Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾಜಿ ರಾಷ್ಟ್ರಪತಿ ಶ್ರೀ ರಾಮ್‌ ನಾಥ್ ಕೋವಿಂದ್ ಅವರ ಆತ್ಮಚರಿತ್ರೆ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಮಾಜಿ ರಾಷ್ಟ್ರಪತಿ ಶ್ರೀ ರಾಮ್‌ ನಾಥ್ ಕೋವಿಂದ್ ಅವರ ಆತ್ಮಚರಿತ್ರೆ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಆತ್ಮಚರಿತ್ರೆ – “ಭಾರತೀಯ ಗಣರಾಜ್ಯದ ವಿಜಯ: ನನ್ನ ಜೀವನ, ನನ್ನ ಹೋರಾಟಗಳು” ಪುಸ್ತಕವನ್ನು ಬಿಡುಗಡೆ ಮಾಡಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ಇಂದು ಶ್ರೀ ರಾಮ್ ನಾಥ್ ಕೋವಿಂದ್ ಅವರ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡುವ ಅವಕಾಶ ನಮಗೆ ಸಿಕ್ಕಿದೆ ಮತ್ತು ನಾನು ಈ ಕಾರ್ಯಕ್ರಮದ ಭಾಗವಾಗಿರುವುದು ಎಂದು ನನಗೆ ಅತೀವ ಸಂತೋಷ ತಂದಿದೆ,” ಎಂದು ಶ್ರೀ ಮೋದಿ ಹೇಳಿದರು.

ಮಾಜಿ ರಾಷ್ಟ್ರಪತಿಯೊಂದಿಗಿನ ತಮ್ಮ ಆಳವಾದ ವೈಯಕ್ತಿಕ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕೋವಿಂದ್ ಅವರ ಮಾರ್ಗದರ್ಶನ ಮತ್ತು ವಾತ್ಸಲ್ಯದ ಬಗ್ಗೆ ತಮ್ಮ ಅಪಾರ ಗೌರವವನ್ನು ಉಲ್ಲೇಖಿಸಿದರು. “ಕೋವಿಂದ್ ಅವರೊಂದಿಗೆ ನನ್ನ ಸುದೀರ್ಘ ಪರಿಚಯ, ಅವರನ್ನು ನಿಕಟವಾಗಿ ತಿಳಿದುಕೊಳ್ಳುವ ಸೌಭಾಗ್ಯ, ರಾಷ್ಟ್ರಪತಿಯಾಗಿ ಅವರ ಮಾರ್ಗದರ್ಶನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನನ್ನ ಬಗ್ಗೆ ಅವರ ವಿಶೇಷ ಪ್ರೀತಿ ಮತ್ತು ಆತ್ಮೀಯತೆ, ಇವು ನನ್ನ ದೊಡ್ಡ ಆಸ್ತಿಯಾಗಿವೆ,” ಎಂದು ಶ್ರೀ ಮೋದಿ ಹೇಳಿದರು.

ಕೋವಿಂದ್‌ ಅವರ ವ್ಯಕ್ತಿತ್ವ ಮತ್ತು ಸಾಮರ್ಥ್ಯದ ಆಳವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಈ ಸಾಹಿತ್ಯಿಕ ಕೃತಿಯು ರಾಷ್ಟ್ರದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಶಾಶ್ವತ ಸಾಕ್ಷಿಯಾಗಲಿದೆ ಎಂದು ಪ್ರತಿಪಾದಿಸಿದರು. “ರಾಮನಾಥ್ ಕೋವಿಂದ್ ಅವರ ಆತ್ಮಚರಿತ್ರೆಯು ಭಾರತೀಯ ಪ್ರಜಾಪ್ರಭುತ್ವ ಮತ್ತು ಭಾರತೀಯ ಸಮಾಜಕ್ಕೆ ಒಂದು ಪರಂಪರೆಯಾಗಲಿದೆ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ,” ಎಂದು ಶ್ರೀ ಮೋದಿ ಹೇಳಿದರು.

ಕೋವಿಂದ್ ಅವರು ರಾಷ್ಟ್ರಕ್ಕೆ ನೀಡಿದ ಜೀವಮಾನದ ಕೊಡುಗೆಗಳ ಅಗಾಧತೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅತಿಯಾದ ವಿವರಗಳನ್ನು ನೀಡುವ ಬದಲು, ಪುಸ್ತಕವನ್ನು ನೇರವಾಗಿ ಓದಿ ಅನ್ವೇಷಿಸಲು ಪ್ರೇಕ್ಷಕರನ್ನು ಪ್ರೋತ್ಸಾಹಿಸಿದರು. “ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ʻಇಣುಕು ನೋಟʼ ಮಾತ್ರ ಇರಬೇಕು. ನೀವೆಲ್ಲರೂ ಪಸುತಕವನ್ನು ಓದುವ ಮೂಲಕ ಅದರ ಸಂಪೂರ್ಣ ಪ್ರಯೋಜನವನ್ನು ಪಡೆದರೆ ಮಾತ್ರ ಉತ್ತಮ!” ಎಂದು ಶ್ರೀ ಮೋದಿ ಹೇಳಿದರು.

ಯುವ ಜನತೆಗೆ ಆತ್ಮಚರಿತ್ರೆಯ ಶೈಕ್ಷಣಿಕ ಮೌಲ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭವಿಷ್ಯದ ಪೀಳಿಗೆಯು ಮಾಜಿ ರಾಷ್ಟ್ರಪತಿಯವರ ಮಾತುಗಳಿಂದ ಸ್ಫೂರ್ತಿ ಪಡೆಯಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದರು. “ದೇಶದ ಹೊಸ ಪೀಳಿಗೆಯೂ ಕೋವಿಂದ್‌ ಅವರ ಬರವಣಿಗೆ ಮತ್ತು ಅವರ ಅನುಭವಗಳನ್ನು ಓದಬೇಕು, ಅದರಿಂದ ಪ್ರತಿಯೊಬ್ಬರೂ ಬಹಳಷ್ಟು ಕಲಿಯಬಹುದು,” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

“ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್: ಮೈ ಲೈಫ್, ಮೈ ಸ್ಟ್ರಗಲ್ಸ್” (“ಭಾರತೀಯ ಗಣರಾಜ್ಯದ ವಿಜಯ: ನನ್ನ ಜೀವನ, ನನ್ನ ಹೋರಾಟಗಳು”) ಎಂಬ ಪುಸ್ತಕದ ಶೀರ್ಷಿಕೆಯನ್ನು ವಿಶ್ಲೇಷಿಸಿದ ಪ್ರಧಾನಮಂತ್ರಿಯವರು, ವೈಯಕ್ತಿಕ ಕಷ್ಟಗಳು ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಯಶಸ್ಸಿಗೆ ಸಂಬಂಧಿಸಿದಂತೆ ಅದರ ಅವಳಿ ಮಹತ್ವವನ್ನು ವ್ಯಾಖ್ಯಾನಿಸಿದರು. “ಜೀವನದ ಹೋರಾಟಗಳು ಅವರ ವೈಯಕ್ತಿಕವಾದವು, ಆದರೆ ಆ ಹೋರಾಟಗಳ ಪರಿಣಾಮವಾಗಿ ಸಾಧಿಸಿದ ವಿಜಯವು ಭಾರತ ಗಣರಾಜ್ಯ ಮತ್ತು ಅದರ ಪ್ರಜಾಪ್ರಭುತ್ವಕ್ಕೆ ಸೇರಿದ್ದು,” ಎಂದು ಶ್ರೀ ಮೋದಿ ಹೇಳಿದರು.

ಮಾಜಿ ರಾಷ್ಟ್ರಪತಿಯವರ ಔದಾರ್ಯದ ಜೊತೆಗೆ, ಸಾಮಾನ್ಯ ಮಾನವೀಯ ಪ್ರವೃತ್ತಿಗಳನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಅನೇಕರು ತಮ್ಮ ಕಷ್ಟಗಳಿಗೆ ಸಮಾಜವನ್ನು ದೂಷಿಸುತ್ತಿದ್ದರೆ, ಭಾರತೀಯ ಮೌಲ್ಯಗಳಲ್ಲಿ ಆಳವಾಗಿ ಬೇರೂರಿರುವ ಕೋವಿಂದ್ ಅವರ ಉದಾರ ಹೃದಯವು ಸಮಾಜವನ್ನು ತಮ್ಮ ಯಶಸ್ಸಿನಲ್ಲಿ ಸಮಾನ ಪಾಲುದಾರನಾಗಿ ನೋಡುತ್ತದೆ ಎಂದು ಗಮನಸೆಳೆದರು. “ಹೃದಯವು ಉದಾರವಾಗಿದ್ದಾಗ ಮತ್ತು ಭಾರತೀಯ ಮೌಲ್ಯಗಳಿಂದ ತುಂಬಿದ್ದಾಗ, ಯಾವುದೇ ವ್ಯಕ್ತಿಯು ಸಮಾಜದಲ್ಲಿ ದೋಷಗಳನ್ನು ಹುಡುಕಲು ಸಮಯವನ್ನು ವ್ಯರ್ಥ ಮಾಡುವುದಿಲ್ಲ, ಬದಲಿಗೆ ಅದರ ಸಕಾರಾತ್ಮಕ ಭಾಗದತ್ತ ಗಮನ ಹರಿಸುತ್ತಾರೆ,” ಎಂದು ಶ್ರೀ ಮೋದಿ ಹೇಳಿದರು.

ಆತ್ಮಚರಿತ್ರೆಯಲ್ಲಿ ಬಾಲ್ಯದ ಅತ್ಯಂತ ದುರಂತ ಘಟನೆಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಕಾನ್ಪುರ ದೇಹತ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದಾಗ, ಮನೆಯಲ್ಲಿದ್ದ ಅಗತ್ಯ ವಸ್ತುಗಳನ್ನು ಉಳಿಸುವ ಪ್ರಯತ್ನದಲ್ಲಿ ಕೋವಿಂದ್ ಅವರ ತಾಯಿ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಕಥೆಯನ್ನು ಹಂಚಿಕೊಂಡರು. “ಚಿಕ್ಕ ವಯಸ್ಸಿನಲ್ಲಿ ಇಂತಹ ಆಘಾತ ಮತ್ತು ತಾಯಿಯನ್ನು ಕಳೆದುಕೊಂಡದ್ದು ಎಷ್ಟು ನೋವಿನ ಸಂಗತಿಯಾಗಿರಬಹುದು ಎಂದು ನೀವು ಊಹಿಸಬಹುದು,!” ಎಂದು ಶ್ರೀ ಮೋದಿ ಹೇಳಿದರು.

ಈ ದುರಂತದಿಂದ ಕೋವಿಂದ್‌ ಅವರಲ್ಲಿ ರೂಪುಗೊಂಡ ದೃಢ ಮನಸ್ಸಿನ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನೆರೆಯ ತಾಯಿಯೊಬ್ಬರು ಕೋವಿಂದ್ ಜೀ ಅವರ ಪಾಲನೆಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ವಿವರಿಸಿದರು. ಇದು ಸಾಮಾಜಿಕ ಸಾಮರಸ್ಯದ ಬಗ್ಗೆ ಅವರಲ್ಲಿ ಆಳ ತಿಳಿವಳಿಕೆಯನ್ನು ಮೂಡಿಸಿತು. “ಇದರಿಂದ ಅವರು ಸಮಾಜದ ಏಕತೆ ಮತ್ತು ಸಾಮರಸ್ಯದ ಶಕ್ತಿಯನ್ನು ಅರ್ಥಮಾಡಿಕೊಂಡರು ಮತ್ತು ಆ ತೊಂದರೆಗಳು ಕೋವಿಂದ್ ಅವರನ್ನು ಇನ್ನಷ್ಟು ಬಲಪಡಿಸಿದವು,” ಎಂದು ಶ್ರೀ ಮೋದಿ ಹೇಳಿದರು.

ದುರಂತದ ನಂತರದ ನಿರ್ಣಾಯಕ ತಂದೆಯ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕೋವಿಂದ್ ಅವರ ತಂದೆ ಕುಟುಂಬವನ್ನು ಹೇಗೆ ಪ್ರಶಂಸನೀಯವಾಗಿ ಮುನ್ನಡೆಸಿದರು ಮತ್ತು ಅವರ ಮಕ್ಕಳಲ್ಲಿ ಬಲವಾದ ಮೌಲ್ಯಗಳನ್ನು ತುಂಬಿದರು ಎಂಬುದನ್ನು ಉಲ್ಲೇಖಿಸಿದರು. “ಅವರು ತಮ್ಮ ಕುಟುಂಬವನ್ನು ನಿಭಾಯಿಸಿದ ರೀತಿ ಮತ್ತು ಮಕ್ಕಳಿಗೆ ಮೌಲ್ಯಗಳನ್ನು ನೀಡಿದ ರೀತಿಯಿಂದಾಗಿ ಕೋವಿಂದ್ ಜಿ ಅವರು ತಮ್ಮ ತಂದೆಯನ್ನು ಹೀರೋ ಎಂದು ಪರಿಗಣಿಸುತ್ತಾರೆ,” ಎಂದು ಶ್ರೀ ಮೋದಿ ಹೇಳಿದರು.

ಸಂಪನ್ಮೂಲಗಳ ಕೊರತೆಯನ್ನು ನಿವಾರಿಸಲು ಕೋವಿಂದ್ ಅವರು ಶಿಕ್ಷಣದ ಮೇಲೆ ಅವಲಂಬಿತರಾಗಿದ್ದರು ಎಂದು ಹೇಳಿದ ಪ್ರಧಾನಮಂತ್ರಿಯವರು, ದೇಶದ ಅತ್ಯುನ್ನತ ಹುದ್ದೆಗೆ ಕೋವಿಂದ್‌ ಅವರ ಅಸಾಧಾರಣ ಆರೋಹಣವನ್ನು ಎತ್ತಿ ತೋರಿಸಿದರು. “ಅವರು ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ಸಂಪನ್ಮೂಲಗಳ ಕೊರತೆಯನ್ನು ಒಂದು ದೌರ್ಬಲ್ಯವಾಗಲು ಬಿಡಲಿಲ್ಲ, ಜನರು ಊಹಿಸಲೂ ಸಾಧ್ಯವಾಗದ ಸ್ಥಾನವನ್ನು ಅವರು ತಲುಪಿದರು” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಮಾಜಿ ರಾಷ್ಟ್ರಪತಿಯವರ ನಿರಂತರ ನಮ್ರತೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಕೋವಿಂದ್ ಅವರು ತಮ್ಮ ಸ್ವಗ್ರಾಮ ಪರೌಂಖ್‌ಗೆ ಮರಳಿದಾಗ, ಅಲ್ಲಿನ ಮಣ್ಣಿಗೆ ನಮಸ್ಕರಿಸಿದ ಮತ್ತು ತಮ್ಮ ಶಿಕ್ಷಕರ ಪಾದಗಳನ್ನು ಸ್ಪರ್ಶಿಸಿದ ತೀವ್ರವಾದ ಭಾವನಾತ್ಮಕ ಕ್ಷಣವನ್ನು ನೆನಪಿಸಿಕೊಂಡರು. ” ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡಬಹುದಾದ ಅವರ ನಡವಳಿಕೆಯು ಭಾರತದ ಮೌಲ್ಯಗಳ ಚಿತ್ರಣವನ್ನು ವಿಶ್ವದ ಮುಂದೆ ಇಟ್ಟಿದೆ,” ಎಂದು ಶ್ರೀ ಮೋದಿ ಹೇಳಿದರು.

ಶತಮಾನಗಳ ಗುಲಾಮಗಿರಿಯಿಂದ ಉಂಟಾದ ಐತಿಹಾಸಿಕ ಸಾಮಾಜಿಕ-ಆರ್ಥಿಕ ಹಿನ್ನಡೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜ್ಯೋತಿಬಾ ಫುಲೆ ಅವರಂತಹ ಐತಿಹಾಸಿಕ ವ್ಯಕ್ತಿಗಳ ಅವಿರತ ಹೋರಾಟಗಳು ಮತ್ತು ಆಶಯಗಳ ಕನಸುಗಳ ಬಗ್ಗೆ ಉಲ್ಲೇಖಿಸಿದರು. “ಕಡುಬಡವರು ಉನ್ನತ ಸ್ಥಾನಕ್ಕೇರಲು ಅವಕಾಶ ದೊರೆಯುವಂತೆ ಭಾರತದ ಪುನರ್ನಿರ್ಮಾಣದ ಕನಸನ್ನು ಅಂತಹ ಅನೇಕ ಮಹಾನ್ ವ್ಯಕ್ತಿಗಳು ಕಂಡಿದ್ದರು,” ಎಂದು ಶ್ರೀ ಮೋದಿ ಹೇಳಿದರು.

ಈ ಐತಿಹಾಸಿಕ ಆಕಾಂಕ್ಷೆಗಳನ್ನು ಆಧುನಿಕ ಸಾಧನೆಗಳೊಂದಿಗೆ ಜೋಡಿಸಿದ ಪ್ರಧಾನಮಂತ್ರಿಯವರು, ಕಠಿಣ ಪರಿಶ್ರಮದ ಮೂಲಕ ಸಮಾನತಾವಾದಿ ಸಮಾಜದ ಶತಮಾನಗಳಷ್ಟು ಹಳೆಯದಾದ ಆಶಯವನ್ನು ಸಾಕಾರಗೊಳಿಸಿದ ಕೀರ್ತಿ ಕೋವಿಂದ್ ಅವರಂತಹ ವ್ಯಕ್ತಿಗಳಿಗೆ ಸಲ್ಲುತ್ತದೆ ಎಂದರು. “ಕೋವಿಂದ್ ಅವರಂತಹ ವ್ಯಕ್ತಿಗಳು ತಮ್ಮ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ತಮ್ಮ ಜೀವನವನ್ನು ಮಾತ್ರ ಬದಲಾಯಿಸಲಿಲ್ಲ, ಜೊತೆಗೆ ಶತಮಾನಗಳ ಆ ಕನಸನ್ನು ನನಸು ಮಾಡುವಲ್ಲಿ ಅವರು ಪಾತ್ರ ವಹಿಸಿದ್ದಾರೆ,” ಎಂದು ಶ್ರೀ ಮೋದಿ ಶ್ಲಾಘಿಸಿದರು.

ಈ ಧ್ಯೇಯವನ್ನು ಮುಂದುವರಿಸಲು ಯುವಕರು ನಿರಂತರ ಸಮರ್ಪಣೆಯೊಂದಿಗೆ ಕೆಲಸ ಮಾಡಬೇಕೆಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅಡೆತಡೆಗಳಿಂದ ವಿಚಲಿತರಾಗದ ಮತ್ತು ರಾಷ್ಟ್ರೀಯ ಸ್ವಾವಲಂಬನೆಯತ್ತ ಮಾರ್ಗಗಳನ್ನು ರೂಪಿಸುವ ಧೈರ್ಯವನ್ನು ಕಾಪಾಡಿಕೊಳ್ಳುವಂತೆ ಯುವ ಪೀಳಿಗೆಗೆ ಕರೆ ನೀಡಿದರು. “ಈ ಬದಲಾವಣೆಯಿಂದ, ಸಶಕ್ತ ಭಾರತವನ್ನು ನಿರ್ಮಿಸುವ ಸಂಕಲ್ಪವು ಈಡೇರುತ್ತದೆ. ಜೊತೆಗೆ ಸ್ವಾವಲಂಬಿ ಮತ್ತು ವಿಕಸಿತ ಭಾರತದ ಹಾದಿಯನ್ನು ಸುಗಮಗೊಳಿಸಬಹುದು,” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಆತ್ಮಚರಿತ್ರೆಯನ್ನು ನಿರ್ಣಾಯಕ ಪ್ರೇರಕ ಶಕ್ತಿ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಕೋವಿಂದ್ ಅವರ ಜೀವನದ ವಿವರವಾದ ಮಾಹಿತಿಯು ಪ್ರಸ್ತುತ ಯುವ ಶಕ್ತಿಯನ್ನು ರೂಪಿಸಲು ನಿರ್ಣಾಯಕ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ” ಕೋವಿಂದ್ ಅವರ ಈ ಆತ್ಮಚರಿತ್ರೆಯು ಅಂತಹ ಯುವ ಶಕ್ತಿಯ ಸೃಷ್ಟಿಗೆ ಅಗತ್ಯವಿರುವ ಸ್ಫೂರ್ತಿಯ ಮೂಲವಾಗಬಹುದು” ಎಂದು ಶ್ರೀ ಮೋದಿ ಹೇಳಿದರು.

ಕೋವಿಂದ್ ಅವರ ರಾಜಕೀಯ ಮೂಲವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಮೊರಾರ್ಜಿ ದೇಸಾಯಿ ಅವರೊಂದಿಗೆ ಕೆಲಸ ಮಾಡುವುದು ಹೇಗೆ ರಾಷ್ಟ್ರ ಸೇವೆಯ ಅವರ ಅಂತರ್ಗತ ಬಯಕೆಯನ್ನು ರಾಜಕೀಯದಲ್ಲಿ ಸಮರ್ಪಿತ ವೃತ್ತಿಯಾಗಿ ಪರಿವರ್ತಿಸಿತು ಎಂಬುದನ್ನು ಉಲ್ಲೇಖಿಸಿದರು. “ರಾಷ್ಟ್ರ ಸೇವೆಯ ಭಾವನೆ ಕೋವಿಂದ್ ಜೀ ಅವರಲ್ಲಿತ್ತು, ಅವರು ಮೊರಾರ್ಜಿ ಅವರೊಂದಿಗೆ ಕೆಲಸ ಮಾಡುವ ಮೂಲಕ ಅದಕ್ಕೆ ಒಂದು ಮಾರ್ಗವನ್ನು ಕಂಡುಕೊಂಡರು,” ಎಂದು ಶ್ರೀ ಮೋದಿ ವಿವರಿಸಿದರು.

ಕೋವಿಂದ್‌ ಅವರ ನಿರಂತರ ಸೇವಾ ದಾಖಲೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಂಸತ್ತಿನಲ್ಲಿ, ರಾಜ್ಯಪಾಲರಾಗಿ ಮತ್ತು ಅಂತಿಮವಾಗಿ ರಾಷ್ಟ್ರಪತಿಯಾಗಿ ಅವರ ವಿವಿಧ ಪಾತ್ರಗಳಲ್ಲಿ ಕೋವಿಂದ್ ಅವರ ಕರ್ತವ್ಯದ ಅಚಲ ಸಮರ್ಪಣೆಯನ್ನು ಶ್ಲಾಘಿಸಿದರು. “ಅವರು ಸೇವೆಯನ್ನು ತಮ್ಮ ಗುರಿಯನ್ನಾಗಿ ಮಾಡಿಕೊಂಡು ಕೆಲಸ ಮಾಡಿದರು ಮತ್ತು ಸಂಸತ್ತಿನಲ್ಲಿ ಅವರ ಅಧಿಕಾರಾವಧಿ ಇದಕ್ಕೆ ಸಾಕ್ಷಿಯಾಗಿದೆ,” ಎಂದು ಶ್ರೀ ಮೋದಿ ಹೇಳಿದರು.

ರಾಷ್ಟ್ರಪತಿ ಅವಧಿ ಬಳಿಕವೂ ದಣಿವರಿಯದ ಕೋವಿಂದ್‌ ಅವರ ಕೊಡುಗೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ದೇಶದ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯಂತಹ ನಿರ್ಣಾಯಕ ರಾಷ್ಟ್ರೀಯ ವಿಷಯಗಳ ಬಗ್ಗೆ ಅವರ ನಾಯಕತ್ವವನ್ನು ಶ್ಲಾಘಿಸಿದರು. “ಕರ್ತವ್ಯದ ಕುರಿತಾಗಿ ಕೋವಿಂದ್ ಜಿ ಅವರ ಈ ಸಮರ್ಪಣೆ ಮತ್ತು ಸೇವಾ ಮನೋಭಾವದಿಂದ ದೇಶದ ಜನರು ಬಹಳಷ್ಟು ಕಲಿಯಬಹುದು ಎಂದು ನಾನು ನಂಬುತ್ತೇನೆ,” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಸಾರ್ವಜನಿಕ ಜೀವನದಲ್ಲಿ ಹೆಚ್ಚು ಸಕ್ರಿಯರಾಗಿರುವಾಗ ಆತ್ಮಚರಿತ್ರೆಯನ್ನು ಬರೆಯುವುದು ಎಷ್ಟು ಕಷ್ಟವೆಂದು ಒಪ್ಪಿಕೊಂಡ ಪ್ರಧಾನಮಂತ್ರಿಯವರು, ಈ ಪ್ರಮುಖ ಸಾಮಾಜಿಕ ಕೊಡುಗೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಕೋವಿಂದ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ಕೋವಿಂದ್ ಅವರು ನಮ್ಮೆಲ್ಲರಿಗಾಗಿ ಈ ಕೆಲಸವನ್ನು ಮಾಡಿದ್ದಾರೆ, ಏಕೆಂದರೆ ಅವರ ಜೀವನದಲ್ಲಿ ಬಡ ವಂಚಿತ ವರ್ಗಗಳಿಂದ ಬರುವ ಎಲ್ಲಾ ಜನರು ತಮ್ಮ ಸ್ವಂತ ಜೀವನದ ನೆರಳನ್ನು ನೋಡುವಂತಹ ಬಹಳಷ್ಟು ಅಂಶಗಳಿವೆ,” ಎಂದು ಶ್ರೀ ಮೋದಿ ಹೇಳಿದರು.

ಪುಸ್ತಕವು ಒಳಗೊಂಡಿರುವ ವಿಶಾಲವಾದ ನೈತಿಕ ಪಾಠಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ಮಾಜಿ ರಾಷ್ಟ್ರಪತಿಗಳ ನಿರೂಪಣೆಯು ಕಠಿಣ ಸಮಯದಲ್ಲಿ ಶುದ್ಧತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವ ಶಾಶ್ವತ ಶಕ್ತಿಯನ್ನು ಹೇಗೆ ವಿವರಿಸುತ್ತದೆ ಎಂಬುದನ್ನು ಒತ್ತಿ ಹೇಳಿದರು. “ವಿವಿಧ ಹುದ್ದೆಗಳ ಜವಾಬ್ದಾರಿಗಳನ್ನು ಪೂರೈಸುವಾಗ ಈ ಪರಿಶುದ್ಧತೆಯು ನಮಗೆ ಹೇಗೆ ಶಕ್ತಿಯನ್ನು ನೀಡುತ್ತದೆ ಎಂಬುದರ ಕುರಿತು ಕೋವಿಂದ್ ಅವರು ಈ ಮೂಲಕ ಸಮಾಜಕ್ಕೆ ನಿರಂತರವಾಗಿ ಸ್ಫೂರ್ತಿ ನೀಡಿದ್ದಾರೆ,” ಎಂದು ಶ್ರೀ ಮೋದಿ ಹೇಳಿದರು.

ಪುಸ್ತಕದ ಐತಿಹಾಸಿಕ ಮೌಲ್ಯವನ್ನು ಬಲವಾಗಿ ಅನುಮೋದಿಸುವ ಮೂಲಕ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಈ ಸಾಹಿತ್ಯ ಕೃತಿಯು ವೈಯಕ್ತಿಕ ಮತ್ತು ರಾಷ್ಟ್ರೀಯ ಮೈಲುಗಲ್ಲುಗಳಿಗೆ ಅಗತ್ಯವಾದ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಸಂಪೂರ್ಣ ಭರವಸೆಯನ್ನು ವ್ಯಕ್ತಪಡಿಸಿದರು. “ಕೋವಿಂದ್ ಅವರ ಆತ್ಮಚರಿತ್ರೆಯು ಅವರ ಜೀವನದ ಪ್ರಮುಖ ನೆನಪುಗಳನ್ನು ಮಾತ್ರವಲ್ಲದೆ ನಮ್ಮ ಪ್ರಜಾಪ್ರಭುತ್ವದ ನೆನಪುಗಳನ್ನೂ ಸುರಕ್ಷಿತವಾಗಿ ಸಂರಕ್ಷಿಸುತ್ತದೆ ಎಂಬ ವಿಶ್ವಾಸ ನನಗಿದೆ,” ಎಂದು ಶ್ರೀ ಮೋದಿ ಹೇಳುವ ಮೂಲಕ ತಮ್ಮ ಮಾತು ಮುಗಿಸಿದರು.

 

*****