Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ನಾನಾಜೀ ದೇಶಮುಖ್ ಅವರ ಜನ್ಮಶತಾಬ್ಧಿ ಸಮಾರಂಭದಲ್ಲಿ ಪ್ರಧಾನಿ ಶ್ರೀ ನರೇಂದ್ರಮೋದಿ ಅವರ ಭಾಷಣದ ಕನ್ನಡ ಅನುವಾದ


ಇಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನ. ಇಂದೇ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ನಿಕಟವರ್ತಿ ಶ್ರೀ ನಾನಾಜೀ ದೇಶಮುಖ್ ಅವರ ಜನ್ಮ ಶತಮಾನೋತ್ಸವ ಕೂಡಾ. ಈ ಇಬ್ಬರೂ ಮಹಾಪುರುಷರು ತಮ್ಮ ಜೀವಿತ ಕಾಲದಲ್ಲಿ ಒಂದು ಸಂಕಲ್ಪವನ್ನು ಮಾಡಿದ್ದರು. ಈ ಸಂಕಲ್ಪ ಸಿದ್ಧಿಗಾಗಿ ಅವರು ತಮ್ಮನ್ನು ತಾವು ಮುಡುಪಾಗಿಟ್ಟಿದ್ದರು. ತಮ್ಮ ಜೀವನದ ಪ್ರತಿ ಕ್ಷಣವನ್ನೂ ತಮ್ಮ ಮಾತೃಭೂಮಿಗಾಗಿ, ದೇಶದ ಜನರ ಕಲ್ಯಾಣಕ್ಕಾಗಿ, ತಮ್ಮ ಸಂಕಲ್ಪವನ್ನು ಸಾಕಾರ ಮಾಡಿಕೊಳ್ಳುವುದಕ್ಕಾಗಿ ತೊಡಗಿಸಿಕೊಂಡಿದ್ದರು. ಸ್ವಾತಂತ್ರ ಸಂಗ್ರಾಮದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಯುವ ಜನತೆಗೆ ಪ್ರೇರಣೆಯಾಗಿದ್ದರು. 1942 ರಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮಹಾತ್ಮಾಗಾಂಧಿ ಮತ್ತು ಸರದಾರ ಪಟೇಲರನ್ನೊಳಗೊಂಡು ಎಲ್ಲ ಹಿರಿಯ ನಾಯಕರನ್ನು ಬ್ರಿಟೀಷ್ ಸರಕಾರ ಬಂಧನದಲ್ಲಿಟ್ಟಿತ್ತು. ಇಂತಹ ಸಮಯದಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ಲೋಹಿಯಾರಂತಹ ಯುವಕರು ಮುಂದೆ ಬಂದು ಸ್ವಾತ್ರಂತ್ರ ಹೋರಾಟದ ನೇತೃತ್ವ ವಹಿಸಿಕೊಂಡರು. ಅಂದಿನ ಕಾಲಘಟ್ಟದ ಯುವಕರ ಮನದಲ್ಲಿ ಪ್ರೇರಕ ಶಕ್ತಿಯಾಗಿ ನೆಲೆಯೂರಿದರು, ಸ್ವಾತಂತ್ರ ಸಂಗ್ರಾಮದ ಅಂದಿನ ದಿನಗಳಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಲೋಕನಾಯಕನ ರೂಪದಲ್ಲಿ ಯುವಕರಿಗೆ ಪ್ರೇರಣೆಯ ಕೇಂದ್ರವಾಗಿದ್ದರು. ಆದರೆ ದೇಶದ ಸ್ವಾತಂತ್ರ್ಯಾ ನಂತರ ದೊಡ್ಡ ದೊಡ್ಡ ನಾಯಕರು ಅಧಿಕಾರವನ್ನು ಅನುಭವಿಸುವುದಕ್ಕಾಗಿ ತಮ್ಮ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಸಿದ್ಧರಾದರು. ಜಯಪ್ರಕಾಶ್ ನಾರಾಯಣ್ ಅವರು ರಾಜಕೀಯ ಅಧಿಕಾರದಿಂದ ದೂರ ಉಳಿದರು. ಸ್ವಾತಂತ್ರ್ಯಾನಂತರ ಜಯಪ್ರಕಾಶ್ ನಾರಾಯಣ್ ಮತ್ತು ಅವರ ಪತ್ನಿ ಪ್ರಭಾದೇವಿ ಅವರು ಗ್ರಾಮ ವಿಕಾಸದ ಮಾರ್ಗವನ್ನು ಆಯ್ದುಕೊಂಡರು, ಲೋಕ ಕಲ್ಯಾಣದ ಹಾದಿಯನ್ನು ಹಿಡಿದರು.

ನಾನಾಜಿ ದೇಶಮುಖ್ ಅವರನ್ನು ದೇಶ ಹೆಚ್ಚಾಗಿ ಅರಿತಿರಲಿಲ್ಲ. ದೇಶಕ್ಕಾಗಿ ಅವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಭ್ರಷ್ಟಾಚಾರದ ವಿರುದ್ದ ದನಿಯೆತ್ತಿದ್ದ ಜಯಪ್ರಕಾಶ್ ನಾರಾಯಣ್ ಅವರು ತುರ್ತುಪರಿಸ್ಥಿತಿಯ ಮೊದಲು ಮತ್ತು ನಂತರದ ದಿನಗಳಲ್ಲಿ ದೇಶದಲ್ಲಿ ಬೇರುಬಿಟ್ಟಿದ್ದ ಭ್ರಷ್ಟಾಚಾರ ಮತ್ತು ಉನ್ನತ ಸ್ಥಾನಗಳಲ್ಲಿ ಹೆಚ್ಚಾದ ಭ್ರಷ್ಟಾಚಾರದ ವಿರುದ್ಧ ಬೇಸರಗೊಂಡು ವಿದ್ಯಾರ್ಥಿ ಆಂದೋಲನದ ಜತೆಗೂಡಿದರು. ಗುಜರಾತ್ ನ ಯುವಜನರ ಹೋರಾಟದಿಂದ ಪ್ರೇರಿತರಾದ ಜಯಪ್ರಕಾಶ್ ನಾರಾಯಣ್ ಅವರು ಮತ್ತೊಮ್ಮೆ ಹೋರಾಟದಲ್ಲಿ ತೊಡಗಿಕೊಂಡರು. ಜಯಪ್ರಕಾಶ್ ನಾರಾಯಣ್ ಅವರು ಹೋರಾಟದಲ್ಲಿ ಪಾಲ್ಗೊಂಡ ನಂತರ ದಿಲ್ಲಿಯ ಆಡಳಿತಾರೂಢರು ತಳಮಳಗೊಂಡರು. ಜಯಪ್ರಕಾಶ್ ನಾರಾಯಣ್ ಅವರನ್ನು ತಡೆಯಲು ಏನು ಮಾಡಬೇಕೆಂಬ ಷಡ್ಯಂತ್ರ ರೂಪಿಸತೊಡಗಿದರು. ಪಟನಾದಲ್ಲಿ ಒಮ್ಮೆ ಸಾರ್ವಜನಿಕ ಕಾರ್ಯಕ್ರಮದ ಮೊದಲು ಹೊರಟಿದ್ದ ಮೆರವಣಿಗೆಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಮೇಲೆ ತೀವ್ರ ಹಲ್ಲೆ ನಡೆಸಲಾಯಿತು. ಆ ಸಂದರ್ಭದಲ್ಲಿ ಅವರ ಪಕ್ಕ ನಾನಾಜೀ ದೇಶಮುಖ್ ಅವರು ನಿಂತಿದ್ದರು. ಮೃತ್ಯುರೂಪದಲ್ಲಿ ಬಂದ ಆ ದಾಳಿಯನ್ನು ನಾನಾಜೀ ಅವರು ತಮ್ಮ ಕೈ ಅಡ್ಡವಿಡಿದು ತಪ್ಪಿಸಿದರು. ನಾನಾಜೀ ಅವರ ಕೈ ಮೂಳೆಗಳು ಮುರಿದವು. ಈ ರೀತಿ ಅವರು ಜಯಪ್ರಕಾಶ್ ನಾರಾಯಣ್ ಅವರ ಜೀವವನ್ನು ಉಳಿಸಿದರು. ಈ ಘಟನೆಯ ನಂತರ ಸಂಪೂರ್ಣ ದೇಶದ ಗಮನ ನಾನಾಜೀ ದೇಶಮುಖ್ ಅವರೆಡೆಗೆ ಹೊರಳಿತು. ನಾನಾಜೀ ದೇಶಮುಖ್ ಅವರು ಜೀವನವಿಡಿ ದೇಶಕ್ಕಾಗಿ ದುಡಿದವರು. ದೀನದಯಾಳ್ ಸಂಶೋಧನಾ ಕೇಂದ್ರದ ಮೂಲಕ ಅವರು ದೇಶಕ್ಕಾಗಿ ಬದುಕುವುದನ್ನು ಕಲಿಯಿರಿ, ದೇಶಕ್ಕಾಗಿ ಏನನ್ನಾದರೂ ಮಾಡಿ, ಎಂಬ ಮಂತ್ರದ ಮೂಲಕ ಅವರು ಯುವ ದಂಪತಿಗಳಿಗೆ ಅಹ್ವಾನ ನೀಡಿದರು. ಈ ಆಹ್ವಾನದ ಮೇರೆಗೆ ಸಾವಿರಾರು ಸಂಖ್ಯೆಯ ದಂಪತಿಗಳು ಮುಂದೆ ಬಂದರು. ದೇಶಮುಖ್ ಅವರು ಆ ದಂಪತಿಗಳನ್ನು ಗ್ರಾಮಾಭಿವೃದ್ಧಿಯ ಕಾರ್ಯಕ್ಕಾಗಿ ನಿಯೋಜಿಸಿದರು. ದೇಶದಲ್ಲಿ ಮುರಾರ್ಜಿ ದೇಸಾಯಿ ಅವರು ಪ್ರಧಾನಮಂತ್ರಿಗಳಾಗಿದ್ದ ಅವಧಿ, ಜನತಾಪಾರ್ಟಿಯ ಅಧಿಕಾರಾವಧಿಯ ಕಾಲ, ನಾನಾಜೀ ದೇಶಮುಖ್ ಅವರನ್ನು ಮಂತ್ರಿಮಂಡಲಕ್ಕೆ ಸೇರಿಕೊಳ್ಳುವಂತೆ ಆಹ್ವಾನಿಸಲಾಯಿತು. ಜಯಪ್ರಕಾಶ್ ನಾರಾಯಣ್ ಅವರ ಹಾದಿಯಲ್ಲೇ ಮುನ್ನಡೆದ ನಾನಾಜೀ ಅವರು ಈ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದರು. ತಮ್ಮನ್ನು ತಾವು ರಾಜಕೀಯದಿಂದ ನಿವೃತ್ತಿ ಪಡೆದು, 60 ವರ್ಷಗಳ ನಂತರ ಮುಂದಿನ ತಮ್ಮ ಜೀವಿತಾವಧಿಯವರೆಗೂ ಒಟ್ಟು ಮೂರೂವರೆ ದಶಕಗಳಿಗೂ ಅಧಿಕ ಕಾಲ ಚಿತ್ರಕೂಟವನ್ನು ಕೇಂದ್ರವಾಗಿರಿಸಿಕೊಂಡು, ಗೋಂಡಾವನ್ನು ಕೇಂದ್ರವಾಗಿರಿಸಿಕೊಂಡು ತಮ್ಮ ಜೀವನವನ್ನು ಗ್ರಾಮೀಣ ಅಭಿವೃದ್ದಿಯಲ್ಲಿ ಕಳೆದರು.

ನಾನಾಜೀ ದೇಶಮುಖ್ ಅವರ ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ ಭಾರತ ಸರ್ಕಾರ ಇಂತಹ ಮಹಾನ್ ಪುರುಷರ ಕನಸುಗಳನ್ನು ಆಧಾರವಾಗಿಟ್ಟುಕೊಂಡು, ಮಹಾತ್ಮಾಗಾಂಧಿಯವರು ಹಾಕಿಕೊಟ್ಟ ಹಾದಿಯಲ್ಲಿ, ಗ್ರಾಮೀಣ ಅಭಿವೃದ್ಧಿಯನ್ನು ಹೇಗೆ ಮುಂದುವರಿಸಬೇಕು, ಹಳ್ಳಿಗಳು ಹೇಗೆ ಸ್ವಾವಲಂಬಿಗಳಾಗಬೇಕು, ನಮ್ಮ ಹಳ್ಳಿಗಳು ಬಡತನದಿಂದ ಹೇಗೆ ಮುಕ್ತವಾಗಬೇಕು, ನಮ್ಮ ಹಳ್ಳಿಗಳು ರೋಗ ರುಜಿನಗಳಿಂದ ಹೇಗೆ ಮುಕ್ತವಾಗಬೇಕು, ಜಾತೀಯತೆಯು ಇಂದು ನಮ್ಮ ಹಳ್ಳಿಗಳನ್ನು ಬೇರೆ ಬೇರೆಯನ್ನಾಗಿ ಮಾಡಿ, ಗ್ರಾಮೀಣ ಜನರ ಕನಸುಗಳನ್ನು ಚೂರುಚೂರು ಮಾಡಿವೆ, ಇಂತಹ ಜಾತೀಯತೆಯ ಮನೋಭಾವದಿಂದ ಹೊರಬಂದು ನಮ್ಮ ಹಳ್ಳಿಗಳು ಸಮೃದ್ಧವಾಗಬೇಕು, ಎಲ್ಲರನ್ನೂ ಒಂದುಗೂಡಿಸುವ ಹಳ್ಳಿಗಳಾಗಬೇಕು, ಎಲ್ಲರೂ ಒಂದುಗೂಡಿ ಹಳ್ಳಿಗಳ ಅಭಿವೃದ್ಧಿಗೆ ಸಂಕಲ್ಪ ಮಾಡಬೇಕಿದೆ. ಹಳ್ಳಿಗಳ ಅಭಿವೃದ್ಧಿಯಲ್ಲಿ ನಾಗರಿಕರ ಪಾಲುದಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಂಡಿದೆ.

ಇಂದು ನನಗೆ ಇಲ್ಲಿ ಗ್ರಾಮೀಣ ಬದುಕಿನ ಬಗ್ಗೆ ಯೋಚಿಸುವ, ಗ್ರಾಮೀಣ ಜೀವನಕ್ಕೆ ಕೊಡುಗೆಯನ್ನು ನೀಡಬಲ್ಲ, ಗ್ರಾಮೀಣ ಅರ್ಥವ್ಯವಸ್ಥೆಯ ಬಗ್ಗೆ ಚಿಂತಿಸುವಂತಹ, ಗ್ರಾಮೀಣ ಕೃಷಿ ಜೀವನದ ಬೇರೆ ಬೇರೆ ವಿಷಯಗಳ ಬಗೆಗಿನ ಹೆಚ್ಚಿನ ತಿಳುವಳಿಕೆ ಉಳ್ಳ ಜ್ಞಾನಿಗಳು ಕಳೆದೆರಡು ದಿನಗಳಿಂದ ಇಲ್ಲಿ ಸೇರಿ ವಿಚಾರ ವಿಮರ್ಷೆ ಮಾಡಿದ್ದಾರೆ. ಈ ಚರ್ಚೆಯ ಮಂಥನದಿಂದ ಹೊರಬಂದ ಅಮೃತವನ್ನು ಇದೀಗ ಒಂದು ವಿಡಿಯೋ ಮೂಲಕ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ತಾವುಗಳು ಮಾಡಿದ ಚರ್ಚೆ, ವಿಚಾರ ವಿಮರ್ಷೆಯಲ್ಲಿ ಹೊರಹೊಮ್ಮಿದ್ದ ಅಂಶಗಳ ಬಗ್ಗೆ ಭಾರತ ಸರ್ಕಾರ ಗಂಭೀರವಾಗಿ ಚಿಂತಿಸುತ್ತದೆ. ಅದರಿಂದ ತೆಗೆದುಕೊಳ್ಳಬಹುದಾದ ಅಂಶಗಳನ್ನು, ಉಲ್ಲೇಖಿಸಿರುವ ಅಂಶಗಳನ್ನು ಭಾರತ ಸರ್ಕಾರದ ಯೋಜನೆಗಳ ಜತೆ ಜೋಡಿಸುವ ಬಗ್ಗೆ ಚಿಂತನೆ ಮಾಡಬಹುದಾಗಿದೆ. ಅನೇಕ ವರ್ಷಗಳ ನಂತರ ಇಂತಹ ದೊಡ್ಡ ವೇದಿಕೆಯಲ್ಲಿ ಭಾರತದ ಗ್ರಾಮೀಣ ಜೀವನದ ಬಗ್ಗೆ ಚರ್ಚೆಗಳು, ವಿಚಾರ ವಿನಿಮಯಗಳು ನಡೆದಿವೆ. ದೇಶದ ಎಲ್ಲ ಮೂಲೆಗಳಿದ ತಜ್ಞರು ಇಲ್ಲಿಗೆ ಆಗಮಿಸಿದ್ದಾರೆ. ಬೇರೆ ಬೇರೆ ಇಲಾಖೆಗಳ ಸ್ವಭಾವ ಬೇರೆ ಬೇರೆಯಾಗಿರುತ್ತದೆ. ಅಲ್ಲಿನ ಸಮಸ್ಯೆಗಳು, ಅಲ್ಲಿನ ಮೂಲಸೌಕರ್ಯಗಳು, ಅಲ್ಲಿನ ಅವಶ್ಯಕತೆಗಳು ಬೇರೆ ಬೇರೆಯಾಗಿರುತ್ತವೆ. ಆಸಕ್ತಿ, ಪ್ರವೃತ್ತಿ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಹಳ್ಳಿಗಳ ಬೇರು ಬೆಸೆದುಕೊಂಡಿದ್ದು. ಇದು ಸುಸ್ಥಿರ ಬೆಳವಣಿಗೆಗೆ ಖಾತ್ರಿಯಾಗಿದೆ. ಹೊರಗಿನಿಂದ ಹೇರಲ್ಪಟ್ಟ ವಿಷಯಗಳು ಗ್ರಾಮೀಣ ಜೀವನದಲ್ಲಿ ಹೆಚ್ಚು ಸಮಯ ಹೊರಗಿನ ವಸ್ತುಗಳಾಗಿ ಸಂಘರ್ಷದಲ್ಲೇ ಕಳೆದುಹೋಗುತ್ತವೆ. ಕೆಲವೊಮ್ಮೆ ಗ್ರಾಮೀಣ ಬದುಕು ಹೊರಗಿನ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಸಾಹಸವನ್ನೇ ಮಾಡುವುದಿಲ್ಲ. ಆದುದರಿಂದ ನಾವುಗಳು ಗ್ರಾಮೀಣ ಬದುಕಿನ ಶಕ್ತಿಯನ್ನು, ಸಾಮರ್ಥ್ಯವನ್ನು ಮೊದಲಿಗೆ ಒಟ್ಟುಗೂಡಿಸಿ ಅಭಿವೃದ್ಧಿಯ ಮಾದರಿಯನ್ನು ಸಿದ್ಧಪಡಿಸುವುದು, ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗುತ್ತದೆ ಮತ್ತು ಅದನ್ನು ಅವರು ಗುರುತಿಸುತ್ತಾರೆ. ಅದರಲ್ಲಿ ಸ್ವಲ್ಪ ಮಾರ್ಪಾಡು ಮಾಡುವ ಅವಶ್ಯಕತೆ ಇರುತ್ತದೆ. ಆದುದರಿಂದ ವೈಜ್ಞಾನಿಕ ದೃಷ್ಟಿಯಿಂದ, ಆರ್ಥಿಕ ದೃಷ್ಟಿಯಿಂದ, ತಂತ್ರಜ್ಞಾನದ ದೃಷ್ಟಿಯಿಂದ ಒಂದು ಬೆಂಬಲ ವ್ಯವಸ್ಥೆಯ ಅವಶ್ಯಕತೆ ಇದೆ. ಅದಕ್ಕೆ ಬೆಂಬಲವಾಗಿ ನಾವು ಮುನ್ನಡೆದರೆ, ಹಳ್ಳಿಗಳು ಬೇಗ ಅಭಿವೃದ್ಧಿ ಹೊಂದುತ್ತವೆ. ಹಳ್ಳಿಗಳು, ಈ ರೀತಿಯ ಅಭಿವೃದ್ಧಿ ಯಾತ್ರೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗುತ್ತವೆ. ಇದರಿಂದ ಹಳ್ಳಿಗಳ ಸುಸ್ಥಿರ ಅಭಿವೃದ್ದಿ ಸಾಧ್ಯವಾಗುತ್ತದೆ. ತಾವುಗಳು ಇಲ್ಲಿನ ನೆಲದ ಅನುಭವದ ಆಧಾರದ ಮೇಲೆ ಇಂದು ಇಲ್ಲಿ ವಿಚಾರ ವಿನಿಮಯ ನಡೆಸಿದ್ದೀರಿ. ಅನುಭವದ ಆಧಾರದ ಮೇಲೆ ಮಾಡಿದ ಕಾರ್ಯಗಳು… ಮುಂಬರುವ ದಿನಗಳಲ್ಲಿ ಇದು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ವೇಗ ನೀಡಲಿದೆ ಎಂಬ ವಿಶ್ವಾಸ ನನಗಿದೆ. ನಾವು ಅಭಿವೃದ್ಧಿಯನ್ನು ಬಯಸುತ್ತೇವೆ ಎಂಬಲ್ಲಿಗೆ ಮಾತು ಮುಗಿಯುವುದಿಲ್ಲ ಎಂಬುದನ್ನು ತಾವು ಅರಿಯಬೇಕು, ನಾವು ಒಳ್ಳೆಯದನ್ನು ಮಾಡಬಯಸುತ್ತೇವೆ ಎಂಬಲ್ಲಿಗೆ ಮಾತು ಮುಗಿಯುವುದಿಲ್ಲ, ನಿಗದಿತ ಸಮಯದಲ್ಲಿ ನಾವು ಕಾರ್ಯವನ್ನು ಪೂರ್ಣ ಮಾಡದಿದ್ದರೆ ಇದು ಸಾಧ್ಯವಾಗುವುದಿಲ್ಲ.

ನಾವು ನಮ್ಮ ಯೋಜನೆಗಳನ್ನು ಫಲಾನುಭವಿಗಳಿಗೆ, ನಿಗದಿತ ವರ್ಗದ ಜನರಿಗೆ ಶೇಕಡಾ ನೂರರಷ್ಟು ತಲುಪಿಸಬೇಕಿದೆ. ಯೋಜನೆಯನ್ನು ಯಾವ ಮನಸ್ಥಿತಿಯಲ್ಲಿ ಪ್ರಾರಂಭಿಸಲಾಯಿತು, ಯಾವ ನೆಲದ ಮೇಲೆ ಪ್ರಾರಂಭಿಸಲಾಯಿತು, ಅದರಲ್ಲಿ ಯಾವುದೇ ಭ್ರಮೆಗಳು ಉದ್ಭವವಾಗದಿರಲಿ, ತಿರುವುಗಳು ಬರದಿರಲಿ, ನಿಗದಿತ ಸಮಯದಲ್ಲಿ ಪ್ರಾರಂಭಿಸುವ ಪ್ರಯತ್ನ ಮಾಡಬೇಕಿದ್ದು, ಇದು ಉತ್ಪಾದನೆಯ ಮೇಲೆ ಅವಲಂಬಿತವಾಗಿರದೆ, ಫಲಿತಾಂಶದ ಮೇಲೆ ಅವಲಂಬಿತವಾಗಿರಲಿ. ನಾವು ಎಷ್ಟು ಹಣ ವೆಚ್ಚ ಮಾಡಿದೆವು ಎಂಬುದು ಮುಖ್ಯವಾಗಿರಬಾರದು. ನಿಗದಿತ ಹಣಕಾಸಿನಲ್ಲಿ ನಮ್ಮ ಗುರಿ ಎಷ್ಟಿತ್ತು, ಎಷ್ಟು ಸಾಧಿಸಿದ್ದೇವೆ ಎಂಬ ಬಗ್ಗೆ ನಾವೊಂದು ಸಮಗ್ರ ಪ್ರಯತ್ನವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿದರೆ, 2022 ರಲ್ಲಿ ನಾವು ನಮ್ಮ ಸ್ವಾತಂತ್ರದ 75 ವರ್ಷಗಳನ್ನು ಆಚರಿಸುವ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿಯ ವೇಗ ಕಳೆದ 70 ವರ್ಷಗಳಲ್ಲಿ ತನ್ನ ಅಭಿವೃದ್ಧಿಯ ಕನಸನ್ನು ಕಂಡ ಗ್ರಾಮೀಣ ಬದುಕಿಗೊಂದು ತಿರುವು ದೊರೆಯಲಿದ್ದು, ಗ್ರಾಮೀಣ ಜನರ ಬದುಕಿನಲ್ಲಿ ಒಂದು ಬದಲಾವಣೆ ಬರಲಿದೆ ಎಂಬ ವಿಶ್ವಾಸ ನನಗಿದೆ. ಇಂದು ಗ್ರಾಮೀಣ ಜನತೆ ಕೂಡಾ ನಗರದ ಜೀವನದಂತೆ ಬದುಕಲು ಬಯಸಿದ್ದಾರೆ. ಯಾವ ಸೌಲಭ್ಯಗಳು ನಗರದಲ್ಲಿ ದೊರಕುತ್ತಿವೆಯೋ, ಆ ಎಲ್ಲ ಸೌಲಭ್ಯಗಳು ಹಳ್ಳಿಗಳಲ್ಲಿ ಕೂಡಾ ದೊರಕುವಂತಿರಬೇಕು. ನಗರಗಳಲ್ಲಿ ಝಗಮಗಿಸುತ್ತಿರುವ ಬೆಳಕು ಹಳ್ಳಿಗಳನ್ನೂ ಬೆಳಗುವಂತಿರಬೇಕು, ನಗರ ವಾಸಿಗಳು ತಮಗೆ ಬೇಕಾದಾಗ ಟಿವಿಯನ್ನು ವೀಕ್ಷಿಸುವ ಹಾಗೆ ಗ್ರಾಮೀಣ ಪ್ರದೇಶದ ಜನರೂ ಕೂಡಾ ಟಿವಿಯನ್ನು ನೋಡುವಂತಾಗಬೇಕು, ನಗರದ ಮಕ್ಕಳು ತಮ್ಮ ಶಾಲೆಗಳ ಪ್ರಯೋಗಾಲಯಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಹಾಗೆ ಹಳ್ಳಿಗಳ ಶಾಲಾ ಮಕ್ಕಳಿಗೂ ಕೂಡಾ ತಮ್ಮ ತಮ್ಮ ಶಾಲೆಗಳಲ್ಲಿ ಈ ಸೌಲಭ್ಯ ದೊರಕುವಂತಾಗಬೇಕು. ನಗರದ ಮಕ್ಕಳು ಕಂಪ್ಯೂಟರ್ ಮೂಲಕ ನೂತನ ತಂತ್ರಜ್ಞಾನದ ಶಿಕ್ಷಣ ಪಡೆಯುತ್ತಿದ್ದರೆ, ಇದೇ ರೀತಿಯ ಶಿಕ್ಷಣವನ್ನು ಗ್ರಾಮೀಣ ಪ್ರದೇಶದ ಮಕ್ಕಳೂ ಕೂಡಾ ಆಧುನಿಕ ತಂತ್ರಜ್ಞಾನವನ್ನು ಕಲಿಯುವಂತಾಗಬೇಕು. ಅವರೂ ಕೂಡಾ ತಂತ್ರಜ್ಞಾನದಲ್ಲಿ ಮುಂದುವರಿಯುವಂತಾಗಬೇಕು.

ಇಂಟರ್ನೆಟ್… ಇಂದು ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಶಿಕ್ಷಕರು ಮುಂದೆ ಬರುವುದಿಲ್ಲ, ವೈದ್ಯರು ರಾತ್ರಿಯ ಸಮಯದಲ್ಲಿ ಹಳ್ಳಿಗಳಲ್ಲಿ ಇರಲು ಬಯಸುವುದಿಲ್ಲ, ಆದರೆ ಯಾವ ರೀತಿಯ ಸೌಲಭ್ಯಗಳು ನಗರಗಳಲ್ಲಿ ದೊರೆಯುತ್ತಿವೆಯೋ, ಅದೇ ರೀತಿಯ ಸೌಲಭ್ಯಗಳು ಹಳ್ಳಿಗಳಲ್ಲಿ ದೊರಕುವಂತಾಗಬೇಕು.. ಹಳ್ಳಿಗಳ ನಲ್ಲಿಗಳಲ್ಲಿ ನೀರು ಬರುವಂತಾದರೆ, ಆಪ್ಟಿಕಲ್ ಫೈಬರ್ ನೆಟ್ ವರ್ಕ್, ಅಂತರ್ಜಾಲದೊಂದಿಗೆ ಸಂಪರ್ಕ ಸಾಧಿಸುವಂತಾಗಬೇಕು, ದಿನದ 24 ಗಂಟೆಗಳೂ ವಿದ್ಯುತ್ ಸೌಲಭ್ಯ ದೊರಕುವಂತಾಗಬೇಕು, ಒಲೆಯನ್ನು ಹೊತ್ತಿಸಲು ಅನಿಲ ಸಂಪರ್ಕವಿರಬೇಕು…. ಈ ರೀತಿಯ ಪ್ರಾಥಮಿಕ ಸೌಲಭ್ಯಗಳನ್ನು ನಾವು ಗ್ರಾಮೀಣ ಪ್ರದೇಶಗಳಿಗೆ ತಲುಪಿಸಲು ಸಫಲವಾಗುವಂತಾದರೆ, ಜೀವನ ಗುಣಮಟ್ಟದಲ್ಲಿ ಸುಧಾರಣೆಯಾಗಲಿದ್ದು ಇಂತಹ ಹಳ್ಳಿಗಳಲ್ಲಿ ಕೂಡಾ ಜನರು ವಾಸಿಸಲು ಇಚ್ಚೆಪಡುತ್ತಾರೆ. ಇಂತಹ ಹಳ್ಳಿಗಳಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಲು ಬಯಸುತ್ತಾರೆ, ವೈದ್ಯರು ಹಳ್ಳಿಗಳಲ್ಲಿ ವಾಸಿಸುತ್ತಾರೆ, ಸರ್ಕಾರಿ ನೌಕರರು ಹಳ್ಳಿಗಳಲ್ಲಿ ವಾಸಿಸುತ್ತಾರೆ, ಇವರುಗಳ ವಾಸ್ತವ್ಯ ಕೂಡಾ ಹಳ್ಳಿಗಳ ಬದಲಾವಣೆಯಲ್ಲಿ ಒಂದು ಮಹತ್ವಪೂರ್ಣ ಪಾತ್ರವಹಿಸುತ್ತದೆ. ಆದುದರಿಂದ ಮಹಾತ್ಮಾಗಾಂಧಿಜಿಯವರು ಕಂಡ ಕನಸು, ದೀನ್ ದಯಾಳ್ ಉಪಾಧ್ಯಾಯ ಅವರ ಚಿಂತನೆಗಳು, ನಾನಾಜೀ ಮತ್ತು ಜಯಪ್ರಕಾಶ್ ನಾರಾಯಣ್ ಅವರುಗಳು ಯಾವ ಉನ್ನತ ವಿಚಾರಗಳನ್ನು ಇಟ್ಟುಕೊಂಡು ಜೀವಿಸಿದ್ದರೋ, ಈ ಆದರ್ಶಗಳನ್ನು ಇಟ್ಟುಕೊಂಡು ನಾವೂ ಕೂಡಾ ಗ್ರಾಮೀಣ ಜೀವನದಲ್ಲಿ ಬದಲಾವಣೆ ತರಲು ಮಹತ್ವಪೂರ್ಣ ಹೆಜ್ಜೆಯನ್ನಿಟ್ಟು ಮುಂದುವರೆಯಬೇಕಿದೆ.

ನಮ್ಮ ದೇಶದಲ್ಲಿ ಸಂಪನ್ಮೂಲಗಳ ಕೊರತೆಯ ಕಾರಣದಿಂದ ಕೊನೆಯ ಹಂತದ ಜನಗಳನ್ನು ನಾವು ಮುಟ್ಟಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಈ ಮಾತನ್ನು ನಾವು ಒಪ್ಪಲು ಸಾಧ್ಯವಿಲ್ಲ. ಹಿಂದೂಸ್ತಾನದ ಕೊನೆಯ ಹಂತದ ವ್ಯಕ್ತಿಯ ಹಕ್ಕನ್ನು ಅವರಿಗೆ ನಾವು ತಲುಪಿಸಬೇಕಾದರೆ ಅದಕ್ಕೆ ಯಾವುದೇ ಸಂಪನ್ಮೂಲದ ಕೊರತೆ ಇಲ್ಲ. ಕೊರತೆ ಇರುವುದು ಆಡಳಿತದಲ್ಲಿ ಎಂದು ನಿರ್ಧರಿಸಿದೆವು. ಯಾವ ಯಾವ ರಾಜ್ಯಗಳಲ್ಲಿ ಉತ್ತಮ ಆಡಳಿತವಿದೆಯೋ, ನಿಗದಿತ ಅವಧಿಯಲ್ಲಿ ನಿರ್ಧಾರಿತ ಗುರಿ ಮುಟ್ಟುವ ಮನಸ್ಸು ಮಾಡಿದರೆ ಬದಲಾವಣೆ ಕಂಡು ಬರುತ್ತದೆ. ಈಗ ತಾವು ಮನರೇಗಾವನ್ನು ಗಮನಿಸಬಹುದು, ಈ ಯೋಜನೆ ರೂಪುಗೊಂಡಿರುವುದು ಗ್ರಾಮೀಣ ಪ್ರದೇಶಗಳಿಗಾಗಿ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ನೀಡುವುದಕ್ಕಾಗಿ. ಆದರೆ ಯಾವ ಯಾವ ರಾಜ್ಯಗಳಲ್ಲಿ ಬಡವರು ಹೆಚ್ಚಾಗಿದ್ದಾರೋ ಅಂತಹ ರಾಜ್ಯಗಳಲ್ಲಿ ಮನರೇಗಾ ಕಾರ್ಯ ಕಡಿಮೆ ಇದೆ. ಯಾವ ರಾಜ್ಯಗಳಲ್ಲಿ ಕಡಿಮೆ ಬಡತನವಿದೆಯೋ, ಅಲ್ಲಿ ಒಳ್ಳೆಯ ಆಡಳಿತವಿದ್ದು, ಆ ರಾಜ್ಯ ಪ್ರಗತಿಯಲ್ಲಿದೆ. ಹೆಚ್ಚು ಹೆಚ್ಚು ಯೋಜನೆಗಳನ್ನು ರೂಪಿಸುತ್ತವೆ, ಹೆಚ್ಚು ಹೆಚ್ಚು ಜನರನ್ನು ಒಟ್ಟುಗೂಡಿಸಿ ಅಧಿಕ ಕಾರ್ಯ ನಿರ್ವಹಿಸಲಾಗುತ್ತಿದೆ. ಆದುದರಿಂದ ಗ್ರಾಮೀಣ ಅಭಿವೃದ್ಧಿಗಾಗಿ ಒಳ್ಳೆಯ ಆಡಳಿತ ಇದು ನಮ್ಮ ಸರ್ಕಾರದ ಸತತ ಪ್ರಯತ್ನವಾಗಿದೆ. ಇಂದು ತಮ್ಮೆದುರು ಪ್ರಸ್ತುತಪಡಿಸಿದ ದಿಶಾ ಹೆಸರಿನ ಡಿಜಿಟಲ್ ಡ್ಯಾಷ್ ಬೋರ್ಡ್ ಕೂಡಾ ಒಳ್ಳೆಯ ಆಡಳಿತದ ದಿಕ್ಕಿನಲ್ಲಿ ಒಂದು ಉತ್ತಮ ಹೆಜ್ಜೆ.

ಈ ಕಾರಣದಿಂದ ಎಲ್ಲ ಕಾರ್ಯಗಳನ್ನು ಕೇಂದ್ರ ಸ್ಥಾನದಲ್ಲಿ ಕುಳಿತು ಗಮನಿಸಬಹುದಾಗಿದ್ದು, ನಿಗದಿತ ಸಮಯದಲ್ಲಿ ಪ್ರಗತಿ ಪರಿಶೀಲನೆ ಮಾಡಿ, ಕೊರತೆಗಳಿದ್ದಲ್ಲಿ ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದ್ದು, ನೀತಿಗಳಲ್ಲಿ ತೊಂದರೆ ಇದ್ದಲ್ಲಿ, ನೀತಿಗಳನ್ನು ಸರಿಪಡಿಸಬಹುದಾಗಿದೆ, ವ್ಯಕ್ತಿ ದೋಷವಿದ್ದರೆ, ವ್ಯಕ್ತಿಗಳನ್ನೂ ಕೂಡಾ ಸರಿಪಡಿಸಬಹುದಾದ, ಈ ದಿಶಾ ಹೆಸರಿನ ವ್ಯವಸ್ಥೆಯಿಂದ ಎಲ್ಲ ಯೋಜನೆಗಳ ಮೇಲುಸ್ತುವಾರಿಯ ಕಾರ್ಯ ದೇಶದ ಎಲ್ಲ ಹಳ್ಳಿಗಳಿಗೆ ಲಭಿಸುತ್ತದೆ. ಭಾರತ ಸರ್ಕಾರದ ನೀತಿ, ರಾಜ್ಯ ಸರ್ಕಾರಗಳ ಯೋಜನೆಗಳು, ಸಂಸತ್ ಸದಸ್ಯನ ಕ್ಷೇತ್ರ, ಜಿಲ್ಲಾ ಘಟಕಗಳು, ಇವೆಲ್ಲವನ್ನು ಒಂದೇ ಸೂತ್ರದಡಿ ಜೋಡಿಸಬಹುದಾಗಿದೆ. ಯೋಜನೆಗಳಿಗೆ ಪ್ರಾಶಸ್ತ್ಯ ನೀಡಿದಲ್ಲಿ ಯೋಜಿತ ಫಲಿತಾಂಶ ದೊರೆಯುತ್ತದೆ. ಆದುದರಿಂದ ಈ ದಿಶಾ ಯೋಜನೆಯಡಿ ಎಲ್ಲ ಜನಪ್ರತಿನಿಧಿಗಳನ್ನು ಸಕ್ರಿಯವಾಗಿ ಒಟ್ಟುಗೂಡಿಸುವ ಕಾರ್ಯವನ್ನು ಭಾರತ ಸರ್ಕಾರ ಕೈಗೆತ್ತಿಕೊಂಡಿದೆ, ಸಂಸತ್ ಸದಸ್ಯ ಜಿಲ್ಲಾ ಘಟಕಗಳ ಪ್ರತಿನಿಧಿಗಳೊಂದಿಗೆ ಕುಳಿತುಕೊಂಡು ಈ ಎಲ್ಲಾ ಯೋಜನೆಗಳ ಕಾರ್ಯ ಪ್ರಗತಿ ಪರಿಶೀಲನೆ ನಡೆಸುತ್ತಾರೆ. ಅಲ್ಲಿನ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಾಶಸ್ತ್ಯವನ್ನು ನಿರ್ಧರಿಸಲಾಗುತ್ತದೆ. ಯಾವುದೇ ವಿಷಯಗಳನ್ನು ಇಲ್ಲಿಂದ ಹೇರಲು ಸಾಧ್ಯವಿಲ್ಲ. ಈ ಕಾರಣದಿಂದ ಯೋಜನೆಗಳಿಗೆ ವೇಗ ನೀಡುವಲ್ಲಿ ನಾವು ಸಫಲರಾಗಿದ್ದೇವೆ. ಪ್ರಜಾಪ್ರಭುತ್ವದ ಸಫಲತೆ ಎಷ್ಟು ಜನ ಮತಕೇಂದ್ರಗಳಿಗೆ ತೆರಳುತ್ತಾರೆ, ಎಷ್ಟು ಜನ ಮತಪೆಟ್ಟಿಗೆಯಲ್ಲಿ ತಮ್ಮ ಮತ ಚಲಾಯಿಸುತ್ತಾರೆ ಎಂಬುದಷ್ಟಕ್ಕೆ ಸೀಮಿತವಾಗಿತ್ತು. ದೌರ್ಭಾಗ್ಯವಶಾತ್ ಅನೇಕ ವರ್ಷಗಳಿಂದ ನಾವು, ಐದು ವರ್ಷಗಳಿಗೊಮ್ಮೆ ಮತಕೇಂದ್ರಕ್ಕೆ ತೆರಳುವುದು ಮತಪೆಟ್ಟಿಗೆಯಲ್ಲಿ ಮತ ಚಲಾಯಿಸುವುದು ಅಥವಾ ಮತಯಂತ್ರದ ಗುಂಡಿಯನ್ನು ಒತ್ತುವುದಷ್ಟಕ್ಕೆ ಪ್ರಜಾಪ್ರಭುತ್ವವನ್ನು ಸೀಮಿತಗೊಳಿಸಿದ್ದೇವೆ. ನಂತರ ಯಾವುದೇ ಸರ್ಕಾರ ಆಯ್ಕೆಯಾಗಲಿ, ಯಾವುದೇ ಸಂಸ್ಥೆಗಳು ಆಯ್ಕೆಯಾಗಲಿ, ಪಂಚಾಯತಿಗಳು ಚುನಾಯಿತವಾಗಲಿ ಅವರು ನಮ್ಮ ಐದು ವರ್ಷಗಳ ಭಾಗ್ಯವನ್ನು ನಿರ್ಧರಿಸುತ್ತಾರೆ.

ಪ್ರಜಾಪ್ರಭುತ್ವವನ್ನು ಇಷ್ಟಕ್ಕೆ ಸೀಮಿತಗೊಳಿಸುವುದು ಸಾಧ್ಯವಿಲ್ಲವೆಂಬುದು ನನ್ನ ಅಭಿಪ್ರಾಯ. ತಮಗೆ ಇಷ್ಟವಾದ ಸರ್ಕಾರವನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ಕಾರ್ಯ. ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ದೇಶ ಮುನ್ನಡೆದಾಗ ಮಾತ್ರ ಪ್ರಜಾಪ್ರಭುತ್ವ ಸಫಲವಾಗುತ್ತದೆ. ಜನರ ಪಾಲ್ಗೊಳ್ಳುವಿಕೆಯಿಂದ ಹಳ್ಳಿಗಳ ಅಭಿವೃದ್ಧಿ ಯಾತ್ರೆ ನಡೆಯಬೇಕಾಗಿದೆ, ಜನರ ಪಾಲ್ಗೊಳ್ಳುವಿಕೆಯಿಂದ ನಗರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದುದರಿಂದ ಸಾರ್ವಜನಿಕರೊಡನೆ ಸರ್ಕಾರದ ಸಂವಾದ ಅಗತ್ಯವಾಗಿದೆ. ಉನ್ನತ ಹಂತದಿಂದ ಸರಿಯಾದ ಮಾರ್ಗದರ್ಶನ ಕೆಳ ಹಂತಕ್ಕೆ ತಲುಪಬೇಕಾಗಿದೆ. ಮೇಲಿನ ಹಂತದಿಂದ ಕೆಳ ಹಂತಕ್ಕೆ ಸರಿಯಾದ ಮಾಹಿತಿ ದೊರಕಬೇಕಾಗಿದೆ. ಈ ಎರಡೂ ಹಂತದ ವ್ಯವಸ್ಥೆಗಳೂ ಸರಿಯಾಗಿದ್ದರೆ, ಎಲ್ಲ ಯೋಜನೆಗಳು, ನೀತಿಗಳು, ಹಾಗೂ ಬಜೆಟ್ ಹಂಚಿಕೆ ಈ ಎಲ್ಲವೂ ನಿಗದಿತ ಸ್ಥಳದಲ್ಲಿ ದೊರಕುವಂತಾಗಬೇಕು. ಈ ಕಾರಣದಿಂದಾಗಿಯೇ, ಒಂದು ಮೊಬೈಲ್ ಆಪ್ ಮೂಲಕ, ಗ್ರಾಮೀಣ ಸಂವಾದದ ಮುಖಾಂತರ, ಹಳ್ಳಿಯ ವ್ಯಕ್ತಿ ತನ್ನ ಮೊಬೈಲ್ ಫೋನ್ ಮೂಲಕ ಸರಿಯಾದ ಮಾಹಿತಿಯನ್ನು ಮೇಲಿನವರಿಗೆ ತಲುಪಿಸುತ್ತಾನೆ. ಮೇಲಿನವರಿಂದ ಕೊನೆಯ ಹಂತದ ವ್ಯಕ್ತಿಯವರೆಗೆ ಸರಿಯಾದ ಮಾರ್ಗದರ್ಶನ ತಲುಪುತ್ತದೆ, ಇದರಿಂದಾಗಿ ಸ್ಥಾನೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಸ್ಥರಿಗೆ ಒತ್ತಡ ಹೆಚ್ಚುತ್ತದೆ. ಹಳ್ಳಿಯ ವ್ಯಕ್ತಿ ಅಧಿಕಾರಿಗಳಿಗೆ ತಾವು ನೀಡುತ್ತಿರುವ ಯೋಜನೆ ಮಾಹಿತಿ ಮತ್ತು ತನ್ನ ಮೊಬೈಲ್ ಆಪ್ ನಲ್ಲಿ ಬರುತ್ತಿರುವ ಮಾಹಿತಿ ತಮಗೆ ಏಕೆ ದೊರಕುತ್ತಿಲ್ಲವೆಂದು ಪ್ರಶ್ನಿಸುತ್ತಾನೆ. ಜನರನ್ನು ಜಾಗೃತರನ್ನಾಗಿಸುವ ಒಂದು ಮಹತ್ವಪೂರ್ಣ ಕಾರ್ಯ ಈ ಆಪ್ ಮೂಲಕ ತಂತ್ರಜ್ಞಾನದ ಸಹಾಯದಿಂದ ಜನತೆಗೆ ತಲುಪುತ್ತಿದೆ. ಜನತೆಯೊಂದಿಗೆ ಸಂವಾದವನ್ನು ಹೆಚ್ಚಿಸುತ್ತಾ, ಅವರ ಅವಶ್ಯಕತೆಗಳನ್ನು ಅರಿತುಕೊಂಡು, ಯೋಜನೆಗಳಿಗೆ ದಿಕ್ಕು ತೋರಿಸುವುದು, ಯೋಜನೆಗಳಿಗೆ ಹೆಚ್ಚು ವೇಗ ನೀಡುವತ್ತ ನಾವು ಪ್ರಯತ್ನಶೀಲರಾಗಿದ್ದೇವೆ.

ಇಂದು ದೇಶದ ಹಲವೆಡೆ ಯೋಜನೆಯ ಉದ್ಘಾಟನೆಯಾಗಿದೆ. ಅದೇ ರೀತಿ ಇಂದು ಇದೇ ಸ್ಥಳದಲ್ಲಿ ಕೃಷಿ ವಿಭಾಗದ ಧ್ವನಿ ವಿಜ್ಞಾನ ಕೇಂದ್ರದ ಒಂದು ದೊಡ್ಡ ಮಹತ್ವಪೂರ್ಣ ಕೇಂದ್ರದ ಉದ್ಘಾಟನೆ ಕೂಡಾ ಆಗಿದೆ. ನಮ್ಮ ದೇಶದಲ್ಲಿ ಕೃಷಿ ಮತ್ತು ಪಶುಪಾಲನಾ ಕ್ಷೇತ್ರಗಳು ಗ್ರಾಮೀಣ ಅರ್ಥವ್ಯವಸ್ಥೆಯ ಕೇಂದ್ರಬಿಂದುಗಳಾಗಿವೆ. ಜತೆ ಜತೆಗೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿರುವ ಕುಶಲಕರ್ಮಿಗಳೂ ಕೂಡಾ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಆದುದರಿಂದ ಪಶುಪಾಲನೆ ಇರಲಿ, ಕೃಷಿ ಇರಲಿ, ಕರಕುಶಲ ಕಾರ್ಯವಿರಲಿ, ಕುಶಲಕರ್ಮಿಗಳಿರಲಿ, ಅವರೆಲ್ಲರನ್ನೂ ಒಟ್ಟುಗೂಡಿಸಿ ನಾವು ನಮ್ಮ ಅರ್ಥವ್ಯವಸ್ಥೆಯ ಬುನಾದಿಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಿದ್ದೇವೆ. 2022 ರಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಸಂದರ್ಭದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ನಾವೊಂದು ಸಂಕಲ್ಪ ಮಾಡಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಒಂದು ಕಡೆ ರೈತರ ಒಳವೆಚ್ಚವನ್ನು ನಾವು ಕಡಿಮೆ ಮಾಡಬೇಕಿದೆ. ಮತ್ತೊಂದೆಡೆ ಅವನ ಉತ್ಪಾದನೆಯನ್ನು ಹೆಚ್ಚಿಸಬೇಕಿದೆ. ಈ ಎರಡೂ ಕಾರ್ಯಗಳನ್ನು ಸಾಧಿಸಬೇಕಾದರೆ ನಾವು ತಂತ್ರಜ್ಞಾನದ ಸಹಾಯವನ್ನು ಪಡೆಯಬೇಕಿದೆ. ನಾವು ಆಧುನಿಕತೆಯೆಡೆಗೆ ತೆರಳಬೇಕಿದೆ. ಪಶುಪಾಲನೆ… ಪಶುಗಳ ಸಂಖ್ಯೆ ಕಡಿಮೆ ಇರಬಹುದು, ಆದರೆ ಹಾಲಿನ ಉತ್ಪಾದನೆ ಹೆಚ್ಚಾಗಬೇಕು, ಪ್ರತಿ ಪಶುವಿನ ಹಾಲು ಉತ್ಪಾದನೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಎಷ್ಟು ವೇಗದಲ್ಲಿ ಮುನ್ನಡೆಯುತ್ತೇವೆಯೋ ಅಷ್ಟು ವೇಗವಾಗಿ ಅರ್ಥವ್ಯವಸ್ಥೆ ಮುನ್ನಡೆಯಲಿದೆ. ವಿಶ್ವದೆಲ್ಲೆಡೆ ಇಂದು ರಾಸಾಯನಿಕ ಮೇಣದ ಬದಲಿಗೆ ಜೇನಿನ ಮೇಣಕ್ಕೆ ಹೆಚ್ಚು ಬೇಡಿಕೆ ಇದೆ. ಜನತೆ ರಾಸಾಯನಿಕ ಮೇಣದ ಬದಲು ಜೇನುಹುಳುಗಳಿಂದ ಉತ್ಪಾದನೆಯಾಗುವ ಮೇಣದ ಕಡೆ ವಾಲುತ್ತಿದ್ದಾರೆ. ನಾವು ಗ್ರಾಮೀಣ ಪ್ರದೇಶಗಳಲ್ಲಿ ಜೇನು ಕೃಷಿಗೆ ಒತ್ತು ನೀಡಬೇಕಿದೆ. ವೈಜ್ಞಾನಿಕವಾಗಿ ಜೇನುnOನೊಣಗಳನ್ನು ಸಾಕುವುದು ಹಾಗೂ ನಮ್ಮ ರೈತರು ಪಶುಪಾಲನೆಗೆ ಒತ್ತು ನೀಡುವುದರಿಂದ ಹೆಚ್ಚುವರಿ ಆದಾಯ ಗಳಿಸಬಹುದಾಗಿದೆ. ಇಂದು ಮಾರುಕಟ್ಟೆಯಲ್ಲಿ ಜೇನು ಮೇಣಕ್ಕೆ ಹೆಚ್ಚಿನ ಬೇಡಿಕೆ ಇದ್ದು, ರಾಸಾಯನಿಕ ಮೇಣದಿಂದ ಜನತೆ ಮುಕ್ತರಾಗಬಯಸುತ್ತಿದ್ದಾರೆ.

ವಿಶ್ವ ಮಾರುಕಟ್ಟೆಯಲ್ಲಿ ಭಾರತ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ನಿಟ್ಟಿನಲ್ಲಿ ನಾವು ಮುಂದುವರೆಯಬೇಕಾಗಿದೆ. ನಮ್ಮಲ್ಲಿ ಮತ್ಸ್ಯೋದ್ಯಮವಿರಲಿ, ಕೋಳಿಸಾಗಣೆ ಇರಲಿ, ಪಶುಪಾಲನೆ ಇರಲಿ, ನಮ್ಮಲ್ಲಿ ಕೃಷಿ ಇರಲಿ, ಅದರಲ್ಲೂ ಕೃಷಿಯ ಜತೆ ಜತೆಗೆ ಟಿಂಬರ್ ಕೃಷಿಯನ್ನು ಅಳವಡಿಸಿಕೊಳ್ಳಬೇಕಿದೆ. ಕೃಷಿ ಜಮೀನಿನ ಅಂಚಿನಲ್ಲಿ ಟಿಂಬರ್ ವ್ಯವಸಾಯ ಮಾಡಿದರೆ, ದೇಶ ಇಂದು ಮಾಡಿಕೊಳ್ಳುತಿರುವ ಟಿಂಬರ್ ಆಮದು ಕಡಿಮೆಯಾಗುತ್ತದೆ. ದೇಶದ ರೈತರು ಟಿಂಬರ್ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಿಕೊಳ್ಳಬಹುದಾಗಿದ್ದು, ಆತನ ಕುಟುಂಬ ಎಂದೂ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವುದಿಲ್ಲ. ಐದು – ಹತ್ತು ವರ್ಷಗಳ ಪರಿಶ್ರಮ ಪಡಬೇಕಾಗಬಹುದು, ನಂತರ ತನ್ನಿಂತಾನೆ ಫಲಿತಾಂಶ ಹೊರಬರಲು ಪ್ರಾರಂಭವಾಗುತ್ತದೆ. ಹೀಗೆ ಸಮಗ್ರ ಸಂಯೋಜಿತ ವಿಧಾನದ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಕೆಲವೊಂದು ಕಾರ್ಯಗಳನ್ನು ನಾವು ನಿರ್ಧಾರಿತ ಸಮಯದಲ್ಲಿ ಮಾಡಲು ಇಚ್ಚಿಸುತ್ತೇವೆ. ಈ ಮೊದಲು ಗ್ರಾಮೀಣ ಜನರ ಜೀವನದ ಜತೆಗೆ ಕೊಳಚೆಯೂ ಒಂದು ಭಾಗವಾಗಿತ್ತು. ತಮ್ಮ ಅದೃಷ್ಟದಲ್ಲಿರುವುದು ಇಷ್ಟೇ ಎಂದು ಅಲ್ಲಿನ ಜನತೆ ಇವೆಲ್ಲವನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಕ್ರಮೇಣ ಜನರಲ್ಲಿ ಜಾಗೃತಿ ಮೂಡಿ ಬದಲಾವಣೆ ಪ್ರಾರಂಭವಾಯಿತು.

ಹಳ್ಳಿಗಳ ಸಹೋದರಿಯರ ಗೌರವವನ್ನು ಕಾಪಾಡುವ ದೃಷ್ಟಿಯಿಂದ “ಬಹಿರ್ದೆಶೆ ಮುಕ್ತ” ಆಂದೋಲನವನ್ನು ಪ್ರಾರಂಭಿಸಲಾಯಿತು. ಶೌಚಾಲಯಗಳನ್ನು ನಿರ್ಮಿಸುವ ಕಾರ್ಯ ಪ್ರಾರಂಭಿಸಲಾಯಿತು, ನಿಗದಿತ ಸಮಯದೊಳಗೆ ಶೌಚಾಲಯಗಳ ನಿರ್ಮಿಸುವ ಕಾರ್ಯ ಪ್ರಾರಂಭವಾಯಿತು. ಪರಿಸ್ಥಿತಿ ಕ್ರಮೇಣ ಬದಲಾಗತೊಡಗಿದೆ. ನಿನ್ನೆ ಮೊನ್ನೆಯವರೆಗೆ ನಾವು ಶೌಚಾಲಯಗಳೆಂದು ಕರೆಯುತ್ತಿದ್ದ ಸ್ಥಳವನ್ನು ಇಂದು ಉತ್ತರಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಗೌರವದ ಮನೆಗಳೆಂದು ಕರೆಯಲಾಗುತ್ತಿದೆ. ಶೌಚಾಲಯಗಳ ಮೇಲೆ ಗೌರವದ ಮನೆ ಎಂದು ಬರೆಯಲಾಗಿದೆ. ಮಾತೆಯರು ಮತ್ತು ಸಹೋದರಿಯರ ಗೌರವಕ್ಕಾಗಿ ಇದಕ್ಕಿಂತ ಹೆಚ್ಚಿನ ಕೊಡುಗೆ ಮತ್ತೊಂದಿಲ್ಲ, ನಾವು ಶೌಚಾಲಯಗಳನ್ನು ನಿರ್ಮಿಸಿ ಕೊಡುತ್ತಿದ್ದೇವೆ. ನಮ್ಮ ಮಾತೆಯರು, ಸಹೋದರಿಯರಿಗೆ ಶೌಚ ಕಾರ್ಯಕ್ಕಾಗಿ ಬಯಲು ಪ್ರದೇಶಗಳಿಗೆ ಹೋಗುವಂತಹ, ಸೂರ್ಯ ಮುಳುಗುವುದನ್ನೇ ಕಾಯುವಂತಹ, ಮುಂಜಾನೆ ಸೂರ್ಯೋದಯಕ್ಕಿಂತ ಮೊದಲೇ ಹೋಗಿ ಬರುವಂತಹ, ಬೆಳಗಿನ ಸಮಯದಲ್ಲಿ ಹೋಗಲೇ ಆಗದಂತಹ ಪರಿಸ್ಥಿತಿ, ಇಂತಹ ಸ್ಥಿತಿಯಲ್ಲಿ ಮಹಿಳೆಯರ ಪರಿಸ್ಥಿತಿ ಹೇಗಿದ್ದಿರಬಹುದು, ಎಲ್ಲಿಯತನಕ ನಾವು ಈ ನೋವುಗಳನ್ನು ಅರಿಯುವುದಿಲ್ಲವೋ ಅಲ್ಲಿಯ ತನಕ ಬಹಿರ್ದೆಶೆ ಮುಕ್ತ ಆಂದೋಲನ ಸಫಲವಾಗುವುದಿಲ್ಲ. ಆದುದರಿಂದ ಯಾವಾಗಲಾದರೂ ಶೌಚಾಲಯ ನಿರ್ಮಾಣದ ಮಾತು ಬಂದಾಗ, ಈ ಮಹಿಳೆಯರ ಗೌರವದತ್ತ ಒಮ್ಮೆ ನೋಡಿ, ಆ ಮಾತೆಯರು, ಸಹೋದರಿಯರಿಗೆ ಆಗುತ್ತಿರುವ ತೊಂದರೆಗಳತ್ತ ನೋಡಿ, ಆಗ ತಾವೇ, ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ, ಭಾರತ ಸರ್ಕಾರದ ಯೋಜನೆಗಳಿಂದ ಶೌಚಾಲಯ ನಿರ್ಮಾಣ ಮಾಡಬೇಕೆಂಬ, ಶೌಚಾಲಯಗಳ ಉಪಯೋಗ ಪಡೆದುಕೊಳ್ಳಬೇಕೆಂಬ ಅರಿವುಂಟಾಗುತ್ತದೆ.

ಎರಡೂವರೆ ಲಕ್ಷಕ್ಕೂ ಅಧಿಕ ಹಳ್ಳಿಗಳು ಬಹಿರ್ದೆಶೆ ಮುಕ್ತವಾಗಲು ಮುಂದೆ ಬಂದಿದ್ದು, ಕಾರ್ಯ ಮಾಡಿ ತೋರಿಸಿವೆ. ನಾನು ಆ ಹಳ್ಳಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆ ಹಳ್ಳಿಗಳು ಮಾತೆಯರು ಮತ್ತು ಸಹೋದರಿಯರ ಗೌರವವನ್ನು ರಕ್ಷಿಸುವ ದಿಶೆಯಲ್ಲಿ ಒಂದು ದೊಡ್ಡ ಹೆಜ್ಜೆಯನ್ನಿಟ್ಟಿವೆ. ಮಾತೆಯರು ಮತ್ತು ಸಹೋದರಿಯರ ಗೌರವವನ್ನು ಕಾಪಾಡುವ ಹಳ್ಳಿಗಳು ನನ್ನ ದೃಷ್ಟಿಯಲ್ಲಿ ಪುಣ್ಯಸ್ಥಳಗಳಾಗಿವೆ. ಈ ಮಹತ್ವಪೂರ್ಣ ಕಾರ್ಯ ಮಾಡಿದ ಆ ಹಳ್ಳಿಗಳಿಗೆ ನಾನು ನಮಿಸುತ್ತೇನೆ, ಆ ಹಳ್ಳಿಗಳ ನಾಗರಿಕರಿಗೆ ನಮನ ಸಲ್ಲಿಸುತ್ತೇನೆ,

ಸ್ವಚ್ಚತೆ ಇಂದು ಹಳ್ಳಿಗಳ ಸ್ವಭಾವವಾಗುತ್ತಿದೆ. ಹಳ್ಳಿಗಳೂ ಕೂಡಾ ಜವಾಬ್ಧಾರಿಗಳನ್ನು ತೆಗೆದುಕೊಳ್ಳುತ್ತಿವೆ. ಸ್ವಾತಂತ್ರ ಬಂದು 70 ವರ್ಷಗಳ ನಂತರವೂ ನಮ್ಮ ದೇಶದ 18 sಸಾವಿರ ಹಳ್ಳಿಗಳು ಇಂದೂ ಕೂಡಾ 18ನೇ ಶತಮಾನದಲ್ಲಿ ಜೀವಿಸುತ್ತಿವೆ.ವಿದ್ಯುತ್ ಕಂಬಗಳಿಲ್ಲ, ವಿದ್ಯುತ್ ಸಂಪರ್ಕವಿಲ್ಲ, ಈ ಹಳ್ಳಿಗಳು ಎಂದೂ ವಿದ್ಯುತ್ ನೋಡಿಲ್ಲ. ನಾವು ಸವಾಲನ್ನು ಸ್ವೀಕರಿಸಿದೆವು. ನಾನು ಕೆಂಪುಕೋಟೆಯ ಮೇಲಿನಿಂದ ಮಾಡಿದ ಭಾಷಣದಲ್ಲಿ ಒಂದು ಸಾವಿರ ದಿನದಲ್ಲಿ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡುವುದಾಗಿ ಘೋಷಣೆ ಮಾಡಿದ್ದೆ. ರಾಜ್ಯ ಸರ್ಕಾರಗಳೂ ಇದರಲ್ಲಿ ಕೈಜೋಡಿಸಿದವು, ಭಾರತ ಸರ್ಕಾರ ಈ ಕಾರ್ಯಕ್ಕೆ ವೇಗ ನೀಡಿತು, ಇಂದು 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಗುರಿಯನ್ನು ಪೂರ್ಣ ಮಾಡುವತ್ತ ನಾವು ಮುಂದುವರೆದಿದ್ದೇವೆ, ಸರಿ ಸುಮಾರು 15 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ದೊರೆತಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ.

ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ದೊರೆಯಿತು ಎಂದಾಕ್ಷಣ ನಾವು ಅಲ್ಲಿಗೇ ನಿಲ್ಲುವುದಿಲ್ಲ, ಹಳ್ಳಿಗಳಾಗಲಿ, ನಗರಗಳಾಗಲಿ ಅಥವಾ ಗುಡಿಸಲೇ ಆಗಲಿ ಎಲ್ಲ ಮನೆಗಳಲ್ಲೂ ವಿದ್ಯುತ್ ದೀಪಗಳಿರಬೇಕು. ದಿನದ 24 ಗಂಟೆಗಳೂ ವಿದ್ಯುತ್ ಸಂಪರ್ಕವಿರಬೇಕು, ದೊಡ್ಡ ಸವಾಲನ್ನು ಸ್ವೀಕರಿಸಿದ್ದೇವೆ. ಈ ಮೊದಲು ಬಡ ಕುಟುಂಬಗಳು ಮನೆಗೆ ವಿದ್ಯುತ್ ಸಂಪರ್ಕ ನೀಡಲು ಹಣ ನೀಡಬೇಕಾಗಿತ್ತು. ಉಚಿತವಾಗಿ ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ನೀಡಲು ನಾವು ನಿರ್ಧರಿಸಿದೆವು. ಒಂದು ಸಲ ವಿದ್ಯುತ್ ಸಂಪರ್ಕ ದೊರೆತರೆ ಅವರ ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆ ಬರಬಹುದೆಂಬ ವಿಶ್ವಾಸ ನನಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸೌಲಭ್ಯ ಹೆಚ್ಚಾಗುವುದು, ಕುಟುಂಬ ಜೀವನ ಬದಲಾಗುವುದು, 24 ಗಂಟೆ ವಿದ್ಯುತ್ ನೀಡುವ ಗುರಿಯನ್ನಿಟ್ಟುಕೊಂಡು ಅದನ್ನು ಪೂರ್ಣ ಮಾಡುವತ್ತ ನಾವು ಮುನ್ನಡೆಯುತ್ತಿದ್ದೇವೆ. ಹಿಂದೂಸ್ತಾನದ ಗ್ರಾಮೀಣ ಜನರ ಜೀವನ ಕ್ರಮವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ, ನಮ್ಮ ಗ್ರಾಮೀಣ ಜನರು ಉತ್ಪಾದನೆ ಮಾಡುವ ವಸ್ತುಗಳನ್ನು ನಗರ ಪ್ರದೇಶಗಳಲ್ಲಿ ಪರಿಚಯಿಸುವ ಅವಶ್ಯಕತೆ ಇದೆ. ಸಾಮಾನ್ಯ ವ್ಯಕ್ತಿಗಳು ತಮ್ಮ ಕೈಯಿಂದ ಮಾಡಿದ ಉತ್ಪನ್ನಗಳು, ನಗರದ ದೊಡ್ಡ ದೊಡ್ಡ ಮನೆಗಳಲ್ಲಿ ಸ್ವಲ್ಪವಾದರೂ ಉಪಯೋಗವಾದರೆ, ಗ್ರಾಮೀಣ ಅರ್ಥವ್ಯವಸ್ಥೆಗೆ ಬಲ ದೊರಕುವುದು. ದೀಪಾವಳಿಗೆ ನಮ್ಮ ಕುಂಬಾರರು ಮಾಡಿದ ದೀಪಗಳನ್ನು ಉಪಯೋಗಿಸುವುದರಿಂದ ನಮ್ಮ ಕುಂಬಾರರ ಮನೆಗಳಲ್ಲೂ ದೀಪಾವಳಿಯ ದೀಪ ಬೆಳಗುವುದು. ಇದು ನಮಗೆ ಕಷ್ಟದ ಕಾರ್ಯವೇನಲ್ಲ. ನಾವು ನಗರಗಳಲ್ಲಿ ವಾಸಿಸುವ ಜನರು, ಗ್ರಾಮೀಣ ಅರ್ಥವ್ಯವಸ್ಥೆಯ ದೃಷ್ಟಿಯಿಂದ ನಮ್ಮ ಜೀವನಾವಶ್ಯಕತೆಗಳನ್ನು ವಿಸ್ತರಿಸಿದರೆ, ಹೊಸತನದ ಅನುಭವವಾಗುವುದು. ಒಂದು ಜೀವನದಲ್ಲಿ ಸಂತೋಷದ ಭಾವ ಉತ್ಪನ್ನವಾಗುವುದು.

ಆದುದರಿಂದ ನಗರಗಳು, ಹಳ್ಳಿಗಳಿಗೆ ಮಾರುಕಟ್ಟೆ ಸ್ಥಳಗಳಾಗಬೇಕು. ಅಂದರೆ ಹಳ್ಳಿಗಳಿಂದ ಬರುವ ದವಸದಾನ್ಯಗಳಿಗೆ ನಗರ ಮಾರುಕಟ್ಟೆ ಸ್ಥಳವಾಗಬೇಕು ಎಂದಲ್ಲ, ಹಳ್ಳಿಗಳಲ್ಲಿ ಉತ್ಪಾದನೆಯಾಗುವ ಎಲ್ಲ ವಸ್ತುಗಳು, ನಗರಗಳಿಗೆ ಮಾರುಕಟ್ಟೆ ಸ್ಥಳಗಳಾಗಿ ಅಭಿವೃದ್ಧಿಯಾಗುತ್ತವೆ. ಹೀಗಾದಾಗ ಎಂದೂ ನಮ್ಮ ಹಳ್ಳಿಗಳು ಬಡತನದಿಂದ ಇರುವುದಿಲ್ಲ, ಹಳ್ಳಿಗಳ ಯಾವುದೇ ಕುಟುಂಬಗಳು ಬಡತನದಲ್ಲಿ ಜೀವಿಸುವುದಿಲ್ಲ, ಪಂಡಿತ ದೀನ ದಯಾಳ್ ಉಪಾದ್ಯಾಯ ಅವರು ಕಂಡಿದ್ದ ಅಂತ್ಯೋದಯದ ಕನಸನ್ನು ನಾವು ಪೂರ್ಣ ಮಾಡುತ್ತೇವೆ. ಇಂದು ನಾನಾಜೀ ದೇಶಮುಖ್ ಅವರ ಜನ್ಮ ಶತಾಬ್ಧಿ ಸಮಾರಂಭದಲ್ಲಿ, ಭಾರತ ಸರ್ಕಾರದ ಕಡೆಯಿಂದ ಒಂದು ಅಂಚೆ ಚೀಟಿ ಬಿಡುಗಡೆಯಾಗಿದೆ. ಅಂಚೆ ಮೂಲಕ ಯಾವುದೇ ವ್ಯಕ್ತಿಯ ಬಳಿ ಈ ಸ್ಟಾಂಪ್ ತಲುಪಿದರೆ ಸ್ವಾಭಾವಿಕವಾಗಿ ನಾನಾಜಿ ಅವರ ಬಗ್ಗೆ ಅವರಲ್ಲಿ ಕುತೂಹಲ ಮೂಡುವುದು. ಎಂತೆಂಥ ಮಹಾಪುರುಷರು ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದರು ಎಂದು ತಿಳಿಸುವುದಷ್ಟೆ ನಮ್ಮ ಉದ್ದೇಶ. ಗ್ರಾಮೀಣ ಜೀವನದಲ್ಲಿ ಬದಲಾವಣೆ ತರುವುದು, ಯಾರಿಗಾಗಿಯೋ ತಾವೇ ಖುದ್ದು ಹೋಗಿ ಕಾರ್ಯ ಪೂರ್ಣ ಮಾಡಿಕೊಂಡು ಬರುವುದು, ನಾನಾಜೀ ಅವರು ಹಳ್ಳಿಗಳಲ್ಲಿ ಕೈಗೊಂಡ ಕಾರ್ಯಗಳನ್ನು ಮುಂದೆ ಬಂದ ಪ್ರತಿ ರಾಷ್ಟ್ರಪತಿಗಳೂ ಮುಂದುವರಿಸಿಕೊಂಡು ಬಂದರು. ಅವರೆಲ್ಲರೂ ನಾನಾಜೀ ಅವರ ಕಾರ್ಯಗಳನ್ನು ಶ್ಲಾಘಿಸುತ್ತಾ ಬಂದಿದ್ದಾರೆ. ನಾನಾಜೀ ಅವರ ಯೋಜನೆಗಳನ್ನು ನೋಡಲು ಖುದ್ದು ತೆರಳುತಿದ್ದರು. ಇದು ನಾನಾಜೀ ಅವರ ಕಾರ್ಯದ ವಿಶೇಷತೆಯಾಗಿತ್ತು. ಇಂದು ನಾನಾಜೀ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ದೇಶದೆಲ್ಲೆಡೆಯಿಂದ ಗ್ರಾಮೀಣ ಪ್ರದೇಶದ ಜನರು ಬಂದಿದ್ದಾರೆ. ಭಾರತ ಸರ್ಕಾರದ ಮತ್ತು ಎಲ್ಲಾ ರಾಜ್ಯಗಳೂ ಇದರೊಂದಿಗೆ ಕೈ ಜೋಡಿಸಿವೆ. ಗ್ರಾಮೀಣ ಜನರ ಜೀವನದಲ್ಲಿ ಬದಲಾವಣೆ ತರುವ ಸಂಕಲ್ಪವನ್ನು ಇಟ್ಟುಕೊಂಡು ನಾವು ಮುನ್ನಡೆದಿದ್ದೇವೆ. 2022ಕ್ಕೆ ಸ್ವಾತಂತ್ರದ 75 ವರ್ಷಾಚರಣೆಯ ಸಂದರ್ಭದಲ್ಲಿ ಎಲ್ಲ ಹಳ್ಳಿಗಳು ಒಂದು ಸಂಕಲ್ಪವನ್ನು ಮಾಡಬೇಕಿದೆ, 2022ಕ್ಕೆ ನಾವು ದೇಶಕ್ಕಾಗಿ ಏನನ್ನಾದರೂ ಕೊಡುಗೆಯನ್ನು ನೀಡುತ್ತೇವೆ ಎಂಬ ಸಂಕಲ್ಪವನ್ನು ಮಾಡಬೇಕಿದೆ. ಈ ಸಂಕಲ್ಪವನ್ನು ಹೊತ್ತು ನಾವು ಮುನ್ನಡೆದರೆ, ಗ್ರಾಮೋದಯದ ಕನಸನ್ನು ಇಟ್ಟುಕೊಂಡು ನಾವು ಮಾಡುತ್ತಿರುವ ಕಾರ್ಯದಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ನನಗಿದೆ. ಇಲ್ಲಿ ಏರ್ಪಾಡಾಗಿರುವ ವಸ್ತು ಪ್ರದರ್ಶನವನ್ನು ನಾನೀಗ ವೀಕ್ಷಿಸಲು ತೆರಳಿದ್ದೆ. ಇಲ್ಲಿಗೆ ಆಗಮಿಸಿರುವ ಎಲ್ಲರಿಗೂ ಹೇಳಬಹುದಾದ ಬಹಳಷ್ಟು ಮಾತುಗಳು ಅಲ್ಲಿವೆ. ಯಸಸ್ಸಿನೊಂದಿಗೆ ಮಾಡಿದ ಕಾರ್ಯಗಳ ಅನುಭವ ಸಾರವಿದೆ, ನಾನೂ ಕೂಡಾ ಕೆಲವೊಮ್ಮೆ ಅಲ್ಲೇ ನಿಲ್ಲುತ್ತಿದ್ದೆ. ನೋಡುತ್ತಾ, ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಪ್ರತಿ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಯಾವ ಯಾವ ರೀತಿಯ ಪ್ರಯೋಗಗಳಾಗುತ್ತಿವೆ ಎಂದು ತಿಳಿದು ಆನಂದವಾಗುತ್ತಿತ್ತು.

ಯಾವ ರೀತಿಯ ಹೊಸ ಹೊಸ ಉಪಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಅರಿತುಕೊಂಡೆ. ಹಳ್ಳಿಗಳಲ್ಲಿ ಕೂಡಾ ತಂತ್ರಜ್ಞಾನ ಯಾವ ರೀತಿಯ ಸ್ಥಾನ ಪಡೆದುಕೊಂಡಿದೆ ಎಂಬುದನ್ನು ಗಮನಿಸಿದೆ. ಇವೆಲ್ಲವನ್ನು ಗಮನಿಸಿದಾಗ ಮನಸ್ಸಿಗೆ ಬಹಳ ಸಂತೋಷವಾಯಿತು. ತಮಗೆ ಎಷ್ಟೇ ಕಾರ್ಯದೊತ್ತಡವಿದ್ದರೂ, ಎಷ್ಟೇ ಬೇಗ ತೆರಳುವಂತಿದ್ದರೂ, ಈ ಪ್ರದರ್ಶನದ ಪ್ರತಿಯೊಂದು ಭಾಗವನ್ನೂ ಸರಿಯಾಗಿ ವೀಕ್ಷಿಸಿ ಎಂದು ನಾನು ನಿಮ್ಮಲ್ಲಿ ಆಗ್ರಹಿಸುತ್ತೇನೆ. ಇವುಗಳಲ್ಲಿ ಯಾವುದನ್ನು ತಮ್ಮ ಹಳ್ಳಿಗಳಲ್ಲಿ ಅಳವಡಿಸಿಕೊಳ್ಳಬಹುದು ಎಂಬುದನ್ನು ಒಂದು ಚೀಟಿಯಲ್ಲಿ ಬರೆದಿಟ್ಟುಕೊಳ್ಳಿ, ಯಾರನ್ನಾದರೂ ಸಂಪರ್ಕಿಸಬೇಕೆಂದಿದ್ದರೆ, ಅದನ್ನೂ ಬರೆದಿಟ್ಟುಕೊಳ್ಳಿ, ಇವುಗಳಲ್ಲಿ ಯಾವುದು ತಮ್ಮ ಹಳ್ಳಿಗಳಿಗೆ ಅನುಕೂಲ, ಇವುಗಳನ್ನು ತಾವು ತಮ್ಮ ಹಳ್ಳಿಗಳಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು. ತಾವು ಯಾವುದಾದರೂ ವಸ್ತುವನ್ನು ನೋಡಿದಾಗ, ಆ ವಸ್ತುಗಳ ಶಕ್ತಿಯ ಅನುಭವವಾಗುತ್ತದೆ. ಆದುದರಿಂದ ತಾವುಗಳೆಲ್ಲರೂ 3-4 ಗಂಟೆಗಳ ಕಾಲ ಈ ಪ್ರದರ್ಶನವನ್ನು ವೀಕ್ಷಿಸಿ, ಪ್ರತಿಯೊಂದು ವಸ್ತುವನ್ನೂ ಕೂಲಂಕುಶವಾಗಿ ಪರಿಶೀಲಿಸಿ ತಮ್ಮ ಹಳ್ಳಿಗಳಿಗೆ ತೆರಳಿ ಎಂದು ನಾನು ತಮ್ಮಲ್ಲಿ ಆಗ್ರಹಿಸುತ್ತೇನೆ. ನಾನು ಮತ್ತೊಮ್ಮೆ ನಾನಾಜೀ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ, ಬಾಬು ಜಯಪ್ರಕಾಶ್ ನಾರಾಯಣ್ ಅವರಿಗೆ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಎಲ್ಲ ಹಳ್ಳಿಗಳಿಂದ ಇಲ್ಲಿಗೆ ಆಗಮಿಸಿರುವ ನನ್ನೆಲ್ಲ ಜಾಗೃತ ಸಹೋದರ ಸಹೋದರಿಯರಿಗೆ ನಮನಗಳನ್ನು ಸಲ್ಲಿಸುತ್ತೇನೆ. ತಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿತ್ತೇನೆ.

***