Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ರಷ್ಯಾ ಒಕ್ಕೂಟದ ಅಧ್ಯಕ್ಷರನ್ನು ಪ್ರಧಾನಮಂತ್ರಿ ಭೇಟಿಯಾದರು

ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ರಷ್ಯಾ ಒಕ್ಕೂಟದ ಅಧ್ಯಕ್ಷರನ್ನು ಪ್ರಧಾನಮಂತ್ರಿ ಭೇಟಿಯಾದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಈ ವರ್ಷ ಉಭಯ ನಾಯಕರ ನಡುವಿನ ಎರಡನೇ ಭೇಟಿಯಿದು. ಇದಕ್ಕೂ ಮೊದಲು, 31 ಆಗಸ್ಟ್ 2026ರಂದು ಬಿಷ್ಕೆಕ್‌ನಲ್ಲಿ ನಡೆದ 26ನೇ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರೂ ನಾಯಕರು ಭೇಟಿಯಾಗಿದ್ದರು.

ಇಬ್ಬರೂ ನಾಯಕರು ರಾಜಕೀಯ, ಆರ್ಥಿಕತೆ, ರಕ್ಷಣಾ, ಇಂಧನ, ಬಾಹ್ಯಾಕಾಶ, ಕೌಶಲ್ಯ ಚಲನೆ ಮತ್ತು ಜನರು- ಜನರ ನಡುವಿನ ಸಂಪರ್ಕ ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು. ಸೆಪ್ಟೆಂಬರ್ 9 ರಿಂದ 11, 2026ರವರೆಗೆ ಭಾರತದಲ್ಲಿ ಮೊದಲ ಬಾರಿಗೆ ನಡೆದ ರಷ್ಯಾದ ಅಂತರರಾಷ್ಟ್ರೀಯ ಕೈಗಾರಿಕಾ ಪ್ರದರ್ಶನ ‘ಇನ್ನೋಪ್ರೊಮ್ ಇಂಡಿಯಾ’ವನ್ನು ಅವರು ಸ್ವಾಗತಿಸಿದರು. ವ್ಯಾಪಾರ ಮತ್ತು ಕೈಗಾರಿಕಾ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವಲ್ಲಿ ಈ ಪ್ರದರ್ಶನದ ಮಹತ್ವವನ್ನು ಅವರು ಒತ್ತಿ ಹೇಳಿದರು. ಇಬ್ಬರೂ ನಾಯಕರು ಇನ್ನೋಪ್ರೊಮ್ ಇಂಡಿಯಾ ಪ್ರದರ್ಶನಕ್ಕೂ ಭೇಟಿ ನೀಡಿ, ಅಲ್ಲಿ ಭಾಗವಹಿಸಿದವರೊಂದಿಗೆ ಸಂವಾದ ನಡೆಸಿದರು.

2026ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತ-ರಷ್ಯಾ ನಡುವಿನ ಸಹಕಾರದ ಕುರಿತು ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಕಡಲ ವ್ಯಾಪಾರ ಮತ್ತು ಭಾರತೀಯ ನಾವಿಕರ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರಿದ ಪಶ್ಚಿಮ ಏಷ್ಯಾ ಹಾಗೂ ಕಪ್ಪು ಸಮುದ್ರ ಪ್ರದೇಶದ ಸಂಘರ್ಷಗಳು ಸೇರಿದಂತೆ ಪರಸ್ಪರ ಆಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅವರು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. ಸಂಘರ್ಷಗಳನ್ನು ಪರಿಹರಿಸಲು ಸಂವಾದ ಮತ್ತು ರಾಜತಾಂತ್ರಿಕತೆಯೇ ಮುಂದಿನ ಮಾರ್ಗ ಎಂದು ಪ್ರಧಾನಮಂತ್ರಿ ಮತ್ತೊಮ್ಮೆ ಒತ್ತಿ ಹೇಳಿದರು. ಶಾಂತಿ ಪ್ರಯತ್ನಗಳಿಗೆ ನೆರವು ನೀಡಲು ಭಾರತ ಸಿದ್ಧವಿದೆ ಎಂದೂ ಅವರು ಪುನರುಚ್ಚರಿಸಿದರು.

ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳ ನಡುವೆಯೂ ಮಹತ್ವದ ಬೆಳವಣಿಗೆಯನ್ನು ದಾಖಲಿಸುತ್ತಿರುವ ಮತ್ತು ತನ್ನ ದೃಢತೆಯನ್ನು ಪ್ರದರ್ಶಿಸಿರುವ ಉಭಯ ದೇಶಗಳ ನಡುವಿನ ವಿಶೇಷ ಮತ್ತು ವಿಶಿಷ್ಟ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಇಬ್ಬರೂ ನಾಯಕರು ಒಪ್ಪಿಕೊಂಡರು.

24ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಪುಟಿನ್ ಅವರು ಪ್ರಧಾನಮಂತ್ರಿಯವರನ್ನು ಆಹ್ವಾನಿಸಿದರು. ಪ್ರಧಾನಮಂತ್ರಿಯವರು ಈ ಆಹ್ವಾನವನ್ನು ಸ್ವೀಕರಿಸಿದರು. ಶೃಂಗಸಭೆಯ ದಿನಾಂಕಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಸ್ಪರ ಅನುಕೂಲಕ್ಕೆ ತಕ್ಕಂತೆ ನಿರ್ಧರಿಸಲಾಗುತ್ತದೆ.

 

*****