ಪಿಎಂಇಂಡಿಯಾ
ಉಪಸ್ಥಿತರಿರುವ ಎಲ್ಲ ಸನ್ಮಾನ್ಯ ಮುಖ್ಯಮಂತ್ರಿಗಳೇ
ಮತ್ತು ಸನ್ಮಾನ್ಯ ನ್ಯಾಯಾಧೀಶರುಗಳೇ,
ಪ್ರತಿ ವರ್ಷವೂ ಈ ರೀತಿಯ ನಮ್ಮ ಸಭೆ ನಡೆಯುತ್ತಿದೆ. ಈ ಬಾರಿ ಸಾಕಷ್ಟು ವಿಸ್ತಾರವಾದ ಅಜೆಂಡಾ ಗಳು, ಚರ್ಚಿಸಬೇಕಾದ ವಿಷಯಗಳು ಇವೆ. ನ್ಯಾಯಾಧೀಶರುಗಳು ಎರಡು ದಿನಗಳ ಕಾಲ ಬಹುವಿಸ್ತಾರವಾಗಿ ಚರ್ಚೆ ನಡೆಸಿದರೆಂದೂ ತುಂಬ ಒಳ್ಳೆಯ ಸಲಹೆಗಳು ಬಂದಿವೆಯೆಂದೂ ನನಗೆ ಹೇಳಲಾಗಿದೆ. ವಿಷಯಗಳನ್ನು ಮುಂದುವರೆಸಲು ಎಲ್ಲ ಕೋನಗಳಿಂದ ಮತ್ತು ಶ್ರದ್ಧೆಯಿಂದ ಪ್ರಯತ್ನಿಸಲಾಗಿದೆ ಎಂದೂ ನನಗೆ ಹೇಳಲಾಗಿದೆ. ಇದಕ್ಕಾಗಿ ನಾನು ಸನ್ಮಾನ್ಯ ಠಾಕೂರ್ ಸಾಹೇಬರು ಮತ್ತು ಅವರ ಇಡೀ ತಂಡಕ್ಕೆ ಹೃದಯ ತುಂಬಿದ ಅನಂತ ಶುಭಾಶಯಗಳನ್ನು ಹೇಳುತ್ತೇನೆ. ಈ ಎಲ್ಲ ವಿಷಯಗಳನ್ನು ಮುಂದುವರೆಸಿಕೊಂಡು ಹೋಗಲು ಸಾರ್ಥಕ ಪ್ರಯತ್ನಗಳಾಗಬೇಕಿದೆ.
ಹಿಂದಿನ ದಿನಗಳಲ್ಲಿ ಭೂಪಾಲದಲ್ಲಿ ಒಂದು ರಿಟ್ರೀಟ್ ಕಾರ್ಯಕ್ರಮವು ನಡೆಯಿತು ಮತ್ತು ಇದರ ಬಗ್ಗೆ ನಾನು ಠಾಕೂರ್ ಸಾಹೇಬರಿಂದ ಕೇಳುತ್ತಿದ್ದೆ, ಅವರ ಹೇಳಿಕೆಯಿಂದ ನನಗೆ ತುಂಬ ಸಂತೋಷವುಂಟಾಯಿತು. ಲಾ ಪಾಯಿಂಟ್ ನ ಆಚೆ ಕೂಡ ಒಂದು ಬಹುದೊಡ್ಡ ಪ್ರದೇಶವಿದೆ, ಅದನ್ನು ತಿಳಿಯುವುದು ಅರ್ಥಮಾಡಿಕೊಳ್ಳುವುದು ಮತ್ತು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನು ನಡೆಯುತ್ತಿದೆ, ಏನು ಸವಾಲುಗಳಿವೆ, ಏನು ಸಾಧ್ಯತೆಗಳಿವೆ ಎಂಬ ಬಗ್ಗೆ ಎಲ್ಲ ವಿಷಯ ಚರ್ಚಿಸಲಾಯಿತು ಮತ್ತು ದೇಶದ ಗೌರವ ಗಳಿಸಿದ ತಜ್ಞರುಗಳನ್ನು ಕರೆಯಲಾಗಿತ್ತು ಮತ್ತು ಎಲ್ಲ
ನ್ಯಾಯಾಧೀಶರುಗಳು ಅವರನ್ನು ಕೇಳುತ್ತಿದ್ದರು; ಪ್ರಶ್ನೋತ್ತರ ನಡೆಯುತ್ತಿತ್ತು; ಈ ಪರಂಪರೆ ತನ್ನಷ್ಟಕ್ಕೆ ತಾನು ಒಂದು ಉತ್ತಮ ಸಂಪ್ರದಾಯ. ಇದು ರಾಜ್ಯಗಳಲ್ಲೂ ಮುನ್ನಡೆ ಸಾಧಿಸಿ ಇಂತಹ ಪ್ರಯತ್ನಗಳು ಮತ್ತಷ್ಟು ನಡೆಯಬಹುದು, ಠಾಕೂರ್ ಸಾಹೇಬರು ಹೇಳುತ್ತಿದ್ದಂತೆ ಮೊದಲು ಈ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು ಆದರೆ, ಮಧ್ಯದಲ್ಲಿ ಹಲವು ವರ್ಷಗಳ ಕಾಲ ನಿಂತು ಹೋಗಿದ್ದವು; ಇಂತಹ ಚರ್ಚೆಗಳು ಆಗಾಗ ನಡೆಯುವುದು ಸಾಕಷ್ಟು ಉತ್ಪ್ರೇರಕಗಳಾಗಬಹುದು ಎಂದು ನನಗೆನಿಸುತ್ತದೆ.
ಹಲವು ವಿಷಯಗಳು ಇಲ್ಲಿ ಚರ್ಚೆಯಾಗಲಿವೆ. ಆದ್ದರಿಂದ ಅದರ ಆಳಕ್ಕೆ ನಾನು ಇಳಿಯುವುದಿಲ್ಲ. ಭಾರತದ
ನ್ಯಾಯದಾನ ವ್ಯವಸ್ಥೆಯ ಬಗ್ಗೆ ಈಗಲೂ ಸಾಮಾನ್ಯ ನಾಗರೀಕನಿಗೆ ಭರವಸೆ ಇದೆ ಎಂಬುದು ನಿಜವಾದ ವಿಷಯ.
ಭರವಸೆಯೇ ಏನು ಒಂದು ಆಸ್ಥೆ, ಒಂದು ಶ್ರದ್ಧೆ ಇವೆ. ಇದು ನಮ್ಮ ದೇಶದ ದೊಡ್ಡ ನಿಧಿ. ಈ ಶ್ರದ್ಧೆಯನ್ನು ಮಾಸದಂತೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಇದನ್ನು ಮುಂದುವರೆಯುತ್ತಿರುವಂತೆ ನೋಡಿಕೊಳ್ಳಬೇಕು. ಇನ್ನು ಎಲ್ಲಿ ಹೋಗುವುದಪ್ಪಾ ಎಂಬಂತಹ ಸ್ಥಿತಿ ಯಾರಿಗೂ ಬರಬಾರದು; ಆ ರೀತಿಯಲ್ಲಿ ನ್ಯಾಯಾಲಯಗಳ ಬಗ್ಗೆ ಆಸ್ಥೆ ಉಳಿಸಿಕೊಳ್ಳಬೇಕು; ನಾನು ಇಲ್ಲಿಗೆ ಹೋಗಬಹುದು ಎಂಬಂತಹ ಒಂದು ಜಾಗ [ನ್ಯಾಲಯವಾಗಿರಬೇಕು]. ಇಂತಹ ಸ್ಥಿತಿ ಉಂಟು ಮಾಡುವಲ್ಲಿ ಸರಕಾರದ ಬಹುದೊಡ್ಡ ಜವಾಬ್ದಾರಿ ಇದೆ. ಸರಕಾರ ತನ್ನ ಜವಾಬ್ದಾರಿಯನ್ನ ನಿಭಾಯಿಸುವಲ್ಲಿ ಯಾವ ಪ್ರಯತ್ನವನ್ನೂ ಮಾಡದೇ ಬಿಡುವುದಿಲ್ಲ.
ಈ ದಿನ ಠಾಕೂರ್ ಸಾಹೇಬರು ನಿಜವಾದ ವಿಷಯವೊಂದನ್ನು ಹೇಳಿದ್ದಾರೆ. ನಾನೀಗ ಕಾನೂನು ಲೋಕದ ವ್ಯಕ್ತಿಯಾಗಿ ಉಳಿದಿಲ್ಲ. ನನ್ನ ಹಿನ್ನೆಲೆಯೂ ಆ ತರಹದ್ದಲ್ಲ; ಸುಪ್ರೀಮ್-ಕೋರ್ಟಿನ ಜನ್ಮ ಯಾವಾಗ ಆಯಿತು, ಮತ್ತೆ ಏನೇನಾಯಿತು ಎಂಬೀ ಎಲ್ಲ ಜ್ಞಾನ ವಿಸ್ತಾರವಾಗಿ ಈ ದಿನ ನನಗೆ ದೊರಕಿತು. ಅವರ ದುಗುಡವನ್ನು ನಾನು ತಿಳಿಯಬಲ್ಲೆ. 87ರಲ್ಲಿ ಆದ ಮಾತನ್ನು 2016ರಲ್ಲಿಯೂ ಕೂಡ [ಹೇಳ ಬೇಕಾಗಿದೆ]. 87ರಿಂದ ಇಲ್ಲಿಯವರೆಗೆ [ಕೆಲಸವಾಗದಿರುವುದಕ್ಕೆ] ಏನಾದರೂ ಖಚಿತ ಕಾರಣಗಳಿರಬಹುದು ಅಥವ ಏನಾದರೂ ಒತ್ತಡಗಳು ಕೆಲಸ ಮಾಡಿರಬಹುದು; ನಾನು 87ರಲ್ಲಿ ಏನಾಯಿತು ಹೇಗಾಯಿತು ಇತ್ಯಾದಿ ವಿವರಗಳ ಆಳಕ್ಕೆ ಯಾವತ್ತೂ ಹೋಗಿಲ್ಲ. ಆದರೆ ನಾವು ಎದ್ದಾಗಲೇ ಬೆಳಗು, ಇನ್ನು ಮುಂದೆ ನಾವು ಸ್ವಲ್ಪ ಒಳ್ಳೆಯದನ್ನು ಮಾಡೋಣ. ಹಿಂದಿನಿಂದ ಏನು ಹೊರೆ ಸಂಚಿತವಾಗಿದೆ ಅದನ್ನು ಕಡಿಮೆ ಮಾಡುವತ್ತ ನಾವು ಮುಂದುವರೆಯೋಣ.
ಹಲವು ಕಾರಣಗಳಿರಬಹುದು. ಒಂದು ಕಾರಣವನ್ನು ಠಾಕೂರ್ ಸಾಹೇಬರು ಹೇಳಿದ್ದಾರೆ: [ಜಡ್ಜ್-ಗಳ] ಸಾಮರ್ಥ್ಯ ತನ್ನಷ್ಟಕ್ಕೆ ತಾನೇ ಬಹುದೊಡ್ಡ ಕಾರಣವಾಗಬಹುದು. ಆದರೆ ಸಮಾಜ ಜೀವನದಲ್ಲಿ ಕೂಡ ಕೆಲವು ಬದಲಾವಣೆಗಳು ಉಂಟಾಗುತ್ತವೆ. ಇಂತಹ ಬದಲಾವಣೆಗಳು ನಮ್ಮ ಅರಿವಿಗೆ ಬರುತ್ತವೆ. ಒಂದು ಕಾಲವಿತ್ತು : ಊರಿನಲ್ಲಿ ಒಬ್ಬ ವೈದ್ಯರತ್ನನಿರುತ್ತಿದ್ದ ಮತ್ತು ಇಡೀ ಊರು ಆರೋಗ್ಯಕರವಾಗಿರುತ್ತಿತ್ತು, ಈಗ ಕಣ್ಣಿನ ವೈದ್ಯರು ಬೇರೆ, ಕಿವಿಯ ವೈದ್ಯರು ಬೇರೆ, ಕಾಲಿನ ವೈದ್ಯರು ಬೇರೆ, ಹೃದಯದ ವೈದ್ಯರು ಬೇರೆ, ಆದರೆ ರೋಗಗಳು ಹೆಚ್ಚುತ್ತಲೇ ಇವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕೂಡ ಇಂತಹ ಸಮಸ್ಯೆಗಳು ಬರುತ್ತಿರುತ್ತವೆ. ಇದು ಹೇಗಾಗುತ್ತದೆ, ಇದಕ್ಕೆ ಕಾರಣಗಳೇನು ಇತ್ಯಾದಿಗಳು ನಾವೆಲ್ಲರೂ ಚಿಂತಿಸಬೇಕಾದ ವಿಷಯ.
ಒಂದು ಕಾನೂನನ್ನು ಮಾಡುವಾಗ ಸರಕಾರದಲ್ಲಿ ಎಷ್ಟು ಚರ್ಚೆಯಾಗಬೇಕೋ ಏನೇನು ಎಚ್ಚರಿಕೆ ವಹಿಸಬೇಕೋ ಅಷ್ಟೆಲ್ಲ ಆಗುವುದಿಲ್ಲವೆಂಬಂತೆ; ಕರಡು ತಯಾರಿಯಿಂದ ಹಿಡಿದು ಚರ್ಚೆಯಾಗುವವರೆಗೆ ಮತ್ತೆ ಅಲ್ಲಿಂದ ಅದು ಕಾನೂನಾಗಿ ಘೋಷಿತವಾಗುವವರೆಗೆ [ಪ್ರಕ್ರಿಯೆಗಳಲ್ಲಿ] ಕೊರತೆಗಳಿವೆಯೆಂಬಂತೆ, [ಎಲ್ಲರಿಗೂ] ಅನಿಸುತ್ತದೆ ಎಂಬುದು ನನ್ನ ಅಭಿಪ್ರಾಯ. ಈಚೆಗೆ ನ್ಯಾಯಾಲಯಗಳು ಅರ್ಥೈಸುವ ರೀತಿ ಕೂಡ ಒಂದು ಬಹುದೊಡ್ಡ ಕಾರಣವಾಗಿ ಹೊರಹೊಮ್ಮಿದೆ. ಹೀಗೆ ಕಾರಣಗಳ ವ್ಯಾಪ್ತಿ ವಿಸ್ತಾರವಾಗಿದೆ. ಹಾಗಲ್ಲವಾಗಬೇಕಾದರೆ ಕಾನೂನು ಯಾರು ಬೇಕಾದರೂ ಅರ್ಥೈಸಿ ನಿರ್ಣಯಿಸಬಹುದಾದಷ್ಟು, ಭಿನ್ನಾಭಿಪ್ರಾಯಗಳು ಬರಲಾರದಷ್ಟು ಸರಳವಾಗಿರಬೇಕು, ಸ್ಪಷ್ಟವಾಗಿರಬೇಕು. ನಿಧಾನವಾಗಿ ಈ ರೀತಿಯ ದಕ್ಷತೆಯ ಕಡೆಗೆ ನಾವು ಸಾಗಬೇಕಿದೆ.
ಇನ್ನೊಂದು ವಿಷಯವೆಂದರೆ ನಮ್ಮ ಈ ದೇಶದಲ್ಲಿ ಕಾನೂನುಗಳ ಸಂಖ್ಯೆ ಬಹಳ. ನಾನು ಅಧಿಕಾರಕ್ಕೆ ಬಂದ ಕೂಡಲೇ ಒಂದು ಕೆಲಸ ಪ್ರಾರಂಭ ಮಾಡಿದ್ದೇನೆ . ಅದೇನೇಂದರೆ ಈ ತರಹದ ಕಾನೂನುಗಳಿಂದ ಹೇಗೆ ಬಿಡುಗಡೆ ಪಡೆಯಬಹುದು. ಸಾಮಾನ್ಯ ಜನರ ಹಿತಕ್ಕನುಗುಣವಾಗಿ ಕಾನೂನುಗಳ ಭಾರವನ್ನು ಹೇಗೆ ಕಡಿತಗೊಳಿಸಬಹುದು ಎಂಬುದರ ಬಗ್ಗೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ . ಒಂದು ಸಮಿತಿ ಈ ವಿಷಯದಲ್ಲಿ ಕಾರ್ಯನಿರ್ವಹಿಸಿ ಕ್ರಿ. ಶ .1800ರಷ್ಟು ಹಳೆಯ 1500ರಿಂದ 1700 ಕಾನೂನುಗಳಿರುವುದು ಗೊತ್ತಾಯಿತು. ಅಲ್ಲಿಂದ 1850ರ ತನಕದವು 80,90 ಎಂತೆಂತಹವೋ ಕಾನೂನುಗಳು, ಈಗ ಅಪ್ರಸ್ತುತವಾಗಿ ಹೋಗಿವೆ. ಯಾವುದೋ ಒಂದು ಕಾರ್ಯವನ್ನು ನಿಲ್ಲಿಸಬೇಕು ಎಂದಾದರೆ, ಅದಕ್ಕೆ ಅವಕಾಶವೆಲ್ಲಿದೆ ಎಂದು ಕೇಳಿದರೆ, 200 ವರ್ಷ ಹಿಂದಿನ ಕಾನೂನುಗಳನ್ನು ತೋರಿಸಿ ಬಿಡುತ್ತಾರೆ. ನೋಡಿ ಇಂತಹ ಕಾನೂನು ಇತ್ತು ಆದ್ದರಿಂದ ನಿಮ್ಮ ಇದು ಆಗುವುದಿಲ್ಲ ಎನ್ನುತ್ತಾರೆ ; ಮತ್ತೆ ಅವರು ಕೋರ್ಟಿಗೂ ಹೋಗುತ್ತಾರೆ; ಇಂತಹ ವಿಷಯಗಳು ವ್ಯವಸ್ಥೆಯಲ್ಲಿ ಸಾಕಷ್ಟು ಅಡಚಣೆಗಳನ್ನು ಉಂಟು ಮಾಡುತ್ತಿವೆ. ಶುದ್ಧೀಕರಣ ಮಾಡಲಾಗುತ್ತಿದೆ; ನಮಗೆಷ್ಟು ಸಮಯ ಸಿಗುತ್ತಿದೆಯೋ ಅಷ್ಟನ್ನು ಸಂಪೂರ್ಣವಾಗಿ ಉಪಯೋಗಿಸಿ ನಾವು ಘನಪ್ರಯತ್ನ ಮಾಡೋಣ, ನಿಧಾನವಾಗಿ ಇದು ಸಾಧ್ಯವಾಗುತ್ತದೆ ಎಂದು ನಗನಿಸುತ್ತದೆ. ಪ್ರಕ್ರಿಯೆಗಳು ಶೀಘ್ರ ಗತಿಯಲ್ಲಿ ಆಗಲೀ ಬೇಗಬೇಗ ಆಗಲಿ ಮತ್ತು ಆವಶ್ಯಕತೆಗಳು ಪೂರ್ತಿಯಾಗುವುದಕ್ಕಾಗಿ ಪ್ರಯತ್ನಗಳಾಗಲಿ. ಈ ಕನಸುಗಳ ಪೂರ್ತಿ ಎಲ್ಲರ ಕೆಲಸ; ನಾವು ಮಾಡುತ್ತಲೇ ಇರುತ್ತೇವೆ. ಠಾಕೂರ್ ಸಾಹೇಬರಿಗೆ ಅನುಕೂಲವಿರುವುದಾದರೆ, ಸಾಂವಿಧಾನಿಕ ಪರಿಮಿತಿಗಳೇನಾದರೂ ಅಡೆತಡೆಗಳನ್ನು ಉಂಟು ಮಾಡುತ್ತಿವೆ ಎಂಬ ಸಂದರ್ಭದಲ್ಲಿ, ಸರಕಾರದಿಂದ ಇಬ್ಬರು ಮೂವರು ಪ್ರಮುಖ ವ್ಯಕ್ತಿಗಳು ಮತ್ತು ತಮ್ಮ ತಂಡದ ಎಲ್ಲ ಸದಸ್ಯರು ಒಂದು ಕೊಠಡಿಯಲ್ಲಿ ಕುಳಿತುಕೊಂಡು ಭುಜಕ್ಕೆ ಭುಜ ಕೊಟ್ಟು, ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಉತ್ತಮ ಸಮಾಧಾನಗಳನ್ನು ಕಂಡುಕೊಳ್ಳಬೇಕೆಂಬುದು ನನ್ನ ಬಯಕೆ. ತಾವು ಏನು ಹೇಳಿದಿರೋ ಅವು ತುಂಬ ಮಹತ್ವ ಪೂರ್ಣ ಮಾತುಗಳು ಆಗಿವೆ ಮತ್ತು ಆ ಮಹತ್ವಪೂರ್ಣ ಮಾತುಗಳ ಸಮಸ್ಯೆಗಳ ಪರಿಹಾರಕ್ಕೆ ದಾರಿಯನ್ನು ಹುಡುಕಲೇ ಬೇಕು. ಇದನ್ನು ಕೇಳಿಕೊಂಡು ಸುಮ್ಮನೆ ಹೋಗಿ ಬಿಡುವುದು ನನ್ನ ಜಾಯಮಾನವಲ್ಲ; ನಾನು ಅಂತಹ ಮನುಷ್ಯನಲ್ಲ. ನಾನಿದನ್ನು ಗಂಭೀರವಾಗಿ ತೆಗದುಕೊಂಡು ಏನಾದರೂ ಮಾರ್ಗವನ್ನು ಹುಡುಕುವ ಪ್ರಯತ್ನ ಮಾಡುತ್ತೇನೆ. ಇದರಲ್ಲಿ ಸಾಫಲ್ಯ- ವೈಫಲ್ಯಗಳದು ಬೇರೆಯೇ ಮಾತು; ಆದರೆ ಪ್ರಯತ್ನವನ್ನಂತೂ ಮಾಡಲೇಬೇಕು. ನಾನು ಪ್ರಯತ್ನ ಮಾಡುವವನೇ. ತಮ್ಮಂತಹ ಅನುಭವಿಗಳ ಜೊತೆ ಸಿಕ್ಕುವುದಾದರೆ ಇದು ಖಂಡಿತವಾಗಿ ಸಾಧ್ಯವಾಗುತ್ತದೆ ಎಂಬುದು ನನ್ನ ವಿಶ್ವಾಸ. ನಾನು ಈ ಕ್ಷೇತ್ರದವನಂತೂ ಅಲ್ಲ. ಇದು ನನಗೆ ಲಾಭವೂ ಹೌದು; ನಷ್ಟವೂ ಹೌದು. ನಿಮ್ಮಂತಹವರ ಸಹಕಾರ ಸಿಕ್ಕಿದರೆ ನಾನು ಖಂಡಿತವಾಗಿ ಇದಕ್ಕೊಂದು ದಾರಿ ಕಾಣಿಸುತ್ತೇನೆ.
ನನಗೆ ನೆನಪಿರುವಂತೆ ಹದಿನೈದು ವರ್ಷಗಳಿಂದ ನಾನು ಈ ಸಭೆಗೆ ಬರುತ್ತಿದ್ದೇನೆ. ಯಾವಾಗಲೂ ಎದುರುಗಡೆ ಕುಳಿತುಕೊಳ್ಳುತ್ತಿದ್ದೆ ಮತ್ತು ಅನಂತರ ಮೇಲೆ ಕುಳಿತುಕೊಳ್ಳುವ ಅವಕಾಶ ಒದಗುತ್ತಿತ್ತಾದರೂ ಕ್ಯಾಮರ ಇತ್ಯಾದಿಗಳಿರುತ್ತಿರಲಿಲ್ಲ; ಆಗೆಲ್ಲ ಸ್ವಲ್ಪಮಟ್ಟಿಗೆ ಮುಕ್ತವಾಗಿ ಭಿಡೆ ಇಲ್ಲದೆ ನಾನು ಮಾತನ್ನೂ ಆಡುತ್ತಿದ್ದೆ. ಸಾಹೇಬರೇ, ಕೋರ್ಟಿನ ಸಮಯವನ್ನು ವಿಸ್ತರಿಸಿದರೆ ಹೇಗೆ ಎಂದು ನಾನು ಒಂದು ಸಲ ಹೇಳಿ ಬಿಟ್ಟಿದ್ದೆ; ರಜೆ ಕಡಿಮೆ ಮಾಡಿದರೆ ಹೇಗೆ? ನನ್ನ ಮೇಲೆ ಎಂತಹ ವಿಪತ್ತುಗಳು ಬಂದೆರಗಿದವು ಎಂದರೆ ಕೇಳಬೇಡಿ; ಅದರ ನಂತರ ಭೋಜನ ವಿರಾಮವಿತ್ತು; ಊಟದನಂತರ ಹಲವು ಜನ ನ್ಯಾಯಾಧೀಶರು ನನ್ನನ್ನು ಮುತ್ತಿದರು; ನಿಮ್ಮನ್ನು ನೀವು ಏನೆಂದು ತಿಳಿದಿದ್ದೀರಿ ಎಂದು ಕೇಳಲು ಪ್ರಾರಂಭಿಸಿದರು. ಆದರೂ ನನಗೆನಿಸುತ್ತದೆ – ಯಾರ ಬಳಿ ಜವಾಬ್ದಾರಿ ಇದೆಯೋ ಅಂತಹ ಎಲ್ಲರೂ ಪ್ರಾಮಾಣಿಕವಾಗಿ, ನಿಷ್ಠೆಯಿಂದ, ದೇಶದ ಬಡಜನತೆಗಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ; ಇಂತಹ ಭರವಸೆ ನಮಗೆಲ್ಲರಿಗೆ ಇರಬೇಕಾದ್ದು ಆವಶ್ಯಕ; ಮತ್ತು ನ್ಯಾಯ ಪಾಲಿಕೆ ಈ ದಿಕ್ಕಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದೂ, ಎಚ್ಚರವಹಿಸುತ್ತಿದೆ ಎಂದೂ, ನನಗೆ ಸಂಪೂರ್ಣ ಭರವಸೆ ಇದೆ. ದೇಶದ ಸಮಸ್ಯೆಗಳ ಪರಿಹಾರ ಕೂಡ ಆಗುತ್ತದೆ ಎಂಬುದರಲ್ಲಿ ನಮ್ಮಲ್ಲರ ವಿಶ್ವಾಸ ನಿರಂತರವಾಗಿರುತ್ತದೆ ಮತ್ತು ನಾವುಗಳೆಲ್ಲ ಜೊತೆಯಾಗಿ ಕುಳಿತು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುತ್ತೇವೆ ಎಂಬುದೂ ನನ್ನ ವಿಶ್ವಾಸ.
ಸನ್ಮಾನ್ಯ ಮುಖ್ಯ ಮಂತ್ರಿಗಳು ನನ್ನ ಎಲ್ಲ ಮಾತುಗಳನ್ನೂ ಸಾವಧಾನದಿಂದ ಕೇಳಿದ್ದಾರೆ. ಅವರುಗಳೂ ಅಷ್ಟೇ ಜವಾಬ್ದಾರಿಯೊಂದಿಗೆ ಸರಕಾರಗಳನ್ನು ನಡೆಸುತ್ತಿದ್ದಾರೆ. ಏಕೆಂದರೆ ಅವರೂ ಕೂಡ ಜನತಾ ಜನಾರ್ಧನನಿಗೆ ಉತ್ತರ ಹೇಳಬೇಕಾಗುತ್ತದೆ ಮತ್ತು ಐದು ವರ್ಷಗಳಿಗೊಂದು ಬಾರಿ ಜನತೆಯ ಮುಂದೆ ತಮ್ಮ ಉತ್ತರ ನೀಡಬೇಕಾಗಿ ಬರುತ್ತದೆ. ಈಗಲಾದರೋ ಪದೇಪದೇ ಚುನಾವಣೆಗಳು ಬರುತ್ತಿರುತ್ತವೆ; ಆದ್ದರಿಂದ ಯಾವುದಾದರೂ ರೂಪದಲ್ಲಿ ವರ್ಷಕ್ಕೊಂದು ಸಲ, ಐದು ವರ್ಷದಲ್ಲಿ ಮೂರು ಮೂರು ಸಲ ಹೀಗೆಲ್ಲ ಜನತೆಯ ಮುಂದೆ ಹೋಗಬೇಕಾಗಿ ಬರುತ್ತದೆ. ಆದ್ದರಿಂದ ಇಂದಿನ ದಿನಗಳಲ್ಲಿ ಚರ್ಚೆಯೊಂದು ನಡೆಯುತ್ತಿದೆ: ಎಲ್ಲ ಪಕ್ಷಗಳು ನನ್ನ ಬಳಿ ಹೇಳುತ್ತಿದ್ದಾರೆ, ಸಾಹೇಬರೆ, ಲೋಕ ಸಭೆ ಮತ್ತು ವಿಧಾನ ಸಭೆಗಳಿಗೆ ಒಟ್ಟೊಟ್ಟಾಗಿ ಚುನಾಣೆಯಾದರೆ ಹೇಗೆ ಎಂದು; ಏಕೆಂದರೆ ಚುನಾವಣೆಗಾಗಿ ತುಂಬ ಸಮಯ ಹಿಡಿಯುತ್ತದೆ; ಹಲವು ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳಲು ನಲವತ್ತು-ನಲವತ್ತು ದಿನ, ಐವತ್ತು-ಐವತ್ತು ದಿನ ಕಾಯಬೇಕಾಗಿ ಬರುತ್ತದೆ; ನಿರ್ಣಯ ನಿಂತು ಬಿಡುತ್ತದೆ. ಏಕೆಂದರೆ ಕೋಡ್ ಆಫ್ ಕಂಡಕ್ಟ್ ಜಾರಿಗೆ ಬಂದು ಬಿಡುತ್ತದೆ; ದೇಶದಲ್ಲಿ ಎಲ್ಲಿಯಾದರೂ ಒಂದು ಕಡೆ ಚುನಾವಣೆ ಇದ್ದೇ ಇರುತ್ತದೆ ಮತ್ತು ಅಂತಹ ಕಡೆ ಕೋಡ್ ಆಫ್ ಕಂಡಕ್ಟ್ ಜಾರಿಯಲ್ಲಿರುತ್ತದೆ. ಎಲ್ಲ ವಿರೋಧ ಪಕ್ಷಗಳ ಹಲವು ನಾಯಕರು ಈ ವಿಷಯದಲ್ಲಿ ನನ್ನನ್ನು ಭೇಟಿಯಾಗಿದ್ದಾರೆ ಮತ್ತು ಸಾಹೇಬರೇ ಏನಾದರೂ ದಾರಿ ಹುಡುಕಿ ಎಂದು
ಹೇಳಿದ್ದಾರೆ.ಆದ್ದರಿಂದ ವಿಧಾನ ಸಭೆ ಮತ್ತು ಸಂಸತ್ ನ ಚುನಾವಣೆಗಳು ಜತೆ ಜತೆ ಯಲ್ಲಿ ನಡೆಯಲಿ, ಸ್ವಲ್ಪವಾದರೂ ಕೆಲಸಗಳು ಆಗಲಿ ಎಂಬುದು ಎಲ್ಲರ ಕಳಕಳಿ . ಈ ಬಗ್ಗೆ ಹಲವು ಅಡೆತಡೆಗಳಿವೆ ಮತ್ತು ಅವೆಲ್ಲಕ್ಕೂ ನಾವೆಲ್ಲ ಕೂಡಿ ಕುಳಿತು ದಾರಿ ಹುಡುಕ ಬೇಕು.
ನಾನೀಗ ಇಲ್ಲಿಂದ ಜಾರ್ಖಂಡಿಗೆ ಹೊರಡ ಬೇಕಾಗಿದೆ, ಇಲ್ಲಿಂದ ನಿರ್ಗಮಿಸುತ್ತಿರುವುದಕ್ಕೆ ಕ್ಷಮೆ ಕೇಳುತ್ತೇನೆ. ಆದರೆ ತಮ್ಮನ್ನೆಲ್ಲ ಇನ್ನೊಮ್ಮೆ ಸ್ವಾಗತಿಸುತ್ತೇನೆ ಮತ್ತು ತುಂಬು ಹೃದಯದಿಂದ ಅಭಿವಂದಿಸುತ್ತೇನೆ. ಈ ದಿನ ಮುಖ್ಯಮಂತ್ರಿಗಳೆಲ್ಲ ಒಟ್ಟಾಗಿ ಕುಳಿತು ಚರ್ಚಿಲಿದ್ದೀರಿ, ಏನಾದರೂ ಉತ್ತಮವಾದ್ದು ಉತ್ಪನ್ನವಾಗುತ್ತದೆ. ಎಲ್ಲರಿಗೂ ಧನ್ಯವಾದಗಳು,
***
Earlier today, spoke at the Conference of Chief Ministers and Chief Justices. https://t.co/aJQCU887H3
— Narendra Modi (@narendramodi) April 24, 2016