Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೊದಲ ಎಸ್ ಸಿ ಒ ನಾಗರಿಕ ಸಂವಾದ ವೇದಿಕೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಮೊದಲ ಎಸ್ ಸಿ ಒ ನಾಗರಿಕ ಸಂವಾದ ವೇದಿಕೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಹೊಸದಿಲ್ಲಿಯ ಪುರಾಣ ಕಿಲಾದಲ್ಲಿ ಮೊದಲ ಶಾಂಘೈ ಸಹಕಾರ ಸಂಸ್ಥೆ (ಎಸ್.ಸಿ.ಒ) ನಾಗರಿಕತಾ ಸಂವಾದ ವೇದಿಕೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ  ಅವರು ಎಸ್.ಸಿ.ಒ ಸದಸ್ಯ ರಾಷ್ಟ್ರಗಳ ವಿವಿಧ ಗಣ್ಯರು, ಎಸ್.ಸಿ.ಒ ಸಚಿವರು, ರಾಯಭಾರಿಗಳು, ಹೈ ಕಮಿಷನರ್ ಗಳು, ಪಂಡಿತರು, ಕಲಾವಿದರು ಮತ್ತು ಅತಿಥಿಗಳನ್ನು ಸ್ವಾಗತಿಸಿ, ಯುದ್ಧ ಮತ್ತು ಅಶಾಂತಿಯಿಂದ ಜಾಗತಿಕ ಚರ್ಚೆಗಳು ಆಳವಾಗಿ ನಡೆಯುತ್ತಿರುವ ಸಮಯದಲ್ಲಿ ನಾಗರಿಕತೆಯ ಸಂಪರ್ಕಗಳ ಕುರಿತು ಸಂವಾದ ನಡೆಸುವ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಸಾಂಸ್ಕೃತಿಕ ಸಂಪರ್ಕವು ವಿಶ್ವ ಶಾಂತಿಗೆ ಅತ್ಯಂತ ಬಲವಾದ ಭರವಸೆ ನೀಡುತ್ತದೆ ಎಂದರು. ಶಾಂಘೈ ಸಹಕಾರ ಸಂಸ್ಥೆಯ 25ನೇ ವರ್ಷಾಚರಣೆ  ಭದ್ರತೆ, ಆರ್ಥಿಕತೆ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಸಹಕಾರದ ಮೇಲೆ ನಿರ್ಮಿತವಾಗಿದೆ ಎಂದು ಹೇಳಿದರು. “ನಮ್ಮ ಹಂಚಿಕೊಂಡ ನಾಗರಿಕತೆಯ ಅನುಭವಗಳು ಜಗತ್ತನ್ನು ಏಕೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುವವು” ಎಂದು ಶ್ರೀ ಮೋದಿ ಹೇಳಿದರು.

ಪುರಾಣ ಕಿಲಾದ ಐತಿಹಾಸಿಕ ಹಿನ್ನೆಲೆಯನ್ನು ನೆನಪಿಸಿಕೊಂಡ ಅವರು, ಚರಿತ್ರೆಕಾರರು ಇದು ಸಾವಿರಾರು ವರ್ಷಗಳ ಹಿಂದೆ ಮಹಾಭಾರತ ಯುಗದಿಂದ ಸಾಂಸ್ಕೃತಿಕ ಪರಂಪರೆಯ ಸ್ಥಳವಾಗಿದೆ ಎಂಬುದನ್ನು ಹೇಳಿದ್ದಾರೆ ಎಂದರಲ್ಲದೆ, ಭವ್ಯ ಸಾಂಸ್ಕೃತಿಕ ಪ್ರದರ್ಶನಗಳು, ಉತ್ಸಾಹಭರಿತ ವೇದ ಪಠಣಗಳು, ಬೌದ್ಧ ತತ್ತ್ವಶಾಸ್ತ್ರ ಪ್ರಸ್ತುತಿಗಳು ಮತ್ತು ಹನುಮಾನ್ ಜೀ ಯವರ ಪ್ರಾಚೀನ ಸ್ಥಳದಲ್ಲಿ ಅವರ ಪ್ರಯಾಣದ ಚಿತ್ರಣಗಳು ಭಾರತೀಯ ಸಂಸ್ಕೃತಿಯನ್ನು ಪ್ರೀತಿ, ಏಕತೆ ಮತ್ತು ಮಾನವ ಕಲ್ಯಾಣದ ವಿಶ್ವವ್ಯಾಪಿ ಸಂದೇಶಗಳ ಜೊತೆಗೆ ಭೌಗೋಳಿಕ ರಾಜಕೀಯ ಗಡಿಗಳನ್ನು ಮೀರಿ ಪ್ರದರ್ಶಿಸುತ್ತವೆ ಎಂದು ಹೇಳಿದರು. “ನೀವು ಎಲ್ಲರೂ ಈ ಕಾರ್ಯಕ್ರಮವನ್ನು ಆನಂದಿಸುವಿರಿ ಮತ್ತು ಇದನ್ನು ಐತಿಹಾಸಿಕವಾಗಿಸುವ ಮೂಲಕ, ಭವಿಷ್ಯವು ನಿಮ್ಮೆಲ್ಲರನ್ನೂ ನೆನಪಿಸಿಕೊಳ್ಳುವ ಹೊಸ ಪರಂಪರೆಯ ನೆಲೆಯನ್ನು ಹಾಕುತ್ತೀರಿ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಸುಮಾರು ಐದು ಸಾವಿರ ವರ್ಷಗಳ ಹಿಂದೆ ಸಿಂಧು ನದಿ ನಾಗರಿಕತೆ ಮತ್ತು ಮೆಸೋಪೊಟೇಮಿಯಾ ನಡುವಿನ ವ್ಯಾಪಾರ ಸಂಪರ್ಕಗಳಿಂದ ಹಿಡಿದು ಭಾರತ, ಚೀನಾ, ಮಧ್ಯ ಏಷ್ಯಾ ಮತ್ತು ಯುರೇಶಿಯಾವನ್ನು ಸಂಪರ್ಕಿಸುವ ರೇಷ್ಮೆ ಮತ್ತು ವ್ಯಾಪಾರ ಜಾಲಗಳವರೆಗೆ ಶತಮಾನಗಳ ಹಳೆಯ ಅಂತಾರಾಷ್ಟ್ರೀಯ ಸಹಕಾರ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳನ್ನು ಅನುಸರಿಸಿ, ಅಲ್ಲಿ ವ್ಯಾಪಾರಿಗಳು, ಪಂಡಿತರು, ಪ್ರಯಾಣಿಕರು ಮತ್ತು ಬೌದ್ಧ ಸನ್ಯಾಸಿಗಳಾದ ಫ್ಯಾಕ್ಸಿಯನ್, ಶುವಾಂಜಾಂಗ್, ಯಿಜಿಂಗ್ ಮತ್ತು ಕುಚಾ ಮೂಲದ ಕುಮಾರಜಿವಾ ಜೊತೆಗೆ ನಲಂದಾ ಮತ್ತು ಕುಚಾ ಹಾಗು ದುನ್ಹುವಾಂಗ್ ಮುಂತಾದ ಕೇಂದ್ರಗಳು ಆಲೋಚನೆಗಳು, ಭಾಷೆಗಳು ಮತ್ತು ಬೌದ್ಧ ಪಠ್ಯಗಳ ವಿನಿಮಯದ ಮೂಲಕ ನಾಗರಿಕತೆಗಳನ್ನು ಶ್ರೀಮಂತಗೊಳಿಸಿದರು ಎಂದು ಪ್ರಧಾನಮಂತ್ರಿ ಸಾಂಸ್ಕೃತಿಕ ಸಂವಾದದ ಶಾಶ್ವತ ಶಕ್ತಿಯನ್ನು ಒತ್ತಿಹೇಳಿದರು. “ಸಾಮ್ರಾಜ್ಯಗಳು ಖಂಡಿತವಾಗಿಯೂ ಜಗತ್ತಿನ ನಕ್ಷೆಗಳನ್ನು ಬದಲಾಯಿಸಿವೆ, ಆದರೆ ನಾಗರಿಕತೆಯ ಸಂವಾದಗಳು ಜಗತ್ತಿನ ಕಲ್ಪನೆಗಳನ್ನು ಬದಲಾಯಿಸಿ ಶ್ರೀಮಂತಗೊಳಿಸಿವೆ,” ಎಂದು ಶ್ರೀ ಮೋದಿ ಹೇಳಿದರು.

ಜ್ಞಾನವು ಪ್ರದೇಶಗಳ ಮೂಲಕ ಸಾಗುತ್ತಿರುವಾಗ, ಅದರ ಅಭಿವ್ಯಕ್ತಿ ಬದಲಾಗಬಹುದು ಮತ್ತು ಅದರ ಪ್ರಕಾಶಮಾನ ಪ್ರಭಾವ ಸ್ಥಿರವಾಗಿರಬಹುದು ಎಂದು ಗಮನಿಸಿದ ಪ್ರಧಾನಮಂತ್ರಿ, ಭಾರತದ ಪಂಚತಂತ್ರವು ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಿಗೆ ‘ಕಲಿಲಾ ವಾ ದಿಮ್ನಾ’ ಎಂದು ಪ್ರಯಾಣಿಸಿ ಪೀಳಿಗೆಯಾದ್ಯಂತ ಅಮರವಾಗಿದ್ದು, ರಾಮಾಯಣವು ದಕ್ಷಿಣ ಪೂರ್ವ ಏಷ್ಯಾದ ಸ್ಥಳೀಯ ಸಂಸ್ಕೃತಿ, ಪ್ರದರ್ಶನ ಕಲೆ ಮತ್ತು ಸಾಹಿತ್ಯವನ್ನು ಕಂಬೋಡಿಯಾದಲ್ಲಿ ರೀಮ್ಕರ್ ಆಗಿ ಶ್ರೀಮಂತಗೊಳಿಸಿತು ಎಂದು ಉಲ್ಲೇಖಿಸಿದರು. “ಜ್ಞಾನವು ಯಾವ ರೂಪದಲ್ಲಿದ್ದರೂ, ಅದು ತಾನಾಗಿಯೇ ಬೆಳಕನ್ನು ಹರಡುತ್ತದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ವಿಜ್ಞಾನ ಮತ್ತು ಗಣಿತದಲ್ಲಿ ಸಂಸ್ಕೃತಿಗಳ ನಡುವಿನ ವಿನಿಮಯದ ಮಹತ್ವವನ್ನು ಪ್ರಮುಖವಾಗಿ ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, ಭಾರತೀಯ ಪಂಡಿತ ಬ್ರಹ್ಮಗುಪ್ತರ ಗಣಿತೀಯ ಆಲೋಚನೆಗಳು ಬಾಗ್ದಾದ್ ಗೆ ಹೇಗೆ ತಲುಪಿದವು ಎಂಬುದರತ್ತ ಗಮನ ಸೆಳೆದರು. “ಅಲ್ಲಿ, ಅಲ್-ಖ್ವಾರಿಜ್ಮಿ ಮುಂತಾದ ಪಂಡಿತರು ಗಣಿತದ ಜ್ಞಾನವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಕೊಡುಗೆ ನೀಡಿದರು,” ಎಂದು ಶ್ರೀ ಮೋದಿ ಹೇಳಿದರು.

ವಾಸ್ತುಶಿಲ್ಪ ಮತ್ತು ಸಂಗೀತದಲ್ಲಿ ಹಂಚಿಕೊಂಡ ಪರಂಪರೆಗಳನ್ನು, ಮಧ್ಯ ಏಷ್ಯಾದ ಮಕಾಮ್ ಮತ್ತು ಭಾರತೀಯ ರಾಗ ಪರಂಪರೆಗಳ ನಡುವಿನ ಸಂಪರ್ಕಗಳು, ಭಾರತದಲ್ಲಿ ಕವಾಲಿಯನ್ನು ಶ್ರೀಮಂತಗೊಳಿಸುವ ಸೂಫಿ ಪ್ರಭಾವಗಳು ಮತ್ತು ಸಮರ್ಕಂದ ಹಾಗು ಹೆರಾತ್ ನ ಮಧ್ಯ ಏಷ್ಯಾದ ತೋಟ ಪರಂಪರೆಗಳು ಚಾರ್ಬಾಗ್ ಶೈಲಿಯನ್ನು ರೂಪಿಸುವುದನ್ನು ಉಲ್ಲೇಖಿಸಿ, ಪ್ರಧಾನಮಂತ್ರಿ ಮುಕ್ತ ಸಾಂಸ್ಕೃತಿಕ ವಿನಿಮಯಗಳನ್ನು ಸ್ಥಿರಗೊಳಿಸುವ ಮಹತ್ವವನ್ನು ಒತ್ತಿಹೇಳಿದರು. “ಈ ವಿನಿಮಯವು ಇಂದಿಗೂ ಮುಕ್ತ ಹರಿವಿನಲ್ಲಿ ಮುಂದುವರಿಯುತ್ತಿದೆ, ಅದಕ್ಕಾಗಿ ಈ ಸಮ್ಮೇಳನ ಮತ್ತು ಇಂತಹ ಉಪಕ್ರಮಗಳ ಪಾತ್ರ ಮಹತ್ವಪೂರ್ಣವಾಗಿದೆ,” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು

21ನೇ ಶತಮಾನದ ತಂತ್ರಜ್ಞಾನವು ಸಾಂಸ್ಕೃತಿಕ ಸಂಪರ್ಕಕ್ಕೆ ಅಪೂರ್ವ ಅವಕಾಶಗಳನ್ನು ತೆರೆದಿದೆ, ಇದರಿಂದ ತಿಂಗಳುಗಳ ಪ್ರಯಾಣ ಬೇಕಾಗಿದ್ದ ಪ್ರದೇಶಗಳ ಜನರು ಸೆಕೆಂಡುಗಳಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಡಿಜಿಟಲ್ ವೇದಿಕೆಗಳು ಜ್ಞಾನ ಹಂಚಿಕೆ, ಸಾಂಸ್ಕೃತಿಕ ವಿನಿಮಯ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಸುಗಮಗೊಳಿಸುತ್ತವೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿ ಈ ಪ್ರಗತಿಗಳನ್ನು ಬಳಸಿಕೊಳ್ಳಲು ಕರೆ ನೀಡಿದರು. “ಎಸ್ ಸಿಒ ದೇಶಗಳು ಈ ಹೊಸ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು” ಎಂದು ಶ್ರೀ ಮೋದಿ ಹೇಳಿದರು.

ಮ್ಯೂಸಿಯಂಗಳು, ಗ್ರಂಥಾಲಯಗಳು ಮತ್ತು ಆರ್ಕೈವ್ ಗಳಲ್ಲಿ ಪುರಾತನ ಹಸ್ತಪ್ರತಿಗಳು, ಅಪರೂಪದ ಪಠ್ಯಗಳು, ಐತಿಹಾಸಿಕ ದಾಖಲೆಗಳು ಮತ್ತು ಕಲಾವಸ್ತುಗಳಂತಹ ಸಾವಿರಾರು ವರ್ಷಗಳ ಪರಂಪರೆಯನ್ನು ಸಂರಕ್ಷಿಸುವ ಮತ್ತು ಹಂಚಿಕೊಳ್ಳುವ ಬಗ್ಗೆ ಅತಿಥಿಗಳೊಂದಿಗೆ ಸಲಹೆಗಳನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಪ್ರಾಚೀನ ಪಠ್ಯಗಳನ್ನು ಡಿಜಿಟೈಸ್ ಮಾಡಿ ಅನುವಾದಿಸುವ ಸಹಕಾರ ಮತ್ತು ಹಂಚಿಕೊಂಡ ಇತಿಹಾಸದ ಬಗ್ಗೆ ಸಂಯುಕ್ತ ಸಂಶೋಧನಾ ಯೋಜನೆಗಳನ್ನು ಪ್ರಸ್ತಾಪಿಸಿದರು. “ಇದರಿಂದಾಗಿ, ಜಗತ್ತಿನ ಯಾವುದೇ ಭಾಗದಲ್ಲಿ ಕುಳಿತಿರುವ ಯುವಜನರು ಮತ್ತೊಂದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಹಳ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿದರು.

ಇಂದು ವಿಸ್ತೃತ ಸಂಪನ್ಮೂಲಗಳಿದ್ದರೂ ಸಹ ಅನೇಕ ಮಹಾನ್ ಸಾಹಿತ್ಯ ಮತ್ತು ಬೌದ್ಧಿಕ ಕೃತಿಗಳು ಸೀಮಿತ ಭಾಷೆಗಳಲ್ಲಿ ಲಭ್ಯವಿವೆ ಎಂದು ಗಮನಿಸಿದ ಪ್ರಧಾನಮಂತ್ರಿಯವರು, ಇವುಗಳಿಗೆ ಪ್ರವೇಶವನ್ನು ವಿಸ್ತರಿಸಲು ತಂತ್ರಜ್ಞಾನ ಸಾಧನಗಳನ್ನು ಸೂಚಿಸಿದರು. “ಎ.ಐ. ಸಹಾಯದಿಂದ, ಅವುಗಳ ಅನುವಾದಕ್ಕೆ ಹೊಸ ವೇಗ ನೀಡಬಹುದು” ಎಂದು ಶ್ರೀ ಮೋದಿ ಹೇಳಿದರು.

ಮ್ಯೂಸಿಯಂಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತ ಪ್ರದರ್ಶನಗಳು, ವಿಶ್ವವಿದ್ಯಾಲಯಗಳ ನಡುವೆ ಪಂಡಿತರು ಮತ್ತು ಸಂಶೋಧಕರ ವಿನಿಮಯಗಳು, ಹೇರಿಟೇಜ್ ಸರ್ಕ್ಯೂಟ್ ಗಳು ಮತ್ತು ಸಿಲ್ಕ್ ರೂಟ್ ಮತ್ತು ಬೌದ್ಧ ಪರಂಪರೆ ಸ್ಥಳಗಳನ್ನು ಸಂಪರ್ಕಿಸುವ ಸಾಂಸ್ಕೃತಿಕ ಮಾರ್ಗಗಳು, ಸಾಂಸ್ಕೃತಿಕ ಪ್ರವಾಸೋದ್ಯಮ, ಸಂಯುಕ್ತ ಸಾಂಸ್ಕೃತಿಕ ಹಬ್ಬಗಳು ಮತ್ತು ಕಲಾವಿದರ ವಿನಿಮಯಗಳು ಸೇರಿದಂತೆ ಸಾಂಸ್ಕೃತಿಕ ವಿನಿಮಯದ ಹೆಚ್ಚುವರಿ ಮಾರ್ಗಗಳನ್ನು ಮುಖ್ಯವಾಗಿ ಉಲ್ಲೇಖಿಸಿದ  ಪ್ರಧಾನಮಂತ್ರಿ ಇಂತಹ ಉಪಕ್ರಮಗಳ ಮಾನವೀಯ ಪರಿಣಾಮದ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು. “ಈ ರೀತಿಯ ಪ್ರಯತ್ನಗಳ ಮೂಲಕ, ನಮ್ಮ ನಾಗರಿಕರು ಪರಸ್ಪರ ಸಂಸ್ಕೃತಿಯನ್ನು ಇನ್ನಷ್ಟು ಹತ್ತಿರವಾಗಿ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಅವಕಾಶಗಳನ್ನು ಪಡೆಯುತ್ತಾರೆ” ಎಂದು ಶ್ರೀ ಮೋದಿ ದೃಢಪಡಿಸಿದರು

ಇಂದಿನ ನಾಗರಿಕತೆಯ ಸಂವಾದವನ್ನು ಮುಂದಿನ ದಶಕಗಳಲ್ಲಿ ಹೊಸ ಎತ್ತರಗಳಿಗೆ ಕೊಂಡೊಯ್ಯುವ ಹೊಣೆಗಾರಿಕೆ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಮತ್ತು ಜಗತ್ತನ್ನು ಅರ್ಥಮಾಡಿಕೊಳ್ಳಲು ಉತ್ಸುಕರಾಗಿರುವ ಯುವ ಪೀಳಿಗೆಯ ಮೇಲಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಸ್ಥಳೀಯ ಕಲಾವಿದರು ಮತ್ತು ಕಲೆಗಾರರನ್ನು ಒಳಗೊಂಡು, ವೈವಿಧ್ಯಮಯ ಭಾಷೆಗಳು, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗಳೊಂದಿಗೆ ಯುವಜನರು ತೊಡಗಿಸಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ಒದಗಿಸಬೇಕೆಂದು ಕರೆ ನೀಡಿದರು. “ನಮ್ಮ ಯುವ ಕಲಾವಿದರು, ಲೇಖಕರು ಮತ್ತು ಚಲನಚಿತ್ರ ನಿರ್ಮಾಪಕರು ಡಿಜಿಟಲ್ ಮಾಧ್ಯಮ ಮತ್ತು ಇತರ ಸೃಜನಾತ್ಮಕ ವೇದಿಕೆಗಳ ಮೂಲಕ ನಮ್ಮ ಹಂಚಿಕೊಂಡ ಪರಂಪರೆಯನ್ನು ಹೊಸ ಪೀಳಿಗೆಗೆ ತಲುಪಿಸಬಹುದು,” ಎಂದು ಶ್ರೀ ಮೋದಿ ದೃಢಪಡಿಸಿದರು.

ಧಾರ್ಮಿಕ ವಿಧಿಗಳ ಅಂತ್ಯದಲ್ಲಿ ಭಾರತೀಯ ಪ್ರಾರ್ಥನೆಗಳು ಎಲ್ಲಾ ಜೀವಿಗಳ ನಡುವೆ ಒಳ್ಳೆಯ ಇಚ್ಛೆ ಮತ್ತು ವಸುಧೈವ ಕುಟುಂಬಕಂನ ಮೂಲಕ ಜಗತ್ತಿನ ಕಲ್ಯಾಣವನ್ನು ಹುಡುಕುತ್ತವೆ ಎಂದು ನೆನಪಿಸಿಕೊಂಡು, ಸಂಪೂರ್ಣ ಜಗತ್ತನ್ನು ಒಂದು ಕುಟುಂಬವಾಗಿ ಪರಿಗಣಿಸಿ, ವೈಯಕ್ತಿಕ ಮತ್ತು ರಾಷ್ಟ್ರೀಯ ಕಲ್ಯಾಣವನ್ನು ಜಾಗತಿಕ ಸೌಹಾರ್ದತೆಯೊಂದಿಗೆ ಸಂಪರ್ಕಿಸಿದರು. “ನಾವು ಪರಸ್ಪರ ಒಳ್ಳೆಯತನವನ್ನು ಜಾಗತಿಕ ಕಲ್ಯಾಣದ ಆಧಾರವೆಂದು ಪರಿಗಣಿಸುತ್ತೇವೆ” ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.

ಪರಸ್ಪರ ಒಳ್ಳೆಯ ಆಶಯ/ಇಚ್ಛೆ ಹಂಚಿಕೊಂಡ ಸಾಮಾನ್ಯ ಅಂಶಗಳ ಸುತ್ತಲೂ ನಿರ್ಮಿತವಾದ ಪರಸ್ಪರ ನಂಬಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಗಮನಿಸಿದ ಪ್ರಧಾನಮಂತ್ರಿ, ವಿವಿಧ ಭಾಷೆ, ಜೀವನ ಶೈಲಿ ಮತ್ತು ಪರಂಪರೆಗಳನ್ನು ಅನುಸರಿಸುವ,ವೈವಿಧ್ಯತೆಗಳನ್ನು ಒಳಗೊಳ್ಳುವ  ಭಾರತದ ಅನುಭವವನ್ನು ಉಲ್ಲೇಖಿಸಿ ಇವುಗಳಿಗೆ ವೇದಿಕೆಯ ಆರಂಭದಲ್ಲಿ ಕೇಳಿದ ವೇದ ಪಠಣದಿಂದ ಒದಗಿದ ಪ್ರೇರಣೆಯನ್ನೂ ಪ್ರಸ್ತಾಪಿಸಿದರು. ಇದು ಬಹುತ್ವವನ್ನು ಏಕತೆಯಾಗಿಸುತ್ತದೆ ಎಂದರು. “ನಾವು ಈ ಉದಾರ ದೃಷ್ಟಿಕೋನವನ್ನು ಅಳವಡಿಸಿಕೊಂಡಾಗ, ನಮ್ಮ ವೈವಿಧ್ಯತೆ ಸ್ವತಃ ನಮ್ಮ ಏಕತೆಯ ಆಧಾರವಾಗುತ್ತದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

‘ಸಂಗಚ್ಛಧ್ವಂ ಸಂವದಧ್ವಂ ಸಮ್ ವೋ ಮನಾನ್ಸಿ ಜನತಂ’ ಎಂಬ ವೇದದ ಕರೆಯನ್ನು ಉಲ್ಲೇಖಿಸಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ, ಪ್ರಧಾನಮಂತ್ರಿಯವರು ಒಟ್ಟಾಗಿ ನಡೆಯಲು, ಒಟ್ಟಾಗಿ ಸಂವಾದ ನಡೆಸಲು ಮತ್ತು ಚಿಂತನೆಗಳ ಸಮ್ಮಿಲನವನ್ನು ಸಾಧಿಸಲು ಎಸ್ ಸಿ ಒ ನಾಗರಿಕತೆ ಸಂವಾದ ವೇದಿಕೆಗೆ ಉದ್ಘಾಟನೆಯ ಅಭಿನಂದನೆ ಸಲ್ಲಿಸಿದರಲ್ಲದೆ ಫಲಪ್ರದ ಚರ್ಚೆಗಳಿಗೆ ಶುಭಾಶಯಗಳನ್ನು ತಿಳಿಸಿದರು.

 

*****