ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, “ಬಿಮ್ಸ್ ಟೆಕ್ ಗ್ರಿಡ್ ಅಂತರ ಸಂಪರ್ಕ ಸ್ಥಾಪನೆಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಮತ್ತು ಸ್ಥಿರೀಕರಣ” ಕುರಿತ ಇಂಧನ ಸಚಿವಾಲಯದ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಇದಕ್ಕೆ ಅತಿ ಶೀಘ್ರದಲ್ಲೇ ನೇಪಾಳದಲ್ಲಿ ನಡೆಯಲಿರುವ 3ನೇ ಬಿಮ್ಸ್ ಟೆಕ್ ಇಂಧನ ಸಚಿವರುಗಳ ಸಭೆಯಲ್ಲಿ ಬಿಮ್ಸ್ ಟೆಕ್ ಸದಸ್ಯ ರಾಷ್ಟ್ರಗಳ ನಡುವೆ ಸಹಿ ಹಾಕಲಾಗುತ್ತದೆ.
ಹಿನ್ನೆಲೆ
ದಿ ಬೇ ಆಫ್ ಬೆಂಗಾಲ್ ಇನಿಷೇಯೇಟಿವ್ ಫಾರ್ ಮಲ್ಟಿ – ಸೆಕ್ಟರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋ ಆಪರೇಷನ್ (ಬಿಮ್ಸ್ ಟೆಕ್) ಒಂದು ಅಂತಾರಾಷ್ಟ್ರೀಯ ಸಂಘಟನೆಯಾಗಿದ್ದು, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ ಲ್ಯಾಂಡ್, ಭೂತಾನ್ ಮತ್ತು ನೇಪಾಳ್ ರಾಷ್ಟ್ರಗಳ ಗುಂಪನ್ನು ಒಳಗೊಂಡಿದೆ. “ಬಿಮ್ಸ್ ಟೆಕ್ ನಲ್ಲಿ ಇಂಧನ ಸಹಕಾರ ಕುರಿತ ಕ್ರಿಯಾ ಯೋಜನೆ”ಯನ್ನು 2005ರ ಅಕ್ಟೋಬರ್ 4ರಂದು ನವ ದೆಹಲಿಯಲ್ಲಿ ನಡೆದ ಬಿಮ್ಸ ಟೆಕ್ ಇಂಧನ ಸಚಿವರುಗಳ ಪ್ರಥಮ ಸಮಾವೇಶದಲ್ಲಿ ರೂಪಿಸಲಾಗಿತ್ತು. ಬಿಮ್ಸ್ ಟೆಕ್ ಟ್ರಾನ್ಸ್ ಪವರ್ ವಿನಿಮಯ ಮತ್ತು ಅಭಿವೃದ್ಧಿ ಯೋಜನೆಯಡಿಯಲ್ಲಿನ ಈ ಯೋಜನೆಯಲ್ಲಿ ಥಾಯ್ ಲ್ಯಾಂಡ್ ನೇತೃತ್ವದಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಪಡೆಯು ಗ್ರಿಡ್ ಅಂತ ಸಂಪರ್ಕ ಕುರಿತಂತೆ ತಿಳಿವಳಿಕೆ ಒಪ್ಪಂದದ ಕರಡು ವರದಿಯನ್ನು ನೀಡಬೇಕು ಎಂದು ನಿರ್ಧರಿಸಲಾಗಿತ್ತು. ಬಿಮ್ಸ್ ಟೆಕ್ ಟ್ರಾನ್ಸ ಪವರ್ ವಿನಿಮಯ ಮತ್ತು ಬಿಮ್ಸ್ ಟೆಕ್ ಗ್ರಿಡ್ ಅಂತರ ಸಮಪರ್ಕ ಸ್ಥಾಪನೆ ತಿಳಿವಳಿಕೆ ಒಪ್ಪಂದದ ಕರಡು ಕುರಿತಂತೆ ಕಾರ್ಯ ಪಡೆಯ ಒಟ್ಟು ಐದು ಸಭೆಗಳು ನಡೆದಿದ್ದು, 2015ರ ಮಾರ್ಚ್ 16ರಂದು ಕಾರ್ಯಪಡೆ ಅದನ್ನು ಆಖೈರುಗೊಳಿಸಿತ್ತು.
2016ರ ಅಕ್ಟೋಬರ್ 16ರಂದು ಗೋವಾದಲ್ಲಿ ನಡೆದ ಬಿಮ್ಸ್ ಟೆಕ್ ನಾಯಕರ ರಿಟ್ರೀಟ್ 2016ರಲ್ಲಿ ನಾಯಕರು ಬಿಮ್ಸ್ ಟೆಕ್ ಗ್ರಿಡ್ ಅಂತರ ಸಂಪರ್ಕ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಿರ್ಧರಿಸಿದ್ದರು. 2017ರ ಜನವರಿ 11-12ರಂದು ನಡೆದ ಇಂಧನ ಕುರಿತ ಬಿಮ್ಸ್ ಟೆಕ್ ಹಿರಿಯ ಅಧಿಕಾರಿಗಳ 4ನೇ ಸಭೆಯ ವೇಳೆ ಈ ಕುರಿತು ಚರ್ಚಿಸಿ ಅಂತಿಮವಾಗಿ ಆಖೈರುಗೊಳಿಸಲಾಯಿತು.
ಪರಿಣಾಮ
ಈ ತಿಳಿವಳಿಕೆ ಒಪ್ಪಂದವು ಬಿಮ್ಸ್ ಟೆಕ್ ವಲಯದಲ್ಲಿ ತರ್ಕಬದ್ಧ ಮತ್ತು ಸೂಕ್ತ ವಿದ್ಯುತ್ ಸರಬರಾಜನ್ನು ಉತ್ತೇಜಿಸುವ ದೃಷ್ಟಿಯೊಂದಿಗೆ ವಿದ್ಯುತ್ ಮಾರಾಟಕ್ಕೆ ಎಲ್ಲ ಪಕ್ಷಕಾರರಿಗೆ ಗ್ರಿಡ್ ಅಂತರ ಸಂಪರ್ಕದ ಅನುಷ್ಠಾನಕ್ಕೆ ಸಹಕರಿಸಲು ವಿಸ್ತೃತವಾದ ಚೌಕಟ್ಟನ್ನು ಒದಗಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಈ ಕೆಳಗಿನ ಅವಕಾಶ ನೀಡುತ್ತದೆ:
i. ವಲಯದಲ್ಲಿನ ಇಂಧನ ಸಂಪನ್ಮೂಲಗಳನ್ನು ಪರಸ್ಪರರ ಲಾಭಕ್ಕಾಗಿ ಯಾವುದೇ ತಾರತಮ್ಯವಿಲ್ಲದ ಆಧಾರದಲ್ಲಿ ಮತ್ತು ಆಯಾ ಪಕ್ಷಕಾರರ ರಾಷ್ಟ್ರದ ಕಾನೂನು, ನಿಯಮ ಮತ್ತು ನಿಯಂತ್ರಣಗಳಿಗೆ ಒಳಪಟ್ಟು ಉತ್ತಮವಾಗಿ ಬಳಕೆ ಮಾಡಲು;
ii. ಪ್ರಾದೇಶಿಕ ವಿದ್ಯುಚ್ಛಕ್ತಿ ಜಾಲಗಳ ಅಭಿವೃದ್ಧಿಯ ಮೂಲಕ ಸಮರ್ಥ ಆರ್ಥಿಕ ಮತ್ತು ವಿದ್ಯುತ್ ವ್ಯವಸ್ಥೆಯ ಸುರಕ್ಷಿತ ಕಾರ್ಯನಿರ್ವಹಣೆ;
iii. ವಲಯದಾದ್ಯಂತ ಉತ್ಪಾದನಾ ಸಾಮರ್ಥ್ಯ ಸೇರ್ಪಡೆಗೆ ಉತ್ತಮವಾಗಿ ಬಂಡವಾಳ ಹೂಡಿಕೆ ಅಗತ್ಯಕ್ಕಾಗಿ; ಮತ್ತು
iv. ಗಡಿಯಾಚೆಗಿನ ಅಂತರ ಸಂಪರ್ಕದ ಮೂಲಕ ವಿದ್ಯುತ್ ವಿನಿಮಯಕ್ಕಾಗಿ