ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆ (ಪಿ.ಎಂ. ಎಸ್.ಎಸ್.ವೈ) ಅಡಿಯಲ್ಲಿ ಪಂಜಾಬ್ ನ ಭಟಿಂಡಾದಲ್ಲಿ ನೂತನ ಎ.ಐ.ಐ.ಎಂ.ಎಸ್. ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.
ಈ ಸಂಸ್ಥೆಯು ತುರ್ತುಚಿಕಿತ್ಸೆ/ಅಪಘಾತ ವಿಭಾಗದ ಹಾಸಿಗೆ, ಆಯುಷ್ ಹಾಸಿಗೆಗಳು, ಖಾಸಗಿ ಹಾಸಿಗೆಗಳು ಮತ್ತು ಐ.ಸಿ.ಯು. ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಬೆಡ್ ಗಳನ್ನು ಒಳಗೊಂಡ 750 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನೂ ಒಳಗೊಂಡಿರುತ್ತದೆ. ಇದರ ಜೊತೆಗೆ, ಆಡಳಿತ ವಿಭಾಗ, ಆಯುಷ್ ವಿಭಾಗ, ಸಭಾಂಗಣ, ರಾತ್ರಿ ತಂಗುದಾಣ, ಹಾಸ್ಟೆಲ್ ಮತ್ತು ವಸತಿ ಸೌಲಭ್ಯವೂ ಇದರಲ್ಲಿರುತ್ತದೆ.
ಭಟಿಂಡಾದಲ್ಲಿ ನೂತನ ಎ.ಐ.ಐ.ಎಂ.ಎಸ್. ಸ್ಥಾಪನೆಯ ಯೋಜನೆಗೆ 925 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಮೇಲಿನ ಅಂದಾಜು ವೆಚ್ಚದಲ್ಲಿ ಆವರ್ತನ ವೆಚ್ಚ (ವೇತನ ಮತ್ತು ಸಂಬಳ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳು) ಸೇರಿರುವುದಿಲ್ಲ. ಹೊಸ ಎ.ಐ.ಐ.ಎಂ.ಎಸ್.ಗಳು ತಮ್ಮ ಆವರ್ತನ ವೆಚ್ಚಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪಿ.ಎಂ.ಎಸ್.ಎಸ್.ವೈ. ಶೀರ್ಷಿಕೆಯಡಿ ಯೋಜನಾ ಆಯವ್ಯಯದಡಿ ನೀಡಲಾಗುವ ಅನುದಾನದ ತಮ್ಮ ವಾರ್ಷಿಕ ಆಯವ್ಯಯದಿಂದ ಭರಿಸುತ್ತವೆ.
ಭಟಿಂಡಾದ ನೂತನ ಎ.ಐ.ಐ.ಎಂ.ಎಸ್. ವಲಯದ ಜನತೆಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.) ಅಡಿ ಈ ವಲಯದಲ್ಲಿ ಸೃಷ್ಟಿಸಲಾಗುವ ಪ್ರಾಥಮಿಕ ಮತ್ತು ಮಾಧ್ಯಮಕ ಹಂತದ ಸಂಸ್ಥೆಗಳು/ಸೌಲಭ್ಯಗಳಿಗೆ ಲಭ್ಯವಾಗುವ ದೊಡ್ಡ ಸಂಖ್ಯೆಯ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ದಂಡನ್ನೇ ರಚಿಸುತ್ತದೆ. ಈ ಸಂಸ್ಥೆಯು ಪ್ರಾದೇಶಿಕ ಪ್ರಚಲಿತ ಕಾಯಿಲೆಗಳ ಮತ್ತು ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುತ್ತದೆ ಮತ್ತು ಅಂಥ ಕಾಯಿಲೆಗಳ ನಿಯಂತ್ರಣ ಮತ್ತು ಉತ್ತಮ ಚಿಕಿತ್ಸೆ ಒದಗಿಸುತ್ತದೆ.
ಈ ಯೋಜನೆಯನ್ನು ಭಾರತ ಸರ್ಕಾರದ ಅನುಮೋದನೆ ದೊರೆತ ದಿನದಿಂದ 48 ತಿಂಗಳುಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತದೆ. ಇದರಲ್ಲಿ ನಿರ್ಮಾಣ ಪೂರ್ವ ಹಂತದ 15 ತಿಂಗಳುಗಳು, ನಿರ್ಮಾಣ ಹಂತದ 30 ತಿಂಗಳುಗಳು ಮತ್ತು ಸ್ಥಿರೀಕರಣ / ಕಾರ್ಯಾಚರಣೆ ಹಂತದ 3 ತಿಂಗಳುಗಳು ಸೇರಿವೆ.
ಈ ಎ.ಐ.ಐ.ಎಂ.ಎಸ್. ನಿಂದ ಪಂಜಾಬ್ ಮತ್ತು ಸುತ್ತಮುತ್ತಲಿನ ಪ್ರದೇಶದ ಜನಸಂಖ್ಯೆಗೆ ಅನುಕೂಲ ಆಗಲಿದೆ.
ಹಿನ್ನೆಲೆ:
ದೇಶದಲ್ಲಿ ಸಾಮಾನ್ಯವಾಗಿ ಹಾಗೂ ಕಡಿಮೆ ಸೌಲಭ್ಯದ ಅಥವಾ ಹಿಂದುಳಿದ ರಾಜ್ಯಗಳಲ್ಲಿ ವಿಶೇಷವಾಗಿ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಸೌಲಭ್ಯಗಳನ್ನು ತ್ವರಿತವಾಗಿ ಹೆಚ್ಚಿಸುವ ಮತ್ತು ಕೈಗೆಟಕುವ/ವಿಶ್ವಾಸಾರ್ಹ ತೃತೀಯ ಮಟ್ಟದ ಆರೋಗ್ಯ ಸೇವೆ ಒದಗಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಈ ಕೇಂದ್ರೀಯ ವಲಯದ ಕಾರ್ಯಕ್ರಮ, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿ.ಎಂ.ಎಸ್.ಎಸ್.ವೈ.) ಯನ್ನು ಮೊದಲಿಗೆ 2003ರ ಆಗಸ್ಟ್ ನಲ್ಲಿ ಘೋಷಿಸಲಾಯಿತು.
ಈ ಯೋಜನೆಯಡಿ ಎ.ಐ.ಐ.ಎಂ.ಎಸ್. ಅದನ್ನು ಭುವನೇಶ್ವರ, ಜೋದ್ಪುರ, ರಾಯ್ಪುರ, ಋಷಿಕೇಶ, ಭೋಪಾಲ್ ಮತ್ತು ಪಟ್ನಾಗಳಲ್ಲಿ ಸ್ಥಾಪಿಸಲಾಯಿತು. ರಾಯ್ ಬರೇಲಿಯ ಎ.ಐ.ಐ.ಎಂ.ಎಸ್. ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ಮೂರು ಎ.ಐ.ಐ.ಎಂ.ಎಸ್.ಗಲನ್ನು ನಾಗ್ಪುರ (ಮಹಾರಾಷ್ಟ್ರ), ಕಲ್ಯಾಣಿ (ಪಶ್ಚಿಮ ಬಂಗಾಳ) ಮತ್ತು ಗುಂಟೂರಿನ ಮಂಗಳಗಿರಿ (ಎ.ಪಿ.)ಯಲ್ಲಿ ಸ್ಥಾಪಿಸಲು 2015ರಲ್ಲಿ ಮಂಜೂರಾತಿ ನೀಡಲಾಗಿದೆ.