ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸರ್ಕಾರ ಕಾಲ ಕಾಲಕ್ಕೆ ಅಧಿಸೂಚನೆ ಹೊರಡಿಸುವ ಎಫ್.ಡಿ.ಐ. ನೀತಿಯಲ್ಲಿ ಸೂಚಿಸಲಾಗಿರುವ ಸೂಕ್ತ ಷರತ್ತುಗಳಿಗೆ ಒಳಪಟ್ಟಂತೆ ವಿದೇಶೀ ಹೂಡಿಕೆದಾರರಿಗೆ ಶಾಶ್ವತ ನಿವಾಸಿ ಸ್ಥಾನಮಾನ (ಪಿ.ಆರ್.ಎಸ್.) ನೀಡುವ ಯೋಜನೆಗೆ ತನ್ನ ಅನುಮೋದನೆ ನೀಡಿದೆ.
ಈ ಯೋಜನೆಯು ವಿದೇಶೀ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆ ಅಡಿಯಲ್ಲಿ, ವಿದೇಶೀ ಹೂಡಿಕೆದಾರರಿಗೆ ಪಿ.ಆರ್.ಎಸ್. ನೀಡಿಕೆಗಾಗಿ ವೀಸಾ ಕೈಪಿಡಿಯಲ್ಲಿ ಸೂಕ್ತ ನಿಯಮಗಳನ್ನು ಅಳವಡಿಸಲಾಗುತ್ತದೆ.
ಬಹು ಪ್ರವೇಶಾವಕಾಶದೊಂದಿಗೆ ಹತ್ತು ವರ್ಷದ ಅವಧಿಗೆ ಪಿ.ಆರ್.ಎಸ್. ಅನ್ನು ಮಂಜೂರು ಮಾಡಲಾಗುತ್ತದೆ. ಪಿ.ಆರ್.ಎಸ್. ಹೊಂದಿರುವವರು ಪ್ರತೀಕೂಲ ಸೂಚನೆಗೆ ಒಳಪಡದಿದ್ದರೆ, ಇದನ್ನು ಮತ್ತೆ 10 ವರ್ಷಗಳ ಅವಧಿಗೆ ವಿಮರ್ಶಿಸಬಹುದಾಗಿರುತ್ತದೆ. ಸೂಚಿತ ಅರ್ಹತೆಯ ನಿಯಮಗಳನ್ನು ಪೂರ್ಣಗೊಳಿಸುವ ವಿದೇಶೀ ಹೂಡಿಕೆದಾರರಿಗೆ, ಆಕೆಯ/ಆತನ ಪತಿ ಅಥವಾ ಪತ್ನಿ ಮತ್ತು ಅವಲಂಬಿತರಿಗೆ ಮಾತ್ರವೇ ಈ ಯೋಜನೆ ಅನ್ವಯವಾಗುತ್ತದೆ, ಈ ಯೋಜನೆಯ ಸೌಲಭ್ಯ ಪಡೆಯಲು, ವಿದೇಶೀ ಹೂಡಿಕೆದಾರರು ಕನಿಷ್ಠ 10 ಕೋಟಿ ರೂಪಾಯಿಗಳನ್ನು 18 ತಿಂಗಳುಗಳ ಅವಧಿಯಲ್ಲಿ ತರಬೇಕು ಅಥವಾ 25 ಕೋಟಿ ರೂಪಾಯಿಗಳನ್ನು 36 ತಿಂಗಳುಗಳ ಒಳಗೆ ತರಬೇಕು. ಜೊತೆಗೆ ವಿದೇಶೀ ಹೂಡಿಕೆಯು ಪ್ರತಿ ಆರ್ಥಿಕವರ್ಷದಲ್ಲಿ ಕನಿಷ್ಠ 20 ಭಾರತೀಯ ನಿವಾಸಿಗಳಿಗೆ ಉದ್ಯೋಗ ಸೃಷ್ಟಿಸುತ್ತದೆ.
ಶಾಶ್ವತ ನಿವಾಸಿ ಸ್ಥಾನಮಾನವನ್ನು ಆರಂಭಿಕವಾಗಿ ಬಹು ಪ್ರವೇಶಾವಕಾಶದೊಂದಿಗೆ 10 ವರ್ಷಗಳ ಅವಧಿಗೆ ಮಂಜೂರು ಮಾಡಲಾಗುತ್ತದೆ. ಅದನ್ನು ಮತ್ತೆ 10 ವರ್ಷಗಳ ಅವಧಿಗೆ ನವೀಕರಿಸಬಹುದಾಗಿದೆ. ಪಿ.ಆರ್.ಎಸ್. ಯಾವುದೇ ವಾಸ್ತವ್ಯದ ಷರತ್ತಿಲ್ಲದ ಬಹು ಪ್ರವೇಶ ವೀಸಾ ಆಗಿರುತ್ತದೆ ಮತ್ತು ಪಿ.ಆರ್.ಎಸ್. ಹೊಂದಿರುವವರಿಗೆ ನೋಂದಣಿ ಅವಶ್ಯಕತೆಯಿಂದ ವಿನಾಯಿತಿಯೂ ದೊರೆಯುತ್ತದೆ. ಪಿ.ಆರ್.ಎಸ್. ಹೊಂದಿರುವವರಿಗೆ ವಾಸಕ್ಕಾಗಿ ಒಂದು ವಸತಿಯೋಗ್ಯ ಆಸ್ತಿ ಖರೀದಿಸಲೂ ಅವಕಾಶ ಕಲ್ಪಿಸಲಾಗುತ್ತದೆ. ಪಿ.ಆರ್.ಎಸ್. ಹೊಂದಿರುವವರ ಮಡದಿ/ಅವಲಂಬಿತರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಕೈಗೊಳ್ಳಲೂ (ಉದ್ಯೋಗ ವೀಸಾಕ್ಕೆ ವೇತನ ಷರತ್ತಿನ ವಿನಾಯಿತಿಯೊಂದಿಗೆ) ಮತ್ತು ಭಾರತದಲ್ಲಿ ವಿದ್ಯಾಭ್ಯಾಸ ಮಾಡಲೂ ಅವಕಾಶ ನೀಡಲಾಗುತ್ತದೆ.
****
AKT/AD/SH