೂ ಪ್ರತಿಯೊಬ್ಬ ದೇಶವಾಸಿಯಲ್ಲೂ ಹೆಮ್ಮೆ ತುಂಬಿ ತುಳುಕುವಂತೆ ಮಾಡುತ್ತವೆ. ‘ಹರ್ ಘರ್ ತಿರಂಗಾ ಅಭಿಯಾನ’ ಈ ಭಾವನೆಯನ್ನು ಇನ್ನಷ್ಟು ಗಟ್ಟಿ ಮಾಡಿದೆ. ‘ವಂದೇ ಮಾತರಂ’ ಗೀತೆಗೆ ನೂರೈವತ್ತು ವರ್ಷ ತುಂಬಿರೋದ್ರಿಂದ ಈ ವರ್ಷ ಇನ್ನೂ ವಿಶೇಷವಾಗಿದೆ. ಈ ಸಲ 8 ಕೋಟಿಗೂ ಹೆಚ್ಚು ತ್ರಿವರ್ಣ ಧ್ವಜದ ಸೆಲ್ಫಿಗಳನ್ನು ಅಪ್‌ಲೋಡ್ ಮಾಡಲಾಗಿದೆ. ತ್ರಿವರ್ಣ ಧ್ವಜದ ಈ ಸಂಭ್ರಮ ಬರೀ ಭಾರತಕ್ಕೆ ಮಾತ್ರ ಸೀಮಿತವಾಗುಳಿಯಲಿಲ್ಲ – ಈ ವರ್ಷ ‘ಸೂರ್ಯಪಥ ತಿರಂಗಾ’ ಮೂಲಕ ನಮ್ಮ ರಾಷ್ಟ್ರಧ್ವಜ ಇಡೀ ಜಗತ್ತಿನಾದ್ಯಂತ ಒಂದು ಅಪರೂಪದ ಪ್ರಯಾಣ ಬೆಳೆಸಿತು! ಫಿಜಿ ದೇಶದ ಸುವಾದಲ್ಲಿ ಸೂರ್ಯನ ಮೊದಲ ಕಿರಣ ಬೀಳ್ತಿದ್ದ ಹಾಗೆ ತ್ರಿವರ್ಣ ಧ್ವಜ ಹಾರಿಸಲಾಯ್ತು. ಅದಾದ ಮೇಲೆ ಏಷ್ಯಾ, ಆಫ್ರಿಕಾ, ಯುರೋಪ್, ಆಮೇಲೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವರೆಗೂ ನಮ್ಮ ಭಾರತೀಯ ದೂತಾವಾಸ ಹಾಗೂ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸಿತು! ನೀವು ಒಮ್ಮೆ ಊಹಿಸಿಕೊಂಡು ನೋಡಿ, ಆ ದೃಶ್ಯಗಳು ಎಷ್ಟು ಅದ್ಭುತವಾಗಿ ಇರ್ತಿದ್ವು ಅಂತ! ಜಗತ್ತಿನಲ್ಲಿ ಸೂರ್ಯ ಮುನ್ನಡೆದ ಹಾಗೆಲ್ಲಾ, ನಮ್ಮ ಭಾರತದ ತ್ರಿವರ್ಣ ಧ್ವಜವೂ ಹಾರಾಡ್ತಾ ಮುಂದೆ ಸಾಗಿತು. ಇಂತಾ ಪ್ರಯತ್ನಗಳು ಇಡೀ ಸಮಾಜವನ್ನು ಒಂದೇ ದಾರದಲ್ಲಿ ಪೋಣಿಸುತ್ತವೆ. ಇವುಗಳಿಂದ ದೇಶದ ಜೊತೆ ನಮಗಿರೋ ಬಾಂಧವ್ಯ ಇನ್ನೂ ಆಳವಾಗುತ್ತೆ. ಈ ಕೆಲಸಗಳಲ್ಲಿ ತೊಡಗಿಸಿಕೊಂಡಿರೋ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ತುಂಬಾ ತುಂಬಾ ಅಭಿನಂದನೆಗಳು!

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ಊರು, ತಾಲೂಕು, ನಗರಗಳ ರಸ್ತೆಗಳಲ್ಲಿ ಪ್ರತಿದಿನ ಬೆಳಗ್ಗಿನಿಂದ ಸಂಜೆವರೆಗೂ ಲಕ್ಷಾಂತರ ಮಹಿಳೆಯರು ತಮ್ಮ ತಮ್ಮ  ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಯಾರೋ ತರಕಾರಿ ಮಾರ್ತಾರೆ, ಇನ್ಯಾರೋ ಹಣ್ಣು, ಯಾರೋ ಚಹಾ ತಳ್ಳುವ ಗಾಡಿ ಇಟ್ಕೊಂಡಿರ್ತಾರೆ, ಇನ್ನು ಕೆಲವರು ಹೂವು, ದೀಪ ಮತ್ತೆ ಪೂಜೆ ಸಾಮಗ್ರಿಗಳನ್ನು ಮಾರ್ತಾರೆ. ಕೆಲವೊಮ್ಮೆ ಬರೀ ಸ್ವಲ್ಪ ಹಣದ ಅಭಾವ, ಅವರ ವ್ಯಾಪಾರವನ್ನು ಬೆಳೆಯದಂತೆ ತಡೆದುಬಿಡುತ್ತೆ. ಆದ್ರೆ ಈಗ ಇಂತಾ ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರಿಗೆ ‘ಪಿಎಂ ಸ್ವನಿಧಿ ಯೋಜನೆ’ಯಿಂದ ಹೊಸ ಶಕ್ತಿ ಸಿಗ್ತಿದೆ. ‘ಮಹಿಳಾ ಸಬಲೀಕರಣ’ದ ಈ ಮಗ್ಗುಲ ಬಗ್ಗೆ ಎಷ್ಟು ಚರ್ಚೆಯಾಗಬೇಕೋ ಅಷ್ಟು ಆಗ್ತಿಲ್ಲ! ‘ಪಿಎಂ ಸ್ವನಿಧಿ ಯೋಜನೆ’ಯ ಫಲಾನುಭವಿಗಳಲ್ಲಿ ಸುಮಾರು ಶೇಕಡಾ 46 ರಷ್ಟು ಬರೀ ಮಹಿಳೆಯರೇ ಇದ್ದಾರೆ. ಅಂದ್ರೆ ದೇಶಾದ್ಯಂತ ಹತ್ತತ್ರ 35 ಲಕ್ಷ ಮಹಿಳೆಯರು ಈ ಯೋಜನೆ ಜೊತೆ ಸೇರಿ ತಮ್ ವ್ಯಾಪಾರವನ್ನು ದೊಡ್ಡ ಮಟ್ಟಕ್ಕೆ ಬೆಳೆಸ್ತಾ ಇದ್ದಾರೆ!

ಸ್ನೇಹಿತರೇ,

ಗಾಜಿಯಾಬಾದ್‌ನ ಬಬಿತಾ ಶರ್ಮಾ ಜೀ ಇದಕ್ಕೆ ಒಂದು ಉತ್ತಮ ಉದಾಹರಣೆ. ಬಬಿತಾ ಜೀ, ಪೂಜೆ ಸಾಮಗ್ರಿಗಳ ಒಂದು ಸಣ್ಣ ಅಂಗಡಿ ಇಟ್ಕೊಂಡಿದ್ರು. ಹೂವು, ದೀಪ, ಧೂಪದ ಕಡ್ಡಿ, ತೆಂಗಿನಕಾಯಿ ತರಹದ ವಸ್ತುಗಳನ್ನು ಮಾರಿ, ಅವರು ತಮ್ ಕುಟುಂಬದ ಹೊಟ್ಟೆಪಾಡಿಗೆ ಆಸರೆಯಾಗಿದ್ರು. ಪಟ್ಟ ಶ್ರಮ ಅಪಾರವಾಗಿತ್ತು, ಆದ್ರೆ ವ್ಯಾಪಾರ ಬೆಳೆಸೋಕೆ ದುಡ್ಡಿನ ಅಗತ್ಯವಿತ್ತು. ‘ಪಿಎಂ ಸ್ವನಿಧಿ’ಯಿಂದ ಅವರಿಗೆ ಆರ್ಥಿಕ ನೆರವು ಸಿಕ್ತು. ಅವರು ತಮ್ಮ ಅಂಗಡಿಯಲ್ಲಿ ಸಾಮಗ್ರಿಗಳನ್ನು ಜಾಸ್ತಿ ಮಾಡಿದ್ರು, ವ್ಯಾಪಾರವನ್ನು ವಿಸ್ತರಿಸಿದ್ರು. ಗ್ರಾಹಕರು ಹೆಚ್ಚಾದ್ರು, ಆದಾಯವೂ ಜಾಸ್ತಿಯಾಯ್ತು, ನಿಧಾನವಾಗಿ ರಸ್ತೆಬದಿಯಲ್ಲಿದ್ದ ಅವರ ಸಣ್ಣ ಅಂಗಡಿ ಇವತ್ತು ಒಂದು ದೊಡ್ಡ ಅಂಗಡಿಯಾಗಿ ಬದಲಾಗಿದೆ!

ಸ್ನೇಹಿತರೇ,

ಬೆಂಗಳೂರಿನ ಟಿ.ಎಸ್. ನಿಂಗಮ್ಮ ಅವರ ಉದಾಹರಣೆ ಕೂಡ ತುಂಬಾ ಸ್ಪೂರ್ತಿದಾಯಕವಾಗಿದೆ. ನಿಂಗಮ್ಮ ಮತ್ತು ಅವರ ಪತಿ ಜೊತೆಗೂಡಿ ಇಡ್ಲಿ, ದೋಸೆ ಮತ್ತೆ ಸಾಂಬಾರ್ ಮಾರೋ ಸಣ್ಣ ಕೆಲಸ ಶುರು ಮಾಡಿದ್ರು. ವ್ಯಾಪಾರ ಚೆನ್ನಾಗಿಯೇ ನಡೀತಿತ್ತು, ಆದ್ರೆ ಇದನ್ನ ಮತ್ತಷ್ಟು ಬೆಳೆಸೋಕೆ ದುಡ್ಡಿನ ಅಗತ್ಯವಿತ್ತು. ನಿಂಗಮ್ಮ ಅವರಿಗೂ ‘ಪಿಎಂ ಸ್ವನಿಧಿ’ಯಿಂದ ಬೆಂಬಲ ಸಿಕ್ತು. ಅವರು ತಮ್ಮ ತಳ್ಳುವ ಗಾಡಿಯನ್ನು ಇನ್ನಷ್ಟು ಚೆನ್ನಾಗಿ ಮಾಡಿದ್ರು, ಸಾಮಗ್ರಿಗಳನ್ನು ಸಗಟು ದರದಲ್ಲಿ ಕೊಂಡುಕೊಳ್ಳೋಕೆ ಪ್ರಾರಂಭಿಸಿದ್ರು ಹಾಗೂ ತಿಂಡಿಗಳ ಪಟ್ಟಿಯಲ್ಲಿ ಹಲವು ಹೊಸ ಪದಾರ್ಥಗಳನ್ನು ಸೇರಿಸಿದ್ರು. ಇದರಿಂದ ಗ್ರಾಹಕರು ಹೆಚ್ಚಾದ್ರು, ಸಂಪಾದನೆ ಜಾಸ್ತಿಯಾಯ್ತು ಮತ್ತೆ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸ್ತು. ಇವತ್ತು ಅವರು ತಮ್ಮ ಮೂವರು ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡ್ಸೋಕೆ ಶಕ್ತರಾಗಿದ್ದಾರೆ.

ಸ್ನೇಹಿತರೇ,

ಒಬ್ಬ ಮಹಿಳೆಯ ವ್ಯಾಪಾರ ಬೆಳೆದಾಗ, ಅವಳ ಜೊತೆ ಇಡೀ ಕುಟುಂಬದ ಭವಿಷ್ಯವೂ ಅಭಿವೃದ್ಧಿ ಹೊಂದುತ್ತದೆ. ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ, ಮನೆ ಅಗತ್ಯಗಳು ಪೂರೈಸಲ್ಪಡುತ್ತವೆ ಮತ್ತು ಮಹಿಳೆಯ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗುತ್ತೆ. ಇದೇ ಅಲ್ವಾ ‘ಮಹಿಳಾ ಸಬಲೀಕರಣ’ದ ಜೀವಂತ ಉದಾಹರಣೆ! ರಸ್ತೆಬದಿ ವ್ಯಾಪಾರ ಮಾಡೋ ನನ್ನೆಲ್ಲಾ ಸಹೋದರಿಯರಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಸ್ವಚ್ಛತೆಯಲ್ಲಿ ಒಂದು ದೊಡ್ಡ ವಿಶೇಷತೆಯಿದೆ. ಯಾವುದಾದರೂ ಒಂದು ಜಾಗವನ್ನು ಸ್ವಚ್ಛವಾಗಿಡೋ ಸಂಕಲ್ಪ, ಅಲ್ಲಿರೋ ಜನರ ಸಂಕಲ್ಪವಾದಾಗ, ಆ ಬದಲಾವಣೆ ಬರೀ ಶುಚಿತ್ವ ಮಾಡೋದಕ್ಕಷ್ಟೇ ಸೀಮಿತವಾಗಿ ಉಳಿಯಲ್ಲ. ಅದರಿಂದ ಆ ಜಾಗದ ಇಡೀ ಗುರುತೇ ಬದಲಾಗಿಬಿಡುತ್ತೆ. ದೇಶದ ಬೇರೆ ಬೇರೆ ಮೂಲೆಗಳಲ್ಲಿ ಸ್ವಚ್ಛತೆಗಾಗಿ ಮಾಡ್ತಿರೋ ಇಂತಾ ಪ್ರಯತ್ನಗಳು ನಮಗೆ ನಿರಂತರ ಪ್ರೇರಣೆ ನೀಡುತ್ತವೆ. ಉತ್ತರ ಪ್ರದೇಶದ ರಾಂಪುರದಲ್ಲಿ ‘ಪಟವಾಯಿ’ ಅನ್ನೋ ಒಂದು ಹಳ್ಳಿ ಇದೆ. ಅಲ್ಲಿ ಆಕಾಶ್ ಮತ್ತು ರೋಹನ್ ಅನ್ನೋ ಇಬ್ಬರು ಗೆಳೆಯರು ತಮ್ಮ ಸುತ್ತಮುತ್ತಲಿನ ಜಾಗ ಕಸದಿಂದ ತುಂಬಿರೋದನ್ನು ನೋಡಿದ್ರು. ಅಷ್ಟೇ, ಆಕಾಶ್ ಮತ್ತೆ ರೋಹನ್ ಕಸದ ಚೀಲ ಹಿಡಿದುಕೊಂಡು ಶುಚಿ ಮಾಡೋಕೆ ಹೊರಟೇ ಬಿಟ್ರು! ನಿಧಾನವಾಗಿ ಬೇರೆ ಯುವಕರೂ ಅವರ ಜೊತೆ ಸೇರಿಕೊಳ್ಳೋಕೆ ಶುರು ಮಾಡಿದ್ರು. ಒಂದು ತಂಡ ಕೂಡ ಸಿದ್ಧವಾಯ್ತು, ಅದರ ಹೆಸರೇ – ‘ಕ್ಲೀನ್-ಅಪ್ ಪಟವಾಯಿ’. ಈ ಯುವಕರು ಇಲ್ಲಿಯವರೆಗೂ ನಾಲ್ಕು ಗಂಗಾ ಘಾಟ್‌ಗಳನ್ನು ಸ್ವಚ್ಛ ಮಾಡಿದ್ದಾರೆ. ಒಂದು ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ಕಸ ತೆಗೆದಿದ್ದಾರೆ. ಇವರು ಎಷ್ಟೋ ಕೆರೆಗಳನ್ನು ಮತ್ತು ಸಾರ್ವಜನಿಕ ಜಾಗಗಳನ್ನು ಸ್ವಚ್ಛ ಮಾಡಿದ್ದಾರೆ!

ಸ್ನೇಹಿತರೇ,

ಈ ಸಲದ ಶ್ರೀ ಅಮರನಾಥ ಯಾತ್ರೆಯಲ್ಲೂ ಸ್ವಚ್ಛತೆ ಮತ್ತು ಜನರ ಭಾಗವಹಿಸುವಿಕೆಯ ಇಂತದ್ದೇ ಒಂದು ಸ್ಪೂರ್ತಿದಾಯಕ ಚಿತ್ರಣ ನೋಡೋಕೆ ಸಿಕ್ತು. ಕಷ್ಟದ ಹಾದಿಗಳಲ್ಲಿ ಸಾವಿರಾರು ಸ್ವಚ್ಛತಾ ಸಿಬ್ಬಂದಿ ಹಗಲು-ರಾತ್ರಿ ಸೇವೆಯಲ್ಲಿ ತೊಡಗಿಸಿಕೊಂಡಿದ್ರು. ಈ ವರ್ಷ ಯಾತ್ರೆ ಸಮಯದಲ್ಲಿ, 400 ಮೆಟ್ರಿಕ್ ಟನ್‌ಗೂ ಹೆಚ್ಚು ಕಸವನ್ನು ಸಂಗ್ರಹಿಸಿ ಸಂಸ್ಕರಣೆ ಮಾಡಲಾಗಿದೆ. ನನಗೆ ಈ ಪ್ರಯತ್ನದಲ್ಲಿ ಒಂದು ವಿಷಯ ತುಂಬಾ ಇಷ್ಟ ಆಯ್ತು. ಸ್ವಚ್ಛತೆಯ ಈ ಅಭಿಯಾನದಲ್ಲಿ ಭಕ್ತರೂ ಕೂಡ ಪಾಲುದಾರರಾದ್ರು. 16 ಸಾವಿರಕ್ಕೂ ಹೆಚ್ಚು ಯಾತ್ರಿಕರು ಸ್ವಚ್ಛತೆಯ ಸಂಕಲ್ಪ ಕೈಗೊಂಡರು. 10 ಸಾವಿರಕ್ಕೂ ಹೆಚ್ಚು ಯಾತ್ರಿಕರಿಗೆ ‘ಜವಾಬ್ದಾರಿಯುತ ಯಾತ್ರಿ’ ಪ್ರಮಾಣಪತ್ರ ಕೂಡ ನೀಡಲಾಯಿತು. ಇಲ್ಲಿ ಒಂದು ವಿಶಿಷ್ಟ ಪ್ರಯೋಗ ಕೂಡ ನಡೆಯಿತು. ಯಾತ್ರೆಯಲ್ಲಿ ಕುದುರೆ ಮತ್ತು ಕತ್ತೆಗಳ ಸಗಣಿಯನ್ನು ಜೈವಿಕ ಅನಿಲವಾಗಿ ಬದಲಾಯಿಸಿ, ಆ ಶುದ್ಧ ಇಂಧನದಿಂದಲೇ ‘ಸ್ವಚ್ಛ ಜ್ಯೋತಿ’ ಬೆಳಗಿಸಲಾಯ್ತು! ಅಂದ್ರೆ ಬಾಬಾ ಬರ್ಫಾನಿಯ ಈ ಪವಿತ್ರ ಯಾತ್ರೆಯಲ್ಲಿ, ಸ್ವಚ್ಛತೆಯೂ ಸೇವೆ ಮತ್ತು ಭಕ್ತಿಯ ಒಂದು ರೂಪವಾಗಿ ಬದಲಾಯ್ತು.

ಸ್ನೇಹಿತರೇ,

ನಮ್ಮ ಹಳ್ಳಿಗಳಿರಲಿ ಅಥವಾ ನಗರಗಳಿರಲಿ, ನಮ್ಮ ನದಿಗಳಿರಲಿ ಅಥವಾ ತೀರ್ಥಕ್ಷೇತ್ರಗಳಿರಲಿ – ಇವುಗಳ ಗುರುತು ನಮ್ಮ ನಡವಳಿಕೆಯಿಂದಲೂ ಸೃಷ್ಟಿಯಾಗುತ್ತದೆ. ಮತ್ತು ಸ್ವಚ್ಛತೆ ಅನ್ನೋದು, ಈ ನಡವಳಿಕೆಯಲ್ಲಿ ಸೇರಿಕೊಂಡಾಗ, ಆ ಜಾಗದ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಕೆಲವೊಮ್ಮೆ ನಮ್ಮ ಒಂದು ಸಣ್ಣ ಹವ್ಯಾಸ, ಜೀವನದಲ್ಲಿ ದೊಡ್ಡ ಅವಕಾಶದ ಹಾದಿಯನ್ನು ತೆರೆದುಬಿಡುತ್ತೆ. ನಾಗಾಲ್ಯಾಂಡ್‌ನ ಫೆಕ್ (Phek) ಜಿಲ್ಲೆಯ ವೇಸಾಲು ಪುರೊ ಅವರ ಜೀವನ ಪಯಣವೂ ಹೀಗೆಯೇ ಆಗಿದೆ. ವೇಸಾಲು ರೈತ ಕುಟುಂಬದಲ್ಲಿ ಬೆಳೆದವರು. ಚಿಕ್ಕಂದಿನಿಂದ ತಮ್ಮ ಅಪ್ಪ-ಅಮ್ಮ ಕೃಷಿ ಮಾಡೋದನ್ನು ನೋಡಿದ್ರು ಮತ್ತು ಅವರಿಗೆ ಸ್ವತಃ ಹೂಗಳೆಂದರೆ ಬಹಳ ಪ್ರೀತಿ. 2021 ರಲ್ಲಿ ಅವರು ಇದೇ ಹವ್ಯಾಸದ ಜೊತೆ ಸಣ್ಣ ಮಟ್ಟದಲ್ಲಿ ಹೂವು ಬೆಳೆಯೋಕೆ ಶುರು ಮಾಡಿದ್ರು. ನಿಧಾನವಾಗಿ ಅವರಿಗೆ ಇದರಲ್ಲಿ ಒಂದು ದೊಡ್ಡ ಅವಕಾಶ ಕಾಣಿಸೋಕೆ ಶುರುವಾಯ್ತು. ಮದುವೆ-ಮುಂಜಿಯೇ ಇರಲಿ ಅಥವಾ ಬೇರೆ ಹಬ್ಬಗಳೇ ಇರಲಿ, ಹೂಗಳಿಗೆ ಬೇಡಿಕೆ ಇದ್ದೇ ಇರುತ್ತೆ ಅನ್ನೋದನ್ನು ಅವರು ಗಮನಿಸಿದ್ರು. ವೇಸಾಲು ತಮ್ಮ ಈ ಹವ್ಯಾಸವನ್ನು ಮುಂದೆ ಕೊಂಡೊಯ್ಯೋಕೆ ನಿರ್ಧರಿಸಿದ್ರು. ಈ ಪಯಣದಲ್ಲಿ ಅವರಿಗೆ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದಿಂದ ಹೂಗಳ ವೈಜ್ಞಾನಿಕ ಬೇಸಾಯದ ತರಬೇತಿ ಸಿಕ್ತು. ಆಮೇಲೆ ಅವರು ಬರೀ ಕಾಲು ಎಕರೆ ಜಮೀನಿನಲ್ಲಿ ಸಾವಿರಾರು ಗ್ಲಾಡಿಯೋಲಸ್ ಹೂವಿನ ಗಿಡಗಳನ್ನು ನೆಟ್ಟರು. ಮೊದಲ ಪ್ರಯತ್ನದಲ್ಲೇ 5 ಸಾವಿರಕ್ಕೂ ಹೆಚ್ಚು ಹೂಗಳು ಅರಳಿದ್ವು! ಸ್ನೇಹಿತರೇ, ಈ ಯಶಸ್ಸು ವೇಸಾಲು ಅವರಿಗೆ ಹೊಸ ಆರಂಭವಾಯ್ತು. ಅವರು ಹೂವಿನ ಕೃಷಿಯನ್ನು ಇನ್ನೂ ಮುಂದೆ ಕೊಂಡೊಯ್ದರು. ಯಾವ ಹೂಗಳು ಒಂದು ಕಾಲದಲ್ಲಿ ಬರೀ ಸ್ಥಳೀಯ ಮಾರುಕಟ್ಟೆಯಲ್ಲೇ ಉಳಿದುಬಿಡ್ತಿದ್ವೋ, ಇವತ್ತು ಅವು ನಾಗಾಲ್ಯಾಂಡ್‌ನಿಂದ ಹೊರಟು ದೆಹಲಿ ಮತ್ತು ಮುಂಬೈ ತರಹದ ನಗರಗಳಿಗೆ ತಲುಪುತ್ತಿವೆ! ವೇಸಾಲು ಪುರೊ ಅವರ ಈ ಪಯಣ ನಮಗೆ ಏನು ಹೇಳುತ್ತೆ ಅಂದ್ರೆ – ಹವ್ಯಾಸಕ್ಕೆ ಕಠಿಣ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನ ಸಿಕ್ಕಾಗ, ಅದು ಹೊಸ ಹೊಸ ಅವಕಾಶಗಳ ಹಾದಿಯನ್ನೇ ತೆರೆಯಬಲ್ಲದು!

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ಸುತ್ತಮುತ್ತ ಇಂತಹ ಎಷ್ಟೋ ಜನರಿದ್ದಾರೆ, ಅವರು ಒಂದು ಸಣ್ಣ ಪ್ರಯತ್ನದಿಂದ ಕೆಲಸ ಶುರು ಮಾಡ್ತಾರೆ ಮತ್ತು ನೋಡ್ನೋಡ್ತಾ ಇದ್ದಂತೆ ಅವರ ಆ ಪ್ರಯತ್ನವೇ ಎಷ್ಟೋ ಜನರ ಜೀವನದಲ್ಲಿ ದೊಡ್ಡ ಬದಲಾವಣೆಯ ಹಾದಿಯನ್ನೇ ನಿರ್ಮಿಸಿಬಿಡುತ್ತೆ! ಒಡಿಶಾದ ದೇವ್‌ರೀಗಢದಲ್ಲಿ ‘ಧೋಡ್ರೋಕುಸುಮ್’ ಅನ್ನೋ ಒಂದು ಹಳ್ಳಿ ಇದೆ. ಕೆಲವು ವರ್ಷಗಳ ಹಿಂದಿನವರೆಗೂ ಈ ಹಳ್ಳಿಯ ಮೈಥಿಲಿ ಭುಯೇ ಅನ್ನೋವರು ಹತ್ತತ್ರ ಪ್ರತಿದಿನ ಕಾಡಿಗೆ ಹೋಗ್ತಿದ್ರು – ಕೆಲವೊಮ್ಮೆ ಸೌದೆ ತರೋಕೆ, ಕೆಲವೊಮ್ಮೆ ಮಹೂವಾ ಹೂಗಳು ಮತ್ತು ಕೇಂದೂ ಎಲೆಗಳನ್ನು ಆರಿಸೋಕೆ, ಇನ್ನು ಕೆಲವೊಮ್ಮೆ ಬಿದಿರಿನ ಚಿಗುರು ಹಾಗೂ ಕಾಡಿನ ಇತರ ಪದಾರ್ಥಗಳನ್ನು ತರೋಕೆ. ಅವರ ಮತ್ತು ಅಲ್ಲಿದ್ದ ಎಷ್ಟೋ ಕುಟುಂಬಗಳ ಅಗತ್ಯಗಳು ಇದೇ ಕಾಡಿನಿಂದ ಪೂರೈಸಲ್ಪಡುತ್ತಿದ್ದವು. ಆದ್ರೆ ನಂತರ ಮೈಥಿಲಿ ಜೀ ದೇವ್‌ರೀಗಢದ ಪರಿಸರ ಪ್ರವಾಸೋದ್ಯಮದ ಜೊತೆ ಸೇರಿಕೊಂಡ್ರು. ಇಲ್ಲಿಂದ ಕಾಡಿನ ಜೊತೆಗಿದ್ದ ಅವರ ಸಂಬಂಧವೇ ಒಂದು ಹೊಸ ದಿಕ್ಕಿಗೆ ಬದಲಾಯ್ತು! ಈಗ ಕಾಡನ್ನು ರಕ್ಷಿಸೋದೇ ಅವರ ಜೀವನೋಪಾಯಕ್ಕೆ ಒಂದು ದಾರಿಯಾಯ್ತು. ಸ್ನೇಹಿತರೇ, ಮೈಥಿಲಿ ಜೀ ಅವರ ಜೀವನದಲ್ಲಿ ಬಂದ ಈ ಬದಲಾವಣೆ ಬೇರೆ ಮಹಿಳೆಯರಿಗೂ ದೊಡ್ಡ ಪ್ರೇರಣೆ ತಂದಿದೆ. ಇವತ್ತು 60 ಕ್ಕೂ ಹೆಚ್ಚು ಮಹಿಳೆಯರು ಕಾಡಿನ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಕಾಡುಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ, ಕೆಲವರು ಹುಲ್ಲುಗಾವಲುಗಳ ಅಭಿವೃದ್ಧಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಇನ್ನು ಕೆಲವರು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ತಮ್ಮ ಕೊಡುಗೆ ನೀಡ್ತಿದ್ದಾರೆ. ಸ್ನೇಹಿತರೇ, ಮೈಥಿಲಿ ಜೀ ಮತ್ತು ದೇವ್‌ರೀಗಢದ ಈ ಸಹೋದರಿಯರು ಪ್ರಕೃತಿಯನ್ನು ರಕ್ಷಿಸಲೂಬಹುದು, ಜೊತೆಗೆ ಜೀವನದಲ್ಲಿ ಸಮೃದ್ಧಿಯನ್ನೂ ತರಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಈ ಎಲ್ಲಾ ಸಹೋದರಿಯರ ಪ್ರಯತ್ನ ನಮ್ಮೆಲ್ಲರಿಗೂ ತುಂಬಾ ದೊಡ್ಡ ಪ್ರೇರಣೆಯಾಗಿದೆ!

ಸ್ನೇಹಿತರೇ,

ಇವತ್ತು ನಮ್ಮ ಹೆಣ್ಣುಮಕ್ಕಳ ಕನಸಿನ ಹಾರಾಟ, ನೆಲದಿಂದ ಹೊರಟು ಬಾಹ್ಯಾಕಾಶದವರೆಗೂ ತಲುಪ್ತಿದೆ! ಮತ್ತು ಇಂತಹ ಕನಸು ಕಾಣೋ ಪ್ರಪಂಚದ ಸಾವಿರಾರು ಹೆಣ್ಣುಮಕ್ಕಳನ್ನು ಭಾರತ ಒಂದೇ ವೇದಿಕೆಯಲ್ಲಿ ಜೋಡಿಸ್ತಿದೆ ಅನ್ನೋದನ್ನು ತಿಳಿದರೆ, ನಿಮಗೆ ಖಂಡಿತ ಹೆಮ್ಮೆ ಆಗುತ್ತೆ! ಈ ಪ್ರಯತ್ನದ ಹೆಸರು ‘ಮಿಷನ್ ಶಕ್ತಿಸ್ಯಾಟ್’ (Mission ShaktiSAT). ಇದರ ಮೂಲಕ 108 ದೇಶಗಳ 12 ಸಾವಿರ ವಿದ್ಯಾರ್ಥಿನಿಯರಿಗೆ ಉಪಗ್ರಹ ತಂತ್ರಜ್ಞಾನ ಕಲಿಯೋಕೆ ಮತ್ತು ನಾವೀನ್ಯತೆ ರಂಗದಲ್ಲಿ ಮುಂದೆ ಬರೋಕೆ ಅವಕಾಶ ಸಿಗ್ತಿದೆ. ಆಗಸ್ಟ್ 23 ರಂದು, ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ದ ಸಂದರ್ಭದಲ್ಲಿ ಈ ಮಿಷನ್‌ನ ಒಂದು ಸುಂದರ ಚಿತ್ರಣ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನೋಡೋಕೆ ಸಿಕ್ತು. ಗೌತಮಬುದ್ಧ ವಿಶ್ವವಿದ್ಯಾಲಯದಲ್ಲಿ ‘ಮಿಷನ್ ಶಕ್ತಿಸ್ಯಾಟ್’ ನ ಎರಡನೇ ಹಂತಕ್ಕೆ ಚಾಲನೆ ಸಿಕ್ತು. ಈ ಸಂದರ್ಭದಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳಿಂದ ಹಾಗೂ ಭಾರತದಿಂದ ಬಂದಿದ್ದ ಸುಮಾರು 100 ವಿದ್ಯಾರ್ಥಿನಿಯರು ಒಂದೇ ಕಡೆ ಒಟ್ಟುಗೂಡಿದರು. ಭಾರತದ ಮೂಲ ಮೂಲೆಗಳಿಂದ ಆಯ್ಕೆಯಾದ ವಿದ್ಯಾರ್ಥಿನಿಯರೂ ಇದರಲ್ಲಿ ಭಾಗವಹಿಸಿದರು. ಈ ಇಡೀ ಪ್ರಯತ್ನದ ಗುರಿ ಕೂಡ ತುಂಬಾ ವಿಶೇಷವಾಗಿದೆ. ಸಂಪೂರ್ಣವಾಗಿ ವಿದ್ಯಾರ್ಥಿನಿಯರೇ ಸೇರಿ ಸಿದ್ಧಪಡಿಸೋ ಒಂದು ಉಪಗ್ರಹವನ್ನು, ಚಂದ್ರನ ಕಕ್ಷೆಗೆ ಕಳುಹಿಸಲು ಸಿದ್ಧತೆಗಳು ನಡೆಯುತ್ತಿವೆ! ಸ್ನೇಹಿತರೇ, ಮುಂಬರೋ ದಿನಗಳಲ್ಲಿ ಇವರಲ್ಲಿ ಎಷ್ಟೋ ವಿದ್ಯಾರ್ಥಿನಿಯರು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ರಂಗದಲ್ಲಿ ತಮ್ಮದೇ ಆದ ಹೊಸ ಛಾಪನ್ನು ಮೂಡಿಸಲಿದ್ದಾರೆ ಎಂಬ ದೃಢ ನಂಬಿಕೆ ನನಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇತ್ತೀಚೆಗೆ ‘ಅವಕಾಡೋ’ ಹಣ್ಣಿನ ಹವಾ ತುಂಬಾ ಜೋರಾಗಿದೆ! ಈ ಹಣ್ಣನ್ನು ಮುಂಚೆ ಯಾರೂ ಅಷ್ಟಾಗಿ ಬಲ್ಲವರೇ ಇರಲಿಲ್ಲ. ಇದರ ಮೌಲ್ಯ ಮತ್ತೆ ಬೇಡಿಕೆ ಎರಡೂ ಕಡಿಮೆಯಿತ್ತು, ಆದ್ರೆ ಇವತ್ತು ಇದು ಊಟದ ಮೇಜಿನ ಮೇಲೆ ಹೆಚ್ಚಾಗಿ ಕಾಣ ಸಿಗುತ್ತಿದೆ! ಇವತ್ತು ಇದು ಆರೋಗ್ಯದ ಬಗ್ಗೆ  ಕಾಳಜಿ ಉಳ್ಳವರಿಗೆ ಮತ್ತು ದುಬಾರಿ ಮಾರುಕಟ್ಟೆಗೆ, ಮೊದಲ ಆಯ್ಕೆಯಾಗಿದೆ. ನಮ್ಮ ರೈತ ಸಹೋದರ-ಸಹೋದರಿಯರಿಗೂ ಇದು ತುಂಬಾ ನೆರವಾಗುತ್ತಿದೆ. ಆಂಧ್ರಪ್ರದೇಶದ ಕಡಪಾದ, ವರದರಾಜು ಅವರೇ ಇದಕ್ಕೆ ಉದಾಹರಣೆ. ಅವರು ಎಷ್ಟೋ ವರ್ಷಗಳಿಂದ ತಮ್ಮ ಹೊಲದಲ್ಲಿ ಟೊಮೆಟೊ ಮತ್ತೆ ಬಾಳೆಹಣ್ಣು ಬೆಳೆಯುತ್ತಿದ್ದರು. ಒಂದು ದಿನ ಅವರು ತಮ್ಮ ಗೆಳೆಯರ ತೋಟದಲ್ಲಿ ಅವಕಾಡೋ ಬೆಳೆದಿದ್ದನ್ನು ನೋಡಿದ್ರು. ಅದಾದ ಮೇಲೆ ಯೂಟ್ಯೂಬ್ ನಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ರು. ಇಲ್ಲಿಯವರೆಗೆ ಅವರು ಸುಮಾರು 4 ಟನ್ ಅವಕಾಡೋ ಬೆಳೆದಿದ್ದಾರೆ! ಇವತ್ತು ಅವರು ನೇರವಾಗಿ ಸ್ಥಳೀಯ ಅಂಗಡಿಗಳಿಗೆ ಪೂರೈಕೆ ಮಾಡ್ತಿದ್ದಾರೆ. ಹೊಸ ಬೆಳೆ, ವೈಜ್ಞಾನಿಕ ಸಲಹೆ ಮತ್ತೆ ನೇರ ಮಾರುಕಟ್ಟೆಯಿಂದಾಗಿ ಅವರ ಸಣ್ಣ ತೋಟದ ಆದಾಯವೇ ಸಂಪೂರ್ಣ ಬದಲಾಗಿಹೋಗಿದೆ! ತಮಿಳುನಾಡಿನ ಕೊಡೈಕೆನಾಲ್‌ನ ರೈತ ಚಂದ್ರಶೇಖರನ್ ಜೀ ಅರ್ಧ ಹೆಕ್ಟೇರ್ ಜಮೀನಿನಲ್ಲಿ ಅವಕಾಡೋ ಬೆಳೆಯೋಕೆ ಶುರು ಮಾಡಿದ್ರು. ಅವರಿಗೆ ಇದಕ್ಕೆ ಒಳ್ಳೆ ಬೆಲೆ ಸಿಗ್ತಿದೆ, ಆದಾಯಾನೂ ಜಾಸ್ತಿಯಾಗಿದೆ. ಇನ್ನು ಕರ್ನಾಟಕದ ಚಿಕ್ಕಮಗಳೂರಿನ ನಮ್ಮ ಕೆಲವು ರೈತ ಸಹೋದರ-ಸಹೋದರಿಯರಂತೂ ಕಾಫಿ ತೋಟದ ಮಧ್ಯದಲ್ಲೇ ಅವಕಾಡೋ ಗಿಡ ನೆಟ್ಟಿದ್ದಾರೆ! ಇದರಿಂದ ಅವರಿಗೆ ಕಾಫಿ ಮತ್ತೆ ಕಾಳುಮೆಣಸಿನ ಜೊತೆಗೆ ಹೆಚ್ಚುವರಿ ಆದಾಯ ಸಿಗ್ತಿದೆ. ಸ್ನೇಹಿತರೇ, ನಾವು ನಗರಗಳ ಉಪಹಾರ ಗೃಹಗಳಲ್ಲಿ ‘ಅವಕಾಡೋ ಟೋಸ್ಟ್’ ಬಗ್ಗೆ ಆಗಾಗ ಕೇಳ್ತಿರ್ತೀವಿ, ಆದ್ರೆ ಇದೇ ಅವಕಾಡೋ ಮೂಲಕ ನಮ್ಮ ನವೀನ ಆಲೋಚನೆಯ ರೈತರು ಸಂಪಾದನೆಯ ಹೊಸ ಮಾರ್ಗವನ್ನೇ ಕಂಡುಹಿಡಿದುಬಿಟ್ಟಿದ್ದಾರೆ! ಅಂದ್ರೆ ನಮ್ಮ ದೇಶದ ಅವಕಾಡೋದಿಂದ ನಿಮ್ಮ ಟೋಸ್ಟ್ ರುಚಿಯೂ ಹೆಚ್ಚಾಯ್ತು, ಇತ್ತ ರೈತರ ಆದಾಯಾನೂ ಜಾಸ್ತಿಯಾಯ್ತು!

ನನ್ನ ಪ್ರೀತಿಯ ದೇಶವಾಸಿಗಳೇ,

ಇನ್ನು ಕೆಲವೇ ದಿನಗಳಲ್ಲಿ, ಅಂದರೆ ಸೆಪ್ಟೆಂಬರ್ 3 ರಂದು ನಾವು ಮಹಾನಾಯಕ ಉತ್ತಮ್ ಕುಮಾರ್ ಅವರ ಜಯಂತಿಯ ಶತಮಾನೋತ್ಸವವನ್ನು ಆಚರಿಸಲಿದ್ದೇವೆ. ಸ್ನೇಹಿತರೇ, ಉತ್ತಮ್ ಕುಮಾರ್ ಜೀ ಅವರು ತಮ್ಮ ಅಭಿನಯದಿಂದ ಜನರ ಹೃದಯ ಗೆದ್ದ ಒಬ್ಬ ವೈವಿಧ್ಯಮಯ ನಟರಾಗಿದ್ದರು. ಚಲನಚಿತ್ರ ಪ್ರೇಮಿಗಳ ನಂಬಿಕೆಯೇನೆಂದರೆ, ಶ್ರೀಮಾನ್ ಸತ್ಯಜಿತ್ ರೇ ಅವರು ತಮ್ಮ ‘ನಾಯಕ್ – ದ ಹೀರೋ’ ಸಿನಿಮಾದ ಇಡೀ ಕಥೆಯನ್ನು ಮಹಾನಾಯಕ ಉತ್ತಮ್ ಕುಮಾರ್ ಜೀ ಅವರನ್ನು ಮನಸ್ಸಿನಲ್ಲಿಟ್ಟುಕೊಂಡೇ ಬರೆದಿದ್ದರು. ಉತ್ತಮ್ ಕುಮಾರ್ ಅವರಲ್ಲಿ ಒಂದು ಘನತೆಯ ಜೊತೆಗೆ ಅದ್ಭುತವಾದ ಭಾವನಾತ್ಮಕ ಆಳ ಇತ್ತು ಎಂದು ಶ್ರೀಮಾನ್ ಸತ್ಯಜಿತ್ ರೇ ಅವರು ಹೇಳುತ್ತಿದ್ದರು. ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಲು ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಉತ್ತಮ್ ಕುಮಾರ್ ಜೀ ತಮ್ಮ ಸಹಜ ಅಭಿನಯದ ಜೊತೆಗೆ ಪರೋಪಕಾರಿ ಕೆಲಸಗಳಿಗೂ ಹೆಸರಾಗಿದ್ದರು. ಅವರ ಜೀವನದಿಂದ ಎಂದಿಗೂ ಸೋಲೊಪ್ಪಿಕೊಳ್ಳಬಾರದು ಎನ್ನುವ ಇನ್ನೊಂದು ದೊಡ್ಡ ಪಾಠ ನಮಗೆ ಸಿಗುತ್ತದೆ. ಅವರ ಆರಂಭಿಕ ಸಿನಿಮಾಗಳು ಅಷ್ಟಾಗಿ ಜನಪ್ರಿಯವಾಗಲಿಲ್ಲ, ಆದರೆ ಅವರು ತಮ್ಮ ಕೆಲಸದ ಮೇಲೆ ಗಮನವನ್ನು ಕಳೆದುಕೊಳ್ಳಲಿಲ್ಲ. ಇದರ ಫಲವಾಗಿಯೇ ಅವರು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಸ್ನೇಹಿತರೇ, ನನಗೆ ನೆನಪಿದೆ, ನಾನು ಕೋಲ್ಕತ್ತಾದಲ್ಲಿ ರೋಡ್ ಶೋ ಮಾಡುತ್ತಿದ್ದಾಗ ಉತ್ತಮ್ ಕುಮಾರ್ ಜೀ ಅವರ ಮನೆಯ ಮುಂಭಾಗದಿಂದ ಹಾದುಹೋಗಿದ್ದೆ. ಅಲ್ಲಿ ಒಬ್ಬ ವ್ಯಕ್ತಿ ನನಗೆ ಅವರ ಒಂದು ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. ನಾನು ಮತ್ತೊಮ್ಮೆ ಮಹಾನಾಯಕ ಉತ್ತಮ್ ಕುಮಾರ್ ಜೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರು ಸದಾ ನಮ್ಮೆಲ್ಲರ ಹೃದಯಗಳಲ್ಲಿ ನೆಲೆಸಿರುತ್ತಾರೆ.

“ಮಹಾನಾಯಕ ಉತ್ತಮ್ ಕುಮಾರ್ ಚಿರೋದಿನ್ ಮಾನುಷೇರ್ ಹೃದಯೇ ರಾಜ್ ಕೊರ್ಬೇನ್” (ಮಹಾನಾಯಕ ಉತ್ತಮ್ ಕುಮಾರ್ ಅವರು ಸದಾ ಜನರ ಹೃದಯದಲ್ಲಿ ರಾರಾಜಿಸುತ್ತಾರೆ).

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ಹಬ್ಬ ಹರಿದಿನಗಳು, ನಮ್ಮ ಸಂಪ್ರದಾಯಗಳ ಜೊತೆಗೆ, ನಾವೆಲ್ಲರೂ ಪರಸ್ಪರ ಒಂದಾಗಲು ಒಂದು ಒಳ್ಳೆ ಅವಕಾಶವನ್ನು ನೀಡುತ್ತವೆ. ಮುಂಬರುವ ದಿನಗಳಲ್ಲಿ ನಾವು ಇನ್ನೂ ಹಲವು ಪ್ರಮುಖ ಹಬ್ಬಗಳನ್ನು ಆಚರಿಸಲಿದ್ದೇವೆ. ಸೆಪ್ಟೆಂಬರ್ 4 ರಂದು ಜನ್ಮಾಷ್ಟಮಿಯ ಪವಿತ್ರ ಹಬ್ಬವಿದೆ. ಸೆಪ್ಟೆಂಬರ್‌ನಲ್ಲೇ ನಾವು ವಿಶ್ವಕರ್ಮ ಪೂಜೆಯನ್ನೂ ಆಚರಿಸಲಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಕಸುಬುದಾರರು, ಶಿಲ್ಪಿಗಳು ಮತ್ತು ವಿಶ್ವಕರ್ಮ ಮಿತ್ರರನ್ನು ಸನ್ಮಾನಿಸಬೇಕು. ಇನ್ನು ಕೆಲವು ತಿಂಗಳುಗಳಲ್ಲಿ ದೀಪಾವಳಿಯೂ ಬರಲಿದೆ, ಅದರ ತಯಾರಿಗಳು ಕೂಡ ನಿಧಾನವಾಗಿ ಶುರುವಾಗುತ್ತಿವೆ. ಹಬ್ಬಗಳ ಈ ಸಾಲಿನಲ್ಲಿ, ನಾನು ಮತ್ತೊಮ್ಮೆ ನಿಮ್ಮಲ್ಲಿ ‘ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ’ (Vocal for Local) ನೀಡಿ ಎಂದು ವಿನಂತಿಸಿಕೊಳ್ಳುತ್ತೇನೆ. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದು ಎಂದರೆ ಬರೀ ಮಣ್ಣಿನ ಹಣತೆಗಳನ್ನು ಕೊಳ್ಳುವುದು ಮಾತ್ರವಲ್ಲ, ಇದರ ಕಲ್ಪನೆ ತುಂಬಾ ದೊಡ್ಡದಿದೆ! ನಾವು ನಮ್ಮ ಮನೆಗಾಗಿ ಯಾವುದೇ ವಸ್ತುವನ್ನು ಕೊಂಡುಕೊಂಡರೂ, ಅದು ಭಾರತದಲ್ಲೇ ತಯಾರಾಗಿದೆಯೇ ಎಂದು ಒಮ್ಮೆ ಖಂಡಿತ ಪರಿಶೀಲಿಸಿ. ಭಾರತವು ಸ್ವಾವಲಂಬಿಯಾಗುವ ಹಾದಿ, ಭಾರತದಲ್ಲೇ ತಯಾರಾದ ವಸ್ತುಗಳ ಮೇಲೆ ನಾವು ಹೆಮ್ಮೆ ಪಡುವುದರಿಂದ ಮಾತ್ರ ಸಾಧ್ಯವಾಗುತ್ತದೆ. ಈ ಸಂದೇಶವನ್ನು ಆದಷ್ಟು ಹೆಚ್ಚು ಜನರಿಗೆ ತಲುಪಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಸೃಜನಶೀಲ ಜಗತ್ತಿನ ಮಿತ್ರರು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಗಣ್ಯರಿಗೂ ಇದರಲ್ಲಿ ತುಂಬಾ ದೊಡ್ಡ ಪಾತ್ರವಿದೆ. ನೀವೂ ಸ್ವತಃ ಸ್ಥಳೀಯ ಉತ್ಪನ್ನಗಳನ್ನು ಅಳವಡಿಸಿಕೊಳ್ಳಿ ಮತ್ತು ಬೇರೆಯವರಿಗೂ ಇದಕ್ಕಾಗಿ ಪ್ರೇರೇಪಿಸಿ ಎಂದು ನಾನು ವಿನಂತಿಸಿಕೊಳ್ಳುತ್ತೇನೆ.

ಸ್ನೇಹಿತರೇ,

ನಿಮ್ಮ ಸುತ್ತಮುತ್ತಲೂ ಇಂತಹ ಎಷ್ಟೋ ಜನರು ಇರಬಹುದು, ಅವರು ತಮ್ಮ ಸಣ್ಣ ಸಣ್ಣ ಪ್ರಯತ್ನಗಳಿಂದ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತಿದ್ದಾರೆ. ಅವರ ಬಗ್ಗೆ ‘ಮನ್ ಕಿ ಬಾತ್’ ಗಾಗಿ ಖಂಡಿತವಾಗಿ ಬರೆದು ಕಳುಹಿಸಿ. ನೀವು ಹಂಚಿಕೊಳ್ಳುವ ಅನುಭವ, ದೇಶದ ಯಾವುದೋ ಒಂದು ಮೂಲೆಯಲ್ಲಿ ಇನ್ಯಾರಿಗೋ ಹೊಸ ಪ್ರೇರಣೆಯಾಗಬಹುದು. ನಿಮ್ಮ ಸಲಹೆಗಳು ಮತ್ತು ಅನುಭವಗಳಿಗಾಗಿ ನಾನು ಎದುರು ನೋಡುತ್ತಿರುತ್ತೇನೆ.

ಅನಂತ ಅನಂತ ಧನ್ಯವಾದಗಳು. 

 

*****