ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ “ಭಾರತ-ಇಸ್ರೇಲ್ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಂತ್ರಜ್ಞಾನದ ಅನುಶೋಧನಾ ನಿಧಿ(14ಎಫ್)” ಸ್ಥಾಪನೆ ಸಂಬಂಧ ಭಾರತ ಮತ್ತು ಇಸ್ರೇಲ್ ನಡುವಿನ ಒಡಂಬಡಿಕೆಗೆ ಅನುಮೋದನೆ ನೀಡಿದೆ. ಈ ಒಡಂಬಡಿಕೆಯನ್ನು 2017ರ ಜುಲೈನಲ್ಲಿ ಅಂತಿಮಗೊಳಿಸಲಾಗಿತ್ತು.
ಈ ನಿಧಿಗೆ ಭಾರತ ಮತ್ತು ಇಸ್ರೇಲ್ ಐದು ವರ್ಷಗಳ ಕಾಲ ವಾರ್ಷಿಕ ತಲಾ ನಾಲ್ಕು ದಶಲಕ್ಷ ಅಮೆರಿಕನ್ ಡಾಲರ್ ಗೆ ಸಮನಾದ ಮೊತ್ತವನ್ನು ನೀಡಲಿವೆ. ಈ ನಿಧಿ ಎರಡೂ ದೇಶಗಳ ತಲಾ ನಾಲ್ವರು ಸದಸ್ಯರನ್ನೊಳಗೊಂಡ ಜಂಟಿ ಮಂಡಳಿಯ ಉಸ್ತುವಾರಿಗೆ ಒಳಪಡಲಿದೆ.
ಅನುಶೋಧನೆ ಅಥವಾ ತಂತ್ರಜ್ಞಾನ ಆಧರಿತ ಹೊಸ ಅಥವಾ ಸುಧಾರಿತ ಉತ್ಪನ್ನಗಳು, ಸೇವೆಗಳು ಅಥವಾ ಪ್ರಕ್ರಿಯೆಗಳಿಗಾಗಿ ಜಂಟಿ ಯೋಜನೆಗಳುಗೆ ಬೆಂಬಲ ನೀಡುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಅನುಶೋಧನಾ ಸಹಹಕಾರಕ್ಕೆ ಉತ್ತೇಜನ ನೀಡುವುದಕ್ಕೆ ಈ ಒಡಂಬಡಿಕೆ ಎಡೆಮಾಡಿಕೊಡಲಿದೆ. ನೀರು, ಕೃಷಿ, ಇಂಧನ ಮತ್ತು ಡಿಜಿಟಲ್ ತಂತ್ರಗಾರಿಕೆಗಳಲ್ಲಿ ಪರಸ್ಪರ ಹಿತಾಸಕ್ತಿ ಹೊಂದಿರುವ ಕ್ಷೇತ್ರಗಳಲ್ಲಿ ಸುಲಭವೆಚ್ಚದ ತಂತ್ರಜ್ಞಾನ ಅನುಶೋಧನೆಗಳಿಗೆ ಈ ಯೋಜನೆಗಳು ಅವಕಾಶ ಕಲ್ಪಿಸಲಿವೆ. ಈ ಸಹಭಾಗಿತ್ವ ಯೋಜನೆಗಳ ಮೂಲಕ
ಭಾರತ ಮತ್ತು ಇಸ್ರೇಲ್ ನ ಖಾಸಗಿ ಉದ್ದಿಮೆ, ವ್ಯಾಪಾರಸಂಸ್ಥೆಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನೊಳಗೊಂಡ ಸಮೂಹ ರೂಪಿಸಲು ಸಾಂಸ್ಥಿಕ ಬೆಂಬಲ ಸಿಗಲಿದೆ.
ಈ ಜಂಟಿ ನಿಧಿ ಬೆಂಬಲಿತ ಚಟುವಟಿಕೆಗಳು ತಂತ್ರಜ್ಞಾನ ಅನುಶೋಧನೆ ಆಧರಿಸಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಯೋಜನೆಗಳು ಹಾಗೂ ಭಾಗೀದಾರಿಕೆಗಳಲ್ಲಿ ಬಂಡವಾಳ ಹೂಡುವ ಮೂಲಕ ಉಭಯ ದೇಶಗಳ ನಡುವೆ ತಾಂತ್ರಿಕ-ಆರ್ಥಿಕ ಸಹಭಾಗಿತ್ವವನ್ನು ಹೆಚ್ಚಿಸಲಿವೆ. ಭಾರತ ಮತ್ತು ಇಸ್ರೇಲ್ ನ ಪರಸ್ಪರ ಪೂರಕವಾಗಿರುವ ಸಾಮರ್ಥ್ಯಗಳು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆ ವಲಯದಲಲ್ಲಿರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಇಸ್ರೇಲ್-ಭಾರತ ಜಂಟಿ ಯೋಜನೆಗಳಿಗೆ ಉತ್ತೇಜನ ನೀಡಲಿವೆ. ‘ಹೇಗೆ ಮಾಡಬೇಕು’ ಎಂಬುದನ್ನು `ಹೀಗೆ ಮಾಡಿ ತೋರಿಸಿ’ ಎಂಬುದನ್ನಾಗಿ ಪರಿವರ್ತಿಸುವ ಜಂಟಿ ಯೋಜನೆಗಳಿಗೆ ಉತ್ತೇಜನ ನೀಡಲು ಇದು ಅಗತ್ಯ ಬೆಂಬಲ ಸಾಧನಗಳನ್ನು ಒದಗಿಸಲಿದೆ. ಜತೆಗೆ ಭಾರತದಲ್ಲಿನ ಅನುಶೋಧನಾ ರಂಗ ಮತ್ತು ತಂತ್ರಜ್ಞಾನ-ಉದ್ಯಮಶೀಲತೆ ರಂಗವನ್ನು ಬಲಪಡಿಸುವುದು ಮಾತ್ರವಲ್ಲದೆ ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮಕ್ಕೆ ನೇರ ಕೊಡುಗೆ ನೀಡಲಿದೆ.