ಪಿಎಂಇಂಡಿಯಾ
ಗೌರವಾರ್ಹ ಪ್ರಧಾನಿ ಶಿಂಜೋ ಅಬೆ ಅವರೇ, ಗೌರವಾನ್ವಿತ ಅತಿಥಿಗಳೇ, ಮಾನ್ಯರೇ ಮತ್ತು ಮಹಿಳೆಯರೇ,
ಕೊನ್ಬನ್ ವಾ!
ಪ್ರಧಾನಿಯಾಗಿ ಜಪಾನಿಗೆ ಎರಡನೇ ಬಾರಿ ಭೇಟಿ ನೀಡುವ ಅವಕಾಶ ಸಿಕ್ಕಿರುವುದು ನನಗೆ ಲಭ್ಯವಾದ ಗೌರವ ಎಂದು ನಾನು ಭಾವಿಸಿದ್ದೇನೆ. ಜಪಾನೀಯರ ಸಮರ್ಪಣಾ ಮನೋಭಾವ ಮತ್ತು ಚಲನಶೀಲತೆ; ಚೈತನ್ಯ ಮತ್ತು ಸತ್ತ್ವ; ಮತ್ತು ಸಾಧನೆಗಳನ್ನು ಭಾರತೀಯರು ಹಿಂದಿನಿಂದಲೂ ಶ್ಲಾಘಿಸಿದ್ದಾರೆ. ಜಪಾನ್ ಅನುಭವಗಳಿಂದ ನಾವು ಕಲಿಯಬೇಕಾದ್ದು ಮತ್ತು ತಿಳಿದುಕೊಳ್ಳಬೇಕಾದ್ದು ಸಾಕಷ್ಟಿದೆ. ಭಾರತ ಮತ್ತು ಜಪಾನ್ ದೀರ್ಘ ಕಾಲದಿಂದ ಹತ್ತಿರದ ಹಾಗೂ ಸ್ನೇಹಪರ ಸಂಬಂಧವನ್ನು ಹೊಂದಿವೆ. ಹಿಂದು ಹಾಗೂ ಬೌದ್ಧ ಧರ್ಮದ ಚಿಂತನೆಗಳ ಆಧಾರದಲ್ಲಿ ಎರಡೂ ಸಮಾಜಗಳು ಗಾಢವಾದ ಸಂಪರ್ಕವನ್ನು ಹೊಂದಿವೆ. ಆರ್ಥಿಕ ಬೆಳವಣಿಗೆ ಮತ್ತು ನಮ್ಮ ನಾಗರಿ ಕತೆಯ ವಿಶಿಷ್ಟ ಲಕ್ಷಣಗಳ ಸಂರಕ್ಷಣೆ ನಡುವೆ ಸಮತೋಲವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಎರಡು ದೇಶಗಳೂ ಮನ್ನಿಸಿವೆ.
ಸಾಮಾನ್ಯ ಮೌಲ್ಯಗಳಾದ ಮುಕ್ತತೆ, ಪ್ರಜಾಪ್ರಭುತ್ವ ಮತ್ತು ಕಾನೂನಿಗೆ ಗೌರವ ನೀಡುವಿಕೆಯಂತಹ ಸಾಮಾನ್ಯ ಮೌಲ್ಯಗಳಿಂದ ನಮ್ಮಗಳ ಸಂಬಂಧ ದೃಢಗೊಂಡಿದೆ. ಎರಡು ದೇಶಗಳ ನಡುವಿನ ಆಯಕಟ್ಟಿನ ಮತ್ತು ಜಾಗತಿಕ ಸಹಭಾಗಿತ್ವವು ಆರ್ಥಿಕ ಮತ್ತು ಆಯಕಟ್ಟಿನ ವಿಷಯಗಳಲ್ಲಿನ ಒಮ್ಮುಖತೆಯ ಹೆಚ್ಚಳದ ಗುರುತಾಗಿದೆ.
ನಮ್ಮ ಸಮಾಜಗಳ ಒಳಿತು ಮಾತ್ರವಲ್ಲದೆ, ಇಡೀ ಪ್ರಾಂತ್ಯ ಮತ್ತು ಜಾಗತಿಕ ಒಳಿತಿಗಾಗಿ, ನಾವು ಒಟ್ಟಾಗಿ ಮಾಡಬೇಕಾದ್ದು ಸಾಕಷ್ಟು ಇದೆ. ಪ್ರಾಂತ್ಯದಲ್ಲಿನ ಉತ್ತಮ ನೆರೆಹೊರೆ ಮತ್ತು ಸಂವಾದದ ಸದ್ಗುಣವನ್ನು ನಮ್ಮ ಸಹಭಾಗಿತ್ವವು ಉತ್ತೇಜಿಸುತ್ತದೆ.
ಪ್ರಸ್ತುತ ಸಮಯದ ಸವಾಲುಗಳು ಹಾಗೂ ಅವಕಾಶಗಳನ್ನು ಎದುರಿಸಲು, ನಮ್ಮ ಸಾಮಥ್ರ್ಯವನ್ನು ಒಗ್ಗೂಡಿಸಿ ಪ್ರತಿಕ್ರಿಯಿಸಬಹುದಾಗಿದೆ. ಮತ್ತು, ಜಾಗತಿಕ ಸಮುದಾಯದ ಜೊತೆಗೂಡಿ ನಾವು ಹೆಚ್ಚುತ್ತಿರುವ ತೀವ್ರಗಾಮಿತನ, ಭಯೋತ್ಪಾದಕತೆ ಹಾಗೂ ಉಗ್ರವಾದದ ಅಪಾಯವನ್ನು ಎದುರಿಸಬಹುದಾಗಿದೆ.
ಸ್ನೇಹಿತರೇ,
ಭಾರತದ ಆರ್ಥಿಕ ಪ್ರಗತಿ, ಮೂಲಸೌಲಭ್ಯ ಅಭಿವೃದ್ಧಿ, ಸಾಮಥ್ರ್ಯ ನಿರ್ಮಾಣ ಮತ್ತು ತಾಂತ್ರಿಕ ಮುನ್ನಡೆಯಲ್ಲಿ ಜಪಾನ್ ಯಾವಾಗಲೂ ಮೌಲ್ಯಯುತ ಸಹಭಾಗಿಯಾಗಿದೆ. ನಮ್ಮ ಸಹಭಾಗಿತ್ವದ ಪ್ರಮಾಣ ಮತ್ತು ವೈಶಾಲ್ಯವು ಬೇರೆ ಕ್ಷೇತ್ರಗಳಿಗೂ ವಿಸ್ತರಿಸಿದೆ.
ನಮ್ಮ ಆರ್ಥಿಕ ಸಂಪರ್ಕ ದಿನೇದಿನೇ ಪ್ರವರ್ಧಮಾನಗೊಳ್ಳುತ್ತಿದೆ. ವ್ಯಾಪಾರ ಸಂಬಂಧವೂ ಬೆಳೆಯುತ್ತಿದೆ. ಮತ್ತು ಭಾರತದಲ್ಲಿ ಜಪಾನ್ನಿಂದ ಹೂಡಿಕೆ ಹೆಚ್ಚಳಗೊಳ್ಳುತ್ತಿದೆ. ನಮ್ಮ ಪ್ರಮುಖ ಅಭಿವೃದ್ಧಿ ಉಪಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಜಪಾನಿನ ಕಂಪನಿಗಳು ಹೆಚ್ಚು ಲಾಭ ಪಡೆದುಕೊಳ್ಳಬಹುದು. ಪ್ರತಿಯಾಗಿ, ತಂತ್ರಜ್ಞಾನ ಮತ್ತು ಅನ್ವೇಷಣೆ ಕ್ಷೇತ್ರದಲ್ಲಿ ಜಪಾನಿನ ಸರಿಸಾಟಿಯಿಲ್ಲದ ಸಾಧನೆಯಿಂದ ಭಾರತ ಸಾಕಷ್ಟು ಪ್ರಯೋಜನ ಪಡೆದು ಕೊಳ್ಳಬಹುದಾಗಿದೆ.
ಭಾರತದ ರಾಜ್ಯಗಳು ಮತ್ತು ಜಪಾನಿನ ಪ್ರಾಂತ್ಯಗಳ ನಡುವಿನ ಸಂಪರ್ಕ ಮತ್ತು ಸಹಕಾರ ಹೆಚ್ಚಳವು ನಮ್ಮ ನಡುವಿನ ಸಂಬಂಧದಲ್ಲಿನ ಸ್ವಾಗತಾರ್ಹ ಲಕ್ಷಣವಾಗಿದೆ. ನಮ್ಮ ಜಾಗತಿಕ ನೋಟದಲ್ಲಿ ನಾವು ಜಪಾನ್ಗೆ ನೀಡುತ್ತಿರುವ ಪ್ರಾಶಸ್ತ್ಯದ ದ್ಯೋತಕ ಇದು. ನಮ್ಮ ದೇಶವಾಸಿಗಳ ನಡುವಿನ ಪರಸ್ಪರ ಗೌರವ ಮತ್ತು ಸದ್ಭಾವನೆಯ ಚಿಲುಮೆಯು ನಮ್ಮ ನಡುವಿನ ಸಂಬಂಧವನ್ನು ಪೋಷಿಸುತ್ತಿದೆ. ಮತ್ತು, ಇವನ್ನು ಗೌರವಾರ್ಹ ಅಬೆ ಅವರ ಸಮರ್ಥ ನಾಯಕತ್ವವು ಮುನ್ನಡೆಸುತ್ತಿದೆ.
ಇಂದಿನ ನನ್ನ ಭೇಟಿಯು ಕಳೆದ ಎರಡು ವರ್ಷದಲ್ಲಿ ನಮ್ಮ ನಡುವೆ ನಡೆದ ಎಂಟನೆಯ ಭೇಟಿ. ಶೃಂಗಸಭೆಯ ಹಲವು ಫಲಿತಾಂಶವನ್ನು ನಾವು ಸಂಭ್ರಮಿಸುತ್ತಿರುವ ಹೊತ್ತಿನಲ್ಲೇ, ಪ್ರಧಾನಿ ಅಬೆ ಹಾಗೂ ಜಪಾನ್ ಸರಕಾರವು ನನಗೆ ಮತ್ತು ನನ್ನ ತಂಡಕ್ಕೆ ನೀಡಿದ ಹಾರ್ದಿಕ ಸ್ವಾಗತ ಮತ್ತು ನಮಗೆ ಕಲ್ಪಿಸಿದ ಅತ್ಯುತ್ತಮ ಏರ್ಪಾಟುಗಳಿಗಾಗಿ ಅವರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸಲು ಇಚ್ಛಿಸುತ್ತೇನೆ.
ಯಾವುದೇ ಸಂಶಯವಿಲ್ಲದಂತೆ, ನಮ್ಮ ಭವಿಷ್ಯಗಳು ಪರಸ್ಪರ ಹೆಣೆದುಕೊಂಡಿವೆ. ಜಪಾನಿನ ಕರಾವಳಿಯನ್ನು ಸ್ಪರ್ಶಿಸುವ ಇಂಡೋ-ಪೆಸಿಫಿಕ್ ಸಾಗರದ ನೀರು ಭಾರತದ ಕಡಲ ದಂಡೆಗಳನ್ನೂ ಮುಟ್ಟುತ್ತದೆ. ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗಾಗಿ ನಾವು ಒಟ್ಟಾಗಿ ಕೆಲಸ ನಿರ್ವಹಿಸಬೇಕಿದೆ.
ಮಹಿಳೆಯರೇ ಮತ್ತು ಮಾನ್ಯರೇ,
ನಾನೀಗ ಸ್ವಸ್ತಿಪಾನದ ಮೂಲಕ ಹಾರೈಸುತ್ತೇನೆ:
ಜಪಾನ್ನ ಮಹಾರಾಜ ಮತ್ತು ಮಹಾರಾಣಿಯವರ ಉತ್ತಮ ಆರೋಗ್ಯ ಮತ್ತು ವೈಯಕ್ತಿಕ ಒಳಿತಿಗೆ, ಪ್ರಧಾನಿ ಶಿಂಜೋ ಅಬೆ ಅವರಿಗೆ ಯಶಸ್ಸು ಸಿಗಲಿ ಎಂದು, ಜಪಾನಿನ ಸ್ನೇಹಜೀವಿ ಜನತೆ ಮತ್ತು ಇಂದು ರಾತ್ರಿ ಇಲ್ಲಿ ನೆರೆದ ಸಮಸ್ತರಿಗೂ ಒಳಿತಾಗಲಿ.
ಭಾರತ ಮತ್ತು ಜಪಾನ್ ನಡುವಿನ ಸ್ನೇಹ ಶಾಶ್ವತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
ಕಾನ್ಪೈ!